ಎಚ್1ಬಿ ವೀಸಾ ನಿರ್ಬಂಧ ಹೇರಿಕೆ ಕೈಬಿಟ್ಟ ಟ್ರಂಪ್ ಆಡಳಿತ, ಭಾರತೀಯರು ನಿರಾಳ

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿರುವ ಲಕ್ಷಾಂತರ ಮಂದಿ ಭಾರತೀಯರು ಮಾಹಿತಿ ತಂತ್ರಜ್ಞಾನ ಕಂಪನಿಗಳ ನಾನಾ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಟ್ರಂಪ್ ಆಡಳಿತ ಎಚ್1ಬಿ ವೀಸಾ ನಿಯಮಗಳಿಗೆ ನಿರ್ಬಂಧ ಹೇರಿದ್ದರೆ ಇವರೆಲ್ಲರೂ ಭಾರತಕ್ಕೆ ವಾಪಸಾಗಬೇಕಿತ್ತು

ಭಾರತದ ಐಟಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದ ಎಚ್1ಬಿ ವೀಸಾ ನಿರ್ಬಂಧ ಪ್ರಸ್ತಾಪವನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆ. ಭಾರತದ ಐಟಿ ಉದ್ಯಮ ಅದರಲ್ಲೂ, ದೇಶದ ಐಟಿ ರಾಜಧಾನಿ ಆಗಿರುವ ಬೆಂಗಳೂರು ಈ ಬೆಳವಣಿಗೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ವಿವಿಧ ಮಾಧ್ಯಮಗಳನ್ನು ಉಲ್ಲೇಖಿಸಿ, ಸದ್ಯಕ್ಕೆ ಎಚ್1ಬಿ ವೀಸಾ ನಿರ್ಬಂಧ ಪ್ರಸ್ತಾಪವನ್ನು ಟ್ರಂಪ್ ಸರ್ಕಾರ ಕೈಬಿಟ್ಟಿದೆ ಎಂದು ‘ಮನಿಕಂಟ್ರೋಲ್ ಡಾಟ್ ಕಾಮ್’ ವರದಿ ಮಾಡಿದೆ.

ಎಚ್1ಬಿ ವೀಸಾ ನಿರ್ಬಂಧ ಜಾರಿಯಾಗಿದ್ದರೆ ಗ್ರೀನ್ ಕಾರ್ಡ್‌ಗಾಗಿ ಅರ್ಜಿಸಲ್ಲಿಸಿ ಕಾಯುತ್ತಿರುವ ಐದು ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯ ಐಟಿ ಉದ್ಯೋಗಿಗಳು ತಕ್ಷಣವೇ ಅಮೆರಿಕ ಬಿಟ್ಟು ಭಾರತಕ್ಕೆ ವಾಪಸಾಗಬೇಕಿತ್ತು. ಎಚ್1ಬಿ ವೀಸಾ ಬಳಸಿಯೇ ಭಾರತದ ಐಟಿ ಕಂಪನಿಗಳು ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸಿವೆ. ಎಚ್1ಬಿ ವೀಸಾ ಪಡೆದವರು ಮೂರು ವರ್ಷ ಅಮೆರಿಕದಲ್ಲಿ ಉದ್ಯೋಗ ಮಾಡಬಹುದು. ಅಮೆರಿಕದಲ್ಲಿ ನೆಲೆಸುವ ಅವಧಿಯನ್ನು ಮೂರು ವರ್ಷ ವಿಸ್ತರಿಸಬಹುದು.

ಒಂದು ವೇಳೆ, ಉದ್ಯೋಗಕ್ಕಾಗಿ ಎಚ್1ಬಿ ವೀಸಾ ಪಡೆದು ಅಮೆರಿಕದಲ್ಲಿದ್ದು, ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರೆ, ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವ ಅನಿರ್ದಿಷ್ಟ ಕಾಲದವರೆಗೆ ಎಚ್1ಬಿ ವೀಸಾವನ್ನು ವಿಸ್ತರಿಸಲಾಗುತ್ತದೆ. ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿರುವ ಲಕ್ಷಾಂತರ ಮಂದಿ ಭಾರತೀಯರಿದ್ದಾರೆ. ಅವರು ಐಟಿ ಅಷ್ಟೇ ಅಲ್ಲದೆ ವಿವಿಧ ತಾಂತ್ರಿಕ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಎಚ್1ಬಿ ವೀಸಾ ನಿಯಮಗಳಿಗೆ ನಿರ್ಬಂಧ ಹೇರಿದ್ದರೆ, ಐಟಿ ಉದ್ಯೋಗಿಗಳ ಜೊತೆಗೆ ಇತರ ತಾಂತ್ರಿಕ ಉದ್ಯೋಗಗಳಲ್ಲಿ ತೊಡಗಿಕೊಂಡಿರುವ ಎಲ್ಲರೂ ವಾಪಸಾಗಬೇಕಿತ್ತು.

ಅಮೆರಿಕ ಅಧ್ಯಕ್ಷರ ಚುನಾವಣೆ ವೇಳೆ ಡೊನಾಲ್ಡ್ ಟ್ರಂಪ್, ‘ಬೈ ಅಮೆರಿಕ-ಹೈರ್ ಅಮೆರಿಕ’ ಘೋಷಣೆಯೊಂದಿಗೆ ಮತ ಯಾಚಿಸಿದ್ದರು. “ವಿದೇಶಿಯರು, ಮುಖ್ಯವಾಗಿ ಭಾರತೀಯರು ಅಮೆರಿಕನ್ನರ ಉದ್ಯೋಗವನ್ನು ಕಸಿಯುತ್ತಿದ್ದಾರೆ, ಅಮೆರಿಕನ್ನರು ನಿರುದ್ಯೋಗಿಗಳಾಗುತ್ತಿದ್ದಾರೆ, ಅಧ್ಯಕ್ಷನಾಗಿ ಆಯ್ಕೆ ಆದರೆ ಅಮೆರಿಕನ್ನರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟುವೆ,” ಎಂದು ಭರವಸೆಯನ್ನೂ ನೀಡಿದ್ದರು.

ಇದನ್ನೂ ಓದಿ : ಟ್ರಂಪ್ ಆಡಳಿತದ ವೀಸಾ ನಿರ್ಬಂಧ ಕ್ರಮ ಅಮೆರಿಕಕ್ಕೆ ತಿರುಗುಬಾಣ ಆಗಲಿದೆಯೇ?

ಮೊದಲ ಹಂತವಾಗಿ, ಅಮೆರಿಕದಲ್ಲಿರುವ ಐಟಿ ಕಂಪನಿಗಳ ಕನಿಷ್ಠ ವೇತನವನ್ನು 60,000 ಡಾಲರ್‌ನಿಂದ 90,000 ಡಾಲರ್‌ಗೆ ಏರಿಸಿದ್ದ ಡೊನಾಲ್ಡ್ ಟ್ರಂಪ್ ಆಡಳಿತ, ಆ ಮೂಲಕ ಭಾರತೀಯ ಉದ್ಯೋಗಿಗಳು ಅಮೆರಿಕಕ್ಕೆ ಬರುವುದನ್ನು ತಡೆಯಲು ಯತ್ನಿಸಿತ್ತು. ಈ ನಿಯಮದಿಂದ ಭಾರತೀಯ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸಿ ಅಲ್ಲಿನ ನಿಯಮದ ಪ್ರಕಾರ 90,000 ಕನಿಷ್ಠ ವೇತನ ನೀಡುವುದು ಐಟಿ ಕಂಪನಿಗಳಿಗೆ ಆರ್ಥಿಕ ಹೊರೆಯಾಗಿತ್ತು. ಹೀಗಾಗಿ ಭಾರತೀಯ ಕಂಪನಿಗಳು ಅಮೆರಿಕದ ಉದ್ಯೋಗಿಗಳನ್ನೇ ನೇಮಕ ಮಾಡಿಕೊಳ್ಳಲು ಮುಂದಾಗಿದ್ದವು.

ಆದರೆ, ಟ್ರಂಪ್ ಆಡಳಿತದ ಈ ಪ್ರಯತ್ನವು ನಿರೀಕ್ಷಿಸಿದಷ್ಟು ಯಶಸ್ವಿಯಾಗದ ಕಾರಣ ಎಚ್1ಬಿ ವೀಸಾ ನಿಯಮಗಳನ್ನು ಮಾರ್ಪಾಡು ಮಾಡಿ ನಿರ್ಬಂಧ ಹೇರುವ ಪ್ರಸ್ತಾಪ ಮಾಡಿತ್ತು. ಇದರಿಂದ ಐಟಿ ಕಂಪನಿಗಳಷ್ಟೇ ಅಲ್ಲದೆ, ಅಮೆರಿಕದಲ್ಲಿ ನೆಲೆಸಿರುವ ಭಾರತದ ಉದ್ಯೋಗಿಗಳೂ ಆತಂಕಗೊಂಡಿದ್ದರು. ಈ ಪ್ರಸ್ತಾಪದ ಬಗ್ಗೆ ಐಟಿ ಉದ್ಯಮಿಗಳ ಜೊತೆಗೆ ವಿವಿಧ ತಾಂತ್ರಿಕ ಕ್ಷೇತ್ರಗಳ ಗಣ್ಯರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿಯಮ ಜಾರಿಯಾದರೆ ಅಮೆರಿಕದ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತ ಎಚ್1ಬಿ ವೀಸಾ ನಿರ್ಬಂಧ ಕೈಬಿಟ್ಟಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More