ಸಂಕಲನ | ಒಳಮೀಸಲಾತಿ ಕುರಿತು ತಜ್ಞರ ವಿಶ್ಲೇಷಣಾ ಲೇಖನಗಳ ಸರಣಿ

ಒಳಮೀಸಲಾತಿ ಕುರಿತು ಒಂದು ಅವಲೋಕನ. ವಿಷಯ ತಜ್ಞರು, ಲೇಖಕರಿಂದ ವಿಶೇಷ ಲೇಖನಗಳ ಸರಣಿಯನ್ನು ‘ದಿ ಸ್ಟೇಟ್‌’ ಪ್ರಕಟಿಸುತ್ತಿದೆ. ಒಳಮೀಸಲಾತಿ ಕುರಿತು ಇದುವೆರೆಗೂ ನಮ್ಮಲ್ಲಿ ಪ್ರಕಟವಾದ ಲೇಖನಗಳ ಸಂಕಲನ ಇಲ್ಲಿದೆ

ಭಾರತದ ನೆಲವನ್ನು ಸಾವಿರಾರು ವರ್ಷಗಳಿಂದ ಆಳಿದ ಪುರೋಹಿತಶಾಹಿ ಮತ್ತು ಫ್ಯೂಡಲ್ ಶಕ್ತಿಗಳ ಅಕ್ರಮಕೂಟದ ಅತಿ ವಿಕೃತ ಸೃಷ್ಟಿ ಎಂದರೆ ವರ್ಣ ಮತ್ತು ಅದರ ವೈದಿಕ ಕಾನೂನಿನ ಚಕ್ರವ್ಯೂಹವಾದ ಜಾತಿಗಳ ವ್ಯವಸ್ಥೆ. ಇದೇ ಶಕ್ತಿ ಕೂಟವು ಜಾತಿವ್ಯವಸ್ಥೆಗೆ ವಾರಸುದಾರ. ಈಗ ಇವುಗಳದ್ದೇ ರಾಜ್ಯಭಾರ! ಎಂದು ಲೇಖನದಲ್ಲಿ ವಿವರಿಸಿದ್ದಾರೆ ಬಿ ಎಲ್‌ ರಾಜು ಅವರು.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಂದಿಗೆ ೧೦೧ ಜಾತಿಗಳನ್ನು ಸೇರಿಸಲಾಗಿದ್ದು, ಈ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳಿಗೂ ನ್ಯಾಯಬದ್ದ ಪಾಲನ್ನು ಮೀಸಲಿರಿಸಲಾಗಿದೆ. ಇದುವೇ ಹಂಚಿ ಉಣ್ಣುವ ತತ್ವ. ನೋವುಗಳು ಸಮಾನವೇ ಆಗಿದ್ದಾಗ ಸಂತೈಸುವ ದನಿಗಳು ಕೂಡ ಒಂದಾಗುವುದು ನ್ಯಾಯ ತಾನೇ? ಎಂದು ಪ್ರಶ್ನಿಸುತ್ತಾರೆ ಎನ್‌ ರವಿಕುಮಾರ್‌ ಅವರು.

ಸಂವಿಧಾನದತ್ತವಾಗಿ ಬಂದಿರುವ ಮೀಸಲಾತಿ ಹಕ್ಕನ್ನು ಪಡೆದುಕೊಳ್ಳಲಿಕ್ಕಾಗಿ ದಲಿತರು ಅಂದಿನಿಂದಲೂ ನಿರಂತರವಾಗಿ ಹೋರಾಟ ನಡೆಸಬೇಕಾಗಿರುವುದು ಒಂದು ದುರಂತ. ಅಧಿಕಾರದ ಮೊಗಸಾಲೆಗಳಲ್ಲಿ ಜಾತಿ ವ್ಯವಸ್ಥೆಯ ಬೇರುಗಳು ಬಹಳ ಆಳವಾಗಿ ಬೇರುಬಿಟ್ಟಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು.

ಒಳಮೀಸಲಾತಿಯ ಹಂಚಿಕೆ ದಲಿತ ಸಮುದಾಯಗಳನ್ನು ಛಿದ್ರಗೊಳಿಸುತ್ತದೆ ಎನ್ನುವವರು, ಸಂವಿಧಾನ ಪೂರೈಸುವ ಲಿಖಿತ ಮೀಸಲಾತಿಯು ದಲಿತ ಸಮುದಾಯಗಳಲ್ಲಿಯೇ ಬಲಿಷ್ಠರ ಪಾಲಾಗಿದೆ ಎಂಬುದನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ? ಇದು ದುರ್ಬಲರನ್ನು ಮೂಲೆಗೆ ತಳ್ಳುವ ತಂತ್ರವಲ್ಲವೇ? ಎಂದು ಹೇಳಿದ್ದಾರೆ ರಮೇಶ್‌ ಅರೋಲಿ.

ನ್ಯಾ.ಸದಾಶಿವ ಆಯೋಗವು ರಾಜ್ಯದ ಪರಿಶಿಷ್ಟ ಜಾತಿಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಜೊತೆಗೆ, ಮೀಸಲಾತಿ ಸೌಲಭ್ಯ ಯಾರಿಗೆ ಎಷ್ಟು ಲಭ್ಯವಾಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿರುವುದಾಗಿ ಹೇಳಿಕೊಂಡಿದೆ. ಆದರೆ ವಾಸ್ತವವಾಗಿ ಮನೆ-ಮನೆ ಸಮೀಕ್ಷೆ ನಡೆಸಿಲ್ಲ ಎಂಬ ತಕರಾರಿದೆ ಎಂದು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ ಲೇಖಕ ಶಿವಾಜಿ ಗಣೇಶನ್‌.

ಮೀಸಲಾತಿ ನೀತಿಗೆ ಮೇಲು ಜಾತಿಗಳ ವಿರೋಧ ಒಂದು ರೀತಿಯಾದರೆ, ಕೆಳ ಜಾತಿಯವರದು ಮತ್ತೊಂದು ರೀತಿಯದು. ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ ಹೊಲೆಯ ಜಾತಿ ಮತ್ತು ಇತರೇ ಸ್ಪೃಶ್ಯ ಜಾತಿಗಳು ಸದಾಶಿವ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವುದು ಹಿಂದಿನಿಂದಲೂ ಕೇಳಿ ಬರುತ್ತಿದೆ ಎನ್ನುತ್ತಾರೆ ಲೇಖನ ಕೆ ಬಿ ಸಿದ್ದಯ್ಯ ಅವರು.

ಒಳಮೀಸಲಾತಿ ಎಂಬುದು ಕಳೆದ ಮೂರು ದಶಕಗಳಿಂದ ತೀವ್ರ ಚರ್ಚೆಗೆ ಒಳಗಾಗಿರುವ ಗಂಭೀರ ವಿಚಾರ. ಒಳಮೀಸಲಾತಿ ಹಿಂದುಳಿದ ವರ್ಗಗಳಲ್ಲಿ ಚರ್ಚೆಯ ವಿಷಯವಲ್ಲ. ಆದರೆ ಅದೊಂದು ಒಪ್ಪಿತ ಮೌಲ್ಯ. ಸಮಾನತೆಯನ್ನು ತರುವ ಪ್ರಮುಖ ಅಸ್ತ್ರಗಳಲ್ಲಿ ಮೀಸಲಾತಿಯೂ ಒಂದು ಎಂದು ಲೇಖನದಲ್ಲಿ ವಿವರಿಸಿದ್ದಾರೆ ಎಲ್‌ ಹನುಮಂತಯ್ಯ ಅವರು.

ಮೀಸಲಾತಿ ಹಂಚಿಕೆ ನ್ಯಾಯಬದ್ಧವಾಗಬೇಕಾದರೆ ಜಾತಿಗಳ ಸಂಖ್ಯಾಬಾಹುಳ್ಯ ಹಾಗೂ ಅವುಗಳ ಸ್ಥಿತಿಗತಿಗಳ ಬಗ್ಗೆ ವಿಶ್ವಾಸಾರ್ಹವಾದ ಮತ್ತು ನಿಖರವಾದ ಮಾಹಿತಿ ನಮಗೆ ಅಗತ್ಯವಾಗಿದೆ. ಆದರೆ, ವೈಜ್ಞಾನಿಕ ರೀತಿಯಲ್ಲಿ ಜಾತಿಗಣತಿಯು ಇಲ್ಲವಾದ ಕಾರಣ ಮೀಸಲಾತಿ ಹಂಚಿಕೆ ವಿಶ್ವಾಸಾರ್ಹವಾಗಿಲ್ಲ ಎನ್ನುತ್ತಾರೆ ವಡ್ಡಗೆರೆ ನಾಗರಾಜಯ್ಯ ಅವರು.

ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ. ಆದರೆ, ಹಲವು ಜಾತಿಶಕ್ತಿಗಳು ಆಯೋಗದ ವರದಿಯನ್ನು ವಿರೋಧಿಸಿ, ಅದು ಜಾರಿಯಾಗದಂತೆ ಒತ್ತಡ ಹೇರುವುದು ನಡೆದಿದೆ. ಈ ಬಗ್ಗೆ ಮಾಧ್ಯಮಗಳೂ ಮೌನವಾಗಿರುವುದು ದುರಂತ ಎನ್ನುತ್ತಾರೆ ವಡ್ಡಗೆರೆ ನಾಗರಾಜಯ್ಯ ಅವರು.

ನ್ಯಾ. ಸದಾಶಿವ ಆಯೋಗ ಮತ್ತು ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಜಾತೀವಾರು ಸಮೀಕ್ಷೆಯನ್ನು ಸರ್ಕಾರ ತುರ್ತಾಗಿ ಬಿಡುಗಡೆ ಮಾಡಬೇಕಿದೆ. ಒಳಮೀಸಲಾತಿ ಅಥವಾ ಒಳ ವರ್ಗೀಕರಣದ ಒಳಾರ್ಥ ತಿಳಿಯಲು ಇವೆರಡೂ ವರದಿಗಳು ಸಹಾಯಕವಾಗಲಿವೆ ಎಂದು ವಿಶ್ಲೇಷಿಸುತ್ತಾರೆ ಸಿ ಎಸ್‌ ದ್ವಾರಕಾನಾಥ್‌ ಅವರು.

ಸದ್ಯದ ಸಾಮಾಜಿಕ ಸ್ಥಿತಿಯಲ್ಲಿ ಒಳ ಮೀಸಲಾತಿಯನ್ನು ಅನುಷ್ಠಾನ ಮಾಡದೆ ಹೋದರೆ ಹೊಲೆಯ-ಮಾದಿಗರಲ್ಲಿರುವ ಕನಿಷ್ಠ ಪ್ರಮಾಣದ ಸಾಮಾಜಿಕ ಸೌಹಾರ್ದತೆ ಮುರಿದುಬೀಳುತ್ತದೆ. ಒಳ ಮೀಸಲಾತಿ ಅನುಷ್ಠಾನ ಪ್ರಯತ್ನ ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲದ ಕಾರಣ ಗೊಂದಲಗಳು ವಿಪರೀತವಾಗಿವೆ ಎಂದು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ ದಾಸನೂರು ಕೂಸಣ್ಣ ಅವರು.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More