ಅಭಿಪ್ರಾಯ | ಸಿಜೆಐ ರಾಜೀನಾಮೆ ಮಾತ್ರವೇ ಬಿಕ್ಕಟ್ಟು ಪರಿಹಾರಕ್ಕೆ ಏಕೈಕ ದಾರಿ

ಈ ಬಿಕ್ಕಟ್ಟನ್ನು ಬಗೆಹರಿಸುವ ಸಾಧ್ಯತೆ ಇರುವುದು ಮುಖ್ಯ ನ್ಯಾಯಮೂರ್ತಿಗೆ ಮಾತ್ರ. ಬೇರೆ ಯಾರೇ ಈ ವಿಷಯದಲ್ಲಿ ಮೂಗು ತೂರಿಸಿದರೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಗಂಭೀರ ಹೊಡೆತ ಬೀಳುತ್ತದೆ. ಹಾಗಾಗಿ ಇದಕ್ಕೆ ಪರಿಹಾರ ಏನೇ ಇದ್ದರೂ ಅದು ಮುಖ್ಯ ನ್ಯಾಯಮೂರ್ತಿಗಳ ಬಳಿಯೇ ಇದೆ

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಮೊದಲ ಬಾರಿಗೆ, ಇವತ್ತು ಮುಖ್ಯ ನ್ಯಾಯಮೂರ್ತಿ ಮೇಲೆ ಬಹಿರಂಗವಾಗಿ ಆರೋಪ ಮಾಡಿರುವ ನಾಲ್ವರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ಅತ್ಯುನ್ನತ ಸೀನಿಯಾರಿಟಿಯಲ್ಲಿ ಇರುವವರು. ಇಡೀ ರಾಷ್ಟ್ರದ ನ್ಯಾಯಾಂಗದ ಆಗುಹೋಗುಗಳನ್ನು ನಿಯಂತ್ರಿಸುವ ಸಂಸ್ಥೆ ಕೊಲಿಜಿಯಂನಲ್ಲಿ ಐವರು ಸದಸ್ಯರಿರುತ್ತಾರೆ. ಈ ಪೈಕಿ ನಾಲ್ವರು, ಮುಖ್ಯ ನ್ಯಾಯಮೂರ್ತಿಗಳನ್ನು ನೇರ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

ಅವರು ಮುಖ್ಯ ನ್ಯಾಯಮೂರ್ತಿ ಮೇಲೆ ಮಾಡಿರುವ ಆರೋಪಗಳು ಕೂಡ ಗುರುತರವಾದವು. ನ್ಯಾಯಾಂಗದಲ್ಲಿ ದುರಾಡಳಿತವಿದೆ, ಮುಖ್ಯ ನ್ಯಾಯಮೂರ್ತಿ ನ್ಯಾಯಾಂಗವನ್ನು ರಕ್ಷಣೆ ಮಾಡುತ್ತಿಲ್ಲ, ಮೊಕದ್ದಮೆಗಳನ್ನು ತೀರ್ಮಾನ ಮಾಡುವ ಪೀಠಗಳನ್ನು ಮನಸೋ ಇಚ್ಛೆ ಬದಲಾಯಿಸುತ್ತಿದ್ದಾರೆ ಮತ್ತು ಆ ಮೂಲಕ ತಮಗೆ ಇಷ್ಟಬಂದ ಜಡ್ಜ್‌ಗಳಿಗೆ ಅತಿ ಮುಖ್ಯ ಮೊಕದ್ದಮೆಗಳನ್ನು ನೀಡುತ್ತಿದ್ದಾರೆ, ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ, ಸುಪ್ರೀಂ‌ ಆಡಳಿತದಲ್ಲಿ ಕಾನೂನಿನ ಆಡಳಿತದ ಬದಲು ಸರ್ವಾಧಿಕಾರಿಯ ಆಡಳಿತ ನಡೆಯುತ್ತಿದೆ ಇತ್ಯಾದಿ.

“ಇದೆಲ್ಲ ಪ್ರಜಾತಂತ್ರಕ್ಕೆ ಮಾರಕ. ನ್ಯಾಯಾಂಗದ ಘನತೆಗೆ ಧಕ್ಕೆ ತಂದಿದೆ. ನ್ಯಾಯಾಂಗದ ಸ್ವಾಯತ್ತತೆಗೆ, ಸ್ವಾತಂತ್ರ್ಯಕ್ಕೆ ಮಾರಕವಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆಗಳಲ್ಲ. ಎರಡು ತಿಂಗಳ ಹಿಂದೆಯೇ ಈ ಬಗ್ಗೆ ಪತ್ರ ಬರೆದರೂ ಮುಖ್ಯ ನ್ಯಾಯಮೂರ್ತಿ ದಿವ್ಯಮೌನ ವಹಿಸಿದ್ದಾರೆ. ಆದ್ದರಿಂದ ರಾಷ್ಟ್ರವೇ ತೀರ್ಮಾನ ಮಾಡಲಿ ಎಂದು ನಾವು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದೇವೆ. ಈ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಯಲಿ,’’ ಎನ್ನುವದೂ ಈ ನಾಲ್ವರು ನ್ಯಾಯಮೂರ್ತಿಗಳ ಒತ್ತಾಯವಾಗಿದೆ.

ಆದರೆ, ಈ ಆರೋಪಗಳ ಕುರಿತಂತೆ ತನಿಖೆ ಮಾಡುವಂಥ ಅಧಿಕಾರ ಯಾರಿಗೂ ಇಲ್ಲ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗಿಂತ ಮೇಲ್ಮಟ್ಟದಲ್ಲಿ ಯಾರೂ ಇಲ್ಲ. ಹಾಗಾಗಿ ಈ ಆರೋಪಗಳ ತನಿಖೆ ಆಗದೆ ಇಡೀ ನ್ಯಾಯಾಂಗವನ್ನು ಕೊರೆದು ತಿನ್ನಬಹುದು. ಮಾತ್ರವಲ್ಲ, ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರಬಹುದು. ಅದರ ಸ್ವಾಯತ್ತತೆಗೆ, ಸ್ವತಂತ್ರ ನಿರ್ವಹಣೆಗೆ ಮಾರಕವಾಗುತ್ತವೆ ಕೂಡ.

ಇದನ್ನೂ ಓದಿ : ಅಭಿಪ್ರಾಯ | ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಹೇಳದೆ ಉಳಿದಿದ್ದೆಷ್ಟು?

ಇಂಥ ಸನ್ನಿವೇಶದ ಸೃಷ್ಟಿಕರ್ತ ಸ್ವಯಂ ಮುಖ್ಯ ನ್ಯಾಯಮೂರ್ತಿಯೇ ಆಗಿದ್ದಾರೆ. ಆರೋಪ ಹೊರಿಸಿ ಕೊಲಿಜಿಯಂ ಸದಸ್ಯರು ಪತ್ರ ಬರೆದು ಎರಡು ತಿಂಗಳಾದರೂ ತಮ್ಮ ಮೇಲಿನ ಆರೋಪಗಳನ್ನವರು ನಿರಾಕರಿಸಿಲ್ಲ, ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅವರು ಮೌನ ವಹಿಸಿರುವುದನ್ನು ನೋಡಿದರೆ ಆರೋಪಗಳು ನಿಜ ಎಂದು ಮೇಲ್ನೋಟಕ್ಕೇ ಕಾಣುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದರೆ, ಈ ಬಿಕ್ಕಟ್ಟನ್ನು, ಸಮಸ್ಯೆಗಳನ್ನು ಬಗೆಹರಿಸುವ ಸಾಧ್ಯತೆ ಇರುವುದು ಮುಖ್ಯ ನ್ಯಾಯಮೂರ್ತಿಗೆ ಮಾತ್ರ. ಬೇರೆ ಯಾರೇ ಈ ವಿಷಯದಲ್ಲಿ ಮೂಗು ತೂರಿಸಿದರೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಗಂಭೀರ ಹೊಡೆತ ಬೀಳುತ್ತದೆ. ಮಾತ್ರವಲ್ಲ, ಈಗ ಬಹಿರಂಗ ಹೇಳಿಕೆ ನೀಡಿರುವ ಕೊಲಿಜಿಯಂನ ನಾಲ್ವರು ಸದಸ್ಯರೇ ಮುಂದಿನ ಕ್ರಮವನ್ನೂ ಜರುಗಿಸಿದರೆ, ಇಡೀ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಾ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಜನರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸ ಕಳೆದುಹೋಗುತ್ತದೆ. ಆದ್ದರಿಂದ, ಮುಖ್ಯ ನ್ಯಾಯಮೂರ್ತಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಕ್ಕಟ್ಟನ್ನು ಪರಿಹರಿಸುವ ಮೂಲಕ ದೇಶದ ನ್ಯಾಯಾಂಗದ ಘನತೆ, ಗೌರವವನ್ನು ಎತ್ತಿಹಿಡಿಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ನನ್ನ ಅಭಿಪ್ರಾಯ, ಬೇಡಿಕೆ ಕೂಡ.

ಲೇಖಕರು, ಹಿರಿಯ ನ್ಯಾಯವಾದಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More