ಪದ್ಮಾವತಿ ನಿಜವಾಗಿಯೂ ಬದುಕಿದ್ದಳಾ ಅಥವಾ ಕೇವಲ ಮಿಥ್ಯೆಯಾ?

ಇತಿಹಾಸದುದ್ದಕ್ಕೂ ಹಲವು ಕತೆಯಾಗಿ ಹರಿದುಬಂದಿರುವ ಪದ್ಮಾವತಿ ಬಗ್ಗೆ ರಾಜಸ್ಥಾನ ಸರ್ಕಾರದ ಪಠ್ಯಪುಸ್ತಕ ಹೇಳುವ ಕಥನ ನಿಜವಾಗಿ ಒಂದು ಕಲ್ಪನೆಯ ಕತೆಯೇ ಅಥವಾ ಇತಿಹಾಸದ ತುಣುಕೇ ಎಂಬುದು ಕುತೂಹಲಕಾರಿ. ಆದರೆ ಕತೆಯಾಗಲೀ ಇತಿಹಾಸವಾಗಲೀ ದ್ವೇಷಕಾರಲು ಬಳಕೆಯಾಗುವುದು ದುರಂತ

ಸತ್ಯ ಹಾಗೂ ಸುಳ್ಳುಗಳ ನಡುವೆ ನಿಂತಿರುವ ಇತಿಹಾಸದ ಸಮರ್ಥನೆಗಳು ಅದೆಷ್ಟು ಅಸಮರ್ಥನೀಯವೆಂಬುದು ಸಾಬೀತಾಗುತ್ತಲೇ ಬಂದಿದೆ. ಮಾನವ ನಾಗರಿಕತೆಯ ವಿಕಸನದ ಕ್ರಿಯೆಯಲ್ಲಿ ಯಾವುದು ಅಸ್ತಿತ್ವದಲ್ಲಿತ್ತು, ಯಾವುದು ಕೇವಲ ಕಲ್ಪನೆಯಾಗಿತ್ತು ಎಂಬುದು ಜಟಿಲವಾಗುತ್ತಲೇ ಇದೆ. ಧರ್ಮ ಹೇಳುವ ಇತಿಹಾಸ ಬೇರೆ, ಚರಿತ್ರಕಾರರು ಬರೆಯುವ ಇತಿಹಾಸ ಬೇರೆ, ಕಲಾವಿದರು ಸೃಷ್ಟಿಸುವ ಇತಿಹಾಸ ಬೇರೆ, ಕವಿಗಳು ರಚಿಸುವ ಇತಿಹಾಸ ಬೇರೆ. ಆದರೆ, ಇತಿಹಾಸದ ಗರ್ಭದಲ್ಲಿ ಅಡಗಿರುವ ಸತ್ಯವಾದರೂ ಏನು? ಚಲಿಸುವ ಕಾಲದೊಂದಿಗೆ ಕಲ್ಪನೆಗಳನ್ನೇ ಸತ್ಯವೆಂಬಂತೆ ಬಿಂಬಿಸಲಾಯಿತಾ? ನಂಬಿಕೆಗಳನ್ನೇ ನಿರ್ಣಾಯಕವೆಂದು ವಿಜೃಂಭಿಸಲಾಯಿತಾ? ಯೋಚಿಸದಂತೆಲ್ಲ ಇತಿಹಾಸದ ಬಗೆಗಿನ ಪ್ರಶ್ನೆಗಳು ಭುಗಿಲೇಳುತ್ತಲೇ ಹೋಗುತ್ತವೆ.

ಇವತ್ತು ರಾಣಿ ಪದ್ಮಾವತಿಯ ಬಗ್ಗೆ ಸೃಷ್ಟಿಯಾಗಿರುವ ವಾದ-ವಿವಾದಗಳು, ಅವಳ ಸುತ್ತ ಚಾಲ್ತಿಯಲ್ಲಿರುವ ಮಿಥ್ಯೆಗಳು, ಹೆಣೆದಿರುವ ಕಾಲ್ಪನಿಕ ಕತೆಗಳು, ಅವುಗಳನ್ನೇ ಸತ್ಯವೆಂದು ನಂಬುವಂತೆ ಜನರ ಮೇಲೆ ಹೇರುತ್ತಿರುವ ವಾತಾವರಣ ನೋಡಿದಾಗ ಇತಿಹಾಸದ ಬಗೆಗಿನ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

ಈ ಪದ್ಮಾವತಿ ಯಾರು, ಪದ್ಮಾವತಿಯ ಮೂಲವೇನು, ಪದ್ಮಾವತಿ ನಿಜದಲ್ಲಿ ಬದುಕಿದ್ದಳೇ, ಅವಳು ರಜಪೂತರ ಹಿರಿಮೆಯೇ, ತನ್ನ ಗಂಡ ಮುಸ್ಲಿಂ ರಾಜನಿಗೆ ಶರಣಾಗುವ ಪರಿಸ್ಥಿತಿ ಬಂದಾಗ ಬೆಂಕಿಗೆ ಹಾರಿ ಸುಟ್ಟುಹೋದಳೇ, ಅವಳು ಸೂಫಿ ಸಾಹಿತ್ಯದಲ್ಲಿ ಬರುವ ಕಾಲ್ಪನಿಕ ಪಾತ್ರವೇ ಎಂಬುದನ್ನು ಇವತ್ತಿನ ಯಾವ ಚರಿತ್ರಕಾರರೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಆದರೆ, ಮಲಿಕ್ ಮೊಹಮ್ಮದ್ ಜಾಯಸಿಯ 'ಪದ್ಮಾವತ್' ಕಾವ್ಯದಲ್ಲಿ ಬರುವ ಪದ್ಮಿನಿ ಕೇವಲ ಊಹೆ ಎಂದು ಖುದ್ದು ಕವಿಯೇ ಹೇಳಿಕೊಂಡಿದ್ದಾನೆ.

ಇಷ್ಟೆಲ್ಲ ಗೊಂದಲ ಹಾಗೂ ಸ್ಪೋಟಕ ಚರ್ಚೆಯನ್ನು ಹುಟ್ಟುಹಾಕಿರುವ ಪದ್ಮಾವತಿಯ ಚರಿತ್ರೆಯನ್ನು ರಾಜಸ್ಥಾನ ಸರ್ಕಾರದ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ಹನ್ನೆರಡನೇ ತರಗತಿಯ 'ಭಾರತ್ ಕಾ ಇತಿಹಾಸ' ಶಿರೋನಾಮೆಯಡಿಯಲ್ಲಿರುವ ಪುಸ್ತಕದಲ್ಲಿ 'ಮೊಘಲ್ ಆಕ್ರಮಣ್: ಪ್ರಕಾರ್ ಔರ್ ಪ್ರಭಾವ್' ಶೀರ್ಷಿಕೆಯ ಅಧ್ಯಾಯದಲ್ಲಿ ಪದ್ಮಾವತಿಯ ಬಗ್ಗೆ ವಿಸ್ತೃತ ವಿವರಗಳನ್ನು ಕೊಡಲಾಗಿದೆ.

ಇದರ ಪ್ರಕಾರ, ಸಿಂಹಳ ದ್ವೀಪದ ರಾಜ ಗಂಧರ್ವನ ಸುಂದರ ಮಗಳು ಪದ್ಮಾವತಿ. ಹೀರಾ-ಮಣಿ ಎಂಬ ಅವಳ ಪ್ರೀತಿಯ ಸಾಕು ಗಿಳಿ ರಾಜಾ ರತನ್ ಸಿಂಗ್ ಹತ್ತಿರ ಬಂದು ಪದ್ಮಾವತಿಯ ಸೌಂದರ್ಯದ ಬಗ್ಗೆ ವರ್ಣಿಸುತ್ತದೆ. ಇದನ್ನು ಕೇಳಿದ ರಾಜಾ ರತನ್ ಸಿಂಗ್ ಚಿತ್ತೂರು ಸಂಸ್ಥಾನದಿಂದ ಸಿಂಹಳ ದ್ವೀಪಕ್ಕೆ ಪ್ರಯಾಣ ಬೆಳೆಸುತ್ತಾನೆ. ಅವಳ ಅಗಾಧ ಸೌಂದರ್ಯ ಮೆಚ್ಚಿ, ಮದುವೆಯಾಗಿ ಚಿತ್ತೂರಿಗೆ ಕರೆತರುತ್ತಾನೆ. ಇತ್ತ, ರಾಜಾ ರತನ್ ಸಿಂಗ್ ಆಸ್ಥಾನದಿಂದ ಹೊರಹಾಕಲ್ಪಟ್ಟಿದ್ದ ಮಂತ್ರಿಯೊಬ್ಬ ತನ್ನ ಪ್ರತೀಕಾರ ತೀರಿಸಿಕೊಳ್ಳಲು ದೆಹಲಿ ಸುಲ್ತಾನ ಅಲ್ಹಾವುದ್ದೀನ್ ಖಿಲ್ಜಿ ಜೊತೆ ಸೇರಿ ಚಿತ್ತೂರು ಸಂಸ್ಥಾನದ ವಿರುದ್ಧ ಮಸಲತ್ತು ಮಾಡುತ್ತಾನೆ. ಚಿತ್ತೂರು ಸಂಸ್ಥಾನದ ಸಂಪತ್ತು ಹಾಗೂ ರಾಣಿ ಪದ್ಮಿನಿಯ ಸೌಂದರ್ಯದ ಬಗ್ಗೆ ಖಿಲ್ಜಿಗೆ ಆಸೆ ಹುಟ್ಟಿಸಿ ಆಕ್ರಮಣ ಮಾಡಲು ಪ್ರಚೋದಿಸುತ್ತಾನೆ.

ಎಂಟು ವರ್ಷಗಳ ನಿರಂತರ ದಾಳಿಯ ನಂತರ ಖಿಲ್ಜಿಯು ರಾಜಾ ರತನ್ ಸಿಂಗ್‍ನನ್ನು ಸೆರೆಹಿಡಿಯುತ್ತಾನೆ. ಪದ್ಮಾವತಿಯ ಮುಖವನ್ನೊಮ್ಮೆ ತೋರಿಸಲು ಹೇಳುತ್ತಾನೆ. ತೋರಿಸಿದರೆ ತನ್ನ ಸಾಮ್ರಾಜ್ಯಕ್ಕೆ ವಾಪಸು ಮರಳುವುದಾಗಿ ಪ್ರಲೋಭನೆ ಒಡ್ಡುತ್ತಾನೆ. ಕನ್ನಡಿಯಲ್ಲಿ ಪದ್ಮಾವತಿಯ ಪ್ರತಿಬಿಂಬ ನೋಡಲು ಖಿಲ್ಜಿ ಯಶಸ್ವಿಯಾಗುತ್ತಾನೆ. ಮೋಹಿತಗೊಂಡ ಖಿಲ್ಜಿ ಪದ್ಮಾವತಿಯನ್ನು ತನಗೆ ಒಪ್ಪಿಸಿದರೆ ಬಿಡುಗಡೆ ಮಾಡುವುದಾಗಿ ಷರತ್ತು ಹಾಕುತ್ತಾನೆ. ಈ ನಡುವೆ ರತನ್ ಸಿಂಗ್ ಸೇನೆ ಖಿಲ್ಜಿಯ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಇದನ್ನು ತಿಳಿದು ಕೋಪಗೊಂಡ ಖಿಲ್ಜಿ ರಾಜಾ ರತನ್ ಸಿಂಗ್‍ನನ್ನು ಕೊಲ್ಲುತ್ತಾನೆ. ಗಂಡ ಸತ್ತ ಸುದ್ದಿ ಕೇಳಿದ ರಾಣಿ ಪದ್ಮಾವತಿ ತನ್ನ ಕೋಟೆಯೊಳಗೆ ಬೆಂಕಿಗೆ ಹಾರಿ ಸುಟ್ಟುಹೋಗುತ್ತಾಳೆ.

ಇದನ್ನೂ ಓದಿ : ವೀಕೆಂಡ್ ಸ್ಪೆಷಲ್ | ನಿಜವಾಗಿಯೂ ‘ಪದ್ಮಾವತಿ’ ಯಾರು? ಇಲ್ಲಿದೆ ಹಲವು ಕತೆ

ಇದರಲ್ಲಿ ಮಿಥ್ಯೆಯ ಭಾಗವೇ ಹೆಚ್ಚಿದೆ ಎಂಬುದು ಇತಿಹಾಸದ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡವರಿಗೆ ಗೊತ್ತಾಗುತ್ತದೆ. ಚರಿತ್ರೆಯ ದಸ್ತಾವೇಜುಗಳನ್ನು ಕೆದಕಿ ನೋಡಿದಾಗ ದೆಹಲಿ ಸುಲ್ತಾನ ಅಲ್ಹಾವುದ್ದೀನ್ ಖಿಲ್ಜಿ 1303ರಲ್ಲಿ ಚಿತ್ತೂರುಗಢವನ್ನು ಆಕ್ರಮಿಸಿಕೊಳ್ಳುತ್ತಾನೆ. ಸರಿಸುಮಾರು ಎರಡುನೂರ ಮೂವತ್ತೇಳು ವರ್ಷಗಳ ನಂತರ ಚಿತ್ತೂರಿನ ಮಹಾಪತನದ ಬಗ್ಗೆ ಪದ್ಮಾವತ್ ಎಂಬ ಶೀರ್ಷಿಕೆಯ ಕವಿತೆ ರಚನೆಯಾಗುತ್ತದೆ. ಈ ಕಾವ್ಯದಲ್ಲಿ ಬರುವ ಪದ್ಮಾವತಿಯ ಕತೆಯನ್ನೇ ಮುಂದಿನ ಇತಿಹಾಸಕಾರರು, ಕವಿಗಳು, ಬರಹಗಾರರು, ಚಿತ್ರಕಲಾವಿದರು ತಮ್ಮ ತಮ್ಮ ಗ್ರಹಿಕೆ, ಊಹೆ ಹಾಗೂ ಕಲ್ಪನೆಗಳಿಗೆ ತಕ್ಕಂತೆ ಮಾರ್ಪಾಡು ಮಾಡುತ್ತಲೇ ಹೋದರು. ಮೊಘಲ್ ಸಂಸ್ಥಾನದ ಕವಿಗಳಿಂದ ಹಿಡಿದು ಬ್ರಿಟಿಷ್ ಇತಿಹಾಸಕಾರರವರೆಗೆ, ಬಂಗಾಳಿ ಖ್ಯಾತ ಸಾಹಿತ್ಯದಿಂದ ಹಿಡಿದು ತಮಿಳು ಸಿನಿಮಾ ರಂಗದವರೆಗೂ ಪದ್ಮಾವತಿ ಪ್ರವಹಿಸುತ್ತಲೇ ಹೋಗುತ್ತಾಳೆ.

ವಿಚಿತ್ರವೆಂದರೆ, ರಾಣಿ ಪದ್ಮಾವತಿಯ ಬಗ್ಗೆ ರಜಪೂತರ ಐತಿಹಾಸಿಕ ದಾಖಲೆಗಲ್ಲಾಗಲೀ, ಮೊಘಲರ ಗತಕಾಲದ ದಸ್ತಾವೇಜುಗಳಲ್ಲಾಗಲೀ ಉಲ್ಲೇಖವಿಲ್ಲ. ಅವಳು ಅಸ್ತಿತ್ವದಲ್ಲಿದ್ದ ಬಗ್ಗೆ ಯಾವುದೇ ಪುರಾವೆಗಳೂ ನಮಗೆ ದೊರೆಯುವುದಿಲ್ಲ. ಆದರೆ, ದೆಹಲಿಯ ಸುಲ್ತಾನ ಅಲ್ಹಾವುದ್ದೀನ್ ಖಿಲ್ಜಿ ಮಾತ್ರ ಭಾರತದ ಇತಿಹಾಸದಲ್ಲಿ ಅತ್ಯಾಚಾರಿ, ವಂಚಕ ಹಾಗೂ ಕಳಂಕಿತನಾಗಿ ಉಳಿದುಕೊಂಡದ್ದು ಮಾತ್ರ ವಿಪರ್ಯಾಸ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More