ಕೇಂದ್ರ ಬಜೆಟ್ ವಿಶ್ಲೇಷಣೆ | ಆಕರ್ಷಕ ಘೋಷಣೆಗಳ ರಾಜಕೀಯ ಆಯವ್ಯಯ

ಸಾಮಾನ್ಯವಾಗಿ ಒಳ್ಳೆಯ ಆರ್ಥಿಕ ಯೋಜನೆಗಳಲ್ಲಿ ಮಾತಿಗಿಂತ ವಿವರಗಳು ಮುಖ್ಯವಾಗಬೇಕು. ಗುರಿಯನ್ನು ಮುಟ್ಟಲು ದಾರಿಯೂ ಸ್ಪಷ್ಟವಾಗಿರಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಒಳ್ಳೆಯ ದರ, ಬೆಂಬಲ ಬೆಲೆ ಸಿಗುವಂತಾಗಬೇಕು, ನಿಜ. ಆದರೆ ಅದಕ್ಕೆ ಇಟ್ಟಿರುವ ಹಣ ಕೇವಲ 2,000 ಕೋಟಿ ರುಪಾಯಿ!

ನರೇಂದ್ರ ಮೋದಿಯವರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ತೀರಾ ನಿರೀಕ್ಷಿತ ಹಾದಿ ಹಿಡಿದಿದೆ. ತೋರಿಕೆಗಾದರೂ ಬೆಳವಣಿಗೆಯ ಬಗ್ಗೆ ಒಂದಿಷ್ಟು ಮಾತಾಡುತ್ತಿದ್ದ ಸರ್ಕಾರ, ಚುನಾವಣೆಯನ್ನೇ ಸಾರಾಸಗಟಾಗಿ ಮನಸ್ಸಿನಲ್ಲಿಟ್ಟುಕೊಂಡು ಬಜೆಟ್ ರೂಪಿಸಿದೆ. ಇದು ರಾಜಕೀಯ ಬಜೆಟ್ಟೇ ಹೊರತು ಆರ್ಥಿಕ ಬಜೆಟ್ ಅಲ್ಲ. ಗುಜರಾತಿನ ಕಹಿ ಹಾಗೂ ಇತ್ತೀಚೆಗೆ ಬಿಜೆಪಿ ಬಗ್ಗೆ ಮೂಡುತ್ತಿರುವ ಹತಾಶೆಯನ್ನು ಶಮನ ಮಾಡುವ ದಿಕ್ಕಿನಲ್ಲಿ ಮಾಡಿರುವ ಒಂದು ಪ್ರಯತ್ನವಾಗಿಯಷ್ಟೇ ಕಾಣುತ್ತದೆ. ಹಾಗಾಗಿಯೇ, ಇದನ್ನು ರೈತರ ಕ್ಷೇಮಕ್ಕಾಗಿ ಎಂದು ಜೇಟ್ಲಿಯವರು ಉದ್ದಕ್ಕೂ ಮಾತನಾಡಿದರು. ಯಾಕೆಂದರೆ, ಈಗ ಗ್ರಾಮೀಣ ಭಾರತದ ನೆರವು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಬೇಕಾಗಿದೆ.

ಸಾಮಾನ್ಯವಾಗಿ ಒಳ್ಳೆಯ ಆರ್ಥಿಕ ಯೋಜನೆಗಳಲ್ಲಿ ಮಾತಿಗಿಂತ ವಿವರಗಳು ಮುಖ್ಯವಾಗಬೇಕು. ಗುರಿಯನ್ನು ಮುಟ್ಟಲು ದಾರಿ ಸ್ಪಷ್ಟವಾಗಿರಬೇಕು. ರೈತರಿಗೆ ಒಳ್ಳೆಯ ದರ, ಬೆಂಬಲ ಬೆಲೆ ಸಿಗುವಂತಾಗಬೇಕು, ನಿಜ. ಆದರೆ ಅದಕ್ಕೆ ಇಟ್ಟಿರುವ ಹಣ ಕೇವಲ 2,000 ಕೋಟಿ! ಉಳಿದದ್ದು ನೀತಿ ಆಯೋಗದ ಹೊಣೆ. ಹಾಗಾಗಿ ಇದು ಕೇವಲ ಘೋಷಣೆಯಾಗಿಯೇ ಉಳಿಯುತ್ತದೆ. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಲು ಬೇಕಾದ ನಿಷ್ಠೆ ಇಲ್ಲಿ ಕಾಣಿಸುತ್ತಿಲ್ಲ. ನಮ್ಮದು ನಿಜವಾದ ಕಾಳಜಿಯಾಗಿದ್ದರೆ, ಅದು ನಮ್ಮ ಪ್ರತಿ ಹೆಜ್ಚೆಯಲ್ಲೂ ಅದು ಕಾಣಿಸಿಕೊಳ್ಳುತ್ತದೆ. ಇಲ್ಲದೆಹೋದರೆ ಅದು ಕೇವಲ ಮಾತಷ್ಟೇ ಆಗಿಬಿಡುತ್ತದೆ.

ಹಾಗೆಯೇ ನೋಡಿ. ಮೂರು ಕೋಟಿ ಮನೆಗಳಿಗೆ ಉಚಿತ ಅಡುಗೆ ಅನಿಲ, ನಾಲ್ಕು ಕೋಟಿ ಮನೆಗಳಿಗೆ ವಿದ್ಯುತ್, ಎರಡು ಕೋಟಿ ಕಕ್ಕಸ್ಸುಗಳು ಖಂಡಿತ ತುಂಬಾ ಒಳ್ಳೆಯದು, ಆಗಲೇಬೇಕಾದ ಕೆಲಸಗಳು. ಆದರೆ, ಬಜೆಟ್ಟಿನಲ್ಲಿ ಇದಕ್ಕೆ ಸ್ಪಷ್ಟ ಅವಕಾಶ ಮಾಡಿಕೊಳ್ಳಬೇಕಲ್ಲವೇ? ಇದಕ್ಕೆ ಬೇಕಾದ 14.34 ಲಕ್ಷ ಕೋಟಿಯಲ್ಲಿ 11.8 ಲಕ್ಷ ಹಣವನ್ನು ಬಜೆಟ್ಟಿನ ಆಚೆಗೆ ಸಂಗ್ರಹಿಸಬೇಕಾಗಿದೆ. ರಾಷ್ಟ್ರೀಯ ಆರೋಗ್ಯ ರಕ್ಷಣಾ ನಿಧಿಯ ವಿಷಯದಲ್ಲೂ ಇದೇ ಸಮಸ್ಯೆ. ಹತ್ತು ಕೋಟಿ ಕುಟುಂಬಗಳಿಗೆ ತಲಾ 5 ಲಕ್ಷ ರು. ಜೀವವಿಮೆ ಒಳ್ಳೆಯ ಯೋಚನೆ. ಜಗತ್ತಿನಲ್ಲೇ ಅತಿದೊಡ್ಡ ಯೋಜನೆ! ಆದರೆ, ಜನರ ಆರೋಗ್ಯವನ್ನು ಖಾಸಗಿಯವರಿಗೆ ಬಿಟ್ಟುಕೊಡುವುದು ಎಷ್ಟರಮಟ್ಟಿಗೆ ಸರಿ? ನಿಜವಾಗಿಯೂ ಜನರಿಗೆ ಮೂಲಭೂತ ಆರೋಗ್ಯ ಸೌಕರ್ಯ ಸರ್ಕಾರಿ ಆಸ್ಪತ್ರೆಗಳಿಂದ ಸಿಗುವಂತಾಗಬೇಕು. ಅದಕ್ಕೆ ಬೇಕಾದಂತೆ ಸರ್ಕಾರಿ ಆಸ್ಪತ್ರೆಗಳನ್ನು ಬಲಗೊಳಿಸಬೇಕು. ಬದಲಾಗಿ, ಖಾಸಗಿ ಆಸ್ಪತ್ರೆಗಳಿಗೆ ತೆರುವ ವಿಮೆಯನ್ನಾಗಿ ಚಿಂತಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಒಂದು ಸ್ಪಷ್ಟ ಯೋಜನೆ ಇಲ್ಲದೆ, ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುವುದು ಒಳ್ಳೆಯ ರಾಜಕೀಯವಾಗಬಹುದೇ ಹೊರತು ಒಳ್ಳೆಯ ಆರ್ಥಿಕತೆ ಖಂಡಿತ ಅಲ್ಲ. ನೋಟು ಅಪಮಾನ್ಯ, ಜಿಎಸ್ಟಿ ಅನುಷ್ಠಾನದ ವಿಷಯದಲ್ಲೂ ಇವರು ಇದೇ ಮಾಡಿದ್ದು, ಅದೇ ಪರಂಪರೆ ಈಗಲೂ ಮುಂದುವರೆದಿದೆ.

ಇದನ್ನೂ ಓದಿ : ಚುನಾವಣೆಯತ್ತ ಕಣ್ಣು ನೆಟ್ಟ ಕೇಂದ್ರ ಬಜೆಟ್‌ ವಾಸ್ತವದ ಸಮಸ್ಯೆಗಳಿಂದ ಬಲುದೂರ

ಇನ್ನು, ಆರ್ಥಿಕ ಬೆಳವಣಿಗೆಯ ಹೊಣೆಯನ್ನು ಸರ್ಕಾರ ಸಂಪೂರ್ಣ ಮಾರುಕಟ್ಟೆಗೇ ಬಿಟ್ಟಂತಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಆರ್ಥಿಕಕತೆಯ ಬೆಳವಣಿಗೆ ಇಳಿಮುಖವಾಗಿದೆ. ಇದಕ್ಕೆ ಬೇಡಿಕೆಯ ಕೊರತೆ ಬಹುಮಟ್ಟಿಗೆ ಕಾರಣ. ಸಂಕುಚಿತ ಹಣಕಾಸು ಹಾಗೂ ವಿತ್ತೀಯ ಬೃಹತ್ ಆರ್ಥಿಕ ನೀತಿಗಳು ಇದಕ್ಕೆ ಪ್ರಮುಖ ಕಾರಣ ಎಂದು ಹಲವು ಅರ್ಥಶಾಸ್ತ್ರಜ್ಞರು ಹೇಳುತ್ತಲೇ ಬಂದಿದ್ದಾರೆ. ಕೃಷಿ ಕ್ಷೇತ್ರದ ಹಿನ್ನೆಡೆಯೂ ಇದಕ್ಕೆ ಸ್ವಲ್ಪ ಮಟ್ಟಿಗೆ ಕಾರಣ ಎನ್ನುವುದು ನಿಜ. ಆದರೆ, ಕಳೆದ ಕೆಲವು ಸಮಯದಿಂದ ಕೃಷಿಯಲ್ಲಿ ಚೇತರಿಕೆ ಕಂಡುಬರುತ್ತಿದೆ. ಸರ್ಕಾರದ ಹೂಡಿಕೆಯಿಂದ ಮಾತ್ರ ಇದನ್ನು ಸರಿಪಡಿಸಬಹುದು. ಇದಕ್ಕೆ ದಿಟ್ಟ ನಿರ್ಧಾರ ಅಗತ್ಯ. ಇದು ತುಂಬಾ ತ್ವರಿತವಾಗಿ ಆಗಬೇಕಾಗಿದೆ. ಆದರೆ, ಒಟ್ಟಾರೆ ಕ್ಯಾಪಿಟಲ್ ಅಕೌಂಟಿನಲ್ಲಿ ಈ ಬಜೆಟ್ಟಿನಲ್ಲಿ ಸೂಚಿಸಿರುವ ಹೆಚ್ಚಳ ಕಳೆದ ಬಜೆಟ್ಟಿಗಿಂತ ಕಡಿಮೆ ಎನ್ನುವುದು, ಬಹುಶಃ ನಾವು ಬೆಳವಣಿಗೆಯ ಬಗ್ಗೆ ಗಂಭೀರವಾಗಿಲ್ಲ ಅನ್ನುವುದರ ಸೂಚನೆಯೋ ಏನೋ?

ಭಾರತದಲ್ಲಿ ಅಸಮಾನತೆ ತೀವ್ರವಾಗಿ ಹೆಚ್ಚುತ್ತಿದೆ. 2017ರಲ್ಲಿ, ಮೇಲಿರುವ ಶೇ.1ರಷ್ಟು ಜನ ಶೇ.72ರಷ್ಟು ಸಂಪತ್ತನ್ನು ತಮ್ಮದು ಮಾಡಿಕೊಂಡಿದ್ದಾರೆ. ಕಾರ್ಪೋರೆಟ್‌ಗಳ ಸಂಪತ್ತು ಹೆಚ್ಚುತ್ತಲೇ ಇದೆ. ಅವರು ದೇಶದ ಬೆಳವಣಿಗೆಗೆ ಹೆಚ್ಚು ತೆರುವಂತಾಗಬೇಕು. ಹಾಗೆ ಮಾಡುವುದಕ್ಕೆ ಸರ್ಕಾ ಧೃಡಸಂಕಲ್ಪ ತೋರಬೇಕು. ಬದಲಾಗಿ, ಅವರ ಮರ್ಜಿಯಲ್ಲಿ ದೇಶದ ಆರ್ಥಿಕತೆಯನ್ನು ಬಿಡುವುದು ಸರ್ಕಾರದ ಬಲಹೀನತೆಯನ್ನು ತೋರಿಸುತ್ತದೆಯೇ ಹೊರತು ಶಕ್ತಿಯನ್ನಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More