ಸಿಜೆಐ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳ ನಡೆ ಬಗ್ಗೆ ಇವರೇನು ಹೇಳುತ್ತಾರೆ?

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಕಾರ್ಯವಿಧಾನದಿಂದ ಅಸಮಾಧಾನಗೊಂಡ ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆ ಬಗ್ಗೆ ನ್ಯಾಯಾಂಗ ವಲಯದ ತಜ್ಞರ ಅಭಿಪ್ರಾಯ ಇಲ್ಲಿದೆ

ದೇಶದ ಪ್ರಜಾತಂತ್ರ ವ್ಯವಸ್ಥೆ ಅಪಾಯ ಎದುರಿಸುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಿಬಿಐನ ವಿಶೇಷ ನ್ಯಾಯಾಧೀಶ ಲೋಯಾ ಅವರ ಸಾವು ಕುರಿತಂತೆ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು.
ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ
ನ್ಯಾಯಾಂಗದ ಒಳಗಿರುವವರಿಂದಲೇ ನ್ಯಾಯಾಂಗಕ್ಕೆ ಬೆದರಿಕೆ ಇದೆ. ಈ ಘಟನೆ ನಂತರ ಜನರು ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಪುನರ್‌ಸ್ಥಾಪಿಸಿ ಎಂದು ಕೇಳುತ್ತಾರೆ. ಆದರೆ, ಸರ್ಕಾರವೊಂದರಿಂದಲೇ ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ನ್ಯಾಯಮೂರ್ತಿಗಳೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆ ನಾಲ್ವರು ನ್ಯಾಯಮೂರ್ತಿಗಳು ಒಟ್ಟಿಗೆ ಕುಳಿತು, ಆಗಿರುವ ಕಂದಕವನ್ನು ಮುಚ್ಚಿ, ಮೊದಲಿನ ವಿಶ್ವಾಸದೊಂದಿಗೆ ಜನರ ಮುಂದೆ ಬರಬೇಕು.
ಅಶೋಕ್‌ ಕುಮಾರ್‌ ಗಂಗೂಲಿ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ
ಇದು ನಿಜಕ್ಕೂ ದುರದೃಷ್ಟಕರ ಘಟನೆ. ಈ ಬಗೆಯ ವಿಚಾರಗಳನ್ನು ಸಾರ್ವಜನಿಕವಾಗಿ ಮಾತನಾಡುವುದರಿಂದ ಜನರು ಸರ್ವೋಚ್ಚ ನ್ಯಾಯಾಲಯದ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಕಳೆದುಕೊಳ್ಳುತ್ತಾರೆ.
ಕೆ ಜಿ ಬಾಲಕೃಷ್ಣನ್‌, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ
ಇದು ಹಿಂದೆಂದೂ ನಡೆದಿರದಂಥ ಘಟನೆ, ದುರದೃಷ್ಟಕರ ಕೂಡ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾಗಿ ನಾಲ್ವರು ನ್ಯಾಯಮೂರ್ತಿಗಳು ಆರೋಪಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಲೋಯಾ ಪ್ರಕರಣವನ್ನು ತಮ್ಮ ಇಚ್ಛೆಯಂತೆ ಕಿರಿಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದ್ದರು. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಈ ರೀತಿಯ ಆರೋಪ ಕೇಳಿಬಂದಿರುವುದು ಸಂವಿಧಾನಕ್ಕೆ ಕಪ್ಪುಚುಕ್ಕೆ.
ಪ್ರಶಾಂತ್‌ ಭೂಷಣ್‌, ಹಿರಿಯ ವಕೀಲ 
ಈ ನಾಲ್ವರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯರು ಅಷ್ಟೇ; ಸುಪ್ರೀಂ ಕೋರ್ಟ್‌ನ ತುಂಬಾ ಬುದ್ಧಿವಂತ ನ್ಯಾಯಮೂರ್ತಿಗಳಲ್ಲ.
ಆರ್‌ ಎಸ್‌ ಸೌದಿ, ದೆಹಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ 
ಎಲ್ಲೆಡೆ ನ್ಯಾಯಾಂಗ ವ್ಯವಸ್ಥೆ ವಿಭಜನೆ ಆಗುತ್ತಿರುತ್ತದೆ. ಆದರೆ, ಅದು ಶಾಶ್ವತ ವಿಭಜನೆ ಆಗಿರುವುದಿಲ್ಲ. ಈ ಪ್ರಕರಣದಲ್ಲಿ ಸರ್ಕಾರ ಮಧ್ಯಪ್ರವೇಶಿಸದೆ, ನ್ಯಾಯಾಲಯವೇ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ನನಗಿದೆ.
ಸಲ್ಮಾನ್‌ ಖುರ್ಷಿದ್‌, ಹಿರಿಯ ನ್ಯಾಯವಾದಿ
ನಿರೀಕ್ಷೆಯಂತೆ ನ್ಯಾಯಮೂರ್ತಿಗಳು ತಮ್ಮ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದಾರೆ. ಅವರ ನಡುವೆ ಸ್ಥಾನಮಾನದ ಅಂತರವಿಲ್ಲ. ತಪ್ಪು ಕಂಡುಬಂದಾಗ ಅದನ್ನು ಬಹಿರಂಗ ಮಾಡಿದ್ದಾರೆ. ಅಷ್ಟಕ್ಕೂ ಅವರು ಸಿಜೆಐ ಅವರ ಗಮನಕ್ಕೆ ತಾರದೆ ಸುದ್ದಿಗೋಷ್ಠಿಯನ್ನು ನಡೆಸಿಲ್ಲ.
ಇಂದಿರಾ ಜೈಸಿಂಗ್‌, ಹಿರಿಯ ನ್ಯಾಯವಾದಿ
ಇದು ಅತ್ಯಂತ ಕರಾಳ ದಿನ. ಈ ಘಟನೆ ಕೊಲಿಜಿಯಂ ವ್ಯವಸ್ಥೆಯಲ್ಲಿ ಇರುವ ಅಗಾಧ ಅಸಮಾಧಾನವನ್ನು ಬಹಿರಂಗ ಮಾಡಿದೆ.
ಅರವಿಂದ್‌ ದತ್ತಾರ್‌, ಹಿರಿಯ ನ್ಯಾಯವಾದಿ
ಸಿಜೆಐ ಅವರು ಅಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬದನ್ನು ಸರ್ವೋಚ್ಚ ನ್ಯಾಯಾಲಯದ ಕಾರ್ಯಕಲಾಪಗಳನ್ನು ಸ್ವಲ್ಪವೇ ಗಮನಿಸಿದ್ದರೂ ತಿಳಿಯುತ್ತದೆ. ಇತ್ತೀಚಿನ ಕೆಲ ತಿಂಗಳಲ್ಲಿ ಸಾಂವಿಧಾನಿಕ ಪೀಠ ರಚನೆಯಲ್ಲಿ ಕೆಲವೇ ಕೆಲವು ನ್ಯಾಯಮೂರ್ತಿಗಳು ಒಳಗೊಳ್ಳುವ ಹಾಗೂ ಮತ್ತೆ ಕೆಲವರನ್ನು ಹೊರಗಿಡುವ ಕೆಲಸ ನಡೆದಿತ್ತು.
ದುಶ್ಯಂತ್‌ ದವೆ, ಹಿರಿಯ ನ್ಯಾಯವಾದಿ
ಇದನ್ನೂ ಓದಿ : ಬಂಡಾಯವೆದ್ದ ನ್ಯಾಯಮೂರ್ತಿಗಳು ಸಿಜೆಐಗೆ ಬರೆದ ಪತ್ರದಲ್ಲಿ ಏನಿದೆ?
ನಾಲ್ವರು ನ್ಯಾಯಮೂರ್ತಿಗಳು ಸಿಜೆಐ ಅವರ ಮೇಲಿನ ಅಸಮಾಧಾನ ಹಾಗೂ ತಮ್ಮ ಕುಂದುಕೊರತೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಸರಿಯಲ್ಲ. ನ್ಯಾಯಾಂಗದ ಸಮಸ್ಯೆಯನ್ನು ಜನರ ಗ್ರಹಿಕೆಗೆ ಬಿಡುವುದು ಎಷ್ಟು ಸರಿ? ಜನರು ನ್ಯಾಯಾಂಗವನ್ನು ಗೌರವಿಸುತ್ತಾರೆಯೇ ಹೊರತು ಈ ಬಗ್ಗೆ ಅವರಿಗೇನು ತಿಳಿದಿರುತ್ತದೆ? ಸಾರ್ವಜನಿಕವಾಗಿ ಸಿಜೆಐ ಅವರ ಮೇಲೆ ಆಪಾದನೆ ಮಾಡಿದರೆ ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಹೇಗೆ ಉಳಿಯುತ್ತದೆ? ಇದು ನಿಜಕ್ಕೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. 
ಸೋಲಿ ಸೋರಾಬ್ಜಿ, ಮಾಜಿ ಅಟಾರ್ನಿ ಜನರಲ್‌ 
ಈ ಘಟನೆಯನ್ನು ನಾವು ವಿಮರ್ಶಿಸಲು ಸಾಧ್ಯವಿಲ್ಲ. ಅವರು ತುಂಬಾ ಪ್ರಾಮಾಣಿಕರು ಮತ್ತು ಕಾನೂನು ವೃತ್ತಿಗಾಗಿ ಸಾಕಷ್ಟು ತ್ಯಾಗ ಮಾಡಿದವರು. ಅವರು ಹಣ ಮಾಡಿದವರಲ್ಲ. ನಾವು ಅವರನ್ನು ಗೌರವಿಸಲೇಬೇಕು. ಈ ನಾಲ್ವರು ನ್ಯಾಯಮೂರ್ತಿಗಳು, ಸಿಜೆಐ ಹಾಗೂ ಇಡೀ ಸರ್ವೋಚ್ಚ ನ್ಯಾಯಾಲಯ ಒಮ್ಮತ ಅಭಿಪ್ರಾಯಕ್ಕೆ ಬಂದು ಮುಂದುವರಿಯುವಂತೆ ಪ್ರಧಾನಿ ವಿಶ್ವಾಸ ಮೂಡಿಸಬೇಕು.
ಸುಬ್ರಹ್ಮಣ್ಯ ಸ್ವಾಮಿ, ಬಿಜೆಪಿ ಮುಖಂಡ
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More