ಕಡ್ಡಾಯ ರಾಷ್ಟ್ರಗೀತೆ ಆದೇಶ ತೆರವಿಗೆ ಹೋರಾಡಿದ್ದು ಕೇರಳದ ಫಿಲ್ಮ್‌ ಕ್ಲಬ್‌

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಬಿತ್ತರಿಸುವಂತೆ 2 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದು ರಾಷ್ಟ್ರಭಕ್ತಿಯನ್ನು ಬಲವಂತವಾಗಿ ಹೇರುವ ನಡೆ ಎಂದು ವಿರೋಧಿಸಿದ ಕೇರಳದ ಕೋಡುಂಗಲ್ಲೂರಿನ ‘ಫಿಲ್ಮ್‌ ಕ್ಲಬ್’ ಕಾನೂನು ಹೋರಾಟ ಮಾಡಿ ಗೆದ್ದಿದೆ

ರಾಷ್ಟ್ರಗೀತೆ ಬಿತ್ತರಿಸುವ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಿಕ್‌ ಮಿಶ್ರಾ ನೇತೃತ್ವದ ಪೀಠ ೨೦೧೬ರ ನವೆಂಬರ್‌ನಲ್ಲಿ ತೀರ್ಪು ನೀಡುತ್ತಲೇ ಕೇರಳದ ಕೋಡುಂಗಲ್ಲೂರು ಫಿಲ್ಮ್‌ ಕ್ಲಬ್‌ ಕಾನೂನು ಹೋರಾಟಕ್ಕೆ ಮುಂದಾಯಿತು.

ಈ ನಡುವೆ ರಾಷ್ಟ್ರಗೀತೆ ಕಡ್ಡಾಯ ವಿಷಯಕ್ಕೆ ಸಂಬಂದಿಸಿ ವಿಧಿ- ವಿಧಾನ ರೂಪಿಸಲು 12 ಸದಸ್ಯರನ್ನೊಳಗೊಂಡ ಅಂತರ ಸಚಿವಾಲಯ ಸಮಿತಿ ರಚಿಸಲಾಗಿದೆ ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಹಿಂದಿನ ಆದೇಶವನ್ನು ಪರಿಷ್ಕರಿಸಿತು.

ಎರಡೂವರೆ ವರ್ಷಗಳ ಕಾನೂನು ಹೋರಾಟದ ಫಲವಾಗಿ ಈಗ ರಾಷ್ಟ್ರಗೀತೆ ಬಿತ್ತರಿಸುವ ಆಯ್ಕೆಯನ್ನು ಚಿತ್ರಮಂದಿರದ ಮಾಲೀಕರಿಗೇ ಬಿಟ್ಟಿದೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಪೀಠ.

ಈ ಕುರಿತು ಮಾತನಾಡಿರುವ ಕೋಡುಂಗಲ್ಲೂರು ಫಿಲ್ಮ್ ಸೊಸೈಟಿಯ ಜಂಟಿ ಕಾರ್ಯದರ್ಶಿ, "ಸುಪ್ರೀಂಕೋರ್ಟ್‌ ಆದೇಶ, ಬಹುದೊಡ್ಡ ನೈತಿಕ ಜಯ'' ಎಂದು ಬಣ್ಣಿಸಿದ್ದಾರೆ.

ಇಡೀ ದೇಶವೇ ಸುಪ್ರೀಮ್‌ ಕೋರ್ಟ್‌ ಆದೇಶವನ್ನು ಕುರುಡಾಗಿ ಪಾಲಿಸುತ್ತಿದ್ದಾಗ ಕೆಎಫ್‌ಎಸ್‌ ಹೋರಾಡುವುದಕ್ಕೆ ನಿರ್ಧರಿಸಿದ್ದು ಹೇಗೆ? ಈ ಸೊಸೈಟಿಯ ಹಿನ್ನೆಲೆ ಏನು?

ಕೆಎಫ್‌ಎಸ್‌ ಪ್ರಸಿದ್ಧ ಫಿಲ್ಮ್ ಸೊಸೈಟಿ

ನಲವತ್ತ ಮೂರು ವರ್ಷಗಳ ಹಿಂದೆ ಲೇಖಕ ಕೇಶವನ್‌ ವೆಲ್ಲಿಕುಲಾಂಗಾರ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಟಿ ಎನ್‌ ಜಾಯ್‌ ಕೋಡುಂಗಲ್ಲೂರು ಫಿಲ್ಮ್‌ ಸೊಸೈಟಿಯನ್ನು ಸ್ಥಾಪಿಸಿದರು. ತೊಂಬತ್ತರ ದಶಕದಲ್ಲಿ ಪುನಶ್ಚೇತನ ಪಡೆದು ಜಗತ್ತಿನ ಸಿನಿಮಾಗಳನ್ನು ಮಲಯಾಳಂ ಸಬ್‌ಟೈಟಲ್‌ ಜತೆಗೆ ಪ್ರದರ್ಶಿಸಲು ಆರಂಭಿಸಿತು.

ಪ್ರತಿ ಶುಕ್ರವಾರ ಕೋಡುಂಗಲ್ಲೂರಿನ ದೇವಿ ದೇಗುಲದ ಬಳಿ ಇರುವ ಶ್ರೀ ಕುಮಾರ ಸಮಾಜಂ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ಚಿತ್ರ ಪ್ರದರ್ಶನ ನಡೆಸುತ್ತದೆ. ಕನಿಷ್ಠ ೫೦ ಮಂದಿ ಈ ಚಿತ್ರ ವೀಕ್ಷಿಸಲು ಬಂದೇ ಬರುತ್ತಾರೆ. ನಿವೃತ್ತ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಉದ್ಯೋಗಿಗಳು, ದಿನಗೂಲಿಗಳು ಸೇರಿದಂತೆ ಸುಮಾರು ೨೮೦ ಮಂದಿ ವಿವಿಧ ಹಿನ್ನೆಲೆಯ ಸಿನಿಮಾಸಕ್ತರು ಈ ಸೊಸೈಟಿಯಲ್ಲಿ ಸದಸ್ಯರಾಗಿದ್ದಾರೆ. ಪ್ರಮುಖ ಚಿತ್ರ ನಿರ್ದೇಶಕರಾದ ಕಮಲ್‌, ಲಾಲ್‌ ಜೋಸ್‌, ನಟರಾದ ಇನ್ನೊಸೆಂಟ್‌ (ಸಂಸದರೂ ಹೌದು) ಕೂಡ ಇದ್ದಾರೆ.

ವಾರದ ಚಿತ್ರ ಪ್ರದರ್ಶನದೊಂದಿಗೆ ವರ್ಷಕ್ಕೊಮ್ಮೆ ಚಿತ್ರೋತ್ಸವನ್ನು ಆಯೋಜಿಸುತ್ತಾ ಬಂದಿರುವ ಈ ಸೊಸೈಟಿ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಚರ್ಚೆಗಳ ವೇದಿಕೆಯಾಗಿಯೂ ಸಕ್ರಿಯವಾಗಿದೆ.

ರಾಷ್ಟ್ರಗೀತೆ ಕಡ್ಡಾಯಕ್ಕೆ ವಿರೋಧ

ಸುಪ್ರೀಂಕೋರ್ಟ್‌ ೨೦೧೬ರಲ್ಲಿ ತೀರ್ಪು ನೀಡಿದ ಮೂರು ದಿನಗಳ ಬಳಿಕ ಸೊಸೈಟಿಯ ಸದಸ್ಯರು ಸಭೆ ಸೇರಿ, ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಚರ್ಚಿಸಿದರು. ಚಿತ್ರೋತ್ಸವದ ಪ್ರತಿ ಪ್ರದರ್ಶನದ ವೇಳೆ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಎದ್ದು ನಿಲ್ಲಬೇಕಾಗುತ್ತದೆ ಎಂಬ ಕಾರಣಕ್ಕಾಗಿ, ಕಾನೂನು ಸಲಹೆಯನ್ನು ಪಡೆದು ಕೋರ್ಟ್ ತೀರ್ಪು ಮರುಶೀಲನೆಗೆ ಮನವಿ ಸಲ್ಲಿಸಿದರು.

ಆದೇಶದಲ್ಲಿ ರಿಯಾಯಿತಿ ಕೋರಿ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂಘಟಕರು ಸಲ್ಲಿಸಿದ್ದ ಕೋರಿಕೆಯನ್ನು ಡಿಸೆಂಬರ್‌ ೯ರಂದು ಸುಪ್ರೀಂ ಕೋರ್ಟ್‌ ತಳ್ಳಿಹಾಕಿತು. ಜೊತೆಗೆ, ‘ಚಿತ್ರೋತ್ಸವದಲ್ಲಿ ವಿವಿಧ ಭಾಗಗಳಲ್ಲಿ ೪೦ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದರೆ, ೪೦ ಬಾರಿ ಎದ್ದು ನಿಲ್ಲಬೇಕಾಗುತ್ತದೆ,’ ಎಂದೂ ಸೂಚಿಸಿತ್ತು.

ರಾಜಕೀಯ ತಿರುವು

ಕೋಡುಂಗಲ್ಲೂರು ಫಿಲ್ಮ್‌ ಸೊಸೈಟಿಯ ಪ್ರಮುಖ ಸದಸ್ಯರೂ ಆದ, ಕೇರಳ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ಹಾಗೂ ಚಿತ್ರ ನಿರ್ದೇಶಕ ಕಮಲ್‌ ಅವರ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಕಮಲ್‌ಗೆ ದೇಶದ ನಿಯಮಗಳನ್ನು ಪಾಲಿಸಲು ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗುವಂತೆ ಸಂಘ ಪರಿವಾರದ ಅಂಗ ಸಂಸ್ಥೆಗಳು ದಾಳಿ ನಡೆಸಿದವು.

ಇದನ್ನೂ ಓದಿ : ಇನ್ನು ಮುಂದೆ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ ಅಲ್ಲ

ಚಿತ್ರೋತ್ಸವದ ಸಂದರ್ಭದಲ್ಲಿ ರಾಷ್ಟ್ರಗೀತೆ ಭಿತ್ತರವಾದಾಗ ಎದ್ದು ನಿಲ್ಲದವರನ್ನು ಬಂಧಿಸಲು ಪೊಲೀಸರು ಮುಂದಾದಾಗ ಕಮಲ್‌ ಅವರು ತಡೆದಿದ್ದರು. ಆದರೂ ಚಿತ್ರೋತ್ಸವಕ್ಕೆ ಆಗಮಿಸಿದ್ದ ಪ್ರತಿನಿಧಿಗಳ ವಿರುದ್ಧ ತಿರುವನಂತಪುರಂನ ಮ್ಯೂಸಿಯಂ ಪೊಲೀಸ್‌ ಠಾಣೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ, ಭಾರತೀಯ ಜನತಾಪಕ್ಷದ ಯುವ ಮೋರ್ಚಾದ ದೂರು ಆಧರಿಸಿ ಕೇಸು ದಾಖಲಿಸಿಕೊಂಡಿದ್ದರು.

ಇದಾದ ಬಳಿಕ ಸಂಘಪರಿವಾರದಿಂದ ಬೆದರಿಕೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸೊಸೈಟಿಯ ಸದಸ್ಯರು ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದರು. ಈಗ ಕೋಡುಂಗಲ್ಲೂರು ಫಿಲ್ಮ್‌ ಸೊಸೈಟಿ ಹೋರಾಟಕ್ಕೆ ಜಯ ಸಿಕ್ಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More