8,281 ಸರ್ಕಾರಿ ಕಚೇರಿಗಳು ‘ಸಕಾಲ’ದ ಒಂದು ಅರ್ಜಿಯನ್ನೂ ಸ್ವೀಕರಿಸಿಲ್ಲ!

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳ ಪೈಕಿ ‘ಸಕಾಲ’ ಅತ್ಯುತ್ತಮ ಯೋಜನೆ. ಆದರೆ ಅಧಿಕಾರಿಗಳ ಅವಕೃಪೆ ಈ ಯೋಜನೆ ಮೇಲೆ ಬಿದ್ದಿದೆ. ಸಾರ್ವಜನಿಕರಿಗೆ ನೇರವಾಗಿ ಸಿಗುತ್ತಿದ್ದ ಸರ್ಕಾರಿ ಸೇವೆಗಳು ಲಭಿಸದಂತಾಗಿದೆ. ಸಮೀಕ್ಷೆಯಲ್ಲಿ ಈ ನ್ಯೂನತೆಗಳು ಪತ್ತೆಯಾಗಿವೆ

ಭ್ರಷ್ಟಾಚಾರ ನಿಯಂತ್ರಣ ಮತ್ತು ಸರ್ಕಾರಿ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಯಾವುದೇ ವಿಳಂಬವಿಲ್ಲದೆ ಜನರಿಗೆ ಒದಗಿಸುವ ಮಹತ್ತರ ಉದ್ದೇಶದಿಂದ ‘ಸಕಾಲ’ ಯೋಜನೆಯಡಿಯಲ್ಲಿ 2012ರ ನಂತರ 8 ಸಾವಿರಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಲ್ಲಿ ಒಂದೇ ಒಂದು ಅರ್ಜಿಯೂ ಸ್ವೀಕೃತವಾಗಿಲ್ಲ. ಅಲ್ಲದೆ, ಲಕ್ಷಾಂತರ ಪ್ರಕರಣಗಳಲ್ಲಿ ಸೇವೆಗಳನ್ನು ವಿಳಂಬವಾಗಿ ನೀಡಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಒಂದೇ ಒಂದು ಕ್ರಮವನ್ನೂ ಜರುಗಿಸಿಲ್ಲ.

ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆ ಮೂಲಕ ಜಾರಿಗೊಂಡಿದ್ದ ಈ ಯೋಜನೆ ಹೇಗೆ ಅನುಷ್ಠಾನಗೊಳ್ಳುತ್ತಿದೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ. ರೈತಾಪಿ ವರ್ಗ ಸೇರಿದಂತೆ ಎಲ್ಲ ವರ್ಗದ ಜನರಿಗೆ ಅತ್ಯುಪಯುಕ್ತವಾಗಿರುವ ಈ ಯೋಜನೆಗೆ ಖುದ್ದು ಅಧಿಕಾರಿಶಾಹಿಯೇ ಮುಂದೆ ನಿಂತು ಸಮಾಧಿ ತೋಡುತ್ತಿದೆ. ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ನಡೆಸಿರುವ ಸಮೀಕ್ಷೆಯಿಂದ ಯೋಜನೆಯ ಹಲವು ನ್ಯೂನತೆಗಳು ಬಯಲಾಗಿವೆ.

ಸಕಾಲ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಸಕಾಲ ಕಾಯ್ದೆ ವ್ಯಾಪ್ತಿಗೆ ತರಲಾಗಿರುವ ಸರ್ಕಾರಿ ಸೇವೆಗಳ ವಿಲೇವಾರಿ ಹಾಗೂ ಅಧಿಕಾರಿಗಳಿಂದಾಗುತ್ತಿರುವ ನಿಧಾನದ್ರೋಹ ಸೇರಿದಂತೆ ಹಲವು ನ್ಯೂನತೆಗಳನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ನಡೆಸಿದ ಸಮೀಕ್ಷೆ ಹೊರಗೆಡವಿದೆ. ಯೋಜನೆ ಅನುಷ್ಠಾನದ ಪ್ರಗತಿ ಕುರಿತು ಸಮೀಕ್ಷೆ ನಡೆಸಿದ್ದ ಅವರು, ಅಧಿಕಾರಿಗಳ ಕಾರ್ಯವೈಖರಿ ಕುರಿತು ಅತೃಪ್ತಿ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯೋಜನೆ ಜಾರಿಯಾಗಿದ್ದ 2012ರ ನಂತರ 8,281 ಸರ್ಕಾರಿ ಕಚೇರಿಗಳಲ್ಲಿ ಒಂದೇ ಒಂದು ಅರ್ಜಿಯನ್ನೂ ಸ್ವೀಕರಿಸದ ಅಧಿಕಾರಿಗಳು ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ನವೆಂಬರ್‌ ಅಂತ್ಯಕ್ಕೆ 26 ಇಲಾಖೆಗಳಲ್ಲಿ 32,999 ಅರ್ಜಿ ಇತ್ಯರ್ಥವಾಗದೆ ಬಾಕಿ ಉಳಿದುಕೊಂಡಿವೆ. ಇದರಲ್ಲಿ ಕಂದಾಯ ಇಲಾಖೆಯಲ್ಲಿ 18,080, ಸಾರಿಗೆ ಇಲಾಖೆಯಲ್ಲಿ 3,252, ಅರೋಗ್ಯ ಇಲಾಖೆಯಲ್ಲಿ 3,312, ನಗರಾಭಿವೃದ್ಧಿ ಇಲಾಖೆಯಲ್ಲಿ 2,213 ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅರ್ಜಿಗಳು ಬಾಕಿ ಇರುವುದು ತಿಳಿದುಬಂದಿದೆ.

ಸಕಾಲದಡಿ 60 ಲಕ್ಷ ಪ್ರಕರಣಗಳಲ್ಲಿ ಸೇವೆಗಳನ್ನು ವಿಳಂಬವಾಗಿ ನೀಡಿರುವುದಲ್ಲದೆ, ಸೇವೆಗಳನ್ನು ಒದಗಿಸಬೇಕಾದ ಪ್ರಕರಣಗಳನ್ನೇ ನಿಗದಿತ ಅವಧಿ ಮೀರಿ ಬಾಕಿ ಉಳಿಸಿಕೊಂಡಿದ್ದಾರೆ. ಇಂಥ ಪ್ರಕರಣಗಳಲ್ಲಿ ಕೇವಲ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಯಾವುದೇ ತಪ್ಪಿತಸ್ಥರ ಮೇಲೆ ಒಂದೇ ಒಂದು ಕ್ರಮ ಜರುಗಿಸಿಲ್ಲ. ಕೆಲವು ಪ್ರಕರಣಗಳು 2 ವರ್ಷಗಳಿಗೂ ಮೀರಿ ಬಾಕಿ ಇವೆ. ಈ ಬಗ್ಗೆ ಯಾವುದೇ ಕ್ರಮ ವಹಿಸದ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಲೋಪವನ್ನು ಸಮೀಕ್ಷೆ ಬೆಳಕಿಗೆ ತಂದಿದೆ.

ಕಚೇರಿಗಳಲ್ಲಿ ಸಕಾಲ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕವಾದ ಕೌಂಟರ್‌ಗಳನ್ನು ತೆರೆದಿರುವುದು ಸಾರ್ವಜನಿಕರಿಗೆ ಅನುಕೂಲಕರವಾಗಿಲ್ಲ. ಮೇಲ್ಮನವಿಗಳನ್ನು ಇತ್ಯರ್ಥಪಡಿಸದೆ ಬಾಕಿ ಇಟ್ಟಿರುವುದು, ಸಕಾಲ ಮಾಹಿತಿಯನ್ನು ಪ್ರದರ್ಶಿಸದೆ ಇರುವುದು ಸೇರಿದಂತೆ ವಿವಿಧ ಬಗೆಯ ನ್ಯೂನತೆಗಳನ್ನು ಪತ್ತೆಹಚ್ಚಲಾಗಿದೆ.

ಇದನ್ನೂ ಓದಿ : ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಎಸಿಬಿಗೆ ಕನಿಷ್ಠ ನಿಯಮಾವಳಿ ಬೇಡವೇ?

ರಾಜ್ಯದಲ್ಲಿ ಜಾರಿಗೊಂಡಿರುವ ಸಕಾಲ ಯೋಜನೆಯನ್ನು ದೇಶದ ಹಲವು ರಾಜ್ಯಗಳು ಮಾದರಿಯಾಗಿಸಿಕೊಂಡು ಅನುಷ್ಠಾನಗೊಳಿಸಿವೆ. ಅಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಹಲವು ಪುರಸ್ಕಾರ, ಪ್ರಶಸ್ತಿಗಳು ಸಕಾಲ ಯೋಜನೆಗೆ ಸಂದಿವೆ. ವಿಪರ್ಯಾಸ ಎಂದರೆ, ಈ ಯೋಜನೆಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಕೊನೆಗಾಣಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಸೇರಿದಂತೆ ವಿವಿಧ ಸ್ತರದ ಅಧಿಕಾರಿಗಳೇ ಮುಂದಾಗಿರುವುದು ಆಘಾತಕಾರಿಯಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಇಲ್ಲದೆಯೇ ನಿಗದಿತ ಕಾಲಾವಧಿಯೊಳಗೆ ಸಿಗಬೇಕಿದ್ದ ಸರ್ಕಾರಿ ಸೌಲಭ್ಯಗಳು ಸಾರ್ವಜನಿಕರಿಗೆ ಲಭಿಸದಂತಾಗಿದೆ.

ಸಕಾಲದಲ್ಲೇನಿದೆ?: ಈ ಯೋಜನೆಯಡಿ ಕಂದಾಯ, ಹಣಕಾಸು ಇಲಾಖೆ ಸೇರಿದಂತೆ ಸರ್ಕಾರದ 26 ಮುಖ್ಯ ಇಲಾಖೆಗಳ ಮೂಲಕ ಸರ್ಕಾರಿ ಸೇವೆಗಳನ್ನು ತರಲಾಗಿದೆ. ಜಾತಿ, ಆದಾಯ ಪ್ರಮಾಣಪತ್ರ, ಚಾಲನಾ ಪರವಾನಗಿ, ಜನನ ಮತ್ತು ಮರಣ ಪ್ರಮಾಣಪತ್ರ, ಪಡಿತರ ಚೀಟಿ, ಫಿರ್ಯಾದುದಾರರಿಗೆ ಎಫ್‌ಐಆರ್‌ ಪ್ರತಿ, ರೈತ ಸಂಜೀವಿನಿ, ಹಿರಿಯ ನಾಗರಿಕರಿಗೆ ಗುರುತಿನ ಪತ್ರ, ವಿಕಲಚೇತನ ವ್ಯಕ್ತಿಗಳಿಗೆ ಅಶಕ್ತ ಪ್ರಮಾಣಪತ್ರ, ಗುರುತಿನ ಚೀಟಿ, ಸಾಮಾಜಿಕ ಭದ್ರತಾ ಯೋಜನೆ, ವಾಣಿಜ್ಯ ಪರವಾನಗಿ, ಆಸ್ತಿಯ ಖಾತಾ ನೀಡಿಕೆ, ಕಟ್ಟಡ ನಕ್ಷೆ ಅನುಮೋದನೆ, ಉಚಿತ ಮತ್ತು ರಿಯಾಯಿತಿ ದರದ ಬಸ್ ಪಾಸ್‌ಗಳ ವಿತರಣೆ, ಅಪಘಾತ ಪರಿಹಾರ ನಿಧಿಯಡಿ ಪರಿಹಾರ ವಿತರಣೆ, ನವೀಕರಣ, ಆಹಾರಧಾನ್ಯ, ಬೇಳೆ, ಖಾದ್ಯತೈಲ ಮತ್ತು ಸೀಮೆಎಣ್ಣೆ ಸಗಟು ಮಾರಾಟ ಪರವಾನಗಿ ನೀಡುವ ಸೇವೆಗಳು ಸೇರಿದಂತೆ 600ಕ್ಕೂ ಅಧಿಕ ಸರ್ಕಾರಿ ಸೇವೆಗಳು ಕಾಯ್ದೆಯ ವ್ಯಾಪ್ತಿಯಲ್ಲಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More