ಬಂಡಾಯವೆದ್ದ ನ್ಯಾಯಮೂರ್ತಿಗಳು ಸಿಜೆಐಗೆ ಬರೆದ ಪತ್ರದಲ್ಲಿ ಏನಿದೆ?

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರ್ಯವೈಖರಿಗೆ ಅಸಮಾಧಾನಗೊಂಡು ನಾಲ್ವರು ನ್ಯಾಯಮೂರ್ತಿಗಳು ನಡೆಸಿದ ಪತ್ರಿಕಾಗೋಷ್ಠಿ ಸಂಚಲನ ಮೂಡಿಸಿದೆ. ಈ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರ ಯಥಾವತ್ತಾಗಿ ಇಲ್ಲಿದೆ

ಮಾನ್ಯ ಮುಖ್ಯ ನಾಯಮೂರ್ತಿಗಳಿಗೆ,

ಈ ನ್ಯಾಯಾಲಯ ಹೊರಡಿಸಿರುವ ಕೆಲವು ಆದೇಶಗಳು, ಗೌರವಾನ್ವಿತ ಮುಖ್ಯ ನಾಯಮೂರ್ತಿಗಳ ಕಚೇರಿಯ ಆಡಳಿತ ಕಾರ್ಯಚಟುವಟಿಕೆಗಳಿಗೆ ಧಕ್ಕೆ ತಂದಿರುವ ಜೊತೆಗೆ, ದೇಶದ ನ್ಯಾಯದಾನ ವ್ಯವಸ್ಥೆಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಹೈಕೋರ್ಟುಗಳ ಸ್ವಾಯತ್ತತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ; ಆ ಬಗ್ಗೆ ನಿಮ್ಮ ಗಮನ ಸೆಳೆಯಲು ನಾವು ತೀವ್ರ ಬೇಸರ ಮತ್ತು ಕಾಳಜಿಯಿಂದ ಈ ಪತ್ರ ಬರೆಯುತ್ತಿದ್ದೇವೆ.

ಕೋಲ್ಕೊತಾ, ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟುಗಳ ಸ್ಥಾಪನೆಯ ದಿನದಿಂದಲೂ ನ್ಯಾಯಾಲಯಗಳ ಆಡಳಿತಕ್ಕೆ ಸಂಬಂಧಿಸಿದಂತೆ ಕೆಲವೊಂದು ರೀತಿ-ರಿವಾಜುಗಳನ್ನು ಪಾಲಿಸಿಕೊಂಡು ಬರಲಾಗುತ್ತಿತ್ತು. ಆ ಮೂರು ನ್ಯಾಯಾಲಯಗಳ ಸ್ಥಾಪನೆಯ ಶತಮಾನದ ಬಳಿಕ ಅಸ್ತಿತ್ವಕ್ಕೆ ಬಂದ ಈ ನ್ಯಾಯಾಲಯ ಕೂಡ ಅಂತಹ ರೀತಿ-ರಿವಾಜಿನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿತ್ತು. ಆಂಗ್ಲೋ-ಸ್ಯಾಕ್ಸನ್ ನ್ಯಾಯದಾನ ಮತ್ತು ನ್ಯಾಯಾಂಗ ವೃತ್ತಿಪಾಲನೆ ವ್ಯವಸ್ಥೆಯಲ್ಲಿ ಈ ಸಂಪ್ರದಾಯದ ಮೂಲ ಇದೆ.

ಅಂತಹ ಸಂಪ್ರದಾಯದ ಒಂದು ಪ್ರಮುಖ ಮತ್ತು ಅಚಲ ನೀತಿಯೆಂದರೆ; ಮುಖ್ಯನಾಯಮೂರ್ತಿಗಳು ರೋಸ್ಟರ್ ವ್ಯವಸ್ಥೆಯ ವಾರಸುದಾರರಾಗಿದ್ದು, ರೋಸ್ಟರ್ ಪದ್ಧತಿಯನ್ನು ನಿರ್ಧರಿಸುವ ಅಧಿಕಾರ ಕೂಡ ಅವರಿಗಿದೆ. ಹಲವಾರು ನ್ಯಾಯಾಲಯಗಳನ್ನು ಒಳಗೊಂಡ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿತ್ಯದ ಕೆಲಸಕಾರ್ಯಗಳು ಸುಗಮವಾಗಿ ಸಾಗಲು ಈ ವ್ಯವಸ್ಥೆ ಅನಿವಾರ್ಯ. ನ್ಯಾಯಾಲಯದ ಯಾವ ನ್ಯಾಯಮೂರ್ತಿ ಅಥವಾ ಯಾವ ನ್ಯಾಯಪೀಠವು ಯಾವ ಪ್ರಕರಣ ಅಥವಾ ಯಾವ ಬಗೆಯ ಪ್ರಕರಣಗಳನ್ನು ನಿಭಾಯಿಸಬೇಕು ಎಂಬುದನ್ನು ರೋಸ್ಟರ್ ಪದ್ಧತಿ ನಿರ್ಧರಿಸುವುದು ವಾಡಿಕೆ. ರೋಸ್ಟರ್ ವ್ಯವಸ್ಥೆಯನ್ನು ರೂಪಿಸುವುದು ಮತ್ತು ನ್ಯಾಯಾಲಯದ ಬೇರೆಬೇರೆ ನ್ಯಾಯಾಧೀಶರು ಅಥವಾ ನ್ಯಾಯಪೀಠಗಳಿಗೆ ಬೇರೆಬೇರೆ ಪ್ರಕರಣಗಳನ್ನು ಹಂಚುವ ವಿಶೇಷ ಅಧಿಕಾರವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ನೀಡಿರುವುದು, ನ್ಯಾಯಾಲಯದ ಕಾರ್ಯಚಟುವಟಿಕೆಗಳ ಶಿಸ್ತುಬದ್ಧ ಮತ್ತು ಪರಿಣಾಮಕಾರಿ ನಿರ್ವಹಣೆಯ ಉದ್ದೇಶದಿಂದಲೇ ಹೊರತು, ಯಾವುದೇ ತನ್ನ ಸಹೋದ್ಯೋಗಿಗಳಿಗಿಂತ ಮುಖ್ಯ ನ್ಯಾಯಮೂರ್ತಿಗಳಿಗೆ ಕಾನೂನು ರೀತಿಯ ಅಥವಾ ವಾಸ್ತವಿಕವಾಗಿ ಇರುವ ಹೆಚ್ಚಿನ ಅಧಿಕಾರದ ಕಾರಣಕ್ಕಾಗಿ ಅಲ್ಲ.

ಮುಖ್ಯ ನ್ಯಾಯಮೂರ್ತಿಗಳು, ತಮ್ಮ ಸರಿಸಮನಾದ ಇತರ ನ್ಯಾಯಮೂರ್ತಿಗಳ ನಡುವೆ ಮೊದಲಿಗರು-ಅವರಿಗಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ- ಎಂಬುದು ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸ್ಥಾಪಿತವಾಗಿರುವ ಸಂಗತಿ. ಇನ್ನು, ಅದು ಒಂದು ನ್ಯಾಯಪೀಠದ ಸದಸ್ಯ ಬಲದ ವಿಷಯವಿರಬಹುದು ಅಥವಾ ಯಾವೆಲ್ಲ ನ್ಯಾಯಾಧೀಶರು ಪೀಠದ ಭಾಗವಾಗಬೇಕು ಎಂಬುದಿರಬಹುದು; ಒಟ್ಟಾರೆ, ರೋಸ್ಟರ್ ವ್ಯವಸ್ಥೆಯನ್ನು ನಿರ್ಧರಿಸುವ ವಿಷಯದಲ್ಲಿ ಕೂಡ ಅಷ್ಟೇ ಗಟ್ಟಿಯಾದ ಮತ್ತು ಹಿಂದಿನಿಂದ ನಡೆದುಕೊಂಡು ಬಂದಿರುವ ಕೆಲವು ರೀತಿ-ರಿವಾಜುಗಳಿವೆ ಮತ್ತು ಈ ವಿಷಯದಲ್ಲಿ ಅಂತಹ ಕ್ರಮಗಳೇ ಮುಖ್ಯನಾಯಮೂರ್ತಿಗಳಿಗೆ ಮಾರ್ಗದರ್ಶಿ ಸೂತ್ರಗಳು.

ಹಾಗೇ, ಈ ಸೂತ್ರಕ್ಕೆ ಪೂರಕವಾದ ಮತ್ತೊಂದು ಅಗತ್ಯ ನಿಯಮವೆಂದರೆ; ಸೂಕ್ತ ನ್ಯಾಯಪೀಠದಿಂದಲೇ ವಿಚಾರಣೆ ನಡೆಸಬೇಕಾದಂತಹ ಪ್ರಕರಣ ಮತ್ತು ವಿಷಯಗಳನ್ನು, ಬಹು ನ್ಯಾಯಾಧೀಶರನ್ನು ಒಳಗೊಂಡ ಈ ನ್ಯಾಯಾಲಯ ಸೇರಿದಂತೆ ಯಾವುದೇ ನ್ಯಾಯಾಂಗ ವ್ಯವಸ್ಥೆ ತಾನಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತಿಲ್ಲ ಮತ್ತು ತೀರ್ಪು ನೀಡುವಂತೆಯೂ ಇಲ್ಲ. ಅಂತಹ ವಿಷಯಗಳನ್ನು ರೋಸ್ಟರ್ ಮಾನದಂಡದಡಿ ರಚನೆಯಾಗಿರುವ ನಿಗದಿತ ನ್ಯಾಯಪೀಠದ, ನಿಗದಿತ ಸಂಖ್ಯೆಯ ನ್ಯಾಯಾಧೀಶರೇ ನಿಭಾಯಿಸಬೇಕು.

ಈ ಮೇಲಿನ ಎರಡು ನಿಯಮಗಳ ಪಾಲನೆಯ ವಿಷಯದಲ್ಲಿ ಯಾವುದೇ ನ್ಯೂನತೆಯುಂಟಾದರೂ ಅಂತಹ ನಡೆ ಅನಿರೀಕ್ಷಿತ ಮತ್ತು ಅಸಹಜ ಪರಿಣಾಮಗಳಿಗೆ ಕಾರಣವಾಗುವುದಷ್ಟೇ ಅಲ್ಲ, ಇಡೀ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತು ವಿಶ್ವಾಸಕ್ಕೆ ಪೆಟ್ಟು ನೀಡಲಿದೆ. ನ್ಯಾಯಾಲಯದ ವಿಶ್ವಾಸಾರ್ಹತೆಗೇ ಧಕ್ಕೆ ಬರಲಿದೆ. ಅಂತಹ ತಪ್ಪು ಹೆಜ್ಜೆಗಳು ಉಂಟುಮಾಡುವ ಅರಾಜಕತ್ವ ಕೂಡ ಅಪಾಯಕಾರಿ.

ಇತ್ತೀಚೆಗೆ ಆ ಎರಡು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ ಎಂಬುದನ್ನು ತಿಳಿಸಲು ವಿಷಾದಿಸುತ್ತೇವೆ. ದೇಶದ ಮತ್ತು ನ್ಯಾಯಾಂಗ ವ್ಯವಸ್ಥೆಯ ಹಿತದೃಷ್ಟಿಯಿಂದ ದೀರ್ಘಕಾಲೀನ ವ್ಯತಿರಿಕ್ತ ಪರಿಣಾಮಗಳನ್ನು ಬೀರುವಂತಹ ಪ್ರಕರಣವನ್ನು ಈ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ಯಾವುದೇ ತರ್ಕವಿಲ್ಲದೆ, ಸೂಕ್ತ ಕಾರಣವಿಲ್ಲದೆ, 'ಅವರ ಆಯ್ಕೆಯ' ಪೀಠಗಳಿಗೇ ವಹಿಸಿದ ನಿದರ್ಶನಗಳೂ ಇವೆ. ಎಂತಹದ್ದೇ ಬೆಲೆ ತೆತ್ತಾದರೂ ಸರಿ, ಇಂತಹದ್ದನ್ನು ತಡೆಯಬೇಕಿದೆ.

ಈ ಬಗ್ಗೆ ನಾವು ಹೆಚ್ಚಿನ ವಿವರ ನೀಡಿ, ನ್ಯಾಯಾಂಗಕ್ಕೆ ಮುಜುಗರ ತರಲು ಬಯಸುವುದಿಲ್ಲ. ಆದರೆ, ನಿಯಮ ಮೀರಿದ ಅಂತಹ ನಡೆಗಳು ಈಗಾಗಲೇ ಈ ನ್ಯಾಯಾಲಯದ ಘನತೆಗೆ ಧಕ್ಕೆ ತಂದಿವೆ ಎಂಬುದನ್ನು ತಾವು ದಯಮಾಡಿ ಗಮನಿಸಬೇಕಿದೆ.

ಈ ಮೇಲಿನ ಬಳವಣಿಗೆಗಳ ಹಿನ್ನೆಲೆಯಲ್ಲಿ, ಆರ್ ಪಿ ಲುಥ್ರಾ ವರ್ಸಸ್ ಭಾರತೀಯ ಒಕ್ಕೂಟದ ಪ್ರಕರಣದಲ್ಲಿನ ಅ.೨೭ರ ಆದೇಶಕ್ಕೆ ಸಂಬಂಧಿಸಿದಂತೆ, ನಿಮಗೇ ನೇರವಾಗಿ ವಿಷಯವನ್ನು ಮನವರಿಕೆ ಮಾಡುವ ಪ್ರಯತ್ನ ನಮ್ಮದು. ಸಾರ್ವಜನಿಕ ಹಿತದೃಷ್ಟಿಯಿಂದ ಆ ಕುರಿತ ವಿಚಾರಣಾ ಪ್ರಕ್ರಿಯೆಯ ಮೆಮೋರಾಂಡಮ್ ಆಫ್ ಪ್ರೊಸೀಜರ್ ಅಂತಿಮಗೊಳಿಸುವ ವಿಷಯದಲ್ಲಿ, ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶವಾಗಬಾರದು. ಈ ನ್ಯಾಯಾಲಯದ ಸಂವಿಧಾನ ಪೀಠದ ವ್ಯಾಪ್ತಿಗೆ ಬರುವ ಮೆಮೋರಾಂಡಮ್ ಆಫ್ ಪ್ರೊಸೀಜರ್ [ಸುಪ್ರೀಂ ಕೋರ್ಟ್ ಅಡ್ವಾಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಅಂಡ್ ಆನರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (೨೦೧೬), ೫ ಎಸ್ ಸಿಸಿ೧] ವಿಷಯವನ್ನು ಬೇರೊಂದು ಪೀಠ ಹೇಗೆ ಪರಿಗಣಿಸಿತು ಎಂಬುದು ಅರ್ಥವಾಗುತ್ತಿಲ್ಲ.

ಅದರ ಹೊರತಾಗಿಯೂ, ನಿಮ್ಮನ್ನೂ ಒಳಗೊಂಡಂತೆ ಐವರು ನ್ಯಾಯಾಧೀಶರ ಕೊಲಿಜಿಯಂನಲ್ಲಿ ಈ ವಿಷಯದ ಕುರಿತು ವ್ಯಾಪಕ ಚರ್ಚೆ ನಡೆದು, ಮೆಮೋರಾಂಡಮ್ ಆಫ್ ಪ್ರೊಸೀಜರ್ ಅಂತಿಮಗೊಳಿಸಲಾಗಿತ್ತು ಮತ್ತು ಅಂದಿನ ಮುಖ್ಯ ನ್ಯಾಯಮೂರ್ತಿಗಳು ಅಂತಿಮಗೊಂಡ ಮೆಮೋರಾಂಡಮ್ ಆಫ್ ಪ್ರೊಸೀಜರನ್ನು ೨೦೧೭ರ ಮಾರ್ಚ್‌ನಲ್ಲೇ ಭಾರತ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಸರ್ಕಾರ ಆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರದ ಆ ಮೌನದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ [ಅಡ್ವಾಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ (ಸುಪ್ರಾ)] ಕೊಲಿಜಿಯಂ ಅಂತಿಮಗೊಳಿಸಿದ ಮೆಮೋರಾಂಡಮ್ ಆಫ್ ಪ್ರೊಸೀಜರನ್ನು ಭಾರತ ಸರ್ಕಾರದ ಒಪ್ಪಿಕೊಂಡಿದೆ ಎಂದು ಪರಿಗಣಿಸಬೇಕಿದೆ. ಹಾಗಾಗಿ, ಮೆಮೋರಾಂಡಮ್ ಆಫ್ ಪ್ರೊಸೀಜರ್ ಅಂತಿಮಗೊಳಿಸುವ ವಿಷಯದಲ್ಲಿ ವಿಭಾಗೀಯ ಪೀಠ ಪುನರ್ ಪರಿಶೀಲನೆಯ ಅಗತ್ಯ ಬೀಳುವುದಿಲ್ಲ ಮತ್ತು ಆ ವಿಷಯವನ್ನು ವಿಳಂಬ ಮಾಡುವ ಅಗತ್ಯವೂ ಇಲ್ಲ.

೨೦೧೭ರ ಜು.೪ರಂದು ಈ ನ್ಯಾಯಾಲಯದ ಏಳು ಮಂದಿ ನ್ಯಾಯಾಧೀಶರನ್ನೊಳಗೊಂಡ ವಿಭಾಗೀಯ ಪೀಠ, ಗೌರವಾನ್ವಿತ ನ್ಯಾಯಮೂರ್ತಿ ಸಿ ಎಸ್ ಕರ್ಣನ್ [(೨೦೧೭) ೧ ಎಸ್ ಸಿಸಿ ೧] ಪ್ರಕರಣದಲ್ಲಿ ತೀರ್ಪು ನೀಡಿದರು. ಆ ನಿರ್ಧಾರದಲ್ಲಿ (ಆರ್ ಪಿ ಲುಥ್ರಾ ಪ್ರಕರಣದಲ್ಲಿ ಪ್ರಸ್ತಾವಿತ) ನಮ್ಮಲ್ಲಿ ಇಬ್ಬರು ಗಮನಿಸಿದಂತೆ, ನ್ಯಾಯಾಧೀಶರ ನೇಮಕ ಪ್ರಕ್ರಿಯೆಯ ಪುನರಾವಲೋಕನ ಅಗತ್ಯವಿದೆ ಮತ್ತು ವಾಗ್ಧಂಡನೆ ಹೊರತಾಗಿ ತಪ್ಪಿತಸ್ಥರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಬೇರೊಂದು ವ್ಯವಸ್ಥೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಆದರೆ, ಮೆಮೋರಾಂಡಮ್ ಆಫ್ ಪ್ರೊಸೀಜರ್ ವಿಷಯದಲ್ಲಿ ಆ ಏಳು ನ್ಯಾಯಾಧೀಶರ ಪೈಕಿ ಯಾರೊಬ್ಬರೂ ಗಮನಹರಿಸಿರಲಿಲ್ಲ.

ಮೆಮೋರಾಂಡಮ್ ಆಫ್ ಪ್ರೊಸೀಜರ್ ಗೆ ಸಂಬಂಧಿಸಿದ ಯಾವುದೇ ವಿಷಯವಿದ್ದರೂ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಮತ್ತು ಪೂರ್ಣಪೀಠದ ಎದುರು ಪ್ರಸ್ತಾಪವಾಗಬೇಕು. ಅಂತಹ ಗಂಭೀರ ವಿಷಯದಲ್ಲಿ ಒಂದು ವೇಳೆ ಯಾವುದೇ ಪರಾಮರ್ಶೆ ಅಗತ್ಯವಿದೆ ಎನಿಸಿದರೆ, ಆಗ ಸಂವಿಧಾನಪೀಠ ಹೊರತುಪಡಿಸಿ ಬೇರೆ ಯಾರೂ ಅದನ್ನು ಪರಿಗಣಿಸುವಂತಿಲ್ಲ.

ಇದನ್ನೂ ಓದಿ : “ಸುಪ್ರೀಂ ಕೋರ್ಟ್‌ನ ಸ್ವಾತಂತ್ರ್ಯ ಕಾಪಾಡದಿದ್ದರೆ ಪ್ರಜಾತಂತ್ರ ಉಳಿಯಲಾರದು”

ಆ ಹಿನ್ನೆಲೆಯಲ್ಲಿ, ಮೇಲೆ ಕಾಣಿಸಿದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪರಾಮರ್ಶಿಸಬೇಕಿದೆ. ಪರಿಸ್ಥಿತಿಯನ್ನು ಸರಿಪಡಿಸಿ, ಕೊಲಿಜಿಯಂನ ಇತರ ಸದಸ್ಯರೊಂದಿಗೆ ಹಾಗೂ ಅಗತ್ಯಬಿದ್ದರೆ ಈ ನ್ಯಾಯಾಲಯದ ಇತರ ಗೌರವಾನ್ವಿತ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿ, ಸರಿಯಾದ ಪರಿಹಾರ ಕಂಡುಕೊಳ್ಳುವುದು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಹೊಣೆಗಾರಿಕೆ.

೨೦೧೭ರ ಅ.೨೭ರ ಆದೇಶದ (ಆರ್ ಪಿ ಲುಥ್ರಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ) ಕುರಿತ ಈ ಮೇಲಿನ ವಿಷಯವನ್ನು ತಾವು ಸೂಕ್ತ ರೀತಿಯಲ್ಲಿ ಪರಿಹರಿಸಿದ್ದಲ್ಲಿ, ನಂತರ ಅಗತ್ಯಬಿದ್ದರೆ, ಈ ನ್ಯಾಯಾಲಯ ಹೊರಡಿಸಿರುವ ಇಂತಹದ್ದೇ ಇತರ ಪ್ರಕರಣಗಳ ಆದೇಶಗಳ ಬಗ್ಗೆಯೂ ನಿಮ್ಮ ಗಮನ ಸೆಳೆಯುತ್ತೇವೆ.

ವಿಶ್ವಾಸದೊಂದಿಗೆ,

ನ್ಯಾ.ಜೆ ಚಲಮೇಶ್ವರ್, ನ್ಯಾ.ರಂಜನ್ ಗೊಗೋಯ್, ನ್ಯಾ.ಮದನ್ ಬಿ ಲೊಕೂರ್, ನ್ಯಾ.ಕುರಿಯನ್ ಜೋಸೆಫ್

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More