ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಇಬ್ಬಗೆ ನೀತಿಗೆ ಕೊನೆಮೊದಲೆಲ್ಲಿ?

ಪ್ರಧಾನಿಯಾಗುವುದಕ್ಕೂ ಮುನ್ನ ಏಕ ಬ್ರಾಂಡಿನ ಚಿಲ್ಲರೆ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ವಿರೋಧಿಸಿದ್ದ ಮೋದಿ ಈಗ ತಾವೇ ಪ್ರಧಾನಿಯಾಗಿರುವಾಗ ಇದ್ದಬದ್ದ ನಿರ್ಬಂಧಗಳನ್ನೆಲ್ಲ ತೆಗೆದು ಹಾಕಿದ್ದಾರೆ. ಮೋದಿಯವರ ಇಬ್ಬಗೆ ನೀತಿ ಇದೇ ಮೊದಲನೆಯದೇನಲ್ಲ

ವಿದೇಶಿ ನೇರ ಬಂಡವಾಳ ನೀತಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಬ್ಬಗೆ ನೀತಿ ಅನುಸರಿಸಿದ್ದಾರೆಯೇ? ಮುಖ್ಯಮಂತ್ರಿಯಾಗಿದ್ದಾಗ ಒಂದು ನಿಲವು ಪ್ರಧಾನಿಯಾಗಿದ್ದಾಗ ಒಂದು ನಿಲವು ತಳೆದಿದ್ದಾರೆಯೇ? ಏಕ ಬ್ರಾಂಡ್ ಚಿಲ್ಲರೆ ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಅಂತಹ ವಹಿವಾಟು ನಡೆಸುವವರು ಶೇ.30ರಷ್ಟನ್ನು ದೇಶೀಯ ಉತ್ಪಾದಕರಿಂದ ಖರೀದಿಸಬೇಕು ಎಂಬ ಷರತ್ತನ್ನು ರದ್ದು ಮಾಡುವ ಪ್ರಧಾನಿ ನರೇಂದ್ರಮೋದಿ ಅವರ ನಿರ್ಧಾರ ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಯುಪಿಎ ಸರ್ಕಾರ 2012ರಲ್ಲಿ ಏಕ ಬ್ರಾಂಡಿನ ಚಿಲ್ಲರೆ ಕ್ಷೇತ್ರದಲ್ಲಿ ಸರ್ಕಾರದ ಅನುಮತಿ ಪಡೆದ ನಂತರವಷ್ಟೇ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಲು ಮುಂದಾದಾಗ ಬಿಜೆಪಿ ತೀವ್ರವಾಗಿ ಪ್ರತಿಭಟಿಸಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಮೂಲಕ ಯುಪಿಎ ಸರ್ಕಾರವು ದೇಶವನ್ನು ವಿದೇಶಿಯರಿಗೆ ಮಾರಾಟ ಮಾಡಲು ಮುಂದಾಗಿದೆ ಎಂದು ನರೇಂದ್ರಮೋದಿ ಟೀಕಿಸಿದ್ದರು. ಯುಪಿಎ ನಿರ್ಧಾರವು ಜನ ವಿರೋಧಿ ನೀತಿ ಎಂದೂ ಹೇಳಿದ್ದರು. ಆ ಸಂದರ್ಭದಲ್ಲಿ ಬಿಜೆಪಿಯು ಯುಪಿಎ ಸರ್ಕಾರದ ನಿರ್ಧಾರದ ವಿರುದ್ಧ ಒಂದು ಕಿರು ಹೊತ್ತಿಗೆಯನ್ನು ಪ್ರಕಟಿಸಿತ್ತು. ಅದರಲ್ಲಿ ಯುಪಿಎ ಸರ್ಕಾರದ ನಿಲುವಿನಿಂದಾಗಿ ದೇಶಕ್ಕೆ ಆಗುವ ಅಪಾಯಗಳು ಮತ್ತು ಅನನುಕೂಲತೆಗಳ ಬಗ್ಗೆ ವಿವರಿಸಲಾಗಿತ್ತು. ನರೇಂದ್ರ ಮೋದಿ ಅವರಷ್ಟೇ ಅಲ್ಲದೇ ಹಲವು ಬಿಜೆಪಿ ನಾಯಕರು ಲೇಖನ ಬರೆದಿದ್ದರು.

ನರೇಂದ್ರಮೋದಿ ತಮ್ಮ ಲೇಖನದಲ್ಲಿ ಯುಪಿಎ ಸರ್ಕಾರವನ್ನು ವಿದೇಶಿಯರ ಸರ್ಕಾರ ಎಂದು ಜರೆದಿದ್ದರೆ, ಈಗ ವಿತ್ತ ಸಚಿವರಾಗಿರುವ ಅರುಣ್ ಜೇಟ್ಲಿ ಗ್ರಾಹಕರ ಹಿತಾಸಕ್ತಿಯ ಅಂತ್ಯ ಎಂದು ಬಣ್ಣಸಿದ್ದರು. ಈಗ ವಿದೇಶಾಂಗ ಸಚಿವೆಯಾಗಿರುವ ಸುಷ್ಮ ಸ್ವರಾಜ್ ಅವರು ದ್ರೋಹ ಎಂದು ಟೀಕಿಸಿದ್ದರು. ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ದೇಶದ ಗ್ರಾಹಕರ ಹಿತಾಸಕ್ತಿಗೆ ವಿರೋಧವಾಗಿದ್ದ ಏಕ ಬ್ರಾಂಡ್ ಚಿಲ್ಲರೆ ವಲಯದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯು, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಗ್ರಾಹಕರ ಹಿತಾಸಕ್ತಿಗೆ ಪೂರಕವಾಗಿ ಬಿಟ್ಟಿತೇ? ಅದ್ಯಾವ ತರ್ಕದ ಮೇಲೆ ತಾವೇ ಟೀಕಿಸಿದ್ದ ನಿಲವನ್ನು ಪ್ರಧಾನಿ ನರೇಂದ್ರ ಮೋದಿ ಈಗ ಒಪ್ಪಿಕೊಂಟಿದ್ದಾರೆ? ಪ್ರಧಾನಿ ಹುದ್ದೆಗೆ ಏರಿದ ಕೂಡಲೇ ಏಕಾಏಕಿ ನಿಲವು ನಿರ್ಧಾರಗಳನ್ನು ಬದಲಾಯಿಸಲು ಸಾಧ್ಯವೇ?

ಪ್ರಧಾನಿ ನರೇಂದ್ರ ಮೋದಿ ಹಲವು ವಿಷಯಗಳಲ್ಲಿ ಯು ಟರ್ನ್ ತೆಗೆದುಕೊಂಡಿದ್ದಾರೆ. ಮುಖ್ಯವಾಗಿ ಯುಪಿಎ ಸರ್ಕಾರ ಆಧಾರ್ ಜಾರಿಗೆ ತರಲು ಮುಂದಾದಾದ ಅದನ್ನು ಶತಾಯಗತಾಯ ವಿರೋಧಿಸಿದ್ದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೆಗಾ) ಕೂಡಾ ಮೋದಿಯವರ ತೀವ್ರ ಟೀಕೆಗೆ ತುತ್ತಾಗಿತ್ತು. ಲೋಕಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರಮೋದಿ, ಉದ್ಯೋಗ ಖಾತ್ರಿ ಯೋಜನೆಯು ನಿಮ್ಮ(ಯುಪಿಎ ಸರ್ಕಾರದ) ಭ್ರಷ್ಟಾಚಾರದ ಜೀವಂತ ಉದಾಹರಣೆ ಎಂದು ಟೀಕಿಸಿದ್ದರು.

ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಆಧಾರ್ ಯೋಜನೆಯನ್ನು ವ್ಯಾಪಕವಾಗಿ ವಿಸ್ತರಿಸುತ್ತಿದ್ದಾರೆ. ಆಧಾರ್ ಯೋಜನೆಯು ಭ್ರಷ್ಚಾಚಾರ ತಡೆಯುವ ಏಕೈಕ ಸಾಧನವೆಂಬಂತೆ ಪ್ರತಿಬಿಂಬಿಸುತ್ತಿದ್ದಾರೆ. ಸರ್ಕಾರದ ಎಲ್ಲಾ ಸೇವೆಗಳಷ್ಟೇ ಅಲ್ಲದೇ ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಗೂ ಆಧಾರ್ ಸಂಖ್ಯೆಯನ್ನು ಜೋಡಿಸಲಾಗುತ್ತಿದೆ. ಮನ್ರೇಗಾದಿಂದ ಗ್ರಾಮೀಣ ಪ್ರದೇಶದಲ್ಲಿನ ಉದ್ಯೋಗ ಸೃಷ್ಟಿ ಹೆಚ್ಚಾಗಿದ್ದು, ರೈತರು ಮತ್ತು ಕೃಷಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ವಿಶ್ವಬ್ಯಾಂಕ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳೂ ಶ್ಲಾಘಿಸಿದ ನಂತರ ಆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾರರಂಭಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ವಿರೋಧಿಸಿ ಪ್ರದಾನಿಯಾದ ನಂತರ ಅದನ್ನು ಒಪ್ಪಿಕೊಂಡ ನೀತಿಗಳ ಪಟ್ಟಿ ಇಷ್ಟಕ್ಕೆ ನಿಲ್ಲದು. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರುವುದನ್ನು ಶತಾಯ ಗತಾಯ ನರೇಂದ್ರಮೋದಿ ವಿರೋಧಿಸಿದ್ದರು. 2009ರಲ್ಲಿ ಅಂದಿನ ವಿತ್ತ ಸಚಿವ ಪ್ರಣವ್ ಮುಖರ್ಜಿ ಅವರು ಜಿಎಸ್ಟಿ ರೂಪುರೇಷೆ ಪ್ರಕಟಿಸಿದಾಗಲೇ ಬಿಜೆಪಿ ವಿರೋಧಿಸಿತ್ತು. 2013ರಲ್ಲಿ ಯುಪಿಎ ಸರ್ಕಾರ ಜಿಎಸ್ಟಿ ಜಾರಿಗೆ ತರಲು ಮುಂದಾದಾಗ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ ವಿರೋಧಿಸಿದ್ದರು. ಜಿಎಸ್ಟಿ ಜಾರಿಯಿಂದ ರಾಜ್ಯಕ್ಕೆ ₹14000 ಕೋಟಿ ನಷ್ಟವಾಗುತ್ತದೆ ಎಂದು ಪ್ರತಿಪಾದಿಸಿದ್ದರು.

ಆದರೆ, ಜುಲೈನಲ್ಲಿ ಜಿಎಸ್ಟಿ ಜಾರಿಗೆ ತಂದಾಗ ಅದು ಭಾರತದ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ತೆರಿಗೆ ಸುಧಾರಣೆ ತಂದ ದಿನ ಎಂದು ಬಣ್ಣಿಸಿದ್ದರು. ಯುಪಿಎ ಸರ್ಕಾರ ಜಾರಿಗೆ ತರುವಾಗ ವಿರೋಧಿಸಿದ್ದ ಬಿಜೆಪಿಯೇ ರಾಷ್ಟ್ರವ್ಯಾಪಿ ಜಿಎಸ್ಟಿ ಜಾರಿಯನ್ನು ಹಬ್ಬದೋಪಾದಿಯಲ್ಲಿ ಸಂಭ್ರಮಿಸಿತು. ಅಧಿಕಾರಕ್ಕೆ ಬಂದ ಕೂಡಲೇ ಇಂತಹ ದ್ವಂದ್ವಗಳು, ವೈರುಧ್ಯಗಳು ಅನಿವಾರ್ಯವಾಗುತ್ತವೆಯೇ? ಅಥವಾ ವಿರೋಧ ಪಕ್ಷದಲ್ಲಿದ್ದಾಗ ಕೇವಲ ವಿರೋಧಕ್ಕಾಗಿ ಮಾತ್ರವೇ ವಿರೋಧಿಸುತ್ತಿದ್ದರೇ? ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಗತಿ ಏನು? ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಯುಪಿಎ ಸರ್ಕಾರದ ನೀತಿಗಳನ್ನು ವಿರೋಧಿಸಿ ಮತ ಯಾಚಿಸಿದ ಬಿಜೆಪಿಯನ್ನು ನಂಬಬೇಕೋ? ಅಥವಾ ಅಧಿಕಾರಕ್ಕೆ ಬಂದ ನಂತರ ಯುಪಿಎ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಯೋಜನೆಗಳನ್ನೇ ಜಾರಿಗೆ ತಂದು ಸಂಭ್ರಮಿಸುತ್ತಿರುವ ಬಿಜೆಪಿಯನ್ನು ನಂಬಬೇಕೋ? ರಾಜಕೀಯ ಪಕ್ಷಗಳ ದ್ವಂದ್ವ ನಿಲವುಗಳು ಹುಟ್ಟು ಹಾಕುವ ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಹೇಗೆ?

ಇದನ್ನೂ ಓದಿ : ವಿದೇಶಿ ನೇರ ಬಂಡವಾಳ ಹೂಡಿಕೆಗೆ ತೆರೆದ ಬಾಗಿಲನ್ನು ಮತ್ತಷ್ಟು ಹಿಗ್ಗಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ತ್ವರಿತವಾಗಿ ವಿದೇಶಿ ನೇರಬಂಡವಾಳ ಹೂಡಿಕೆ ನಿಯಮ ನಿರ್ಬಂಧ ಸಡಿಲಿಸಿರುವುದು ಸಲೀಸು ವಹಿವಾಟಿಗೆ ಹೆಚ್ಚಿನ ಅವಕಾಶ ದಕ್ಕಲಿದೆ. ಈ ಹಿಂದೆ ಸಲೀಸು ವಹಿವಾಟು ರಾಷ್ಟ್ರಗಳ ಪೈಕಿ 30 ಅಂಶಗಳಷ್ಟು ಮೇಲ್ದರ್ಜೆಗೆ ಏರಿದ್ದ ಭಾರತವನ್ನು 50 ರಾಷ್ಟ್ರಗಳ ಪಟ್ಟಿಗೆ ತರುವುದು ಮೋದಿಯವರ ಗುರಿ. ಈ ನಿರ್ಧಾರದಿಂದ ಅದು ಸಾಧ್ಯವಾಗಲಿದೆ. ಜತೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿವು ಹೆಚ್ಚಲಿದ್ದು, ಅಪನಗದೀಕರಣ ಮತ್ತು ಜಿಎಸ್‌ಟಿ ಜಾರಿಯಿಂದ ಕುಂಠಿತ ಗೊಂಡಿದ್ದ ಆರ್ಥಿಕ ಚಟುವಟಿಕೆ ಚೇತರಿಸಿಕೊಳ್ಳಲಿದೆ. ಜತೆಗೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿರುವ ಉದ್ಯೋಗ ಸೃಷ್ಟಿಯು ಹೆಚ್ಚಾಗಲಿದೆ ಎಂಬ ಅಂದಾಜು ಕೇಂದ್ರ ಸರ್ಕಾರದ್ದಾಗಿದೆ.

ಏಕಬ್ರಾಂಡಿನ ಚಿಲ್ಲರೆ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವ ಕ್ರಮವು ಬಿಜೆಪಿಯ ವಂಚನೆ, ಅಪ್ರಮಾಣಿಕತೆ ಮತ್ತು ಸಯಮಸಾಧಕತನವನ್ನು ಬಹಿರಂಗಪಡಿಸಿದೆ, ಪ್ರತಿಪಕ್ಷದಲ್ಲಿದ್ದಾಗ ವಿರೋಧಿಸಿ ಅಧಿಕಾರಗಳಿಸಿ ತನ್ನ ನಿಜಬಣ್ಣ ಬಯಲು ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಶೇ.30ರಷ್ಟು ದೇಶೀಯ ಖರೀದಿ, ವಹಿವಾಟು ನಡೆಸಬೇಕೆಂಬ ನಿರ್ಬಂಧ ರದ್ದು ಗೊಳಿಸಿರುವುದು ಮೇಕ್ ಇನ್ ಇಂಡಿಯಾ ಎಂಬುದು ಬರೀ ಘೋಷಣೆ ಮಾತ್ರ ಎಂಬುದನ್ನು ಬಹಿರಂಗಗೊಳಿಸಿದೆ. ಇದು ಪ್ರಧಾನಿ ನರೇಂದ್ರಮೋದಿ ಅವರ ಇಬ್ಬಗೆ ನೀತಿಗೆ ಸಾಕ್ಷಿ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಕಾಂಗ್ರೆಸ್ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಬಿಜೆಪಿಯಾಗಲೀ ಅಥವಾ ಖುದ್ದು ಪ್ರಧಾನಿ ನರೇಂದ್ರಮೋದಿ ಅವರಾಗಲೀ ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಆ ಮೂಲಕ ತಾವು ಪ್ರಾಮಾಣಿಕರು ಎಂಬುದನ್ನು ಜನತೆಗೆ ತೋರ್ಪಡಿಸಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More