ಹಾದಿಯಾ ಆರ್ತನಾದ | ಚಂದ ಬದುಕಲೂ ಕೋರ್ಟ್ ಮೆಟ್ಟಿಲು ಏರಬೇಕಾಯಿತಲ್ಲ!

ಕೋಮುವಾದಿ ಅಟ್ಟಹಾಸವಿದ್ದಲ್ಲಿ ನಿರ್ಮಲ ಪ್ರೇಮವೂ ಮತೀಯತೆಯ ಸುಳಿಯಲ್ಲಿ ಸಿಲುಕುವುದು ಅತ್ಯಂತ ಸಹಜ. ಇದು ಅಪಾಯಕಾರಿಯಾದದ್ದು. ಲವ್ ಜಿಹಾದ್ ಆರೋಪ ಹೊತ್ತು ನ್ಯಾಯಾಲಯದ ಹೊಸ್ತಿಲಲ್ಲಿರುವ ಹಾದಿಯಾ-ಸಫಿನ್ ಬದುಕು ಇಂಥ ಅಪಾಯಕ್ಕೆ ಸಿಲುಕಿರುವಂತೆ ಕಾಣುತ್ತಿದೆ

“ದಯೆಯಿಲ್ಲದ ಧರ್ಮ ಅದಾವುದಯ್ಯ? ದಯವೇ ಧರ್ಮದ ಮೂಲವಯ್ಯ,’’ -ಧರ್ಮವನ್ನು ಹೀಗೆ ದಯೆ, ಸಕಲ ಜೀವರಿಗೆ ಲೇಸು ಬಯಸುವ ನೆಲೆಯಲ್ಲಿ ಅರ್ಥೈಸಿಕೊಳ್ಳುತ್ತ ಬೆಳೆದವರಿಗೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಬಹಳ ಚಿಂತೆಗೀಡು ಮಾಡುತ್ತವೆ. ಜಗತ್ತಿನ ಗಮನ ಸೆಳೆದಿರುವ ಕೇರಳದ ಹಾದಿಯಾ ಪ್ರಕರಣವಂತೂ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಮೊನ್ನೆ ಹಾದಿಯಾ ಕೋರ್ಟ್‌ಗೆ ಹೇಳಿರುವುದು ಸ್ಪಷ್ಟವಾಗಿ ಮೂರು ಅಂಶ; ತನಗೆ ಸ್ವಾತಂತ್ರ್ಯ ಬೇಕು, ಪತಿಯೊಂದಿಗೆ ಬದುಕಬೇಕು ಮತ್ತು ಮತಾಂತರವು ಸಂವಿಧಾನ ತನಗೆ ಕೊಡಮಾಡಿರುವ ಹಕ್ಕು, ಹಾಗಾಗಿ ಧರ್ಮಾಚರಣೆಗೆ ಬಿಡಬೇಕು ಎಂಬುದು.

ತಮ್ಮ ಮಗಳನ್ನು ಒತ್ತಾಯದಿಂದ ಮತಾಂತರ ಮಾಡಲಾಗಿದೆ, ಇದು ಲವ್ ಜಿಹಾದ್, ಮಗಳ ಮದುವೆಯನ್ನು ರದ್ದುಗೊಳಿಸಬೇಕೆಂದು ಹೆತ್ತವರೂ ಕೋರ್ಟಿನ ಮುಂದೆ ವಾದ ಮಂಡಿಸಿದ್ದಾರೆ. ಕೇರಳ ರಾಜ್ಯದ ಹೈಕೋರ್ಟ್, ಮದುವೆಯನ್ನು ರದ್ದುಗೊಳಿಸಿ ಹಾದಿಯಾಳನ್ನು ಹೆತ್ತವರ ವಶಕ್ಕೆ ಒಪ್ಪಿಸಿತ್ತು. ಹನ್ನೊಂದು ತಿಂಗಳು ತಾನು ಬಂಧಿಯಾಗಿದ್ದೆ ಮತ್ತು ತನ್ನ ಧರ್ಮದ ಆಚರಣೆ ಮಾಡಲು ತನಗೆ ಬಿಟ್ಟಿಲ್ಲ, ಮಾಧ್ಯಮದವರಿಗಾಗಲೀ ರಾಜ್ಯ ಮಹಿಳಾ ಆಯೋಗದವರಿಗಾಗಲೀ ತನ್ನ ಭೇಟಿಗೆ ಬಂದಾಗ ನಿರಾಕರಿಸಲಾಗಿದೆ ಎಂಬುದು ಹಾದಿಯಾ ದೂರು. ಆದರೆ, ಸುಪ್ರಿಂ ಕೋರ್ಟು ಸದ್ಯಕ್ಕೆ ಹಾದಿಯಾಳ ಪ್ರಕರಣವನ್ನು ಸ್ಪಷ್ಟವಾಗಿಸಿದ್ದೇನೆಂದರೆ, ಹಾದಿಯಾ ಸ್ವತಂತ್ರಳಾಗಿ ಬದುಕುವ ಹಕ್ಕು ಹೊಂದಿದ್ದಾಳೆ, ಅವಳು ಓದಬೇಕು ಎಂದು. ಓದಿನ ಖರ್ಚು ಸರಕಾರ ವಹಿಸಿಕೊಳ್ಳಬೇಕು ಎಂದಿದ್ದಕ್ಕೆ ತನ್ನ ಪತಿ ಓದಿನ ಖರ್ಚು ಕೊಡುತ್ತಾರೆ ಎಂದಿದ್ದಾಳೆ. ಹೀಗೆ ಹಾದಿಯಾ ಹೆಜ್ಜೆಹೆಜ್ಜೆಗೂ ಜಟಿಲ ದಾರಿ ತುಳಿಯುವಂತಾಗಿದೆ. ಎರಡೂ ಕಡೆಯ ವಾದ-ಪ್ರತಿವಾದಗಳೂ ಮುಂದಕ್ಕೆ ಸುಪ್ರೀಂ ಕೋರ್ಟಿನಲ್ಲಿ ಇನ್ನಷ್ಟು ನಿಚ್ಚಳವಾಗಲಿವೆ.

ಮೂರು ವರ್ಷಗಳ ಹಿಂದೆ ಇರಬೇಕು; ನಾನು ಮತ್ತು ನನ್ನ ಗೆಳತಿಯರು ಮಂಡ್ಯದಲ್ಲಿ ನಡೆದ ಆಶಿತಾ ಮತ್ತು ಶಕೀಲ್ ಮದುವೆಗೆ ಹೋಗಿದ್ದೆವು. ಅದು ನರೇಂದ್ರಬಾಬು ಮತ್ತು ಮುಖ್ತರ್ ಅಹಮದ್ ಎಂಬ ಗೆಳಯರಿಬ್ಬರ ಮಕ್ಕಳ ಮದುವೆ. ಹಿಂದೂ ಮತ್ತು ಮುಸ್ಲಿಂ ಕುಟುಂಬಗಳು ಪರಸ್ಪರ ಸಂತೋಷದಿಂದ ಮಕ್ಕಳ ಆಯ್ಕೆಯನ್ನು ಗೌರವಿಸಿ ಘನತೆಯಿಂದ ಬೀಗರಾದ ಗಳಿಗೆಯದು. ಮೈಸೂರು-ಮಂಡ್ಯವೆಂದರೆ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ನೆನಪಾಗುತ್ತದೆ. ಆದರೆ, ಡಾ.ನರೇಂದ್ರಬಾಬು ಅವರ ಮನೆಯ ಮುಂದೆ ಹಿಂದೂ ಕೋಮುವಾದಿ ಸಂಘಟನೆಯು ಹೋರಾಟ ನಡೆಸಿತ್ತು. ಇದು ಒಂದು ರೀತಿಯಲ್ಲಿ ಅವರ ವೈಯಕ್ತಿಕ ಬದುಕಿನಲ್ಲಿ ಅತಿಕ್ರಮಿಸಿ ಭಯ ಹುಟ್ಟಿಸುವ ಬಗೆಯಾಗಿತ್ತು. ಭಾರತದ ಸಂವಿಧಾನವು ಧಾರ್ಮಿಕ ಆಯ್ಕೆಯ ಸ್ವಾತಂತ್ರ್ಯ ನೀಡಿರುವಾಗ ಹೀಗೆ ಅವರ ವೈಯಕ್ತಿಕ ಹಕ್ಕಿನ ಮೇಲೆ ದಾಳಿ ಮಾಡುವುದು ಅಪರಾಧ.

ಹೀಗಾಗಿ, ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅರ್ಥವಂತಿಕೆಯಲ್ಲಿ ನಡೆಯಬೇಕಾದ ಮದುವೆಯು ದುಗುಡ ಮತ್ತು ಭಯಪಡುವಂತೆ ಮಾಡುವುದನ್ನು ಖಂಡಿಸಲೇಬೇಕಿತ್ತು. ನನಗೀಗಲೂ ನೆನಪಿದೆ, ಮದುವೆಗೆಂದು ಹೋದವರು ನಾವು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟದ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ಬೆಂಬಲಿಸಬೇಕಾಯ್ತು. ನಾವು ಮದುಮಕ್ಕಳಿಬ್ಬರನ್ನೂ ಭೇಟಿಯಾಗಲು ಅವರ ಮನೆಗಳಿಗೂ ಹೋಗಿದ್ದೆವು. ಶಕೀಲರನ್ನು ವರಿಸಿದ ಆಶಿತಾ ತನ್ನಹೆತ್ತವರೊಂದಿಗೆ ಮದುವೆಯ ಸಂಭ್ರಮದಲ್ಲಿದ್ದಳು. ಅವಳ ಕೈಯ ಮದರಂಗಿ ಮತ್ತು ಬಳೆಗಳು, ಕಣ್ಣ ಕಾಡಿಗೆ ಮತ್ತು ಮಿಂಚು ಎಲ್ಲವೂ ಹೊಸ ಬದುಕಿಗೆ ಕಾಲಿಡುತ್ತಿರುವ ನವೋಲ್ಲಾಸದ ಪ್ರತೀಕವಾಗಿದ್ದವು. ಹೆತ್ತವರೂ ಅವಳ ಹಕ್ಕುಬಾಧ್ಯತೆಗಳನ್ನು ಮಮತೆಯೊಂದಿಗೆ ಗೌರವಿಸಿದ್ದರಿಂದಲೇ ಆಶಿತಾ ಇಸ್ಲಾಂಗೆ ಮತಾಂತರಗೊಂಡ ತನ್ನ ನಿಲುವಿನ ಬಗ್ಗೆ ಯಾವುದೇ ದುಗುಡ ಹೊಂದಿರಲಿಲ್ಲ. ಹೆತ್ತವರಿಗೂ ಇದೊಂದು ಗಂಭೀರ ಸಮಸ್ಯೆಯಾಗಿ ಖಂಡಿತ ಕಾಡಲಿಲ್ಲ.

ನಾನು ಆಶಿತಾಳನ್ನು ಕೇಳಿದ್ದೆ, “ನಿನಗೆ ಮತಾಂತರವಾಗಬೇಕೆಂದು ಒತ್ತಾಯವಿತ್ತಾ? ಯಾಕೆ ಮತಾಂತರವಾದೆ?” ಅವಳು ಅಳುಕಿಲ್ಲದೆ ಹೇಳಿದ್ದಳು, “ನಾನು ನನ್ನ ಗಂಡನೊಂದಿಗೆ ಬದುಕಬೇಕು. ಅಲ್ಲಿನ ಆಚರಣೆ ನಂಬಿಕೆಗಳೂ ನನಗೆ ಇಷ್ಟ. ಇದರಲ್ಲಿ ಒತ್ತಾಯವೆಲ್ಲಿಯದು?” ಆಶಿತಾಗೆ ಕಾಡದ ಪ್ರಶ್ನೆಯು ಧರ್ಮದ ಠೇಕೆದಾರರಿಗೆ ಯಾಕೆ ಕಾಡುವುದೋ ನಾನರಿಯೆ. ಮದುವೆ ಮುಗಿಸಿ ಬರುವಾಗ ನನಗನಿಸಿದ್ದು, ಆಶಿತಾ ಮತ್ತು ಶಕೀಲ ನಿಜವಾಗಿಯೂ ಭಾಗ್ಯವಂತರು. ಏಕೆಂದರೆ, ಇದೇ ಮಂಡ್ಯದ ಆಬಲವಾಡಿಯಲ್ಲಿ ದಲಿತ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಮಗಳನ್ನು ನೇಣಿಗೆ ಹಾಕಿದ್ದು ಹೆತ್ತವರೇ. ಆದರೆ ಈ ಹಿಂದೂ-ಮುಸ್ಲಿಂ ಕುಟುಂಬಗಳೆರಡೂ ಮತೀಯ ಚೌಕಟ್ಟು ದಾಟಿ, ಮಕ್ಕಳನ್ನು ಮಮತೆಯ ರೆಕ್ಕೆಯಲ್ಲಿ ರಕ್ಷಿಸಿದ್ದರಿಂದಲೇ ಆಶಿತಾ ಮತ್ತು ಶಕೀಲ ದಂಪತಿಗಳ ಉಡಿಯಲ್ಲೀಗ ಮುದ್ದಾದ ಮಗುವಿದೆ. ಎಷ್ಟೊಂದು ಜೋಡಿಗಳು ಹೀಗೆ ಧರ್ಮ, ಜಾತಿಯ ಗಡಿ ಮೀರಿ ಬದುಕು ಕಟ್ಟಿಕೊಂಡಿವೆ.

ಸೂಫಿ-ಸಂತ ಪರಂಪರೆಯು ಈ ನೆಲದಲ್ಲಿ ದಯೆಯೇ ಧರ್ಮದ ಮೂಲ ಎಂಬುದನ್ನು ಗಟ್ಟಿಗೊಳಿಸಿದೆ. ಆದರೆ ಹುಸಿ ಧರ್ಮದ ಗುತ್ತಿಗೆದಾರರು ಮಾತ್ರ ಎಲ್ಲ ಸಮುದಾಯದಲ್ಲಿ ಅಪಾಯದ ಬಿರುಗಾಳಿ ಎಬ್ಬಿಸುತ್ತಿರುವುದು ಹೌದು. ದುರಂತವೆಂದರೆ, ಈ ಅಪಾಯದ ಬಿರುಗಾಳಿಯು ನೈಜಪ್ರೇಮವನ್ನು ಸಹ ಮಲಿನಗೊಳಿಸುತ್ತಿದೆ. ಪ್ರೇಮವನ್ನು ಲವ್ ಜಿಹಾದ್ ಎಂದು ಕರೆದು, ವ್ಯಕ್ತಿಗೆ ಸಂವಿಧಾನ ಕೊಡಮಾಡಿದ ಎಲ್ಲ ತೆರನಾದ ಮೂಲಭೂತ ಹಕ್ಕುಗಳಿಗೂ ಧಕ್ಕೆ ತರಲಾಗುತ್ತಿದೆ. ಮತೀಯವಾದಗಳು ಅತಿರೇಕಕ್ಕೆ ಸಂದ ಈ ಹೊತ್ತಿನಲ್ಲಿ ಖಾಸಗಿ ಬದುಕನ್ನೂ ಬಾಳಲು ಕೋರ್ಟಿನ ಅಣತಿಗೆ ಕಾಯಬೇಕಿದೆ

ಇದನ್ನೂ ಓದಿ : ವಿಧಾನಸೌಧದಲ್ಲೇ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ

ಆಶಿತಾ ಶಕೀಲ್ ದಂಪತಿಗಳಿಗೆ ಸಿಕ್ಕಂತೆ ಹೆತ್ತವರ ಆಸರೆ ಹಾದಿಯಾ- ಸಫಿನ್‌ಗೆ ಸಿಗಲಿಲ್ಲ. ಇದರ ಹಿಂದೆ ಉಲ್ಬಣಗೊಳ್ಳುತ್ತಿರುವ ಮತೀಯ ಉನ್ಮಾದವೂ ಕಾರಣವಾಗಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಇಂತಹ ಅನೇಕ ಬದುಕುಗಳಿವೆ. ರಾಯಚೂರಿನ ಶೇಕ್ಷಾ ಖಾದ್ರಿ ಮತ್ತು ವಾಣಿ ಜೋಡಿಯು ಆದರ್ಶ ಬದುಕಿಗೊಂದು ಮಾದರಿ.

ಕೋಮುವಾದಿ ಅಟ್ಟಹಾಸವಿದ್ದಲ್ಲಿ ನಿರ್ಮಲ ಪ್ರೇಮವೂ ಮತೀಯತೆಯ ಸುಳಿಯಲ್ಲಿ ಸಿಲುಕುವುದು ಸಹಜ. ಆದರೆ ಇದು ಅಪಾಯಕಾರಿ. ಇಂತಹ ಅಪಾಯಕ್ಕೆ ಸಿಲುಕಿದ್ದು ಹಾದಿಯಾ ಮತ್ತು ಸಫಿನ್ ಬದುಕು. ನಮ್ಮ ಸಂವಿಧಾನವು ಕೊಡಮಾಡುವ ಹಕ್ಕುಗಳಾದ ಧಾರ್ಮಿಕ ಆಯ್ಕೆಯ ಸ್ವಾತಂತ್ರ್ಯ, ವಾಸ ಮಾಡುವ ಹಕ್ಕು, ವಾಕ್ ಸ್ವಾತಂತ್ರ್ಯ, ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಪ್ರತಿಪಾದಿಸಲಿಕ್ಕಾಗಿ ಕೋರ್ಟಿನ ಅಂಗಳದಲ್ಲಿ ಬಂದು ನಿಲ್ಲಬೇಕಾಗಿದ್ದು ಚಿಂತೆಗೀಡು ಮಾಡುವ ಸಂಗತಿಯಲ್ಲದೆ ಮತ್ತೇನು? ಇಷ್ಟಕ್ಕೂ ಹಾದಿಯಾ ಹೆತ್ತವರ ವಾದದಲ್ಲೇನಾದರೂ ತಥ್ಯವಿದ್ದರೆ ಕೋರ್ಟು ತನಿಖೆಗೆ ಒಳಪಡಿಸಬಹುದು. ಸಾಬೀತಾದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದು. ಆದರೆ ಹಾದಿಯಾಳಿಗೆ ನಮ್ಮ ಸಂವಿಧಾನ ಕೊಡಮಾಡಿದ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಾಗಬಾರದು.

ನನಗೆ ಕಡೆಗೂ ಅರ್ಥವಾಗುವುದು ಕಬೀರ ದೋಹಾ:

ಪೋತಿ ಪಢಪಢ ಜಗ ಮುವ್ವಾ ಪಂಡಿತ್ ಭಯಾ ನ ಕೋಯ

ಢಾಯಿ ಆಖರ ಪ್ರೇಮ್ ಕಾ ಪಢೆ ಸೊ ಪಂಡಿತ್ ಹೋಯ

ಸಂತ ಕಬೀರರು ಹೇಳುತ್ತಾರೆ: 'ಗ್ರಂಥ ಓದಿ ಓದಿ ಜಗತ್ತೇನೂ ಜ್ಞಾನಿಯಾಗಲಿಲ್ಲ. ಎರಡೂವರೆ ಅಕ್ಷರದ ಪ್ರೇಮವ ಓದಿದವರೇ ಜ್ಞಾನಿಗಳು.’

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More