ನ್ಯಾಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜನರ ಅನುಮಾನ ನಿವಾರಿಸುವುದು ಇಂದಿನ ತುರ್ತು

ಕಾರ್ಯಾಂಗವು ಮುಖ್ಯ ನ್ಯಾಯಮೂರ್ತಿಗಳನ್ನುತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡುತ್ತಿದೆ ಎಂಬುದು ನಿಜವೇ ಆಗಿದ್ದರೆ, ಇನ್ನುಮುಂದೆ ನ್ಯಾಯಾಂಗದ ಯಾವುದೇ ಕಾರ್ಯಕಲಾಪಗಳಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಸಬೇಕು. ಆಗ ನ್ಯಾಯಾಂಗದ ವಿಶ್ವಾಸಾರ್ಹತೆ ಉಳಿಸಿಯುತ್ತದೆ

ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸುಪ್ರೀಂಕೋರ್ಟ್‌ನ ನಾಲ್ಕು ಹಾಲಿ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳ ರಾಜಕೀಯ ಸಂದರ್ಭವನ್ನು ಸರ್ಕಾರ ಅಲ್ಲಗಳೆಯುವಂತಿಲ್ಲ.

ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ರಂಜನ್ ಗೊಗೊಯ್, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಾಧೀಶರು ಅಥವಾ ಪೀಠಗಳಿಗೆ ವಹಿಸಿಕೊಡುವಾಗ ಮುಖ್ಯನ್ಯಾಯಮೂರ್ತಿಯಿಂದಾದ ಆಡಳಿತಾತ್ಮಕ ಲೋಪಗಳತ್ತ ಮಾತ್ರ ಬೊಟ್ಟು ಮಾಡಲಿಲ್ಲ. ಅವರು ಪ್ರತಿಪಾದಿಸಿದ ವಿಷಯ ಈ ಲೋಪಕ್ಕಿಂತಲೂ ಗಂಭೀರವಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ‘ರಾಷ್ಟ್ರಕ್ಕೆ ದೂರಗಾಮಿ ಪರಿಣಾಮ ಬೀರಬಲ್ಲ ಪ್ರಕರಣಗಳನ್ನು ಯಾವುದೇ ತಾರ್ಕಿಕ ಆಧಾರವಿಲ್ಲದೇ ಆಯ್ದ ಪೀಠಕ್ಕೆ/ ನ್ಯಾಯಾಧೀಶರಿಗೆ ಮಾತ್ರ ವಹಿಸಿಕೊಡಲಾಗುತ್ತಿದೆ ಎಂಬುದನ್ನು ಅವರು ದಾಖಲಿಸಿದ್ದಾರೆ.

ಅವರ ಈ ನಡೆ ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ: ಯಾಕೆ ಮುಖ್ಯ ನ್ಯಾಯಮೂರ್ತಿಯವರು ರಾಜಕೀಯ ಸೂಕ್ಷ್ಮದ ಪ್ರಕರಣಗಳನ್ನು ಕೆಲವೇ ನ್ಯಾಯಾಧೀಶರಿಗೆ ವಹಿಸಿಕೊಡುತ್ತಿದ್ದಾರೆ? ಅವರು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯಸ್ಥರಾಗಿ ಕೇವಲ ತಮ್ಮ ವಿಶೇಷಾಧಿಕಾರವನ್ನು ಚಲಾಯಿಸುತ್ತಿದ್ದರೆ ಅಥವಾ ಅವರು ಸರ್ಕಾರದ ಕೈಗೊಂಬೆಯಾಗಿ ಕುಣಿಯುತ್ತಿದ್ದರೆ? ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಮಾಡಿರುವ ಆರೋಪಗಳು, ಉನ್ನತ ನ್ಯಾಯಾಂಗ ಸಂಸ್ಥೆಯ ಮತ್ತು ಅದರ ಸ್ವತಂತ್ರ ಕಾರ್ಯಾಚರಣೆಯ ಮೇಲೆ ಕಾರ್ಯಾಂಗ ತನ್ನದೇ ಆದ ಅನಾರೋಗ್ಯಕರ ಪ್ರಭಾವವನ್ನು ಬೀರುತ್ತಿದೆಯೇ ಎಂಬ ಸಂದೇಹವನ್ನು ಹುಟ್ಟು ಹಾಕುತ್ತಿವೆ.

ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ, ನಾಲ್ವರು ನ್ಯಾಯಮೂರ್ತಿಗಳು ಮುಖ್ಯನ್ಯಾಯಮೂರ್ತಿಗೆ ಬರೆದ ಪತ್ರವನ್ನು ಗಂಭೀರವಾಗಿ ಪರಾಮರ್ಶಿಸಲು ಇದೊಂದು ಸಕಾರಣವಾಗಬಲ್ಲದೇ ಎಂಬ ಪ್ರಶ್ನೆಯೂ ಕಾಡುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ ನಮ್ಮ ಟಿಲಿವಿಷನ್ ಚಾನೆಲ್‌ಗಳ ಬಹುತೇಕ ಚರ್ಚೆಗಳು ನ್ಯಾಯಾಧೀಶರು ತಮ್ಮ ಕುಂದುಕೊರತೆಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದರ ಮೂಲಕ ತಪ್ಪು ಮಾಡಿದ್ದಾರೆಯೇ? ಈ ನ್ಯಾಯಮೂರ್ತಿಗಳು ತಮ್ಮ ಅಹವಾಲನ್ನು ಜನತಾ ನ್ಯಾಯಾಲಯಕ್ಕೆ ತರದೇ ಸುಪ್ರೀಂಕೋರ್ಟ್‌ನ ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಸಿಕೊಳ್ಳಬೇಕಿತ್ತೇ? ಎಂಬುದರ ಸುತ್ತವೇ ಗಿರಕಿ ಹೊಡೆದವು.

ನ್ಯಾಯಮೂರ್ತಿಗಳು ಹೇಳುವ ಪ್ರಕಾರ ಅವರು ತಮ್ಮ ದೂರುಗಳೊಂದಿಗೆ ಮುಖ್ಯನ್ಯಾಯಮೂರ್ತಿ ಅವರನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಾಸ್ತವದಲ್ಲಿ ಪತ್ರಿಕಾಗೋಷ್ಠಿ ನಡೆಸುವ ದಿನ ಬೆಳಗ್ಗೆಯೂ ಈ ಕುರಿತಾದ ಚರ್ಚೆ ನಡೆದಿತ್ತು. ಆಗಲೂ ಅವರಿಗೆ ಮುಖ್ಯನ್ಯಾಯಮೂರ್ತಿ ಅವರಿಂದ ನ್ಯಾಯ ದೊರೆಯುವ ಭರವಸೆ ಇಲ್ಲ ಎನ್ನಿಸಿದಾಗ ಸಾರ್ವಜನಿಕರ ಸಮ್ಮುಖ ಬಂದು ಜನತಾ ನ್ಯಾಯಲಯದಲ್ಲಿ ನ್ಯಾಯ ಕೇಳುವ ನಿಧಾರಕ್ಕೆ ಬಂದರು.

ನ್ಯಾಯಮೂರ್ತಿ ಚೆಲಮೇಶ್ವರ್ ಅವರು ಪತ್ರಿಕಾಗೋಷ್ಠಿಯಲ್ಲಿ ಯಾವ ಹಂತದವರೆಗೆ ತಮ್ಮ ಮನದಾಳವನ್ನು ತೆರೆದಿಟ್ಟರೆಂದರೆ, ಮುಂದಿನ ಜನಾಂಗ ಈ ನಾಲ್ವರು ತಮ್ಮ ಆತ್ಮವನ್ನೂ ಮಾರಿಕೊಂಡರು ಎಂದು ಜರಿಯಬಾರದೆಂಬ ಉದ್ದೇಶದಿಂದ ಪತ್ರಿಕಾಗೋಷ್ಠಿ ಕರೆದಿರುವುದಾಗಿ ಹೇಳಿಬಿಟ್ಟರು. ಬುದ್ಧಿಪೂರ್ವಕವಾಗಿಯೋ, ಬುದ್ಧಿರಹಿತವಾಗಿಯೋ ಹೊಂದಾಣಿಕೆ ಮಾಡಿಕೊಂಡ ನ್ಯಾಯಾಂಗದ ಉನ್ನತ ಸದಸ್ಯರ ಮಾನಹಾನಿ ಮಾಡಲೆಂದೇ ಬಂದ ಶಬ್ದಗಳಂತೆ ಕಂಡ ಈ ಕಠೋರವಾದ ಮಾತು ಹಾಲಿ ನ್ಯಾಯಮೂರ್ತಿಗಳಿಂದಲೇ ಬಂತು.

ಹಾಗಾದರೆ ತಮಗೆ ಬೇಕಾದಂತೆ ತೀರ್ಪು ಬರಲಿ ಎಂದು ಮುಖ್ಯನ್ಯಾಯಮೂರ್ತಿ ಬಯಸಿದ ಆ ಸೂಕ್ಷ್ಮ ಪ್ರಕರಣಗಳು ಯಾವುವು? ಈ ನ್ಯಾಯಮೂರ್ತಿಗಳು ತಮ್ಮ ಪತ್ರದಲ್ಲಿ ಸಂಸ್ಥೆಗೆ ಉಂಟಾಗಬಹುದಾದ ಮುಜುಗರವನ್ನು ತಪ್ಪಿಸಲು ತಾವು ಅಂಥ ಪ್ರಕರಣಗಳ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನ್ಯಾಯಮೂರ್ತಿ ಗೊಗೊಯ್ ಅವರಿಗೆ ಅಂಥ ಪ್ರಕರಣಗಳಲ್ಲಿ ಸಿಬಿಐ ನ್ಯಾಯಾಧೀಶ ಬಿಎಚ್ ಲೋಯಾ ಅವರ ಅಸಹಜ ಸಾವಿನ ಪ್ರಕರಣವೂ ಸೇರಿದೆಯೇ ಎಂದು ಪತ್ರಕರ್ತರು ಕೇಳಿದಾಗ ಗೊಗೊಯ್ ಆ ಬಗ್ಗೆ ಹೆಚ್ಚಿಗೆ ಮಾತನಾಡದೇ ‘ಹೌದು ಎಂದಷ್ಟೇ ನುಡಿದಿದ್ದಾರೆ.

ನ್ಯಾಯಾಧೀಶ ಲೋಯಾ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆರೋಪಿಗಳಲ್ಲಿ ಒಬ್ಬರಾಗಿರುವ ಸೊಹ್ರಾಬುದ್ದಿನ್ ಎನ್‌ಕೌಂಟರ್ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಲಯದ ನೇತೃತ್ವ ವಹಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅವರು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ನಾಗ್ಪುರಕ್ಕೆ ತೆರಳಿದಾಗ ಸಾವನ್ನಪ್ಪಿದರು. ಅವರು ಅನುಮಾನಾಸ್ಪದ ರೀತಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಂಬಂಧಿಕರು ಈಗಲೂ ದೂರುತ್ತಾರೆ. ಈ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಅವರ ಬಂಧುಗಳು ಈಗಲೂ ಒತ್ತಾಯಿಸುತ್ತಲೇ ಇದ್ದಾರೆ. ಈ ಪ್ರಕರಣದ ಕುರಿತಾದ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ.

ನಾಲ್ಕು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಕಾಡಿದ ಪ್ರಕರಣಗಳಲ್ಲಿ ಲೋಯಾ ಪ್ರಕರಣವೂ ಒಂದಾಗಿತ್ತೇ ಎಂಬುದು ಕೆಲವು ಟಿವಿ ಚಾನೆಲ್‌ಗಳ ಚರ್ಚೆಯ ವಿಷಯವಾಗಿದೆ. ನ್ಯಾಯಮೂರ್ತಿ ಗೊಗೊಯ್ ಅಥವಾ ಇತರ ಮೂವರು ನ್ಯಾಯಾಧೀಶರು ಪತ್ರಿಕಾಗೋಷ್ಠಿಯಲ್ಲಿ ತಾವು ನೀಡಿದ ಯಾವುದೇ ಹೇಳಿಕೆಯನ್ನು ಅಲ್ಲಗಳೆದಿಲ್ಲ. ಒಂದು ವೇಳೆ ಲೋಯಾ ಪ್ರಕರಣವೇ ಕಾಳಜಿಯ ವಿಷಯವಾಗಿದ್ದರೆ ಇದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನೊಳಗೊಂಡಿರುವುದರಿಂದ ರಾಜಕೀಯವಾಗಿ ತುಂಬಾ ಬಿಸಿಬಿಸಿಯಾದ ಚರ್ಚೆಯನ್ನು ಹುಟ್ಟುಹಾಕಲಿದೆ.

ಇದನ್ನೂ ಓದಿ : ಸಿಜೆಐ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳ ನಡೆ ಬಗ್ಗೆ ಇವರೇನು ಹೇಳುತ್ತಾರೆ?

ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾದರೆ ಸುಪ್ರೀಂಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು, ತಮ್ಮ ಸಹೋದ್ಯೋಗಿಗಳು ಮುಖ್ಯ ನ್ಯಾಯಮೂರ್ತಿ ಅವರು ತಮ್ಮ ಹಿತಾಸಕ್ತಿಯ ಪ್ರಕರಣಗಳನ್ನು ಆಯ್ದ ನ್ಯಾಯಾಧೀಶರಿಗೆ ಅಥವಾ ಪೀಠಕ್ಕೆ ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಸೂಕ್ಷ್ಮ ಪ್ರಕರಣಗಳನ್ನು ಸಾಮೂಹಿಕವಾಗಿ ವಿಚಾರಣೆಗೊಳಪಡಿಸಬೇಕು. ಅವರ ಆರೋಪದಲ್ಲಿ ಹುರುಳಿದ್ದರೆ ಆಗಿರುವ ಚ್ಯುತಿಯನ್ನು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಯಾಂಗ ಮುಖ್ಯ ನ್ಯಾಯಮೂರ್ತಿ ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿರುವುದು ನಿಜವೇ ಆಗಿದ್ದಲ್ಲಿ, ನ್ಯಾಯಾಂಗದ ಯಾವುದೇ ಕಾರ್ಯಕಲಾಪಗಳಲ್ಲಿ ಹಸ್ತಕ್ಷೇಪ ಮಾಡದಂತೆ ದೂರ ಇರುವಂತೆ ಕಾರ್ಯಾಂಗವನ್ನು ಎಚ್ಚರಿಸುವ ಕಾರ್ಯ ನಡೆಯಬೇಕು.

ನಿರ್ಣಾಯಕ ಕ್ರಮ ಕೈಗೊಳ್ಳುವುದು ಇಂದಿನ ತುರ್ತು. ಅದು ಈ ನೆಲದ ಅತ್ಯುನ್ನತ ನ್ಯಾಯಾಲಯದಿಂದ ಬರಬೇಕಿದೆ. ಸರ್ಕಾರ ತನ್ನ ಕಡೆಯಿಂದ ನ್ಯಾಯಾಂಗದ ಒಳಗೆ ಆಂತರಿಕ ನೀತಿಗೆ ಸಂಬಂಧಿಸಿದ ಚರ್ಚೆ ಎಂದು ತಳ್ಳಿ ಹಾಕಬಹುದು ಮತ್ತು ವಿವಾದ ಶೀಘ್ರವೇ ಅಂತ್ಯ ಕಾಣಲಿದೆ ಎಂದು ಆಶಿಸಬಹುದು. ಆದರೆ, ಇದು ಸುಪ್ರೀಂಕೋರ್ಟ್‌ನ ವಿಶ್ವಾಸಾರ್ಹತೆ ಒಳಗೊಂಡಿರುವ ದೊಡ್ಡ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರ, ನ್ಯಾಯಾಂಗವು ಈ ವಿಚಾರದಲ್ಲಿ ರಂಗೋಲಿ ಅಡಿಗೆ ನುಸುಳುವ ಅವಕಾಶ ಕೊಡಬಾರದು. ಸಂಶಯವು ಪರಿಹಾರವಾಗಬೇಕು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More