ಆರ್ಥಿಕ ಸಮೀಕ್ಷೆಯಲ್ಲೂ ಪ್ರಸ್ತಾಪವಾಯಿತು ಭಾರತೀಯ ಪೋಷಕರ ಗಂಡುಮಗು ವ್ಯಾಮೋಹ

ವಿತ್ತ ಸಚಿವ ಅರುಣ್ ಜೇಟ್ಲಿ 2017-18 ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲು ಪಿಂಕ್ ಕವರ್‌ನಲ್ಲಿ ತಂದಿದ್ದರು. ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗೆಗೆ ಸಹಮತ ವ್ಯಕ್ತಪಡಿಸುವುದು ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವುದು ಅವರ ಉದ್ದೇಶವಾಗಿತ್ತು

ಆರ್ಥಿಕ ಸಮೀಕ್ಷೆಗೂ ಭಾರತೀಯರು ಗಂಡುಮಕ್ಕಳ ಬಗ್ಗೆ ಹೊಂದಿರುವ ಗೀಳಿಗೂ ಏನು ಸಂಬಂಧ? ಆರ್ಥಿಕ ಸಮೀಕ್ಷೆಯ ಪ್ರಕಾರ ಸಂಬಂಧ ಇದೆ. ಸದ್ಯಕ್ಕೆ ಮಹಿಳೆಯರು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಗಂಡುಮಕ್ಕಳ ಬಗ್ಗೆ ಇರುವ ಅತಿಯಾದ ಮೋಹವೇ ಕಾರಣ ಎನ್ನುತ್ತದೆ 2017-18ನೇ ಸಾಲಿನ ಆರ್ಥಿಕ ಸಮೀಕ್ಷೆ.

ಮಗನನ್ನು ಪಡೆಯುವುದು ಭಾರತೀಯರಿಗೆ ಸಾಮಾಜಿಕವಾಗಿ ಆತ್ಯಾದ್ಯತೆಯಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೇ ಸಮಾಜದಲ್ಲಿ ಲಿಂಗ ತಾರತಮ್ಯ ಹೆಚ್ಚಿದೆ ಮತ್ತು ಲಿಂಗಾನುಪಾತವೂ ಏರುಪೇರಾಗಿದೆ. ಪರಿಣಾಮವಾಗಿ, 63 ದಶಲಕ್ಷ ಪುರುಷರಿಗೆ ಮಹಿಳೆಯರೇ ಇಲ್ಲದಂತಾಗಿದೆ.

ಸಮೀಕ್ಷೆ ಪ್ರಕಾರ, ಭಾರತೀಯರು ಗಂಡುಮಗು ಹುಟ್ಟುವವರೆಗೂ ಮಕ್ಕಳನ್ನು ಪಡೆಯುತ್ತಲೇ ಇರುತ್ತಾರೆ. ಅದರ ದುಷ್ಪರಿಣಾಮ ಏನೆಂದರೆ, ಹೆಣ್ಣುಮಗುವಿಗೆ ದಕ್ಕಬೇಕಾದ ಸಂಪನ್ಮೂಲದ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ.

ಹೆಣ್ಣುಮಗು ಜನಿಸಿದ ಕುಟುಂಬಗಳಿಗೆ ಹೋಲಿಸಿದರೆ, ಗಂಡುಮಗು ಜನಿಸಿರುವ ಕುಟುಂಬದಲ್ಲಿ ಮತ್ತೆ ಮಕ್ಕಳನ್ನು ಪಡೆಯುವ ಪ್ರಮಾಣ ಕಡಿಮೆ ಇದೆ. ಇದರರ್ಥ, ಗಂಡುಮಗು ಪಡೆದವರು ಮತ್ತೆ ಮಕ್ಕಳನ್ನು ಹೊಂದಬಯಸುವುದಿಲ್ಲ. ಗಂಡುಮಕ್ಕಳನ್ನು ಹೊಂದಬೇಕೆಂಬ ಮೋಹದಿಂದಾಗಿ ಬೇಡವಾದ ಹೆಣ್ಣುಮಕ್ಕಳ ಸಂಖ್ಯೆ 21 ದಶಲಕ್ಷದಷ್ಟಿದೆ. ಹೆಣ್ಣುಮಗು ಜನಿಸಿದ ನಂತರ ಮಹಿಳೆಯರ ಬದುಕು ಸುಧಾರಿಸಿದರೂ ಸಮಾಜ ಮಾತ್ರ ಹೆಚ್ಚು ಹೆಣ್ಣುಮಕ್ಕಳನ್ನು ಪಡೆಯಬಯಸದು ಎಂದು ಸಮೀಕ್ಷೆ ಹೇಳಿದೆ.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಂ ಸಿದ್ದಪಡಿಸಿರುವ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪಿಂಕ್ ಕವರಿನಲ್ಲಿ ತಂದು ಸಂಸತ್ತಿನಲ್ಲಿ ಮಂಡಿಸಿದರು. ಮಹಿಳೆಯರ ಸಮಸ್ಯೆಗಳ ಬಗ್ಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಬೇಕೆಂಬುದಕ್ಕೆ ಸಹಮತ ವ್ಯಕ್ತಪಡಿಸುವುದು ಅವರ ಉದ್ದೇಶ.

ಭಾರತ ಸಲೀಸು ವ್ಯಾಪಾರ ಮಾಡುವ ದೇಶಗಳ ಪಟ್ಟಿಯಲ್ಲಿ ಮತ್ತಷ್ಟು ಮೇಲೇರಬೇಕಾದರೆ, ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಬೇಕಿದೆ ಎಂದು ಸಮೀಕ್ಷೆ ಹೇಳಿದೆ. ಮಹಿಳೆಯರು ಉದ್ಯೋಗದಲ್ಲಿ ತೊಡಗಿರುವ ಪ್ರಮಾಣ ತಗ್ಗುತ್ತಿರುವ ಬಗ್ಗೆ ಸಮೀಕ್ಷೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. 2015-06ನೇ ಸಾಲಿನಲ್ಲಿ ಶೇ.36ರಷ್ಟು ಮಹಿಳೆಯರು ಉದ್ಯೋಗದಲ್ಲಿದ್ದರು. ಈ ಪ್ರಮಾಣ 2015-16ರಲ್ಲಿ ಶೇ.24ಕ್ಕೆ ತಗ್ಗಿದೆ.

ಸಮೀಕ್ಷೆ ಮಂಡಿಸುವ ಹಿಂದಿನ ದಿನ ಭಾನುವಾರ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಹೆಣ್ಣುಮಕ್ಕಳ ಬಗ್ಗೆ ಪ್ರಸ್ತಾಪಿಸಿದ್ದರು. “ಒಬ್ಬ ಹೆಣ್ಣುಮಗಳು 10 ಗಂಡುಮಕ್ಕಳಿಗೆ ಸಮ. ಹತ್ತು ಗಂಡುಮಕ್ಕಳನ್ನು ಹೆತ್ತರೆ ಬರುವ ಪುಣ್ಯವು ಒಬ್ಬ ಹೆಣ್ಣುಮಗುವನ್ನು ಹೆತ್ತರೆ ಬರುತ್ತದೆ,” ಎಂದಿದ್ದರು.

ಇದನ್ನೂ ಓದಿ : ಅಪನಗದೀಕರಣದಿಂದ ತೆರಿಗೆದಾರರು, ಉಳಿತಾಯ ಹೆಚ್ಚಳ: ಆರ್ಥಿಕ ಸಮೀಕ್ಷೆ

‘ಟೈಮ್ಸ್ ಆಫ್ ಇಂಡಿಯಾ’ ವರದಿ ಪ್ರಕಾರ, 2008-09ನೇ ಸಾಲಿಗಿಂತ ಮುಂಚೆ ಬಜೆಟ್ ಭಾಷಣದಲ್ಲಿ ‘ಮಹಿಳೆ’ ಎಂಬ ಪದ ಬಳಕೆಯಾಗುತ್ತಿದ್ದುದೇ ಅತ್ಯಪರೂಪವಾಗಿತ್ತು. 2008-09ರಲ್ಲಿ ಆಗ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರು, ಒಂಬತ್ತು ಬಾರಿ ‘ಮಹಿಳೆ’ ಎಂಬ ಪದ ಬಳಸಿದ್ದರು. 2012ರ ಡಿ.16ರಂದು ದೆಹಲಿಯಲ್ಲಿ ನಿರ್ಭಯಾ ಪ್ರಕರಣ ನಡೆದ ಮೂರು ತಿಂಗಳ ನಂತರ ಬಜೆಟ್ ಮಂಡಿಸಿದ ಚಿದಂಬರಂ, ತಮ್ಮಭಾಷಣದಲ್ಲಿ 24 ಬಾರಿ ‘ಮಹಿಳೆ’ ಪದ ಬಳಸಿದ್ದರು. ಅಲ್ಲದೆ, ಮಹಿಳೆಯ ಮೇಲಿನ ದೌರ್ಜನ್ಯಗಳನ್ನು ಸಂಘಟಿತವಾಗಿ ತಡೆಯುವ ಅಗತ್ಯವನ್ನು ಒತ್ತಿಹೇಳಿದ್ದರು. ಮಹಿಳೆಯರ ರಕ್ಷಣೆಗಾಗಿ ₹1,000 ಕೋಟಿ ವಿಶೇಷ ಅನುದಾನ ನಿಗದಿ ಮಾಡಿದ್ದರು. ನಂತರ ಮೋದಿ ಸರ್ಕಾರವೂ ಅನುದಾನ ನೀಡಿಕೆ ಮುಂದುವರಿಸಿದೆ.

ಗುರುವಾರ ಜೇಟ್ಲಿ ಅವರು ತಮ್ಮ ಐದನೇ ಬಜೆಟ್ ಮಂಡಿಸಲಿದ್ದಾರೆ. 2019ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಜೇಟ್ಲಿ ಅವರು ಮಹಿಳಾ ಸಬಲೀಕರಣಕ್ಕೆ ಏನೆಲ್ಲ ಯೋಜನೆಗಳನ್ನು ಪ್ರಕಟಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More