ಗಾಂಧಿ ಹತ್ಯೆಯ ಸಂಚು | ನ್ಯಾ.ಕಪೂರ್ ತನಿಖಾ ಆಯೋಗದ ಸತ್ಯಗಳ ಅನಾವರಣ

ಗಾಂಧಿ ಸಾವಿನ ಸುತ್ತ ಸಂಶಯದ ಚಕ್ರವನ್ನು ಬೇಕೆಂದೇ ತಿರುಗಿಸಲಾಗುತ್ತಿದೆ. ಮಹಾತ್ಮರ ಸಾವಿನ ಹಿಂದಿನ ಪಿತೂರಿಯನ್ನು ಮೂರು ವರ್ಷ ತನಿಖೆ ನಡೆಸಿದ ನ್ಯಾ.ಜೀವನ್‌ಲಾಲ್ ಕಪೂರ್ ಆಯೋಗದ ಆರು ಸಂಪುಟಗಳ ವರದಿಯ ಆಯ್ದಭಾಗಗಳನ್ನು ‘ದಿ ಸ್ಟೇಟ್’ ಇಂದಿನಿಂದ ವಾರಕ್ಕೊಮ್ಮೆ ಪ್ರಸ್ತುತಪಡಿಸಲಿದೆ

ಗಾಂಧಿ ಎಂಬ ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಕೊನೆಯುಸಿರೆಳೆದು ಇಂದಿಗೆ ಸರಿಯಾಗಿ ಎಪ್ಪತ್ತು ವರ್ಷ. ದಕ್ಷಿಣ ಆಫ್ರಿಕಾದಲ್ಲಾದ ಅವಮಾನದ ಮೊದಲ ಘಟನೆಯಿಂದ ೧೯೪೮ರ ಜ.೩೦ರಂದು ಎದೆಗೆ ನೇರ ಗುಂಡೇಟು ತಗಲುವವರೆಗೆ ಗಾಂಧಿ ನಿರಂತರವಾಗಿ ಸಾವನ್ನು ಬೆನ್ನಿಗೆ ಕಟ್ಟಿಕೊಂಡೇ ಇದ್ದರು. ಸತ್ಯ, ಅಹಿಂಸೆ ಮತ್ತು ಬ್ರಾತೃತ್ವದ ಅವರ ಅಚಲ ನಂಬಿಕೆಯೇ ವಿರೋಧಿಗಳ ನಿದ್ದೆಗೆಡಿಸಿತ್ತು. ವಿಭಜನೆಯ ಬಳಿಕ ಪಾಕಿಸ್ತಾನದ ವಿಷಯವಷ್ಟೇ ಅಲ್ಲದೆ, ಭಾರತೀಯ ಹಿಂದೂ ಸಮಾಜದಲ್ಲಿ ಸಮಾನತೆ ತರುವ ವಿಷಯ ಕೂಡ ವಿರೋಧಿಗಳ ಪಾಲಿಗೆ ಅರಗಿಸಿಕೊಳ್ಳಲಾಗದ ಭೀತಿ ಹುಟ್ಟಿಸಿತ್ತು. ಪರಿಣಾಮವಾಗಿ, ಸತ್ಯ ಮತ್ತು ನಿಷ್ಠೆಯ ಪರ ದೃಢವಾಗಿ ನಿಂತ ಜೀವ, ಸುಳ್ಳು ಮತ್ತು ವಂಚನೆಯ ತಳಹದಿಯ ಸಂಚಿಗೆ ಬಲಿಯಾಯಿತು.

ಆದರೆ, ಎಪ್ಪತ್ತು ವರ್ಷಗಳ ಬಳಿಕವೂ ಗಾಂಧಿ ಹತ್ಯೆ ಕೆಲವರ ಪಾಲಿಗೆ ಒಂದು ನಿಗೂಢವಾದರೆ, ಮತ್ತೆ ಕೆಲವರ ಪಾಲಿಗೆ ಕೊಡವಿಕೊಳ್ಳಲಾಗದ ನೆತ್ತರ ಕಲೆಯಾಗಿ ಅಂಟಿಕೊಂಡಿದೆ. ದೇಶದ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಅಳಿಸಲಾಗದ ಗಾಯದ ಕಲೆಯಾಗಿಯೂ; ದೇಶದ ಅಸಹನೆಯ, ದ್ವೇಷದ ರಕ್ತಸಿಕ್ತ ಚರಿತ್ರೆಯ ಮೊದಲ ಅಧ್ಯಾಯವಾಗಿಯೂ ಉಳಿದುಹೋಗಿದೆ.

ಇದೀಗ ಕಳೆದ ಕೆಲವು ವರ್ಷಗಳಿಂದ ಗಾಂಧಿ ಮತ್ತೊಂದು ಕಾರಣಕ್ಕೆ ಮತ್ತೆ-ಮತ್ತೆ ಚರ್ಚೆಗೆ ಒಳಗಾಗುತ್ತಿದ್ದಾರೆ. ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯ’ ಎಂಬ ವ್ಯಾಖ್ಯಾನಕ್ಕೂ ಒಳಗಾಗಿರುವ ಗಾಂಧಿ ಹತ್ಯೆಯ ಪ್ರಮುಖ ಆರೋಪಿ ನಾಥೂರಾಮ್ ಗೋಡ್ಸೆಯ ಕೃತ್ಯವನ್ನು ಸಮರ್ಥಿಸಿಕೊಳ್ಳುವ, ಆತನನ್ನು ಮಹಾನ್ ದೇಶಭಕ್ತ ಎಂದು ಆರಾಧಿಸುವ ಒಂದು ಸಂಸ್ಕೃತಿ ತಲೆ ಎತ್ತಿದೆ. ಗೋಡ್ಸೆ ಮತ್ತು ಆತನ ಸಹಚರ ನಾರಾಯಣ ಆಪ್ಟೆಯೊಂದಿಗಿನ ನಂಟು ಹೊಂದಿದ್ದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬರು ಮೇರುವ್ಯಕ್ತಿಯಾಗಿ, ೨೦೦೩ರಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿನ ಸ್ವಾತಂತ್ರ ಸೇನಾನಿಗಳ ಸರಣಿ ಚಿತ್ರಗಳಲ್ಲಿ ಸ್ಥಾನ ಪಡೆದ ಕ್ಷಣದಿಂದಲೇ ಅಂತಹದ್ದೊಂದು ಸಂಸ್ಕೃತಿ ಸಮಾಜದ ಮುಖ್ಯವಾಹಿನಿಯ ಮುನ್ನೆಲೆಗೆ ಬಂದಿತು ಎಂಬುದು ಗುಟ್ಟೇನೂ ಅಲ್ಲ.

ಆ ಬಳಿಕ, ಗೋಡ್ಸೆ ಪಿಸ್ತೂಲಿನ ಮೂರು ಗುಂಡುಗಳ ಹೊರತಾಗಿ ನಾಲ್ಕನೇ ಗುಂಡೊಂದು ಗಾಂಧಿಯ ದೇಹ ಹೊಕ್ಕಿತ್ತು. ಆ ನಾಲ್ಕನೇ ಗುಂಡು ಯಾರ ಬಂದೂಕಿನಿಂದ ಸಿಡಿಯಿತು ಎಂಬ ಪ್ರಶ್ನೆಯನ್ನು ಕೂಡ ಮುಂದೆ ಮಾಡಲಾಗಿದೆ. ಮುಂಬೈ ಮೂಲದ ಅಭಿನವ್ ಭಾರತ್ ಎಂಬ ಬಲಪಂಥೀಯ ಸಂಘಟನೆಯ ಟ್ರಸ್ಟಿ ಹಾಗೂ ಸಂಶೋಧಕ ಪಂಕಜ್ ಕೆ ಫಡ್ನೀಸ್ ಎಂಬುವವರು ಇದೇ ವಾದ ಮುಂದಿಟ್ಟುಕೊಂಡು ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. "ನಾಲ್ಕನೇ ಗುಂಡಿನ ಕುರಿತು ಈವರೆಗಿನ ತನಿಖೆಯಲ್ಲಿ ಸ್ಪಷ್ಟತೆ ಇಲ್ಲ. ಆ ಹಿನ್ನೆಲೆಯಲ್ಲಿ ಗಾಂಧಿ ಹತ್ಯೆ ಒಂದು ಮಹಾನ್ ಷಢ್ಯಂತ್ರದ ಭಾಗ. ಅದರ ಹಿಂದೆ ಪೋರ್ಸ್ ೧೩೬ ಎಂಬ ಬ್ರಿಟಿಷ್ ಸೀಕ್ರೆಟ್ ಸರ್ವಿಸ್ ಕೈವಾಡದ ಶಂಕೆ ಇದೆ. ಹಾಗಾಗಿ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆಗೆ ಆದೇಶಿಸಬೇಕು,” ಎಂಬುದು ಫಡ್ನೀಸ್ ಅಹವಾಲಾಗಿತ್ತು. ಫಡ್ನೀಸ್ ಅವರ ದೂರಿನ ಕುರಿತು ನಿರ್ಧಾರ ಕೈಗೊಳ್ಳಲು ಸುಪ್ರೀಂ ಕೋರ್ಟ್, ಹಿರಿಯ ವಕೀಲ ಅಮರೇಂದರ್ ಶರಣ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿತ್ತು. ಆದರೆ, ಇದೇ ಜನವರಿ ಎರಡನೇ ವಾರ ಸುಪ್ರೀಂ ಕೋರ್ಟಿಗೆ ಫಡ್ನೀಸ್ ಅಹವಾಲು ಕುರಿತ ವಿಚಾರಣೆಯ ತಮ್ಮ ವರದಿ ಸಲ್ಲಿಸಿದ ಅಮಿಕಸ್ ಕ್ಯೂರಿ ಶರಣ್ ಅವರು, “ಗಾಂಧಿ ಹತ್ಯೆ ಪ್ರಕರಣವನ್ನು ಮರುತನಿಖೆ ನಡೆಸುವ ಅಗತ್ಯ ಸಾರುವ ಯಾವುದೇ ದಾಖಲೆ ಅಥವಾ ಪುರಾವೆಗಳು ಇಲ್ಲ. ಹಾಗಾಗಿ, ಈ ವಿಷಯದಲ್ಲಿ ಮರುತನಿಖೆಯ ಅಗತ್ಯವಿಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ, ಗಾಂಧಿ ಹತ್ಯೆಯ ಸಂಚಿನಲ್ಲಿ ಅಂದಿನ ಹಿಂದೂ ಮಹಾಸಭಾ ಅಧ್ಯಕ್ಷ ವಿನಾಯಕ ದಾಮೋದರ ಸಾವರ್ಕರ್ ಪಾತ್ರದ ಕುರಿತ ಫಡ್ನೀಸ್ ಅವರ ಪ್ರಶ್ನೆಗೂ, ಶರಣ್ ತಮ್ಮ ವರದಿಯಲ್ಲಿ ಉತ್ತರಿಸಿದ್ದಾರೆ. ಸಾವರ್ಕರ್ ಅವರನ್ನು ಪಿತೂರಿ ಆರೋಪದಿಂದ ಕೋರ್ಟ್ ಮುಕ್ತಗೊಳಿಸಿದ್ದರೂ ಮತ್ತು ಕೋರ್ಟಿನ ಆ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸದೆ ಇದ್ದರೂ, ಗಾಂಧಿ ಹತ್ಯೆ ಪ್ರಕರಣದ ಕುರಿತು ೧೯೬೬ರಲ್ಲಿ ನೇಮಕಗೊಂಡಿದ್ದ ನ್ಯಾಯಮೂರ್ತಿ ಜೀವನ್ ಲಾಲ್ ಕಪೂರ್ ಆಯೋಗ ತನ್ನ ವರದಿಯಲ್ಲಿ, “ಈ ಎಲ್ಲ ವಾಸ್ತವಾಂಶಗಳ ಸಾರಾಂಶವೆಂದರೆ, ಇದು ಸಾವರ್ಕರ್ ಮತ್ತು ಅವರ ಗುಂಪು ನಡೆಸಿದ ಸಂಚು ಎಂಬುದನ್ನು ಹೊರತುಪಡಿಸಿ ಉಳಿದೆಲ್ಲ ಸಾಧ್ಯತೆಗಳನ್ನೂ ಅಲ್ಲಗಳೆಯುತ್ತದೆ,” ಎಂಬ ತೀರ್ಮಾನಕ್ಕೆ ಬಂದಿದ್ದರು ಎಂಬುದನ್ನೂ ಅಮಿಕಸ್ ಕ್ಯೂರಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ, “ದಿವಂಗತ ಸಾವರ್ಕರ್ ಅವರನ್ನು ಈ ಪ್ರಕರಣದಲ್ಲಿ ದೋಷಮುಕ್ತಗೊಳಿಸಲಾಗಿದೆ. ಹಾಗಾಗಿ, ಈ ಹಂತದಲ್ಲಿ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಅವರ ಪಾತ್ರವೇನು ಎಂಬ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಸಾಧ್ಯವೂ ಇಲ್ಲ ಮತ್ತು ಅಂತಹ ತೀರ್ಮಾನ ಅಪೇಕ್ಷಿತವೂ ಅಲ್ಲ,” ಎಂದೂ ಶರಣ್ ಅಭಿಪ್ರಾಯಪಟ್ಟಿದ್ದಾರೆ.

ಅಮಿಕಸ್ ಕ್ಯೂರಿ ಅವರು ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ನ್ಯಾ.ಕಪೂರ್ ಆಯೋಗದ ವರದಿಯನ್ನು ಪ್ರಸ್ತಾಪಿಸಿದ್ದಾರೆ. ಈ ನಡುವೆ, ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಕೂಡ ಕಳೆದ ವರ್ಷದ ಫೆಬ್ರವರಿಯಲ್ಲೇ ನ್ಯಾ.ಕಪೂರ್ ವರದಿಯ ಮೇಲೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಬಹಿರಂಗಪಡಿಸುವಂತೆ ಪ್ರಧಾನಮಂತ್ರಿಗಳ ಕಚೇರಿಗೆ ನಿರ್ದೇಶಿಸಿತ್ತು. ಗಾಂಧಿ ಹತ್ಯೆ ಮತ್ತು ಆ ಕುರಿತ ತನಿಖೆಯ ಸಂಪೂರ್ಣ ಮಾಹಿತಿಯನ್ನು ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ಸಂಬಂಧಿಸಿದ ತನ್ನ ಆದೇಶದಲ್ಲಿ ಸಿಐಸಿ, ಪ್ರಧಾನಮಂತ್ರಿಗಳ ಕಚೇರಿಗೆ ಈ ತಾಕೀತು ಮಾಡಿತ್ತು. ಜೊತೆಗೆ, ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತ ಆರ್ಖೈವ್ ಮಾದರಿಯಲ್ಲೇ ಗಾಂಧಿ ಹತ್ಯೆಯ ಕುರಿತ ತನಿಖೆ ಮತ್ತು ಇತರ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಆರ್ಖೈವ್ ನಿರ್ಮಿಸುವಂತೆಯೂ ಮಾಹಿತಿ ಆಯೋಗ ಹೇಳಿತ್ತು.

ಇಂತಹ ಕಾನೂನು ಮತ್ತು ಆಡಳಿತಾತ್ಮಕ ಹಿನ್ನೆಲೆಯ ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಗಾಂಧಿಯ ವ್ಯಕ್ತಿತ್ವ, ಹೋರಾಟವನ್ನಷ್ಟೇ ಅಲ್ಲದೆ, ಅವರ ಸಾವಿನ ಕುರಿತ ಈವರೆಗಿನ ಸತ್ಯಗಳನ್ನು ಕೂಡ ತಿರುಚುವ ಪ್ರಯತ್ನಗಳು ಬಿರುಸುಗೊಂಡಿವೆ. ಗಾಂಧಿಯನ್ನು ಅವಮಾನಗೊಳಿಸುವ, ಅವಹೇಳನ ಮಾಡುವ ಸಂಸ್ಕೃತಿ ಎಲ್ಲೆಡೆ ಮೆರೆಯತೊಡಗಿದೆ. ಆ ಎಲ್ಲ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ನ್ಯಾ.ಕಪೂರ್ ಆಯೋಗದ ವರದಿ ಮತ್ತೊಮ್ಮೆ ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಶತಪಥ | ಗಾಂಧಿಯಲ್ಲ ಆತ, ಗಾಂಧಿ ಎಂತಲೇ ಕರೆಸಿಕೊಂಡ, ಅರರೆ!

ಹಾಗೆ ನೋಡಿದರೆ, ಗಾಂಧಿ ಹತ್ಯೆಯ ಪಿತೂರಿಯಲ್ಲಿ ಶಾಮೀಲಾದ ಆರೋಪದ ಮೇಲೆ ಬಂಧಿತರಾದವರು ಬಿಡುಗಡೆಗೊಂಡ ಬಳಿಕ, ೧೯೬೪ರಲ್ಲಿ ಪೂನಾದಲ್ಲಿ ನಡೆದ ಸಂಭ್ರಮಾಚರಣೆ ಮತ್ತು ಆ ಸಮಾರಂಭದಲ್ಲಿ ಬಾಲಗಂಗಾಧರ ತಿಲಕರ ಮೊಮ್ಮಗ ಜಿ ವಿ ಕೇತ್ಕರ್ ಎಂಬುವರು ಮಾಡಿದ ಭಾಷಣದ ಹಿನ್ನೆಲೆಯಲ್ಲಿ, ಗಾಂಧಿ ಹತ್ಯೆಯ ಹಿಂದಿನ ಸಂಚಿನ ಕುರಿತ ತನಿಖೆಗೆ ಪ್ರತ್ಯೇಕ ಆಯೋಗ ರಚಿಸಲಾಗಿತ್ತು. ಗಾಂಧಿ ಹತ್ಯೆ ಮಾಡುವ ಗೋಡ್ಸೆಯ ಉದ್ದೇಶ ತನಗೆ ಮೊದಲೇ ತಿಳಿದಿತ್ತು ಮತ್ತು ಬಾಂಬೆ ಸರ್ಕಾರಕ್ಕೆ ಆ ಬಗ್ಗೆ ಮೊದಲೇ ಮಾಹಿತಿ ನೀಡಿದ್ದೆ ಎಂದು ಜಿ ವಿ ಕೇತ್ಕರ್ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ್ದರು. ಈ ವಿವಾದಾತ್ಮಕ ಹೇಳಿಕೆ ಮತ್ತು ಸಂಭ್ರಮಾಚರಣೆ ದೇಶದ ಉದ್ದಗಲಕ್ಕೆ ಭಾರಿ ಆಕ್ರೋಶಕ್ಕೆ ಮತ್ತು ಸಂಸತ್ತಿನ ಒಳಗಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರ ಅಂದಿನ ಸಂಸದ ಗೋಪಾಲ್ ಸ್ವರೂಪ್ ಪಾಠಕ್ ನೇತೃತ್ವದಲ್ಲಿ ಆಯೋಗ ರಚಿಸಿ, ಗಾಂಧಿ ಹತ್ಯೆ ಹಿಂದಿನ ಪಿತೂರಿ ಕುರಿತು ತನಿಖೆಗೆ ಆದೇಶಿಸಿತ್ತು. ಆದರೆ, ನೇಮಕಗೊಂಡ ಒಂದೇ ವರ್ಷದಲ್ಲಿ ಪಾಠಕ್ ಕೇಂದ್ರ ಸಚಿವರಾಗಿ ಮತ್ತು ಬಳಿಕ ಮೈಸೂರು ರಾಜ್ಯಪಾಲರಾಗಿ ನೇಮಕಗೊಂಡಿದ್ದರಿಂದ, ೧೯೬೬ರ ನ.೨೧ರಂದು ಆಯೋಗದ ಹೊಣೆಗಾರಿಕೆಯನ್ನು ನಿವೃತ್ತ ನ್ಯಾ.ಜೀವನ್ ಲಾಲ್ ಕಪೂರ್ ಅವರಿಗೆ ವಹಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವೆಲ್ಲ ಅಂಶಗಳನ್ನು ತನಿಖೆಯ ವ್ಯಾಪ್ತಿಗೆ ಪರಿಗಣಿಸಬೇಕು ಎಂಬ ಬಗ್ಗೆ ಕೂಡ ಸರ್ಕಾರವು ಆಯೋಗಕ್ಕೆ ಸ್ಪಷ್ಟವಾಗಿ ಸೂಚಿಸಿತ್ತು. ಪ್ರಮುಖವಾಗಿ, ಪೂನಾದ ಜಿ ವಿ ಕೇತ್ಕರ್ ಸೇರಿದಂತೆ ಯಾವುದೇ ವ್ಯಕ್ತಿ, ಗಾಂಧಿ ಹತ್ಯೆಯ ಕುರಿತ ನಾಥೂರಾಮ್ ಗೋಡ್ಸೆ ಮತ್ತು ಇತರರ ಸಂಚಿನ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದರೇ? ಅಂತಹ ವ್ಯಕ್ತಿಗಳು ಆ ಮಾಹಿತಿಯನ್ನು ಬಾಂಬೆ ಸರ್ಕಾರ ಅಥವಾ ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿದ್ದರೇ? ತಮಗೆ ತಿಳಿದಿದ್ದ ಮಾಹಿತಿಯನ್ನು ಕೇತ್ಕರ್, ಅಂದಿನ ಬಾಂಬೆ ಸರ್ಕಾರದ ಮುಖ್ಯಸ್ಥರಾಗಿದ್ದ ಬಾಲ ಗಂಗಾಧರ್ ಖೇರ್ ಅವರಿಗೆ ಬಾಲುಕಕ್ಕಾ ಕಾನೇಕರ್ ಮೂಲಕ ತಿಳಿಸಿದ್ದರೇ? ಹಾಗೆ ತಿಳಿಸಿದ್ದರೆ, ಬಾಂಬೆ ಸರ್ಕಾರ, ನಿರ್ದಿಷ್ಟವಾಗಿ ಬಾಲ ಗಂಗಾಧರ್ ಖೇರ್ ಮತ್ತು ಭಾರತ ಸರ್ಕಾರ ಗಾಂಧಿ ಹತ್ಯೆ ತಡೆಯಲು ಯಾವ ಕ್ರಮ ಕೈಗೊಂಡಿತ್ತು? ಎಂಬ ಅಂಶಗಳನ್ನು ತನಿಖೆ ಮಾಡುವಂತೆ ಕಪೂರ್ ಆಯೋಗಕ್ಕೆ ಸೂಚನೆ ನೀಡಲಾಗಿತ್ತು.

ಈ ಅಂಶಗಳ ಕುರಿತು ಮೂರು ವರ್ಷಗಳ ಕಾಲ ತನಿಖೆ ನಡೆಸಿದ ನ್ಯಾ.ಕಪೂರ್, ವಿ ಡಿ ಸಾವರ್ಕರ್ ಅವರ ಆಪ್ತರಾಗಿದ್ದ ಅಂಗರಕ್ಷಕ ಅಪ್ಪಾ ರಾಮಚಂದ್ರ ಕಸರ್ ಹಾಗೂ ಆಪ್ತ ಕಾರ್ಯದರ್ಶಿ ಗಜಾನನ ವಿಷ್ಣು ದಾಮ್ಲೆ ಅವರನ್ನು ವಿಚಾರಣೆ ನಡೆಸಿದಾಗ ಹೊರಬಿದ್ದ ಸಂಗತಿಗಳೇನು? ನ್ಯಾಯಾಲಯದ ಮುಂದೆ ಈವರೆಗೆ ಹಾಜರುಪಡಿಸದೆ ಇರುವ ಆ ಸಾಕ್ಷ್ಯಗಳು ಹೇಳುವ ಗಾಂಧಿ ಹತ್ಯೆಯ ಸಂಚಿನ ಕತೆ ಏನು? ಎಂಬ ಕುತೂಹಲಕಾರಿ ಅಂಶಗಳ ಕಪೂರ್ ವರದಿ ನೀಡಿದ್ದರು. ಈ ವರದಿಯ ಮುಖ್ಯಾಂಶಗಳು ಇನ್ನು ವಾರಗಳ ಕಾಲ ನಿಮ್ಮ ಮಂದೆ ಬಿಚ್ಚಿಕೊಳ್ಳಲಿವೆ.

ಮಹಾತ್ಮನ ಹತ್ಯೆಯ ಹಿಂದಿನ ಸತ್ಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ನಡೆಸಿದ ಪ್ರಯತ್ನಗಳ ಫಲ ಏನಾಯಿತು ಎಂಬುದರೊಂದಿಗೆ, ನಮಗೆ-ನಿಮಗೂ ಇರಬಹುದಾದ ಗೊಂದಲ, ಶಂಕೆಗಳನ್ನೂ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ‘ದಿ ಸ್ಟೇಟ್’ ಕೈಗೆತ್ತಿಕೊಂಡಿರುವ ಹೊಸ ಪ್ರಯತ್ನ ಇದು.

ನಿರೀಕ್ಷಿಸಿ...

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More