ಅಪನಗದೀಕರಣದಿಂದ ತೆರಿಗೆದಾರರು, ಉಳಿತಾಯ ಹೆಚ್ಚಳ: ಆರ್ಥಿಕ ಸಮೀಕ್ಷೆ

ಅಪನಗದೀಕರಣದಿಂದ ತೆರಿಗೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಜನರ ಉಳಿತಾಯವೂ ಹಿಗ್ಗಿದೆ ಎಂದು ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯಮ್ ಸಿದ್ದಪಡಿಸಿರುವ ಆರ್ಥಿಕ ಸಮೀಕ್ಷೆ ತಿಳಿಸಿದೆ. ಈ ವರ್ಷದಲ್ಲಿ ಜಿಡಿಪಿ ಶೇ.6.75ರಷ್ಟಾಗಲಿದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ

ಸಂಸತ್ ಬಜೆಟ್ ಅಧಿವೇಶನದ ಮೊದಲ ದಿನವಾದ ಸೋಮವಾರ ಆರ್ಥಿಕ ಸಮೀಕ್ಷೆ ಮಂಡಿಸಲಾಗಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅಂದರೆ 2017-18ನೇ ಸಾಲಿನ ಜಿಡಿಪಿ ಶೇ.6.75ರಷ್ಟಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಮ್ ಸಿದ್ದಪಡಿಸಿರುವ ಸಮೀಕ್ಷೆ ತಿಳಿಸಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. 2018-19ನೇ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿಯು ಶೇ.7.-7.5ರಷ್ಟಾಗಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಕೇಂದ್ರೀಯ ಸಾಂಖ್ಯಿಕ ಕಚೇರಿಯು ಪ್ರಸಕ್ತ ವಿತ್ತೀಯ ವರ್ಷದ ಆರ್ಥಿಕ ಅಭಿವೃದ್ಧಿ ಶೇ.6.5ರಷ್ಟು ಎಂದು ಅಂದಾಜಿಸಿತ್ತು. ಹೀಗಾಗಿ ಮುಖ್ಯ ಆರ್ಥಿಕ ಸಲಹೆಗಾರರು ಸಿದ್ದಪಡಿಸಿರುವ ಆರ್ಥಿಕ ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಸಹಜವಾಗಿಯೇ ಪ್ರಶ್ನೆಗಳೆದ್ದಿವೆ.

ಸರಕು ಮತ್ತು ಸೇವಾ ತೆರಿಗೆ ಜಾರಿ, ದಿವಾಳಿ ಸಂಹಿತೆ ಜಾರಿ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ, ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿಯಮಗಳ ಸಡಿಲ ರಫ್ತು ಪ್ರಮಾಣ ಹೆಚ್ಚಳ- ಈ ಕಾರಣಗಳಿಂದಾಗಿ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಆರ್ಥಕತೆಯು ಚೇತರಿಸಿಕೊಂಡಿದ್ದು ಆರ್ಥಿಕ ಅಭಿವೃದ್ಧಿ ಶೇ.6.7ರಷ್ಟಾಗಲಿದೆ ಎಂದು ಸಮೀಕ್ಷೆ ವಿವರಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲ ಬೆಲೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, 2019ನೇ ಸಾಲಿನಲ್ಲಿ ಸರಾಸರಿ ಶೇ.12ರಷ್ಟು ಕಚ್ಚಾ ತೈಲ ಏರಬಹುದೆಂದು ಅಂದಾಜಿಸಿದೆ. ಜಿಎಸ್ಟಿ ನಂತರ ತೆರಿಗೆ ದಾರರ ಸಂಖ್ಯೆ ಹೆಚ್ಚಳವಾಗಿದೆ. 40000 ಕೋಟಿ ಹೆಚ್ಚಿನ ಸಾಲವು ವಿತ್ತೀಯ ಕೊರತೆಯಲ್ಲಿ ಪ್ರತಿಬಿಂಬಿತವಾಗಿಲ್ಲ ಎಂದು ವಿವರಿಸಿದೆ.

ವಿತ್ತೀಯ ಕೊರತೆ ಶೇ.3.2ರ ಗುರಿ ಸಾಧಸಬಹುದೆಂದು ಅಂದಾಜಿಸಿದೆ. 2017 ಏಪ್ರಿಲ್- ಡಿಸೆಂಬರ್ ಅವಧಿಯ ಚಿಲ್ಲರೆ ದರ ಹಣದುಬ್ಬರ ಶೇ.3.3 ಮತ್ತು ಸಗಟು ದರ ಹಣದುಬ್ಬರ ಶೇ.29ರಷ್ಟಿದೆ. ರಫ್ತು ಪ್ರಮಾಣವು ಶೇ.12.1ರಷ್ಟು ಹೆಚ್ಚಳವಾಗಿದೆ. ಡಿಸೆಂಬರ್ 29ಕ್ಕೆ ಇದ್ದಂತೆ ವಿದೇಶಿ ವಿನಿಮಯ ಮೀಸಲು 409.4 ಕ್ಕೇರಿದೆ. 2017 ಏಪ್ರಿಲ್- ನವೆಂಬರ್ ನಡುವೆ ಕೈಗಾರಿಕಾ ಅಭಿವೃದ್ಧಿ ಶೇ.3.2ರಷ್ಟಿದೆ. ಆಹಾರ ಉತ್ಪಾದನೆ 275.7 ದಶಲಕ್ಷ ಟನ್ ಗೆ ಏರಿದೆ ಎಂದು ಸಮೀಕ್ಷೆ ವಿವರಿಸಿದೆ.

ಇದನ್ನೂ ಓದಿ : ಜಿಡಿಪಿಯ ಅಂಕಿ-ಅಂಶ ಸುಳ್ಳು; ರಹಸ್ಯ ಬಿಚ್ಚಿಟ್ಟ ಸುಬ್ರಮಣಿಯನ್ ಸ್ವಾಮಿ

ಆರ್ಥಿಕ ಸಮೀಕ್ಷೆಯಲ್ಲಿನ ಪ್ರಮುಖ ಅಂಶಗಳು

 • ಕಳೆದ 10-15 ವರ್ಷಗಳಲ್ಲಿ ಭಾರತವು 17 ಸೂಚಕಗಳ ಪೈಕಿ 14ರಲ್ಲಿ ಉತ್ತಮ ಸಾಧನೆ ಮಾಡಿದೆ.
 • ನೇರ ಮತ್ತು ಪರೋಕ್ಷ ತೆರಿಗೆದಾರರ ನೊಂದಣಿ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.
 • ಕೃಷಿಯೇತರ ವೇತನವು ನಿರೀಕ್ಷಿಸಿದ ಮಟ್ಟಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಏರಿದೆ.
 • ಅಂತರರಾಜ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ರಾಜ್ಯಗಳ ನಡುವಿನ ಉತ್ಕರ್ಷವು ನಿರೀಕ್ಷಿಸಿದ್ದಕಿಂತಲೂ ಸಕಾರಾತ್ಮಕವಾಗಿದೆ.
 • ಭಾರತದ ರಫ್ತು ಸಂರಚನೆಯು ಬೃಹತ್ ಆರ್ಥಿಕ ದೇಶಗಳಿಗೆ ಹೋಲಿಸಿದರೆ ಹೆಚ್ಚು ಸುಸ್ಥಿರ ಮತ್ತು ಸಮಾನತಾವಾದಿಯಾಗಿದೆ.
 • ಪ್ರೋತ್ಸಾಹಕ ಕ್ರಮಗಳಿಂದಾಗಿ ಸಿದ್ದಉಡುಪುಗಳ ರಫ್ತಿನಲ್ಲಿ ಉತ್ತೇಜನ ಕಂಡುಬಂದಿದೆ.
 • ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ತೆರಿಗೆ ಕಾನೂನು ತಗಾದೆಗಳು ತಗ್ಗಿವೆ.
 • ಈ ಹಂತದಲ್ಲಿ ಅಭಿವೃದ್ಧಿಗೆ ಚೇತರಿಕೆ ನೀಡಬೇಕಾದರೆ, ಉಳಿತಾಯ ಮಾಡುವುದಕ್ಕಿಂತಲೂ ಹೆಚ್ಚು ಬಂಡವಾಳ ಹೂಡಬೇಕಿದೆ.
 • ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ನೇರ ತೆರಿಗೆ ಪ್ರಮಾಣವು ಇತರ ಗಣರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಮೆ ಇದೆ.
 • ಹವಾಮಾನ ವೈಪರಿತ್ಯವು ಕೃಷಿ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
 • ಕೃಷಿ, ಶಿಕ್ಷಣ, ಉದ್ಯೋಗ- ಇವು ಮಧ್ಯಮಾವಧಿಯಲ್ಲಿ ಹೆಚ್ಚುಗಮನ ಹರಿಸಬೇಕಾದ ವಲಯಗಳು
 • ಖಾಸಗಿ ವಲಯದ ಹೂಡಿಕೆಯು ಮರುಹರಿವಿಗೆ ಸಿದ್ಧವಾಗಿದೆ.
 • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ತೈಲಬೆಲೆಯು ಆತಂಕ ಪಡುವಂತಾದ್ದು.
 • ರಫ್ತು ವಲಯವು ಏರುಹಾದಿಯಲ್ಲಿ ಸಾಗುವ ಎಲ್ಲಾ ಸಂಭವಗಳಿವೆ.
 • ನೀತಿ ಆಯೋಗ ಉಪಾಧ್ಯಕ್ಷರು 2019ರ ಸಾಲಿನಲ್ಲಿ ಸರ್ಕಾರ ಶೇ.3ರಷ್ಟು ವಿತ್ತೀಯ ಕೊರತೆ ಕಾಯ್ದುಕೊಳ್ಳಬೇಕೆಂದು ಬಯಸಿದ್ದಾರೆ, ಇದು ಅದಕ್ಕಿಂತಲೂ ಹೆಚ್ಚಿನ ಪ್ರಮಾಣಕ್ಕೇರಬಹುದು.
 • ರಿಯಲ್ ಎಸ್ಟೇಟ್ ವಲಯದ ದರ ಇಳಿಕೆಯಿಂದಾಗಿ ಗ್ರಾಹಕರ ಬಳಕೆಯಲ್ಲಿನ ಬೇಡಿಕೆ ಹೆಚ್ಚಾಗಲಿದೆ.
 • 2019ನೇ ಸಾಲಿನಲ್ಲಿ ಆರ್ಥಿಕ ನಿರ್ವಹಣೆಯು ದೊಡ್ಡ ಸವಾಲಾಗಲಿದೆ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More