ಸಂಸದ ಪ್ರತಾಪ್‌ ಸಿಂಹರನ್ನು ಇಕ್ಕಟ್ಟಿಗೆ ಸಿಲುಕಿಸಿದ ಫೇಸ್ಬುಕ್‌ ಪೇಜ್‌ ಯಾರದ್ದು?

ಸಾಮಾಜಿಕ ಜಾಲತಾಣ ಬಿಜೆಪಿಯ ಪಾಲಿಗೆ ಬಿಸಿತುಪ್ಪವಾಗುತ್ತಿದೆಯೇ? ಅದನ್ನು ರಾಜಕೀಯ ಅಸ್ತ್ರವನ್ನಾಗಿ ಸಮರ್ಥವಾಗಿ ಬಳಸಿಕೊಂಡ ಬಿಜೆಪಿ ಈಗ ಅದರಿಂದಲೇ ಇರುಸುಮುರುಸು ಅನುಭವಿಸುವ ಸಂದರ್ಭಗಳನ್ನು ಎದುರಿಸುತ್ತಿದೆ. ಸದ್ಯದ ಸರದಿ ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಅವರದ್ದು

ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದೊಂದು ದಿನದಿಂದ ಹೆಚ್ಚು ಸುದ್ದಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಕುರಿತು ‘ಪೋಸ್ಟ್‌ ಕಾರ್ಡ್‌ ಕನ್ನಡ.ಕಾಂ’ ಬರೆದ ಸುದ್ದಿ ಕಟುಟೀಕೆಗೆ ಗುರಿಯಾಗಿದೆ. ‘ಪದ್ಮಾವತಿ’ ಚಿತ್ರದ ವಿಷಯದಲ್ಲಿ ಎದ್ದ ವಿವಾದವನ್ನು ಸರ್ಮಥಿಸಿಕೊಳ್ಳುವ ಉದ್ದೇಶದೊಂದಿಗೆ ಪೋಸ್ಟ್‌ಕಾರ್ಡ್‌, ಕನ್ನಡದ ವೀರ ಮಹಿಳೆಯರನ್ನು ಅಸಭ್ಯ ಹೋಲಿಕೆಯೊಂದಿಗೆ ಲೇಖನ ಪ್ರಕಟಿಸಿತ್ತು. ಸಹಜವಾಗಿಯೇ ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು, ಇದು ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೂ ಕಾರಣವಾಯಿತು.

ಜೆಡಿಎಸ್ ಬೆಂಗಳೂರು ಮಹಾನಗರ ಘಟಕ, ಪೋಸ್ಟ್‌ ಕಾರ್ಡ್‌ ಕನ್ನಡ ತಾಣದ ವಿರುದ್ಧ ದೂರು ದಾಖಲಿಸಿತು. ಇನ್ನೊಂದೆಡೆ ಬಿಜೆಪಿ, "ಇದು ಕಾಂಗ್ರೆಸ್‌ ಪಿತೂರಿ. ಲೇಖನವನ್ನು ಶೇರ್ ಮಾಡಲಾಗಿರುವ ಫೇಸ್‌ಬುಕ್‌ ಪುಟಗಳು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವಾಗಿದ್ದು, ಬಿಜೆಪಿಯ ತೇಜೋವಧೆಗೆ ಬಳಸುತ್ತಿದೆ,” ಎಂದು ಹೇಳಿಕೆ ನೀಡಿತು. ಈ ನಡುವೆ ವಿವಾದಕ್ಕೆ ಕಾರಣವಾದ ಲೇಖನವನ್ನು ಪೋಸ್ಟ್‌ ಕಾರ್ಡ್‌ ಕನ್ನಡ ತಿದ್ದಿ ಹೊಸದೊಂದು ಶೀರ್ಷಿಕೆಯೊಂದಿಗೆ ಪ್ರಕಟಿಸಿತು.

ಇಷ್ಟೆಲ್ಲ ಬೆಳವಣಿಗೆಗಳಲ್ಲಿ ಇಕ್ಕಟ್ಟಿಗೆ ಸಿಲುಕಿದ್ದು, ಮೈಸೂರಿನ ಸಂಸದ ಪ್ರತಾಪ ಸಿಂಹ. I Support Pratap Simha ಹೆಸರಿನ ಫೇಸ್‌ಬುಕ್‌ ಪೇಜ್‌, ಈ ಲೇಖನವನ್ನು, "ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು, ಒನಕೆ ಓಬವ್ವ ಹೈದರಾಲಿಯ ಜೊತೆ ಮಂಚ ಹಂಚಿಕೊಂಡಿದ್ದಳು,'' ಕೋಪ ಬಂತಲ್ವಾ, ಹಾಗಿದ್ರೆ ಕನ್ನಡ ಚಿತ್ರರಂಗಕ್ಕೆ ಇಂಥ ಕಥೆಗಳ ವಿರುದ್ಧ ಕೋಪ ಬರ್ತಿಲ್ವಾ?'' ಎಂಬ ಲೇಖನದ ಸಾಲುಗಳೊಂದಿಗೆ ಶೇರ್‌ ಮಾಡಿತ್ತು.

ಈ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪ್‌ ಸಿಂಹ ಅವರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಯಿತು. ಜೊತೆಗೆ ದೃಶ್ಯಮಾಧ್ಯಮಗಳಲ್ಲೂ ಈ ಕುರಿತು ಸುದ್ದಿ ಪ್ರಕಟವಾಗುತ್ತಿದ್ದಂತೆ ಸಂಸದ ಪ್ರತಾಪ್‌ ಸಿಂಹ ಅವರು ಸ್ಪಷ್ಟನೆ ನೀಡಿದರು. ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹನ್ನೆರಡು ನಿಮಿಷಗಳ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ಆದರೆ ತನಗೂ I Support Pratap Simha ಎಂಬ ಫೇಸ್‌ಬುಕ್‌ ಪುಟಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರು ಹೇಳಿದ್ದೇನು? ನೀವೇ ಕೇಳಿ...

ಪೋಸ್ಟ್‌ ಕಾರ್ಡ್‌ ಹಿಂದಿನ ಮಿದುಳುಗಳು

ಈ ಬೆಳವಣಿಗೆಯ ಜಾಡು ಹಿಡಿದು ನಾವು ಮೊದಲು ಜಾಲಾಡಿದ್ದು ಪೋಸ್ಟ್‌ ಕಾರ್ಡ್‌ ಕನ್ನಡ.ಕಾಂ ಅನ್ನು. ಪೋಸ್ಟ್‌ ಕಾರ್ಡ್‌ 2016ರ ಮೇ ತಿಂಗಳಿಂದ ಅತ್ಯಂತ ಕ್ರಿಯಾಶೀಲವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ತಾಣ. ಇದನ್ನು ಸ್ಥಾಪಿಸಿದ ಮೂವರಲ್ಲಿ ಮಹೇಶ್‌ ಹೆಗಡೆ ಮತ್ತು ವಿವೇಕ್‌ ಶೆಟ್ಟಿ ಹೆಸರಿನ ಇಬ್ಬರು ಕರ್ನಾಟಕದವರು. ಪೋಸ್ಟ್‌ ಕಾರ್ಡ್‌ ಮೂಲಕ ಸುಳ್ಳು ಸುದ್ದಿಗಳನ್ನು ಹರಡಲಾರಂಭಿಸಿದ ಇವರ ಕುರಿತು ಆಲ್ಟ್‌ ನ್ಯೂಸ್‌ ಸುದ್ದಿ ಮಾಡಿತ್ತು. ನೂರಾರು ಸುದ್ದಿಗಳನ್ನು ಸೃಷ್ಟಿಸುತ್ತಿರುವ ಈ ತಾಣದಲ್ಲಿನ ಮಾಹಿತಿಯ ಕುರಿತು ಎಚ್ಚರ ವಹಿಸುವಂತೆಯೂ ತಿಳಿಸಿತ್ತು.

ಮೊದಲು ಇಂಗ್ಲಿಷ್‌ನಲ್ಲಿ ಆರಂಭವಾದ ಪೋಸ್ಟ್‌ ಕಾರ್ಡ್‌, ೨೦೧೭ರ ಸೆಪ್ಟೆಂಬರ್‌ನಲ್ಲಿ ಕನ್ನಡದಲ್ಲೂ ಆರಂಭವಾಯಿತು. ಇದರಲ್ಲಿ ಪ್ರತಾಪ್‌ ಸಿಂಹ ಅವರನ್ನು ಕುರಿತು ಮೂರು ಬರಹಗಳು ಪ್ರಕಟವಾಗಿವೆ. ಆ ಬರಹಗಳು ಇಲ್ಲಿವೆ:

ಮಾನ ಇಲ್ಲದವನಿಂದ ಮಾನನಷ್ಟ ಮೊಕದ್ದಮೆ ದಾಖಲು

ಪ್ರಕಾಶ್‌ ರೈ/ರಾಜ್‌ಗೆ ಪ್ರತಾಪ್‌ ಸಿಂಹರಿಂದ ಕೆಲವು ನೇರ ಪ್ರಶ್ನೆಗಳು

ನಾ ಕಂಡ ಅಪರೂಪದ ರಾಜಕಾರಣಿ ಪ್ರತಾಪ್‌ ಸಿಂಹ ಬದಲಾಗಿದ್ದಾರೆಯೇ?

ಮಹೇಶ್‌ ಹೆಗಡೆ ಮತ್ತು ವಿವೇಕ್‌ ಶೆಟ್ಟಿಯವರು ನಡೆಸುವ ಪೋಸ್ಟ್‌ ಕಾರ್ಡ್‌ ಕನ್ನಡ.ಕಾಂ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಅವರೂ ಮೆಚ್ಚುಗೆ ವ್ಯಕ್ತಪಡಿಸಿ ವಿಶ್ವವಾಣಿಯಲ್ಲಿ ಬರೆಯುವ ತಮ್ಮ ಅಂಕಣ `ಬೆತ್ತಲೆ ಜಗತ್ತಿ’ನಲ್ಲಿ, "ಇವರೆಂದರೆ ವಿರೋಧಿಗಳೂ ಬೆಚ್ಚುತ್ತಾರೆ, ಏಕೆಂದರೆ...'' ಎಂದು ಪೋಸ್ಟ್‌ ಕಾರ್ಡ್‌ ಜನಪ್ರಿಯತೆ, ಅದರ ಸೃಷ್ಟಿಕರ್ತರ ಜನಪ್ರಿಯತೆಯನ್ನು ಕೊಂಡಾಡಿದ್ದರು.

ಅಷ್ಟೇ ಅಲ್ಲ, ಸೆಪ್ಟೆಂಬರ್‌ ೧ ಮತ್ತು ಅಕ್ಟೋಬರ್‌ ೨ರಂದು ಪೋಸ್ಟ್‌ ಕಾರ್ಡ್‌ನ ಎರಡು ಬರಹಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದರು ಕೂಡ.

ಇದಲ್ಲದೆ, ಕಳೆದ ನವೆಂಬರ್‌ನಲ್ಲಿ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ವಿವೇಕ್‌ ಮತ್ತು ಮಹೇಶ್‌ ಹೆಗಡೆ ಮತ್ತಿತರರು ಭೇಟಿಯಾದ ಸಂದರ್ಭದಲ್ಲಿ ತೆಗೆದ ಫೋಟೊವನ್ನು ಶೇರ್‌ ಮಾಡಿದ್ದಾರೆ.

ಸರಿ, ಇದಕ್ಕೂ I Support Pratap Simha ಫೇಸ್‌ಬುಕ್‌ ಪೇಜಿಗೂ ಏನು ಸಂಬಂಧ ಎಂದು ಕೇಳಬಹುದು?

ಫೇಸ್‌ಬುಕ್‌ ಪೇಜ್‌ ಯಾರದ್ದು?

ವಿವಾದಕ್ಕೆ ಕಾರಣವಾಗಿರುವ I Support Pratap Simha ಫೇಸ್‌ಬುಕ್‌ ಪುಟದಲ್ಲಿರುವ ಪೋಸ್ಟ್‌ಗಳನ್ನು ಗಮನಿಸಿದರೆ ನಮಗೆ ಕಾಣುವುದು ಅತಿ ಹೆಚ್ಚು ಪೋಸ್ಟ್‌ ಕಾರ್ಡ್‌ ಲೇಖನಗಳನ್ನು ಶೇರ್‌ ಮಾಡಿರುವ ಕೊಂಡಿಗಳು.

ಇದೇ ರೀತಿಯಲ್ಲಿ ಇನ್ನೂ ಒಂದು ಫೇಸ್‌ಬುಕ್‌ ಪೇಜ್‌ ಪ್ರತಾಪ್‌ ಸಿಂಹ ಅವರ ಹೆಸರಿನಲ್ಲಿ ಸಕ್ರಿಯವಾಗಿದೆ. ಅದರ ಹೆಸರು Pratap Simha for CM. ಇಲ್ಲೂ ನಮಗೆ ಕಾಣಿಸುವುದು ಪೋಸ್ಟ್‌ ಕಾರ್ಡ್‌ ಕನ್ನಡದ ಲೇಖನಗಳ ಕೊಂಡಿಗಳೇ.

ಈ ಎರಡರ ಪೈಕಿ I Support Pratap Simha ಫೇಸ್‌ಬುಕ್‌ ಪುಟವೂ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕ್ರಿಯಾಶೀಲವಾಗಿದೆ. ಪೋಸ್ಟ್‌ ಕಾರ್ಡ್‌ನ ಸ್ಥಾಪಕರಲ್ಲಿ ಒಬ್ಬರಾದ ವಿವೇಕ್‌ ಶೆಟ್ಟಿಯವರು ಈ ಪುಟವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿರುವುದೂ ಕಂಡುಬರುತ್ತದೆ.

ಆದರೆ ಪ್ರತಾಪ್‌ ಸಿಂಹ ಅವರು ಮಾತ್ರ ನನಗೂ I Support Pratap Simha ಫೇಸ್‌ಬುಕ್‌ ಪೇಜಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ...

  1. ಸಂಸದ ಪ್ರತಾಪ್‌ ಸಿಂಹ ಅವರೊಂದಿಗೆ ಸತತ ಸಂಪರ್ಕದಲ್ಲಿರುವಂತೆ ಕಾಣುವ ವಿವೇಕ್‌ ಶೆಟ್ಟಿ ಮತ್ತು ಮಹೇಶ್‌ ಹೆಗಡೆಯವರೇ I Support Pratap Simha ಪೇಜ್‌ ಹಿಂದೆ ಇರುವರೇ?
  2. I Support Pratap Simha ಪುಟವನ್ನು ಸೃಷ್ಟಿಸಿ, ಸಂಸದರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ?
  3. ತಮ್ಮ ವಿಡಿಯೋದಲ್ಲಿ ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ ಪುಟಗಳ ವಿರುದ್ಧ ದೂರು ನೀಡಿರುವುದಾಗಿ ಹೇಳಿದ್ದಾರೆ. ದೂರು ದಾಖಲೆಯನ್ನು ಬಹಿರಂಗಗೊಳಿಸಿದರೆ, ಇಂಥ ದುಷ್ಕೃತ್ಯಗಳನ್ನು ನಡೆಸುವವರನ್ನು ಮಟ್ಟಹಾಕಲು ಸಹಾಯವಾಗುತ್ತದೆ.
  4. ಮೂರು ವರ್ಷಗಳಿಂದ ಈ ಪುಟಗಳು ಸಕ್ರಿಯವಾಗಿದ್ದು, ಸಂಸದರು ಇವುಗಳನ್ನು ಗಂಭೀರವಾಗಿ ಏಕೆ ಪರಿಗಣಿಸಲಿಲ್ಲ?
  5. ಸಂಸದರು ಪ್ರತಿನಿಧಿಸುವ ಪಕ್ಷದ ಚಿಹ್ನೆ, ಸಂಸದರ ಭಾವಚಿತ್ರವನ್ನು ಬಳಸಲಾಗುತ್ತಿದ್ದು, ಬಿಜೆಪಿ ಕೂಡ ಇದರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ?

ತಡೆಗೆ ಇನ್ನೊಂದು ದಾರಿ ಇದೆ

ಸಂಸದ ಪ್ರತಾಪ್‌ ಸಿಂಹ ಅವರು ತಮ್ಮ ವಿಡಿಯೋದಲ್ಲಿ ಈ ಹಿಂದೆ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಪ್ರಕಟಿಸಿದ ಫೇಸ್‌ಬುಕ್‌ ಪುಟಗಳ ವಿರುದ್ಧ ದೂರು ನೀಡಿದ್ದಾಗಿ ಹೇಳಿದ್ದಾರೆ. ಆದರೂ ಅವರ ಹೆಸರಿನಲ್ಲಿ ಫೇಸ್‌ಬುಕ್‌ ಪುಟಗಳು ಚಾಲ್ತಿಯಲ್ಲಿವೆ. ಹಾಗಾಗಿ, ಸೈಬರ್ ಸೆಲ್‌ಗೆ ದೂರು ನೀಡುವ ಜೊತೆಗೇ ಫೇಸ್‌ಬುಕ್‌ಗೂ ದೂುರು ನೀಡಿ, ಕ್ರಮಕ್ಕೆ ಒತ್ತಾಯಿಸಬಹುದು. ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಪೇಜ್‌ ಸೃಷ್ಟಿಸಿದಾಗ, ಅದರ ವಿರುದ್ಧ ದೂರು ನೀಡಲಾಗಿತ್ತು. ಆಗ ಫೇಸ್‌ಬುಕ್‌ ಕ್ರಮ ಕೈಗೊಂಡು, ಆ ಪುಟವನ್ನು ನಿಷೇಧಿಸಿತ್ತು. ಪ್ರತಾಪ್ ಸಿಂಹ ಅವರೂ ತಮ್ಮ ಹೆಸರಿನ ಪುಟಗಳಿಗೆ ಭೇಟಿ ಕೊಟ್ಟು, ಅಲ್ಲಿರುವ `Report Page’ ಎಂಬಲ್ಲಿ ಕ್ಲಿಕ್ ಮಾಡಿ, ಅಲ್ಲಿ ಕೇಳುವ ಆಯ್ಕೆಗಳಲ್ಲಿ ಒಂದರ ಮೇಲೆ ಕ್ಲಿಕ್ ಮಾಡಿದರೆ ಫೇಸ್‌ಬುಕ್‌ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಜನಪ್ರಿಯ ವ್ಯಕ್ತಿಗಳ ಹೆಸರನ್ನು ದುರ್ಬಳಕೆ ಮಾಡುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ತಮ್ಮ ಹೆಸರನ್ನು ಈ ರೀತಿ ದುರ್ಬಳಕೆ ಮಾಡುತ್ತಿರುವವರನ್ನು ನಿಯಂತ್ರಿಸಲು ಪ್ರತಾಪ ಸಿಂಹ ಅವರು ಕಟು ನಿಲುವು ತಾಳಲೇಬೇಕಾದ ಸಂದರ್ಭ ಈಗ ಎದುರಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More