ಒಳ ಮೀಸಲಾತಿಯಿಂದ ಸಾಮಾಜಿಕ ನ್ಯಾಯ, ಸಂವಿಧಾನದ ಆಶಯ ಉಳಿಯಲಿದೆ

ಮೀಸಲಾತಿ ನೀತಿಗೆ ಮೇಲು ಜಾತಿಗಳ ವಿರೋಧ ಒಂದು ರೀತಿಯಾದರೆ, ಕೆಳ ಜಾತಿಯವರದು ಮತ್ತೊಂದು ರೀತಿಯದು. ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ ಹೊಲೆಯ ಜಾತಿ ಮತ್ತು ಇತರೇ ಸ್ಪೃಶ್ಯ ಜಾತಿಗಳು ಸದಾಶಿವ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವುದು ಹಿಂದಿನಿಂದಲೂ ಕೇಳಿ ಬರುತ್ತಿದೆ

ಜಾತಿವಾರು ಜನಗಣತಿಯಾಗಬೇಕು. ಶೇ ೧೫ ಪ್ರಮಾಣದ ಮೀಸಲಾತಿ ಎರಡು ಜಾತಿಗಳ ನಡುವೆ ಸಮಾನಾಗಿ ಹಂಚಿಕೆಯಾಗಬೇಕು. ಮಾತ್ರವಲ್ಲದೆ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ನೂರೊಂದು ಜಾತಿಗಳಿಗೂ ಸಮಪಾಲು ಸಿಗಬೇಕೆಂದು ಕಳೆದ ಎರಡು-ಮೂರು ದಶಕಗಳಿಂದಲೂ ಮಾದಿಗ ಜಾತಿ ಸಂಘಟನೆಗಳು ಕರ್ನಾಟಕದಲ್ಲಿ ನಡೆಸಿದ ಚಳವಳಿಯ ಫಲ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ. ೧೯೭೬ ರ ಎಲ್. ಜಿ. ಹಾವನೂರ್ ವರದಿಯಲ್ಲಿ ಉಲ್ಲೇಖವಾಗಿರುವಂತೆ ಕರ್ನಾಟಕದ ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ ಮಾದಿಗ ಜಾತಿ ಜನಸಂಖ್ಯೆ ಶೇ. ೫೭.೩ ರಷ್ಟಿತ್ತು. ಶೇ ೧೫ ರಲ್ಲಿ ಇವರಿಗೆ ಸಿಗಬೇಕಾದ ಪಾಲು ಶೇ ೮. ಆದರೆ ಸಿಕ್ಕಿರುವುದು ಶೇ ೨ ರಷ್ಟು ಮಾತ್ರ.

ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಲ್ಲಿ ಶೇ ೩೩.೪೭ ರಷ್ಟು ಜನಸಂಖ್ಯೆಯುಳ್ಳ ಮಾದಿಗ ಸಹಸಂಬಂಧಿತ ಜಾತಿಗಳಿಗೆ ಶೇ. ೬, ಶೇ ೩೨ರಷ್ಟು ಜನಸಂಖ್ಯೆಯುಳ್ಳ ಹೊಲೆಯ ಸಹಸಂಬಂಧಿತ ಜಾತಿಗಳಿಗೆ ಶೇ. ೫. ೧೯೭೬ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಯಾದ ಶೇ ೨೩.೬೪ ರಷ್ಟು ಜನಸಂಖ್ಯೆ ಇರುವ (ಲಮಾಣಿ, ಬೋವಿ, ಕೊರಚ,ಮ ಕೊರಮ) ಜಾತಿಗಳಿಗೆ ಶೇ ೩, ಶೇ ೧೦.೯೬ ರಷ್ಟಿರುವ ೧೬ ಜಾತಿಗಳನ್ನೊಳಗೊಂಡ ಅಲೆಮಾರಿ ಅಸ್ಪೃಶ್ಯರು ಮತ್ತು ಇತರೆ ಶೇ ೧ ರಂತೆ ಮೀಸಲಾತಿ ನಿಗದಿಪಡಿಸುವಂತೆ ಸದಾಶಿವ ಆಯೋಗ ಸರ್ಕಾರಕ್ಕೆ ಸಲಹೆ ಮಾಡಿದೆ ಎಂಬುದು ವರದಿಯ ಮುಖ್ಯಾಂಶ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರಿ ಹುದ್ದೆಗಳು, ಕೃಷಿ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಾದಿಗ ಜಾತಿ ಯಾವ ರೀತಿ ಅವಕಾಶ ವಂಚಿತವಾಗಿದೆ ಎಂಬ ಮಾಹಿತಿಯನ್ನು ಗಮನಿಸಬಹುದು. ಒಟ್ಟು ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟರ ಜಾತಿಗೆ ಲಭ್ಯವಿರುವ ಮೀಸಲಾತಿಯಲ್ಲಿನ ಅವಕಾಶ ಪಡೆದು ಸೇವೆ ಸಲ್ಲಿಸುತ್ತಿರುವ ನೌಕರರು ಕೇಂದ್ರ ರಾಜ್ಯಗಳಲ್ಲಿ ೧, ೩೮,೦೦೦ ಶೇ ೬ರಂತೆ ಮಾದಿಗ ಜಾತಿಗೆ ಸಿಗಬೇಕಾದ ಒಟ್ಟು ಹುದ್ದೆಗಳ ಸಂಖ್ಯೆ ೫೫.೨೦೦. ಪ್ರಸ್ತುತ ಸಿಕ್ಕಿರುವ ಹುದ್ದೆಗಳು (ಆರ್.ಟಿ.ಐ ಮಾಹಿತಿ ಆಧಾರ) ೨೩,೦೦೦ (ಶೇ.೨.೫), ಅಂದರೆ ೩೨,೨೦೦ ಹುದ್ದೆಗಳಿಂದ ಮಾದಿಗ ಜಾತಿ ವಂಚಿತವಾಗಿದೆ.

ಇದೇ ರೀತಿ ಕೃಷಿ ಕ್ಷೇತ್ರದಲ್ಲಿ ಹೊಲೆಯ ಜಾತಿಯಲ್ಲಿ ಕೃಷಿ ಭೂಮಿ ಹೊದಿರುವವರು ೧,೮೪,೮೧೬. ಸ್ವಂತ ಭೂಮಿ ಹೊಂದಿರುವವರು ೧,೭೫,೭೨೦. ಸರ್ಕಾರಿ ಭೂ ಹಂಚಿಕೆಯಲ್ಲಿ ಭೂಮಿ ಪಡೆದವರು ೭೮೪೬. ಮಾದಿಗ ಜಾತಿಯಲ್ಲಿ ಕೃಷಿ ಭೂಮಿ ಹೊಂದಿರುವವರು ೧,೫೫,೯೧೫. ಸ್ವಂತ ಭೂಮಿ ಹೊಂದಿರುವವರು ೧,೪೯,೦೮೦. ಸರ್ಕಾರಿ ಭೂ ಹಂಚಿಕೆಯಲ್ಲಿ ಭೂಮಿ ಪಡೆದವರು ೭೪೫೨. ಭೂ ಹಂಚಿಕೆಯಲ್ಲಿ ಮಾದಿಗ ಜಾತಿಗೆ ‘-೧೯೪೨’ರಷ್ಟು ಅನ್ಯಾಯವಾಗಿದೆ. ಹೊಲೆಯರಿಗೆ ‘-೧೪೯’ ರಷ್ಟಾಗಿದೆ. ಇದೇ ರೀತಿ ಸ್ಪೃಶ್ಯ ಜಾತಿ ಮತ್ತು ಇತರೆ ಜಾತಿಗಳಲ್ಲಿ ಕೃಷಿ ಭೂಮಿ ಹೊಂದಿರುವವರು ೧,೪೯,೪೨೦. ಸ್ವಂತ ಭೂಮಿ ಹೊಂದಿರುವವರು ೧,೪೬,೫೫೫. ಸರ್ಕಾರಿ ಭೂ ಹಂಚಿಕೆಯಲ್ಲಿ ಪಡೆದ ಭೂಮಿ ೮೪೮೦. ಸ್ಪೃಶ್ಯರಿಗೆ ಆದ ಲಾಭ ‘+೪೭೯೭’.

ರಾಜಕೀಯ ಪ್ರಾತಿನಿಧ್ಯ ಗಮನಿಸಿದರೆ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ೩೬, ಶೇ. ೬ ರಂತೆ ಮಾದಿಗ ಜಾತಿಗೆ ಸಿಗಬೇಕಾದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ೧೪. ಪ್ರಸ್ತುತ ಇರುವ ಸಂಖ್ಯಾಬಲ ೫+೧, ಆದ ನಷ್ಟ -೮. ಹೊಲೆಯ ಜಾತಿಗೆ ಶೇ ೫ ರಂತೆ ಸಿಗಬೇಕಾದ ಒಟ್ಟು ಕ್ಷೇತ್ರಗಳ ಸಂಖ್ಯೆ ೧೨. ಪ್ರಸ್ತುತ ಇರುವ ಸಂಖ್ಯಾಬಲ ೮, ಆದ ನಷ್ಟ -೪. ಪರಿಶಿಷ್ಟ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿ ಮತ್ತು ಇತರೆ ಶೇ ೩+೧ ರಂತೆ ಸಿಗಬೇಕಾದ್ದು ೧೦. ಪ್ರಸ್ತುತ ಇರುವ ಸಂಖ್ಯೆ ೨೨ (+೧೨ ಹೆಚ್ಚಾಗಿದೆ).

ಮೀಸಲಾತಿ ನೀತಿಗೆ ಮೇಲು ಜಾತಿಯ ವಿರೋಧ ಒಂದು ರೀತಿಯಾದರೆ, ಕೆಳಜಾತಿಯವರದು ಮತ್ತೊಂದು ರೀತಿಯದು. ಪರಿಶಿಷ್ಟ ಜಾತಿಯಲ್ಲಿರುವ ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ ಹೊಲೆಯ ಜಾತಿ ಮತ್ತು ಸ್ಪೃಶ್ಯ ಜಾತಿಗಳೆಂದು ಗುರುತಿಸಿರುವ ಇತರೇ ಜಾತಿಗಳು ಸದಾಶಿವ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವುದು ಅಲ್ಲಲ್ಲಿ ಕೇಳಿ ಬರುತ್ತಿದೆ. ಈ ನಿಲುವು ಸಂವಿಧಾನ ವಿರೋಧಿ ನಿಲುವಲ್ಲದೆ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಮಾಡುವ ಅಪಚಾರವಾಗಿದೆ. ಒಳ ಮೀಸಲಾತಿ ವಿರೋಧಿ ನಿಲುವಿನ ಸಾರಾಂಶವನ್ನು ಹೀಗೆ ಹೇಳಬಹುದಾಗಿದೆ.

  1. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕ.
  2. ಹೊಲೆಮಾದಿಗ ಜಾತಿಗಳ ನಡುವೆ ಒಳ ಜಗಳಕ್ಕೆ ಕಾರಣವಾಗುತ್ತದೆ.
  3. ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿದೆ.
  4. ಒಳಮೀಸಲಾತಿ ಒತ್ತಾಯ ದಲಿತ ಐಕ್ಯತೆಗೆ ಮಾರಕ
  5. ಖಾಸಗೀಕರಣದ ಸಂದರ್ಭದಲ್ಲಿ ಒಳ ಮೀಸಲಾತಿ/ಮೀಸಲಾತಿ ಅಪ್ರಸ್ತುತ

ಮೇಲಿನ ಎಲ್ಲಾ ಅಭಿಪ್ರಾಯಗಳಿಗೂ ಯಾವುದೇ ತಾತ್ವಿಕ ಆಧಾರ ಮತ್ತು ನೈತಿಕ ಹೊಣೆಗಾರಿಕೆ ಇಲ್ಲ. ಹೊಲೆಮಾದಿಗ ಜಾತಿಗಳ ನಡುವಿನ ಜಗಳ ಸದಾಶಿವ ಆಯೋಗ ರಚನೆಯಾಗುವುದಕ್ಕಿಂತ ಮೊದಲಿನಿಂದಲೂ ಇದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಟ್ಟುವ ಕಾಲದಲ್ಲೂ ಇತ್ತು. ದಲಿತ ಚಳವಳಿ ಎಂಬ ಮಹಾ ಆದರ್ಶ ಈ ವಾಸ್ತವತೆಯನ್ನು ಮರೆಮಾಚಿತ್ತು ಅಥವಾ ಮುಕ್ತವಾಗಿ ಚರ್ಚಿಸಿ ಸ್ವ-ವಿಮರ್ಶೆಯ ಮೂಲಕ ಬಗೆಹರಿಸಿಕೊಳ್ಳುವಲ್ಲಿ ಸಂಘಟನೆ ವಿಫಲವಾಗಿತ್ತು. ಎರಡೂ ಸತ್ಯ. ಅಸ್ಪೃಶ್ಯತೆ ಅನುಭವದಲ್ಲಿ ಹೊಲೆಮಾದಿಗ ಜಾತಿಗಳು ಸಮಾನ ದು:ಖಿಗಳಾದರೂ, ಬೂದಿ ಮುಚ್ಚಿದ ಕೆಂಡದಂತೆ ಇದ್ದ ಒಳಜಗಳ ಜ್ವಾಲೆಯಾಗಿದೆ. ಒಳಮೀಸಲಾತಿ ವಿರೋಧ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಈ ರೋಗಕ್ಕೆ ತಕ್ಕ ಮದ್ದು ಕಂಡುಹಿಡಿದು ರೋಗ ನಿರೋಧಿಸುವುದು ಹೊಲೆಮಾದಿಗ ಜಾತಿ ಸಂಘಟನೆಗಳಿಗಿರುವ ಪ್ರಸ್ತುತ ಸವಾಲು. ಸದ್ಯಕ್ಕೆ ಕೈಯಲ್ಲಿರುವ ಮದ್ದು ಸದಾಶಿವ ಆಯೋಗದ ವರದಿ.

ಇದನ್ನೂ ಓದಿ : ಬಹುಸಂಖ್ಯಾತ ಶೋಷಿತ ವರ್ಗಗಳ ನಡುವಿನ ಸಾಮರಸ್ಯಕ್ಕೆ ಒಳ ಮೀಸಲಾತಿ ಅನಿವಾರ್ಯ

ಪರಿಶಿಷ್ಟ ಜಾತಿಪಟ್ಟಿಯಲ್ಲಿರುವ ಬೋಬಿ, ಲಂಬಾಣಿ, ಕೊರಮ, ಕೊರಚ, ಜಾತಿಗಳಿಗೆ ಸದಾಶಿವ ಆಯೋಗದ ವರದಿಯಲ್ಲಿ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ. ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ಬೋಭಿ, ಲಂಬಾಣಿ, ಕೊರಮ, ಕೊರಚ ಜಾತಿಗಳು ಸ್ಪೃಶ್ಯ ಜಾತಿಗಳು, ಪರಿಶಿಷ್ಟ ಜಾತಿ ಪಟ್ಟಿಯಿಂದ ಈ ಜಾತಿಗಳನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಇದೇ ಸಂದರ್ಭದಲ್ಲಿ ಅಗಸ ಮುಂತಾದ ಜಾತಿಗಳು ಪರಿಶಿಷ್ಟ ಪಟ್ಟಿಗೆ ಸೇರ್ಪಡೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಲು ಸರತಿ ಸಾಲಿನಲ್ಲಿ ನಿಂತಿವೆ. ಆದ್ದರಿಂದ ಸದಾಶಿವ ವರದಿ ಜಾರಿಯನ್ನು ವಿರೋಧಿಸುವ ಪರಿಶಿಷ್ಟ ಪಟ್ಟಿಯಲ್ಲಿರುವ ‘ಸ್ಪೃಶ್ಯ ಜಾತಿಗಳು’ ೧೦೧ ಜಾತಿಗಳ ಪಟ್ಟಿಯಿಂದ ಕೈಬಿಡಬಾರದೆಂದು ಒತ್ತಾಯಿಸಬೇಕು.

ಇವರನ್ನು ಪರಿಶಿಷ್ಟ ಪಟ್ಟಿಯಿಂದ ತೆಗೆದುಹಾಕಿದರೆ ಮೀಸಲಾತಿ ಸೌಲಭ್ಯದಿಂದ ದೂರ ಉಳಿಯುತ್ತಾರೆ. ಹಾಗೆ ನೋಡಿದರೆ ತಲೆ ಮೇಲೆ ಮಲ ಹೊರುವ ಅಸ್ಪೃಶ್ಯರಷ್ಟೇ, ಮುಟ್ಟಾದ ಬಟ್ಟೆ ಒಗೆಯುವ ಅಗಸರು ಹೀನಾಯ ಜಾತಿ ಸಂಕಟ ಅನುಭವಿಸುತ್ತಿದ್ದಾರೆ ಎನ್ನುವ ವಾದವೂ ಇದೆ. ಇದಕ್ಕೆ ಕಾರಣ ಇವರು ಸ್ಪೃಶ್ಯ ಜಾತಿಗೆ ಸೇರಿದ್ದಾರೆ. ವಿಶೇಷವಾಗಿ ಲಂಬಾಣಿ ಸಮುದಾಯ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಗಳು ಭಿನ್ನರೀತಿಯಾದವು. ಉದಾಹರಣೆಗೆ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾರ್ಪಡಿಸುವುದು, ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಲಂಬಾಣಿ ತಾಂಡಗಳಿಂದ ಮಕ್ಕಳು ಮತ್ತು ಸ್ತ್ರೀಯರ ಮಾರಾಟ ನಡೆಯುವುದನ್ನು ತಡೆಯುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು. ಅಂತಹವರಿಗೆ ವಸತಿ ಶಾಲೆಗಳನ್ನು ಪ್ರಾರಂಭಿಸುವುದು. ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ಸಾಂಸ್ಕೃತಿಕ ರಾಜಕಾರಣದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಲ್ಲದೆ, ಸದಾಶಿವ ವರದಿ ಜಾರಿ ವಿರೋಧಿಸುವುದು ಅನಗತ್ಯ ಮತ್ತು ರಾಜಕೀಯ ಪ್ರೇರಿತ. ಈ ಜಾತಿಗಳನ್ನು ಸಾಂಸ್ಕೃತಿಕ ರಾಜಕರಣಕ್ಕೆ ತರುವ ಕೆಲಸ ಈ ನಾಲ್ಕು ಜಾತಿಗಳಿಗೆ ಮಾತ್ರವಲ್ಲದೆ ೧೦೧ ಜಾತಿಗಳಲ್ಲಿ ಬಹುಸಂಖ್ಯೆಯಲ್ಲಿರುವ ಹೊಲೆಮಾದಿಗ ಜಾತಿಗಳ ಹೆಗಲ ಮೇಲಿರುವ ಜವಾಬ್ದಾರಿ. ಪರಿಶಿಷ್ಟ ಪಟ್ಟಿಯಲ್ಲಿರುವ ೧೦೧ ಜಾತಿಗಳಿಗೂ ಸಮಪಾಲು ಸಿಗಬೇಕಾದ್ದು ಸಂವಿಧಾನಾತ್ಮಕವಾದುದು ಮಾತ್ರವಲ್ಲದೆ ಅವಮಾನಿತ ಕೆಳಜಾತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸುವ ಪ್ರಯತ್ನವು ಇದಾಗುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More