ವಿದ್ಯಾರ್ಥಿಗಳಲ್ಲಿ ಕೋಮುದ್ವೇಷದ ಬೀಜ ಬಿತ್ತುವ ಮತೀಯ ರಾಜಕಾರಣ

ಇನ್ನೂ ಪರಿಪಕ್ವವಾಗಬೇಕಾದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಮತೀಯ ಶಕ್ತಿಗಳು ಯಾವೆಲ್ಲ ರೀತಿಯಲ್ಲಿ ಪ್ರಭಾವ ಬೀರುತ್ತಿವೆ ಎಂಬುದಕ್ಕೆ ಸಾಕ್ಷಿ ಉತ್ತರ ಕನ್ನಡ ಜಿಲ್ಲೆ. ಅಲ್ಲಿನ ವಿದ್ಯಾರ್ಥಿಗಳನ್ನು ಮತೀಯವಾದ ಆವರಿಸಿಕೊಳ್ಳುತ್ತಿರುವುದಕ್ಕೆ ಪುರಾವೆಯಂತಿವೆ ಈ ಎರಡು ನಿದರ್ಶನಗಳು

ಮುಂಜಾನೆ ೬.೩೦ರ ಸಮಯ, ಮುಂದೆ ಯಾರಿದ್ದಾರೆ ಎಂದೂ ಕಾಣದಷ್ಟು ದಟ್ಟ ಮಂಜಿನ ನಡುವೆ ಸಿದ್ದಾಪುರ ಮಸುಕುಮಸುಕಾಗಿ ಗೋಚರಿಸುತ್ತಿತ್ತು. ಆದರೆ, ನಗರದ ಅಂತರಾಳದಲ್ಲಿ ಕೋಮು ದಳ್ಳುರಿ ಬೂದಿ ಮುಚ್ಚಿದ ಕೆಂಡದಂತೆ ಉಸಿರಾಡುತ್ತಿತ್ತು. ಬೆಳಗ್ಗೆ ೧೦ ಗಂಟೆ ಸುಮಾರಿಗೆ ಮಂಜಿನ ಹನಿಗಳಿಂದ ತೊಯ್ದಿದ್ದ ಊರಿಗೆ ಬಿಸಿಲು ಆಸರೆಯಾಗಿತ್ತು. ಉತ್ತರ ಕನ್ನಡದಲ್ಲಿ ವಸ್ತುಸ್ಥಿತಿಯನ್ನು ತಿಳಿಯಲು 'ದಿ ಸ್ಟೇಟ್‌’ ಉತ್ತರ ಕನ್ನಡಕ್ಕೆ ಭೇಟಿ ನೀಡಿದ ಸಮಯವದು. ಸಿದ್ದಾಪುರದಿಂದ ಆರಂಭವಾದ ಜರ್ನಿಯಲ್ಲಿ ಮೊದಲು ಸಿಕ್ಕಿದ್ದು ಯಾಕೂಬ್‌ (ಹೆಸರನ್ನು ಬದಲಿಸಲಾಗಿದೆ). ಯಾಕೂಬ್‌ ಜೊತೆ ಮಾತನಾಡಿದಾಗ ಕೋಮುದ್ವೇಷದ ವಿಷ ಹೇಗೆಲ್ಲ ವ್ಯಾಪಿಸಿದೆ ಎನ್ನುವುದು ಅರಿವಾಯಿತು. ಶಾಲಾ ಕಾಲೇಜುಗಳನ್ನೂ ಬಿಡದೆ ಈ ಈ ವಿಷದ ನಂಜು ಪಸರಿಸುತ್ತಿರುವುದು ಸ್ಪಷ್ಟಗೊಂಡಿತು. ಹೇಗೆ ವಿವಿಧ ಮತೀಯ ಸಂಘಟನೆಗಳು ವಿದ್ಯಾರ್ಥಿಗಳ ಮೇಲೆ ಕೋಮುದ್ವೇಷದ ಪ್ರಭಾವವನ್ನು ಬೀರುತ್ತಿವೆ ಎಂಬ ಸತ್ಯ ಅನಾವರಣಗೊಂಡಿತು.

ಮಾತುಕತೆಯ ವೇಳೆ ತನ್ನ ಮೊಬೈಲ್ ತೆಗೆದ ಯಾಕೂಬ್, “ನೋಡಿ ಸರ್‌, ನಾನು ಮತ್ತು ಅಜಿತ್‌ (ಹೆಸರು ಬದಲಾಯಿಸಲಾಗಿದೆ) ಇಬ್ಬರೂ ಐದು ವರ್ಷದ ಸ್ನೇಹಿತರು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತೇವೆ. ಆದರೆ ಹೊನ್ನಾವರದಲ್ಲಿ ಗಲಾಟೆಯಾದ ನಂತರ ನನ್ನ ಮೇಲೆ ಕಿಡಿಕಾರುತ್ತಿದ್ದಾನೆ,” ಎಂದು ತನ್ನ ಸ್ನೇಹಿತ ಕಳಿಸಿದ್ದ ಕೆಲವು ಸಂದೇಶಗಳನ್ನು ತೋರಿಸತೊಡಗಿದ. ಆ ಸಂದೇಶಗಳಲ್ಲಿ ಮತೀಯ ಆಕ್ರೋಶ ಮಡುಗಟ್ಟಿತ್ತು. "ರಂಜಾನ್‌ ಹಬ್ಬಕ್ಕೆ ಮನೆಗೆ ಬಂದು ಸ್ವೀಟ್‌ ತಿಂದು ಹೋಗ್ತಿದ್ದ ಅಜಿತ್‌ ಇವನೇನಾ ಅನಿಸಿಬಿಡುವ ಮಟ್ಟಿಗೆ ಬದಲಾಗಿಬಿಟ್ಟಿದ್ದಾನೆ ಸರ್. ಮಾತು ಮಾತಿನ ನಡುವೆ ಪಾಕಿಸ್ತಾನಕ್ಕೆ ಹೋಗು ಅನ್ನುತ್ತಾನೆ. ಬಾಬ್ರಿ ಮಸೀದಿ ಧ್ವಂಸವಾದ ದಿನವನ್ನು ಕರಾಳ ದಿನ ಅನ್ನಬಾರದು ಅನ್ನುತ್ತಾನೆ. ನಿಮ್ಮನ್ನ (ಮುಸಲ್ಮಾನ ಸಮುದಾಯ) ನಂಬಿದ್ದಕ್ಕೆ ಪರೇಶ್‌ ಮೇಸ್ತಾನ ಹೇಗೆ ಕೊಂದ್ರಿ ನೋಡಿ, ನಿಮ್ಮನ್ನೆಲ್ಲ ಓಡಿಸಬೇಕು ಅಂತಾನೆ," ಎನ್ನುತ್ತ ಮೊಬೈಲ್ ನೋಡುತ್ತ ಪೆಚ್ಚಾದ.

ಹೊನ್ನಾವರದ ಘಟನೆ ನಡೆಯುವುದಕ್ಕೂ ಮೊದಲು ತನ್ನ ಹಾಗೂ ತನ್ನ ಸ್ನೇಹಿತನ ನಡುವೆ ವಿನಿಮಯವಾಗಿದ್ದ ಕೆಲ ಸಂದೇಶಗಳನ್ನು, ಸಂಭಾಷಣೆಗಳನ್ನು ಈ ವೇಳೆ ಯಾಕೂಬ್‌ ತೋರಿಸಿದ. ಅದರಲ್ಲಿ, ‘ಮಗಾ’, ‘ದೋಸ್ತಾ' ಎಂಬ ಪದಗಳ ಬಳಕೆ ಇತ್ತು. ಆದರೆ ಘಟನೆಯ ನಂತರದ ಸಂದೇಶಗಳಲ್ಲಿ ಆ ಆತ್ಮೀಯತೆ ಮಾಯವಾಗಿತ್ತು. ಅಜಿತ್ ಪಾಲಿಗೆ ಯಾಕೂಬ್‌ ಒಬ್ಬ ಸ್ನೇಹಿತನಾಗಿ ಕಾಣದೆ, ಕೇವಲ ಮುಸಲ್ಮಾನನಾಗಿ ಕಂಡಿದ್ದ.

ಹೊನ್ನಾವರದ ಪರೇಶ್‌ ಮೇಸ್ತಾ ಅನುಮಾನಾಸ್ಪದ ಸಾವು ಮತ್ತು ಅದರ ಸುತ್ತ ಹೆಣೆದುಕೊಂಡಿರುವ ಊಹಾಪೋಹಗಳ ಹಿನ್ನೆಲೆಯಲ್ಲಿ ಕೆಲ ಶಕ್ತಿಗಳು ಕರಾವಳಿ ಹಾಗೂ ಸುತ್ತಲಿನ ಪ್ರಾಂತ್ಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸುತ್ತಿವೆ. ಕೋಮು ಸಾಮರಸ್ಯವನ್ನು ಕದಡಲು ಇಲ್ಲಸಲ್ಲದ ವಿಷಯಗಳನ್ನು ಯುವಪೀಳಿಗೆಯ ತಲೆಯಲ್ಲಿ ತುಂಬುತ್ತಿವೆ. ಎರಡು ಕೋಮುಗಳ ನಡುವಿನ ಸ್ನೇಹವನ್ನು ದುಬಾರಿ ಆಗಿಸಲಾಗುತ್ತಿದೆ. ಯಾಕೂಬ್ ಮತ್ತವನ ಸ್ನೇಹಿತನ ಗೆಳೆತನ ಇದಕ್ಕೊಂದು ಉದಾಹರಣೆ.

ಸಿದ್ದಾಪುರದ ಹೊಸೂರು ವೃತ್ತ

ಪ್ರತಿಭಟನೆಗೆ ಬರಲಿಲ್ಲವೆಂದು ರ‍್ಯಾಗಿಂಗ್

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಪರೇಶ್‌ ಮೇಸ್ತಾ ಅನುಮಾನಾಸ್ಪದ ಸಾವನ್ನು ಖಂಡಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ಪ್ರತಿಷ್ಠಿತ ಕಾಲೇಜೊಂದರ ಎಲ್ಲ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಹಾಜರಾಗಬೇಕು ಎಂಬ ಫರ್ಮಾನನ್ನು ಅಲ್ಲಿನ ಸಂಘಟನೆಯೊಂದು ಹೊರಡಿಸಿತ್ತು. ಆದರೆ ಒಬ್ಬ ಹುಡುಗ ಮಾತ್ರ ಪ್ರತಿಭಟನೆಗೆ ಹಾಜರಾಗಿರಲಿಲ್ಲ. ಆತನ ಯೋಚನೆಗಳು ಮತ್ತು ಹಿಂದುತ್ವದ ಯೋಚನೆಗಳು ಬೇರೆ ಬೇರೆಯಾದ ಹಿನ್ನೆಲೆಯಲ್ಲಿ ಆತ ದೂರ ಉಳಿದಿದ್ದ. ಪ್ರತಿಭಟಿಸುವುದು ಹೇಗೆ ಎಲ್ಲರ ಹಕ್ಕಾಗಿದೆಯೋ, ಪ್ರತಿಭಟಿಸದಿರುವುದೂ ಸಾಂವಿಧಾನಿಕ ಹಕ್ಕೇ ಆಗಿದೆ. ಪ್ರತಿಭಟನೆಯಾದ ಮರುದಿನವೇ ಆ ಯುವಕನ ಫೇಸ್‌ಬುಕ್‌ ಖಾತೆಯಲ್ಲಿ 'ನಾನೊಬ್ಬ ಹಿಂದೂ' ಎಂಬ ಸ್ಟೇಟಸ್‌ ಕಾಣತೊಡಗಿತು. ಹುಡುಗನ ಹತ್ತಿರದ ಸಂಬಂಧಿಯೊಬ್ಬರು, ಏಕೆ ಹೀಗೆ ಒಮ್ಮಿಂದೊಮ್ಮೆಲೇ ಈತ ಸ್ಟೇಟಸ್ ಬದಲಾಯಿಸಿದ್ದಾನೆ ಎಂದು ಕರೆ ಮಾಡಿದಾಗ ಸತ್ಯ ಹೊರಬಿತ್ತು.

"ಯಾಕೆ ಹಾಗೆ ಸ್ಟೇಟಸ್‌ ಹಾಕಿದೀಯ ಎಂದು ನಾನು ಕರೆ ಮಾಡಿ ಕೇಳಿದೆ. ಆಗ ಅವನು ಹಾಸ್ಟೆಲ್‌ನಲ್ಲಿ ನಡೆದ ವೃತ್ತಾಂತವನ್ನು ವಿವರಿಸಿದ. ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಕಾರಣಕ್ಕೆ ಅವನಿಗೆ ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್ ಮಾಡಿದ್ದರು. ಅದರ ಪರಿಣಾಮ ಆತ ಅನಿವಾರ್ಯವಾಗಿ ಹಾಗೆ ಬರೆದುಕೊಂಡಿರುವುದಾಗಿ ತಿಳಿಸಿದ,” ಎನ್ನುತ್ತಾರೆ. ಮುಂದುವರಿದು, "ಮತೀಯ ಶಕ್ತಿಗಳು ಹೇಳಿದಂತೆ ನಡೆದುಕೊಳ್ಳದಿದ್ದರೆ ದೇಶದ್ರೋಹಿ ಎಂಬಂತೆ ವಿದ್ಯಾರ್ಥಿಗಳನ್ನು ಕಾಣಲಾಗುತ್ತಿದೆ. ತಮ್ಮ ಸಿದ್ಧಾಂತಗಳನ್ನು ಮಕ್ಕಳ ಮೇಲೆ ಹೇರುವ ಇಂಥ ವರ್ತನೆ ಖಂಡನೀಯ," ಎನ್ನುತ್ತಾರೆ ಸಿದ್ದಾಪುರದ ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕರು.

ಇದನ್ನೂ ಓದಿ : ಕದಡಿದ ಕರಾವಳಿ | ನೆಮ್ಮದಿ ಕೊಟ್ಟವನ ಬದುಕಿಗೇ ಕೊಳ್ಳಿ ಇಟ್ಟಿತಾ ಕೋಮುದ್ವೇಷ?

ಕೇಳುವ ಧ್ವನಿಗಳೇ ಇಲ್ಲ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲಿನಿಂದಲೂ ವ್ಯವಸ್ಥಿತವಾಗಿ ಮತೀಯವಾದವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಲೇಜು ಮಟ್ಟದಲ್ಲಿ ಮತೀಯ ಚಿಂತನೆಗಳನ್ನು ಹಬ್ಬಿಸುವ ಸಂಘಟನೆಗಳು ಕಾರ್ಯಪ್ರವೃತ್ತವಾಗಿವೆ. ಅದನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ಪರ್ಯಾಯ ಶಕ್ತಿಗಳೇ ಇಲ್ಲದಂತಾಗಿದೆ. ಮೂಲಗಳ ಪ್ರಕಾರ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳೂ ಮತೀಯ ಧ್ರುವೀಕರಣದಿಂದ ಹೊರತಾಗಿಲ್ಲ.

"ಬೇರೆ ಜಿಲ್ಲೆಗಳಲ್ಲಿ ಎಸ್‌ಎಫ್‌ಐ (ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ), ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌), ಎನ್‌ಎಸ್‌ಯುಐ (ನ್ಯಾಷನಲ್‌ ಸ್ಟೂಡೆಂಟ್‌ ಯೂನಿಯನ್‌ ಆಫ್‌ ಇಂಡಿಯಾ), ಎಐಎಸ್‌ಎ (ಆಲ್‌ ಇಂಡಿಯಾ ಸ್ಟೂಡೆಂಟ್‌ ಅಸೋಸಿಯೇಷನ್‌), ಎಸ್‌ಐಒಐ (ಸ್ಟೂಡೆಂಟ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ ಆಫ್‌ ಇಂಡಿಯಾ) ಮತ್ತಿತರ ಸಂಘಟನೆಗಳು ಕಾಲೇಜು ಮಟ್ಟದಲ್ಲಿ ಇರುತ್ತವೆ. ಆದರೆ ಉತ್ತರ ಕನ್ನಡದ ಬಹುತೇಕ ಕಾಲೇಜುಗಳಲ್ಲಿ ಕೇವಲ ಹಿಂದೂ ರಾಷ್ಟ್ರೀಯವಾದದ ಚಿಂತನೆಗಳನ್ನೇ ಬಲವಾಗಿ ಪ್ರತಿಪಾದಿಸುವ ವಿದ್ಯಾರ್ಥಿ ಸಂಘಟನೆಯದ್ದೇ ಪಾರುಪತ್ಯ. ಅದನ್ನು ಹೊರತುಪಡಿಸಿ ಮತ್ತೊಂದು ವಿದ್ಯಾರ್ಥಿ ಸಂಘಟನೆ ಇಲ್ಲ. ಎರಡನೇ ಧ್ವನಿಯೇ ಇಲ್ಲದಿದ್ದಾಗ ಏಕಮುಖ ಅಭಿಪ್ರಾಯಗಳಿಗೆ ಮಾತ್ರ ಜಾಗವಿರುತ್ತದೆ. ಇದೇ ಉತ್ತರ ಕನ್ನಡದಲ್ಲಿಯೂ ಆಗುತ್ತಿದೆ," ಎನ್ನುತ್ತಾರೆ, ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಈ ಭಾಗದ ಹಿರಿಯ ಲೇಖಕರೊಬ್ಬರು.

ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಭಾರತದ ಸಂವಿಧಾನ ಮತ್ತು ಬಹುತ್ವದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಬಹುಮುಖ್ಯವಾಗಿದೆ. ಆದರೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕೇಂದ್ರಗಳಲ್ಲಿಯೇ ಕೋಮುದ್ವೇಷದ ಬೀಜ ಬಿತ್ತುವಂತಾದರೆ ಅದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More