ಕಡಲತಡಿಯ ಭೂಗತ ಲೋಕದ ‘ಟಾರ್ಗೆಟ್‌’: ರೌಡಿ ಶೀಟರ್‌ ಇಲಿಯಾಸ್‌ ಬಲಿ

ಮಂಗಳೂರಿನ ಮಟ್ಟಿಗೆ ಸಾರ್ವಜನಿಕ ವಲಯದಲ್ಲಿ ಕುಖ್ಯಾತಿ ಗಳಿಸಿದ್ದ ‘ಟಾಗ್ರೆಟ್‌ ಗ್ರೂಪ್‌’ನ ಪ್ರಮುಖ ಇಲಿಯಾಸ್‌ ಎಂಬಾತನನ್ನು ಶನಿವಾರ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಇಲಿಯಾಸ್‌ನ ಪೂರ್ವಾಪರಗಳೇನು? ಅತ ಕಟ್ಟಿಕೊಂಡಿದ್ದ ಗುಂಪಿನ ಕೆಲಸಗಳೇನಾಗಿದ್ದವು? ಇಲ್ಲಿದೆ ಒಂದಷ್ಟು ಮಾಹಿತಿ

ಇದು ಕೆಲ ವರ್ಷಗಳ ಹಿಂದಿನ ಮಾತು. ಆ ದುಷ್ಕರ್ಮಿಗಳ ತಂಡ ಹಣ ಗಳಿಕೆಗಾಗಿ ಹೊಸ ಮಾರ್ಗವನ್ನು ಕಂಡುಕೊಂಡಿತ್ತು. ‘ಹನಿಟ್ರ್ಯಾಪ್’ ಮೂಲಕ ಹಣ ಗಳಿಕೆಗೆ ಕೈ ಹಾಕಿದ್ದ ಆ ತಂಡ, ಸಮಾಜದ ಗೌರವಾನ್ವಿತರು, ಶ್ರೀಮಂತ ವಿದ್ಯಾರ್ಥಿಗಳಿಗೆ ಬಲೆ ಬೀಸಿತ್ತು. ಅ ತಂಡದ ಹೆಸರೇ ‘ಟಾರ್ಗೆಟ್‌’. ಅದರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದವನೇ ಇಂದು (ಜ.೧೩) ಕೊಲೆಯಾದ ಇಲಿಯಾಸ್‌.

ಕೇವಲ ಫಿಶ್ ಮಿಲ್ ಹೋಟೆಲ್‌ ಉದ್ಯಮಿಯೊಬ್ಬರಿಂದಲೇ ಇಲಿಯಾಸ್‌ ಮತ್ತು ಆತನ ತಂಡ ಇದೇ ಹನಿಟ್ರ್ಯಾಪ್‌ ಮೂಲಕ, ಬೆದರಿಸಿ 50 ಲಕ್ಷದಷ್ಟು ಹಣ ಪಡೆದಿತ್ತು ಎನ್ನುತ್ತವೆ ಮೂಲಗಳು. ಕೊಣಾಜೆ ಎಂಬಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಅಪಹರಿಸಿ ಬಲವಂತದಿಂದ ಅವರ ಏಕಾಂತದ ದೃಶ್ಯಗಳನ್ನು ಚಿತ್ರೀಕರಿಸಿದ ಮೇಲೆ ಇಲಿಯಾಸ್ ಕುಖ್ಯಾತಿ ಮಂಗಳೂರಿಗೆ ಗೊತ್ತಾಗಿತ್ತು.

ಇಲಿಯಾಸ್‌ ಮತ್ತು ಸಹಚರರು ಹುಟ್ಟುಹಾಕಿದ ‘ಟಾರ್ಗೆಟ್’ಗೆ ಕಚೇರಿ, ಆಳುಕಾಳುಗಳೆಲ್ಲಾ ಇದ್ದರು. ಆ ಗುಂಪನ್ನು ಮತ್ತಷ್ಟು ದಷ್ಟಪುಷ್ಟವಾಗಿ ಬೆಳೆಸಿದ್ದು ಮಾದಕ ವಸ್ತು ಮಾಫಿಯಾ. ಅಲ್ಲದೆ ರಿಯಲ್ ಎಸ್ಟೇಟ್ ವಿವಾದಗಳು, ಸಣ್ಣಪುಟ್ಟ ಸಂಘರ್ಷಗಳು, ಮುಂತಾದವುಗಳಿಗೆ ಕೆಲ ಉದ್ಯಮಿಗಳು, ವ್ಯಾಪಾರಿಗಳು ಪೊಲೀಸ್ ಠಾಣೆಯ ಮೆಟ್ಟಿಲೇರುವ ಬದಲಾಗಿ ಇಲಿಯಾಸ್ ರೀತಿಯ ಲೀಡರ್ ಗಳನ್ನು ಆಶ್ರಯಿಸತೊಡಗಿದರು. ಇಂತಹ ನ್ಯಾಯ ಪಂಚಾಯ್ತಿಗಳಿಗೆ ಶೇ 30ರಷ್ಟು ಪಾಲುಪಡೆಯುವ ಮೂಲಕ ವಿವಾದಗಳನ್ನು ಅವರು ಬಗೆಹರಿಸಿಕೊಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಅವರಿಂದ ವಸೂಲಿ ದಂಧೆಯೂ ಜೋರಾಗಿ ನಡೆಯುತ್ತಿತ್ತು. ಕೊಲೆಯತ್ನ, ಸುಲಿಗೆ, ಅಪಹರಣ ಸೇರಿದಂತೆ ಸುಮಾರು 24 ಕೇಸುಗಳು ಸದ್ಯ ಹತನಾಗಿರುವ ಇಲಿಯಾಸ್‌ನ ಮೇಲಿವೆ.

ಟಾರ್ಗೆಟ್ ಗುಂಪು ಬೆಳೆಯುತ್ತ ಹೋದಂತೆ ಅದು ವಿವಿಧ ಕವಲುಗಳಾಗಿ ಒಡೆಯಿತು. ಟಾರ್ಗೆಟ್ ಒಂದು, ಎರಡು, ಮೂರು ಹೀಗೆ ವಿವಿಧ ಗುಂಪುಗಳಾದವು. ಕೆಲವರು ಇಲಿಯಾಸ್ ಮಾರ್ಗದರ್ಶನದಲ್ಲಿಯೇ ಮುಂದುವರಿದರು. ಮತ್ತೆ ಕೆಲವರು ಅವನಿಂದ ದೂರವಾದರು. ಹಾಗೆ ದೂರವಾದವರಲ್ಲಿ ಕಿನ್ನಿಗೋಳಿ ಸಫ್ವಾನ್ ಮತ್ತು ದಾವೂದ್ ಪ್ರಮುಖರು.

ಉಳ್ಳಾಲದ ಕೆಲ ರಾಜಕಾರಣಿಗಳು, ಅವರ ಬೆಂಬಲಿಗರ ಸಂಪರ್ಕಕ್ಕೆ ಬಂದ ಇಲಿಯಾಸ್ ಪೊಲೀಸರ ಹಿಡಿತಕ್ಕೆ ಸಿಗದಾದ. ಇತ್ತ ಇಲಿಯಾಸ್ ನಿಂದ ದೂರವಾದ ಸಫ್ವಾನ್ ಸಂಘಟನೆಯೊಂದರ ಮೂಲಕ ಗುರುತಿಸಿಕೊಂಡ. ಅವನ ಬೆನ್ನ ನೆರಳಾಗಿ ಆ ಸಂಘಟನೆ ನಿಂತಿತು.

ಜೀವ ಭಯದಿಂದ ಪದೇ ಪದೇ ನೆಲೆ ಬದಲಿಸುತ್ತಿದ್ದ ಇಲಿಯಾಸ್ ಜೋಕಟ್ಟೆ ಮತ್ತು ಹೆಂಡತಿ ಮನೆ ಕಾಟಿಪಳ್ಳದಲ್ಲಿಯೂ ಕೆಲಕಾಲ ನೆಲೆಸಿದ್ದ. ಆ ವೇಳೆಯೇ ಎರಡು ಬಾರಿ ಆತನ ಮೇಲೆ ಹತ್ಯೆಯತ್ನಗಳು ನಡೆದಿದ್ದವು. ಆಗ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಅದಾದ ಮೇಲೆ ನಗರದ ಜೆಪ್ಪು ಕುಟ್ಪಾಡಿಯ ಫ್ಲಾಟ್ ಒಂದರಲ್ಲಿ ಆತ ನೆಲೆಸಿದ್ದ. ಇದನ್ನು ಪತ್ತೆ ಮಾಡಿದ ದುಷ್ಕರ್ಮಿಗಳು ಶನಿವಾರ ಆತನ ಹತ್ಯೆ ನಡೆಸಿದ್ದಾರೆ.

ಇತ್ತೀಚೆಗೆ ನಡೆದ ದೀಪಕ್ ರಾವ್ ಹತ್ಯೆಗೂ ಇಲಿಯಾಸ್ ಗೂ ಸಂಪರ್ಕವಿರುವುದಾಗಿ ವರದಿಯಾಗಿತ್ತು. ಸಫ್ವಾನ್ ಒಂದೊಮ್ಮೆ ಇಲಿಯಾಸ್ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಟಾರ್ಗೆಟ್ ಗುಂಪು ಕೃತ್ಯದ ಹಿಂದಿದೆ ಎಂದು ಮಾಧ್ಯಮಗಳು ಎಣಿಸಿದ್ದವು. ಆದರೆ ಅದು ಸುಳ್ಳು ಎನ್ನುತ್ತವೆ ವಿಶ್ವಾಸಾರ್ಹ ಮೂಲಗಳು. ದೀಪಕ್ ರಾವ್ ಹತ್ಯೆ ಸಂಚಿನಲ್ಲಿ ಭಾಗಿಯಾದ ಪಿಂಕಿ ನವಾಜ್ ಮತ್ತವನ ಗುಂಪು ಸಫ್ವಾನ್ ಶಿಷ್ಯರೇ ಹೊರತು ಇಲಿಯಾಸ್ ಬೆಂಬಲಿಗರಲ್ಲ. ಇಲಿಯಾಸ್ ಸಫ್ವಾನ್ ನ ಕಡುವೈರಿಯಾಗಿದ್ದ. ಅಲ್ಲದೆ ಇಲಿಯಾಸ್ ಗೂ ಕೋಮು ಸಂಘರ್ಷಗಳಿಗೂ ನಂಟಿರಲಿಲ್ಲ ಎಂಬ ಮಾತಿದೆ. ಶನಿವಾರ ನಡೆದ ಈತನ ಹತ್ಯೆ ಎರಡು ಗುಂಪುಗಳ ಸಂಘರ್ಷದ ಫಲ ಎಂಬ ಮಾತನ್ನು ಆತನ ಪತ್ನಿಯೇ ಹೇಳಿರುವ ಮಾತಿನಿಂದ ವ್ಯಕ್ತವಾಗಿದೆ. ದೀಪಕ್ ರಾವ್ ಹತ್ಯೆ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕರ ಜೊತೆ ಇಲಿಯಾಸ್ ತೆಗೆಸಿಕೊಂಡ ಛಾಯಾಚಿತ್ರಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು.

ಇದನ್ನೂ ಓದಿ : ಪಾಯಿಂಟ್‌ ಬ್ಲಾಂಕ್‌ | ಪೊಲೀಸರಿಗೇ ನಡುಕ ಹುಟ್ಟಿಸಿದ್ದ ಕಿಲ್ಲರ್‌!

ಅಂಡರ್ ವರ್ಲ್ಡ್ ಗುಂಪುಗಳು

ಮಂಗಳೂರಿನ ಮುಸ್ಲಿಂ ಭೂಗತ ಜಗತ್ತಿನಲ್ಲಿ ಹಲವು ಗುಂಪುಗಳಿವೆ. ಮಾರಿಪಳ್ಳ ಜಬ್ಬಾರ್ ಗ್ಯಾಂಗ್, ಚೆರಿಯಪುತ್ತ ತಂಡ ಒಂದು ಕಡೆ ಸಕ್ರಿಯವಾಗಿದ್ದರೆ, ಫರಂಗಿಪೇಟೆಯ ಜಿಯಾ ಬೆಂಬಲಿಗರು ಮತ್ತೊಂದು ಕಡೆ ಚುರುಕಾಗಿದ್ದಾರೆ. ಫರಂಗಿಪೇಟೆ ಜೋಡಿಕೊಲೆ ವೇಳೆ ಹತರಾದವರಲ್ಲಿ ಜಿಯಾ ಕೂಡ ಒಬ್ಬ. ಆ ಬಳಿಕ ಜಬ್ಬರ್ ವಿದೇಶದಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿಯಿದೆ. ಜಬ್ಬರ್ ಮತ್ತು ಪತ್ತಿಂಜೆ ಇಸ್ಮಾಯಿಲ್ ಭೂಗತ ಲೋಕದ ಇತ್ತೀಚಿನ ಪ್ರಭಾವಿ ಹೆಸರುಗಳು. ಇತ್ತ ಉಳ್ಳಾಲದಲ್ಲಿ ಟಾರ್ಗೆಟ್ ಗುಂಪು ಹಾಗೂ ಅದಕ್ಕೆ ಎದುರಾಳಿಯಾಗಿ ಸಫ್ವಾನ್ ಸಹಚರರು ಕ್ರಿಯಾಶೀಲರಾಗಿದ್ದರು. ಈ ಗುಂಪುಗಳಲ್ಲಿ ಕೆಲವರು ಕೋಮುಗಲಭೆಗಳಿಗೆ ಕುಮ್ಮಕ್ಕು ಕೊಡುವಂತಹವರು ಮತ್ತೆ ಕೆಲವರು ಆ ವಿಚಾರದಲ್ಲಿ ತಟಸ್ಥರಾಗಿ ಇರುವವರು ಇದ್ದರು. ಇಲಿಯಾಸ್ ಅಂಥ ತಟಸ್ಥ ಗುಂಪಿನ ಸದಸ್ಯನಾಗಿದ್ದ ಎನ್ನುತ್ತವೆ ಮೂಲಗಳು.

ಜೈಲಿನಲ್ಲಿ ನಡೆಯುವ ಹೊಡೆದಾಟಗಳು

ಕೆಲವರ ಪ್ರಕಾರ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಮುಸ್ಲಿಂ ಭೂಗತ ಲೋಕಕ್ಕೆ ಸೇರಿದ ಐವತ್ತಕ್ಕೂ ಹೆಚ್ಚು ಮಂದಿ ಸೆರೆವಾಸ ಅನುಭವಿಸುತ್ತಿದ್ದಾರೆ. ಪದೇ ಪದೇ ಘರ್ಷಣೆಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ನೂತನ ಕಾರಾಗೃಹವನ್ನು ಎರಡು ಬ್ಲಾಕುಗಳಾಗಿ ವಿಂಗಡಿಸಲಾಯಿತು. ಒಂದರಲ್ಲಿ ಮುಸ್ಲಿಂ ಕೋಮಿನ ಅಪರಾಧಿಗಳನ್ನು ಬಂಧಿಸಿಟ್ಟರೆ ಮತ್ತೊಂದರಲ್ಲಿ ಅನ್ಯಕೋಮಿನ ಅಪರಾಧಿಗಳಿದ್ದಾರೆ ಎಂಬ ಮಾತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More