ಜಿಡಿಪಿಯ ಅಂಕಿ-ಅಂಶ ಸುಳ್ಳು; ರಹಸ್ಯ ಬಿಚ್ಚಿಟ್ಟ ಸುಬ್ರಮಣಿಯನ್ ಸ್ವಾಮಿ

ಅಪನಗದೀಕರಣದಿಂದ ಜಿಡಿಪಿ ಮೇಲೆ ಪರಿಣಾಮ ಆಗಿಲ್ಲ ಎಂದು ಕೇಂದ್ರೀಯ ಸಾಂಖ್ಯಿಕ ಸಂಘಟನೆ ಸಮರ್ಥಿಸಿಕೊಂಡಿತ್ತು. ಅಚ್ಚರಿಗೆ ಕಾರಣವಾಗಿದ್ದ ಆ ಅಂಕಿ-ಅಂಶಗಳು ಪ್ರಕಟವಾಗಲು ಕೇಂದ್ರ ಸರ್ಕಾರದ ಒತ್ತಡವೇ ಕಾರಣ ಎಂಬುದನ್ನು ಸ್ವತಃ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬಹಿರಂಗಪಡಿಸಿದ್ದಾರೆ

ಅಪನಗದೀಕರಣ ಜಾರಿಯಿಂದ ದೇಶದ ಆರ್ಥಿಕತೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲವೆಂಬ ಭಾವನೆ ಬರುವಂತೆ ಜಿಡಿಪಿ ಅಂಕಿ-ಅಂಶಗಳನ್ನು ಪ್ರಕಟಿಸುವಂತೆ ಕೇಂದ್ರೀಯ ಸಾಂಖ್ಯಿಕ ಸಂಘಟನೆ (ಸಿಎಸ್ಒ) ಮೇಲೆ ನರೇಂದ್ರ ಮೋದಿ ಸರ್ಕಾರ ಒತ್ತಡ ಹೇರಿತ್ತು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬಹಿರಂಗಪಡಿಸಿದ್ದಾರೆ.

ಅಹಮದಾಬಾದ್ ನಗರದಲ್ಲಿ ಲೆಕ್ಕಪರಿಶೋಧಕರ ಸಮಾವೇಶದಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, “ದಯವಿಟ್ಟು ತ್ರೈಮಾಸಿಕ ಅಂಕಿ-ಅಂಶಗಳನ್ನು ನಂಬಬೇಡಿ, ಅದೆಲ್ಲವೂ ಬೋಗಸ್. ನಾನು ನಿಮಗೆ ಹೇಳ್ತಾ ಇದೀನಿ. ಯಾಕೆಂದರೆ, ಕೇಂದ್ರೀಯ ಸಾಂಖ್ಯಿಕ ಸಂಘಟನೆಯನ್ನು ಸ್ಥಾಪಿಸಿದ್ದೇ ನಮ್ಮ ತಂದೆ,” ಎಂದು ಹೇಳಿದ್ದಾಗಿ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.

“ಇತ್ತೀಚೆಗೆ ಸಿಎಸ್ಒಗೆ ಕೇಂದ್ರ ಸಚಿವ ಸದಾನಂದಗೌಡ ಅವರೊಂದಿಗೆ ಹೋಗಿದ್ದೆ, ಅವರು ಸಿಎಸ್ಒ ಅಧಿಕಾರಿಯನ್ನು ಕರೆದಿದ್ದರು. ಅಪನಗದೀಕರಣದಿಂದ ಆರ್ಥಿಕತೆಗೆ ಹಿನ್ನಡೆಯಾಗಿಲ್ಲವೆಂಬಂತೆ ಅಂಕಿ-ಅಂಶ ನೀಡಲು ಒತ್ತಡ ಹೇರಲಾಗಿತ್ತು. ಹೀಗಾಗಿ ಅಪನಗದೀಕರಣದಿಂದ ಆರ್ಥಿಕತೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ ಎಂಬಂತೆ ಕೇಂದ್ರ ಸರ್ಕಾರಕ್ಕೆ ಪೂರಕವಾದ ಅಂಕಿ-ಅಂಶಗಳನ್ನು ಸಿಎಸ್ಒ ಪ್ರಕಟಿಸಿದೆ,” ಎಂದು ಸ್ವಾಮಿ ಹೇಳಿದ್ದಾರೆ.

“ನನಗೆ ಆತಂಕವಾಗಿದೆ. ಏಕೆಂದರೆ, ನನಗೆ ಗೊತ್ತು, ಅಪನಗದೀಕರಣದಿಂದ ವ್ಯತಿರಿಕ್ತ ಪರಿಣಾಮವಾಗಿದೆ ಎಂಬುದು. ನಾನು ಸಿಎಎಸ್ಒ ನಿರ್ದೇಶಕರನ್ನು ಕೇಳಿದೆ, ಅಪನಗದೀಕರಣ ಜಾರಿ ಮಾಡಿದ್ದು 2016ರ ನವೆಂಬರ್ ನಲ್ಲಿ, ನೀವು ಆರ್ಥಿಕ ಸಮೀಕ್ಷೆಯ ಮುದ್ರಿತ ವರದಿಯನ್ನು 2017ರ ಫೆ.1ರಂದು ನೀಡಿದ್ದೀರಿ. ಅದರರ್ಥ, ಮೂರು ವಾರ ಮುಂಚಿತವಾಗಿಯೇ ವರದಿ ಮುದ್ರಣಕ್ಕೆ ಹೋಗಿರುತ್ತದೆ. ನೀವು 2017ರ ಜನವರಿ ಮೊದಲ ವಾರವೇ ವರದಿ ಸಲ್ಲಿಸಿ, ಜಿಡಿಪಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆಂದು ಲೆಕ್ಕಾಚಾರ ಹಾಕುತ್ತೀರಿ, ಅದು ಹೇಗೆ ಲೆಕ್ಕಹಾಕಿದ್ದೀರಿ ಎಂದು ಪ್ರಶ್ನಿಸಿದೆ. ಆಗ ನಿರ್ದೇಶಕರು, ಕಳೆದ ವರ್ಷದ ಸಂಘಟಿತ ವಲಯದ ಸಾಧನೆಯ ಅಂಕಿ-ಅಂಶಗಳನ್ನು ಅಸಂಘಟಿತ ವಲಯದ ಕಳೆದ ಅಂಕಿ-ಅಂಶಗಳೆಂದು ತೋರಿಸಲಾಯಿತು ಎಂದರು. ಎರಡರ ಅಂಕಿ-ಅಂಶಗಳ ಸಂಬಂಧ ಬದಲಾಗಿಯತಲ್ಲ ಎಂದು ನಾನು ಪ್ರಶ್ನಿಸಿದೆ. ‘ನಾನು ಏನು ತಾನೆ ಮಾಡಲಿ, ಪೂರಕ ಅಂಕಿ-ಅಂಶ ಕೊಡುವಂತೆ ನನ್ನ ಮೇಲೆ ಒತ್ತಡ ಇತ್ತು, ಹಾಗಾಗಿ ನಾನು ಕೊಟ್ಟಿ ಅಷ್ಟೆ’ ಎಂದು ಅವರು ಹೇಳಿದರು. ಆದ್ದರಿಂದ ಯಾವಾಗಲೂ ತ್ರೈಮಾಸಿಕ ಅಂಕಿ-ಅಂಶಗಳನ್ನು ನಂಬಬೇಡಿ, ಕೇವಲ ವಾರ್ಷಿಕ ಅಂಕಿ-ಅಂಶಗಳ ಮೇಲೆ ವಿಶ್ವಾಸ ಇಡಿ,” ಎಂದು ಸುಬ್ರಮಣಿಯನ್ ಸ್ವಾಮಿ ಸಭಿಕರಿಗೆ ತಿಳಿಸಿದರು.

ಇದನ್ನೂ ಓದಿ : ರೇಟಿಂಗ್ ರಗಳೆ, ಪ್ರಧಾನಿ ಮೋದಿ ಸರ್ಕಾರಕ್ಕೆ ಈಗ ಫಿಚ್ ಏಜೆನ್ಸಿ ಇಚ್!

“ಮೂಡಿ, ಫಿಟ್ಚ್ ಇವುಗಳ್ಯಾವನ್ನೂ ನಂಬಬೇಡಿ. ನೀವು ಹಣ ಕೊಟ್ಟರೆ ಎಂತಹ ವರದಿಯನ್ನಾದರೂ ಅವರು ಪ್ರಕಟಿಸುತ್ತಾರೆ. ನಾವು ಈ ಏಜೆನ್ಸಿಗಳನ್ನು ನಂಬಬೇಕಿಲ್ಲ. ನಮಗೆ ನಮ್ಮದೇ ಸಿಎಸ್ಒ ಇದೆ, ಅದನ್ನೇ ನಂಬಿ. ಆದರೆ, ಅವರು ಮಾಡಬಾರದನ್ನ ಮಾಡುವಂತೆ ಒತ್ತಡ ಹೇರಬೇಡಿ,” ಎಂದೂ ಸ್ವಾಮಿ ಕಿವಿಮಾತು ಹೇಳಿದ್ದಾರೆ.

ಕಳೆದ ತ್ರೈಮಾಸಿಕದಲ್ಲಿ ಶೇ.5.7ರಷ್ಟಿದ್ದ ಜಿಡಿಪಿ ಶೇ.6.3ಕ್ಕೆ ಜಿಗಿದಿದ್ದರ ಬಗ್ಗೆ ಎದ್ದ ಅನುಮಾನಗಳನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಳ್ಳಿಹಾಕಿದ ನಂತರ ಸುಬ್ರಮಣಿಯನ್ ಸ್ವಾಮಿ ಅವರು ಸರ್ಕಾರ ಸಿಎಸ್ಒ ಮೇಲೆ ಒತ್ತಡ ಹೇರಿದ್ದ ವಿಷಯ ಬಹಿರಂಗ ಮಾಡಿದ್ದಾರೆ. ತಿಂಗಳ ಹಿಂದಷ್ಟೆ ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಭಾರತದ ಸಾವರಿನ್ ರೇಟಿಂಗ್ ಅನ್ನು ಮೇಲ್ದರ್ಜೆಗೇರಿಸಿತ್ತು. ಆದರೆ, ಮತ್ತೊಂದು ರೇಟಿಂಗ್ ಏಜೆನ್ಸಿ ಫಿಟ್ಚ್ ಭಾರತದ ಜಿಡಿಪಿ ಅಂದಾಜನ್ನು ಶೇ.6.7ಕ್ಕೆ ತಗ್ಗಿಸಿ, ಭಾರತದ ಆರ್ಥಿಕ ಅಭಿವೃದ್ಧಿ ನಿರೀಕ್ಷಿಸಿದ್ದಕ್ಕಿಂತ ದುರ್ಬಲವಾಗಿದೆ ಎಂದು ಹೇಳಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More