ಚಿಲ್ಲರೆದರ ಹಣದುಬ್ಬರ ಶೇಕಡ 3.77ಕ್ಕೆ ಏರಿಕೆ, ಕೈಗಾರಿಕಾ ಉತ್ಪಾದನೆ ಕುಸಿತ

ಶುಕ್ರವಾರ (ಅ.12) ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಚಿಲ್ಲರೆ ದರ ಹಣದುಬ್ಬರ ಶೇ.3.77ಕ್ಕೇರಿದೆ. ಆದರೆ, ರಿಸರ್ವ್ ಬ್ಯಾಂಕಿನ ಹಣದುಬ್ಬರ ಮಿತಿಯಾದ ಶೇ.4ಕ್ಕಿಂತ ಕೆಳಮಟ್ಟದಲ್ಲೇ ಇದೆ. ಇದು ಇತ್ತೀಚೆಗೆ ಆರ್‌ಬಿಐ ಬಡ್ಡಿದರ ಏರಿಕೆ ಮಾಡದಿರುವ ನಿರ್ಧಾರವನ್ನು ಸಮರ್ಥಿಸಿದಂತಾಗಿದೆ

ಸೆಪ್ಟೆಂಬರ್ ತಿಂಗಳ ಗ್ರಾಹಕದರ ಹಣದುಬ್ಬರವು ಶೇ.3.77ಕ್ಕೆ ಏರಿದೆ. ಆಗಸ್ಟ್ ತಿಂಗಳಲ್ಲಿ ಇದು ಶೇ.3.69ರಷ್ಟಿತ್ತು. ಬಹುತೇಕ ಆರ್ಥಿಕ ತಜ್ಞರು ಅಂದಾಜು ಮಾಡಿದ್ದ ಶೇ.4ಕ್ಕಿಂತಲೂ ಕಡಮೆ ಮಟ್ಟದಲ್ಲಿದೆ. ಅಕ್ಟೋಬರ್ 3-9ರ ನಡುವೆ ರಾಯ್ಟರ್ ಸುದ್ದಿಸಂಸ್ಧೆ ನಡೆಸಿದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 45 ಮಂದಿ ಆರ್ಥಿಕ ತಜ್ಞರು, ಚಿಲ್ಲರೆದರ (ಗ್ರಾಹಕದರ) ಹಣದುಬ್ಬರ ಶೇ.4ರಷ್ಟು ಆಗುತ್ತದೆಂದು ಅಂದಾಜಿಸಿದ್ದರು.

ಶುಕ್ರವಾರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಭಾರತೀಯ ರಿಸರ್ವ್ ಬ್ಯಾಂಕಿನ ಹಣದುಬ್ಬರ ಮಿತಿಯಾದ ಶೇ.4ಕ್ಕಿಂತ ಕೆಳಮಟ್ಟದಲ್ಲೇ ಇದೆ. ಇದು ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡದಿರುವ ನಿರ್ಧಾರವನ್ನು ಸಮರ್ಥಿಸಿದಂತಾಗಿದೆ. ಆರ್ಬಿಐ ಸಾಮಾನ್ಯವಾಗಿ ಬಡ್ಡಿದರ ಏರಿಸುವ ಅಥವಾ ಇಳಿಸುವ ನಿರ್ಧಾರವನ್ನು ಚಿಲ್ಲರೆದರ ಹಣದುಬ್ಬರ ಆಧರಿಸಿ ಮಾಡುತ್ತದೆ.

ಇದನ್ನೂ ಓದಿ : ಶೇಕಡ 5ಕ್ಕೇರಿದ ಚಿಲ್ಲರೆ ದರ ಹಣದುಬ್ಬರ, ತಗ್ಗಿದ ಕೈಗಾರಿಕಾ ಉತ್ಪನ್ನ

ಆಹಾರ ಪದಾರ್ಥಗಳ ಹಣದುಬ್ಬರವು ಆಗಸ್ಟ್‌ನಲ್ಲಿ 0.29ರಷ್ಟುಇದ್ದದ್ದು ಸೆಪ್ಟೆಂಬರ್‌ನಲ್ಲಿ ಶೇ.0.51ಕ್ಕೆ ಏರಿದೆ. ಆಗಸ್ಟ್ ತಿಂಗಳ ಚಿಲ್ಲರೆದರ ಹಣದುಬ್ಬರವು ಹತ್ತು ತಿಂಗಳಲ್ಲೇ ಕಡಿಮೆ ಮಟ್ಟಕ್ಕೆ ಅಂದರೆ, ಶೇ.3.69ಕ್ಕೆ ಇಳಿದಿತ್ತು. ಈ ಕಾರಣದಿಂದಾಗಿಯೇ ಅಕ್ಟೋಬರ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಬಡ್ಡಿದರ ಏರಿಕೆ ಮಾಡದಿರಲು ಆರ್ಬಿಐ ನಿರ್ಧರಿಸಿತ್ತು. ಆದರೆ, ಆರ್ಬಿಐ ನಿರ್ಧಾರವು ಇಡೀ ಬಂಡವಾಳ ಪೇಟೆಯಲ್ಲಿ ತೀವ್ರ ಅಚ್ಚರಿ ಮೂಡಿಸಿತ್ತು. ಆರ್ಬಿಐ ಮುಂದೆ ಡಿಸೆಂಬರ್‌ನಲ್ಲಿ ಹಣಕಾಸು ನೀತಿ ಪರಾಮರ್ಶೆ ಮಾಡಲಿದೆ.

ಈ ನಡುವೆ, ಸರ್ಕಾರ ಕೈಗಾರಿಕಾ ಉತ್ಪನ್ನ ಸೂಚ್ಯಂಕ (ಐಐಪಿ) ಅಂಕಿ-ಅಂಶ ಬಿಡುಗಡೆ ಮಾಡಿದ್ದು ಆಗಸ್ಟ್ ತಿಂಗಳಲ್ಲಿ ಶೇ.4.3ಕ್ಕೆ ಕುಸಿದಿದೆ. ಜುಲೈ ತಿಂಗಳಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.6.6ರಷ್ಟಿತ್ತು. ಕೈಗಾರಿಕಾ ಉತ್ಪಾದನೆ ಕುಸಿತವು ಆರ್ಥಿಕ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗಿರುವುದನ್ನು ಸೂಚಿಸುತ್ತದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More