ಮಗುವಿನ ಲಾಲನೆ-ಪೋಷಣೆ ರಜೆ ಜಾರಿಗೆ ರಾಜ್ಯದಲ್ಲೂ ಹಕ್ಕೊತ್ತಾಯ ಅಭಿಯಾನ

ಕೇಂದ್ರ ಸರ್ಕಾರವು ೬ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ ಮಗುವಿನ ಪಾಲನೆ ಪೋಷಣೆಗೆ ರಜೆ ಸೌಲಭ್ಯವನ್ನು ೨೦೦೮ ಸೆ. ೧೧ರಿಂದ ಜಾರಿಗೊಳಿಸಿದೆ. ಅದನ್ನೇ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೂ ಜಾರಿಗೆ ತರಬೇಕೆಂಬ ಕೂಗೆದ್ದಿದೆ

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೂ ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ ಸಿಗುತ್ತಿರುವ ಮಗುವಿನ ಪಾಲನೆ ಪೋಷಣೆಯ ರಜೆ (Child Care Leave-CCL) ಸೌಲಭ್ಯವನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮನವಿ ಸಲ್ಲಿಕೆ, ಹಕ್ಕೊತ್ತಾಯ ಅಭಿಯಾನವನ್ನು ಆರಂಭಿಸುತ್ತಿದೆ.

ಕೇಂದ್ರ ಸರ್ಕಾರವು ೬ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಎಲ್ಲ ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ ಮಗುವಿನ ಪಾಲನೆ ಪೋಷಣೆಗೆ ರಜೆ ಸೌಲಭ್ಯವನ್ನು ೨೦೦೮ ಸೆಪ್ಟಂಬರ್‌ ೧೧ರಿಂದ ಜಾರಿಗೊಳಿಸಿದೆ. ಮೇಘಾಲಯ,ಜಮ್ಮುಕಾಶ್ಮೀರ, ತ್ರಿಪುರ, ಕೇರಳ, ಉತ್ತರಾಖಂಡ, ಹರಿಯಾಣ ರಾಜ್ಯ ಸರ್ಕಾರಗಳು ಕೂಡ ಕೇಂದ್ರದ ಆದೇಶವನ್ನು ಯಾಥಾವತ್‌ ಅನುಷ್ಠಾನಗೊಳಿಸಿವೆ. ರಾಜ್ಯದ ಮಹಿಳಾ ನೌಕರರಿಗೂ ೨ ವರ್ಷದ ವೇತನ ಸಹಿತ “ಸಿಸಿಎಲ್‌’’ ಸೌಲಭ್ಯ ನೀಡುವಂತೆ ರಾಜ್ಯ ಸರ್ಕಾರ ನೂತನವಾಗಿ ರಚಿಸಿರುವ ವೇತನ ಆಯೋಗ ಶಿಫಾರಸು ಮಾಡಬೇಕು. ಅದನ್ನಾಧರಿಸಿ ಸರ್ಕಾರ ಶೀಘ್ರ ಅನುಷ್ಠಾನಕ್ಕೆ ತರಬೇಕೆನ್ನುವುದು ಒಕ್ಕೂಟದ ಬೇಡಿಕೆ.

ಎರಡು ಪ್ರಮುಖ ಬೇಡಿಕೆಗಳಿವು

  1. ಮಕ್ಕಳಾಗದ ಅಥವಾ ಅವಿವಾಹಿತ ಸರ್ಕಾರಿ ಮಹಿಳಾ ನೌಕರರು ದತ್ತು ನಿಯಮ ಪ್ರಕಾರ ಮಗುವನ್ನು ದತ್ತು ಪಡೆದರೆ, ಅದರ ಪಾಲನೆ- ಪೋಷಣೆಗೆ ೬ ತಿಂಗಳು ವೇತನ ಸಹಿತ ರಜೆಯನ್ನು (ಹೆರಿಗೆ ರಜೆಯ ರೀತಿಯಲ್ಲಿ) ನೀಡಬೇಕು.
  2. ಮಗುವಿನ ಓದು ಇತ್ಯಾದಿ ವಿಷಯಗಳಲ್ಲಿ ತಾಯಿಯ ಪಾತ್ರ ಮಹತ್ವದ್ದು. ಆದ್ದರಿಂದ ಸರ್ಕಾರಿ ನೌಕರ ತಾಯಂದಿರಿಗೆ ತಮ್ಮ ಮಗುವಿಗೆ ೧೮ ವರ್ಷ ತುಂಬುವ ಮನ್ನ ಪಾಲನೆ, ಪೋಷಣೆಗಾಗಿ (ಎಸ್‌ಎಸ್‌ಎಲ್‌ಸಿ, ಪಿಯುಸಿಯಂತ ವಿದ್ಯಾಭ್ಯಾಸದ ನಿರ್ಣಾಯಕ ಸಂದರ್ಭ ಅಥವಾ ಮಗು ವಿಕಲಚೇತನ, ವಿಶೇಷ ಚೇತನ ಆಗಿದ್ದಲ್ಲಿ) ವೃತ್ತಿ ಅವಧಿಯಲ್ಲಿ ೨ ವರ್ಷ ವೇತನ ಸಹಿತ ರಜೆ ಸೌಲಭ್ಯ ನೀಡಬೇಕು.

ಹಡೆದರಷ್ಟೆ ಲಾಲನೆ ಪಾಲನೆ ಹೊಣೆಯಲ್ಲ

ಮಹಿಳೆಯರು ಸ್ವಯಂ ಹಡೆದರಷ್ಟೆ ಮಕ್ಕಳ ಲಾಲನೆ, ಪಾಲನೆಯ ಜವಾಬ್ದಾರಿ ಇರುವುದಲ್ಲ. ಮಕ್ಕಳಾಗದ ಎಷ್ಟೋ ಮಂದಿ ಮಗುವನ್ನು ದತ್ತು ಪಡೆಯುತ್ತಾರೆ. ಅವಿವಾಹಿತರು, ಒಂಟಿ ಮಹಿಳೆಯರು ಕೂಡ ಮಗುವನ್ನು ದತ್ತು ಪಡೆದು ಸಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಈಗಿರುವ ನಿಯಮ ಪ್ರಕಾರ ಸರ್ಕಾರಿ ನೌಕರ ಮಹಿಳೆಯರಿಗೆ ೧೮೦ ದಿನ (೬ತಿಂಗಳು) ವೇತನ ಸಹಿತ ಹೆರಿಗೆ ರಜೆ ಸೌಲಭ್ಯವಿದೆ. ದತ್ತು ಪಡೆದ ನೌಕರ ಮಹಿಳೆಯರಿಗೆ ಗಳಿಕೆ ಅಥವಾ ಪರಿವರ್ತಿತ ರಜೆಯ ಸೌಲಭ್ಯವಷ್ಟೆ ಇದೆ.

ಕೆಸಿಎಸ್ಆರ್ ನಿಯಮ ೧೩೫-ಎ ಹೀಗಿದೆ

ಮಹಿಳಾ ಸರ್ಕಾರಿ ನೌಕರರು ಮಗುವನ್ನು ದತ್ತು ತೆಗೆದುಕೊಂಡಾಗ ೧ ವರ್ಷದ ಅಥವಾ ದತ್ತು ಮಗುವಿಗೆ ೧ ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅದರಂತೆ ಅವರಿಗೆ ದೊರೆಯಬಹುದಾದ ರಜೆಯನ್ನು ೬೦ ದಿನಗಳಿಗೆ ಮೀರದಂತೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದೆ ಪರಿವರ್ತತ ರಜೆ/ಗಳಿಕೆ ರಜೆ ಸೇರಿದಂತೆ ರಜೆ ಪಡೆಯುವ ಅವಕಾಶವಿದೆ.

ಇದನ್ನೂ ಓದಿ : ನೆಲಮುಗಿಲು | ಮೂರೂವರೆ ಕೋಟಿ ಮಹಿಳೆಯರ ಶ್ರಮ ಲೆಕ್ಕಕ್ಕೇ ಇಲ್ಲವೇ?

ಸಿಎಂಗೆ ಮನವಿ, ನಿರಂತರ ಒತ್ತಡ

“ಈ ಸಂಬಂಧ ಒಂದೆರಡು ದಿನದಲ್ಲಿ ಮೈಸೂರಿಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ. ಇದೇ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡಿ, ಅನುಷ್ಠಾನಕ್ಕೆ ತರಬೇಕೆನ್ನುವುದು ನಮ್ಮ ಒತ್ತಾಯ. ಮುಖ್ಯಮಂತ್ರಿ ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ. ಎಲ್ಲಾ ಜಿಲ್ಲೆಗಳ ಮಹಿಳಾ ಸಂಘಟನೆಗಳು ಆಯಾ ಕ್ಷೇತ್ರದ ಶಾಸಕರು, ಸಚಿವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಸಲ್ಲಿಸಲಿದ್ದಾರೆ. ಬೇಡಿಕೆ ಈಡೇರುವವರೆಗೆ ನಮ್ಮ ಒತ್ತಡ ಹೇರುವಿಕೆ ಅಭಿಯಾನ ಮುಂದುವರಿಯುತ್ತದೆ,’’ ಎಂದು ಮಹಿಳಾ ಒಕ್ಕೂಟದ ಸಂಚಾಲಕಿ ಸುಮನಾ “ದಿ ಸ್ಟೇಟ್’’ಗೆ ತಿಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More