ಕೋಟಿ ಉದ್ಯೋಗ ಸೃಷ್ಟಿ ಭರವಸೆ ಈಡೇರಿಕೆಗೆ ಸಚಿವ ಜೇಟ್ಲಿ ಏನೇನು ಮಾಡಿದ್ದಾರೆ?

ಅಪನಗದೀಕರಣದ ನಂತರ ದೇಶ ಎದುರಿಸಿದ ಅತಿ ದೊಡ್ಡ ಸಮಸ್ಯೆ ನಿರುದ್ಯೋಗ. ಆರ್ಥಿಕ ಚೇತರಿಕೆಗೆ ಮೂಲದ್ರವ್ಯವಾಗಿರುವ ಉದ್ಯೋಗ ಸೃಷ್ಟಿ ಸರ್ಕಾರಕ್ಕೆ ದೊಡ್ಡ ಸವಾಲು. ಹಾಗಾದರೆ, ವಿತ್ತ ಸಚಿವ ಅರುಣ್ ಜೇಟ್ಲಿಯವರು, ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಏನೇನು ಪರಿಹಾರೋಪಾಯ ನೀಡಿದ್ದಾರೆ?

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಎಂದು ಪರೋಕ್ಷವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರೇ ಹೇಳಿಕೊಂಡಿದ್ದಾರೆ. ಐದು ಬಜೆಟ್‌ಗಳ ಪೈಕಿ ಅತ್ಯಂತ ಕಡಿಮೆ ಅವಧಿಯ ಬಜೆಟ್ ಭಾಷಣ ಓದಿದ ಜೇಟ್ಲಿ ಅವರು, 17 ಬಾರಿ ನಿರುದ್ಯೋಗ ಪದ ಬಳಕೆ ಮಾಡಿದ್ದಾರೆ ಎಂದರೆ ನೀವೆ ಊಹಿಸಬಹುದು, ನಿರುದ್ಯೋಗ ಸಮಸ್ಯೆಯ ತೀವ್ರತೆಯನ್ನು!

2014ರ ಸಾರ್ವತ್ರಿಕ ಚುನಾವಣೆ ಪ್ರಚಾರದ ವೇಳೆ ನರೇಂದ್ರ ಮೋದಿ, ತಾವು ಅಧಿಕಾರಕ್ಕೆ ಬಂದರೆ ಪ್ರತಿವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭವರಸೆ ನೀಡಿದ್ದರು. ಅವರು ಅಧಿಕಾರಕ್ಕೆ ಬಂದೂ ಆಯಿತು, ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರು ಐದನೇ ಬಜೆಟ್ ಮಂಡಿಸಿಯೂ ಆಯಿತು. ಆದರೆ, ಈ ನಾಲ್ಕು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಸಫಲರಾಗಲಿಲ್ಲ. ಜೊತೆಗೆ, ಅಪನಗದೀಕರಣದಿಂದಾದ ಆರ್ಥಿಕ ಹಿನ್ನಡೆಯಂತೂ, ಇದ್ದ ಉದ್ಯೋಗಗಳನ್ನೂ ಕಸಿದುಕೊಂಡಿತು.

ಈಗಲೂ ನಿರುದ್ಯೋಗ ಅತಿದೊಡ್ಡ ಸಮಸ್ಯೆ ಮತ್ತು ಸವಾಲು ಕೂಡ. ಬಿಎಸ್ಇ ನಿರುದ್ಯೋಗ ಸೂಚ್ಯಂಕದ ಪ್ರಕಾರ, ಈ ಹೊತ್ತಿನ ನಿರುದ್ಯೋಗ ನಗರದ ಪ್ರದೇಶದಲ್ಲಿ ಶೇ.6.35 ಇದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಶೇ.4.36ರಷ್ಟಿದೆ. ದೇಶದ ಸರಾಸರಿ ನಿರುದ್ಯೋಗ ಶೇ.5.4ರಷ್ಟಿದೆ.

ಅಪನಗದೀಕರಣದ ನಂತರ ಒಂದು ಹಂತದಲ್ಲಿ ಈ ಪ್ರಮಾಣ ಶೇ.12 ದಾಟಿತ್ತು. ನಂತರ ನಿಧಾನವಾಗಿ ಚೇತರಿಸಿಕೊಂಡಿದೆ. ಆದರೆ, ಶೇ.6ರಷ್ಟು ನಿರುದ್ಯೋಗವು ದುಡಿಯುವ ಯುವವರ್ಗದ ಪ್ರಮಾಣ ಹೆಚ್ಚಿರುವ ಭಾರತ ಅಭಿವೃದ್ಧಿಗೆ ಪೂರಕವಲ್ಲ.

ಈ ಹಿನ್ನೆಲೆಯಲ್ಲಿ, ವಿತ್ತ ಸಚಿವ ಅರುಣ್ ಜೇಟ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ಸಾಕಷ್ಟು ಕಸರತ್ತು ಮಾಡಿದ್ದಾರೆ. ಅವರಿಗೆ ನಿರುದ್ಯೋಗ ಸಮಸ್ಯೆ ನಿವಾರಿಸುವ ಜೊತೆಗೆ, 2014ರ ಚುನಾವಣೆಯಲ್ಲಿ ನೀಡಿದ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಮತ್ತೊಂದು ಚುನಾವಣೆಗೆ ಹೋಗುವ ಮುನ್ನವಾದರೂ ಈಡೇರಿಸಬೇಕೆಂಬ ಉಮೇದು.

ಮೂಲಭೂತ ಸೌಲಭ್ಯ ವಲಯಕ್ಕೆ ಹೆಚ್ಚಿನ ವಿನಿಯೋಗ ಮಾಡಿದರೆ, ನಿರ್ಮಾಣ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಕಾರಣಕ್ಕಾಗಿ ಬಜೆಟ್‌ನಲ್ಲಿ ಮೂಲಭೂತ ಸೌಲಭ್ಯ ನಿರ್ಮಾಣಕ್ಕಾಗಿ ₹5.97 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ₹4.94 ಲಕ್ಷ ಕೋಟಿ ಮೀಸಲಿಡಲಾಗಿದೆ. ಅಂದರೆ, ಶೇ.25ರಷ್ಟು ಅನುದಾನ ಹೆಚ್ಚಳ ಮಾಡಿದ್ದಾರೆ.

‘ಆಯುಷ್ಮಾನ್ ಭಾರತ್’ ಯೋಜನೆಯಡಿ 1.5 ಲಕ್ಷ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಪ್ರಾರಂಭಿಸುವ ಘೋಷಣೆ ಮಾಡಿದ್ದಾರೆ. ಪ್ರತಿಯೊಂದು ಕೇಂದ್ರದಲ್ಲೂ 10 ಮಂದಿಗೆ ಉದ್ಯೋಗ ದಕ್ಕಿದರೂ 15 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಅದರಲ್ಲೂ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.

ಇದುವರೆಗೆ, ₹50 ಕೋಟಿ ವಹಿವಾಟು ನಡೆಸುವ ಕಂಪನಿಗಳಿಗೆ ಇರುವ ಶೇ.25ರಷ್ಟು ಕಾರ್ಪೋರೆಟ್ ತೆರಿಗೆಯನ್ನು ₹250 ಕೋಟಿ ವಹಿವಾಟು ನಡೆಸುವ ಕಂಪನಿಗಳಿಗೂ ವಿಸ್ತರಿಸಿದ್ದಾರೆ. ಇದರಿಂದ ಶೇ.90ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ಕಂಪನಿಗಳಿಗೆ ಅನುಕೂಲವಾಗುತ್ತದೆ. ಈ ಕಂಪನಿಗಳು ತೆರಿಗೆ ರೂಪದಲ್ಲಿ ಉಳಿಯುವ ಹಣವನ್ನು ಕಂಪನಿ ವಿಸ್ತರಿಸಲು ಹೂಡಿಕೆ ಮಾಡುತ್ತವೆ; ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಜೇಟ್ಲಿ ಅವರ ಲೆಕ್ಕಾಚಾರ.

ಮುದ್ರಾ ಯೋಜನೆಯಡಿ ₹3 ಲಕ್ಷ ಕೋಟಿ ಸಾಲ ನೀಡಲು ಬಜೆಟ್‌ನಲ್ಲಿ ಗುರಿ ಹೊಂದಲಾಗಿದೆ. ಸಣ್ಣ ಉದ್ಯಮಿಗಳಿಗೆ ಸಾಂಸ್ಥಿಕ ಹಣಕಾಸು ಒದಗಿಸುವ ಈ ಯೋಜನೆ 2015ರಲ್ಲಿ ಪಾರಂಭವಾದಾಗಿನಿಂದ 5.5 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಈಗ ಸಾಲ ನೀಡಿಕೆ ಪ್ರಮಾಣ ಹೆಚ್ಚಿರುವುದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ ಎನ್ನುತ್ತಾರೆ ಜೇಟ್ಲಿ.

ಎಲ್ಲ ವಲಯಗಳಲ್ಲೂ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಇಪಿಎಫ್ ಮೂಲಕ ವೇತನದ ಶೇ.12ರಷ್ಟು ಮೊತ್ತವನ್ನು ಮೂರು ವರ್ಷಗಳ ಕಾಲ ಸರ್ಕಾರ ಪಾವತಿಸುವುದರಿಂದ ಸಂಘಟಿತ ವಲಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ, ಮಹಿಳಾ ಉದ್ಯೋಗಿಗಳು ಕಡ್ಡಾಯ ಪಾವತಿಸಬೇಕಾದ ಇಪಿಎಫ್ ಮೊತ್ತವನ್ನು ಶೇ.12ರಿಂದ 8ಕ್ಕೆ ತಗ್ಗಿಸಿರುವುದರಿಂದ, ಅವರು ಮನೆಗೊಯ್ಯುವ ವೇತನದ ಪ್ರಮಾಣ ಹೆಚ್ಚಲಿದೆ. ಇದರಿಂದ ಸಂಘಟಿತ ವಲಯದಲ್ಲಿ ಉದ್ಯೋಗ ತೊರೆಯುವವರ ಸಂಖ್ಯೆ ಕಡಿಮೆ ಆಗಲಿದೆ.

ಇತ್ತೀಚಿನ ವಿಶ್ವಬ್ಯಾಂಕ್ ವರದಿಯು, ಭಾರತದಲ್ಲಿ 15-29ರ ವಯೋಮಿತಿಯಲ್ಲಿರುವ ಜನಸಂಖ್ಯೆ ಪೈಕಿ ಶೇ.30ರಷ್ಟು ಶಿಕ್ಷಿತರೂ ಅಲ್ಲೂ, ಉದ್ಯೋಗವೂ ಇಲ್ಲ, ತರಬೇತಿಯೂ ಇಲ್ಲ ಎಂಬ ಅಂಶವನ್ನು ತಿಳಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು, ಪ್ರತಿ ಜಿಲ್ಲೆಯಲ್ಲೂ ಮಾದರಿ ಕೌಶಲ್ಯ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಅಂಥ 300 ಕೇಂದ್ರಗಳು ಕಾರ್ಯಾರಂಭ ಮಾಡಿದ್ದು, ತರಬೇತಿ ನೀಡುತ್ತಿವೆ ಎಂದು ಜೇಟ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಅನ್ವೀಕ್ಷಿಕೀ | ಇಂಡಿಯಾದಲ್ಲಿ ಈಗ ಉದ್ಯೋಗ ಹುಡುಕುವುದೂ ಒಂದು ಕೆಲಸ

ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಒಟ್ಟಾರೆ, ವಿನಿಯೋಗ ಮೊತ್ತವು 14.34 ಲಕ್ಷ ಕೋಟಿ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ; ಸ್ವ ಉದ್ಯೋಗ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದಲ್ಲದೆ, 321 ಕೋಟಿ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ನಿರೀಕ್ಷೆ ವಿತ್ತ ಸಚಿವರದ್ದು.

ಬಜೆಟ್ ವಿಶ್ಲೇಷಕರ ಪ್ರಕಾರ, ಜೇಟ್ಲಿ ಅವರು ಈ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಯೋಜನೆಗಳನ್ನು ಎರಡು-ಮೂರು ವರ್ಷಗಳ ಹಿಂದೆಯೇ ಮಾಡಿದ್ದರೆ, ಈ ವೇಳೆಗೆ ಯೋಜನೆಗಳ ಫಲ ಲಭ್ಯವಾಗುತ್ತಿತ್ತು. ಈಗ ತಡವಾಗಿದೆ. ತಡವಾಗಿಯಾದರೂ ಮಾಡಿದ್ದಾರಲ್ಲ ಎಂಬುದೊಂದೇ ಸಮಾಧಾನ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More