ಶ್ರವಣಬೆಳಗೊಳದ ವೈರಾಗ್ಯಮೂರ್ತಿ ಪದತಲದಲ್ಲಿ ಅಪರಿಗ್ರಹಕ್ಕೆ ಗ್ರಹಣ?

ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 175 ಕೋಟಿ ರೂ. ಅನುದಾನ ನೀಡಿದೆ. ಈ ಮಧ್ಯೆ, ಜೈನ ಮಠ ಭಕ್ತರಿಗೆ ಕಳಶಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ರೂ.ದೇಣಿಗೆ ಸಂಗ್ರಹಿಸುತ್ತಿದೆ ಎನ್ನುವ ಸುದ್ದಿ ಚರ್ಚೆಗೆ ಕಾರಣವಾಗಿದೆ

ಅಪರಿಗ್ರಹ. ಕನ್ನಡ ಪದಕೋಶದಲ್ಲಿ ಇದಕ್ಕಿರುವ ಅರ್ಥ: “ದಾನವಾಗಿ ತೆಗೆದುಕೊಳ್ಳದಿರುವ ವ್ರತ’’. ಜೈನ ಧರ್ಮದ ಐದು ತತ್ತ್ವಗಳಲ್ಲಿ (ಅಹಿಂಸೆ, ಆಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ, ಸತ್ಯ) ಇದೂ ಒಂದು.. ಅಂತೆಯೇ, 12 ವರ್ಷಗಳ ಬಳಿಕೆ ಮತ್ತೊಂದು ಮಹಾಮಜ್ಜನಕ್ಕೆ ಸಜ್ಜಾಗುತ್ತಿರುವ ಗೊಮ್ಮಟೇಶ್ವರ - ಬಾಹುಬಲಿ ತ್ಯಾಗ, ವೈರಾಗ್ಯ, ಉದಾತ್ತ ಮನೋಭಾವ, ಆತ್ಮ ಸಂಯಮಗಳ ಬೃಹತ್ ಪ್ರತೀಕವೂ ಹೌದು.

ಶ್ರವಣಬೆಳಗೊಳದಲ್ಲಿ ಫೆಬ್ರವರಿ 17 ರಿಂದ 25ರ ವರೆಗೆ 9 ದಿನ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ ಬರೋಬ್ಬರಿ 175 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇಲ್ಲಿ ನಡೆಯುತ್ತಿರುವ ಬಿರುಸಿನ ತಯ್ಯಾರಿ, ಖರ್ಚು-ವೆಚ್ಚ, ಮಠ ದೇಣಿಗೆ ಸಂಗ್ರಹಿಸುತ್ತಿರುವ ರೀತಿ-ನೀತಿಗಳನ್ನು ನೋಡಿದರೆ, ಅಪರಿಗ್ರಹ, ವೈರಾಗ್ಯ ಮುಂತಾದ ಧರ್ಮ ತತ್ತ್ವಗಳು ಪದಕೋಶದ ಅರ್ಥಕ್ಕಷ್ಟೆ ಸೀಮಿತವೇ ಎನ್ನುವ ಪ್ರಶ್ನೆ ಮೂಡದಿರದು.

ವಿಂಧ್ಯಗಿರಿಯ ಗೊಮ್ಮಟ ಮೂರ್ತಿಯು ಭಾರತ ಪುರಾತತ್ವ ಸರ್ವೇಕ್ಷಣಾಲಯದ ನಿಯಂತ್ರಣದಲ್ಲಿರುವುದು ಮತ್ತು ಪಾರಂಪರಿಕ ತಾಣವಾಗಿರುವುದರಿಂದ ಮಸ್ತಕಾಭಿಷೇಕದ ಹೊಣೆ ಸರ್ಕಾರಗಳದ್ದೇ ಆಗಿದೆ. ಹನ್ನೆರಡು ವರ್ಷದ ಹಿಂದೆ ಕೇಂದ್ರ ಸರ್ಕಾರ 90 ಕೋಟಿ ರೂ, ರಾಜ್ಯ ಸರ್ಕಾರ 40 ಕೋಟಿ ರೂ.ಅನುದಾನ ನೀಡಿದ್ದವು. ಈ ಬಾರಿ 500 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ರಾಜ್ಯ ಸಲ್ಲಿಸಿದ್ದ ಮನವಿಗೆ ಕೇಂದ್ರ ಸ್ಪಂದಿಸಿಲ್ಲ. ರಾಜ್ಯಸರ್ಕಾರದ ಅನುದಾನದ ಜೊತೆಗೆ ಹಾಸನ ಜಿಲ್ಲಾಡಳಿತವು ಸಿದ್ಧತೆಗೆ ಟೊಂಕ ಕಟ್ಟಿ ನಿಂತಿದೆ.

ದೇಶ ವಿದೇಶಗಳಿಂದ ಬರುವ ಲಕ್ಷಾಂತರ ಸಂಖ್ಯೆಯ ಭಕ್ತ ಜನಸ್ತೋಮಕ್ಕೆ ವಸತಿಗಾಗಿ 482 ಎಕರೆ ಪ್ರದೇಶದಲ್ಲಿ 12 ತಾತ್ಕಾಲಿಕ ಉಪನಗರ ನಿರ್ಮಾಣಕ್ಕೆ 75 ಕೋಟಿ ರೂ.ಮೀಸಲಿಡಲಾಗಿದೆ. ಗೊಮ್ಮಟನ ಹಿನ್ನೆಲೆಯಲ್ಲಿ ತಾತ್ಕಾಲಿಕ ಅಟ್ಟಣಿಗೆ ಕಟ್ಟಲು 11 ಕೋಟಿ ರೂ. ರಸ್ತೆ, ಕುಡಿಯುವ ನೀರು, ಅಂತಾರಾಷ್ಟ್ರೀಯ ಅತಿಥಿಗೃಹ ನಿರ್ಮಾಣ ಸಹಿತ ಮೂಲ ಸೌಕರ್ಯಕ್ಕೆ 89 ಕೋಟಿ ರೂ. ಖರ್ಚು ಮಾಡಲು ಹಾಸನ ಜಿಲ್ಲಾಡಳಿತ ಉದ್ದೇಶಿಸಿದೆ. ಇದಲ್ಲದೆ, ಮಸ್ತಕಾಭಿಷೇಕ ದಾಸೋಹಕ್ಕಾಗಿ ರಾಜ್ಯ ಮತ್ತು ದೇಶದ ಹಲವೆಡೆಗಳಿಂದ ದವಸ ಧಾನ್ಯ ಲಾರಿಗಟ್ಟಲೆ ಬಂದು ಸೇರುತ್ತಿದೆ.

ಈ ಮಧ್ಯೆ,ಶ್ರವಣಬೆಳಗೊಳದ ಜೈನ ಮಠ ಮಸ್ತಕಾಭಿಷೇಕ ಕೈಂಕರ್ಯ ನೆರವೇರಿಸಲಿಚ್ಚಿಸುವ ಭಕ್ತರಿಗೆ ಅಭಿಷೇಕ “ಕಳಶ’’ಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಸುಮಾರು 150 ಕೋಟಿ ರೂ.ದೇಣಿಗೆ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದೆ ಎನ್ನುವ ಸುದ್ದಿ ಚರ್ಚೆಗೆ ಕಾರಣವಾಗಿದೆ. ಮಠವು ವಿವಿಧ ದ್ರವ್ಯಗಳ ಕಳಶಕ್ಕೆ ನಿಗದಿಪಡಿಸಿರುವ ದರ, ಸಂಖ್ಯೆಯನ್ನು ಅವಲೋಕಿಸಿದರೆ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದೆಂದು ಮಠದ ಮೂಲಗಳು ಮತ್ತು ಲಭ್ಯ ದಾಖಲೆಗಳನ್ನು ಉಲ್ಲೇಖಿಸಿ “ದಿ ಹಿಂದೂ’’ ಪತ್ರಿಕೆ ವರದಿ ಮಾಡಿದೆ. ಮೊದಲ ದಿನದ 108 ಕಳಶ ಹೊರತು ಉಳಿದ 8 ದಿನಗಳ (ಪ್ರತಿನಿತ್ಯ 1008) ಕಳಶ ದರ ಪಟ್ಟಿಯನ್ನು ಸಂಘಟನಾ ಸಮಿತಿ ಭಕ್ತರ ಮಧ್ಯೆ ಖಾಸಗಿಯಾಗಿ ಪ್ರಸಾರ ಮಾಡಿದ್ದು, ಅದರ ಪ್ರತಿ ಕೂಡ ಲಭ್ಯವಿದೆ.

ಮೊದಲ ದಿನ, ಮೊದಲನೆಯದಾಗಿ ಅಭಿಷೇಕವಾಗುವ ಕಳಶದ ದರ ಅತ್ಯಂತ ದುಬಾರಿ. ಮೂಲಗಳ ಪ್ರಕಾರ, ಈ ಬಾರಿ ಮೊದಲ ಕಳಶವನ್ನು ಭಕ್ತ ಉದ್ಯಮಿಯೊಬ್ಬರು 11.50 ಕೋಟಿ ರೂ.ಗೆ ಪಡೆದಿದ್ದಾರೆ. ಕಳೆದ ಬಾರಿ ಮೊದಲ ಕಳಶ ಪಡೆದವರು ನೀಡಿದ ಅಧಿಕೃತ ಮೊತ್ತ 1.25 ಕೋಟಿ ರೂ. ಆದರೆ, ಆ ಭಕ್ತ ದೇಣಿಗೆ ರೂಪದಲ್ಲಿ ಮಠಕ್ಕೆ 5.25 ಕೋಟಿ ರೂ.ನೀಡಿದ್ದರೆನ್ನುತ್ತವೆ ವಿಶ್ವಸನೀಯ ಮೂಲಗಳು. ಅಂತೆಯೇ ಈ ಬಾರಿ ಮೊದಲ ಕಳಶವನ್ನು 2 ಕೋಟಿ ರೂ.ಗೆ ಉದ್ಯಮಿ ಪಡೆದಿದ್ದಾರೆ ಎನ್ನಲಾಗುತ್ತಿದ್ದರೂ, ನೈಜ ಮೊತ್ತ 11.50 ಕೋಟಿ ರೂ. ಎನ್ನುವುದು ಇದೇ ಮೂಲಗಳ ವಿವರಣೆ.

ಗೊಮ್ಮಟ ಮೂರ್ತಿ ಪ್ರತಿಷ್ಠಾಪನೆ ನಂತರ ನಡೆದ ಮೊದಲ ಮಹಾಮಸ್ತಕಾಭಿಷೇಕಕ್ಕೆ ಗುಳ್ಳೆಕಾಯಿ ಅಜ್ಜಿ ಹಾಲು ನೀಡಿದ್ದರಿಂದ ಅದು ಯಶಸ್ವಿಯಾಯಿತೆನ್ನುತ್ತದೆ ಹಳೆಯ ಕತೆ. ಅದರ ನಿಮಿತ್ತ ಈಗಲೂ ಮೊದಲ ದಿನ 9 ಸೇರಿ ಒಟ್ಟು 864 ಕಳಶಗಳು ಗುಳ್ಳೆಕಾಯಿ ಅಜ್ಜಿ ಹೆಸರಿನಲ್ಲಿ ಉಚಿತ. ಮೊದಲ ದಿನದ ಉಳಿದ 98 ಕಳಶಗಳ “ಕನಿಷ್ಠ ದರ’’ ತಲಾ 35 ಲಕ್ಷ ರೂ. ಎನ್ನಲಾಗಿದೆ. ಅಷ್ಟೂ ದಿನ ಸುಮಾರು 8 ಸಾವಿರ ಕಳಶಗಳ ಹಂಚಿಕೆಯಾಗುತ್ತದೆ. ಮೊದಲ ದಿನದ 98 ಮತ್ತು ಉಳಿದೆಲ್ಲಾ ದಿನದ ಪಂಚಾಮೃತ ಕಳಶ ಹೊರತು ಫೆ.18 ರಿಂದ 25ರ ವರೆಗೆ ಹಂಚಿಕೆಯಾಗಿರುವ ಕಳಶ ಸಂಖ್ಯೆ ಮತ್ತು ಲಭ್ಯ ದರ ಪಟ್ಟಿ ಇಂತಿದೆ : ನವರತ್ನ ಕಳಶ(ಕಳಶದ ಬಗೆ)- 800 (ಸಂಖ್ಯೆ)- ತಲಾ 11 ಲಕ್ಷ ರೂ.(ದರ), ರತ್ನ- 600-ತಲಾ 5.51 ಲಕ್ಷ ರೂ., ಸ್ವರ್ಣ-928-ತಲಾ 2.25 ಲಕ್ಷ ರೂ., ದಿವ್ಯ- 1,128- ತಲಾ 1,11,111ರೂ., ರಜತ- 1,200- ತಲಾ 75 ಸಾವಿರ ರೂ., ತಾಮ್ರ-800- ತಲಾ 55ಸಾವಿರ ರೂ., ಕಂಚು- 480-ತಲಾ 35 ಸಾವಿರ ರೂ. ಶುಭಮಂಗಳ -400- ತಲಾ 11 ಸಾವಿರ ರೂ.

ಇದನ್ನೂ ಓದಿ : ಚಿಕ್ಕಲ್ಲೂರು ಜಾತ್ರೆ ಪಂಕ್ತಿ ಸೇವೆ ಪರಂಪರೆ ಉಳಿವಿಗೆ ಇರುವ ಒಳದಾರಿಗಳೇನು?

ಹೀಗೆ, ನಿಗದಿತ ದರವೇ ಆದರೂ,ಮಠಕ್ಕೆ ಸುಮಾರು 150 ಕೋಟಿ ರೂ.ಹರಿದು ಬರಬೇಕು. ಭಕ್ತರು ಮೇಲಾಟ ನಡೆಸಿ, ದರ ಹೆಚ್ಚಿಸಿದರೆ ಈ ಮೊತ್ತ ಇನ್ನಷ್ಟು ಕೋಟಿಗೆ ವಿಸ್ತರಿಸಬಹುದು ಎನ್ನುತ್ತವೆ ಮೂಲಗಳು. ಅಂದರೆ, ರಾಜ್ಯ ಸರ್ಕಾರ ಈ ಬಾರಿ ನೀಡಿರುವ ಅನುದಾನಕ್ಕಿಂತ ಹೆಚ್ಚು ಮೊತ್ತವನ್ನು ಮಠ ಸಂಗ್ರಹಿಸಬಹುದು ಎನ್ನುವುದು ಈ ಮೂಲಗಳ ಊಹೆ. ಮಠಕ್ಕೆ ಉದಾರ ದೇಣಿಗೆ ನೀಡಿದವರು, ಮುಂದೆ ನೀಡುವವರು,ಸೇವೆ ಸಲ್ಲಿಸಿದವರಿಗೆ ಸೇವೆ, ದೇಣಿಗೆಯ ಅರ್ಹತೆ, ಮೌಲ್ಯಕ್ಕೆ ತಕ್ಕಂತೆ ಕಳಶ ಹಂಚಿಕೆ ಮಾಡುವುದೂ ಇದೆ. “ಮೊದಲ ದಿನದ ಕಳಶ ದರವನ್ನು ಭಕ್ತರೊಂದಿಗಿನ ಸಮಾಲೋಚನೆ ನಂತರ ನಿರ್ಧರಿಸಲಾಗುತ್ತದೆ’’ ಎನ್ನುವ ಲಿಖಿತ ಮಾಹಿತಿ ಇದನ್ನು ಋಜುವಾತುಪಡಿಸುತ್ತದೆ. ದರ ಎಷ್ಟೇ ಆದರೂ ಸರಿ ಕಳಶ ಪಡೆದು, ಅಟ್ಟಣಿಗೆ ಏರಿ ಬಾಹುಬಲಿಗೆ ಅಭಿಷೇಕ ಮಾಡುವುದು ಧಾರ್ಮಿಕ ನಂಬಿಕೆಯ ಜೊತೆಗೆ ಸಮುದಾಯದಲ್ಲಿ ಪ್ರತಿಷ್ಠೆಯ ಪ್ರಶ್ನೆಯೂ ಆಗಿರುವುದರಿಂದ ಬೇಡಿಕೆ; ಪೈಪೋಟಿ ಕೂಡ ಹೆಚ್ಚಿರುತ್ತದೆ.

ಹಾಗೆಂದ ಮಾತ್ರಕ್ಕೆ ಗುಜರಾತ್‌, ರಾಜಸ್ಥಾನ, ಮುಂಬಯಿ ಅಥವಾ ವಿದೇಶಗಳಲ್ಲಿ ನೆಲೆಸಿರುವ ಸಮುದಾಯದ ಧನಿಕ ಉದ್ಯಮಿಗಳಷ್ಟೆ ಕಳಶ ಪಡೆಯಬಹುದು ಎಂದಲ್ಲ. ಜೈನ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ರಾಜ್ಯಗಳಿಗೆ ಇಂತಿಷ್ಟೆಂದು ಮಠ “ಕೋಟಾ’’ ನಿಗದಿ ಮಾಡಿದೆ. ಅನಿವಾಸಿ ಭಾರತೀಯರಿಗೂ ಪ್ರತ್ಯೇಕ ವ್ಯವಸ್ಥೆ ಇದೆ. ಈಗಾಗಲೇ ಈ ಎಲ್ಲಾ ಬಾಬ್ತಿನಲ್ಲಿ ಕಳಶ ಹಂಚಿಕೆ ಪ್ರಕ್ರಿಯೆ ಬಹುತೇಕ “ಸೋಲ್ಡ್ ಔಟ್‌’’ ಆಗಿದೆ ಎನ್ನುವುದು ಮಠದ ಮೂಲಗಳ ವಿವರಣೆ.

ಹಾಗಂತ, ಇದನ್ನೆಲ್ಲ “ಅವ್ಯವಹಾರ’’, “ಅಕ್ರಮ’’ದ ಪಟ್ಟಿಗೆ ಸೇರಿಸಲಾಗದು. ಭಕ್ತರಾದವರು ಮಠದ ಖಾತೆಗೆ ಅಧಿಕೃತವಾಗಿ ದೇಣಿಗೆಯನ್ನು ನೀಡಿ, ತೆರಿಗೆ ವಿನಾಯಿತಿ ಫಲ ಪಡೆಯುತ್ತಾರೆ. ದೇಣಿಗೆಗೆ ತಕ್ಕಂತೆ “ಕಳಶ’’ವೂ ಪ್ರಾಪ್ತವಾಗುತ್ತದೆ. ಅಂದರೆ, ಭಕ್ತರೊಂದಿಗಿನ ಸಮಾಲೋಚನೆ ವೇಳೆ ನಿಗದಿಯಾಗುವ ದೇಣಿಗೆ ಅಧಿಕೃತವಾಗಿ ಮಠ ಸೇರುತ್ತದೆ. ಕಳಶಕ್ಕೆ ನಿಗದಿಪಡಿಸಿದ ಮೊತ್ತವಷ್ಟೆ ಆ ಬಾಬ್ತಿಗೆ ಜಮೆಯಾಗುವುದು. ಉಚಿತ ಕಳಶ ಹೊರತು ಮೊದಲ ದಿನದ ಉಳಿದ ಕಳಶಗಳ ಹಂಚಿಕೆ ದರ ಪೈಪೋಟಿಗೆ ತಕ್ಕಂತೆ ಏರುತ್ತದೆ. ಮಠದ ಪರಿಭಾಷೆ ಪ್ರಕಾರ ಇದು ದೇಣಿಗೆ ನೀಡಲು ಭಕ್ತರ ಪೈಪೋಟಿ. ವ್ಯಾವಹಾರಿಕ ಭಾಷೆಯಲ್ಲಿದು “ಹರಾಜು‌’’. “ಕಳಶ ಬಾಬ್ತಿನಲ್ಲಿ ಎಷ್ಟೇ ದೇಣಿಗೆ ಬಂದರು ಸರ್ಕಾರಕ್ಕೆ ಹೋಗದು. ಭಕ್ತ ಜನರಿಗೆ ಅನ್ನ ದಾಸೋಹ, ಯತಿಗಳು ಮತ್ತವರ ಶಿಷ್ಯರ ಖರ್ಚುವೆಚ್ಚ, ಸೇವಾ ಕಾರ್ಯಗಳಿಗೆ ಬಳಕೆಯಾಗುತ್ತದೆ’’ ಎನ್ನುವುದು ಮಠದ ಸ್ಪಷ್ಟನೆ.

ಕಳಶ ಹಂಚಿಕೆಗೆ ಮಠದಿಂದ ನಿಯೋಜಿತ ಉಪಸಮಿತಿ ಪದಾಧಿಕಾರಿಗಳು “ಬಹುಕೋಟಿ ಕಳಶ ವ್ಯವಹಾರ’’ ಶಂಕೆಯನ್ನು ನಿರಾಕರಿಸುತ್ತಾರೆ. “ಕಳಶ ಹಂಚಿಕೆಯಿಂದ ಈ ವರೆಗೆ 10 ಕೋಟಿ ರೂ. ಸಂಗ್ರಹವಾಗಿದೆ. 150 ಕೋಟಿ ರೂ.ಸಂಗ್ರಹವಾಗುತ್ತದೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ’’ ಎಂದು ಸಮಿತಿ ಸಂಚಾಲಕ ಅಶೋಕ್ ಸೇಥಿ ಹೇಳಿದ್ದನ್ನು “ದಿ ಹಿಂದೂ’’ ವರದಿ ಉಲ್ಲೇಖಿಸಿದೆ. ಎಷ್ಟು ಮೊತ್ತ ಸಂಗ್ರಹವಾಗುವ ಅಂದಾಜಿದೆ ಎಂದು ಕೇಳಿದ್ದಕ್ಕೆ, “ಎಷ್ಟೆಂದು ಈಗಲೇ ಹೇಳಲಾಗದು. ಉತ್ಸವ ಮುಗಿದ ನಂತರವಷ್ಟೆ ಅದು ತಿಳಿಯುತ್ತದೆ. ಕಳೆದ ಬಾರಿ 5 ಕೋಟಿ ರೂ. ಸಂಗ್ರಹವಾಗಿತ್ತಷ್ಟೆ ’’ ಎಂದಿದ್ದಾರೆ ಅವರು.

“ಮೊತ್ತ ಎಷ್ಟಾದರೂ ಇರಲಿ. ಮಸ್ತಕಾಭಿಷೇಕದ ಬಹುತೇಕ ಖರ್ಚು ವೆಚ್ಚಗಳನ್ನು ಸರ್ಕಾರ ಭರಿಸುತ್ತಿರುವಾಗ ಮಠವು ಕಳಶದ ಹೆಸರಿನಲ್ಲಿ ಬೃಹತ್ ಮೊತ್ತದ ದೇಣಿಗೆ ಸಂಗ್ರಹಿಸುವುದರ ಔಚಿತ್ಯವೇನು’’ ಎನ್ನುವ ಪ್ರಶ್ನೆ ಕೆಲವು ಅಧಿಕಾರಸ್ಥರನ್ನು ಕಾಡುತ್ತಿದ್ದರೂ, ಬಹಿರಂಗ ಕೇಳುವಷ್ಟು ಧೈರ್ಯ ತೋರುತ್ತಿಲ್ಲ. ಹೆಚ್ಚು ದೇಣಿಗೆ ನೀಡಿ ಕಳಶ ಪಡೆದ ಭಕ್ತರ ಕುಟುಂಬಕ್ಕೆ ಮಠ ಉಚಿತ ವಸತಿ ವ್ಯವಸ್ಥೆ ಕಲ್ಪಿಸುತ್ತದೆ. ಆ ವಸತಿ ವ್ಯವಸ್ಥೆಗಾಗಿಯೇ ಸರ್ಕಾರ 75 ಕೋಟಿ ರೂ. ಖರ್ಚು ಮಾಡುತ್ತದೆ. ಅಂದರೆ, ಖರ್ಚು ಸರ್ಕಾರದ್ದು; ದೇಣಿಗೆ ಮಠಕ್ಕೆ. ಇದ್ಯಾವ ತರ್ಕ ಎನ್ನುವುದು ಅವರ ಪ್ರಶ್ನೆ. ಸಿದ್ಧತಾ ಸಭೆಯಲ್ಲಿ ಉನ್ನತಾಧಿಕಾರಿ ಈ ಸಂಬಂಧ ಪ್ರಶ್ನೆ ಮಾಡಿದರಾದರೂ, “ಇದೆಲ್ಲ ಹಿಂದಿನಿಂದ ನಡೆದು ಬಂದ ಪದ್ಧತಿ’’ ಎಂದು ಮಠದ ಪ್ರತಿನಿಧಿಗಳು ಅಧಿಕಾರಿಯ ಬಾಯಿ ಮುಚ್ಚಿಸಿದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿ ನಿರಾಕರಿಸಿದ್ದನ್ನೂ ಪತ್ರಿಕೆ ಉಲ್ಲೇಖಿಸಿದೆ.

ಗಂಗವಂಶದ ರಾಚಮಲ್ಲನ (924-984) ದಂಡಾಧಿಪತಿಯಾಗಿದ್ದ ಚಾವುಂಡರಾಯ ಶ್ರವಣಬೆಳಗೊಳದಲ್ಲಿ 982ರಲ್ಲಿ ಕೆತ್ತಿಸಿದ 58 ಅಡಿ ಎತ್ತರದ ಏಕಶಿಲಾ ಬಾಹುಬಲಿ ಪ್ರತಿಮೆಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುವುದು ವಾಡಿಕೆ. ಧಾರ್ಮಿಕ ನಂಬಿಕೆಗಳ ಜೊತೆಗೆ ಮೂರ್ತಿಯ ತೇಜಸ್ಸಿನ ರಕ್ಷಣೆ ದೃಷ್ಟಿಯಿಂದಲೂ ಮಹಾಮಸ್ತಕಾಭಿಷೇಕ ಮಹತ್ವದ್ದು. ಈ ಸಂದರ್ಭ ದೇಶಾದ್ಯಂತದಿಂದ ಭಕ್ತರು, ಜೈನ ಯಾತ್ರಿಕರು ಶ್ರವಣಬೆಳಗೊಳಕ್ಕೆ ಬರುತ್ತಾರಾದ್ದರಿಂದ ಈ ಊರು ಜೈನ ಧರ್ಮಿಯರ ಪಾಲಿಗೆ ದಕ್ಷಿಣದ ಕಾಶಿ ಎನ್ನಿಸಿಕೊಂಡಿದೆ ಕೂಡ. ಮೈಸೂರು ಸರ್ಕಾರ 1940ರ ನಂತರ ಉತ್ಸವದ ಜವಾಬ್ದಾರಿ ವಹಿಸಿಕೊಂಡಿತು. ಆಗ ಕೂಡ ಕಳಶ ಹಂಚಿಕೆಯಿಂದ 75 ಸಾವಿರ ರೂ.ಸಂಗ್ರಹವಾಗಿತ್ತು ಎನ್ನುತ್ತವೆ ದಾಖಲೆಗಳು.

ಹೀಗೆ, ನೂರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ನಂಬಿಕೆಯನ್ನು ಕಲಕುವುದು, ಏನೋ ನಡೆಯುತ್ತಿದೆ ಎಂದು ಧಾರ್ಮಿಕ ಸಂಭ್ರಮದ ಮಧ್ಯೆ ಹುಳುಕು ಹುಡುಕುವುದು ಈ ವರದಿಯ ಉದ್ದೇಶವಲ್ಲ. ಕೆಲವು ವಿದ್ಯಮಾನಗಳು ಅಪರಿಗ್ರಹ, ಉದಾತ್ತತೆ, ತ್ಯಾಗ, ವೈರಾಗ್ಯ ಮುಂತಾದ ಧರ್ಮತತ್ತ್ವಗಳಿಗೆ ಹೇಗೆಲ್ಲ ಸವಾಲೊಡುತ್ತಿವೆ; ವ್ಯತಿರಿಕ್ತವಾಗಿ ಪರಿಣಮಿಸುತ್ತಿವೆ ಎನ್ನುವುದನ್ನು ಅವಲೋಕಿಸುವುದು ಮುಖ್ಯ ಆಶಯ. ನಂಬಿಕೆ, ಶ್ರದ್ಧೆ, ಆಚರಣೆ ಇತ್ಯಾದಿಗಳ ಬಾಬ್ತಿನಲ್ಲಿ ಸಿರಿವಂತ ಭಕ್ತ ಜನರು ಕೋಟಿ ಕೋಟಿ ಹಣವನ್ನು ಹರಿಸುತ್ತಿರುವಾಗ ಸರ್ಕಾರದ ಖಜಾನೆಯಿಂದ ಬೃಹತ್ ಮೊತ್ತವನ್ನು ಏಕೆ ವ್ಯಯಿಸಬೇಕೆನ್ನುವ ಪ್ರಶ್ನೆಯೂ ಮೂಡದೆ ಇರದು. ಇದನ್ನೆಲ್ಲ ಕಂಡ ಸೂಕ್ಷ್ಮಮನಸ್ಸಿನ ಹಿರಿಯ ಸಾಹಿತಿಯೊಬ್ಬರು “ದಿ ಸ್ಟೇಟ್‌’’ಗೆ ನೀಡಿದ ಪ್ರತಿಕ್ರಿಯೆ ಹೀಗಿತ್ತು: “ಅಪರಿಗ್ರಹಕ್ಕೆ ಗ್ರಹಣ”. ವರ್ತಮಾನದ ವಿಪರ್ಯಾಸವನ್ನು ಸಮರ್ಥವಾಗಿ ಧ್ವನಿಸುವ ಈ ಮಾತಿಗೆ ಹೆಚ್ಚಿನ ವ್ಯಾಖ್ಯಾನ ಅಗತ್ಯವಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More