ಸಚಿವ ಸಂಪುಟದ ಗಣಿ ಉಪ ಸಮಿತಿ ನಾಲ್ಕು ವರ್ಷಗಳಲ್ಲಿ ಏನನ್ನೂ ಮಾಡದೇ ಹೋಯಿತೆ ?

ಅಧಿಕಾರಕ್ಕೇರಲು ಲೋಕಾಯುಕ್ತರ ವರದಿಯನ್ನು ಪ್ರಮುಖ ಅಸ್ತ್ರದಂತೆ ಬಳಸಿಕೊಂಡಿದ್ದ ಕಾಂಗ್ರೆಸ್‌ ಸರ್ಕಾರ ನಂತರ ಮರೆತುಬಿಟ್ಟಿತು. ಸಚಿವ ಸಂಪುಟ ಉಪ ಸಮಿತಿಯ ಹಾದಿಯೂ ಭಿನ್ನವಾಗಿರಲಿಲ್ಲ. ೪ ವರ್ಷಗಳಲ್ಲಿ ೧೧ ಬಾರಿ ಸಭೆ ನಡೆಸಿರುವ ಈ ಸಮಿತಿ ಸಾಧಿಸಿದ್ದೇನು? ವಿಫಲವಾಗಿದ್ದೆಲ್ಲಿ? ವಿವರಗಳು ಇಲ್ಲಿವೆ.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯಲ್ಲಿನ ಶಿಫಾರಸ್ಸುಗಳ ಬಗ್ಗೆ ಕೈಗೊಂಡ ಕ್ರಮಗಳನ್ನು ಅಮೂಲಾಗ್ರ ಪರಿಶೀಲನೆ ಮತ್ತು ಸತತ ಮೇಲ್ವಿಚಾರಣೆ ನಡೆಸುವ ಸಲುವಾಗಿ ಸಚಿವ ಎಚ್‌.ಕೆ.ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ೪ ವರ್ಷಗಳಿಂದಲೂ ಚರ್ಚೆ ನಡೆಸುವುದರಲ್ಲೇ ಕಾಲಹರಣ ಮಾಡಿದೆ. ಅಕ್ರಮ ನಡೆಸಿದ ಗಣಿ ಉದ್ಯಮಿ, ಕಂಪನಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಒಂದೇ ಒಂದು ಪ್ರಕರಣವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯೊವಲ್ಲಿ ಸಮಿತಿ ಸಫಲವಾಗಿಲ್ಲ.

ತನಿಖೆಗೆ ಸಿಬಿಐ ಹಿಂದೇಟು ಹಾಕಿರುವ ಪ್ರಕರಣಗಳನ್ನು ಎಸ್‌ಐಟಿಗೆ ಒಪ್ಪಿಸಿ ವಿಶೇಷ ಅಧಿಕಾರ ನೀಡುವುದು, ೨.೯೮ ಮೆಟ್ರಿಕ್‌ ಟನ್‌ ಅಕ್ರಮ ಅದಿರು ಸಾಗಿಸಿರುವ ಬಗ್ಗೆ ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿದ್ದ ವರದಿಯಲ್ಲಿ ಮುಂದಿನ ತನಿಖೆಗೆ ಅವಕಾಶ ನೀಡುವ ಅಂಶಗಳನ್ನೂ ಎಸ್‌ಐಟಿಗೆ ಒಪ್ಪಿಸುವ ಬಗ್ಗೆ ಸಚಿವ ಸಂಪುಟ ಇನ್ನೂ ನಿರ್ಣಯ ಕೈಗೊಂಡಿಲ್ಲ. ಈ ಬಗ್ಗೆ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ೨೦೧೭ರ ಡಿಸೆಂಬರ್‌ ೧೧ರಂದು ಬರೆದಿರುವ ಪತ್ರವನ್ನು ಗಮನಿಸಿಲ್ಲ ಎಂದು ತಿಳಿದು ಬಂದಿದೆ.

“ಸಿಬಿಐ ಹಾಗೂ ಲೋಕಾಯುಕ್ತ(ಎಸ್‌ಐಟಿ)ಎಫ್‌ಐಆರ್‌ ದಾಖಲಿಸಿರುವ ಪ್ರಕರಣಗಳಲ್ಲಿ ಅಕ್ರಮ ಎಸಗಿರುವ ಆಪಾದಿತರಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡುವ ಸಂಬಂಧ ಸ್ಥಿರಾಸ್ತಿ ವಶಪಡಿಸಿಕೊಂಡು ಜಫ್ತಿ ಮಾಡಲು ಯಾವುದೇ ತೊಡಕುಗಳು ಇಲ್ಲ,” ಎಂದು ಕಾನೂನು ಇಲಾಖೆ ಹೇಳಿತ್ತು. ಆದರೆ ವಸೂಲಾತಿ ಪ್ರಕ್ರಿಯೆಗಳನ್ನು ತೀವ್ರಗೊಳಿಸುವಲ್ಲಿ ಸಂಪುಟ ಉಪ ಸಮಿತಿ ಭಾರೀ ಹಿನ್ನಡೆ ಅನುಭವಿಸಿರುವುದು ಸಭೆಗಳ ನಡಾವಳಿಗಳಿಂದ ತಿಳಿದು ಬಂದಿದೆ.

ಆರೋಪಿತ ಉದ್ಯಮಿಗಳು, ಗಣಿ ಗುತ್ತಿಗೆದಾರರು, ಗುತ್ತಿಗೆದಾರರೇತರು ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿಯನ್ನು ಬಹಿರಂಗವಾಗಿಯೇ ಮಾರಾಟ ಮಾಡುತ್ತಿರುವುದು ಸಮಿತಿಯ ಗಮನಕ್ಕೆ ಬಂದಿತ್ತು. ಆಸ್ತಿ ಮಾರಾಟ ಮಾಡದಂತೆ ತುರ್ತಾಗಿ ಸುಗ್ರೀವಾಜ್ಞೆ ತರಬೇಕು ಎಂದು ಸಭೆಯಲ್ಲಿ ಪ್ರಸ್ತಾಪವೂ ಆಗಿತ್ತು. ಈ ನಿಟ್ಟಿನಲ್ಲಿ ಇದುವರೆಗೂ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿಲ್ಲ. ಉಪ ಸಮಿತಿ ೨೦೧೩ರ ಡಿಸೆಂಬರ್‌ ೨೦ರಿಂದ ೨೦೧೭ರ ನವೆಂಬರ್‌ ೪ರವರೆಗೆ ಒಟ್ಟು ೧೧ ಸಭೆಗಳನ್ನು ನಡೆಸಿದೆ. ಈ ಪೈಕಿ ೨೦೧೩ರಲ್ಲಿ ೧, ೨೦೧೪ರಲ್ಲಿ ೪, ೨೦೧೫ರಲ್ಲಿ ೨, ೨೦೧೭ರಲ್ಲಿ ೪ ಸಭೆಗಳಷ್ಟೇ ನಡೆದಿದೆ. ೨೦೧೬ರಲ್ಲಿ ಒಂದೇ ಒಂದು ಸಭೆ ನಡೆದಿಲ್ಲ. ೧೧ ಸಭೆಗಳ ನಡಾವಳಿಗಳ ಪ್ರತಿಗಳು ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಈ ಎಲ್ಲಾ ಸಭೆಗಳಲ್ಲಿ ಉಪ ಸಮಿತಿ ಅಧ್ಯಕ್ಷ ಸಚಿವ ಎಚ್.ಕೆ.ಪಾಟೀಲ್ ಅವರು ವಸೂಲಾತಿ ಸೇರಿದಂತೆ ಇತರೆ ವಿಷಯಗಳಲ್ಲಿ ನೀಡಿದ್ದ ನಿರ್ದೇಶನಗಳನ್ನು ಯಾವೊಬ್ಬ ಅಧಿಕಾರಿಯೂ ಪಾಲಿಸಿಲ್ಲ. ಅಧಿಕಾರಿಗಳ ಕಾರ್ಯವೈಖರಿ ಕುರಿತು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆಯೇ ವಿನಃ ಒಬ್ಬ ಅಧಿಕಾರಿಯ ವಿರುದ್ಧವೂ ಶಿಸ್ತುಕ್ರಮ ಜರುಗಿಸದಿರುವುದು ಗೊತ್ತಾಗಿದೆ.

“ಸರ್ಕಾರಕ್ಕೆ ಉಂಟಾಗಿರುವ ೬೦-೭೦ ಸಾವಿರ ಕೋಟಿ ರೂಪಾಯಿ ನಷ್ಟವನ್ನು ವಸೂಲಿ ಮಾಡುವುದು ಮತ್ತು ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ವ್ಯಕ್ತಿಗಳಿಂದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳುವ ಬಗ್ಗೆ ೪ ವರ್ಷಗಳಾದರೂ ನಾವು ಯಾವ ಸಾಧನೆಯನ್ನೂ ಮಾಡದಿರುವುದು ಏನನ್ನು ಸೂಚಿಸುತ್ತದೆ,” ಎಂದು ಸಂಪುಟ ಉಪ ಸಮಿತಿಯ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಅವರು(೨೦೧೪ರ ನವೆಂಬರ್‌ ೬)ಹೇಳಿರುವದನ್ನು ನೋಡಿದರೆ ಸಮಿತಿ ವಿಫಲವಾಗಿದೆ ಎಂಬುದನ್ನು ಸೂಚಿಸಿದಂತಾಗಿದೆ.

waterdo

ವಿಪರ್ಯಾಸವೆಂದರೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಸಂಸ್ಥೆಗಳ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪವಾಗಿದ್ದ ಸಂಸ್ಥೆಯೊಂದಕ್ಕೆ ಮತ್ತೊಮ್ಮೆ ಇ-ಹರಾಜು ಮೂಲಕ ಗಣಿ ಗುತ್ತಿಗೆ ಮಂಜೂರು ಮಾಡಿದಕ್ಕೆ ಉಪ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದರ ನಡುವೆಯೂ ಗಣಿ ಗುತ್ತಿಗೆ ನೀಡಲಾಗಿತ್ತು. ಅಲ್ಲದೆ ಆ ಸಂಸ್ಥೆಯಿಂದ ಸರ್ಕಾರಕ್ಕೆ ಬರಬೇಕಿದ್ದ ಬಾಕಿ ಹಣವನ್ನು ವಸೂಲು ಮಾಡುವಲ್ಲಿಯೂ ಇಲಾಖೆ ವಿಫಲವಾಗಿದ್ದರೂ ಉಪ ಸಮಿತಿ ಮೌನ ವಹಿಸಿತ್ತು. ಆರೋಪಿತರ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಬಹುದು ಎಂದು ೪ ವರ್ಷಗಳಿಂದಲೂ ಚರ್ಚೆ ನಡೆಸುವುದರಲ್ಲೇ ಸಮಿತಿ ಕಾಲಹರಣ ಮಾಡಿರುವುದು ನಡವಳಿಗಳಿಂದ ತಿಳಿದು ಬಂದಿದೆ. ಅಲ್ಲದೆ, ನಷ್ಟ ವಸೂಲಾತಿಗೆ ಕ್ರಮ ಕೈಗೊಳ್ಳಲು ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಪಡೆಯುವುದರಲ್ಲಿಯೂ ಸಮಿತಿ ದಿಟ್ಟ ಹೆಜ್ಜೆಯನ್ನಿರಿಸಲಿಲ್ಲ.

ವಿಶೇಷವೆಂದರೆ ೩ ಕೋಟಿ ಟನ್‌ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿತ್ತು ಎಂದು ಲೋಕಾಯುಕ್ತರು ಮಾಡಿದ್ದ ಅಂದಾಜನ್ನೂ ಸಂಪುಟ ಉಪ ಸಮಿತಿ ಬದಿಗೊತ್ತಿದ್ದಲ್ಲದೆ ಅಜಗಜಾಂತರ ವ್ಯತ್ಯಾಸವನ್ನು ಬಯಲಿಗೆಳೆದಿತ್ತು. ರೈಲ್ವೆ ಹಾಗೂ ಇತರೆ ಮೂಲಗಳ ಮೂಲಕ ಒಟ್ಟು ೩೫ ಕೋಟಿ ಟನ್‌ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿತ್ತು ಎಂಬುದನ್ನು ಹೊರಗೆಡವಿತ್ತು. ಅಲ್ಲದೆ, ೩ ಕೋಟಿ ಟನ್‌ ಅದಿರಿನ ಅಕ್ರಮ ಸಾಗಣೆಯಿಂದ ರಾಜ್ಯದ ಬೊಕ್ಕಸಕ್ಕೆ ೧೨,೨೨೮ ಕೋಟಿ ರೂ.ನಷ್ಟ ಉಂಟಾಗಿದ್ದರೇ(ಪ್ರತಿ ಟನ್‌ಗೆ ೪,೧೦೩ ರೂ.)ಅಕ್ರಮವಾಗಿ ೩೫ ಕೋಟಿ ಟನ್‌ ಅದಿರನ್ನು ಸಾಗಿಸಿದ್ದರಿಂದ ಎಷ್ಟು ನಷ್ಟವಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಲು ಸೂಚಿಸಿತ್ತು. ಆದರೆ ಅಧಿಕಾರಿಗಳು ಈ ನಷ್ಟವನ್ನು ಲೆಕ್ಕಚಾರ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ವರದಿಯಲ್ಲಿ ನಮೂದಿಸಿದ್ದ ದರವನ್ನೇ ೩೫ ಕೋಟಿ ಟನ್‌ ಅದಿರಿಗೂ ಲೆಕ್ಕಾಚಾರ ಹಾಕಿದರೆ ೧ ಲಕ್ಷ ೪೩ ಸಾವಿರ ಕೋಟಿ ರೂಪಾಯಿ ಆಗಲಿದೆ.

“ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಆಗಿರುವ ನಷ್ಟದ ಕುರಿತು ಎಂಎಂಡಿಆರ್‌ ಮತ್ತು ಭೂ ಕಂದಾಯ ಕಾಯ್ದೆ ಅನ್ವಯ ವಸೂಲಾತಿ ಕ್ರಮ ಆರಂಭಿಸಲು ಯಾವುದೇ ಕ್ರಮ ಆರಂಭವಾಗಿಲ್ಲ. ಲೋಕಾಯುಕ್ತರು ನೀಡಿರುವ ವರದಿಯಲ್ಲೇ ಗಣಿವಾರು ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟವನ್ನು ವಸೂಲಿ ಮಾಡಲು ಶಿಫಾರಸ್ಸು ಮಾಡಿದ್ದರೂ ಯಾವುದೇ ಕ್ರಮ ಅಧಿಕಾರಿಗಳ ಮಟ್ಟದಲ್ಲಿ ನಡೆಯದಿರುವುದು ಆತಂಕಕಾರಿ,” ಎಂದು (೨೦೧೫ರ ಅಕ್ಟೋಬರ್‌ ೧೦ರ ಸಭೆ)ಎಚ್.ಕೆ.ಪಾಟೀಲ್ ಅವರು ಹೇಳಿದ್ದರೂ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿ : ಅಕ್ರಮ ಅದಿರು ಸಾಗಾಣಿಕೆ ಪ್ರಕರಣ; ವಸೂಲಾಗದ ದಂಡ 134 ಕೋಟಿ ರು.

“ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯಲ್ಲಿ ಪ್ರಸ್ತಾಪಿತ ಆರೋಪಿಗಳ ಬ್ಯಾಂಕ್‌ ಖಾತೆ, ಆಸ್ತಿ ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಸದ್ಯದ ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದಲ್ಲಿ ಇದನ್ನು ಗಮನದಲ್ಲಿರಿಸಿಕೊಂಡು ಚಾಲ್ತಿಯಲ್ಲಿರುವ ಕಾಯ್ದೆಯಲ್ಲಿ ತಿದ್ದುಪಡಿ ಅಥವಾ ಒಂದು ವೇಳೆ ಹೊಸ ಕಾನೂನು ಜಾರಿಗೆ ತರುವ ಅವಶ್ಯಕತೆ ಇದ್ದಲ್ಲಿ ಕಾನೂನು ಇಲಾಖೆಯಿಂದ ವಿಧೇಯಕ ಮಂಡಿಸಬೇಕು,” ಎಂದು ಸಮಿತಿ ಅಧ್ಯಕ್ಷರು ನೀಡಿದ್ದ ಸಲಹೆಯನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಾಗಲಿ, ಅಧಿಕಾರಿಗಳಾಗಲಿ ಯಾವುದೇ ಕ್ರಮಗಳನ್ನೂ ಕೈಗೊಳ್ಳದಿರುವುದು ತಿಳಿದು ಬಂದಿದೆ.

ಅಲ್ಲದೆ ಆರೋಪಿಗಳು ಆಸ್ತಿ ಮಾರಾಟ ಮಾಡದಂತೆ ತುರ್ತಾಗಿ ಸುಗ್ರೀವಾಜ್ಞೆ ತರಬೇಕು ಎಂದು ಸಭೆಯಲ್ಲಿ ಆಗಿದ್ದ ಪ್ರಸ್ತಾಪ ಕಾಗದದ ಮೇಲಷ್ಟೇ ಉಳಿದಿದೆ. ಹೀಗಾಗಿ ಆಸ್ತಿ ಪರಭಾರೆ ಅಥವಾ ಆಸ್ತಿ ಪರಭಾರೆ ಮಾಡಿಕೊಳ್ಳದಂತೆ ಮುಟ್ಟುಗೋಲು ಹಾಕಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಜರುಗಿಸಲು ಸಂಬಂಧಪಟ್ಟ ಇಲಾಖೆಯಾಗಲೀ, ವಿಶೇಷ ತನಿಖಾ ತಂಡವಾಗಲಿ ಯಾವುದೇ ಗಂಭೀರ ಕ್ರಮವನ್ನು ಜರುಗಿಸಿಲ್ಲದಿರುವುದು ಗೊತ್ತಾಗಿದೆ. ಕೆಲವು ಇಲಾಖೆಗಳು ತಮ್ಮ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಸರಿಯಾದ ಶಿಫಾರಸ್ಸನ್ನು ಮಾಡಿಲ್ಲ. ಹೀಗಾಗಿ ಅಕ್ರಮ ನಡೆಸಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ. ಅಲ್ಲದೆ ಇವರುಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಲ್ಲಿ ಹೇಳಿಕೊಳ್ಳುವ ಪ್ರಗತಿ ನಡೆದಿಲ್ಲದಿರುವುದು ನಡವಳಿಗಳಿಂದ ಗೊತ್ತಾಗಿದೆ.

ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾಗಿದ್ದ ಉನ್ನತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಆರಂಭಿಸುವ ಮುನ್ನ ಆರೋಪಿತ ಅಧಿಕಾರಿಗಳಿಂದ ಪ್ರತಿ ರಕ್ಷಣಾ ಹೇಳಿಕೆ ಪಡೆದು ಇಲಾಖೆ ವಿಚಾರಣೆಗಳನ್ನೇ ಕೈಬಿಡಲಾಗಿದೆ. ಕೆಎಎಸ್‌ ಅಧಿಕಾರಿಗಳ ವಿರುದ್ಧ ಆರಂಭಿಸಿದ್ದ ಇಲಾಖೆ ವಿಚಾರಣೆಗೆ ಆರೋಪಿತ ನಿವೃತ್ತ ಅಧಿಕಾರಿಗಳು ಕೆಎಟಿಯಿಂದ ಪಡೆದಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಮುಂದಾಗದಿರುವುದು ತಿಳಿದು ಬಂದಿದೆ.

ಜನಾರ್ದನ ರೆಡ್ಡಿ ಅವರ ಅತ್ಯಂತ ಆಪ್ತ ಎಂದೇ ಹೇಳಲಾಗಿರುವ ಖಾರಾಪುಡಿ ಮಹೇಶ್‌ ಎಂಬಾತನಿಂದ ಲಂಚ ಸ್ವೀಕರಿಸಿರುವ ಆರೋಪಕ್ಕೀಡಾಗಿದ್ದ ೬೧೭ ಅಧಿಕಾರಿಗಳ ಪೈಕಿ ೯೦ ಮಂದಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗುರುತಿಸಲಾಗಿತ್ತು. ವಿಪರ್ಯಾಸವೆಂದರೆ ಅಧಿಕಾರಿಗಳು ಆರೋಪಗಳನ್ನು ನಿರಾಕರಿಸಿದ್ದನ್ನೇ ಒಪ್ಪಿಕೊಂಡು ವಿಚಾರಣೆಯನ್ನೇ ಕೈಬಿಡಲಾಗಿದೆ. ಅಧಿಕಾರಿಗಳು ಮತ್ತು ಪ್ರಕರಣಗಳ ತನಿಖೆಗೆ ಕೋರಿ ಲೋಕಾಯುಕ್ತ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದ ವಿವಿಧ ಇಲಾಖೆಗಳು, ಸ್ಪಷ್ಟವಾದ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂಬುದು ನಡವಳಿಯಿಂದ ಗೊತ್ತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More