ಮೀಸಲು ಅರಣ್ಯ: ಅಧಿಕಾರಿಗಳು ಬದಲಾದಂತೆಲ್ಲ ಕಾನೂನು ಅಭಿಪ್ರಾಯವೂ ಬದಲಾಯಿತು!

ಮೀಸಲು ಅರಣ್ಯ ಪ್ರದೇಶವನ್ನು ಉಳಿಸಿ ರಕ್ಷಿಸಬೇಕಿದ್ದ ಹಿರಿಯ ಅಧಿಕಾರಿಗಳು ಗಣಿ ಕಂಪನಿಗಳ ಪರ ವಕಾಲತ್ತು ವಹಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಕಾನೂನು ಇಲಾಖೆ ಮೊದಲು ತಳೆದಿದ್ದ ಅಭಿಪ್ರಾಯಕ್ಕೆ ಬದ್ಧವಾಗಿರದೆ ಅಧಿಕಾರಿಗಳು ಬದಲಾದಂತೆ ಅಭಿಪ್ರಾಯವೂ ಬದಲಾಯಿಸಿದೆ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿನ ಜಾಣೆಹಾರ್ ಬ್ಲಾಕ್ ವ್ಯಾಪ್ತಿಯ ೧,೫೪೫ ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಮೀಸಲು ಅರಣ್ಯ ಪ್ರದೇಶ ಪ್ರಕರಣ ವಿವಾದಕ್ಕೆ ಗುರಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆ ತದ್ವಿರುದ್ಧ ಅಭಿಪ್ರಾಯಗಳನ್ನು ನೀಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಬದಲಾದಂತೆಲ್ಲ ಕಾನೂನು ಇಲಾಖೆಯೂ ತನ್ನ ಅಭಿಪ್ರಾಯವನ್ನು ಬದಲಿಸಿದೆಯೇ ಎಂಬ ಅನುಮಾನಗಳು ಇದೀಗ ವ್ಯಕ್ತವಾಗಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಮಾಜ ಪರಿವರ್ತನಾ ಸಮುದಾಯ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಅರಣ್ಯ ಪ್ರದೇಶವನ್ನು ಪುನರ್‌ ಸ್ಥಾಪಿಸಬೇಕು ಎಂದು ೨೦೧೮ರ ಜ.೧೫ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಈ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ಮದನಗೋಪಾಲ್ ಅವರು, ಅರಣ್ಯ ಇಲಾಖೆ ಹೊರಡಿಸಿದ್ದ ಆದೇಶ ಮತ್ತು ಅಧಿಸೂಚನೆಗಳನ್ನು ೨೦೧೫ರಲ್ಲಿ ರದ್ದುಪಡಿಸಿದ್ದರು. ನಿವೃತ್ತಿಗೆ ೧೦ ದಿನಗಳು ಬಾಕಿ ಇರುವಾಗ ಈ ಆದೇಶ ಹೊರಡಿಸಿದ್ದರು. ಆದರೆ, ಈ "ಅಧಿಸೂಚನೆಗಳನ್ನು ರದ್ದುಪಡಿಸಲು ಮದನಗೋಪಾಲ್ ಅವರಿಗೆ ಯಾವುದೇ ಅಧಿಕಾರವಿರಲಿಲ್ಲ ಮತ್ತು ಅಧಿಕಾರ ವ್ಯಾಪ್ತಿಯನ್ನೂ ಹೊಂದಿರಲಿಲ್ಲ," ಎಂದು ಕಾನೂನು ಇಲಾಖೆ ೨೦೧೬ರ ನ.೯ರಂದು ಅಭಿಪ್ರಾಯ ನೀಡಿತ್ತು.

ಇವರ ನಂತರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ಟಿ ಎಂ ವಿಜಯಭಾಸ್ಕರ್‌ ಅವರು ಕಾನೂನು ಇಲಾಖೆ ಅಭಿಪ್ರಾಯದ ಅನುಸಾರ ಮದನಗೋಪಾಲ್‌ ಮತ್ತು ಇತರ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದರು. ಇದನ್ನು ಸಚಿವ ರಮಾನಾಥ್‌ ರೈ ಅವರು ಅನುಮೋದಿಸಿದ್ದರು. ಆದರೆ, ಈವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ವಿಜಯಭಾಸ್ಕರ್‌ ಅವರ ನಂತರ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಪಿ ರವಿಕುಮಾರ್‌ ಅವರು, ಇದೇ ಪ್ರಕರಣದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರಿದ್ದರು. “ಈ ಪ್ರಕರಣದಲ್ಲಿನ ಹಲವು ವಾಸ್ತವಾಂಶಗಳು ಮತ್ತು ಸಂದರ್ಭಗಳು, ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎರಡು ರಿಟ್‌ ಅರ್ಜಿಗಳು ಮತ್ತು ಕಾನೂನಿನ ನಿರೂಪಣೆ (ರಿಟ್ ಅರ್ಜಿ ೩೬೭೯೨/೨೦೧೧) ಸಂಬಂಧ ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ್ದ ಆದೇಶ ಕಾನೂನುಬದ್ಧವಾಗಿದೆ ಮತ್ತು ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ,” ಎಂದು ಸುಪ್ರೀಂ ಕೋರ್ಟ್ ರಚಿಸಿರುವ ಮೇಲುಸ್ತುವಾರಿ ಸಮಿತಿಗೆ ಬರೆದಿದ್ದ ಪತ್ರವೂ ಚರ್ಚೆಗೆ ಗ್ರಾಸವಾಗಿದೆ. ಮದನಗೋಪಾಲ್‌ ಅವರು ಹೊರಡಿಸಿದ್ದ ಆದೇಶವೇ ಸರಿ ಎಂದು ಪತ್ರದಲ್ಲಿ ಸಮರ್ಥಿಸಿಕೊಂಡಂತಿದೆ. ಕಾನೂನು ಇಲಾಖೆ ನೀಡಿರುವ ಅಭಿಪ್ರಾಯವನ್ನು ಅವರ ಪತ್ರದಲ್ಲಿ ಉಲ್ಲೇಖಿಸದಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಮದನಗೋಪಾಲ್ ಅವರನ್ನು ರಕ್ಷಿಸಲು ಐಎಎಸ್ ಅಧಿಕಾರಿಗಳ ಒಂದು ವರ್ಗ ಧಾವಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕಾನೂನು ಇಲಾಖೆ ಮೊದಲು ನೀಡಿದ್ದ ಅಭಿಪ್ರಾಯವನ್ನೇ ಬದಲಿಸುವಲ್ಲಿ ಐಎಎಸ್ ಲಾಬಿ ಯಶಸ್ವಿಯಾಗಿದೆ ಎಂದು ಇಲಾಖೆಯ ಉನ್ನತ ಮೂಲಗಳು ‘ದಿ ಸ್ಟೇಟ್’ಗೆ ತಿಳಿಸಿವೆ.

ಮದನಗೋಪಾಲ್‌ ಅವರು ೨೦೧೫ರಲ್ಲಿ ಹೊರಡಿಸಿರುವ ಆದೇಶ ಕಾನೂನುಬಾಹಿರ. ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಭಾವಶಾಲಿಗಳು ಕ್ರಿಮಿನಲ್ ಸಂಚು ನಡೆಸಿದ್ದಾರೆ. ಮದನಗೋಪಾಲ್‌ ಸೇರಿ ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಎಸ್‌ ಆರ್‌ ಹಿರೇಮಠ್, ಸಮಾಜ ಪರಿವರ್ತನಾ ಸಮುದಾಯ
ಇದನ್ನೂ ಓದಿ : ಸಚಿವ ಸಂಪುಟದ ಗಣಿ ಉಪ ಸಮಿತಿ ನಾಲ್ಕು ವರ್ಷಗಳಲ್ಲಿ ಏನನ್ನೂ ಮಾಡದೇ ಹೋಯಿತೆ ?

ಈ ಎಲ್ಲ ಬೆಳವಣಿಗೆಗಳಿಂದಾಗಿ ೩೨೩.೮೮ ಹೆಕ್ಟೇರ್‌ ಪ್ರದೇಶವೂ ಸೇರಿದಂತೆ ಒಟ್ಟು ೧,೫೪೫ ಹೆಕ್ಟೇರ್ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಹೊರತುಪಡಿಸಿದಂತಾಗಿದೆ. ಅಲ್ಲದೆ, ಇದೇ ಪ್ರದೇಶದಲ್ಲಿ ಹಲವು ವರ್ಷಗಳಿಂದಲೂ ಕೆಲವು ಗಣಿ ಕಂಪನಿಗಳು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿವೆ ಎಂದು ಹೇಳಲಾಗಿದ್ದು, ಮತ್ತೆ ಚಟುವಟಿಕೆ ಆರಂಭಿಸಲು ಹಸಿರು ನಿಶಾನೆ ತೋರಿಸಿದಂತಾಗಿದೆ.

ಪ್ರಕರಣದ ವಿವರ: ಚಿಕ್ಕನಾಯಕನಹಳ್ಳಿಯ ಜಾಣೇಹಾರ್ ಬ್ಲಾಕ್‌ನಲ್ಲಿನ ಒಟ್ಟು ೧,೫೪೫ ಹೆಕ್ಟೇರ್ ವಿಸ್ತೀರ್ಣ ಅರಣ್ಯ ಪ್ರದೇಶವಿದೆ. ಈ ಪೈಕಿ, ಸರ್ವೆ ನಂಬರ್‌ ೪೧, ೪೨ ಮತ್ತು ೪೩ರಲ್ಲಿ ಒಟ್ಟು ೩೨೩.೮೮ ಹೆಕ್ಟೇರ್ ಪ್ರದೇಶವನ್ನು ಜಾಣೆಹಾರ್ ಬ್ಲಾಕ್‌ ಎಂದು ಕರ್ನಾಟಕ ಅರಣ್ಯ ಕಾಯ್ದೆ ೧೯೬೩ರ ಕಲಂ ೪ರ ಪ್ರಕಾರ ರಾಜ್ಯ ಸರ್ಕಾರ ೧೯೯೪ರ ಆ.೪ರಂದು ಅಧಿಸೂಚನೆ ಪ್ರಕಟಿಸಿತ್ತು. ೧೯೯೪ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ೨೦ ವರ್ಷಗಳ ಬಳಿಕ, ಅಂದರೆ, ೨೦೧೪ರ ಸೆ.೪ರಂದು ತಿದ್ದುಪಡಿ ಮಾಡಲಾಗಿತ್ತು. ಇದರ ಪ್ರಕಾರ, ಚಿಕ್ಕನಾಯಕನಹಳ್ಳಿಯ ಕಸಬಾ ಹೋಬಳಿ ಹೊಸಹಳ್ಳಿ ಭಾಗದ 17, ಗೊಲ್ಲರಹಳ್ಳಿ ಭಾಗದ 4, ಹೊನ್ನೆಬಾಗಿಯ 8 ಸರ್ವೆ ನಂಬರ್, ಶೆಟ್ಟಿಕೆರೆ ಹೋಬಳಿ ಬುಳ್ಳೇನಹಳ್ಳಿಯ 19, ಮಂಚೆಕಟ್ಟೆಯ 8, ಬಗ್ಗನಹಳ್ಳಿ ಭಾಗದ 11, ಸೊಂಡೇನಹಳ್ಳಿ ಭಾಗದ 9 ಸರ್ವೆ ನಂಬರ್‌ಗಳಲ್ಲಿನ ಒಟ್ಟು ೩,೮೧೭ ಎಕರೆ, ೩೨ ಗುಂಟೆ (೧,೫೪೫.೦೪ ಹೆಕ್ಟೇರ್) ಪ್ರದೇಶವನ್ನು ಜಾನೀರ್‌ ಬ್ಲಾಕ್‌ ಎಂದು ಘೋಷಿಸಿ ಆದೇಶ ಹೊರಡಿಸಿತ್ತು.

ವಿಪರ್ಯಾಸವೆಂದರೆ, "೧೯೯೪ ಮತ್ತು ೨೦೧೪ರಲ್ಲಿ ಅರಣ್ಯ ಇಲಾಖೆ ಹೊರಡಿಸಿದ್ದ ಅಧಿಸೂಚನೆಗಳನ್ನು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಮದನಗೋಪಾಲ್‌ ಅವರು ೨೦೧೫ರ ಡಿ.೨೧ರಲ್ಲಿ (ಕಡತ ಸಂಖ್ಯೆ ಎಫ್‌ಇಇ ೧೯೮ ಎಫ್‌ಎಎಫ್‌ ೨೦೧೫) ರದ್ದುಗೊಳಿಸಿ ಆದೇಶ ಹೊರಡಿಸಿದ್ದರು," ಎಂಬ ವಿಚಾರ, ತುಮಕೂರು ಜಿಲ್ಲಾಧಿಕಾರಿ ಅವರು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಿಂದ ಗೊತ್ತಾಗಿದೆ.

ಚಿಕ್ಕನಾಯಕನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ೨೦೧೨ರಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಮೂಲಕ ಗಮನ ಸೆಳೆದಿತ್ತು. ಸುಪ್ರೀಂ ಕೋರ್ಟ್ ಸೂಚನೆಯಂತೆ ತನಿಖೆ ನಡೆಸಿದ್ದ ಸಿಇಸಿ, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ವರದಿ ನೀಡಿತ್ತು. ಈ ವರದಿ ಆಧರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪುನಃ ವಿಚಾರಣೆಗೆ ಬಂದ ಸಂದರ್ಭದಲ್ಲಿ, "೧೯೯೪ರಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಮುದ್ರಣದೋಷ ಆಗಿದೆ. ಅದನ್ನು ಸರಿಪಡಿಸಲಾಗುತ್ತದೆ," ಎಂದು ಮದನಗೋಪಾಲ್‌ ಅವರೇ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More