“ಸುಪ್ರೀಂ ಕೋರ್ಟ್‌ನ ಸ್ವಾತಂತ್ರ್ಯ ಕಾಪಾಡದಿದ್ದರೆ ಪ್ರಜಾತಂತ್ರ ಉಳಿಯಲಾರದು”

ಸ್ವಾತಂತ್ರ್ಯಾನಂತರದಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ, ಮುಖ್ಯ ನ್ಯಾಯಮೂರ್ತಿಯವರ ಕಾರ್ಯವಿಧಾನವನ್ನು ಪ್ರಶ್ನಿಸಿದ್ದಾರೆ. ಇದರಿಂದಾಗಿ ಸುಪ್ರೀಂ ಕೋರ್ಟ್ ತೀವ್ರ ಬಿಕ್ಕಟ್ಟಿಗೆ ಒಳಗಾದಂತಾಗಿದೆ

ಸ್ವಾತಂತ್ರ್ಯಾನಂತರದಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‍ನ ನಾಲ್ವರು ನ್ಯಾಯಮೂರ್ತಿಗಳು ಶುಕ್ರವಾರ ದೆಹಲಿಯಲ್ಲಿ ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವಿಧಾನವನ್ನು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ವ್ಯವಸ್ಥಿತವಾಗಿ ಮತ್ತು ನಿರೀಕ್ಷೆಗೆ ತಕ್ಕುದಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಿಶ್ರಾ ಅವರ ವಿರುದ್ಧ ಆಕ್ರೋಶ ವ್ಯಕ್ತಮಾಡಿದರು. ಇದೊಂದು ರೀತಿಯಲ್ಲಿ ಮುಖ್ಯ ನ್ಯಾಯಮೂರ್ತಿ ವಿರುದ್ದ ಎದ್ದ ಬಂಡಾಯ. ಇದರಿಂದಾಗಿ ಸುಪ್ರೀಂ ಕೋರ್ಟ್ ತೀವ್ರ ಬಿಕ್ಕಟ್ಟಿಗೆ ಒಳಗಾದಂತಾಗಿದೆ. ದೀಪಕ್ ಮಿಶ್ರಾ ವಿರುದ್ಧ ಬಂಡಾಯ ಎದ್ದ ನಾಲ್ವರು ನ್ಯಾಯಮೂರ್ತಿಗಳ ಜೊತೆ ಸಂಜೆ ವೇಳೆಗೆ ಇನ್ನೂ ಇಬ್ಬರು ನ್ಯಾಯಮೂರ್ತಿಗಳು ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಬಂಡಾಯ ಎದ್ದ ನ್ಯಾಯಮೂರ್ತಿಗಳ ಸಂಖ್ಯೆ ಆರಕ್ಕೆ ಏರಿದೆ.

ಸೊಹ್ರಾಬುದ್ದೀನ್ ಶೇಖ್‍ ನಕಲಿ ಎನ್‍ಕೌಂಟರ್‍ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ ಎಚ್ ಲೋಯಾ ಅವರ ಹಠಾತ್ ಸಾವಿನ ವಿಚಾರಣೆಯನ್ನು ನಿರ್ದಿಷ್ಟ ನ್ಯಾಯಪೀಠಕ್ಕೆ ವಹಿಸುವ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ಮತ್ತು ಹಿರಿಯ ನ್ಯಾಯಮೂರ್ತಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯ ಈ ಬಂಡಾಯಕ್ಕೆ ಒಂದು ಕಾರಣ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಮುಖ ಆರೋಪಿಯಾಗಿದ್ದುದನ್ನು ಇಲ್ಲಿ ನೆನಪಿಸಬಹುದು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದವರು ನ್ಯಾಯಮೂರ್ತಿಗಳಾದ ಚಲಮೇಶ್ವರ್, ರಂಜನ್ ಗೊಗೊಯಿ, ಮದನ್ ಲೋಕುರೆ ಮತ್ತು ಕುರಿಯನ್ ಜೋಸೆಫ್. ಸಂಜೆ ವೇಳೆಗೆ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಮತ್ತು ಶರದ್ ಅರವಿಂದ್ ಬೋಬ್ಡೆ ಅವರೂ ಬಂಡಾಯಗಾರ ನ್ಯಾಯಮೂರ್ತಿಗಳ ಜೊತೆ ಗುರುತಿಸಿಕೊಂಡಿದ್ದಾರೆ.

ನ್ಯಾಯಮೂರ್ತಿಗಳ ನೇಮಕಾತಿ ವಿಧಾನವನ್ನು ಪುನರ್ ಪರಿಶೀಲನೆಗೆ ಒಳಪಡಿಬೇಕೆಂಬ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ನ್ಯಾಯಮೂರ್ತಿಗಳಿಗೆ ಸಂಸತ್ತಿನಲ್ಲಿ ವಾಗ್ದಂಡನೆ ವಿಧಿಸುವ ಬದಲಾಗಿ ಬೇರೊಂದು ರೀತಿಯ ಶಿಕ್ಷೆ ವಿಧಿಸುವ ಬಗ್ಗೆ ಯೋಚಿಸಬೇಕೆಂಬ ನ್ಯಾಯಮೂರ್ತಿಗಳ ಸಲಹೆಗೂ ಮುಖ್ಯ ನ್ಯಾಯಮೂರ್ತಿಗಳು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಲಿಲ್ಲ ಎನ್ನಲಾಗಿದೆ. ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಮೂರ್ತಿಗಳ ನಡುವಣ ಭಿನ್ನಾಭಿಪ್ರಾಯ ಇಂದು ಸ್ಫೋಟಗೊಂಡಿದ್ದಕ್ಕೆ ಮತ್ತೂ ಒಂದು ಕಾರಣವಿದೆ ಎನ್ನಲಾಗಿದೆ. ಕಳೆದ ನವೆಂಬರ್‌ನಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಸಂಬಂಧಿಸಿದ ಹಗರಣವೊಂದು ಕೋರ್ಟಿನ ಮುಂದೆ ವಿಚಾರಣೆಗೆ ಬಂದಿತ್ತು. ಆ ಪ್ರಕರಣವನ್ನು ನ್ಯಾಯಮೂರ್ತಿ ಚಲಮೇಶ್ವರ್ ಅವರು ವಿಚಾರಣೆಗಾಗಿ ಸಂವಿಧಾನಕ್ಕೆ ಪೀಠಕ್ಕೆ ಒಪ್ಪಿಸಿದ್ದರು. ಈ ಹಗರಣದಲ್ಲಿ ದೀಪಕ್ ಮಿಶ್ರಾ ಅವರ ಹೆಸರೂ ಕೇಳಿಬಂದಿತ್ತು. ಮುಖ್ಯ ನ್ಯಾಯಮೂತೀ ದೀಪಕ್ ಮಿಶ್ರಾ ಅವರು, ಮಾರನೆಯ ದಿನ ಚಲಮೇಶ್ವರ್ ಆದೇಶವನ್ನು ರದ್ದು ಮಾಡಿ ವಿಚಾರಣೆಯನ್ನು ಮತ್ತೊಂದು ಪೀಠಕ್ಕೆ ಒಪ್ಪಿಸಿದ್ದರು. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿದ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧ ಮಾನನಷ್ಟ ಮತ್ತು ನ್ಯಾಯಾಲಯಕ್ಕೆ ಅಗೌರವ ತೋರಿದ ಪ್ರಕರಣವೊಂದನ್ನು ದಾಖಲು ಮಾಡುವಂತೆ ನ್ಯಾಯಪೀಠ ಸೂಚಿಸಿತ್ತು. ಹಿರಿಯ ನ್ಯಾಯಮೂರ್ತಿಯೊಬ್ಬರ ಆದೇಶವನ್ನು ರದ್ದು ಮಾಡಿದ ಬೆಳವಣಿಗೆ ನ್ಯಾಯಮೂರ್ತಿಗಳ ನಡುವೆ ಸಾಕಷ್ಟು ಬೇಸರಕ್ಕೆ ಕಾರಣವಾಗಿತ್ತು. ಅಂದಿನಿಂದ ಒಳಗೇ ಕುದಿಯುತ್ತಿದ್ದ ಅಸಮಾಧಾನ ಇಂದು ಸ್ಫೋಟಗೊಂಡಿದೆ ಎಂದೂ ಹೇಳಲಾಗಿದೆ.

ಯಾವುದೇ ಪ್ರಕರಣವನ್ನು ನಿರ್ದಿಷ್ಟ ಪೀಠಕ್ಕೆ ವಹಿಸುವ ಅಧಿಕಾರ ತಮಗೆ ಮಾತ್ರ ಇದೆ ಎನ್ನುವುದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಾದ. ಇದೇನೇ ಇದ್ದರೂ, ಕೋರ್ಟ್ ಕಾರ್ಯನಿರ್ವಹಣೆ ವ್ಯವಸ್ಥಿತವಾಗಿಲ್ಲ, ವಿಶ್ವಾಸಾರ್ಹತೆಗೆ ಭಂಗವಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೂಚ್ಯವಾಗಿ ನ್ಯಾಯಮೂರ್ತಿಗಳು ಹೇಳಿದರು. ಮುಖ್ಯ ನ್ಯಾಯಮೂರ್ತಿಗಳಿಗೆ ಅವಮಾನ ಮಾಡುವ ಉದ್ದೇಶ ತಮಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಕಾರ್ಯವಿಧಾನದಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ್ತು ಕೊನೆಯ ಹೆಜ್ಚೆಯಾಗಿ ಸಾರ್ವಜನಿಕರ ಮುಂದೆ ಬರಬೇಕಾಯಿತು ಎಂದು ಹೇಳಿದರು. ದೇಶದಲ್ಲಿ ಪ್ರಜಾತಂತ್ರ ಉಳಿಯಬೇಕಾದರೆ ಸ್ವತಂತ್ರ ನ್ಯಾಯಾಂಗ ಇರುವುದು ಮತ್ತು ಸುಪ್ರೀಂ ಕೋರ್ಟ್ ವ್ಯವಸ್ಥಿತವಾಗಿ ಕೆಲಸ ಮಾಡುವುದು ಬಹಳ ಮುಖ್ಯ ಎಂಬ ಕಳಕಳಿಯಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ತಮ್ಮ ಈ ಹೆಜ್ಜೆಯನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ : ನ್ಯಾಯಮೂರ್ತಿಗಳ ಜಗಳ ಪ್ರಜಾತಂತ್ರ ಅಂತ್ಯಕ್ಕೆ ಮುನ್ನುಡಿ: ಸಂತೋಷ್‌ ಹೆಗಡೆ

ಮುಖ್ಯ ಪ್ರಕರಣಗಳ ವಿಚಾರಣೆಯನ್ನು ವಿವಿಧ ಪೀಠಗಳಿಗೆ ವಹಿಸುವಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುರಿಯಲಾಗುತ್ತಿದೆ ಎನ್ನುವುದು ನ್ಯಾಯಮೂರ್ತಿಗಳು ಮುಖ್ಯವಾಗಿ ಪ್ರಸ್ತಾಪಿಸಿದ ವಿಚಾರ. ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಪೀಠಕ್ಕೆ ವಹಿಸುವ ಅಂತಿಮ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ ಇದೆ ಎನ್ನುವುದು ನಿಜ. ಆದರೆ, ಮುಖ್ಯ ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ವಹಿಸುವ ಮುಂಚೆ ಅದರ ಪೂರ್ವಾಪರ, ಆ ಪ್ರಕರಣದಲ್ಲಿ ಪರಿಶೀಲಿಸಬೇಕಾದ ಅಂಶಗಳು ಮತ್ತು ಆ ವಿಷಯದಲ್ಲಿ ತಜ್ಞರಾದ ನ್ಯಾಯಮೂರ್ತಿಗಳು ಯಾರು ಎಂಬುದನ್ನು ಹಿರಿಯ ನ್ಯಾಯಮೂರ್ತಿಗಳ ಜೊತೆ ಮುಖ್ಯ ನ್ಯಾಯಮೂರ್ತಿಗಳು ಚರ್ಚಿಸುವುದು ಸಂಪ್ರದಾಯ. ಆದರೆ, ಇತ್ತೀಚಿನ ಕೆಲವು ತಿಂಗಳಲ್ಲಿ ಈ ಸಂಪ್ರದಾಯವನ್ನು ಮುರಿದು, ಮುಖ್ಯ ನ್ಯಾಯಮೂರ್ತಿಗಳು ತಮಗಿಷ್ಟ ಬಂದಂತೆ ಪ್ರಕರಣಗಳನ್ನು ನ್ಯಾಯಪೀಠಗಳಿಗೆ ವಹಿಸುತ್ತಿದ್ದಾರೆ; ಹೀಗೆ ಮಾಡಿದ್ದರಿಂದ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಿಶ್ವಾಸಾರ್ಹತೆಗೆ ಧಕ್ಕೆಯಾಯಿತೇನೋ ಎಂಬ ಆತಂಕ ಉಂಟಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು. “ನಮಗಿರುವ ಭಿನ್ನಾಭಿಪ್ರಾಯಗಳನ್ನು ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತರಲಾಗಿದೆ. ಸುದೀರ್ಘ ಪತ್ರವೊಂದನ್ನು ಕೂಡ ಬರೆಯಲಾಗಿದೆ. ಈ ಬಗ್ಗೆ ಚರ್ಚೆ ಮಾಡಲು ಇಂದು ಕೂಡ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿದ್ದೆವು. ಆದರೆ ಅವರು ಆ ವಿಚಾರವನ್ನು ಚರ್ಚಿಸಲು ಸಿದ್ಧವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಲಾಯಿತು,” ಎಂದು ನ್ಯಾಯಮೂರ್ತಿಗಳು ವಿವರಿಸಿದರು.

ನ್ಯಾಯಾಧೀಶ ಲೋಯಾ ಅವರ ಸಾವಿನ ಪ್ರಕರಣದ ವಿಚಾರಣೆ ಕುರಿತಂತೆಯೂ ಮುಖ್ಯ ನ್ಯಾಯಮೂರ್ತಿಗಳ ಜೊತೆ ಭಿನ್ನಾಭಿಪ್ರಾಯ ತಲೆದೋರಿತ್ತೇ ಎನ್ನುವ ಪ್ರಶ್ನೆಗೆ, ನ್ಯಾಯಮೂರ್ತಿ ಗೋಗೊಯಿ ಅವರು ಹೌದು ಎಂದು ಉತ್ತರ ನೀಡಿದರು. ಮುಖ್ಯ ನ್ಯಾಯಮೂರ್ತಿಗಳಿಗೆ ವಾಗ್ದಂಡನೆ ವಿಧಿಸಬೇಕೇ ಬೇಡವೇ ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ನ್ಯಾಯಮೂರ್ತಿ ಚಲಮೇಶ್ವರ್ ಮತ್ತೊಂದು ಪ್ರಶ್ನೆಗೆ ಉತ್ತರವಾಗಿ ಹೇಳಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More