ಹಿಂದಿ ವಿಶ್ವಮಾನ್ಯತೆಗೆ ಸೆಣಸಾಡುತ್ತಿರುವ ಮೋದಿ, ಸ್ತಬ್ಧವಾಗಿ ಕುಳಿತ ಸಿದ್ದು

ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಗೆ ಸ್ಥಾನ ಕಲ್ಪಿಸಲು ಮೋದಿ ಸರ್ಕಾರ ಭಾರಿ ಉತ್ಸುಕತೆ ತೋರುತ್ತಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಅವರಿರಲಿ ರಾಜ್ಯದ ಯಾವೊಬ್ಬರೂ ಪ್ರಶ್ನಿಸಿಲ್ಲ. ಒಂದುವೇಳೆ ತಮಿಳುನಾಡಿನಲ್ಲಿ ಚುನಾವಣೆ ಹೊತ್ತಾಗಿದ್ದರೆ, ಈ ವಿಷಯ ಅಲ್ಲಿನ ಚರ್ಚಾ ವಿಷಯವಾಗುತ್ತಿತ್ತು

ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಪರಿಗಣಿಸುವಂತೆ ನರೇಂದ್ರ ಮೋದಿಯವರ ಕೇಂದ್ರದ ಬಿಜೆಪಿ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಳೆದ ವಾರ ಹೇಳಿದ್ದಾರೆ.

ತಮ್ಮ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸುತ್ತಿದೆ. ಆದರೆ, ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ, ಯಾವುದೇ ಒಂದು ಭಾಷೆಯನ್ನು ಅದರ ಅಧಿಕೃತ ಭಾಷೆಯಾಗಿ ಪರಿಗಣಿಸಲು, ಒಟ್ಟು ಸದಸ್ಯ ರಾಷ್ಟ್ರಗಳ ಪೈಕಿ ಮೂರನೇ ಒಂದರಷ್ಟು ದೇಶಗಳ ಬೆಂಬಲ ಬೇಕಾಗುತ್ತದೆ. ಜೊತೆಗೆ, ಆ ಪ್ರಕ್ರಿಯೆಗೆ ತಗಲುವ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಹಿಂದಿಗೆ ಅಂತಹ ಗೌರವ ಸಿಗುವುದೇ ಆದರೆ, ಕೇಂದ್ರ ಸರ್ಕಾರ ಎಷ್ಟು ವೆಚ್ಚವಾದರೂ ಭರಿಸಲು ಸಿದ್ಧ ಎಂದು ಸಚಿವೆ ಹೇಳಿದ್ದಾರೆ. ಆದರೆ, ಪ್ರಶ್ನೆ ಇರುವುದು; ದೇಶದ ೨೨ ಅಧಿಕೃತ ಭಾಷೆಗಳ ಪೈಕಿ ಹಿಂದಿಯನ್ನು ಮಾತ್ರ ಏಕೆ ಕೇಂದ್ರದ ಬಿಜೆಪಿ ಸರ್ಕಾರ ವಿಶ್ವಸಂಸ್ಥೆಯ ಮುಂದಿಟ್ಟಿದೆ ಎಂಬುದು.

ಕನ್ನಡವೂ ಸೇರಿದಂತೆ ೨೨ ಭಾಷೆಗಳು ದೇಶದ ಅಧಿಕೃತ ಭಾಷೆಗಳು ಎಂದು ನಮ್ಮ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ಹಿಂದಿಯೂ ಸೇರಿದಂತೆ ಯಾವುದೇ ಭಾಷೆ ‘ರಾಷ್ಟ್ರೀಯ ಭಾಷೆ’ಯಲ್ಲ ಮತ್ತು ಹಿಂದಿಯೊಂದೇ ದೇಶದ ‘ಅಧಿಕೃತ ಭಾಷೆ’ ಎಂಬ ಕಾನೂನು ಮಾನ್ಯತೆ ಕೂಡ ಇಲ್ಲ. ಹಾಗಿರುವಾಗ, ಉತ್ತರಭಾರತೀಯ ಬಹುತೇಕರ ಭಾಷೆ ಮತ್ತು ಕೇಂದ್ರದಲ್ಲಿ ಅಧಿಕಾರಸ್ಥಾನದಲ್ಲಿ ಪ್ರಭಾವ ಹೊಂದಿರುವ ಜನರ ನುಡಿ ಎಂಬ ಕಾರಣಕ್ಕೆ ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಸಲು ಪ್ರಯತ್ನಿಸುವುದು ದೇಶದ ಇತರ ಭಾಷೆಗಳ ವಿರುದ್ಧ ಆಳುವ ಸರ್ಕಾರ ತಾರತಮ್ಯ ಮಾಡಿದಂತಲ್ಲವೆ? ಸಂವಿಧಾನದ ವ್ಯಾಪ್ತಿಯನ್ನೂ ಮೀರಿ ಒಂದು ಭಾಷೆಗೆ ಹೆಚ್ಚಿನ ಪ್ರಭಾವ ಮತ್ತು ಪರಿಣಾಮ ತಂದುಕೊಡುವ ಇಂತಹ ಪ್ರಯತ್ನಗಳು ದೇಶದ ಬಹುಭಾಷೆ, ಬಹುಸಂಸ್ಕೃತಿಗೆ ಪೆಟ್ಟು ನೀಡುವ ನಡೆಯಲ್ಲವೆ? ಎಂಬ ಪ್ರಶ್ನೆಗಳು ಕೂಡ ಈಗ ಎದ್ದಿವೆ.

ಪ್ರಮುಖವಾಗಿ ಕೇರಳ ಸಂಸದ ಶಶಿ ತರೂರ್ ಅವರು, ಸರ್ಕಾರದ ಈ ನಡೆಯನ್ನು ಸಂಸತ್ತಿನ ಒಳಗೇ ಪ್ರಶ್ನಿಸಿದ್ದಾರೆ. ತಮಿಳುನಾಡಿನಿಂದಲೂ ಈ ಬಗ್ಗೆ ಪ್ರತಿರೋಧ ವ್ಯಕ್ತವಾಗಿದೆ. ಆದರೆ, ಕರ್ನಾಟಕದ ಯಾವೊಬ್ಬ ಸಂಸದರೂ, ರಾಜ್ಯ ಸರ್ಕಾರವೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಈಗಾಗಲೇ ಹಿಂದಿ ಹೇರಿಕೆಯ ಪ್ರಯತ್ನಗಳು ಮಾರುವೇಷದಲ್ಲಿ ಜಾರಿಯಾಗುತ್ತಿವೆ. ಅದರಲ್ಲೂ ದ್ರಾವಿಡ ಭಾಷೆಗಳ ನೆಲೆಯಾಗಿರುವ ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಹೆಚ್ಚು ಪ್ರಭಾವಿಯಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಗಳು ಆಗಾಗ ದುಸ್ಸಾಹಸಕ್ಕೆ ಕೈಹಾಕುವುದು ಹೊಸತಲ್ಲ. ಆದರೆ, ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯಲ್ಲಿ ನಂಬಿಕೆ ಇಟ್ಟಿರುವ ಹಿಂದೂರಾಷ್ಟ್ರ ನಿರ್ಮಾಣದ ಅಂತಿಮ ಗುರಿಯ ಹಿಂದುತ್ವದ ಅಜೆಂಡಾವನ್ನೇ ತನ್ನ ಸಿದ್ಧಾಂತವಾಗಿಸಿಕೊಂಡಿರುವ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವಾಗ; ಅದರಲ್ಲೂ, ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರದಲ್ಲಿರುವಾಗ, ಹಿಂದಿ ಹೇರಿಕೆಯ ಪ್ರಯತ್ನಗಳು ಇನ್ನಷ್ಟು ಬಿಡುಬೀಸಾಗಿ ನಡೆಯುತ್ತವೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಸಾಲುಸಾಲು ನಿದರ್ಶನಗಳಿವೆ.

ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹಿಂದಿ ಭಾಷೆಯ ಮೇಲೆ ಏಕೆ ಅಷ್ಟು ಪ್ರೀತಿ ಎಂಬುದಕ್ಕೂ, ಏಕಭಾಷೆಯ ಮೂಲಕ ಏಕ ಸಂಸ್ಕೃತಿಯನ್ನೂ, ಏಕ ಧರ್ಮವನ್ನೂ ಹೇರುವುದು ಸುಲಭ ಮತ್ತು ಸುಲಲಿತ ಎಂಬುದೇ ಕಾರಣ ಎಂಬುದು ಗುಟ್ಟೇನೂ ಅಲ್ಲ. ಜೊತೆಗೆ, ಹಿಂದೂರಾಷ್ಟ್ರ ಪರಿಕಲ್ಪನೆಯಲ್ಲಿ ಹಿಂದಿ ಭಾಷೆಗೆ ಇರುವ ಪ್ರಾಶಸ್ತ್ಯ ಕೂಡ ಮತ್ತೊಂದು ಕಾರಣ. ಆ ಕಾರಣದಿಂದಾಗಿಯೇ ಹಿಂದುತ್ವವಾದಿಗಳು ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದೂ, ದೇಶದ ಅಧಿಕೃತ ಭಾಷೆ ಎಂದೂ ಮತ್ತೆಮತ್ತೆ ಹೇಳುವ ಮೂಲಕ ಜನಸಾಮಾನ್ಯರಲ್ಲಿ ಹುಸಿ ಭ್ರಮೆಯನ್ನು ಬಿತ್ತುವ ಪ್ರಯತ್ನ ನಡೆಸುತ್ತಿರುತ್ತಾರೆ. ಜೊತೆಗೆ, ಇದೀಗ ಹಿಂದಿ ಭಾಷೆಯೊಂದಿಗೆ ರಾಷ್ಟ್ರೀಯವಾದ ಮತ್ತು ದೇಶಭಕ್ತಿಯನ್ನೂ ತಳಕು ಹಾಕುವ ಹುನ್ನಾರ ಕೂಡ ನಡೆಯುತ್ತಿದೆ. ಹಾಗಾಗಿ. ಹಿಂದಿಯನ್ನು ವಿರೋಧಿಸುವುದು ಎಂದರೆ ಈಗ, ರಾಷ್ಟ್ರೀಯವಾದವನ್ನೂ ವಿರೋಧಿಸಿದಂತೆ, ರಾಷ್ಟ್ರಪ್ರೇಮವನ್ನೂ ವಿರೋಧಿಸಿದಂತೆ ಎಂಬ ಸ್ಥಿತಿ ಇದೆ. ಹಿಂದಿ ವಿರೋಧಿಗೂ ದೇಶದ್ರೋಹಿಯ ಪಟ್ಟ ಕಟ್ಟುವ ಪರಿಸ್ಥಿತಿ ಕೂಡ ಇದೆ.

ಆ ಹಿನ್ನೆಲೆಯಲ್ಲೇ, ಹಿಂದುತ್ವ ಒಲವಿನ ಸರ್ಕಾರಗಳು ಅಧಿಕಾರಕ್ಕೆ ಬಂದಾಗೆಲ್ಲಾ ಹಿಂದಿ ಹೇರಿಕೆಯ ಪ್ರಯತ್ನಗಳು ಬಲಗೊಳ್ಳುತ್ತವೆ. ಆದರೆ, ದ್ರಾವಿಡ ಭಾಷೆಗಳ ಪ್ರಭಾವದ ತಮಿಳುನಾಡು, ಕೇರಳ ಮತ್ತು ಕೆಲವೊಮ್ಮೆ ಕರ್ನಾಟಕದಿಂದಲೂ ಅಂತಹ ಪ್ರಯತ್ನಗಳಿಗೆ ಪ್ರಬಲ ಪ್ರತಿರೋಧ ವ್ಯಕ್ತವಾಗುವುದು ಸಾಮಾನ್ಯ. ಆದರೆ, ಈ ಬಾರಿ ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಸುವ ಕುರಿತು ಸರ್ಕಾರ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಹೊತ್ತಿಗೆ, ಸಂವಿಧಾನದ ಆಶಯಕ್ಕೆ ವಿರುದ್ಧವಾದ ಅಂತಹ ನಡೆ ಕನ್ನಡಿಗರ ಪಾಲಿಗೆ ಇನ್ನೂ ಆಘಾತ ತಂದಿಲ್ಲ.

ಚುನಾವಣೆಯ ಹೊಸ್ತಿಲಲ್ಲಿ; ಕನ್ನಡ ಧ್ವಜದ ವಿಷಯ ಮುಂದೆ ಮಾಡಿ ತಮ್ಮ ಕನ್ನಡತನ ಮೆರೆದ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ, ಕೇಂದ್ರ ಬಿಜೆಪಿ ಸರ್ಕಾರದ ಈ ಹಿಂದಿ ಪ್ರೀತಿಯನ್ನು ಪ್ರಶ್ನಿಸುತ್ತಿಲ್ಲ. ಕನ್ನಡಪರ ಆಡಳಿತಗಾರ ಎಂದು ತಮ್ಮನ್ನು ತಾವು ಬಣ್ಣಿಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರೂ, ಈ ಬಗ್ಗೆ ಚಕಾರವೆತ್ತಿಲ್ಲ. ಬಹುಶಃ ತಮಿಳುನಾಡಿನಲ್ಲಿ ಆಗಿದ್ದರೆ, ಈ ವಿಷಯ ಅಲ್ಲಿನ ಚುನಾವಣೆಯ ಪ್ರಮುಖ ಚರ್ಚಾ ವಿಷಯವಾಗಿ ಬಿಡುತ್ತಿತ್ತು ಮತ್ತು ಆ ಕುರಿತ ರಾಜಕೀಯ ಪಕ್ಷಗಳ ನಿಲುವಿನ ಮೇಲೆಯೇ ಅವರ ಚುನಾವಣಾ ಭವಿಷ್ಯವೂ ನಿರ್ಧಾರವಾಗುತ್ತಿತ್ತು.

ಆದರೆ, ಕರ್ನಾಟಕದಲ್ಲಿ ಮಾತ್ರ ಇಂತಹ ಗಂಭೀರ ವಿಷಯ ಕನಿಷ್ಟ ಸಾರ್ವಜನಿಕ ಚರ್ಚೆಗೂ ಗ್ರಾಸವಾಗಿಲ್ಲ. ರಾಜ್ಯದ ಬಿಜೆಪಿಯವರು ಕೇಂದ್ರದ ತಮ್ಮದೇ ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ ಮತ್ತು ಮೂಲತಃ ಮಾನಸಿಕವಾಗಿ ಅವರು ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿಯ ಸಿದ್ಧಾಂತಕ್ಕೆ ಬದ್ಧರಾಗಿರುವ ಜನ. ಹಾಗಾಗಿಯೇ ಅವರು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥರನ್ನು ಕರೆಸಿ, ಅವರಿಂದ ಹಿಂದಿಯಲ್ಲೇ ಭಾಷಣ ಬಿಗಿಸಿಯೂ ಸೈ ಎನಿಸಿಕೊಳ್ಳುತ್ತಾರೆ. ಆದ್ದರಿಂದ, ಅವರಿಂದ ಕನ್ನಡಿಗರು ಈ ವಿಷಯದಲ್ಲಿ ಏನನ್ನೂ ನಿರೀಕ್ಷಿಸಲಾಗದು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮೌನವನ್ನು ಅವರ ಅರಿವಿನ ಕೊರತೆ ಎಂದು ಭಾವಿಸಬೇಕೇ ಅಥವಾ ಜಾಣ ಕುರುಡುತನ ಎಂದು ಭಾವಿಸಬೇಕೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಇದನ್ನೂ ಓದಿ : ಕನ್ನಡ ಕಟ್ಟುವ ಹತ್ತು ಐಡಿಯಾ | ಗ್ರಂಥಾಲಯಗಳಿಗೆ ಹೊಸ ರೂಪ ಸಿಗಲಿ

ಇನ್ನು ಕನ್ನಡ ಸಂಘಟನೆಗಳಂತೂ ಈ ವಿಷಯದಲ್ಲಿ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ನಮ್ಮ ಸಮಸ್ಯೆ ಇರುವುದು; ನಮ್ಮ-ನಮ್ಮಲ್ಲೇ ಕಿತ್ತಾಡಿಕೊಳ್ಳುತ್ತಾ, ಬಣ ಜಗಳದಲ್ಲಿ ಹೊರಳಾಡುತ್ತಾ, ಧ್ವಜದ ಬಣ್ಣ, ನಾಡಗೀತೆಯ ಉದ್ದದ ಬಗ್ಗೆ ವರ್ಷಗಟ್ಟಲೆ ಬಡಿದಾಡುತ್ತಾ ಕಾಲಕಳೆಯುವುದರಲ್ಲಿ; ಅಷ್ಟರಲ್ಲಿ ನಮಗೇ ಗೊತ್ತಿಲ್ಲದಂತೆ ನೆತ್ತಿಯ ಮೇಲೆ ಮತ್ತೊಂದು ಧ್ವಜ ಸ್ಥಾಪನೆಯಾಗಿರುತ್ತದೆ, ಮತ್ತೊಂದು ಗೀತೆ ಮೊಳಗತೊಡಗುತ್ತದೆ ಎಂಬ ಎಚ್ಚರ ಮರೆತಿರುವುದರಲ್ಲಿ.

ವಿಶ್ವಸಂಸ್ಥೆಯ ಅಧಿಕೃತ ಭಾಷೆಯ ಪಟ್ಟಿಗೆ ಹಿಂದಿ ಸೇರಿಸಲು ಕೇಂದ್ರ ಸರ್ಕಾರ, ಒಟ್ಟು ೧೯೩ ದೇಶಗಳ ಪೈಕಿ ಕನಿಷ್ಟ ೧೨೯ ದೇಶಗಳ ಬೆಂಬಲ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ. ಆ ಪ್ರಕ್ರಿಯೆಯಲ್ಲಿ ಸರ್ಕಾರ, ಯಶ ಪಡೆಯುವುದೇ ಎಂಬುದನ್ನು ಕಾದುನೋಡಬೇಕಿದೆ. ಆದರೆ, ಸಂವಿಧಾನದ ೮ನೇ ಪರಿಚ್ಛೇದದಲ್ಲಿರುವ ಎಲ್ಲಾ ೨೨ ಭಾಷೆಗಳಿಗೂ ಸಮಾನ ಸ್ಥಾನಮಾನ, ಪ್ರಾಶಸ್ತ್ಯ ನೀಡುವ ಸಂವಿಧಾನಿಕ ಬದ್ಧತೆಯನ್ನು ಮೀರಿ ಕೇಂದ್ರ ಸರ್ಕಾರ ಇಟ್ಟಿರುವ ಈ ಹೆಜ್ಜೆಯನ್ನು ಪ್ರಶ್ನಿಸುವ ಹೊಣೆಗಾರಿಕೆಯನ್ನು ಕನ್ನಡದ ಪ್ರಾತಿನಿಧಿಕ ಸರ್ಕಾರ ಮತ್ತು ಸಿಎಂ ಮೆರೆಯಬೇಕಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More