ಎಡಗೈv/s ಬಲಗೈ ನಡುವೆ ಬರಿಗೈ! ಅಪ್ರಕಟಿತ ವರದಿಯ ಸುಳಿಯಲ್ಲಿ ಏನೆಲ್ಲಾ ಹೋರಾಟ!

ನ್ಯಾ. ಸದಾಶಿವ ಆಯೋಗ ಮತ್ತು ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಜಾತೀವಾರು ಸಮೀಕ್ಷೆಯನ್ನು ಸರ್ಕಾರ ತುರ್ತಾಗಿ ಬಿಡುಗಡೆ ಮಾಡಬೇಕಿದೆ. ಒಳಮೀಸಲಾತಿ ಅಥವಾ ಒಳ ವರ್ಗೀಕರಣದ ಒಳಾರ್ಥ ತಿಳಿಯಲು ಇವೆರಡೂ ವರದಿಗಳು ಸಹಾಯಕವಾಗಲಿವೆ

ಆಯೋಗವೊಂದರ ಅಪ್ರಕಟಿತ ವರದಿಯೊಂದರ ಸುಳಿಯಲ್ಲಿ ಬಿದ್ದು ಏನೆಲ್ಲಾ ಹೋರಾಟ, ರಾಜಕಾರಣ, ಕೆಸರೆರಚಾಟ ಮುಂತಾದ ಗೊಂದಲಗಳಲ್ಲಿ ಹೇಗೆ ಮುಳುಗೇಳಬಹುದು ಎನ್ನಲಿಕ್ಕೆ ನ್ಯಾ.ಸದಾಶಿವ ಆಯೋಗದ ವರದಿಯ ಮೇಲಿನ ಕಂಪನಗಳೇ ತಾಜಾ ಉದಾಹರಣೆ!

೨೦೦೫ರ ಸೆಪ್ಟಂಬರ್ ೨೫ರಂದು ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ಅಂದಿನ ಕಾಂಗ್ರೆಸ್ ಸರ್ಕಾರ ರಚಿಸಿತು. ಕರ್ನಾಟಕದ ಪರಿಶಿಷ್ಟ ಜಾತಿಗಳಿಗೆ ಸಾಂವಿಧಾನಿಕ ಸೌಲಭ್ಯ ಹಾಗೂ ಅವುಗಳ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸರ್ಕಾರದ ಆದೇಶವಾಗಿತ್ತು. ನ್ಯಾ.ಸದಾಶಿವ ಆಯೋಗ ೬ ವರ್ಷ ೮ ತಿಂಗಳ ಬಳಿಕ ಸುಮಾರು ೨೦೦ ಪುಟಗಳ ವರದಿಯನ್ನು ಮುಖ್ಯಮಂತ್ರಿಗಳಾಗಿದ್ದ ಸದಾನಂದಗೌಡರಿಗೆ ಸಲ್ಲಿಸಿತು. ಸದರಿ ವರದಿ ತೆರೆದ ವರದಿಯಾಗಿರಲಿಲ್ಲ. ನ್ಯಾ.ಸದಾಶಿವರವರು ಮುಖ್ಯಮಂತ್ರಿ ಸದಾನಂದಗೌಡರಿಗೆ ವರದಿ ಸಲ್ಲಿಸಿದಾಗ ವರದಿಯ ಕೆಲವು ಮುಖ್ಯಾಂಶಗಳನ್ನು ಎರಡು ಪುಟಗಳಲ್ಲಿ ಪತ್ರಿಕಾ ಪ್ರಕಟಣೆಯ ರೂಪದಲ್ಲಿ ನೀಡಿದ್ದರು.

ಈ ಸಣ್ಣ ನೋಟ್ ಪ್ರಕಾರ ಪರಿಶಿಷ್ಟ ಜಾತಿಯ ೧೦೧ ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಶೇ.೧೫ರಷ್ಟು ಮೀಸಲನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ನ್ಯಾ.ಸದಾಶಿವ ಶಿಫಾರಸ್ಸು ಮಾಡುತ್ತಾ ಮುಂದುವರೆದು.

ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.೧೫ ರಷ್ಟಿರುವ ಮೀಸಲು ಹಾಗೂ ಸರಕಾರಿ ಸೌಲಭ್ಯವನ್ನು ಜನಸಂಖ್ಯೆಗೆ ಆಧಾರವಾಗಿ ಹಂಚಿಕೆ ಮಾಡಬೇಕು.

ಶೇ ೩೩.೪ ರಷ್ಟಿರುವ ಎಡಗೈ ಸಮುದಾಯಕ್ಕೆ(ಮಾದಿಗ, ದಂಡೂರ) ಶೇ.೬, ಶೇ.೩೨ ರಷ್ಟಿರುವ ಬಲಗೈ (ಛಲವಾದಿ, ಹೊಲೆಯ) ಸಮುದಾಯಕ್ಕೆ ಶೇ.೫, ಶೇ.೨೩.೬೪ ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ.೩, ಶೇ.೪.೬೫ ರಷ್ಟಿರುವ ಇತರೆ ಪರಿಶಿಷ್ಟರಿಗೆ ಶೇ.೧ ರಷ್ಟು ಮೀಸಲಾತಿ ಕಲ್ಪಿಸಬಹುದು.

ದಲಿತರಲ್ಲಿ ಅತ್ಯಂತ ದಯನೀಯವಾಗಿ ಬದುಕುತ್ತಿರುವವರು ಇದ್ದಾರೆ. ಎಲ್ಲದನ್ನು ಒಂದೇ ಚೌಕಟ್ಟಿನಲ್ಲಿ ನೋಡುವುದಕ್ಕಿಂತ ಆರ್ಥಿಕ, ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಬೇಕು. ಇದರಿಂದ ಸಾಮಾಜಿಕ ನ್ಯಾಯದ ಆಶಯ ಈಡೇರಲಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಸರಾಸರಿ ಜನರಿಗೆ ಸರಕಾರಿ ಸೌಲಭ್ಯ ಸಮರ್ಪಕವಾಗಿ ತಲುಪಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅನುಷ್ಠಾನ ಮೇಲುಸ್ತುವಾರಿಗೆ ಆದ್ಯತೆ ನೀಡಬೇಕು ಎಂದು ಹೇಳುತ್ತಾ... ಸಮೀಕ್ಷೆ ಹೇಗೆ? ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿರುವ ೨೦.೫೪ ಲಕ್ಷ ಕುಟುಂಬಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಾಹಿತಿ ಸಂಗ್ರಹಿಸಲಾಗಿದೆ.೯೬ ಲಕ್ಷ ಮಂದಿ ತಮ್ಮ ಜಾತಿ ತಿಳಿಸಿದ್ದಾರೆ, ೬ ಲಕ್ಷ ಮಂದಿ ಜಾತಿಯನ್ನು ನಮೂದಿಸಲು ಹಿಂದೇಟು ಹಾಕಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶದ ೧,೧೨,೧೮೮ ಕ್ಷೇತ್ರಗಳಲ್ಲಿ ೪೧ ಸಾವಿರ ಮಂದಿಯ ಸಮೀಕ್ಷೆ ನಡೆಸಲಾಗಿದೆ. ೬ ಸಾವಿರ ಮೇಲ್ವಿಚಾರಕರು ಸಹಕರಿಸಿದ್ದಾರೆ.

ದಲಿತ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ, ಜೀವನಮಟ್ಟ, ಮೀಸಲು ಸೌಲಭ್ಯ ಕುರಿತು ಅವರ ಅಭಿಪ್ರಾಯ ತಿಳಿಯಲು ೨೦೨ ಪ್ರಶ್ನೆಗಳನ್ನು ಕೇಳಲಾಗಿತ್ತು. ೨.೫೮ ಲಕ್ಷ ಉದ್ಯೋಗಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಒಟ್ಟು ಸಮೀಕ್ಷೆಗೆ ೧೨ ಕೋಟಿ ರೂ. ವೆಚ್ಚಮಾಡಲಾಗಿದೆ. ಎಂದು ಒಂದಷ್ಟು ವಿವರಗಳನ್ನು ನೀಡುತ್ತಾ ಮುಂದುವರೆದು ಭೂಒಡೆತನ ಪ್ರಮಾಣ ಶೇ.೫ ರಷ್ಟು ಮಾತ್ರ ಎಂದು ಹೇಳುತ್ತಾ. ದಲಿತ ಸಮುದಾಯದಲ್ಲಿ ಇಂದಿಗೂ ಚೋಮನ ಮಕ್ಕಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ, ರಾಜ್ಯದ ೬ ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟರ ಸಂಖ್ಯೆ ೧ ಕೋಟಿಗೂ ಹೆಚ್ಚಿರಬಹುದೆಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಕೃಷಿ ಭೂಮಿ ಇದೆಯೇ ಎಂದು ಕೇಳಲಾಗಿತ್ತು. ಈ ಪೈಕಿ ಎಡಗೈನಲ್ಲಿ ೧.೫೫, ೮೧೫ ಮಂದಿ, ಬಲಗೈನಲ್ಲಿ ೧,೮೪,೮೧೬, ಸ್ಪೃಶ್ಯರಲ್ಲಿ ೧,೩೭,೭೨೦ ಹಾಗೂ ಇತರೆ ಪರಿಶಿಷ್ಟರಲ್ಲಿ ೧೧,೭೦೦ ಮಂದಿ ಕೃಷಿ ಭೂಮಿ ಹೊಂದಿರುವುದಾಗಿ ತಿಳಿಸಿದ್ದಾರೆ. ಈ ಪೈಕಿ ಖಾಸಗಿ ಒಡೆತನ, ಗುತ್ತಿಗೆ ಭೂಮಿ ಸೇರಿದೆ. ಅಲ್ಲಿಗೆ ಶೇ.೫ ರಷ್ಟು ಮಾತ್ರ ದಲಿತರು ಇಂದಿಗೂ ಕೃಷಿ ಭೂಮಿಯ ಮಾಲಿಕತ್ವ ಹೊಂದಿರುವುದರ ಪತ್ತೆಯಾಗಿದೆ.

ಮಂಡಲ್, ವೆಂಕಟಸ್ವಾಮಿ ವರದಿ ಬಳಿಕ ಪರಿಶಿಷ್ಟ ಸಮುದಾಯದ ಬಗ್ಗೆ ಸಮಗ್ರ ವರದಿ ಸಿದ್ದಪಡಿಸಿದ್ದೇವೆ. ವಿಳಂಬಕ್ಕೆ ೫ ಪುಟಗಳ ವಿವರಣೆ ನೀಡಿದ್ದೇವೆ. ಇದು ಕೇವಲ ೨ ವರ್ಷದ ಕೆಲಸವಾಗಿತ್ತು. ೨೦೧೦ ರ ವರೆಗೂ ಸರಕಾರ ಹಣ ಬಿಡುಗಡೆ ಮಾಡದೇ ಇದ್ದದರಿಂದ ವಿಳಂಬವಾಯಿತು. ಒಳಮೀಸಲು ವಿಂಗಡಿಸಿ ರಾಜ್ಯ ಸರಕಾರ ಇದನ್ನು ಜಾರಿ ಮಾಡಿದರೆ ಸುಪ್ರೀಂ ಕೊರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಅಸಿಂಧುವಾಗುತ್ತದೆ. ಹಾಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮೇಲ್ಕಂಡಂತೆ ನ್ಯಾ.ಸದಾಶಿವರವರು ತಮ್ಮ ನೋಟ್‌ನಲ್ಲಿ ತಿಳಿಸಿರುವುದನ್ನು ಬಿಟ್ಟರೆ, ಮೇಲಿನ ಈ ಎಲ್ಲಾ ಅಂಶಗಳಿಗೆ ಪುಷ್ಠೀಕರಿಸುವಂತಹ ದಾಖಲೆಗಳು, ಪುರಾವೆಗಳು ಮತ್ತು ಸಮಜಾಯಿಶಿಗಳು ೨೦೦ ಪುಟದ ವರದಿಯಲ್ಲಿ ಹೇಗೆ ವಿಶ್ಲೇಷಿಸಲಾಗಿದೆ ಎನ್ನಲಿಕ್ಕೆ ಮುಚ್ಚಿದ ವರದಿಯನ್ನು ತೆರೆದು ನೋಡಬೇಕಿದೆ.

ಮೇಲಿನ ಅಸ್ಪಷ್ಟ ಅಂಶಗಳನ್ನೇ ಇಟ್ಟುಕೊಂಡು ಇಂದು ಎಡಗೈ, ಬಲಗೈ, ಮದ್ಯಗೈ ಹಾಗೂ ಬರಿಗೈಗಳು ಬಡಿದಾಡುತ್ತಿವೆ. ನ್ಯಾ.ಸದಾಶಿವ ಆಯೋಗದ ವರದಿಯ ಗೊಂದಲಗಳ ಆಧಾರದ ಮೇಲೆ ಒಳಮೀಸಲಾತಿಯ ಪ್ರಶ್ನೆಗಳೇ ಇಂದು ಪ್ರಖರವಾಗಿ ಉರಿಯುತ್ತಿವೆ!

ಒಳಮೀಸಲಾತಿಯ ಅನ್ನಲಿಕ್ಕಿಂತಲೂ ಇದನ್ನು ಪುನರ್‌ವರ್ಗೀಕರಣ ಎನ್ನಬಹುದೇನೋ, ಆದರೂ ಈ ಪ್ರಶ್ನೆ ಬಂದಾಗ ಇದು ಕೇವಲ ಪರಿಶಿಷ್ಟ ಜಾತಿಗೇ ಮಾತ್ರ ಮೀಸಲಿಲ್ಲ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳಲ್ಲೂ ಒಳವರ್ಗೀಕರಣಮಾಡಬೇಕಾದ ಅನಿವಾರ್ಯತೆಯ ತುರ್ತಿದೆ. ಈ ಹಿಂದೆ ಮಾಡಿದ ಪಟ್ಟಿಗಳು ಅತ್ಯಂತ ಅವೈಜ್ಞಾನಿಕ ಪಟ್ಟಿಗಳಾಗಿದ್ದು. ಈ ಪಟ್ಟಿಗಳಿಗೆ ತಮ್ಮತಮ್ಮ ಜಾತಿಗಳನ್ನು ತುಂಬಲು ಅಂದಿನ ಆಯೋಗಗಳಿಗಿಂತಲೂ ಅಂದಿನ ಪ್ರತಿಷ್ಠಿತ ರಾಜಕೀಯ ನಾಯಕರ ಕೈವಾಡಗಳಿದ್ದಂತಿದೆ. ಯಾಕೆಂದರೆ ಈ ಪಟ್ಟಿಗಳನ್ನು ಪರಿಶೀಲಿಸಿದಾಗ ದೊಡ್ಡ ಮೀನು, ಸಣ್ಣ ಮೀನು, ಅತಿ ಸಣ್ಣ ಮೀನುಗಳನ್ನೆಲ್ಲಾ ಸೇರಿಸಿ ಪಟ್ಟಿಮಾಡಿದಂತಿದೆ. ಈ ಕಾರಣಕ್ಕೆ ಇಲ್ಲಿನ ಪಟ್ಟಿಗಳಲ್ಲಿರುವ ದೊಡ್ಡ ಮೀನುಗಳೇ ಈವರೆಗೂ ಎಲ್ಲವನ್ನು ಕಬಳಿಸುತ್ತಿರುವಂತೆ ಕಾಣುತ್ತಿದೆ!

ಇಂದು ಈ ಸಾಮಾಜಿಕ ಅನ್ಯಾಯದ ವಿರುದ್ಧ ದೊಡ್ಡ ಸಮುದಾಯವಾದ ಮಾದಿಗರು ಧ್ವನಿ ಎತ್ತಿರಬಹುದು ಆದರೆ ಈ ಧ್ವನಿಗೆ ಬೆಂಬಲವಾಗಿ ಅನೇಕ ಅಸಹಾಯಕ, ಧ್ವನಿಯಿಲ್ಲದ ಸಮುದಾಯಗಳು ಮಾದಿಗರ ಹಿಂದಿವೆ ಎನ್ನುವುದನ್ನು ಮರೆಯಬಾರದು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ೧೦೧ ಜಾತಿ, ಉಪಜಾತಿಗಳಿದ್ದರೂ ನಮಗೆ ಪ್ರಮುಖವಾಗಿ ಕಾಣುವುದು ಹೊಲೆಯ, ಮಾದಿಗ, ಲಂಬಾಣಿ, ಬೋವಿಗಳಷ್ಟೇ. ಆದರೆ ಇಲ್ಲಿ ಹೊಲೆಯರಲ್ಲಿನ ಉಪಜಾತಿಗಳು, ಮಾದಿಗರಲ್ಲಿನ ಉಪಜಾತಿಗಳೇ ಪ್ರಮುಖವಾಗಿವೆ. ದುರಂತವೆಂದರೆ ಪರಿಶಿಷ್ಟ ಜಾತಿಗಳನ್ನು ಗುರುತಿಸುವಾಗ ಅಸ್ಪೃಶ್ಯತೆ ಪ್ರಮುಖ ಮಾನದಂಡವಾಗಬೇಕು ಆದರೆ ಈ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳನ್ನು ಹೇಗೆ ಸೇರಿಸಲಾಯಿತೋ ಅರ್ಥವಾಗುತ್ತಿಲ್ಲ! ಸ್ಪೃಶ್ಯರಲ್ಲಿ ಅಪಾರ ಬಡತನವಿದೆ ಅವರಿಗೆ ಮೀಸಲಾತಿ ಸೌಲಭ್ಯದ ಅವಶ್ಯಕತೆ ಖಂಡಿತ ಇದೆ. ಇದರಿಂದಾಗಿ ಅವರನ್ನು ಒಂದು ಪಟ್ಟಿಮಾಡಿ ಸಾಕಷ್ಟು ಮೀಸಲಾತಿ ನೀಡಬೇಕಾದುದೇನೋ ನಿಜ ಆದರೆ ಅಸ್ಪೃಶ್ಯರ ಪಟ್ಟಿಯಲ್ಲಿ ಸ್ಪೃಶ್ಯರನ್ನು ಇಟ್ಟಿರುವುದು ಅವೈಜ್ಞಾನಿಕವಾದುದು. ಅದೇ ರೀತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲೂ ೪೯ ಜಾತಿಗಳು, ೫೧ ಉಪಜಾತಿ ಅಥವಾ ಪರ್ಯಾಯ ಪದಗಳಿವೆ ಆದರೆ ಈ ಪಟ್ಟಿಯಲ್ಲಿರುವ ಕೊರಗ, ಹಸಲ, ಯರವ, ತೋಡ, ಕಾಡುಕುರುಬ, ಜೇನುಕುರುಬರೊಂದಿಗೆ ಅತ್ಯಂತ ದೊಡ್ಡ ಸಮುದಾಯ ಹಾಗೂರಾಜಕೀಯ ಪ್ರಾತಿನಿದ್ಯವಿರುವ ನಾಯಕರನ್ನು ಇಟ್ಟಿರುವ ಕಾರಣ ಕೂಡ ಅರ್ಥವಾಗುತ್ತಿಲ್ಲ. ಇಲ್ಲಿಯೂ ಕೂಡ ಇವನ್ನು ಬೇರ್ಪಡಿಸಿ ಮೀಸಲಾತಿ ಕಲ್ಪಿಸಬೇಕಿದೆ.

ಇನ್ನು ಹಿಂದುಳಿದ ವರ್ಗಗಳ ಪ್ರವರ್ಗ ಒಂದರಲ್ಲಿ ಬುಡುಬುಡುಕಿ, ದೊಂಬಿದಾಸ, ಕುಡುಬಿ, ಸಿದ್ದಿಯಂತವರೊಂದಿಗೆ ಗೊಲ್ಲ, ಉಪ್ಪಾರರನ್ನು ಇಟ್ಟಿರುವುದು ಕೂಡ ಪ್ರಶ್ನಾರ್ಹ. ಪ್ರವರ್ಗ 2(a) ನಲ್ಲಂತೂ ಕುರುಬ, ಈಡಿಗರೊಂದಿಗೆ ಸವಿತ, ಮಡಿವಾಳ, ಗಾಣಿಗ, ಜೆಟ್ಟಿ, ತಿಗಳ, ಕುಂಬಾರ, ಕಮ್ಮಾರರಂತಹ ಅತ್ಯಂತ ದುರ್ಬಲರನ್ನು ಇಟ್ಟಿರುವುದು ಕೂಡ ಅಕ್ಷಮ್ಯ; ಪ್ರವರ್ಗ 3(a) ನಲ್ಲಿ ಬಲಿಜ ಕೊಡವರನ್ನು ಒಕ್ಕಲಿಗರೊಂದಿಗೆ, ಪ್ರವರ್ಗ 3(b) ನಲ್ಲಿ ವೀರಶೈವ, ಲಿಂಗಾಯಿತರೊಂದಿಗೆ, ಮರಾಠ, ಜೈನ, ಕ್ರೈಸ್ತರಿಟ್ಟಿರುವುದು ಈ ಎಲ್ಲವನ್ನು ಯಾವ ಮಾನದಂಡದಲ್ಲಿ ಮಾಡಿದರೋ ಅರ್ಥವಾಗುತ್ತಿಲ್ಲ!! ಹಿಂದುಳಿದ ವರ್ಗದ ಪಟ್ಟಿಯಲ್ಲಿ ಪ್ರವರ್ಗ ಒಂದನ್ನು ತೀರಾ ಹಿಂದುಳಿದವರೆಂದು (Most Backward) 2(a) ಮತ್ತು 2(b)) ನಲ್ಲಿರುವುದನ್ನು ಅತೀ ಹಿಂದುಳಿದವರೆಂದು (More Backward) ಎಂದು ಹಾಗೂ 3(a) ಮತ್ತು 3(b) ಅನ್ನು ಹಿಂದುಳಿದವರೆಂದು (Backward) ಎಂದು ಕರೆಯಲಿಕ್ಕೆ ಅನುಸರಿಸಿದ ಮಾನದಂಡಗಳಾದರು ಯಾವುದು? ಇವನ್ನು ಸ್ಪಷ್ಟಪಡಿಸಿಬೇಕಿದೆ.

ಇಲ್ಲಿ ಎಡಗೈನವರು ಮಾಡುತ್ತಿರುವ ಅಪಾದನೆ ಏನೆಂದರೆ ಬಲಗೈನವರು ಹಿಂದಿನಿಂದಲೂ ಅಧಿಕಾರಕ್ಕೆ ಹತ್ತಿರವಿದ್ದುದರಿಂದ ಹೆಚ್ಚು ಸವಲತ್ತುಗಳು ದೊರೆತಿವೆ ಎನ್ನುವುದು. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಇದಕ್ಕೆ ಮೂಲಭೂತವಾಗಿ ಐತಿಹಾಸಿಕ ಕಾರಣಗಳೇ ಢಾಳಾಗಿ ಕಾಣುತ್ತವೆ. ಮುಂಬೈ ಕರ್ನಾಟಕದಲ್ಲಿ ಅದರಲ್ಲೂ ಮಹಾರಾಷ್ಟ್ರ ಪುಣೆ ಪ್ರಾಂತ್ಯದಲ್ಲಿಸಾಮಾಜಿಕ ಪರಿವರ್ತನೆಯ ಚಳುವಳಿ ಅತ್ಯಂತ ಪ್ರಬಾವ ಬೀರಿದ್ದು. ಮಹಾತ್ಮ ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ, ಶಾಹು ಮಹಾರಾಜ್ ಮತ್ತು ಡಾ.ಅಂಬೇಡ್ಕರ್‌ರಂತವರ ಹೋರಾಟಗಳಿಂದಾಗಿ ಆ ಭಾಗದಲ್ಲಿರುವ ಮಹರ್ ಅಥವಾ ಹೊಲೆಯರಿಗೆ ಬಹಳ ಬೇಗ ಈ ಚಳುವಳಿಯ ಫಲಗಳು ದೊರೆತವು. ಅಂತೆಯೇ ಮೈಸೂರು, ಚಾಮರಾಜನಗರ ಭಾಗಗಳಲ್ಲಿ ನಾಲ್ವಡಿಯವರು ತಂದ ಸಾಮಾಜಿಕ ಪರಿವರ್ತನೆಗಳ ಕಾರಣದಿಂದಾಗಿ ಈ ಭಾಗದಲ್ಲಿ ಅತಿ ಹೆಚ್ಚಿರುವ ಹೊಲೆಯ ಸಮುದಾಯಕ್ಕೇ ಅದರ ಪಲಗಳು ದೊರೆತವು. ಅಂತೆಯೇ ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರು ಭಾಗಗಳಲ್ಲಿ ಇಂತಹ ಯಾವುದೇ ಸಾಮಾಜಿಕ ಪರಿವರ್ತನೆಯ ಚಳುವಳಿಗಳ ಪ್ರಭಾವ ಇಲ್ಲದ ಪರಿಣಾಮ ಆ ಭಾಗದಲ್ಲಿ ಅತಿ ಹೆಚ್ಚಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ಪರಿವರ್ತನೆಯ ಚಳುವಳಿಯು ತಟ್ಟಲಿಲ್ಲ, ಅದರ ಫಲಗಳು ಮುಟ್ಟಲಿಲ್ಲ. ಈ ಕಾರಣಕ್ಕೂ ಈ ಸಮುದಾಯ ವಂಚಿತವಾಯಿತು.

ಇದೀಗ ಸಿದ್ದರಾಮಯ್ಯನವರ ಮಹತ್ವಕಾಂಕ್ಷಿ ಯೋಜನೆ ಜಾತಿ ಸಮೀಕ್ಷೆ (ಸಾಮಾಜಿಕ-ಶೈಕ್ಷಣಿಕ) ಯನ್ನು ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಆಯೋಗಮಾಡಿ ಮುಗಿಸಿದಂತಿದೆ. ಇದು ಸರ್ವಜನ ಸಮೀಕ್ಷೆಯೂ ಆಗಿರುವುದರಿಂದ ೧೯೩೧ರ ನಂತರ ದೇಶದಲ್ಲಿ ನಡೆದಈ ಸಮೀಕ್ಷೆ ಕರ್ನಾಟಕದಲ್ಲಿ ಸವಲತ್ತು ಹಂಚಿಕೆಯ ಹೆಚ್ಚು ಒಳನೋಟಗಳನ್ನು ನೀಡಬಹುದು,ಯಾಕೆಂದರೆ ಈ ಸಮೀಕ್ಷೆಗಾಗಿ ಆಯೋಗ ತೆಗೆದುಕೊಂಡಿರಬಹುದಾದ ದ್ವಿತೀಯು ಮೂಲದ ಮಾಹಿತಿ (Secondary Source of Information)ನಿಂದಾಗಿ ಈವರೆಗೂ ಮೀಸಲಾತಿ ಅಥವಾ ಸರ್ಕಾರಿ ಸವಲತ್ತು ಪಡೆದ ಯಾವಯಾವ ಸಮುದಾಯ ಎಷ್ಟೆಷ್ಟು ಪಡೆದಿದೆ? ಯಾವಯಾವ ಸಮುದಾಯ ಈವರೆಗೂ ಸವಲತ್ತನ್ನೇ ಪಡೆದಿಲ್ಲ? ಯಾವ ಸಮುದಾಯದ ತಟ್ಟೆಯಲ್ಲಿ ಯಾವ ಸಮುದಾಯದ ಕೈಯಿದೆ! ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆಯಿದೆ.

ಈಗ ಸರ್ಕಾರ ತುರ್ತಾಗಿಮಾಡಬೇಕಾದ ಕೆಲಸವೆಂದರೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಬಿಡುಗಡೆಗೊಳಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕಿದೆ ಅಂತೆಯೇ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಜಾತಿವಾರು ಸಮೀಕ್ಷೆ (ಸಾಮಾಜಿಕ-ಶೈಕ್ಷಣಿಕ)ಯನ್ನು ಬಿಡುಗಡೆ ಮಾಡಬೇಕಿದೆ. ಈ ಎರಡು ವರದಿಗಳು ಒಂದಕ್ಕೊಂದು ಪೂರಕವಾಗಿರುವುದರಿಂದ ಒಳಮೀಸಲಾತಿ ಅಥವಾ ಒಳ ವರ್ಗೀಕರಣದ ಒಳಾರ್ಥಗಳನ್ನು ಅರಿಯಲು ಇವೆರಡೂ ವರದಿಗಳು ಸಹಕಾರಿಯಾಗಲಿವೆ.

ದುರಂತವೆಂದರೆ ಈ ವಿಷಯದಲ್ಲಿ ಎಡಗೈ ಮತ್ತು ಬಲಗೈ ಎಂಬ ಅಸ್ಪೃಶ್ಯ ಅಣ್ಣ ತಮ್ಮಂದಿರು ದಾಯಾದಿಗಳಂತೆ ಕಿತ್ತಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಇವರ ನಡುವೆ ಇವರ ಪಟ್ಟಿಗಳಲ್ಲಿದ್ದು ಕಣ್ಣಿಗೆ ಕಾಣದ ಯಾವ ಪಟ್ಟಿಯಲ್ಲೂ ಇರಲಾರದ ಅಲೆಮಾರಿ ಬುಡಕಟ್ಟುಗಳಿಗೆ ಸೇರಿದ ಅನೇಕ ಅಸಹಾಯಕ ಸಮುದಾಯಗಳಿವೆ. ಅನ್ನುವುದನ್ನು ಯಾರೂ ಮರೆಯ ಬಾರದು.

ಇದನ್ನೂ ಓದಿ : ಒಳಮೀಸಲಾತಿ ಜಾರಿಗೆ ಅಡ್ಡಿಯಾದ ವಿದ್ರೋಹಿಗಳ ಮಹಾವಂಚನೆ

ಎಡಗೈ-ಬಲಗೈ ಜಗಳ ಕುರಿತಂತೆ ಕೆಲವು ವರ್ಷಗಳ ಹಿಂದೆ ದೇವನೂರ ಮಹಾದೇವ ಅವರು ಹೇಳಿದ ಒಂದು ಕತೆ ನೆನಪಾಗುತ್ತೆ. ಈಗ ಈ ಕತೆ ಸಾಂಧರ್ಬಿಕ...

ಎಲ್ಲೋ ಎಂದೋ ಓದಿದ ಗಂಡಭೇರುಂಡ ಪಕ್ಷಿಯ ಕಥೆಯು ನನ್ನ ತಲೆಯಲ್ಲಿ ಆಗಾಗ ಹಾರಾಡುತ್ತಿರುತ್ತದೆ. ಆ ಗಂಢಭೇರುಂಡ ಪಕ್ಷಿ ಹಾರುತ್ತ ವಿಹರಿಸಿಕೊಂಡು ಬಂದು ಒಂದು ನದೀ ದಡದಲ್ಲಿ ಕೂತು, ಅದರ ಒಂದು ತಲೆ ಒಂದು ಕಡೆ, ಇನ್ನೊಂದು ತಲೆ ಇನ್ನೊಂದು ಕಡೆ ನೋಡುತ್ತ ಆನಂದಿಸುತಿಹುದು. ಅಷ್ಟರಲ್ಲಿ ಆ ಹರಿಯೋ ನದೀಲಿ ತೇಲುತ್ತ ಒಂದು ಫಲವು ಆ ಪಕ್ಷಿ ನೋಡಿತೋ ಎಂಬಂತೆ ದಡಕ್ಕೆ ಬಂದು ನಿಂತಿತು. ಇದ ಕಂಡ ಆ ಪಕ್ಷಿಯ ಒಂದು ತಲೆಯು ಇನ್ನೇನು ಆ ಫಲವನ್ನು ಕುಕ್ಕಿ ತಿನ್ನಬೇಕು ಅನ್ನುವಷ್ಟರಲ್ಲಿ, ಆ ಪಕ್ಷಿಯ ಇನ್ನೊಂದು ತಲೆಯು ನಿಲ್ಲಿಸು ತಿನ್ನಬೇಡ ಎಂದಿತು. ತೊಗಟೆಗೆ ಕೊಕ್ಕು ಸಿಕ್ಕಿಸಿದ್ದ ಈ ತಲೆಯು, ಸುರಿಯುವ ಜೊಲ್ಲು ಉಗದು ಯಾಕೆ ತಿನ್ನಬಾರದು? ಎಂದು ಕಿಡಿ ಕಿಡಿಯಾಗಿ ಕೇಳಿತು. ಇನ್ನೊಂದು ತಲೆಯು ಇನ್ನಷ್ಟು ಕಿಡಿಯಾಗಿ ಯಾಕೆ ಅಂದರೆ? ನಾನೂ ತಿನ್ನಬಾರದೆ?

ಮೊದಲು ನೋಡಿದ್ದು ನಾನಲ್ಲವೆ?

ನಮ್ಮ ದೇಹ ಒಂದೇ ಅಲ್ಲವೆ?

ದೇಹ ಒಂದೇ ಆದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೆ?

ಹೀಗೆ ವಾಗ್ವಾದ ನಡೆದು ಮೊದಲು ಹಣ್ಣು ಕಂಡ ಆ ತಲೆಯೇ ಪೂರ್ತ ಹಣ್ಣು ತಿಂದಿತು. ಅದು ತಿನ್ನುವುದನ್ನು ನೋಡಲಾಗದೆ ಕಣ್ಣು ಮುಚ್ಚಿಕೊಂಡಿದ್ದ ಈ ತಲೆಯು ಕಣ್ಣು ತೆರೆದರೆ ಕಂಡದ್ದೇನು? ಇನ್ನೊಂದು ಫಲವು ನದೀಲಿ ತೇಲಿಕೊಂಡು ಬರುತಲಿದೆ. ಮೊದಲು ಹಣ್ಣು ತಿಂದಿದ್ದ ಆ ತಲೆಯು ಅದನ್ನು ತಿನ್ನಬೇಡ ವಿಷಫಲ ಎಂದಿತು. ಇದರಿಂದ ಈ ತಲೆಗೆ ಸಂತೋಷವೇ ಆಗಿ ನನ್ನ ಬಾಯಿ ನನ್ನ ತಲೆ, ನಾನು ತಿಂತೇನೆ ನಿಂಗೇನು? ಎಂದಾಗ, ಆ ತಲೆಯು ನೀನೇ ತಿಂದರೂ ನಮ್ಮ ದೇಹ ಒಂದೇ ಅಲ್ಲವೇ? ಅಂದುದಕ್ಕೆ ಈ ತಲೆಯು ದೇಹ ಒಂದಾದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೆ? ಎಂದು ಹಣ್ಣನ್ನು ತಿಂದೇ ತಿಂದಿತು.

ಹೀಗೆ ತಿಂದಾದ ಮೆಲೆ ಇಡೀ ದೇಹಕ್ಕೆ ಬೆಂಕಿ ಕೆಂಡವ ಸುರಿದಂತಾಗಿ ಆ ಉರಿಗೆ ದೇಹ ವಿಲಿ ವಿಲಿ ಒದ್ದಾಡಿ ಮತ್ತು ಕೊನೆಯದಾಗಿ ಆ ಪಕ್ಷಿಯು ಸತ್ತಿತು.

ಪ್ರೀತಿಯ ಸ್ನೇಹಿತರೇ ಕೇಳಿ, ಅಸ್ಪೃಶ್ಯತೆಗೆ ದೇಹ ಒಂದೇ ಆದರೂ ತಲೆ ನೂರೆಂಟು. ಎಡಗೈ, ಬಲಗೈ, ಈ ಎಡಗೈ ಹೆಬ್ಬೆರಳು, ಕಿರುಬೆರಳು, ಬಲ ಹೆಬ್ಬೆರಳು, ಕಿರುಬೆರಳು ಹೀಗೆ ನೂರೆಂಟು. ಸ್ವಾರ್ಥ ದಲಿತ ರಾಜಕಾರಣಿಗಳು ಹೊಣೆಗೇಡಿ ದಲಿತ ನೌಕರರು ತಮ್ಮ ಅಹಃ, ಅಧಿಕಾರಕ್ಕಾಗಿ ಇರುವ ಭಿನ್ನತೆಯನ್ನು ಹೆಚ್ಚಿಸುತ್ತಿರುವರು. ಆದರೆ ನೆನಪಿರಲಿ, ಗಂಡಭೇರುಂಡ ಪಕ್ಷಿಯಂತೆ ಸಾಯುವವರು ಒಟ್ಟಿಗೆ ದೇಹವಾದ ನಾವು. ಕಾಲಾವಕಾಶವಿರುವಾಗಲೇ ಊರಾಚೆ ಬಿದ್ದಿರುವ, ಊರಾಚೆಗೆ ಎಸೆಯಲ್ಪಡುತ್ತಿರುವ ಸಣ್ಣ ಪುಟ್ಟ ಜಾತಿಗಳೊಳಗಿನ ಭಿನ್ನತೆಯನ್ನು ಮೊದಲು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು.

ಈಗ ಗಂಡಭೇರುಂಡ ಕತೆಯು ನಿಮ್ಮ ತಲೆಯೊಳಗೆ ಹಾರಾಡಲಿ...

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More