ವಿಶ್ವದ ಅತಿದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆ ಎಂಬ ಭ್ರಮೆ

ಬಜೆಟ್‌ನಲ್ಲಿ ಘೋಷಿಸಲಾದ ಆರೋಗ್ಯ ವಿಮಾ ಯೋಜನೆ ಹೊಸತೇನಲ್ಲ! ಪ್ರತಿ ಕುಟುಂಬಕ್ಕೆ ಲಕ್ಷ ರು. ವಿಮೆ ಕಲ್ಪಿಸಲಾಗುವುದು ಎಂದು ಕಳೆದ ವರ್ಷವೇ ಜೇಟ್ಲಿ ಹೇಳಿದ್ದರು. ಆದರೆ, ಅನುಷ್ಠಾನಗೊಂಡಿಲ್ಲವಷ್ಟೆ. ಈ ಯೋಜನೆಯ ರೂಪುರೇಷೆ ಅಂತಿಮಗೊಂಡಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ

ರಾಷ್ಟ್ರೀಯ ಆರೋಗ್ಯ ಭದ್ರತಾ ಯೋಜನೆಯಡಿ (ಎನ್ಎಚ್‌ಪಿಎಸ್‌) ೧೦ ಕೋಟಿ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಆರೋಗ್ಯ ವಿಮೆ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿದೆ. ವಾಸ್ತವ ಬೇರೆಯೇ ಇದ್ದು, ಇದೊಂದು ದೊಡ್ಡ ಯೋಜನೆ ಎಂಬುದನ್ನು ಜನರು ನಂಬುವಂತೆ ಕೇಂದ್ರ ಸರ್ಕಾರ ಮಾಡುತ್ತಿದೆ.

ಈ ಘೋಷಣೆಗೆ ಪೂರಕವಾಗಿ, ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಬಜೆಟ್‌ ಮಂಡನೆಯ ಸಂದರ್ಭದಲ್ಲಿ ಅತ್ಯುತ್ತಮ ಪದಪುಂಜಗಳಿಂದ ಯೋಜನೆಯನ್ನು ಬಣ್ಣಿಸಿದ್ದಾರೆ. “ಎನ್ಎಚ್‌ಪಿಎಸ್ ಅಡಿ ೧೦ ಕೋಟಿ (೫೦ ಲಕ್ಷ ಮಂದಿ) ಬಡ ಮತ್ತು ದುರ್ಬಲ ಕುಟುಂಬಗಳಿಗೆ ಐದು ಲಕ್ಷ ರುಪಾಯಿವರೆಗೆ ಆರೋಗ್ಯ ವಿಮೆ ಕಲ್ಪಿಸುತ್ತಿದ್ದೇವೆ. ಇದರಡಿ ಮಧ್ಯಮ ಮತ್ತು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ. ಇದು ವಿಶ್ವದ ಅತಿದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆಯಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು,” ಎಂದು ಹೇಳಿದ್ದಾರೆ.

ವರ್ಷಕ್ಕೊಮ್ಮೆ ಕುಟುಂಬವೊಂದಕ್ಕೆ ಐದು ಲಕ್ಷ ರೂಪಾಯಿ ನೀಡುವ ಯೋಜನೆ ನಿಜಕ್ಕೂ ಧಾರಾಳತೆಯಿಂದ ಕೂಡಿದ್ದು, ಸಚಿವರು ಅದನ್ನು ವ್ಯಾಖ್ಯಾನಿಸಿರುವ ರೀತಿಯೂ ಅದ್ಭುತವಾಗಿದೆ. ಮೊದಲನೆಯದಾಗಿ, ಇದು ಮಹತ್ವಾಕಾಂಕ್ಷಿ ಯೋಜನೆ ಅಲ್ಲ. ಏಕೆಂದರೆ, ಕಳೆದ ವರ್ಷವೇ ಈ ಯೋಜನೆಯನ್ನು ಘೋಷಿಸಲಾಗಿದ್ದು, ಒಂದು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ವಿಮೆ ಕಲ್ಪಿಸಲಾಗುವುದು ಎಂದು ಜೇಟ್ಲಿ ಹೇಳಿದ್ದರು. ಆದರೆ, ಇದುವರೆಗೂ ಅದು ಅನುಷ್ಠಾನವಾಗಿಲ್ಲ. ಈ ಸಂಬಂಧ ಕಳೆದ ಡಿಸೆಂಬರ್‌ನಲ್ಲಿ ನಡೆದ ಚಳಿಗಾಲದ ಅಧಿವೇಶದಲ್ಲಿ ಸದನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವರದಿ ಸಲ್ಲಿಸಿದ್ದು, ಯೋಜನೆಯ ರೂಪುರೇಷೆ ಅಂತಿಮಗೊಂಡಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಅಲ್ಲದೆ, ಹಿಂದೆ ಇದ್ದ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯ (ಆರ್‌ಎಸ್‌ಬಿವೈ) ಹೆಸರನ್ನು ಬದಲಿಸಿ, ‘ರಾಷ್ಟ್ರೀಯ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಎನ್‌ಎಚ್‌ಪಿಎಸ್‌)‘ ಎಂದು ಇಡಲಾಗಿದೆಯಷ್ಟೆ.

ಇದನ್ನೂ ಓದಿ : ಚುನಾವಣೆಯತ್ತ ಕಣ್ಣು ನೆಟ್ಟ ಕೇಂದ್ರ ಬಜೆಟ್‌ ವಾಸ್ತವದ ಸಮಸ್ಯೆಗಳಿಂದ ಬಲುದೂರ

೨೦೧೭-೧೮ರ ಆಯವ್ಯಯದಲ್ಲಿ ಆರೋಗ್ಯ ಇಲಾಖೆಗೆ ಶೇ.೨.೪ರಷ್ಟು ಅನುದಾನ ಹಂಚಿಕೆ ಮಾಡಿದ್ದು, ಪ್ರಸಕ್ತ ವರ್ಷ ಇದು ಶೇ.೨.೧ಕ್ಕೆ ಇಳಿಕೆಯಾಗಿದೆ. ಇಂಥ ಸಂದರ್ಭದಲ್ಲಿ ವಿಮಾ ಯೋಜನೆಗೆ ಹಣ ಎಲ್ಲಿಂದ ಬರುತ್ತದೆ ಎಂಬುದು ಆಶ್ಚರ್ಯ ಉಂಟುಮಾಡಬಹುದು. ಇದಕ್ಕೆ ಉತ್ತರಿಸಿರುವ ಜೇಟ್ಲಿ, “ಬಡತನ ರೇಖೆಗಿಂತ ಕೆಳಗಿರುವವರು (ಬಿಪಿಎಲ್‌) ಮತ್ತು ಗ್ರಾಮೀಣ ಕುಟುಂಬಗಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ಬಜೆಟ್‌ನ ಮೊದಲ ಭಾಗದ ಭಾಷಣದಲ್ಲಿ ವಿವಿಧ ಯೋಜನೆಗಳನ್ನು ಘೋಷಿಸಿದ್ದೇನೆ. ಅವುಗಳ ಅನುಷ್ಠಾನಕ್ಕಾಗಿ ಶೇ.೧ರಷ್ಟು ಸೆಸ್‌ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಹಾಲಿ ಇರುವ ಶೇ.೩ರಷ್ಟು ಸೆಸ್‌ ಶೇ.೪ಕ್ಕೆ ಏರಿಕೆಯಾಗಲಿದೆ. ಹೆಚ್ಚುವರಿಯಾಗಿ ೧೧ ಸಾವಿರ ಕೋಟಿ ರು. ಸರ್ಕಾರದ ಬೊಕ್ಕಸ ಸೇರಲಿದೆ,” ಎಂದಿದ್ದಾರೆ. ಸರ್ಕಾರದ ಪ್ರಕಾರ, ಎನ್‌ಎಚ್‌ಪಿಎಸ್‌ಗೆ ತೆರಿಗೆ ಪಾವತಿಸುವ ಸಾಮಾನ್ಯ ವ್ಯಕ್ತಿಯೂ ಹಣ ಒದಗಿಸುತ್ತಾನೆ. ಈ ನಡುವೆ, ವಿಶ್ವದ ಅತಿದೊಡ್ಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನು ಮೋದಿ ಸರ್ಕಾರ ಯಾವ ರೀತಿಯಲ್ಲಿ ಅನುಷ್ಠಾನಗೊಳಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮೂಲಸೌಕರ್ಯವೇ ಸಮಸ್ಯೆ

ಆರೋಗ್ಯ ಭದ್ರತಾ ವಿಮೆಯನ್ನು ೧೦ ಕೋಟಿ ಕುಟುಂಬಗಳಿಗೆ ನೀಡಲಾಗುತ್ತದೆ ಎನ್ನುವುದಾದರೆ, ೫೦ ಕೋಟಿ ಮಂದಿ ಯೋಜನೆಯ ಫಲಾನುಭವಿಗಳಾಗುತ್ತಾರೆ. ಭಾರತದ ೧೨೦ ಕೋಟಿ ಜನಸಂಖ್ಯೆಯನ್ನು ಇಟ್ಟು ನೋಡುವುದಾದರೆ, ಶೇ.೪೧ರಷ್ಟು ಮಂದಿಗೆ ಯೋಜನೆ ಲಾಭ ದೊರೆಯುತ್ತದೆ. ಈ ಮಧ್ಯೆ, ಯೋಜನೆ ಅನುಷ್ಠಾನವಾಗುವುದಕ್ಕೂ ಮುನ್ನವೇ ಅದನ್ನು ‘ಮೋದಿ ಕೇರ್‌’ ಎಂದು ಬಣ್ಣಿಸಲಾಗುತ್ತಿದೆ. ಅಮೆರಿಕದ ಒಬಾಮಾ ಕೇರ್‌ಗೆ ಪರ್ಯಾಯವಾಗಿ ಹಾಗೆ ಹೇಳಲಾಗುತ್ತಿದೆಯಾದರೂ, ೨೦೧೬ರ ಅಂತ್ಯಕ್ಕೆ ೨-೨.೪ ಕೋಟಿ ಮಂದಿಗೆ ಒಬಾಮಾ ಕೇರ್ ಲಾಭ ದೊರೆತಿದೆ. ಚೀನಾದ ನೂತನ ಗ್ರಾಮೀಣ ಸಹಕಾರ ವೈದ್ಯಕೀಯ ಯೋಜನೆಯು ಅಲ್ಲಿನ ಶೇ.೯೦ರಷ್ಟು ಜನರಿಗೆ ಸಬ್ಸಿಡಿ ಆರೋಗ್ಯ ಭದ್ರತೆ ನೀಡುತ್ತಿದೆ. ೨೦೧೫ರ ವೇಳೆಗೆ ೬೭ ಕೋಟಿ ಜನರಿಗೆ ಇದರಿಂದ ಲಾಭವಾಗಿದೆ. ಭಾರತದ ಎನ್‌ಎಚ್‌ಪಿಎಸ್‌ ಉದ್ದೇಶಿತ ಫಲಾನುಭವಿಗಳಿಗಿಂತಲೂ ಅದು ಹೆಚ್ಚಾಗಿದೆ.

ಇದೆಲ್ಲದರ ಮಧ್ಯೆಯೂ ಎನ್‌ಎಚ್‌ಪಿಎಸ್‌ ಮಹತ್ವಾಕಾಂಕ್ಷಿ ಮತ್ತು ಅತ್ಯುತ್ತಮ ಯೋಜನೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಧ್ವಾನವಾಗಿದ್ದು, ಮೂರನೇ ಎರಡು ಭಾಗದಷ್ಟು ಹಣವನ್ನು ಆರೋಗ್ಯ ಸಂಬಂಧಿತ ಖರ್ಚಿಗೆ ಸಾಮಾನ್ಯ ವ್ಯಕ್ತಿ ತನ್ನ ಜೇಬಿನಿಂದ ಖರ್ಚು ಮಾಡುತ್ತಿರುವ ಸಂದರ್ಭದಲ್ಲಿ ಎನ್‌ಎಚ್‌ಪಿಎಸ್‌ನಿಂದ ಜನರು ಸಮಾಧಾನಪಟ್ಟುಕೊಳ್ಳಬಹುದಾಗಿದೆ. ಸರ್ಕಾರ ಪ್ರಾಯೋಜಿತ ವಿಮಾ ಯೋಜನೆಯ ನಡುವೆಯೂ ಖಾಸಗಿ ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳ ದಬ್ಬಾಳಿಕೆ ಆತಂಕ ಮೂಡಿಸುವಂತಿದೆ.

ಈ ಮಧ್ಯೆ, ಡ್ರಗ್‌ ಕೊರತೆ ಮತ್ತು ರೋಗಿಯ ಒಪ್ಪಿಗೆಯ ಹೊರತಾಗಿಯೂ ಕ್ಯೂಬಾ ದೇಶದ ಸಾರ್ವಜನಿಕ ಆರೋಗ್ಯ ಯೋಜನೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ದಶಕಗಳ ಕಾಲ ವಿವಿಧ ವಿಧಗಳಲ್ಲಿ ಆರೋಗ್ಯ ಮೂಲಕಸೌಕರ್ಯ ಕಲ್ಪಿಸಲು ಕ್ಯೂಬಾ ಶ್ರಮಿಸಿದ್ದು, ಕುಟುಂಬ ವೈದ್ಯ‌, ಸಮುದಾಯ ವೈದ್ಯ-ನರ್ಸ್‌ರನ್ನು ಒಳಗೊಂಡ ತಂಡ, ಸ್ಥಳೀಯ ಕ್ಲಿನಿಕ್‌‌ಗಳು, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗಳನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿದೆ. ಅವುಗಳ ಮೇಲೆ ಕಣ್ಣಿಟ್ಟಿರುವುದರಿಂದ ಕ್ಯೂಬಾದಲ್ಲಿ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಶಿಶುಮರಣ ಸರಾಸರಿ ಇದ್ದು, ಮನುಷ್ಯನ ಜೀವಿತಾವಧಿಯು ಅಲ್ಲಿ ಹೆಚ್ಚಾಗಿದೆ.

ಮೋದಿ ಸರ್ಕಾರ ಇಂಥ ಉದಾಹರಣೆಗಳತ್ತ ಗಮನಿಸುವುದಾದರೆ, ಕ್ಯೂಬಾಕ್ಕೆ ಬದಲಾಗಿ ದೆಹಲಿಯತ್ತ ದೃಷ್ಟಿ ಹರಿಸಬಹುದು. ಸಾರ್ವಜನಿಕ ಆರೋಗ್ಯ ಬಲಪಡಿಸುವ ನಿಟ್ಟಿನಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು ೧೫೦ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್‌, ಪಾಲಿ ಕ್ಲಿನಿಕ್‌ ಮತ್ತು ಆಸ್ಪತ್ರೆಗಳನ್ನು ಆರಂಭಿಸಿದೆ. ಇದರಿಂದ ಕಳೆದ ಎರಡು ವರ್ಷಗಳಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರು ಅವುಗಳ ಲಾಭ ಪಡೆದುಕೊಂಡಿದ್ದಾರೆ ಎಂಬುದು ಗಮನಾರ್ಹ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More