ಕೇಂದ್ರ ಸರ್ಕಾರದ ವಿರುದ್ಧ ಹೂಂಕರಿಸಿದ ಜಿಗ್ನೇಶ್‌ ನೇತೃತ್ವದ ಯುವ ರ‍್ಯಾಲಿ

ಹಲವು ತೊಡಕುಗಳ ನಡುವೆಯೂ ಜಿಗ್ನೇಶ್‌ ಮೆವಾನಿ ಹಾಗೂ ಸ್ನೇಹಿತರು ದೆಹಲಿಯಲ್ಲಿ ‘ಯುವ ಹೂಂಕಾರ್‌ ರ‍್ಯಾಲಿ’ಯನ್ನು ಪೂರ್ಣಗೊಳಿಸಿದರು. ದಲಿತ ಶೋಷಣೆ, ಹಿಂದತ್ವ, ರಾಷ್ಟ್ರೀಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಟುವಾದ ಟೀಕೆಗೆ ಈ ರ‍್ಯಾಲಿ ವೇದಿಕೆ ಕಲ್ಪಿಸಿತು

ದೆಹಲಿಯಲ್ಲಿ ನಡೆದ 'ಯುವ ಹೂಂಕಾರ್ ರ‍್ಯಾಲಿ' ಬಗ್ಗೆ ಹತ್ತು ಹಲವು ಬಗೆಯ ನಿರೀಕ್ಷೆಗಳಿದ್ದವು.‌ ಬಲಪಂಥೀಯ‌ರಿಂದ ದೇಶದುದ್ದಕ್ಕೂ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ, ಮುಸ್ಲೀಮರಲ್ಲಿ ಉಂಟುಮಾಡುತ್ತಿರುವ ಅಭದ್ರತೆಯನ್ನು ವಿರೋಧಿಸಿ, ಅಪಾರ ನಿರೀಕ್ಷೆ ಇದ್ದ ನಿರುದ್ಯೋಗ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ, ಮುಖ್ಯವಾಗಿ ದೇಶದ್ರೋಹದ ಆರೋಪ ಹೊತ್ತು ಜೈಲಿನಲ್ಲಿರುವ ಉತ್ತರ ಪ್ರದೇಶದ 'ಭೀಮ ಸೇನಾ' ನಾಯಕ ಚಂದ್ರಶೇಖರ್ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಾದರೂ ನಿರೀಕ್ಷೆಗಳು ಅದರಾಚೆಗೂ ತೆರೆದುಕೊಂಡಿದ್ದವು. ಹೊಸ ಹುರುಪಿನ, ಹೊಸ ಕನಸಿನ ಜಿಗ್ನೇಶ್ ಮೇವಾನಿ, ಕನ್ನಯ್ಯ ಕುಮಾರ್, ಶೆಹ್ಲಾ ರಷೀದ್, ಉಮರ್ ಖಾಲೀದ್ ಮತ್ತಿತರರು ಹಳೆಯ ಸಮಸ್ಯೆಗಳ ಜೊತೆ ಹೊಸ‌ ವಿಷಯಗಳೊಂದಿಗೆ, ಹೊಸ ವರಸೆಯೊಂದಿಗೆ ಆಳುವ ಸರ್ಕಾರಕ್ಕೆ ಅಳುಕು ಮೂಡಿಸುವರು ಎನ್ನುವ ಅಂದಾಜಿತ್ತು. ಆದರೆ ನಿರೀಕ್ಷಿಸಿದ್ದ ಕೆಲ‌‌ ವಿಷಯಗಳು ಸಾಧ್ಯವಾಗಲಿಲ್ಲ. ನಿರೀಕ್ಷೆಸದೇ ಇದ್ದ ಬೇರೆ ಸಂಗತಿಗಳು‌ ಸಿದ್ಧಿಯಾದವು.

ಆಳುವವರಲ್ಲಿ ಅಳುಕು ಮೂಡಿಸಿದ ಯುವ ಪಡೆ

ಪ್ರತಿಭಟನೆ ಆರಂಭವಾಗಿದ್ದೇ ಆರಂಭವಾಗುತ್ತೋ ಇಲ್ಲವೋ ಎನ್ನುವ ಅನುಮಾನದಿಂದ. ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಇತ್ತೀಚೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರ ಜಂತರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಆದೇಶಿಸಿತ್ತು. ಅದೇ ನೆಪ ಇಟ್ಟುಕೊಂಡು ಅನಮತಿ ನಿರಾಕರಿಸಲು ಮುಂದಾದರು ಕೇಂದ್ರ ಸರ್ಕಾರದ ಸುಪರ್ಧಿಯಲ್ಲಿರುವ ದೆಹಲಿ ಪೊಲೀಸರು. ಹಾಗಿದ್ದರೆ ಸಂಸತ್ ಮಾರ್ಗದಲ್ಲಿ ಜಾಗ ಕೊಡಿ ಎಂದು ಪಟ್ಟುಪ್ರತಿಪಾದಿಸಿದರು ಪ್ರತಿಭಟನಾಕಾರರು.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಂಸತ್ ಮಾರ್ಗ ಸೂಕ್ಷ್ಮ ವಲಯವಾಗಿ ಮಾರ್ಪಟ್ಟಿದೆ ಎಂದು ಮತ್ತೊಂದು ಕಾರಣ ಮುಂದಿಟ್ಟರು ಪೊಲೀಸರು. ಈ ಹಗ್ಗಜಗ್ಗಾಟದಿಂದ ಪ್ರತಿಭಟನೆ ಆರಂಭವಾಗುವುದು ತಡವಾಯಿತು. ನಡುವೆ ಹಲವು ಗಾಳಿ ಸುದ್ದಿಗಳು, ಪ್ರತಿಭಟನೆ ನಡೆಯಲು ಪೊಲೀಸರು ಬಿಡುವುದಿಲ್ಲ, ಯುವಕರು, ವಿದ್ಯಾರ್ಥಿಗಳು ಸಂಸತ್ ಭವನ ಮಾರ್ಗಕ್ಕೆ ಬರುವ ಮಧ್ಯೆಯೇ ತಡೆಯುತ್ತಾರೆ. ಬಲವಂತವಾಗಿ ಪ್ರತಿಭಟಿಸಿದರೆ ಬಲತ್ಕಾರದಿಂದಲೇ ಬಂಧಿಸಲಿದ್ದಾರೆ ಎನ್ನುವ ರಕ್ಕೆಪುಕ್ಕಗಳು. ಗೊಂದಲಗಳು ಉಲ್ಬಣಗೊಳ್ಳಲು ರಾಷ್ಟ್ರೀಯ ಮಾಧ್ಯಮಗಳೂ ಶ್ರಮಿಸಿದವು‌. ಇದೆಲ್ಲದರ ಪರಿಣಾಮ ಹಾಕಲಾಗಿದ್ದ ನೂರಾರು ಕುರ್ಚಿಗಳು ಖಾಲಿಯುಳಿದವು. ಪ್ರೇಕ್ಷಕರಿಗಿಂತ ಪತ್ರಕರ್ತರು, ಪತ್ರಕರ್ತರಿಗಿಂತ ಪೊಲೀಸರು ಹೆಚ್ಚಾಗಿದ್ದರು.

ಕಡೆಗೂ ಪ್ರತಿಭಟನೆ ಆರಂಭವಾಯಿತು. ಯುವ ಪಡೆ ದೊಡ್ಡ ಗಂಟಲಲ್ಲೇ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯನ್ನೇ ನೇರವಾಗಿ ಗುರಿಯಾಗಿಸಿಕೊಂಡರು, ಖಂಡಿಸಿದರು, ಕಿಡಿಕಾರಿದರು. ಆದರೆ ಪ್ರತಿಭಟನೆಗೆ ಅನುಮತಿ ಕೊಡಲು ನಿರಾಕರಿಸಿದ ಪೊಲೀಸರು ಮಾತ್ರ ಕಣ್ಣೆದುರೇ ಹೋರಾಟಗಾರರು ಮೋದಿ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೂ ಸುಮ್ಮನಿದ್ದರು. ಪ್ರತಿಭಟನೆಯನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಭಯಂಕರವಾಗಿ ಭಾಷಣ ಮಾಡುತ್ತಿದ್ದವರನ್ನು ಬಂಧಿಸಲಿಲ್ಲ. ಆಗಲೇ ಪ್ರಶ್ನೆಗಳು ಮೊಳಕೆಯೊಡೆಯತೊಡಗಿದ್ದು. ಅನುಮತಿ ತೆಗೆದುಕೊಂಡು ಪ್ರತಿಭಟಿಸುತ್ತಿಲ್ಲ ಎನ್ನುವ ಕಾರಣಕ್ಕೆ ಯಾರನ್ನೂ ಏಕೆ ಬಂಧಿಸುತ್ತಿಲ್ಲ ಎಂದು? ನಿಜಕ್ಕೂ ಪ್ರತಿಭಟನೆಗೆ ಅನುಮತಿ ನಿರಾಕರಿಸುವ ಉದ್ದೇಶ ಇದ್ದಿದ್ದರೆ ಕುರ್ಚಿಗಳನ್ನು ಹಾಕಲು ಬಿಟ್ಟಿದ್ದೇಕೆ ಎಂದು? ವೇದಿಕೆ ನಿರ್ಮಿಸಲು ಬಿಟ್ಟಿದ್ದೇಕೆಂದು? ವೇದಿಕೆ ಮೇಲೆ ಯುವ ನಾಯಕರನ್ನು ಬಂಧಿಸುವುದು ಸರಿಯಿಲ್ಲ ಎನ್ನುವುದಾದರೆ, ವೇದಿಕೆಗೆ ಬರಲು ಬಿಟ್ಟಿದ್ದೇಕೆಂದು. ಪ್ರಶ್ನೆಗಳ ಬೆನ್ನುಹತ್ತಿದರೆ ಆಳುವವರ ಅಂಜಿಕೆ ಗೋಚರಿಸುತ್ತದೆ.

ಇದೇ ಜಿಗ್ನೇಶ್ ಮೇವಾನಿಯನ್ನು ಗುಜರಾತಿನ 'ಊನಾ ಪ್ರಕರಣದಲ್ಲಿ' ಬಂಧಿಸಲಾಗಿತ್ತು. ಅವರು ಹೀರೋ ಆಗಿ ಹೊರಹೊಮ್ಮಿದರು. ಜೆಎನ್ ಯುವಿನಲ್ಲಿ ಕನ್ನಯ್ಯ ಕುಮಾರ್, ಶೆಹ್ಲಾ ರಷೀದ್ ಮತ್ತು ಉಮರ್ ಖಾಲೀದ್ ವಿಷಯದಲ್ಲೂ ಆಳುವ ಸರ್ಕಾರ ಇದೇ ತಪ್ಪು ಮಾಡಿತ್ತು. ಈಗ ಮತ್ತೆ ಬಂಧಿಸಿದರೆ ಮತ್ತೆ ಇವರು ದೊಡ್ಡವರಾಗಿಬಿಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಬಂಧಿಸಲಿಲ್ಲ. ಉಕ್ಕಿ ಹರಿಯುತ್ತಿರುವ ಪ್ರತಿರೋಧ ತಡೆದಷ್ಟೂ ಹೆಚ್ಚಾಗುತ್ತದೆಂಬ ಭಯಕ್ಕೆ ಬಂಧಿಸುವ ಪ್ರಯತ್ನ ಮಾಡಲಿಲ್ಲ. ಇವತ್ತು ಪ್ರತಿಭಟಿಸಿ, ಇವತ್ತು ಸುದ್ದಿಯಾಗಿ, ನಾಳೆಗೆ ವಿಷಯ ಸತ್ತುಹೋಗಲಿ ಎನ್ನುವ ನಿರ್ಲಕ್ಷ್ಯ ಭಾವ ಕೆಲಸ ಮಾಡಿತ್ತು. ಜನಸೇರದೆ ಪ್ರತಿಭಟನೆ ವಿಫಲವಾಯಿತು ಎನ್ನುವ ಸಂದೇಶ ಕಳುಹಿಸಲು ದೊಡ್ಡ ಮಟ್ಟದಲ್ಲಿ ಜನ ಸೇರಲು ಬಿಟ್ಟಿರಲಿಲ್ಲ. ಅದಷ್ಟೇ ಆಳುವ ಸರ್ಕಾರದ ಮತ್ತು ಪೊಲೀಸರ ಯಶಸ್ಸು. ಇಷ್ಟರ ಮಟ್ಟಿಗೆ ಬಂಧಿಸಲೂ ಆಗದೆ, ಬಿಡಲೂ ಆಗದೆ, ಪ್ರತಿಭಟನೆಗೆ ಅನುಮತಿಯನ್ನು ನೀಡಲೂ ಆಗದೆ ಬಿಡಲೂ ಆಗದೆ ಆಳುವ ಸರ್ಕಾರವನ್ನು ಗೊಂದಲಕ್ಕೆ ಸಿಲುಕಿಸಿದ್ದು ಪ್ರತಿಭಟನಾಕಾರರಿಗೆ ಸಿಕ್ಕ ಗೆಲುವು.

ಹಲವು ಯುವ ನಾಯಕರು ಮಾತನಾಡಿದರು. ಪ್ರಶಾಂತ್ ಭೂಷಣ್ ಅವರಂತಹ ಹಿರಿಯರೂ ಮಾರ್ಗದರ್ಶನ ಮಾಡಿದರು. ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿ ನಾಯಕರು ತಮ್ಮ ತಮ್ಮ ವಿವಿಗಳಲ್ಲಿ ನಡೆಯುತ್ತಿರುವ ಅನುಭವಗಳನ್ನು ಬಿಚ್ಚಿಟ್ಟರು. ಇದೆಲ್ಲದರ ನಡುವೆ ಇತ್ತೀಚೆಗಷ್ಟೇ ಒಂದು ಸಂವಿಧಾನಿಕ ಸ್ಥಾನವನ್ನು ಅಲಂಕರಿಸಿರುವ ಗುಜರಾತಿನ ವಡ್ಗಾಂ ಶಾಸಕ ಜಿಗ್ನೇಶ್ ಮೇವಾನಿ, ಕ‌ನ್ನಯ್ಯ ಕುಮಾರ್, ಶೆಹ್ಲಾ ರಷೀದ್ ಮತ್ತು ಉಮರ್ ಖಾಲೀದ್ ಮಾತುಗಳು ಮುಖ್ಯವಾದವು.

ನಮ್ಮದು ಕಟ್ಟುವ ಕಾಯಕ

ಊನಾದಿಂದ ಗುಜರಾತ್ ವಿಧಾನಸಭೆಗೆ ಬಂದಾಯ್ತು, ಮುಂದಿನ ಗುರಿ ಸಂಸತ್ತು ಎಂದರು ಜಿಗ್ನೇಶ್ ಮೇವಾನಿ. ಹಾಗಂತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಲಿಲ್ಲ. ಬದಲಿಗೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಶತ್ರು ಬಿಜೆಪಿಯನ್ನು ಸೋಲಿಸುವ ಉದ್ದೇಶವನ್ನು ಬಿಚ್ಚಿಟ್ಟರು. ಬಿಜೆಪಿಯನ್ನು ಸೋಲಿಸಲು ಯುವ ಪಡೆಯನ್ನು ಕಟ್ಟಬೇಕಿದೆ. ಮೋದಿ ದಲಿತರ ದನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ. ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಮೌನವಾಗಿದ್ದಾರೆ. ದಲಿತರ ಸಮಸ್ಯೆಗಳ ಬಗ್ಗೆ ಕುರುಡಾಗಿದ್ದಾರೆ, ದಲಿತ ಹೋರಾಟಗಾರ ಚಂದ್ರಶೇಖರ್ ಬಿಡುಗಡೆ ವಿಷಯದಲ್ಲೂ ಮಗುಮ್ಮಾಗಿದ್ದಾರೆ ಎಂದು ನೇರಾನೇರ ಮೋದಿಯವರನ್ನು ಕೆಣಕಿದರು.

ಮುಸ್ಲೀಮರ ಮೇಲೆ ದಲಿತರನ್ನು ಎತ್ತಿಕಟ್ಟಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆಂದು ಅಣಕಿಸಿದರು. ಅವರು ಕೆಡವಲಿ, ನಾವು ಕಟ್ಟುತ್ತೇವೆ ಎಂದು ಸ್ಪಷ್ಟ ಶಬ್ಧಗಳಲ್ಲಿ ಹೇಳಿದರು. ಕಟ್ಟುವ ಕಾಯಕಕ್ಕೆ ಗುಜರಾತ್ ಚುನಾವಣೆಯಲ್ಲಿ ತಮ್ಮ ಚಿಹ್ನೆಯಾಗಿದ್ದ ಹೊಲಿಗೆಯಂತ್ರವನ್ನು ಉಲ್ಲೇಖಿಸಿದರು. ಹೊಲಿಗೆಯಂತ್ರವನ್ನು ಬೆಸೆಯುವ ಸಂಕೇತ ಎಂದು ಬಣ್ಣಿಸಿದರು.

ಕೆಲಸ ಮಾಡುವವರೆಗೂ ಮಾತು ನಿಲ್ಲಿಸೊಲ್ಲ

ಇದು ಕನ್ನಯ್ಯ ಕುಮಾರ್ ಅವರ ಖಡಕ್ ನುಡಿ. ಮಾತು ಆರಂಭಿಸುತ್ತಿದ್ದಂತೆ 'ಮಾತಿನ‌ ಮಧ್ಯೆ ಯಾರು ಚೀಟಿ ಕೊಡಬೇಡಿ, ಮಾತನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ನನ್ನ ಮಾತನ್ನು ನಿಲ್ಲಿಸುವುದು ಮೋದಿ ಅವರಿಂದ ಮಾತ್ರ ಸಾಧ್ಯ. ಅವರು ದೇಶವಾಸಿಗಳ ಸಮಸ್ಯೆ ಬಗ್ಗೆ ಮಾತನಾಡಿದರೆ, ಕೆಲಸ ಮಾಡಿದರಷ್ಟೇ ನಾನು ಮಾತುನಿಲ್ಲಿಸುವುದು' ಎಂದರು. ಹೀಗೆ ಹೇಳುವ ಮೂಲಕ ಮೋದಿ ವಿರುದ್ಧ ನಿರ್ಣಾಯಕ ಯುದ್ಧ ಆರಂಭ ಎನ್ನುವುದನ್ನು ಸ್ಪಷ್ಟಪಡಿಸಿದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯೂ ಸೇರಿದಂತೆ ದೇಶದುದ್ದಕ್ಕೂ ಆಗುತ್ತಿರುವ ಅನ್ಯಾಯಗಳನ್ನು ಒಂದೊಂದಾಗಿ ಬಿಚ್ಚಿಟ್ಟರು. ಈ ಬಗ್ಗೆ ತುಟಿಬಿಚ್ಚಿ ಎಂದು ಮೋದಿ ಅವರನ್ನೂ ಒತ್ತಾಯಿಸಿದರು.

ಲೆಕ್ಕ ಕೊಡಿ, ಇಲ್ಲಾ ಜಾಗ ಖಾಲಿ ಮಾಡಿ

ಶೆಹ್ಲಾ ರಷೀದ್ ಮೋದಿ ಸರ್ಕಾರಕ್ಕೆ ಈವರೆಗೆ ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಿ ಎನ್ನುವ ಲೆಕ್ಕ ಕೊಡಿ, ಅಥವಾ ಜಾಗ ಖಾಲಿ ಮಾಡಿ ಎಂದು ಕಟುಮಾತಿನಿಂದ ಆಗ್ರಹಿಸಿದರು. ದೆಹಲಿಯಲ್ಲಿ ಆರಂಭವಾಗಿರುವ ಈ ಹೂಂಕಾರ್ ರಾಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಾಗಲಿದೆ. ಕೇಂದ್ರ‌ ಸರ್ಕಾರದ ವಿರುದ್ದ ಯುವಕರಲ್ಲಿ, ದಲಿತರಲ್ಲಿ, ಮಹಿಳೆಯರಲ್ಲಿ, ಮುಸ್ಲೀಮರಲ್ಲಿ ಅರಿವು ಮೂಡಿಸುತ್ತೇವೆ. ಆಳುವ ಸರ್ಕಾರವನ್ನು ಅಲುಗಾಡಿಸದೆ ವಿರಮಿಸುವುದಿಲ್ಲ. ಪರ್ಯಾಯ ಹುಡುಕದೆ ವಿಧಿಯಿಲ್ಲ ಎಂದರು.

ನಮ್ಮ ಜನ, ನಮ್ಮ ದುಡ್ಡು, ನಮ್ಮ ಶಿಕ್ಷಣ

ಉಮರ್ ಖಾಲೀದ್ ದೇಶವಾಸಿಗಳ ಹಕ್ಕುಗಳ ಬಗ್ಗೆ ಬೆಳಕುಚೆಲ್ಲಿದರು. ತಮ್ಮನ್ನು ಬೇರೆಯವರ ತೆರಿಗೆ ದುಡ್ಡಿನಿಂದ ಓದುತ್ತಿರುವ ಹಂಗಿಸುವ ಜನರನ್ನು ತರಾಟೆಗೆ ತೆಗೆದುಕೊಂಡು. ಕಾರ್ಪೂರೇಟ್ ಕುಳಗಳಿಗೆ ಸಹಸ್ರಾರು ಕೋಟಿ ತೆರಿಗೆ ವಿನಾಯಿತಿ ನೀಡುವ ಸರ್ಕಾರವನ್ನು ಟೀಕಿಸದ ಜನ ನಮ‌ ಓದಿಗೆ ಖರ್ಚುಮಾಡುವ ಬಿಡಿಗಾಸಿನ ಲೆಕ್ಕ ಕೇಳುತ್ತಾರೆ. ಇದು ನಮ್ಮ ಹಣ, ನಮ್ಮ‌ ನೆಲದ ರೈತ, ಕೂಲಿಗಳ ಹಣ. ಅದನ್ನು ನಮ್ಮ ಶಿಕ್ಷಣಕ್ಕೆ ಕೊಡಲೇಬೇಕು. ಶಿಕ್ಷಣದ ನಂತರ ಉದ್ಯೋಗವನ್ನೂ ನೀಡಬೇಕು ಎಂಬ‌ ಹಕ್ಕೊತ್ತಾಯವನ್ನು‌ ಮಂಡಿಸಿದರು. ಅಲ್ಪಸಂಖ್ಯಾತರು ಮತ್ತು ದಲಿತರನ್ನು ಒಡೆದು ಆಳಬೇಡಿ. ನಾವು ಒಂದಾಗಿದ್ದೇವೆ. ಒಂದಾಗಿ ಬುದ್ದಿಕಲಿಸಲಿದ್ದೇವೆ ಎಂದು ಹೇಳಿದರು.

ಮಾಧ್ಯಮದ ಬಗ್ಗೆ ಕಿಡಿ

ಹೂಂಕಾರ್ ರ್ಯಾಲಿಯಲ್ಲಿ ಮಾತಿಗೂ ಮೀರಿ ಹೊರಹೊಮ್ಮಿದ ಸಂದೇಶಗಳು ಸೂಕ್ತವಾಗಿದ್ದವು. ಆದರೆ ನಿಜ ಹೋರಾಟಕ್ಕೆ ಶಿಸ್ತು ಅತ್ಯಗತ್ಯ. ಇಂದಿನ‌ ಯುವ ನಾಯಕರಲ್ಲಿ ಅದು ಕಂಡುಬರಲಿಲ್ಲ. ಮೋದೀಜಿ ಹಸಿ ಸುಳ್ಳುಗಳನ್ನೇ ಪದೇ ಪದೇ ಹೇಳಿ ಬೋರುಹೊಡೆಸಬೇಡಿ ಎಂದು ಚುಚ್ಚುವ ಈ ಯುವಕರ ಭಾಷಣಗಳಲ್ಲೂ ಪುನರಾವರ್ತನೆ‌ ಎದ್ದು ಕಾಣುತ್ತಿತ್ತು. ಸಮಸ್ಯೆ ಹೇಳುವುದಷ್ಟೇ ಮುಖ್ಯವಾಗುವುದಿಲ್ಲ, ಹೊಸತನ್ನು ಕಟ್ಟುತ್ತೇವೆ ಎನ್ನುವವರು ಹೊಸ ಪರಿಹಾರವನ್ನೂ ಹುಡುಕಿ ಹೇಳಬೇಕು. ಭಾಷಣಕಾರರೆಲ್ಲರೂ ಮಾಧ್ಯಮದವರನ್ನು 'ಮಾರಿಕೊಂಡವರು ಎನ್ನುವರಂತೆ' ಟೀಕಿಸಿದರು. ದೇಶವಾಸಿಗಳು ತಿಳಿದುಕೊಳ್ಳಲೇಬೇಕೆಂದು ಒತ್ತಾಯಿಸುವ ಘನಪತ್ರಕರ್ತನಂತೂ ಹಾಸ್ಯದ ಸರಕಾಗಿಬಿಟ್ಟಿದ್ದ. ಈ ಯುವ ನಾಯಕರು ತಪ್ಪು ತೋರಿಸುವವರ ಬಗ್ಗೆ ಆದರಹೊಂದಬೇಕು. ತಪ್ಪಲ್ಲದ ತಪ್ಪಿಗೂ ಗುರಿಯಾಗಿ ತಮ್ಮ ನಿಜ ಗುರಿ ತಲುಪಲು ಉದಾರಿಗಳಾಗಬೇಕು. ತಲುಪಬೇಕಿರುವ ಗಮ್ಯ ದೂರವಿರುವಾಗ ಆತುರ ಥರವಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More