ನ್ಯಾಯಮೂರ್ತಿಗಳ ಜಗಳದಲ್ಲಿ ಕೇಳಿಬರುತ್ತಿರುವ ನ್ಯಾಯಾಧೀಶ ಲೋಯಾ ಯಾರು?

ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅವರ ಮಾತುಗಳಲ್ಲಿ ಕೇಳಿಬರುತ್ತಿರುವ ಸೊಹ್ರಾಬುದ್ದೀನ್ ಪ್ರಕರಣದ ನ್ಯಾಯಾಧೀಶ ಲೋಯಾ ಯಾರು ಎಂಬ ಕುರಿತು ವಿವರಣೆ ಇಲ್ಲಿದೆ

ಅದು 2014 ಡಿ.1ರ ಬೆಳಗ್ಗೆ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬ್ರಿಜ್‌ಗೋಪಾಲ್‌ ಹರ್‌ಕಿಶನ್‌ ಲೋಯಾ ನಾಗಪುರದಲ್ಲಿ ಅಸುನೀಗಿದ್ದರು. ಲೋಯಾ, ಸಹೋದ್ಯೋಗಿಯೊಬ್ಬರ ಮಗಳ ಮದುವೆಗೆ ಲೋಯಾ ನಾಗಪುರಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರು ದೇಶದ ಹೈಪ್ರೊಫೈಲ್‌ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದರು. ಅದು ಗುಜರಾತ್‌ನಲ್ಲಿ 2005ರಲ್ಲಿ ನಡೆದ ಸೋಹ್ರಾಬುದ್ದೀನ್‌ ಶೇಖ್‌ ನಕಲಿ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ. ಈ ಪ್ರಕರಣದಲ್ಲಿ ಗುಜರಾತ್‌ನ ಅಂದಿನ ಗೃಹಸಚಿವರಾಗಿದ್ದ ಅಮಿತ್‌ ಶಾ ಅವರು ಪ್ರಮುಖ ಆರೋಪಿಯಾಗಿದ್ದರು. ಲೋಯಾ ಅಸುನೀಗಿದಾಗ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಲೋಯಾ ಅವರು ಹೃದಯಾಘಾತದಿಂದ ಅಸುನೀಗಿದ್ದಾಗಿ ಅಂದು ಮಾಧ್ಯಮಗಳು ವರದಿ ಮಾಡಿದ್ದವು ಎಂಬುದಾಗಿ ವರದಿಗಾರ ನಿರಂಜನ್‌ ಟಕ್ಲೆ ವಿಶೇಷ ವರದಿ ಮಾಡಿದ್ದಾರೆ. ಈ ಸುದ್ದಿಯನ್ನು ‘ಕಾರವಾನ್‌’ ನ.20 ಮತ್ತು 21ರಂದು ಪ್ರಕಟಿಸಿತ್ತು.

ಲೋಯಾ ಅವರು ಮೃತಪಟ್ಟಾಗ ಅವರ ಕುಟುಂಬದವರು ಯಾರೂ ಮಾಧ್ಯಮದ ಬಳಿ ಮಾತನಾಡಲಿಲ್ಲ. ಆದರೆ, 2016ರ ನವೆಂಬರ್‌ನಲ್ಲಿ ಲೋಯಾ ಅವರ ಸೋದರ ಸೊಸೆ ನೂಪುರ್‌ ಬಾಲಪ್ರಸಾದ್‌ ಬಿಯಾನಿ ಅವರು, ತಮ್ಮ ಸೋದರಮಾವನ ಸಾವಿನ ಸುತ್ತ ಇದ್ದ ಅನುಮಾನಗಳ ಬಗ್ಗೆ ವಿವರವಾಗಿ ಹೇಳಿದ್ದರು. ನಂತರ ನೂಪುರ್‌ ಅವರ ತಾಯಿ ಲೋಯಾ ಅವರ ಸಹೋದರಿ, ಸರ್ಕಾರಿ ವೈದ್ಯೆ ಅನುರಾಧಾ ಬಿಯಾನಿ, ಮತ್ತೊಬ್ಬರು ಸಹೋದರಿ ಸರಿತಾ ಮಂದಾನಿ ಮತ್ತು ಅವರ ತಂದೆ ಹರ್‌ಕಿಶನ್‌ ಲೋಯಾ ಅವರು, "ಈ ಸಾವು ಸಹಜವಲ್ಲ. ಸಾವಿನ ಸುತ್ತ ಹಲವು ಅನುಮಾನಗಳು, ಪ್ರಶ್ನೆಗಳು ಮೂಡುತ್ತಿವೆ," ಎಂದು ಆರೋಪಿಸಿದ್ದಾರೆ.

ಆ ರಾತ್ರಿ ನಡೆದದ್ದೇನು?: 2014ರ ನ.30ರಂದು ನಾಗಪುರದಿಂದ ಪತ್ನಿ ಶರ್ಮಿಳಾ ಅವರಿಗೆ ರಾತ್ರಿ ಕರೆ ಮಾಡಿದ ಲೋಯಾ, ಸುಮಾರು ೪೦ ನಿಮಿಷ ಸಂಭಾಷಣೆ ನಡೆಸಿದ್ದರು. ಮದುವೆ ಆರತಕ್ಷತೆ ಮುಗಿಸಿಕೊಂಡು ಆ ರಾತ್ರಿ ನಾಗಪುರದ ವಿಐಪಿ ಗೆಸ್ಟ್‌ ಹೌಸ್‌ ‘ರವಿ ಭವನ್‌’ನಲ್ಲಿ ಸಹೋದ್ಯೋಗಿಗಳೊಂದಿಗೆ ಲೋಯಾ ತಂಗುತ್ತಾರೆ. ಅವರು ಪತ್ನಿಗೆ ಮಾಡಿದ್ದ ಕರೆಯೇ ಕೊನೆಯ ಕರೆ. ಮಾರನೇ ದಿನ ಲೋಯಾ ಅಸುನೀಗಿದ ಸುದ್ದಿ ಮನೆಯವರಿಗೆ ಹೋಗುತ್ತದೆ. ಅಂದು ರಾತ್ರಿ ಲೋಯಾ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಗೆಸ್ಟ್‌ಹೌಸ್‌ನಿಂದ ಅವರನ್ನು ಆಟೋ ರಿಕ್ಷಾದಲ್ಲಿ ದಾಂಡೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ 'ಎಲೆಕ್ಟ್ರೋಕಾರ್ಡಿಯೋಗ್ರಾಫಿ’ ವಿಭಾಗ ಕಾರ್ಯನಿರ್ವಹಿಸದ ಕಾರಣ ಅವರನ್ನು ಮೆಡಿಟ್ರಿನಾ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸುತ್ತಾರೆ.

ಲೋಯಾ ಮೃತಪಟ್ಟ ಸಂದರ್ಭದಲ್ಲಿ ಸೋಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಈ ಪ್ರಕರಣವನ್ನು ಇಡೀ ದೇಶವೇ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿತ್ತು. 2012ರಲ್ಲಿ ಸುಪ್ರೀಂ ಕೊರ್ಟ್‌ ಈ ಪ್ರಕರಣವನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಹಿಸಿತ್ತು. ಒಬ್ಬರೇ ನ್ಯಾಯಾಧೀಶರು ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಬೇಕು ಎಂದೂ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಅದರಂತೆ, ಜೆ ಟಿ ಉಟ್ಪತ್‌ ಅವರು ಪ್ರಕರಣದ ನ್ಯಾಯಾಧೀಶರಾದರು. 2014 ಜೂನ್‌ 6ರಂದು ಅಮಿತ್‌ ಶಾ ಪ್ರಕರಣದ ವಿಚಾರಣೆಗೆ ಹಾಜರಾತಿಯಿಂದ ವಿನಾಯಿತಿ ಕೋರಿದ್ದರು. ಆದರೆ, ಈ ವಿನಾಯಿತಿ ನಿರಾಕರಿಸಿದ ನ್ಯಾಯಾಧೀಶರು, ಜೂ.26ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದರು. ಆದರೆ, ಜೂ.25ಕ್ಕೆ ಉಟ್ಪತ್‌ ಅವರ ವರ್ಗಾವಣೆಯಾಗುತ್ತದೆ. ಅಲ್ಲಿಗೆ ಸುಪ್ರೀಂ ಕೋರ್ಟ್‌ನ ಸೂಚನೆಯನ್ನೂ ಮೀರಿ ಉಟ್ಪತ್‌ ಅವರನ್ನು ವರ್ಗ ಮಾಡಿ, ಆ ಸ್ಥಾನಕ್ಕೆ ಬ್ರಿಜ್‌ಗೋಪಾಲ್‌ ಹರ್‌ಕಿಶನ್‌ ಲೋಯಾ ಅವರನ್ನು ನೇಮಿಸಲಾಗುತ್ತದೆ.

ಲೋಯಾ ಅವರು ಅ.31ಕ್ಕೆ ಅಮಿತ್‌ ಶಾ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸುತ್ತಾರೆ. ಆದರೆ ಶಾ ಈ ವಿಚಾರಣೆಗೂ ಬರುವುದಿಲ್ಲ. ಆಗ ಡಿ.15 ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸುತ್ತಾರೆ. ಡಿ.1ರಂದು ಲೋಯಾ ಅವರು ಅಸುನೀಗುತ್ತಾರೆ. ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಈ ಪ್ರಕರಣ ಕುರಿತು ಕೂಲಂಕಷವಾಗಿ ವರದಿ ಮಾಡಿದ ನಂತರ, ತೃಣಮೂಲ ಕಾಂಗ್ರೆಸ್‌ ಸಂಸದರು ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಆ ಸಂದರ್ಭದಲ್ಲಿ ಪಾರ್ಲಿಮೆಂಟ್‌ ಎದುರು ಪ್ರತಿಭಟನೆ ಮಾಡುತ್ತಾರೆ. ಅದರ ಮರುದಿನವೇ ಸೋಹ್ರಾಬುದ್ಧೀನ್‌ ಸಹೋದರ ರುಬಾಬುದ್ದೀನ್‌ ಸಿಬಿಐಗೆ ಪತ್ರ ಬರೆದು, ಲೋಯಾ ಸಾವಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಆದರೆ, ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ‘ಕಾರವಾನ್‌’ ವರದಿಯಲ್ಲಿ ಹೇಳಲಾಗಿದೆ.

ಸಾವಿನ ಸುತ್ತ ಎದ್ದ ಅನುಮಾನಗಳೇನು?: “ಲೋಯಾ ಅವರ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತವರೂರಾದ ಲಾತೂರ್‌ ಜಿಲ್ಲೆಯ ಗೇಟ್‌ಗಾನ್‌ಗೆ ತರಲಾಗುತ್ತದೆ. ಮೃತದೇಹದೊಂದಿಗೆ ಇದ್ದದ್ದು ಆಂಬುಲೆನ್ಸ್‌ ಚಾಲಕ ಒಬ್ಬನೇ. ಹಾಗಾದರೆ ಲೋಯಾ ಅವರೊಂದಿಗೆ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಂಡಿದ್ದ ಸಹೋದ್ಯೋಗಿಗಳು ಎಲ್ಲಿ ಹೋದರು? ಒಬ್ಬ ನ್ಯಾಯಾಧೀಶರು ಮೃತಪಟ್ಟಾಗ ಅವರೊಂದಿಗೆ ಮತ್ತಿನ್ಯಾರೂ ಯಾಕೆ ಬರಲಿಲ್ಲ?” ಎಂದು ಲೋಯಾ ತಂದೆ ಮತ್ತು ಸಹೋದರಿಯರು ಪ್ರಶ್ನಿಸುತ್ತಾರೆ. ಲೋಯಾ ಪತ್ನಿ ಶರ್ಮಿಳಾ, ಮಗಳು ಅಪೂರ್ವ ಮತ್ತು ಮಗ ಅನುಜ್‌ ಅವರು ಮುಂಬೈನಿಂದ ಗೇಟ್‌ಗಾನ್‌ಗೆ ಬರುವಾಗ ಅವರೊಂದಿಗೆ ಕೆಲ ನ್ಯಾಯಾಧೀಶರೂ ಇದ್ದರು. ಅವರಲ್ಲಿ ಒಬ್ಬರು, "ಈ ವಿಷಯವನ್ನು ಯಾರೊಂದಿಗೂ ಮಾತನಾಡಬೇಡಿ," ಎಂದು ಹೇಳಿದ್ದಾಗಿ ಲೋಯಾ ತಂದೆ ಹರ್‌ಕಿಶನ್ ಹೇಳುತ್ತಾರೆ. ಅದರಂತೆ ಪತ್ನಿ, ಮಗಳು ಮತ್ತು ಮಗ ಈ ವಿಷಯವಾಗಿ ಯಾರೊಂದಿಗೂ ಮಾತನಾಡದೆ ಮೌನವಾಗುತ್ತಾರೆ,” ಎಂದು ಲೋಯಾ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ.

ಸಹೋದರಿ ಬಿಯಾನಿ ಅವರು, "ಮೃತದೇಹವನ್ನು ತಂದಾಗ ಲೋಯಾ ಕೊರಳು, ಶರ್ಟ್‌ ಕಾಲರ್‌ ಮತ್ತು ಹಿಂಬದಿ ಭಾಗದಲ್ಲಿ ರಕ್ತದ ಕಲೆ ಇತ್ತು. ಬೆಲ್ಟ್‌ ಅಸ್ತವ್ಯಸ್ತವಾಗಿತ್ತು. ಪ್ಯಾಂಟ್‌ ಬಟನ್‌ ಕಿತ್ತುಹೋಗಿತ್ತು. ತಲೆ ಹಿಂಬದಿಯಲ್ಲಿ ಗಾಯವಾಗಿತ್ತು, ಎಡಭಾಗದ ಭುಜ ರಕ್ತದ ಕಲೆಯಿಂದ ಕೂಡಿತ್ತು," ಎಂದೂ ಕುಟುಂಬಸ್ಥರು ಹೇಳಿದ್ದಾರೆ. ಆದರೆ, ನಾಗಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಲೋಯಾ ಮರಣೋತ್ತರ ಪರೀಕ್ಷೆ ವರದಿಯಲ್ಲಿ, "ಬಟ್ಟೆ ನೀರಿನಿಂದ ನೆನೆದಿತ್ತು. ವಾಂತಿಯಿಂದ ಒಣಗಿತ್ತು,” ಎಂದು ಹೇಳಲಾಗಿದೆ.

"ವೈದ್ಯೆಯಾಗಿ ನನಗೆ ಗೊತ್ತು, ಮರಣೋತ್ತರ ಪರೀಕ್ಷೆ ವೇಳೆ ರಕ್ತ ಹೊರಕ್ಕೆ ಬರುವುದಿಲ್ಲ. ನಾವು ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಒತ್ತಡ ಹೇರಿದರೂ ಲೋಯಾ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು, ಈ ವಿಷಯವನ್ನು ಹೆಚ್ಚು ಬೆಳೆಸಲು ಹೋಗಬೇಡಿ ಎಂದು ನಮ್ಮನ್ನು ನಿರ್ಲಕ್ಷಿಸಿದರು," ಎಂದು ಬಿಯಾನಿ ಆರೋಪಿಸುತ್ತಾರೆ. “ಅಲ್ಲದೆ, ಪೊಲೀಸರ ಪಂಚನಾಮೆ ವರದಿಯನ್ನೂ ಕುಟುಂಬಕ್ಕೆ ಇದುವರೆಗೂ ನೀಡಿಲ್ಲ. ಅಚ್ಚರಿ ಅಂದರೆ, ಲೋಯಾ ಅವರು ಅಸುನೀಗಿದ ಸುದ್ದಿಯನ್ನು ಕುಟುಂಬಸ್ಥರಿಗೆ ತಿಳಿಸುವುದು ಆರೆಸ್ಸೆಸ್ ನಾಯಕ ಬಹೇಟಿ ಎಂಬ ವ್ಯಕ್ತಿ. ಇದೇ ವ್ಯಕ್ತಿ ಮೂರ್ನಾಲ್ಕು ದಿನದ ನಂತರ ಲೋಯಾ ಅವರ ಮೊಬೈಲ್‌ ಅನ್ನು ತಲುಪಿಸುತ್ತಾನೆ. ಆದರೆ, ಮೊಬೈಲ್‌ನಲ್ಲಿ ಇದ್ದ ಸಂದೇಶಗಳು ಹಾಗೂ ಇತರ ಎಲ್ಲ ಮಾಹಿತಿಗಳು ಡಿಲಿಟ್‌ ಆಗಿದ್ದವು,” ಎಂಬುದು ಬಿಯಾನಿ ಹೇಳಿಕೆ.

“ಲೋಯಾ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಆಟೋರಿಕ್ಷಾದಲ್ಲಿ ಅವರನ್ನು ಕರೆದೊಯ್ಯಲಾಯಿತು ಎಂದು ಹೇಳಲಾಗಿದೆ. ಅವರು ಉಳಿದುಕೊಂಡಿದ್ದ ವಿಐಪಿ ಗೆಸ್ಟ್‌ಹೌಸ್‌ನಲ್ಲಿ ಒಂದೂ ಕಾರು ಇರಲಿಲ್ಲವೇ? ಆ ಸಂದರ್ಭದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು. ಶಾಸಕರ್ಯಾರೂ ಆ ಗೆಸ್ಟ್‌ಹೌಸ್‌ನಲ್ಲಿ ತಂಗಿರಲಿಲ್ಲವೇ? ಬೆಳಗ್ಗಿನ ಸಮಯದಲ್ಲೇ ಆಟೋಗಳು ಓಡಾಡದ ಆ ಸ್ಥಳದಲ್ಲಿ ನಡುರಾತ್ರಿಯಲ್ಲಿ ಇವರಿಗೆ ಆಟೋ ಸಿಕ್ಕಿದ್ದಾದರೂ ಹೇಗೆ?” ಎಂದು ಕುಟುಂಬದವರು ಪ್ರಶ್ನಿಸುತ್ತಾರೆ. “ಮರಣೋತ್ತರ ಪರೀಕ್ಷೆ ವರದಿಯ ಪ್ರತಿ ಪುಟದಲ್ಲೂ ನಾಗಪುರದ ಸರ್ದಾರ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸಹಿ ಮಾಡಿದ್ದಾರೆ. ಅದರಲ್ಲಿ ಮತ್ತೊಬ್ಬರು ಲೋಯಾ ಅವರ ಸೋದರ ಸಂಬಂಧಿ ಎಂದು ಹೇಳಿ ಮೃತದೇಹ ಪಡೆಯುವುದಕ್ಕೂ ಅವರೇ ಸಹಿ ಮಾಡಿದ್ದಾರೆ. ಆದರೆ, ಆ ವ್ಯಕ್ತಿ ಯಾರೆಂಬುದೇ ನಮಗೆ ತಿಳಿದಿಲ್ಲ,” ಎಂದು ಕುಟುಂಬದವರು ತಿಳಿಸುತ್ತಾರೆ ಎಂದು ‘ಕಾರವಾನ್‌’ ವರದಿ ಹೇಳಿದೆ.

ಇದನ್ನೂ ಓದಿ : “ಸುಪ್ರೀಂ ಕೋರ್ಟ್‌ನ ಸ್ವಾತಂತ್ರ್ಯ ಕಾಪಾಡದಿದ್ದರೆ ಪ್ರಜಾತಂತ್ರ ಉಳಿಯಲಾರದು”

ಮರಣೋತ್ತರ ಪರೀಕ್ಷೆ ವರದಿಯಲ್ಲಿ ‘ಕಾರ್ನೋರಿ ಆರ್ಟೇರಿ ಇನ್‌ಸಫಿಶಿಯನ್ಸಿ’ಯಿಂದ ಲೋಯಾ ಮೃತಪಟ್ಟಿದ್ದಾರೆ ಎಂದು ಬರೆಯಲಾಗಿದೆ. ಮುಂಬೈನ ಹೃದ್ರೋಗ ತಜ್ಞ ಹಸ್ಮುಖ್‌ ರಾವತ್‌ ಅವರ ಪ್ರಕಾರ, “ಸಾಮಾನ್ಯವಾಗಿ ಈ ತರಹದ ಹೃದಯ ಕಾಯಿಲೆ ಅತಿಯಾದ ಬೊಜ್ಜು, ಧೂಮಪಾನ ಅಥವಾ ಕುಟುಂಬದ ವಂಶವಾಹಿಯಿಂದ ಬರುತ್ತದೆ.” ಆದರೆ, ವೈದ್ಯೆ ಬಿಯಾನಿ ಅವರು ಹೇಳುವಂತೆ, “ಅವರ ಕುಟುಂಬದಲ್ಲಿ ಇದುವರೆಗೂ ಯಾರಿಗೂ ಹೃದಯ ಸಂಬಂಧಿ ಕಾಯಿಲೆಯೇ ಇಲ್ಲ. ನಮ್ಮ ತಂದೆಗೆ ೮೫ ವರ್ಷ ವಯಸ್ಸು. ಅವರು ಈಗಲೂ ಸದೃಢರಾಗಿದ್ದಾರೆ. ಅಣ್ಣ ಲೋಯಾ ಸಣ್ಣ ಕೆಮ್ಮು ಬಂದರೂ ನನ್ನ ಸಲಹೆ ಕೇಳುತ್ತಿದ್ದರು. ಹೃದಯ ಸಮಸ್ಯೆ ಇದ್ದಿದ್ದರೆ ನನ್ನ ಬಳಿ ಹೇಳುತ್ತಿದ್ದರು. ಅವರಿಗೆ ಬೊಜ್ಜಿನ ಸಮಸ್ಯೆಯೂ ಇರಲಿಲ್ಲ. ಹಲವು ವರ್ಷಗಳಿಂದ ಪ್ರತಿದಿನ ಟೇಬಲ್‌ ಟೆನಿಸ್‌ ಆಡುತ್ತಿದ್ದರು,” ಎಂದಿದ್ದಾರೆ.

ಪರವಾಗಿ ತೀರ್ಪು ನೀಡುವಂತೆ ೧೦೦ ಕೋಟಿ ಆಮಿಷ: "ಈ ಪ್ರಕರಣದಲ್ಲಿ ಅಮಿತ್‌ ಶಾ ಅವರ ಪರವಾಗಿ ತೀರ್ಪು ನೀಡಬೇಕು, ಅದಕ್ಕೆ ಪ್ರತಿಯಾಗಿ ೧೦೦ ಕೋಟಿ ರೂಪಾಯಿ ನೀಡುವುದಾಗಿ ನ್ಯಾಯಾಧೀಶರೊಬ್ಬರು ಆಮಿಷ ಒಡ್ಡಿದ್ದರು. ಲೋಯಾ ಅವರು ಸಾಯುವ ಕೆಲ ವಾರಗಳ ಹಿಂದೆ ಈ ಘಟನೆ ನಡೆದಿತ್ತು,” ಎಂದು ಬ್ರಿಜ್‌ಗೋಪಾಲ್‌ ಹರ್‌ಕಿಶನ್‌ ಲೋಯಾ ಅವರ ಸಹೋದರಿ ಅನುರಾಧಾ ಬಿಯಾನಿ ಅವರು ಹೇಳಿರುವುದಾಗಿಯೂ ‘ಕಾರವಾನ್‌’ ವರದಿ ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More