ಹಿಂದಿ-ಹಿಂದುತ್ವದ ಹೇರಿಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಹಾಗೂ ಹಿಂದುತ್ವವನ್ನು ಹೇರಲು ಪ್ರಯತ್ನಿಸಲಾಗುತ್ತಿದೆ ಎನ್ನುವ ಆರೋಪವಿದೆ. ಇದಕ್ಕೆ ತಡೆ ನೀಡಬೇಕು ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಪುರಸ್ಕರಿಸಿದೆ

ದೇಶಾದ್ಯಂತ ಇರುವ ಕೇಂದ್ರೀಯ ವಿದ್ಯಾಲಯಗಳ ಮೂಲಕ ಹಿಂದಿ ಮತ್ತು ಹಿಂದುತ್ವವನ್ನು ಹೇರಲಾಗುತ್ತಿದೆ. ಈ ವಿದ್ಯಾಲಯಗಳಲ್ಲಿ ನಿಯಮಬಾಹಿರವಾಗಿ ಧಾರ್ಮಿಕ ಚಟುವಟಿಕೆಗಳು ಜರುಗುತ್ತಿದ್ದು ಕೂಡಲೇ ಈ ಚಟುವಟಿಕೆಗಳಿಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಪುರಸ್ಕರಿಸಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ವಿಶ್ವವಿದ್ಯಾನಿಲಯಗಳಲ್ಲಿ ಹಿಂದುತ್ವವನ್ನು ಹೇರಲು ಪ್ರಯತ್ನಿಸಲಾಗುತ್ತಿದೆ ಎನ್ನುವ ಆರೋಪ ಪದೇಪದೇ ಕೇಳಿಬರುತ್ತಿದೆ. ಹೈದರಾಬಾದ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಸುದ್ದಿಯಾದಾಗಲೇ ಈ ವಿಚಾರ ಗಂಭೀರವಾಗಿ ಚರ್ಚೆಯಾಗಿತ್ತು. ಅದೇ ರೀತಿ ಎಡಪಂಥೀಯ ವಿಚಾರಧಾರೆಗಳಿಗೆ ಹೆಸರುವಾಸಿಯಾದ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಬಗ್ಗೆಯೂ ಕೇಂದ್ರ ಸರ್ಕಾರ ಅವಕೃಪೆ ತೋರಿದೆ ಎನ್ನುವ ವಿಷಯವೂ ಚರ್ಚೆಯಲ್ಲಿದೆ. ಈ ಕಾರಣಗಳಿಂದ ಮಧ್ಯಪ್ರದೇಶ ಮೂಲದ ವಕೀಲ ವಿನಾಯಕ್ ಶಾ ಎನ್ನುವವರು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ರೋಹಿಂಗ್‌ಟನ್‌ ನಾರಿಮನ್ ಅವರ ಪೀಠದ ಮುಂದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಹತ್ವ ಪಡೆದಿತ್ತು. ನ್ಯಾ.ನಾರಿಮನ್‌ ಅವರು ‘ಇದೊಂದು ಗಂಭೀರ ವಿಷಯ, ಸಾಂವಿಧಾನಿಕ ಸಂಗತಿಯನ್ನು ಇದು ಒಳಗೊಳ್ಳುವುದರಿಂದ ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿ ವಿಚಾರಣೆ ನಡೆಸಲಿದೆ’, ಎಂದು ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದರು.

ಅರ್ಜಿಯಲ್ಲಿ ಏನಿದೆ?

ವಿನಾಯಕ್ ಶಾ ಸಲ್ಲಿಸಿರುವ ಅರ್ಜಿಯ ಸಾರ ಈ ರೀತಿ ಇದೆ. ‘ದೇಶಾದ್ಯಂತ 1,100 ಕೇಂದ್ರಿಯ ವಿದ್ಯಾಲಯಗಳಿವೆ. ಈ ವಿದ್ಯಾಲಯಗಳಲ್ಲಿ ಹಿಂದಿ ಮತ್ತು ಹಿಂದುತ್ವವನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ಹಿಂದೂ ಧರ್ಮದ ವಿಚಾರಧಾರೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅದೇ ಸಮಯದಲ್ಲಿ ಬೇರೆ ಧರ್ಮವನ್ನು ಕಡೆಗಣಿಸಲಾಗುತ್ತಿದೆ. ಹಿಂದಿಯನ್ನು ಪ್ರಚಾರಮಾಡುವ ಕೇಂದ್ರೀಯ ವಿದ್ಯಾಲಯಗಳು ಪ್ರಾದೇಶಿಕ ಭಾಷೆಗಳನ್ನು ನಗಣ್ಯಮಾಡುತ್ತಿವೆ. ಸಂಪರ್ಕ ಭಾಷೆಯಾಗಿರುವ ಇಂಗ್ಲಿಷ್‌ಗೆ ಕೊಡುವ ಕಿಮ್ಮತ್ತು ಕೂಡ ಅಷ್ಟಕಷ್ಟೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದೂ ಧರ್ಮದ ಪ್ರಾರ್ಥನೆಗೂ ಅವಕಾಶ ನೀಡಲಾಗುತ್ತಿದೆ. ಈ ರೀತಿಯ ಪ್ರಾರ್ಥನೆಗಳು ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಬೆಳವಣಿಗೆಯಾಗಲು ಅಡ್ಡಿಯಾಗುತ್ತವೆ. ವಿದ್ಯಾರ್ಥಿಗಳ ಆದ್ಯತೆಯೇ ಬದಲಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ. ಇದು ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಅಧ್ಯಯನದಿಂದ ಯಶಸ್ಸು ಸಾಧಿಸಬೇಕೆನ್ನುವುದನ್ನು ಕಲಿಯುವುದರ ಬದಲು ದೇವರ ಪ್ರಾರ್ಥನೆ ನಮ್ಮ ಫಲಿತಾಂಶವನ್ನು ನಿರ್ಧರಿಸಲಿದೆ ಎಂದು ತಿಳಿಯುತ್ತಿದ್ದಾರೆ. ಯಾವುದೇ ಧರ್ಮದ ವಿದ್ಯಾರ್ಥಿಯಾಗಿರಲಿ, ಅವರಿಗೆ ಇಷ್ಟವಿಲ್ಲದಿದ್ದರೂ ಶಿಸ್ತಿನ ಹೆಸರಿನಲ್ಲಿ ಪ್ರತಿದಿನ ತಪ್ಪದೆ ಪ್ರಾರ್ಥನೆ ಮಾಡಿಸುವ ಪದ್ದತಿ ಇದೆ. ಆ ಪ್ರಾರ್ಥನೆ ಸಂಸ್ಕೃತ ಪದಗಳಿಂದ ಕೂಡಿದ್ದು ಕೆಲ ವಿದ್ಯಾರ್ಥಿಗಳಿಗೆ ಕಷ್ಟವೂ ಆಗುತ್ತಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಪ್ರಾರ್ಥನೆಗೆಂದು ಒಂದು ಕಡೆ ಕಲೆಹಾಕುವ, ಆ ನಂತರ ವಿದ್ಯಾರ್ಥಿಗಳ ಕಣ್ಣು ಮುಚ್ಚಿಸಿ ನಿಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಈ ‘ಶಿಸ್ತನ್ನು’ ಪಾಲಿಸಲು ವಿಫಲರಾದ ವಿದ್ಯಾರ್ಥಿಗಳಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳೆದರು ಶಿಕ್ಷಿಸಿ ಅವಮಾನಿಸಲಾಗುತ್ತದೆ. ಸಂವಿಧಾನದ 28 ಮತ್ತು 21(ಎ) ವಿಧಿಗಳು ಯಾವುದೇ ಧರ್ಮಾಧಾರಿತ ಆಚರಣೆ, ಪ್ರಾರ್ಥನೆ, ಪೂಜೆಗಳಿಗೆ ಸರಕಾರಿ ಸಂಸ್ಥೆಗಳಲ್ಲಿ ಅವಕಾಶವಿಲ್ಲ ಎಂದು ಹೇಳಿವೆ. ಕೇಂದ್ರೀಯ ವಿದ್ಯಾಲಯಗಳು ಕೇಂದ್ರ ಸರ್ಕಾರದ ಮಾನವ‌‌ ಸಂಪನ್ಮೂಲ ಇಲಾಖೆಯಡಿ ಬರುತ್ತವೆ‌. ಆದಾಗ್ಯೂ, ನಿಯಮಬಾಹಿರವಾಗಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಜರುಗುತ್ತಿವೆ. ಈ ಹಿನ್ನೆಲೆಯಲ್ಲಿ ಕೂಡಲೇ‌ ಧರ್ಮಾಧಾರಿತ ಚಟುವಟಿಕೆಗಳಿಗೆ ತಡೆ ನೀಡಬೇಕು', ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ : ಹಿಂದಿ ವಿಶ್ವಮಾನ್ಯತೆಗೆ ಸೆಣಸಾಡುತ್ತಿರುವ ಮೋದಿ, ಸ್ತಬ್ಧವಾಗಿ ಕುಳಿತ ಸಿದ್ದು

ವಿಶೇಷ ಎಂದರೆ ಅರ್ಜಿದಾರ ವಿನಾಯಕ್ ಶಾ ಅವರ ಮಕ್ಕಳು ಕೂಡ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಾಗಿರುವುದು. ಅರ್ಜಿಯಲ್ಲಿ ಈ ವಿಷಯವನ್ನು ವಿನಾಯಕ ಶಾ ಉಲ್ಲೇಖಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಸುಪ್ರೀಂ ಕೋರ್ಟ್ ದೂರುದಾರರ ಮನವಿ ಮೇರೆಗೆ ಕೇಂದ್ರೀಯ ವಿದ್ಯಾಲಯಗಳ ಕಾರ್ಯವೈಖರಿ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಶಿಕ್ಷಣ ವ್ಯವಸ್ಥೆಯ ಮೂಲಕ‌ ತಮ್ಮದೇ ಸಿದ್ದಾಂತದ ಬೇರುಗಳನ್ನು ಆಳಕ್ಕಿಳಿಸಲು ತ್ವರಿತ ಪ್ರಕ್ರಿಯೆಗೆ ಕೇಂದ್ರ ಮುಂದಾಗಿದೆ ಎನ್ನುವ ಆರೋಪ ಕೇಳಿಬರುತ್ತಿರುವ ಸಮಯದಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿರುವುದು ವಿಶೇಷ ಕುತೂಹಲ ಹುಟ್ಟಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More