ನ್ಯಾಯಮೂರ್ತಿಗಳ ಜಗಳ ಪ್ರಜಾತಂತ್ರ ಅಂತ್ಯಕ್ಕೆ ಮುನ್ನುಡಿ: ಸಂತೋಷ್‌ ಹೆಗಡೆ

“ಆ ನಾಲ್ವರು ನ್ಯಾಯಮೂರ್ತಿಗಳು ಹೇಳುತ್ತಿರುವ ಮಾತು ಸತ್ಯವಿರಬಹುದು. ಆದರೆ, ಅವರ ನಡೆಗೆ ನನ್ನ ಆಕ್ಷೇಪವಿದೆ. ನ್ಯಾಯಾಂಗದಂಥ ಸಂಸ್ಥೆ ತನ್ನ ಸಮಸ್ಯೆಯನ್ನು ಜನರೆದುರು ಹೇಳಿದರೆ ಆಗುವ ಪರಿಣಾಮ ಅತ್ಯಂತ ಕೆಟ್ಟದ್ದು,” ಎನ್ನುತ್ತಾರೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ.ಸಂತೋ‍ಷ್‌ ಹೆಗಡೆ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ಸದ್ಯ ಸಾಗುತ್ತಿರುವ ದಾರಿ ಸರಿ ಇಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಾದ ಚಲಮೇಶ್ವರ್, ರಂಜನ್ ಗೊಯೋಲ್, ಮದನ್ ಲೋಕೂರ್, ಕುರಿಯನ್ ಜೋಸೆಫ್ ಅವರು ಇಂದು ನಡೆಸಿದ ಪತ್ರಿಕಾಗೋಷ್ಠಿಯ ಬಗ್ಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅತೀವ ಬೇಸರ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. “ಇದು ಪ್ರಜಾಪ್ರಭುತ್ವದ ಅಂತ್ಯಕ್ಕೆ ಮುನ್ನುಡಿ,” ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಘಟನೆ ಎನಿಸಿಕೊಂಡಿರುವ ಶುಕ್ರವಾರದ (ಜ.೧೨) ಈ ವಿದ್ಯಮಾನದ ಬಗ್ಗೆ ನ್ಯಾ.ಸಂತೋಷ್ ಹೆಗಡೆ ಅವರು ‘ದಿ ಸ್ಟೇಟ್’ಗೆ ಪ್ರತಿಕ್ರಿಯಿಸಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇತರೆಲ್ಲ ಅಂಗಗಳಿಗಿಂತಲೂ ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ, ಭರವಸೆ ಇರುತ್ತದೆ. ಆದರೆ, ಈ ಘಟನೆಯಿಂದ ಜನರ ವಿಶ್ವಾಸ ಮತ್ತು ಭರವಸೆಗೆ ಧಕ್ಕೆಯುಂಟಾಗಿದೆ. ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ, ಅಲ್ಲಿ ಬಹಿರಂಗಪಡಿಸಿದ ವಿಚಾರಗಳ ಬಗ್ಗೆ ನನ್ನದೇನೂ ತಕರಾರಿಲ್ಲ. ಅವರು ಹೇಳಿದ್ದನ್ನು ತಪ್ಪು ಎಂದೂ ನಾನು ಹೇಳುವುದಿಲ್ಲ. ಈಗಿನ ಮುಖ್ಯನ್ಯಾಯಮೂರ್ತಿಗಳ ಮೇಲೆ ಹಲವು ಆರೋಪಗಳಿರುವುದೂ ಸತ್ಯ. ಈ ವಿಚಾರವಾಗಿ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರಬಹುದು. ಆದರೆ, ಸರ್ಕಾರದ ಗಮನಕ್ಕೂ ತರಬೇಕಿತ್ತು. ಇಲ್ಲವೇ ಅತ್ಯಂತ ಪ್ರಾಮಾಣಿಕ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ರಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬಹುದಿತ್ತು. ಆದರೆ, ಅದ್ಯಾವುದನ್ನೂ ಮಾಡದೆ, ನೇರವಾಗಿ ಮಾಧ್ಯಮಗಳ ಎದುರು ಬಂದು ನ್ಯಾಯಾಂಗ ವ್ಯವಸ್ಥೆಯನ್ನು ಬೆತ್ತಲಾಗಿಸಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಈ ವಿದ್ಯಮಾನ ಕಳಂಕಿತ ಘಟನೆಯಾಗಲಿದೆ,” ಎಂದಿದ್ದಾರೆ.

ಇದನ್ನೂ ಓದಿ : “ಸುಪ್ರೀಂ ಕೋರ್ಟ್‌ನ ಸ್ವಾತಂತ್ರ್ಯ ಕಾಪಾಡದಿದ್ದರೆ ಪ್ರಜಾತಂತ್ರ ಉಳಿಯಲಾರದು”

“ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ. ಆದರೆ, ಕೆಲವೊಂದು ಸಂಸ್ಥೆಗಳ ಸಮಸ್ಯೆಗಳು ಜನರ ಎದುರು ಬಹಿರಂಗಗೊಳ್ಳಬಾರದು. ಅದರಿಂದ ಜನರಿಗೆ ಹೋಗುವ ಸಂದೇಶ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಈಗ ಆಗಿರುವ ಘಟನೆಯಿಂದ ಜನರಿಗೆ ನ್ಯಾಯಾಂಗದ ಮೇಲಿನ ವಿಶ್ವಾಸ ಕಡಿಮೆಯಾಗಲಿದೆ. ಯಾವುದೋ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ತಮಗೆ ಸಿಕ್ಕ ತೀರ್ಪಿನಲ್ಲಿ ಲೋಪವಿದೆ ಎಂದು ಈಗ ಭಾವಿಸುವ ಸಾಧ್ಯತೆ ಇದೆ. ಮುಂದೆ ಸಿಗುವ ತೀರ್ಪುಗಳಲ್ಲಿಯೂ ಜನ ಹುಳುಕು ಹುಡುಕಬಹುದು. ಇದು ನ್ಯಾಯಾಂಗದ ಮೇಲಿನ ನಂಬಿಕೆಯ ವಿಚಾರ. ಈಗ ಅದಕ್ಕೆ ಧಕ್ಕೆಯಾಗಿದೆ. ನ್ಯಾಯಾಂಗದ ಮೇಲೆ ಜನತೆ ನಂಬಿಕೆ ಕಳೆದುಕೊಂಡರೆ ಅದು ಪ್ರಜಾಪ್ರಭುತ್ವದ ಅಂತ್ಯ ಎಂದೇ ನಾನು ಭಾವಿಸಿದ್ದೇನೆ. ಈ ನಾಲ್ವರೂ ನ್ಯಾಯಮೂರ್ತಿಗಳು ಅಪೇಕ್ಷಿಸುತ್ತಿರುವ ಬದಲಾವಣೆ ಮುಂದೆ ಸಿಗಲಿದೆ ಎಂದು ನಾನು ನಿರೀಕ್ಷಿಸಿಲ್ಲ,” ಎಂದು ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More