ಡಿನೋಟಿಫಿಕೇಶನ್‌ ಪ್ರಕರಣ: ಬಸವರಾಜೇಂದ್ರ ವಿರುದ್ಧ ಸ್ವತಂತ್ರ ವಿಚಾರಣೆ

ಶಿವರಾಮ ಕಾರಂತ ಬಡಾವಣೆ ರಚನೆ ಸಂಬಂಧದ ಡಿನೋಟಿಫಿಕೇಷನ್‌ ಪ್ರಕರಣ ಈಗ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಎಸಿಬಿ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದ ಕೆಎಎಸ್‌ ಅಧಿಕಾರಿ ಬಸವರಾಜೇಂದ್ರ ಪ್ರಕರಣದಲ್ಲಿ ರಾಜ್ಯ ಸರ್ಕಾರ ಇರಿಸಿರುವ ಈ ಹೆಜ್ಜೆ ರಾಜಕಾರಣದಲ್ಲಿ ಸಂಚಲನ ಮೂಡಿಸಲಿದೆ

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಆರೋಪಿಯಾಗಿರುವ ಶಿವರಾಮ ಕಾರಂತ ಬಡಾವಣೆ ಜಮೀನಿನ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಕೆಎಎಸ್‌ ಅಧಿಕಾರಿ ಎಚ್‌ ಬಸವರಾಜೇಂದ್ರ ಅವರ ವಿರುದ್ಧ ಸ್ವತಂತ್ರ ವಿಚಾರಣೆ ನಡೆಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಬಿರುಸಿನ ಚಾಲನೆ ನೀಡಿದೆ. ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಾಗೃತ ಸಲಹಾ ಮಂಡಳಿ ಸಭೆ ಸ್ವತಂತ್ರ ವಿಚಾರಣೆ ನಡೆಸಲು ನಿರ್ಣಯ ಕೈಗೊಂಡಿತ್ತು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಸ್ಟೇಟ್‌’ಗೆ ಖಚಿತಪಡಿಸಿವೆ.

ರಾಜ್ಯಪಾಲರು ಈ ಬಗ್ಗೆ 10 ದಿನದೊಳಗೆ ವರದಿ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವ ಕಾರಣ ತುರ್ತಾಗಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಜಾಗೃತ ವಿಭಾಗವೂ ಒಳಾಡಳಿತ ಇಲಾಖೆಯ ಬೆನ್ನುಬಿದ್ದಿದೆ.

"ಜಾಗೃತ ಸಲಹಾ ಮಂಡಳಿಯಲ್ಲಿ ಕೈಗೊಂಡಿರುವ ತೀರ್ಮಾನದ ಪ್ರಕಾರ, ಸ್ವತಂತ್ರ ವಿಚಾರಣೆ ನಡೆಸಿ ತುರ್ತಾಗಿ ವರದಿ ನೀಡಬೇಕು,” ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಜಾಗೃತ ವಿಭಾಗವು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2017ರ ಡಿ.7ರಂದು ಪತ್ರ ಬರೆದು ಕೋರಿದೆ ಎಂದು ಗೊತ್ತಾಗಿದೆ. ಆದರೆ ಸ್ವತಂತ್ರ ವಿಚಾರಣೆ ನಡೆಸುವ ಸಂಬಂಧ ಒಳಾಡಳಿತ ಇಲಾಖೆಯ ಉನ್ನತ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಎಸಿಬಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದ ಬಸವರಾಜೇಂದ್ರ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ನಗರಾಭಿವೃದ್ಧಿ ಇಲಾಖೆ ಈಗಾಗಲೇ ತನ್ನ ಪ್ರಕ್ರಿಯೆ ಆರಂಭಿಸಿದೆ. ಇದೇ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಹೈಕೋರ್ಟ್‌ನಿಂದ ಪಡೆದಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಅಂಗೀಕರಿಸಿದೆ. ಈ ಬೆಳವಣಿಗೆಗಳ ನಡುವೆಯೇ ಅವರ ವಿರುದ್ಧ ತುರ್ತಾಗಿ ಸ್ವತಂತ್ರ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವುದು ಮತ್ತಷ್ಟು ಸಂಚಲನಗಳನ್ನು ಮೂಡಿಸುವ ಸಾಧ್ಯತೆಗಳಿವೆ.

ಈ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳ ವಿರುದ್ಧ ಬಸವರಾಜೇಂದ್ರ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಇದನ್ನು ಅಂಗೀಕರಿಸಿದ್ದ ರಾಜ್ಯಪಾಲ ವಜುಭಾಯ್‌ ವಾಲಾ ಅವರು 10 ದಿನದಲ್ಲಿ ವರದಿ ಸಲ್ಲಿಸಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ 2017ರ ಆ.22ರಂದು ಪತ್ರ ಬರೆದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2017ರ ಸೆ.18ರಂದು ಜಾಗೃತ ಸಲಹಾ ಮಂಡಳಿ ಸಭೆ ನಡೆದಿತ್ತು.

ಆ ಸಭೆಯಲ್ಲಿ, “ಎಚ್‌ ಬಸವರಾಜೇಂದ್ರ ಅವರ ಹೇಳಿಕೆಗಳನ್ನು ಪಡೆಯುವ ಸಂದರ್ಭದಲ್ಲಿ ಕೇವಲ ಎಸಿಬಿಯ ಇಬ್ಬರು ಡಿವೈಎಸ್ಪಿ, ಒಬ್ಬ ಮುಖ್ಯಪೇದೆ ಮಾತ್ರ ಉಪಸ್ಥಿತರಿದ್ದರು. ಇವರುಗಳ ಪರಸ್ಪರ ವಿರುದ್ಧದ ಹೇಳಿಕೆಗಳು ಪ್ರಶ್ನೆಯಾಗಿರುವುದರಿಂದ ಈ ಪ್ರಕರಣದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸ್ವತಂತ್ರ ವಿಚಾರಣೆ ನಡೆಸುವುದು ಸೂಕ್ತ,” ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಉನ್ನತ ಮೂಲಗಳು ತಿಳಿಸಿವೆ.

"ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಅಂದಿನ ಮುಖ್ಯಮಂತ್ರಿಯವರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಡ ತಂದಿದ್ದಾರೆ ಎಂದು ಬಸವರಾಜೇಂದ್ರ ಅವರು ರಾಜ್ಯಪಾಲರಿಗೆ 2017ರ ಆ.19ರಂದು ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ಎಸಿಬಿ ಮುಖ್ಯಸ್ಥರಿಂದ 2017ರ ಸೆ.1ರಂದು ವರದಿ ಪಡೆಯಲಾಗಿದೆ. ಎಸಿಬಿ ಮುಖ್ಯಸ್ಥರು ತಮ್ಮ ಅಧಿಕಾರಿಗಳನ್ನು ಸಮರ್ಥಿಸಿದ್ದು, ಅವರು ಯಾವುದೇ ಒತ್ತಡ ತಂದಿರುವುದಿಲ್ಲವೆಂದು ವರದಿಯಲ್ಲಿ ತಿಳಿಸಿದ್ದಾರೆ,” ಎಂದು ಡಿಪಿಎಆರ್‌ ಅಧಿಕಾರಿಗಳು ಒಳಾಡಳಿತ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.

ಸ್ವತಂತ್ರ ವಿಚಾರಣೆ ನಡೆಸುವ ಸಂಬಂಧ ಒಳಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಯಾವ ಅಧಿಕಾರಿಯಿಂದ ತನಿಖೆ ನಡೆಸಬೇಕು ಎಂಬ ಬಗ್ಗೆ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲ. ಈಗಾಗಲೇ ಎಸಿಬಿ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿರುವ ಪ್ರಕರಣವನ್ನೇ ಪುನಃ ಯಾರಿಂದ ತನಿಖೆ ನಡೆಸಬೇಕು? ನ್ಯಾಯಾಂಗ ತನಿಖೆ ನಡೆಸುವುದು ಸೂಕ್ತವೇ ಎಂಬ ಬಗ್ಗೆ ಅಧಿಕಾರಿಗಳು ಜಿಜ್ಞಾಸೆಗೊಳಗಾಗಿದ್ದಾರೆ. ಡಿಪಿಎಆರ್‌ನ ಜಾಗೃತ ವಿಭಾಗ ಸ್ವತಂತ್ರ ತನಿಖೆ ನಡೆಸುವ ಬಗ್ಗೆ ಹಲವು ನೆನಪೋಲೆಗಳನ್ನು ಬರೆದರೂ ಯಾವುದೇ ಕ್ರಮ ಕೈಗೊಳ್ಳದೆ ಇರಲು ಇವು ಕೂಡ ಕಾರಣ ಎಂದು ಹೇಳಲಾಗುತ್ತಿದೆ.

"ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ವಿರುದ್ಧ ಸೆಕ್ಷನ್
164 ಕ್ರಿಮಿನಲ್ ಪ್ರಕ್ರಿಯೆಯಡಿ ಹೇಳಿಕೆ ನೀಡಬೇಕು. ಇಲ್ಲದಿದ್ದಲ್ಲಿ ಐಎಎಸ್‌ಗೆ ಬಡ್ತಿ ನೀಡುವುದಿಲ್ಲ ಎಂದು ಅಧಿಕಾರಿಗಳು ಬೆದರಿಸಿದ್ದರು,” ಎಂದು ಬಿಡಿಎ ಅಂದಿನ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಬಸವರಾಜೇಂದ್ರ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದ ದೂರು ರಾಜಕೀಯವಾಗಿ ಮಹತ್ವ ಪಡೆದುಕೊಂಡಿತ್ತು. ಈ ದೂರನ್ನು ಆಧರಿಸಿ ಪ್ರತಿಪಕ್ಷ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿಬಿದ್ದಿತ್ತು. ಇದೊಂದು ದ್ವೇಷದ ಕ್ರಮ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು.

ಇದನ್ನೂ ಓದಿ : ಗೋಮಾಳ ಮಂಜೂರು; ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಅಗತ್ಯವಿಲ್ಲ ಎಂದ ಎ.ಜಿ!

ಏನಿದು ಪ್ರಕರಣ?: ಕೆ ಶಿವರಾಮ ಕಾರಂತ ಬಡಾವಣೆ ಯೋಜನೆಗಾಗಿ ಬೆಂಗಳೂರು ಉತ್ತರ ತಾಲೂಕಿನಲ್ಲಿ ಒಟ್ಟು ೩,೫೪೬ ಎಕರೆ ೧೨ ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ೨೦೦೮ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ, ೨೫೭ ಎಕರೆ ೨೦.೫ ಗುಂಟೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲಾಗಿತ್ತು. ಈ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತುರ್ತಾಗಿ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಯ್ಯಪ್ಪ ದೊರೆ ಎಂಬುವರು ಎಸಿಬಿಗೆ ದೂರು ಸಲ್ಲಿಸಿದ್ದರು.

ಬಸವರಾಜೇಂದ್ರ ಅವರು 2010ರಿಂದ 2011ರವರೆಗೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಸಂಬಂಧ ಧೃಢೀಕರಣ ಪತ್ರವನ್ನು ಭೂಮಾಲೀಕರಿಗೆ ನೀಡಿದ್ದರು ಎಂದು ದೂರಲಾಗಿತ್ತು. ಈ ದೂರು ಆಧರಿಸಿ ವಿಚಾರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಡಿಎನ ಅಂದಿನ ವಿಶೇಷ ಭೂಸ್ವಾಧೀನಾಧಿಕಾರಿ ಎಚ್‌ ಬಸವರಾಜೇಂದ್ರ ಸೇರಿದಂತೆ ಒಟ್ಟು ಆರು ಮಂದಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಈ ಪೈಕಿ ಬಸವರಾಜೇಂದ್ರ ಅವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಎಸಿಬಿ ಅಧಿಕಾರಿಗಳು ಅಕ್ರಮವಾಗಿ ಕೆಲ ಬೇಡಿಕೆಗಳನ್ನಿರಿಸಿದ್ದರು ಎಂದು ಬಸವರಾಜೇಂದ್ರ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More