ಆಧಾರ್‌ ಲೋಪ ತೆರೆದಿಟ್ಟ ಪತ್ರಕರ್ತೆಗೆ ಪ್ರಶಸ್ತಿ ನೀಡಿ; ತನಿಖೆ ಮಾಡೋದಲ್ಲ

ಆಧಾರ್‌ ಮತ್ತು ಖಾಸಗಿತನ ಚರ್ಚೆಗಳು ಇನ್ನೂ ಬಿಸಿಯಾಗಿವೆ. ಈ ನಡುವೆ ‘ ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರ್ತಿ ಆಧಾರ್ ವ್ಯವಸ್ಥೆಯ ಲೋಪ ಬಹಿರಂಗಪಡಿಸಿದ್ದಾರೆ. ಸರ್ಕಾರ ವರದಿಗಾರ್ತಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರೆ, ‘ವಿಷಲ್‌ ಬ್ಲೋವರ್‌’ ಸ್ನೋಡೆನ್‌ ಮಾತ್ರ ಮೆಚ್ಚಿ ಮಾತನಾಡಿದ್ದಾರೆ

ವಿಕಿಲೀಕ್ಸ್‌ ಮೂಲಕ ಅಮೆರಿಕ ಸರ್ಕಾರದ ಹಗರಣಗಳನ್ನು ಬಯಲು ಮಾಡಿದ್ದ ಜೂಲಿಯನ್‌ ಅಸ್ಸಾಂಜ್‌ ಅವರ ಹಾದಿಯನ್ನೇ ಅನುಸರಿಸಿ ಸುದ್ದಿಯಾದವರು ಎಡ್ವರ್ಡ್‌ ಸ್ನೋಡೆನ್‌. ಅಮೆರಿಕದ ಗುಪ್ತಚರ ಇಲಾಖೆಗಳಾದ ಕೇಂದ್ರ ಬೇಹುಗಾರಿಕೆ ಸಂಸ್ಥೆ ಮತ್ತು ರಾಷ್ಟ್ರೀಯ ಭದ್ರತಾ ಘಟಕಗಳು ಅಮೆರಿಕದ ಪ್ರಜೆಗಳ ಬೇಹುಗಾರಿಕೆ ನಡೆಸುತ್ತಿರುವ ರಹಸ್ಯ ಮಾಹಿತಿಯನ್ನು ಸ್ನೋಡೆನ್‌ ಬಯಲು ಮಾಡಿದ್ದರು.

ಜಗತ್ತಿನ ಅತಿದೊಡ್ಡ ಬೇಹುಗಾರಿಕಾ ನಡೆಯನ್ನು ಬಯಲು ಮಾಡಿದ ಸ್ನೋಡೆನ್‌ ಈಗ ಆಧಾರ್ ಕುರಿತು ಮಾತನಾಡಿದ್ದಾರೆ. ಆಧಾರ್‌ ಮತ್ತು ಖಾಸಗಿತನದ ಚರ್ಚೆ ಹೆಚ್ಚು ವ್ಯಾಪಕವಾಗುತ್ತಿರುವ ದಿನಗಳಲ್ಲೇ 'ದಿ ಟ್ರಿಬ್ಯೂನ್‌' ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ಆಧಾರ್‌ ಲೋಪಗಳನ್ನು ಪತ್ತೆ ಮಾಡಿ ವರದಿ ಮಾಡಿದ್ದರು.

ಮೊಬೈಲ್ ವ್ಯಾಲೆಟ್‌ ಎಂದೇ ಖ್ಯಾತಿ ಪಡೆದಿರುವ ಪೇಟಿಎಂ ಮೂಲಕ ೫೦೦ ರೂ.ಗಳಿಗೆ ಹತ್ತೇ ನಿಮಿಷಗಳಲ್ಲಿ ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಸಂಪಾದಿಸಿದ್ದರು. ಈ ಮಾಹಿತಿ ಮೂಲಕ ಯಾವುದೇ ಆಧಾರ್‌ ಹೊಂದಿರುವ ವ್ಯಕ್ತಿಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿತ್ತು.

ರಚನಾ ಆಧಾರ್‌ ಮತ್ತು ಯುಐಡಿಎಐ ವ್ಯವಸ್ಥೆಯಲ್ಲಿರುವ ಲೋಪಗಳನ್ನು ವರದಿ ಮಾಡಿದರು. ಆದರೆ ಯುಐಡಿಎಐ ಇದನ್ನು ತಪ್ಪು ಎಂದು ಬಣ್ಣಿಸಿ ಪತ್ರಿಕೆ ಮತ್ತು ರಚನಾ ಖೈರಾ ವಿರುದ್ಧ ಎಫ್‌ ಐ ಆರ್‌ ದಾಖಲಿಸಿತ್ತು. ಸರ್ಕಾರದ ಈ ನಡೆಯನ್ನು ಪತ್ರಿಕೆ ತೀವ್ರವಾಗಿ ಖಂಡಿಸಿತ್ತು. ‘ಎಡಿಟರ್ಸ್‌ ಗಿಲ್ಡ್‌’ ಕೂಡ ಖಂಡಿಸಿತ್ತು. ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ ಎಂಬ ಆಕ್ರೋಶವೂ ವ್ಯಕ್ತವಾಯಿತು.

ಈ ಬೆಳವಣಿಗೆಗಳ ಬೆನ್ನಲ್ಲೇ ದೇಶವಾಸಿಗಳ ಖಾಸಗಿತನದ ಹಕ್ಕಿಗಾಗಿ ಹೋರಾಡಿದ ಸ್ನೋ ಡೆನ್‌ ಟ್ವೀಟ್‌ ಮಾಡಿ, ‘ವರದಿಗಾರ್ತಿಗೆ ಪ್ರಶಸ್ತಿ ನೀಡಬೇಕೆ ಹೊರತು, ತನಿಖೆಗೆ ಗುರಿಪಡಿಸುವುದಲ್ಲ,’ ಎಂದು ಹೇಳಿದ್ದಾರೆ. ‘ನಿಜಕ್ಕೂ ನ್ಯಾಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಾರೆ, ಕೋಟ್ಯಂತರ ಭಾರತೀಯರ ಖಾಸಗಿತನವನ್ನು ನಾಶ ಮಾಡುತ್ತಿರುವ ನೀತಿಯನ್ನು ಸುಧಾರಿಸಬೇಕು. ನಿಜಕ್ಕೂ ಹೊಣೆಗಾರರನ್ನು ಬಂಧಿಸಬೇಕೆ? ಯುಐಡಿಎಐಯನ್ನು ಬಂಧಿಸಿ,’ ಎಂದಿದ್ದಾರೆ.

'ಸ್ನೋಡೆನ್‌ ಅವರ ಮೂಲ ಟ್ವೀಟ್‌ ಇಲ್ಲಿದೆ:

ಜೊತೆಗೆ ‘ದಿ ಟ್ರಿಬ್ಯೂನ್’ ಪತ್ರಿಕೆಯ ಸಂಪಾದಕರು ತಾವು ಪ್ರಕಟಿಸಿದ್ದ ವರದಿ ಕುರಿತು ‘ ವರದಿ ವಸ್ತುನಿಷ್ಠವಾಗಿದೆ. ಹಾಗೂ ಅದಕ್ಕೆ ನಾವು ಬದ್ಧರಾಗಿದ್ದೇವೆ,’ ಎಂದು ಮಾಡಿದ್ದ ಟ್ವೀಟ್ ಅನ್ನುಸ್ನೋಡೆನ್ ಮರುಟ್ವೀಟ್ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಸ್ನೋಡೆನ್‌ ಆಧಾರ್ ಕುರಿತು ಟ್ವೀಟ್‌ ಮಾಡಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ವಲಯದ ಸೇವೆಗಳಿಗೆ ಆಧಾರ್ ಕಡ್ಡಾಯಗೊಳಿಸುತ್ತಿದೆ. ಈ ನಡೆಯ ಬಗ್ಗೆ ಸುಳಿವು ಪಡೆದಂತಿರುವ ಸ್ನೋಡೆನ್‌ ಭಾರತ ಸರ್ಕಾರ ಆಧಾರ್‌ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಸೂಚ್ಯವಾಗಿ ವ್ಯಕ್ತಪಡಿಸಿದಂತಿದೆ.

ಇದನ್ನೂ ಓದಿ : ಆಧಾರ್‌ ಇದ್ದರಷ್ಟೇ ಫೇಸ್‌ಬುಕ್‌ ಅಕೌಂಟ್‌? ನಡೀತಿದೆ ಪ್ರಾಯೋಗಿಕ ಪರೀಕ್ಷೆ!

ಸ್ನೋಡೆನ್‌ ಟ್ವೀಟ್‌ ಸದ್ದು ಮಾಡುತ್ತಿದ್ದಂತೆ, ಕೇಂದ್ರ ಸರ್ಕಾರ ‘ಪತ್ರಕರ್ತೆ ಮತ್ತು ಪತ್ರಿಕೆ ವಿರುದ್ಧ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ,’ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ ಆಧಾರ್‌ ಮಾಹಿತಿಯೊಂದಿಗೆ ಸಂಪರ್ಕ ಹೊಂದಿದ್ದ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.

ಕೇಂದ್ರ ಮಂತ್ರಿ ರವಿಶಂಕರ್‌ ಪ್ರಸಾದ್ ಕೂಡ ಸ್ಪಷ್ಟನೆಯೊಂದಿಗೆ ಟ್ವೀಟ್‌ ಮಾಡಿದ್ದಾರೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More