2019ರ ಚುನಾವಣೆ ದೃಷ್ಟಿಯಿಂದ ಜೇಟ್ಲಿ ಜಾಣ್ಮೆಯಿಂದ ಕಟ್ಟಿದ ಕನಸಿನ ಪೊಟ್ಟಣಗಳು

ಸಾಮಾಜಿಕ ಒಳಗೊಳ್ಳುವಿಕೆ, ರೈತಾಪಿ ವರ್ಗ, ಬಡವರು, ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, 2014ರ ಮೊದಲ ಬಜೆಟ್ ವೇಳೆಯೇ ಇದನ್ನು ಸಾಕಾರಗೊಳಿಸಿದ್ದರೆ ಇಷ್ಟು ಹೊತ್ತಿಗೆ ಮೋದಿಯವರ ‘ನವ ಭಾರತ’ದ ಕನಸು ಈಡೇರುತ್ತಿತ್ತು, ಅಲ್ಲವೇ?

1866ರ ಬಳಿಕ ಇದೇ ಮೊದಲ ಬಾರಿಗೆ ಸಂಭವಿಸಿದ ಅಪರೂಪದ ರಕ್ತ ಚಂದ್ರಗ್ರಹಣದ ಕೆಲವೇ ತಾಸುಗಳ ಬಳಿಕ, ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಐದನೇ ಬಜೆಟ್ ಮಂಡಿಸಿದರು. ಚುನಾವಣಾ ಆಯೋಗ 2019ರ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲು ಅವಕಾಶ ನೀಡದೆಹೋದರೆ ಬಹುಶಃ ಗುರುವಾರ ಜೇಟ್ಲಿ ಮಂಡಿಸಿದ ಬಜೆಟ್ ಪ್ರಸಕ್ತ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಬಯಸಿದರೆ 2019ರ ಏಪ್ರಿಲ್‌ಗೂ ಮೊದಲೇ ಚುನಾವಣೆ ನಿಗದಿಯಾಗಬಹುದು.

ಬ್ಲೂಮೂನ್, ರಕ್ತ ಚಂದಿರ, ಸೂಪರ್ ಮೂನ್‌ನಂತೆ 2018ರ ಬಜೆಟ್ ಕೂಡ ಅಪರೂಪದ ವಿದ್ಯಮಾನ. 1997ರಲ್ಲಿ ಪಿ ಚಿದಂಬರಂ ಮಂಡಿಸಿದ ಕನಸಿನ ಬಜೆಟ್ಟನ್ನು ಇದು ನೆನಪಿಸುತ್ತಿದೆ. ಅವರ ಉತ್ತರಾಧಿಕಾರಿಯಾದ ಜೇಟ್ಲಿ ಕೂಡ ಅವರಂತೆಯೇ ಜನಸಮೂಹಕ್ಕೆ ಬಹಳ ಜತನದಿಂದ, ನಿರೀಕ್ಷೆ ಮತ್ತು ಕನಸುಗಳ ಪೊಟ್ಟಣ ಕಟ್ಟಿದ್ದಾರೆ. ಇಂತಹ ಕನಸಿನ ಪೊಟ್ಟಣಗಳನ್ನು ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಿದಾಗ, ಅಂದರೆ 2014ರಲ್ಲಿಯೇ ನೀಡಬೇಕಿತ್ತು. ಹಾಗೆ ಮಾಡಿದ್ದರೆ, ಪ್ರಧಾನಿ ಕಂಡ ನವ ಭಾರತದ ಕನಸನ್ನು 2018ರ ಬಜೆಟ್ ಹೊತ್ತಿಗೆ ಸಾಕಾರಗೊಳಿಸಲು ಸಾಧ್ಯವಾಗುತ್ತಿತ್ತು.

ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ ಎರಡು ಗಂಭೀರ ಸಾಲುಗಳು ಮತ್ತು ಎರಡು ತೆಳುಮಾತುಗಳು ಭವಿಷ್ಯದ ಕುರಿತಂತೆ ಸರ್ಕಾರದ ನಿಲುವೇನು ಎಂಬುದನ್ನು ಸೂಚಿಸುತ್ತವೆ. ಮೊದಲೆರಡು ವಾಕ್ಯಗಳು ಹಿಂದಿನಿಂದ ಕವಲೊಡೆದವು; ನಂತರದ ಎರಡು ವಾಕ್ಯಗಳು ಕಳೆದ 44 ತಿಂಗಳಲ್ಲಿ ಸಂಭವಿಸಿದವಾಗಿವೆ. ಕುತೂಹಲದ ಸಂಗತಿ ಎಂದರೆ, ನಿರೀಕ್ಷೆಯಂತೆ 2018ರ ಬಜೆಟ್ ಮೋದಿ/ಗುಜರಾತ್ ಮಾದರಿಯನ್ನು ಮೂಲೆಗುಂಪು ಮಾಡಿದೆ.

ಮೊದಲ ಸಾಲು ಹೀಗಿದೆ: "ಸಾಮಾಜಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ಮಹತ್ವಾಕಾಂಕ್ಷಿ ಉದ್ದೇಶದಿಂದ 115 ಜಿಲ್ಲೆಗಳನ್ನು ಗುರುತಿಸಲಾಗಿದೆ.” ಈ ‘ಪ್ರಯೋಗ’ದ ಮುಖ್ಯ ಉದ್ದೇಶ ಆ ಎಲ್ಲ ಜಿಲ್ಲೆಗಳನ್ನು ಅಭಿವೃದ್ಧಿಯ ಮಾದರಿಗಳನ್ನಾಗಿ ರೂಪಿಸುವುದು. ಇದರರ್ಥ, ಸರ್ಕಾರ ಈವರೆಗೆ ಅನುಸರಿಸಿದ ಮಾದರಿ ತಪ್ಪು ಎಂದೇನು? ಮೋದಿ/ಗುಜರಾತ್ ಮಾದರಿ ವಿಫಲವಾಯಿತೇ? ಇದನ್ನು ಅರ್ಥ ಮಾಡಿಕೊಳ್ಳಲು ಮೋದಿ-ಜೇಟ್ಲಿ ಬಳಗಕ್ಕೆ ನಾಲ್ಕು ವರ್ಷಗಳೇ ಹಿಡಿಯಿತೇ?

ಬಜೆಟ್‌ಗೆ ಸಂಬಂಧಿಸಿದಂತೆ ರಾಜಕೀಯ ವಿಶ್ಲೇಷಕರೊಬ್ಬರು ಮತ್ತೊಂದು ಸಮಯೋಚಿತ ಪ್ರಶ್ನೆ ಎತ್ತಿದ್ದಾರೆ. “ಜೇಟ್ಲಿ ಇಷ್ಟು ದೀರ್ಘ ಸಮಯ ತೆಗೆದುಕೊಳ್ಳಲು ಕಾರಣವೇನು?” ಎಂದು ಪ್ರಶ್ನಿಸಿರುವ ಅವರು, “115 ಜಿಲ್ಲೆಗಳಿಗೆ ಹೊಸ ಅಭಿವೃದ್ಧಿ ಮಾದರಿ ಕಂಡುಹಿಡಿಯಲು ಅವರು ತಮ್ಮ ಮೊದಲ ಬಜೆಟ್ಟಿನಲ್ಲೇ ಪ್ರಯತ್ನಿಸಬಹುದಿತ್ತು. ಹಾಗೆ ಮಾಡಿದ್ದರೆ ಇಷ್ಟು ಹೊತ್ತಿಗೆ ಅದರ ಫಲಿತಾಂಶ ಹೊರಬರುತ್ತಿತ್ತು,” ಎಂದಿದ್ದಾರೆ.

2014ರಲ್ಲಿ ಮೋದಿ ಗುಜರಾತ್ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡೇ ಅಧಿಕಾರ ಹಿಡಿದರು. ತನ್ನ ವಿರುದ್ಧದ ಟೀಕೆಗಳು ತಪ್ಪು ಎಂದು ಸಾಬೀತುಪಡಿಸಲು ಅವರು ಬಯಸಿದ್ದರು. ಆದರೆ, ಮೋದಿ ಅವರ ಅಭಿವೃದ್ಧಿ ಮಾದರಿಯನ್ನು ದೇಶದೆಲ್ಲೆಡೆ ಅನ್ವಯಿಸುವುದು ಅಸಾಧ್ಯ ಎಂಬುದು ಬಳಿಕ ಸಾಬೀತಾಯಿತು. ಗುಜರಾತ್ ಇಡೀ ಭಾರತ ಆಗಿರಲಿಲ್ಲ. ಆ ರಾಜ್ಯಕ್ಕಿಂತಲೂ ದೇಶದ ವಾಸ್ತವಗಳು ಬೇರೆಯೇ ಇದ್ದವು. ಗುಜರಾತ್ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಲು ಹಲವು ಯೋಜನೆಗಳನ್ನು ಪ್ರಧಾನಿ ಹಮ್ಮಿಕೊಂಡರಾದರೂ ದುರದೃಷ್ಟವಶಾತ್ ಅವು ಸಫಲವಾಗಲಿಲ್ಲ.

ಇದನ್ನೂ ಓದಿ : ಕೇಂದ್ರ ಬಜೆಟ್ ವಿಶ್ಲೇಷಣೆ | ಆಕರ್ಷಕ ಘೋಷಣೆಗಳ ರಾಜಕೀಯ ಆಯವ್ಯಯ

ಇನ್ನು, ಎರಡನೇ ವಾಕ್ಯ 2018ರ ಬಜೆಟ್ ಹಿನ್ನೆಲೆಯಲ್ಲಿ ಹುಟ್ಟಿದ್ದು. "ನನ್ನ ಪ್ರಸ್ತಾವನೆಗಳು ಸೂಚಿಸಿರುವಂತೆ ಗ್ರಾಮೀಣ ಜೀವನಮಟ್ಟ ಸುಧಾರಣೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಹಾಗೂ ಗ್ರಾಮೀಣ ಮೂಲಸೌಕರ್ಯ ಒದಗಿಸಲು ಮುಂದಿನ ವರ್ಷದ ಹೊತ್ತಿಗೆ ಸರ್ಕಾರ ಗಮನಹರಿಸಲಿದೆ.” ಗ್ರಾಮೀಣ ಪ್ರದೇಶ, ಬಡವರು, ರೈತರು ಮತ್ತು ಮಹಿಳೆಯರಿಗೆ ಈಗ ಅತಿಯಾದ ಒತ್ತು ನೀಡಿರುವುದು ಪ್ರಶಂಸನೀಯ ವಿಚಾರ. ಆದರೆ, ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಇವುಗಳಿಗೆ ಮಹತ್ವ ಕೊಡಬೇಕಿತ್ತು. ಸರ್ಕಾರ ತೋರುತ್ತಿರುವ ಉತ್ಸಾಹ ಚುನಾವಣೆ ಹೊತ್ತಿನ ಜಾಣ್ಮೆಯಂತೆ ಗೋಚರಿಸುತ್ತಿದೆ. 2018ರ ಬಜೆಟ್ ಗ್ರಾಮೀಣ ಮತದಾರರನ್ನು ಸೆಳೆಯುವ ಚುನಾವಣಾ ಬಜೆಟ್ ಎಂದು ಬಿಂಬಿತವಾಗುತ್ತಿದೆ. ಗುಜರಾತ್ ಬಳಿಕ ಮೋದಿಯ ಪರಮಾಪ್ತರಾದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಜೇಟ್ಲಿಯವರ ಅರ್ಥಶಾಸ್ತ್ರದಿಂದ ತೆರಬೇಕಾಗಿರುವ ರಾಜಕೀಯ ಬೆಲೆ ಬಗ್ಗೆ ತೃಪ್ತಿ ಹೊಂದಿಲ್ಲ. ರೈತರಿಗೆ ಬಜೆಟ್ಟಿನಲ್ಲಿ ಒದಗಿಸಿರುವ ಸಹಾಯ ಏನೇನೂ ಸಾಲದು ಎಂಬುದು ಅವರಿಗೆ ಗೊತ್ತಿದೆ. ಅಲ್ಲದೆ ಟೊಮೇಟೊ, ಈರುಳ್ಳಿ, ಆಲೂಗಡ್ಡೆ ರಾಜಕೀಯದ ಬಗ್ಗೆ ತಿಳಿಯದವರೇನೂ ಅಲ್ಲ ಅವರು.

ಇತ್ತೀಚಿನ ಕೆಲ ದಿನಗಳಿಂದ ಸರಿಯಾಗಿ ದೊರೆಯದ ಬೆಂಬಲ ಬೆಲೆ ಮುಂತಾದ ವಿಚಾರಗಳು ರೈತರನ್ನು ಕೆರಳಿಸಿವೆ. ನೆಲಕಚ್ಚಿದ ಬೆಲೆಗಳಿಂದಾಗಿ (ಕಿಲೋಗೆ 50 ಪೈಸೆಯಿಂದ 1 ರುಪಾಯಿ) ರೈತರು ಕಷ್ಟಪಟ್ಟು ಬೆಳೆದ ಫಸಲನ್ನು ರಸ್ತೆಯಲ್ಲಿ ಸುರಿಯುವ ಸ್ಥಿತಿ ಒದಗಿದೆ. ಇದರ ಪರಿಣಾಮ ಏನೆಂಬುದು ಗುಜರಾತ್ ಚುನಾವಣಾ ಫಲಿತಾಂಶದ ವೇಳೆ ಗೋಚರಿಸಿದ್ದು, ಅರೆಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More