ಕೇಂದ್ರ ಬಜೆಟ್ ವಿಶ್ಲೇಷಣೆ | ಅಸಮರ್ಪಕ ಅನುದಾನ ಹಂಚಿಕೆಯಿಂದ ಕಳೆಗುಂದಿದ ಬಜೆಟ್

ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿ, ಆರೋಗ್ಯ, ಇವೆಲ್ಲ ಭಾರತದಂಥ ದೇಶದಲ್ಲಿ ನಿಜವಾಗಿಯೂ ವಿಶೇಷ ಮಹತ್ವ ಪಡೆಯಬೇಕಾದ ವಲಯಗಳು. ಕೇದ್ರ ಸರಕಾರ ಕೂಡ ಈ ಸಂಗತಿಯನ್ನು ಮನಗಂಡಿದೆ. ಆದರೆ, ಬಜೆಟ್‍ನಲ್ಲಿ ಅನುದಾನ ನೀಡುವಾಗ ಎಡವಿದ್ದು, ನೀಡಬೇಕಾದಷ್ಟು ಮೊತ್ತ ನೀಡಿಲ್ಲ

ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕೃಷಿ ಕ್ಷೇತ್ರ, ಆರಕ್ಕೆ ಏರದ ಮೂರಕ್ಕೆ ಇಳಿಯದ ಕೈಗಾರಿಕಾ ಬೆಳವಣಿಗೆ ದರ, ಕುಂಠಿತ ಉಳಿತಾಯ, ತೈಲಬೆಲೆ ಏರಿಕೆ, ನಿರುದ್ಯೋಗ ಏರಿಕೆ, ಹಣದುಬ್ಬರ... ಹೀಗೆ ಹಲವು ಸಮಸ್ಯೆಗಳು ಈ ಸರಕಾರದ ಮುಂದಿವೆ. ಇವೆಲ್ಲ ಕೊರತೆಗಳ ನಡುವೆಯೂ 2018-19ರ ಕೇಂದ್ರ ಸರಕಾರದ ಬಜೆಟ್ ಸಾಕಷ್ಟು ಸುದ್ದಿ ಮಾಡುವಲ್ಲಿ ಸಫಲವಾಗಿದೆ. ಪ್ರಪಂಚದಲ್ಲೇ ಏಳನೇ ದೊಡ್ಡ ಅರ್ಥವ್ಯವಸ್ಥೆ ಅಥವಾ ಹಲವು ಟ್ರಿಲಿಯನ್ ಕೋಟಿ ಬಜೆಟನ್ನು ಸರಕಾರ ಮಂಡಿಸುತ್ತಿದೆ ಎನ್ನುವುದು ನನಗೆ ಮಹತ್ವದ ಸಂಗತಿಯಲ್ಲ. ನನ್ನ ಆಸಕ್ತಿ ಇರುವುದು, ಬಜೆಟ್‍ಲ್ಲಿ ಘೋಷಣೆ ಮಾಡಿದ ಆರೋಗ್ಯ ವಿಮೆ, ಕೃಷಿ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಯೋಜನೆಗಳು.

ಹತ್ತು ಕೋಟಿ ಕುಟುಂಬಗಳಿಗೆ ಐದು ಲಕ್ಷ ರುಪಾಯಿಗಳ ಉಚಿತ ಆರೋಗ್ಯ ವಿಮೆ ನೀಡುತ್ತೇವೆ ಎನ್ನುವ ಕೇಂದ್ರ ಸರಕಾರದ ಬಜೆಟ್ ಘೋಷಣೆ ಎಲ್ಲರನ್ನು ದಂಗುಗೊಳಿಸಿದೆ. ಒಂದು ಕುಟುಂಬದಲ್ಲಿ ಐವರು ಸದಸ್ಯರಿದ್ದಾರೆಂದು ಊಹಿಸಿದರೆ, ಐವತ್ತು ಕೋಟಿ ಜನರಿಗೆ ಉಚಿತ ಆರೋಗ್ಯ ವಿಮೆ ಲಭ್ಯವಾಗುವುದು. ಇದೊಂದು ನಿಜವಾಗಿಯೂ ಕ್ರಾಂತಿಕಾರಕ ಹೆಜ್ಜೆ. ಏಕೆಂದರೆ, ಗ್ರಾಮೀಣಾಭಿವೃದ್ಧಿಯಷ್ಟೇ ನಿರ್ಲಕ್ಷ್ಯಕ್ಕೆ ಒಳಗಾದ ಮತ್ತೊಂದು ವಲಯ ಇದ್ದರೆ ಅದು ಆರೋಗ್ಯ ವಲಯ. ಆರೊಗ್ಯ ಕ್ಷೇತ್ರವನ್ನು ಸರಕಾರ ಸತತ ನಿರ್ಲಕ್ಷಿಸಿದ ಕಾರಣ, ಬಡವರು ಕೂಡ ತಮ್ಮ ಆದಾಯದ ಅರ್ಧಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಆರೋಗ್ಯಕ್ಕಾಗಿ ಖರ್ಚು ಮಾಡಬೇಕಾಗಿದೆ. ಅನಾರೋಗ್ಯ ಹಾಗೂ ಅದಕ್ಕೆ ಮಾಡುವ ದುಬಾರಿ ಆಸ್ಪತ್ರೆ ವೆಚ್ಚದಿಂದ ಪ್ರತಿವರ್ಷ 63 ಮಿಲಿಯನ್ ಜನರು ಬಡವರಾಗುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ, ಐದು ಲಕ್ಷ ಮೊತ್ತದ ಉಚಿತ ಆರೋಗ್ಯ ವಿಮೆ ನಿಜವಾಗಿಯೂ ಬಡವರ ಪಾಲಿಗೆ ದೊಡ ವರದಾನವೇ ಸರಿ.

ಇದೇ ಸಂದರ್ಭದಲ್ಲಿ ಈ ಯೋಜನೆ ಬಡವರ ಕುರಿತ ನಿಜವಾದ ಕಾಳಜಿಯಿಂದ ಬಂದಿದೆಯೇ ಅಥವಾ 2019ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಂದಿದೆಯೇ ಎನ್ನುವ ಸಂದೇಹ ಕಾಡುತ್ತಿದೆ. ಹಲವು ಸಂಗತಿಗಳು ಈ ಸಂದೇಹಕ್ಕೆ ಎಡೆಮಾಡಿಕೊಡುತ್ತಿವೆ. ಒಂದು, 50 ಕೋಟಿ ಜನರಿಗೆ ಉಚಿತ ಆರೋಗ್ಯ ವಿಮೆಯನ್ನು ಅನುಷ್ಠಾನಗೊಳಿಸಲು ಸರಕಾರ ಈ ಬಜೆಟಲ್ಲಿ ಎತ್ತಿಟ್ಟ ಮೊತ್ತ ಕೇವಲ 2,000 ಕೋಟಿ ರುಪಾಯಿ. ಒಬ್ಬ ವ್ಯಕ್ತಿಗೆ ವಾರ್ಷಿಕ 2,000 ರುಪಾಯಿಗಳ ಆರೋಗ್ಯ ಖರ್ಚು ಭರಿಸಬೇಕೆಂದು ಊಹಿಸಿದರೂ, 50 ಕೋಟಿ ಜನರ ಆರೋಗ್ಯ ವೆಚ್ಚಕ್ಕೆ ಕನಿಷ್ಠ 1,00,000 ಕೋಟಿ ರು.ಗಳಷ್ಟು ಬಜೆಟ್ ಲೊಕೇಶನ್ ಇರಬೇಕು. 50 ಕೋಟಿ ಜನರ ಬದಲು 20 ಕೋಟಿ ಜನರು ವಿಮೆ ಕ್ಲೇಮ್ ಮಾಡುತ್ತಾರೆಂದು ಊಹಿಸಿದರೂ 40,000 ಕೋಟಿ ರು.ಗಳ ಬಜೆಟ್ ಲೊಕೇಶನ್ ಬೇಕು. ಆದುದರಿಂದ 2,000 ಕೋಟಿ ರು. ಬಜೆಟ್ ಲೊಕೇಶನ್ ಮಾಡಿ 50 ಕೋಟಿ ಜನರಿಗೆ ಉಚಿತ ಆರೋಗ್ಯ ವಿಮೆ ಕೊಡುತ್ತೇವೆ ಎನ್ನುವುದು 15 ಲಕ್ಷ ಕಪ್ಪುಹಣವನ್ನು ಬಡವರ ಖಾತೆಗೆ ವರ್ಗಾಯಿಸುವಷ್ಟೇ ಹುಸಿ ಭರವಸೆಯಾಗಬಹುದು.

ಎರಡು, ಈ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಿ ಅನುಷ್ಠಾನಗೊಳಿಸಬೇಕಾಗಿದೆ. ಕೇಂದ್ರ ಸರಕಾರ ವಿಮೆಯ ಶೇ.60ನ್ನು ವಿನಿಯೋಗಿಸಿದರೆ ರಾಜ್ಯ ಸರಕಾರ ಶೇ.40ನ್ನು ವಿನಿಯೋಗಿಸಬೇಕು. ಜಿಎಸ್‍ಟಿ ಬಂದ ನಂತರ ರಾಜ್ಯ ಸರಕಾರಗಳು ಪರೋಕ್ಷ ತೆರಿಗೆ ವಿಧಿಸುವ ತಮ್ಮ ಅಧಿಕಾರವನ್ನು ಜಿಎಸ್‍ಟಿ ಕೌನ್ಸಿಲ್‍ಗೆ ವರ್ಗಾಯಿಸಿವೆ. ಇಂತಹ ಸಂದರ್ಭದಲ್ಲಿ ಬಹುತೇಕ ರಾಜ್ಯಗಳು ಇಷ್ಟೊಂದು ದೊಡ್ಡ ಮೊತ್ತವನ್ನು ವಿನಿಯೋಜಿಸಲು ಮುಂದೆ ಬರುವುದು ಕಷ್ಟ. ಮೂರು, ಬಡಜನರು ತಮ್ಮ ಕಠಿಣ ದುಡಿಮೆಯ ಬಹುಪಾಲನ್ನು ಆರೋಗ್ಯದ ಮೇಲೆ ಖರ್ಚು ಮಾಡುವುದನ್ನು ಕಡಿಮೆ ಮಾಡಲು ಆರೋಗ್ಯ ವಿಮೆ ಜಾರಿಗೆ ತರುವುದು. ಆದರೆ, ಈಗಾಗಲೇ ಆರೋಗ್ಯ ವಿಮೆ ಜಾರಿಗೆ ತಂದ ರಾಜ್ಯಗಳಲ್ಲಿ ಜನರು ಆರೋಗ್ಯದ ಮೇಲೆ ಖರ್ಚು ಮಾಡುವುದು ಕಡಿಮೆಯಾಗಿಲ್ಲ. ಏಕೆಂದರೆ, ಆರೋಗ್ಯ ವಿಮೆ ಒಳರೋಗಿಗಳ ವೆಚ್ಚ ಮಾತ್ರ ಭರಿಸುತ್ತದೆ. ಆದರೆ, ವ್ಯಕ್ತಿಯೊಬ್ಬನ ಆರೋಗ್ಯ ವೆಚ್ಚದಲ್ಲಿ ಮೂರನೇ ಒಂದರಷ್ಟು ಒಳರೋಗಗಳ ವೆಚ್ಚವಾದರೆ, ಮೂರನೇ ಎರಡರಷ್ಟು ಹೊರರೋಗ ವೆಚ್ಚ ಇದೆ.

ಈ ಸರಕಾರದ ಹಿಂದಿನ ಬಜೆಟ್‍ಗಳಲ್ಲಿ ಗ್ರಾಮೀಣಾಭಿವೃದ್ಧಿ ವಿಶೇಷ ಮಹತ್ವ ಪಡೆದಿರಲಿಲ್ಲ. ಆದರೆ, ಈ ಬಜೆಟಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ಹಲವು ಕಾರ್ಯಕ್ರಮಗಳನ್ನು ಸರಕಾರ ಘೋಷಿಸಿದೆ. ಬೆಳೆ ವಿಮೆ, ಬಡ್ಡಿ ಸಬ್ಸಿಡಿ, ಬ್ಯಾಂಕ್ ಸಾಲಗಳ ಜೊತೆಗೆ ಹೆಚ್ಚುವರಿಯಾಗಿ ಈ ಬಾರಿ ಪಶುಸಂಗೋಪನೆ, ಮೀನುಗಾರಿಕೆ ಮೇಲೆ ಹತ್ತು ಸಾವಿರ ಕೋಟಿ ರುಪಾಯಿಗಳನ್ನು ಘೋಷಿಸಲಾಗಿದೆ. ರೈತರ ಮಾರುಕಟ್ಟೆ ಸಮಸ್ಯೆ ಪರಿಹರಿಸಲು 470 ಎಪಿಎಮ್‍ಸಿಗಳನ್ನು ತೆರೆಯುವ ಇರಾದೆಯನ್ನು ಸರಕಾರ ವ್ಯಕ್ತಪಡಿಸಿದೆ. ಇವೆಲ್ಲ ಸಾಮಾನ್ಯವಾಗಿ ಎಲ್ಲ ಬಜೆಟ್‍ಗಳಲ್ಲಿ ಕಂಡುಬರುವ ಅಂಶಗಳು. ಜೊತೆಗೆ, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಹಿಂದಿನ ಭರವಸೆ ಈ ಬಜೆಟಲ್ಲೂ ಪುನರಾವರ್ತನೆಗೊಂಡಿದೆ. ಕೃಷಿಕರು ಬೆಳೆನಷ್ಟ ಅನುಭವಿಸಿದಲ್ಲಿ ಅವರ ಒಟ್ಟು ವೆಚ್ಚದ ಒಂದೂವರೆ ಪಟ್ಟಿನಷ್ಟು ನಷ್ಟ ಭರಿಸಲಾಗುವುದು ಎನ್ನುವ ಹೊಸ ಭರವಸೆ ನೀಡಿರುವುದು ಈ ಬಜೆಟ್‍ನ ವಿಶೇಷತೆ. ಇಲ್ಲೂ ನಿಗೂಢತೆ ಅಡಗಿರುವುದು ಒಟ್ಟು ವೆಚ್ಚವನ್ನು ಲೆಕ್ಕ ಹಾಕುವ ವಿಧಾನದಲ್ಲಿ.

ಸ್ವಾಮಿನಾಥನ್ ಸಮಿತಿ ವರದಿ ಒಟ್ಟು ವೆಚ್ಚ ಲೆಕ್ಕ ಹಾಕುವಾಗ ಗೊಬ್ಬರ, ಬೀಜ ಬಿತ್ತನೆ, ಕೂಲಿ ಇತ್ಯಾದಿ ಇನ್‍ಪುಟ್ ವೆಚ್ಚಗಳ ಜೊತೆಗೆ ಲಾಭದ ಶೇ.50ನ್ನು ಸೇರಿಸಿ ಒಟ್ಟು ವೆಚ್ಚವನ್ನು ಲೆಕ್ಕ ಹಾಕಬೇಕೆಂದು ಶಿಫಾರಸು ಮಾಡಿದೆ. ಆದರೆ, ಸರಕಾರ ಕೇವಲ ಇನ್‍ಪುಟ್‍ ವೆಚ್ಚ ಮತ್ತು ಕುಟುಂದ ಸದಸ್ಯರ ಕೂಲಿಯನ್ನು ಮಾತ್ರ ಒಟ್ಟು ವೆಚ್ಚ ನಿರ್ಧರಿಸುವಾಗ ಪರಿಗಣಿಸುತ್ತಿದೆ. ಸರಕಾರದ ಈ ಲೆಕ್ಕಚಾರದ ಪ್ರಕಾರ, ಸಿಗುವ ಪರಿಹಾರದಿಂದ ಕೃಷಿಕರ ನಷ್ಟ ಭರಿಸುವುದಿಲ್ಲ. ಆದುದರಿಂದ ಸ್ವಾಮಿನಾಥನ್ ಸಮಿತಿ ವರದಿ ಪ್ರಕಾರ, ಒಟ್ಟು ವೆಚ್ಚ ಲೆಕ್ಕ ಹಾಕಬೇಕೇಂದು ರೈತ ಸಂಘಟನೆಗಳು ಸರಕಾರವನ್ನು ಒತ್ತಾಯಿಸುತ್ತಲೇ ಇವೆ. ಈ ಸರಕಾರ ಕೂಡ ಸ್ವಾಮಿನಾಥನ್ ವಿಧಾನವನ್ನು ಪರಿಗಣಿಸಿಲ್ಲ. ಆದುದರಿಂದ ಬೆಂಬಲ ಬೆಲೆಯನ್ನು ಭರಿಸುವ ಭರವಸೆಯನ್ನು ಕೃಷಿಕರು ವಿಶೇಷ ಆಸಕ್ತಿಯಿಂದ ಸ್ವಾಗತಿಸುವ ಸಾಧ್ಯತೆಗಳು ಕಡಿಮೆ. ಇನ್ನು, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇ.12ರ ಗಡಿ ದಾಟಬೇಕು. ಆದರೆ, ಈಗ ದೇಶ ಮತ್ತು ಬಹುತೇಕ ರಾಜ್ಯಗಳ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇ.3ರಿಂದ 4ರ ಆಸುಪಾಸಿನಲ್ಲಿದೆ.

ಕೃಷಿ ಮತ್ತು ಗ್ರಾಮೀಣ ಕ್ಷೇತ್ರದ ನಿಜವಾದ ಅಭಿವೃದ್ಧಿಗೆ ಇಂತಹ ಕಾಸ್ಮೆಟಿಕ್ ಬದಲಾವಣೆಗಳು ಸಾಕಾಗುವುದಿಲ್ಲ. ನೀರಾವರಿ, ಹಣಕಾಸು, ಸಾರಿಗೆ ಸಂಪರ್ಕ, ಮಾರುಕಟ್ಟೆ ಸಂಪರ್ಕ, ಕೋಲ್ಡ್ ಸ್ಟೊರೇಜ್ ಇತ್ಯಾದಿ ಮೂಲಸೌಕರ್ಯಗಳು ಮಾತ್ರ ಕೃಷಿ ಕ್ಷೇತ್ರವನ್ನು ಅಮೂಲಾಗ್ರವಾಗಿ ಬದಲಾಯಿಸಬಹುದು. ಇವೇ ಮೂಲಸೌಕರ್ಯಗಳು ಗ್ರಾಮೀಣ ಪ್ರದೇಶದಲ್ಲಿ ಬಡಕುಟುಂಬಗಳಿಗೆ ಆಸರೆಯಾಗಿವೆ. ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿಗೆ ಅನುದಾನ ಅವಶ್ಯ. ಆದರೆ, ಈ ಬಜೆಟಲ್ಲಿ ಮೂಲಸೌಕರ್ಯಗಳ ಮೇಲೆ ವಿಶೇಷ ವಿನಿಯೋಗ ತೋರಿಸಿಲ್ಲ. ನಿರುದ್ಯೋಗ ನಮ್ಮನ್ನು ಕಾಡುವ ದೊಡ್ಡ ಸಮಸ್ಯೆ. ಯುವ ಜನಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಪ್ರತಿವರ್ಷ ಕೆಲವು ಮಿಲಿಯನ್ ಯುವಜನರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಆದರೆ, ಇದೇ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.

ಇದನ್ನೂ ಓದಿ : ಕೇಂದ್ರ ಬಜೆಟ್ ವಿಶ್ಲೇಷಣೆ | ಆಕರ್ಷಕ ಘೋಷಣೆಗಳ ರಾಜಕೀಯ ಆಯವ್ಯಯ

ಸರಕಾರಿ ಮತ್ತು ಸಂಘಟಿತ ಖಾಸಗಿ ವಲಯಗಳು ನಮ್ಮ ಸಾರ್ವಜನಿಕ ಸಂಪನ್ಮೂಲದ ಬಹುಭಾಗವನ್ನು ಕಬಳಿಸುತ್ತಿವೆ. ಆದರೆ, ಇದೇ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತಿಲ್ಲ. ಉದ್ಯೋಗ ಸೃಷ್ಟಿಸುವ ಜವಾಬ್ದಾರಿಯನ್ನು ಅಸಂಘಟಿತ ವಲಯಕ್ಕೆ ವರ್ಗಾಯಿಸಲಾಗಿದೆ. ಅಲ್ಪಸ್ವಲ್ಪ ಬೆಂಬಲ ತೋರಿಸಿ ಉದ್ಯೋಗ ಸೃಷ್ಟಿಸುವ ಬೃಹತ್ ಜವಾಬ್ದಾರಿಯನ್ನು ಈ ಬಜೆಟ್ ಕೂಡ ಸಣ್ಣಪುಟ್ಟ ಉದ್ದಿಮೆಗಳ ಹೆಗಲಿಗೆ ಹೊರಿಸಿದೆ. ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿ, ಆರೋಗ್ಯ, ಇವೆಲ್ಲ ನಿಜವಾಗಿಯೂ ವಿಶೇಷ ಮಹತ್ವ ಪಡೆಯಬೇಕಾದ ವಲಯಗಳು. ಸರಕಾರ ಕೂಡ ಅವನ್ನು ಮನಗಂಡಿದೆ. ಆದರೆ ಬಜೆಟ್‍ಲ್ಲಿ ಅನುದಾನ ವಿಂಡಿಸುವಾಗ ಎಡವಿದ್ದು, ನೀಡಬೇಕಾದಷ್ಟು ಮೊತ್ತ ನೀಡಿಲ್ಲ. ಇಂಥ ಗಂಭೀರ ಸಮಸ್ಯೆಗಳನ್ನು ಅವು ಬೇಡುವ ಗಂಭೀರತೆಯಿಂದ ಪರಿಗಣಿಸದೆ, ಕೇವಲ ಚುನಾವಣೆ ದೃಷ್ಟಿಯಿಂದ ನೋಡಿದರೆ ಲಾಭಕ್ಕಿಂತ ನಷ್ಟ ಆಗುವ ಸಾಧ್ಯತೆ ಹೆಚ್ಚಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More