ಆಧಾರ್ ಗಿಂತ ವರ್ಚುವಲ್ ಐಡಿ ಸುರಕ್ಷಿತ ಎಂಬುದಕ್ಕೆ ಇಲ್ಲಿದೆ ನೋಡಿ ಆಧಾರ!

ಆಧಾರ್ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಯುಐಡಿಎಐ ವರ್ಚುವಲ್ ಐಡಿ ಎಂಬ ಹೊಸ ಸುರಕ್ಷತಾ ಕವಚ ತೊಡಿಸಲು ಮುಂದಾಗಿದೆ. ಒನ್ ಟೈಮ್ ಪಾಸ್ ವರ್ಡ್ ನ ವಿಸ್ತೃತ ರೂಪವಾಗಿರುವ ವರ್ಚುವಲ್ ಐಡಿ ಆಧಾರ್ ಮಾಹಿತಿ ಸೋರಿಕೆ ತಡೆದು ಸುರಕ್ಷತೆ ಒದಗಿಸಲಿದೆ

ಭಾರತೀಯ ವಿಶೇಷ ಗುರುತು ಪ್ರಾಧಿಕಾರ (ಯುಐಡಿಎಐ) ಜಾರಿಗೆ ತಂದಿರುವ ಆಧಾರ್ ವ್ಯವಸ್ಥೆಯಲ್ಲಿ ಮಾಹಿತಿ ಸೋರಿಕೆ ಮತ್ತು ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಆಗುತ್ತದೆಂಬ ದೂರುಗಳು ನಿರಾಧಾರ ಅಲ್ಲ ಎಂಬುದನ್ನು ಪರೋಕ್ಷವಾಗಿ ಯುಐಡಿಎಐ ಒಪ್ಪಿಕೊಂಡಿದೆ. ಆಧಾರ್ ಸುರಕ್ಷತೆಗೆ ಮತ್ತೊಂದು ಸುರಕ್ಷತಾ ಕವಚ ಹೊದಿಸಲು ವರ್ಚುವಲ್ ಐಡಿ ವ್ಯವಸ್ಥೆಯನ್ನು ರೂಪಿಸುತ್ತಿದೆ.

ವರ್ಚುವಲ್ ಐಡಿ ಹಾಲಿ ಇರುವ ಆಧಾರ್ ಸಂಖ್ಯೆಗೆ ಮತ್ತೊಂದು ಸುತ್ತಿನ ಸುರಕ್ಷತಾ ಕವಚವೇ ಹೊರತು ಆಧಾರ್ ಗೆ ಪರ್ಯಾಯವಲ್ಲ. ಆಧಾರ್ ಜತೆಗೆ ಬೆಸೆದುಕೊಂಡಿರುವ ಮತ್ತೊಂದು ಸಂಖ್ಯೆ ಅಷ್ಟೇ. ಆಧಾರ್ ಗೆ ಸುರಕ್ಷತಾ ಕವಚ ನೀಡಲಿರುವ ಹೊಸ ವರ್ಚುವಲ್ ನಂಬರ್ ಆಧಾರ್ ಗಿಂತಲೂ ಉದ್ದವಾಗಿರಲಿದೆ. ಅಂದರೆ ಆಧಾರ್ ಸಂಖ್ಯೆ 12 ಅಂಕಿಗಳಿದ್ದರೆ ವರ್ಚುವಲ್ ಐಡಿ 16 ಅಂಕಿಗಳಿರುತ್ತವೆ.

ಯುಐಡಿಎಐ ಆರಂಭದಿಂದಲೂ ಆಧಾರ ಸುರಕ್ಷಿತ ಎಂದು ಪ್ರತಿಪಾದಿಸುತ್ತಲೇ ಬಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್ ಸುರಕ್ಷಿತವಲ್ಲ ಅದಕ್ಕೆ ನಮ್ಮ ಬಳಿ ಆಧಾರ ಇದೆ ಎಂದು ಪ್ರತಿಪಾದಿಸಿದ್ದ ಬಿಜೆಪಿ ಸಹ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆಧಾರ್ ಸುರಕ್ಷಿತವಾಗಿದೆ ಅದಕ್ಕೆ ನಮ್ಮಬಳಿ ಆಧಾರ ಇದೆ ಎಂದು ಪ್ರತಿಪಾದಿಸಿದೆ. ಅದೇನೇ ಇರಲಿ, ಇದುವರೆಗೆ ಪ್ರಕಟಿತ ವರದಿಗಳು, ನಡೆದಿರುವ ಅಧ್ಯಯನಗಳು ಆಧಾರ್ ಸುರಕ್ಷತೆಗೆ ಅಪಾಯ ಇರುವುದನ್ನು ಎತ್ತಿ ತೋರಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಸಹ ಆಧಾರ್ ಸುರಕ್ಷತೆ ಬಗ್ಗೆ ತನ್ನ ಕಾಳಜಿ ವ್ಯಕ್ತಪಡಿಸಿದೆ.

ವರ್ಚುವಲ್ ಐಡಿ ಎಂದರೆ ಏನು?

ಭಾರತೀಯ ವಿಶೇಷ ಗುರುತು ಪ್ರಾಧಿಕಾರ ಜನವರಿ 10 ರಂದು ಪ್ರಕಟಿಸಿರುವ ಸುತ್ತೋಲೆ ಪ್ರಕಾರ ವರ್ಚುವಲ್ ಐಡಿಯು 16 ಅಂಕಿಗಳುಳ್ಳ ಯಾದೃಚ್ಛಿಕ ( ರ‍್ಯಾಂಡಮ್) ಸಂಖ್ಯೆ. ಈ ಸಂಖ್ಯೆಯನ್ನು ಆಯಾ ವ್ಯಕ್ತಿಗಳ ಆಧಾರ್ ಸಂಖ್ಯೆಯ ಜತೆಗೆ ಹೊಂದಿಕೆ ಮಾಡಲಾಗಿರುತ್ತದೆ. ಆಧಾರ್ ಸಂಖ್ಯೆದಾರರು ತಮ್ಮ ವರ್ಚುವಲ್ ಐಡಿ ಸೃಷ್ಟಿಸಿದ ನಂತರ, ಎಲ್ಲೆಲ್ಲಿ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೋ ಅಲ್ಲಿ ವರ್ಚವಲ್ ಐಡಿ ಸಂಖ್ಯೆ ನೀಡಬಹುದು. ಮಾರ್ಚ್ 1ರಿಂದ ಆಧಾರ್ ಸಂಖ್ಯೆದಾರರು ತಮ್ಮ ವರ್ಚುವಲ್ ಐಡಿಯನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ ಇದು?

ಯುಐಡಿಎಐ ಸುತ್ತೋಲೆ ಪ್ರಕಾರ ವರ್ಚುವಲ್ ಐಡಿಯನ್ನು ಆಧಾರ್ ಸಂಖ್ಯೆ ಜತೆಗೆ ಹೊಂದಾಣಿಕೆ (ಮ್ಯಾಪಿಂಗ್) ಮಾಡಲಾಗುತ್ತದೆ. ಆಧಾರ್ ಬಳಸಬೇಕಾದಲ್ಲಿ ವರ್ಚುವಲ್ ಐಡಿ ಬಳಸುವುದರಿಂದ ನಿಜವಾದ ಆಧಾರ್ ಸುರಕ್ಷಿತವಾಗಿರುತ್ತದೆ. ಅಲ್ಲಿ ಆಧಾರ್ ಸಂಖ್ಯೆಯನ್ನು ಬಳಸಬೇಕಿಲ್ಲ, ಜತೆಗೆ ಆಧಾರ್ ಜತೆಗಿರುವ ಬಹುತೇಕ ಮಾಹಿತಿ ಸುರಕ್ಷಿತವಾಗಿರುತ್ತದೆ. ನೀವು ಆಧಾರ್ ಸಂಖ್ಯೆ ನೀಡಬೇಕಾದ ಅಗತ್ಯ ಬಿದ್ದಾಗ ಸ್ಥಳೀಯ ಸಂಸ್ಥೆ, ಗ್ಯಾಸ್, ಟೆಲಿಫೋನ್ ಮತ್ತಿತರ ಕಡೆಗಳಲ್ಲಿ ವರ್ಚುವಲ್ ಐಡಿ ನೀಡಿದರೆ ಸಾಕು. ವರ್ಚುವಲ್ ಐಡಿಯನ್ನು ನಮೂದಿಸಿದಾಗ ಯುಐಡಿ ಅದನ್ನು ದೃಢೀಕರಿಸುತ್ತದೆ. ಮತ್ತು ವ್ಯಕ್ತಿಯ ಸೀಮಿತ ಮಾಹಿತಿಗಳನ್ನು ಮಾತ್ರ ನೀಡುತ್ತದೆ.

ಈ ಪದ್ಧತಿ ಸುರಕ್ಷಿತವೇ?

ವರ್ಚುವಲ್‌ ಐಡಿಯನ್ನು ನೀಡುವುದರಿಂದ ಆಧಾರ್ ನಲ್ಲಿರುವ ಎಲ್ಲಾ ಮಾಹಿತಿಗಳು ಅಲ್ಲಿ ಬಹಿರಂಗ ವಾಗುವುದಿಲ್ಲ. ಅಂದರೆ ಆಧಾರ್ ಸಂಖ್ಯೆ ಇಲ್ಲದೆಯೇ ನಿಮ್ಮ ಆಧಾರ್ ದೃಢೀಕರಣವಾಗುತ್ತದೆ. ಅಂದರೆ ಆಧಾರ್ ನಲ್ಲಿನ ಮಾಹಿತಿ ಸುರಕ್ಷಿತವಾಗಿರುತ್ತದೆ.

ವರ್ಚುವಲ್ ಐಡಿಯಿಂದ ಆತಂಕ ನಿವಾರಣೆ ಆಗಲಿದೆಯೇ?

ಆದರೂ ಆಧಾರ್ ಎಷ್ಟು ಸುರಕ್ಷಿತ ಎಂಬ ಆತಂಕ ಇದ್ದೆ ಇದೆ. ಈಗಾಗಲೇ ಸರ್ಕಾರಿ ಸಂಸ್ಥೆಗಳು ಸಂಗ್ರಹಿಸಿಟ್ಟುಕೊಂಡಿರುವ ಆಧಾರ್ ಮಾಹಿತಿ ಸೋರಿಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಇದೆ. ಆಧಾರ್ ನಂಬರ್ ಬಳಸಿ ವ್ಯಕ್ತಿಯ ಎಲ್ಲಾ ಮಾಹಿತಿಯನ್ನು ಪಡೆಯಬಹುದು ಎಂಬುದನ್ನು ‘ಟ್ರಿಬ್ಯುನ್’ ವರದಿ ಮಾಡಿತ್ತು. ತೀವ್ರ ಮುಜುಗರಕ್ಕೀಡಾದ ಯುಐಡಿಎಐ ವರದಿ ಮಾಡಿದ ವರದಿಗಾರ್ತಿ ವಿರುದ್ಧ ಎಫ್ಐಆರ್ ಸಲ್ಲಿಸಿ ಈಗ ಪೇಚಿಗೆ ಸಿಲುಕಿದೆ. ಯುಐಡಿಎಐ ಆಧಾರ್ ಮಾಹಿತಿ ಸೋರಿಕೆಯಾದರೂ ಅದರಿಂದ ಅಪಾಯ ಏನಿಲ್ಲ ಎಂದು ಪ್ರತಿಪಾದಿಸುತ್ತಿದ್ದರೂ ಹಲವೆಡೆ ಆಧಾರ್ ಮಾಹಿತಿ ಬಳಸಿ ಹಣಕಾಸು ವಂಚನೆ ನಡೆಸಿರುವ ನಿದರ್ಶನಗಳಿವೆ. ಹೀಗಾಗಿ ಹೊಸ ವ್ಯವಸ್ಥೆಯಲ್ಲಿ ಇಂತಹ ಮಾಹಿತಿ ಸೋರಿಕೆ ತಡೆಯಲು ಮತ್ತು ವಂಚನೆಗಳಾಗುವುದನ್ನು ನಿರ್ಬಂಧಿಸಲು ಹೊಸ ಸುರಕ್ಷಾ ಕವಚ ಹೊದಿಸಲಾಗುತ್ತಿದೆ. ಇದುವರೆಗೆ ಅಗತ್ಯವಿದ್ದ ಕಡೆಗಳಲ್ಲಿ ಆಧಾರ್ ಸಂಖ್ಯೆ ನೀಡಬೇಕಿತ್ತು. ಇನ್ನು ಮುಂದೆ ನೇರವಾಗಿ ಆಧಾರ್ ಸಂಖ್ಯೆ ನೀಡಬೇಕಿಲ್ಲ. ವರ್ಚುವಲ್ ನಂಬರ್ ನೀಡಿದರೆ ಸಾಕು.

ಹಳೆ ಲೋಪದೋಷ ನಿವಾರಣೆ ಆಗಲಿದೆಯೇ?

ಹೊಸ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ಆಧಾರ್ ವ್ಯವಸ್ಥೆಯಲ್ಲಿದ್ದ ಪ್ರಮುಖ ಲೋಪದೋಷಗಳು ನಿವಾರಣೆಯಾಗುತ್ತವೆ. ಇಲ್ಲಿ ನೇರವಾಗಿ ಆಧಾರ್ ನೀಡದೇ ವರ್ಚುವಲ್ ನಂಬರ್ ನೀಡುವುದರಿಂದ ಆಧಾರ್ ಸುರಕ್ಷಿತವಾಗಿರುತ್ತದೆ. ಅಲ್ಲದೇ ವರ್ಚುವಲ್ ನಂಬರ್ ಬಳಸಿ ಆಧಾರ್ ಮಾಹಿತಿಗೆ ಯಾರೂ ಕನ್ನ ಹಾಕಲು ಸಾಧ್ಯವಿಲ್ಲ ಎನ್ನುತ್ತದೆ ಯುಐಡಿಎಐ.

ಹೇಗೆ ಕಾರ್ಯನಿರ್ವಹಿಸುತ್ತದೆ ವರ್ಚುವಲ್ ಐಡಿ ?

ವರ್ಚುವಲ್ ಐಡಿ ವಾಸ್ತವವಾಗಿ ಒನ್ ಟೈಮ್ ಪಾಸ್ ವರ್ಡ್‌ನ ವಿಸ್ತೃತ ರೂಪ ಎಂದೇ ಹೇಳಬಹುದು. ಈಗ ಬ್ಯಾಂಕುಗಳು ಪ್ರತಿ ವಹಿವಾಟಿಗೂ ಒನ್ ಟೈಮ್ ಪಾಸ್ ವರ್ಡ್ ನೀಡುವಂತೆ ವರ್ಚುವಲ್ ಐಡಿಯೂ ತಾತ್ಕಾಲಿಕ ಮತ್ತು ಹಿಂದಕ್ಕೆ ಪಡೆಯಬಹುದಾಗಿರುತ್ತದೆ. ಅಂದರೆ ನಿಮ್ಮ ವರ್ಚುವಲ್ ಐಡಿಯನ್ನು ಯಾರಾದರೂ ಸಂಗ್ರಹಿಸಿಟ್ಟುಕೊಂಡರೂ ಅದು ನಿಯಮಿತ ಅವಧಿಯಲ್ಲಿ ಅಸ್ಥಿತ್ವ ಕಳೆದುಕೊಳ್ಳುವುದರಿಂದ ಸುರಕ್ಷತೆಗೆ ಅಪಾಯವಿಲ್ಲ. ಸದ್ಯಕ್ಕೆ ವರ್ಚುವಲ್ ಐಡಿ ಹೆಚ್ಚು ಸುರಕ್ಷಿತವಾಗಿರುವಂತೆ ಕಾಣುತ್ತಿದೆ. ಆದರೆ ಇದು ಜಾರಿಯಾದಾಗಲೂ ಅಷ್ಟೇ ಸುರಕ್ಷಿತವಾಗಿರುವುದೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ವರ್ಚುವಲ್ ನಂಬರ್ ನೀಡುವ ಉದ್ದೇಶವೇ ಆಧಾರ್ ಮಾಹಿತಿಯನ್ನು ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಸಂಗ್ರಹಿಸಿಟ್ಟುಕೊಳ್ಳುವುದುನ್ನು ತಡೆಯುವುದಾಗಿದೆ. ಆದರೆ, ಈಗಾಗಲೇ ಸರ್ಕಾರದ ಕೆಲವು ಸಂಸ್ಥೆಗಳು ಆಧಾರ್ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡಿವೆ. ಅವುಗಳು ನಮ್ಮ ಅಷ್ಟೇನೂ ಸುರಕ್ಷಿತವಲ್ಲದ ಇಂಟರ್ ನೆಟ್ ವ್ಯವಸ್ಥೆಯಲ್ಲಿ ಸೋರಿಕೆಯಾಗಲೂ ಬಹುದು, ಆಗಿರಲೂಬಹದು. ಈಗಾಗಲೇ ಸೋರಿಕೆಯಾಗಿದ್ದರೆ ಏನು ಗತಿ? ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಗುವುದಿಲ್ಲವೇ?

ಇದನ್ನೂ ಓದಿ : ಆಧಾರ್ ಸಂಖ್ಯೆಗೆ ನಿಮ್ಮ ಖಾತೆ ಜೋಡಿಸದೇ ಇದ್ದರೆ ಪರಿಣಾಮ ಏನು ಗೊತ್ತಾ?

ಐಡಿ ಯಾವಾಗ, ಹೇಗೆ ಪಡೆಯುವುದು?

ಮಾರ್ಚ್ 1ರಿಂದ ವರ್ಚುವಲ್ ನಂಬರ್ ಯೋಜನೆ ಜಾರಿಗೆ ಬರಲಿದೆ. ಜೂನ್ 1ರಿಂದ ವರ್ಚುವಲ್ ಐಡಿ ಬಳಸುವಂತೆ ಯುಐಡಿಎಐ ಕಡ್ಡಾಯ ಮಾಡಲಿದೆ. ಈ ಅವಧಿಯಲ್ಲಿ ನೂರು ಕೋಟಿ ಆಧಾರ್ ಸಂಖ್ಯೆ ಪಡೆದವರು ವರ್ಚುವಲ್ ಐಡಿ ಪಡೆಯಬೇಕು.ಇದನ್ನು ಯುಐಡಿಎಐ ವೆಬ್ ಸೈಟ್ ನಲ್ಲಿ ಆನ್ ಲೈನ್‌ ಮೂಲಕ, ಆಧಾರ್ ನೊಂದಣಿ ಕೇಂದ್ರಗಳಲ್ಲಿ, ಅಥವಾ ಎಂಆಧಾರ್ ಮೊಬೈಲ್ ಆಪ್ ನಲ್ಲಿ ವರ್ಚುವಲ್ ಐಡಿ ಪಡೆಯಬಹುದು. ಆದರೆ, ಜೂನ್ 1 ರಿಂದ ಆಧಾರ್ ಸಂಖ್ಯೆ ಬದಲಿಗೆ ವರ್ಚುವಲ್ ಐಡಿ ಬಳಸಬೇಕಾಗುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More