ಅಭಿಪ್ರಾಯ | ಸೂರ್ಯ ಸುಟ್ಟರೂ ಸೋಂಕು ನಿವಾರಕ, ಹಾಗೇ ಈ ಕೋರ್ಟಿನ ಬಂಡಾಯ

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳೇ ಬಂಡಾಯ ಎದ್ದಿರುವುದು ಇತಿಹಾಸದಲ್ಲೇ ವಿಚಿತ್ರ ಎನಿಸಿದರೂ, ಇದು ಕೋರ್ಟ್‌ಗಳ ಮೂಲ ಉದ್ದೇಶ ಮತ್ತು ಆಶಯವನ್ನು ಒಗ್ಗೂಡಿಸಬಹುದು. ಸುಪ್ರೀಂ ಕೋರ್ಟನ್ನು ಇನ್ನಷ್ಟು ವಿಶ್ವಾಸಾರ್ಹ ಪ್ರಾಧಿಕಾರವಾಗುವತ್ತ ಕರೆದೊಯ್ಯಬಹುದು

೧೯೩೨-೩೩ರಲ್ಲಿ ಡಾಗ್ಲಾಸ್ ಜಾರ್ಡೈನ್‌ನ ಬಾಡಿ ಲೈನ್ ತಂತ್ರಗಳಿಗೆ ನವಾಬ್ ಇಫ್ತಿಕಾರ್ ಆಲಿ ಖಾನ್ ಪಟೌಡಿ ‘ನಾಯಕ ನಮೋ’ ಎನ್ನಲು ನಿರಾಕರಿಸಿದಾಗ, ಇದು ಕ್ರಿಕೆಟ್ ಅಲ್ಲ ಎಂದು ಯಾರೂ ಹೇಳಿರಲಿಲ್ಲ. ಬದಲಾಗಿ, ಸತ್ಯವನ್ನು ಶಕ್ತಿಯುತವಾಗಿ ಹೇಳಿದ್ದಕ್ಕಾಗಿ ನವಾಬನನ್ನು ಎಲ್ಲರೂ ಹೊಗಳಿದ್ದರು. ತೀಕ್ಷ್ಣ ಎಂದು ಅನಿಸಬಹುದಾದರೂ, ಜ.೧೨ರಂದು ನಾಲ್ಕು ಮಂದಿ ಭಾರತೀಯ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ತೋರಿಸಿರುವ ಅಸಾಮಾನ್ಯವಾದ ಸಾರ್ವಜನಿಕ ಅಸಮಾಧಾನ ಪ್ರಕಟಣೆಯು, ಗೌರವಯುತವಾದ ಪ್ರತಿಭಟನೆಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಲ್ಲ. ಇದು ಹೆಚ್ಚೂಕಡಿಮೆ ಸುಪ್ರೀಂ ಕೋರ್ಟ್‌ನ ಮುಚ್ಚಿದ ಗೋಡೆಗಳ ನಡುವೆ ನಡೆದ ತಪ್ಪುಗಳಿಗೆ ಅತೀ ತೀಕ್ಷ್ಣವಾದ, ಬಹುತೇಕ ಪ್ರಕೃತಿಸಹಜವಾದ ಪ್ರತಿಕ್ರಿಯೆ. ಅಂತಹ ವಿಷಯಗಳನ್ನು ನಿಭಾಯಿಸಲು ಇರುವ ಒಂದು ವ್ಯವಸ್ಥೆಯ ಕೊರತೆಯನ್ನು ಎತ್ತಿತೋರಿಸಿದೆ. ಹೆಚ್ಚಾಗಿ ಇಂತಹ ಸನ್ನಿವೇಶಗಳನ್ನು ಶುದ್ಧ ರಾಜತಾಂತ್ರಿಕತೆಯಿಂದ ಮತ್ತು ಸ್ನೇಹಪರ ವಾತಾವರಣದಲ್ಲಿ ಪರಿಹರಿಸಿಕೊಳ್ಳಲಾಗುತ್ತದೆ. ಆದರೆ, ಗ್ರೀಕ್‌ ತತ್ವಜ್ಞಾನಿ ಹಿಪ್ಪೊಕ್ರೇಟಸ್ ವಿವರಿಸುವಂತೆ, ಹತಾಶ ಪರಿಸ್ಥಿತಿಯಲ್ಲಿ ಹತಾಶ ಕ್ರಮಗಳು!

ಒಳಸಂಚು ನಡೆಸಿದ್ದರು ಎಂದೆಲ್ಲ ಹೇಳಲಾಗುತ್ತಿರುವ, ಪತ್ರಿಕಾಗೋಷ್ಠಿಯ ಭಾಗವಾಗಿದ್ದ ನಾಲ್ವರಲ್ಲಿ ಮೂವರು ನ್ಯಾಯಾಧೀಶರು, ೪:೧ರ ಬಹುಮತದಿಂದ ನಿರ್ಧರಿಸಲ್ಪಟ್ಟಿದ್ದ ಎನ್‌ಜೆಎಸಿ (ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ) ಪ್ರಕರಣದ ಭಾಗವಾಗಿದ್ದರು. ಮೆಕಾಲೆ ತಾನು ಸಂಸತ್ತಿನ ಸುಧಾರಣೆಯ ಕುರಿತು ಹೌಸ್ ಆಫ್ ಕಾಮನ್ಸ್‌ನಲ್ಲಿ ೧೮೩೧ರ ಮಾ.೨ರಂದು ಹೇಳಿದ್ದ, ‘ನೀನು ಸಂರಕ್ಷಿಸಬಹುದಾದ ಸುಧಾರಣೆ’ ಎಂಬ ಮಾತುಗಳನ್ನು ತಮ್ಮ ಮಾತಿನ ಕೊನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದ ನ್ಯಾ.ಚೆಲಮೇಶ್ವರ ಅವರೇ ಅಸಮಾಧಾನ ತೋರಿಸಿದ್ದ ಧ್ವನಿ. ನ್ಯಾ.ಕುರಿಯನ್ ಮತ್ತು ನ್ಯಾ.ಲೋಕುರ್ ಆ ಪ್ರಕರಣದಲ್ಲಿ ಬಹುಮತದ ಪರವಾಗಿದ್ದರು. ಹಾಗಿದ್ದರೂ ನ್ಯಾಯಮೂರ್ತಿ ಕುರಿಯನ್ ಅವರು ಸುಧಾರಣೆಗೆ ವ್ಯವಸ್ಥೆಯ ಪ್ರಜಾತಾಂತ್ರೀಕರಣಗೊಳಿಸುವ ಕರೆ (ಗ್ಲಾಸ್ನಾಸ್ಟ್ ಆಂಡ್ ಪೆರಿಸ್ಟ್ರೋಕಾ) ನೀಡಿ, ಕೊಲಿಜಿಯಂ ವ್ಯವಸ್ಥೆ ಉತ್ತಮಮವಾಗಬೇಕು ಎಂದಿದ್ದರು. ಇದು ಮಿಖೈಲ್ ಗೊರ್ಬಚೇವ್‌ರಿಂದ ಪ್ರೇರಿತಗೊಂಡ ಪುನರ್ರಚನೆ ಮತ್ತು ಮುಕ್ತತೆಗೆ ಒಂದು ಕರೆಯಾಗಿತ್ತು. ನ್ಯಾ.ಲೋಕುರ್ ಕೂಡ ಅಲ್ಲಿ ಕಾರ್ಯವಿಧಾನದ ಜ್ಞಾಪಕಪತ್ರದ (ಎಮ್ಒಪಿ) ಕರಡು ಪ್ರತಿಯನ್ನು ಸಿದ್ಧಪಡಿಸಲು ಪರಿಣಾಮಕಾರಿ ನ್ಯಾಯವಿಚಾರಣೆಯ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡರು (೨೦೧೭ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿರುವ ಕಾರ್ಯವಿಧಾನದ ಜ್ಞಾಪಕಪತ್ರವನ್ನು ಇನ್ನೂ ಅಧಿಕೃತವಾಗಿ ಅಂಗೀಕರಿಸಲಾಗಿಲ್ಲ. ಮಾಧ್ಯಮಕ್ಕೆ ಜ.೧೨ರಂದು ಬಿಡುಗಡೆ ಮಾಡಿದ ಪತ್ರ ಸರ್ಕಾರದ ಮೌನವನ್ನು ಮೌನ ಸಮ್ಮತಿ ಎಂದು ಪರಿಗಣಿಸಿದೆ).

ಸ್ವತಃ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆಯಿರುವ ನ್ಯಾಯಮೂರ್ತಿ ಗೊಗೊಯಿ (೨೦೧೮ರ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಳ್ಳಬೇಕಿದೆ) ಅವರು ನ್ಯಾಯಮೂರ್ತಿ ಕರ್ಣನ್ ಪ್ರಕರಣದಲ್ಲಿ ನ್ಯಾಯಪೀಠದ ಭಾಗವಾಗಿ ನ್ಯಾ.ಚೆಲಮೇಶ್ವರ್ ಅವರ ಶ್ರೇಣಿಯಲ್ಲಿ ಸೇರಿಕೊಂಡು, ಸಾಂವಿಧಾನಿಕ ಪೀಠಗಳಿಗೆ ನ್ಯಾಯಾಧೀಶರ ಆಯ್ಕೆ ಮತ್ತು ನೇಮಕಾತಿಯ ಬಗ್ಗೆ ಮರುಚಿಂತಿಸುವ ಮತ್ತು ಸಾಂವಿಧಾನಿಕ ನ್ಯಾಯಾಲಯವೊಂದರ ನ್ಯಾಯಾಧೀಶರ ನೈತಿಕತೆಯನ್ನು ಸರಿಪಡಿಸುವ ಕ್ರಮಗಳು ಅವಶ್ಯವಾದ ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತ ನ್ಯಾಯವ್ಯವಸ್ಥೆಯನ್ನು ರೂಪಿಸುವ ಅಗತ್ಯಕ್ಕೆ ಒತ್ತು ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವು ಪ್ರಮುಖ ನ್ಯಾಯಾಲಯಗಳು ಸೇರಿದಂತೆ ನೇಪಾಳ ಮತ್ತು ಬಾಂಗ್ಲಾದೇಶಗಳು ಇಂತಹ ಸಂದರ್ಭವನ್ನು ಇತ್ತೀಚೆಗೆ ಎದುರಿಸಿವೆ. ಆದರೆ, ಭಾರತದ ಸುಪ್ರೀಂ ಕೋರ್ಟ್ ಈ ಎಲ್ಲ ನ್ಯಾಯಾಲಯಗಳ ಜೊತೆಗೆ ನಿಲ್ಲುವಂತಾಯಿತಲ್ಲ ಎನ್ನುವುದೇ ಈಗಿನ ಕಳವಳ. ಆದರೆ ಗಮನಿಸಬೇಕಾದ ಅಂಶವೆಂದರೆ, ನಾಲ್ಕು ಹಿರಿಯ ನ್ಯಾಯಾಧೀಶರು (ಅವರು ಅತ್ಯುತ್ತಮ ನ್ಯಾಯಾಧೀಶರು) ಈ ಹೆಜ್ಜೆಯನ್ನು ಇಟ್ಟಿರುವುದೇ, ಇದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎನ್ನುವುದನ್ನು ಹೇಳುತ್ತದೆ. ಇಂತಹ ಸಂಧರ್ಭಗಳನ್ನು ಮುಚ್ಚಲು ಆಂತರಿಕ ವ್ಯವಸ್ಥೆ ಇಲ್ಲವಾಗಿತ್ತು ಅಥವಾ ತಪ್ಪಿಹೋಗಿತ್ತು. ಮತ್ತು ಇದೇ ಕಾರಣದಿಂದ, ಭಾಗಶಃ, ಅಧಿಕೃತವಾಗಿ ಜಗತ್ತಿಗೆ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎನ್ನುವುದನ್ನು ತಿಳಿಸುವ ಅಗತ್ಯ ಕಂಡಿರಬಹುದು. ಒಳಗೊಳಗೇ ಗೊಣಗಾಟಗಳಿಂದ ಪರಿಸ್ಥಿತಿ ಹಾಳಾಗುವುದೇ ಹೆಚ್ಚಿರುವುದರಿಂದ ಮತ್ತು ಯಾವ ಪರಿಹಾರವೂ ಸಿಗದೆ ಇರಬಹುದಾದ ಕಾರಣದಿಂದ, ವಾಸ್ತವದಲ್ಲಿ ಈಗಿನ ನಡೆ ಹೆಚ್ಚು ಆರೋಗ್ಯಕರ.

ನ್ಯಾಯಾಂಗದ ಭಿನ್ನಾಭಿಪ್ರಾಯವನ್ನು ಹೆಚ್ಚಿನ ಸಂದರ್ಭಗಳಲ್ಲಿ ರಂಜನಾಶೀಲವಾಗಿಸಲಾಗಿದೆ. ತಮ್ಮನ್ನು ಸೂಪರ್‌ಸೀಡ್ ಮಾಡಿದ ಕಾರಣಕ್ಕೆ ರಾಜೀನಾಮೆ ನೀಡಿರುವ ನ್ಯಾಯಮೂರ್ತಿ ಹಂಸರಾಜ್ ಖನ್ನಾ ಅವರು ೪೦ ವರ್ಷಗಳ ನಂತರವೂ ತಮ್ಮ ಉಳಿದ ಸಹೋದ್ಯೋಗಿಗಳ ನಡುವೆ ಉನ್ನತ ಗೌರವ ಪಡೆದಿದ್ದಾರೆ. ಇಂದು ನಾವು ವೀಕ್ಷಿಸಿರುವ ಬೆಳವಣಿಗೆ ಒಂದು ರೀತಿಯಲ್ಲಿ ಆಡಳಿತದ ಭಿನ್ನಾಭಿಪ್ರಾಯ. ಇದು ನಿಜವಾಗಿಯೂ ಒಂದು ರೀತಿಯ ಪರ್ವಕಾಲ. ಈ ನೆಪದಲ್ಲಾದರೂ ನ್ಯಾಯಾಂಗ ಹೆಚ್ಚು ಸ್ವತಂತ್ರವಾಗಿ ಹೊರಹೊಮ್ಮಲು ಮತ್ತು ಆಂತರಿಕವಾಗಿ ಹೆಚ್ಚು ಉತ್ತಮ ಆಡಳಿತ ಹೊಂದಲು ಮುನ್ನುಡಿ ಬರೆಯಬೇಕು. ನ್ಯಾಯ ತೀರ್ಮಾನದ ಪ್ರಮುಖ ಭಾಗವೆಂದರೆ ನ್ಯಾಯವನ್ನು ನೀಡಿರುವಂತೆ ಕಾಣುವುದು- ಪಾರದರ್ಶಕವೇ ಮಾಧ್ಯಮ, ಕಾರ್ಯವಿಧಾನ ಮತ್ತು ಅಂತಿಮ ಉತ್ಪನ್ನ.

ಮೇಲ್ಮಟ್ಟದಲ್ಲಿ ಭಿನ್ನಾಭಿಪ್ರಾಯವು ಗೂಡುಕಟ್ಟಿರುವ ಹಿನ್ನೆಲೆಯಲ್ಲಿ ಕೊಲಿಜಿಯಂ ನೇಮಕಗಳು ಅತಿದೊಡ್ಡ ದುರಂತವಾಗಬಹುದು. ಇದು ಉಚ್ಚ ನ್ಯಾಯಾಲಯಗಳಲ್ಲಿರುವ, ಶೀಘ್ರವಾಗಿ ನೇಮಕಾತಿ ಬಯಸಿರುವ ಖಾಲಿ ಸ್ಥಾನಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, ವಕೀಲ ವೃಂದದ ಸದಸ್ಯರ ನಡುವೆ, ಈಗಿನ ಬಂಡಾಯವು ಉನ್ನತ ನ್ಯಾಯವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಹೋದ್ಯೋಗಿಗಳ ವಿಚಾರವಾಗಿ ಇದ್ದ ರೋಗಗ್ರಸ್ತ ಸ್ಥಿತಿಯು ನಿವಾರಣೆಯಾಗುವ ಹೆಚ್ಚು ಆಶಾವಾದ ಬೆಳೆದಿರಬಹುದು. ಮೊದಲ ನೋಟದಲ್ಲಿ ಕರುಣೆಯಿಲ್ಲದ ನಡೆ ಎಂದೆನಿಸಿದರೂ, ಇದು ನ್ಯಾಯಾಲಯಗಳ ಮೂಲ ಉದ್ದೇಶ ಮತ್ತು ಆಶಯವನ್ನು ಒಗ್ಗೂಡಿಸಬಹುದು ಮತ್ತು ಸುಪ್ರೀಂ ಕೋರ್ಟು ಹೊಸ ವಿಶ್ವಾಸಾರ್ಹ ಪ್ರಾಧಿಕಾರವಾಗುವ ಹೊಸ ಶಖೆಯತ್ತ ಕೊಂಡೊಯ್ಯಬಹುದು.

ಇದನ್ನೂ ಓದಿ : ಅಭಿಪ್ರಾಯ | ಸಿಜೆಐ ರಾಜೀನಾಮೆ ಮಾತ್ರವೇ ಬಿಕ್ಕಟ್ಟು ಪರಿಹಾರಕ್ಕೆ ಏಕೈಕ ದಾರಿ

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಮರುಜೀವ ನೀಡುವ ಅಗತ್ಯವನ್ನು ಈ ಪ್ರಕರಣ ಹೇಳುತ್ತದೆ ಎಂದು ಬೊಬ್ಬೆ ಹೊಡೆಯುವವರು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು; ಈ ಅಧ್ಯಾಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಡಬಾರದು. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಸ್ವತಃ ಈ ಬಂಡಾಯದ ಕಿಡಿಯನ್ನು ಆರಿಸಲು ಬಿಡಬೇಕೇ ವಿನಾ ಒಂದು ಪಕ್ಷದ ಕಡೆಗೆ ಒಲವು ತೋರಿಸಬಾರದು. ನ್ಯಾಯಾಲಯವೂ ಹೊರಗಿನ ಸಹಾಯವಿಲ್ಲದೆ ನೇರವಾಗಿ ಈ ಸಮಸ್ಯೆಯನ್ನು ಎದುರಿಸಲು ಮುಂದಾದಲ್ಲಿ ಉತ್ತಮ. ಅದೇ ಎಲ್ಲಕ್ಕಿಂತಲೂ ಹೆಚ್ಚಾಗಿ ಸ್ವಾತಂತ್ರ್ಯವನ್ನು ಕಾಪಾಡಲಿದೆ.

ಸುಟ್ಟರೂ ಕೂಡ ಸೂರ್ಯನ ಬೆಳಕು ಅತ್ಯುತ್ತಮ ಸೋಂಕು ನಿವಾರಕ!

ಲೇಖಕರು, ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More