ಗಾಂಧಿ ಹತ್ಯೆ ಸಂಚು| ಭಾಗ-೨ | ಮಹಾತ್ಮನ ನಿರಶನಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ

“ಪಾಕಿಸ್ತಾನಕ್ಕೆ ಕೊಡಬೇಕಿರುವ ೫೫ ಕೋಟಿ ರೂ. ಬಾಕಿಯನ್ನು ಕೂಡಲೇ ನೀಡಬೇಕು ಮತ್ತು ಪಾಕಿಸ್ತಾನದಿಂದ ಗುಳೇ ಬಂದ ಹಿಂದೂಗಳು, ಇಲ್ಲಿನ ಮುಸ್ಲಿಮರ ವಿರುದ್ಧ ಸೇಡಿಗಿಳಿಯಬಾರದು,” ಎಂದು ನಿರಶನ ಆರಂಭಿಸಿದ ಮಹಾತ್ಮನ ವಿರುದ್ಧ ಉಗ್ರ ಹಿಂದೂ ಸಂಘಟನೆಗಳು ರೊಚ್ಚಿಗೆದ್ದವು

ಮಹಾತ್ಮನ ಹತ್ಯೆ ಎಂಬುದು ವ್ಯವಸ್ಥಿತ ಸಂಚಿನ ಭಾಗವೇ ಎಂಬ ಅಂಶವನ್ನು ಇಟ್ಟುಕೊಂಡು ತನಿಖೆಗೆ ನೇಮಕವಾಗಿದ್ದ ನ್ಯಾಯಮೂರ್ತಿ ಕಪೂರ್ ಅವರ ಏಕವ್ಯಕ್ತಿ ಆಯೋಗಕ್ಕೆ ನೆರವಾಗಲು ಆರಂಭದಲ್ಲಿ ಭಾರತ ಸರ್ಕಾರದಿಂದ ಬ್ಯಾರಿಸ್ಟರ್ ಕೆ ಎಸ್ ಚಾವ್ಲಾ ಅವರನ್ನೂ, ಮಹಾರಾಷ್ಟ್ರ ಸರ್ಕಾರದ ಕಡೆಯಿಂದ ನ್ಯಾ.ಜಿ ಎನ್ ವೈದ್ಯ ಅವರನ್ನು ನೇಮಿಸಲಾಗಿತ್ತು. ಬಳಿಕ, ೧೯೬೮ರಲ್ಲಿ ಭಾರತ ಸರ್ಕಾರ ಚಾವ್ಲಾ ಅವರ ಬದಲಿಗೆ, ಹಿರಿಯ ನ್ಯಾಯವಾದಿ ಬಿ ಬಿ ಲಾಲ್ ಅವರನ್ನೂ, ಜಿ ಎನ್ ವೈದ್ಯ ಅವರ ಬದಲಿಗೆ ಆರ್ ಬಿ ಕೊತ್ವಾಲ್ ಅವರನ್ನೂ ನೇಮಕ ಮಾಡಲಾಯಿತು.

ಕಪೂರ್ ಅವರು ತನಿಖಾ ಆಯೋಗದ ಹೊಣೆಗಾರಿಕೆ ವಹಿಸಿಕೊಂಡ ಬಳಿಕ, ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ಜಾರಿ ಮಾಡಿ, ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿದರು. ಆಯೋಗ ತನ್ನ ಅವಧಿಯಲ್ಲಿ ಒಟ್ಟು ೧೦೧ ಮಂದಿ ಸಾಕ್ಷಿಗಳನ್ನು ವಿಚಾರಣೆ ನಡೆಸಿ, ೪೦೭ ಸಾಕ್ಷ್ಯ ದಾಖಲೆಗಳನ್ನು ಸಂಗ್ರಹಿಸಿತು. ಆ ಪೈಕಿ ೧೦೧ ಮಂದಿ ಸಾಕ್ಷಿದಾರರನ್ನು ೧೬೨ ದಿನಗಳ ಕಾಲ ನಿರಂತರ ವಿಚಾರಣೆ ನಡೆಸಲಾಯಿತು. ಕರ್ನಾಟಕದ ಧಾರವಾಡವೂ ಸೇರಿದಂತೆ ಬಾಂಬೆ, ನವದೆಹಲಿ, ನಾಗ್ಪುರ, ಪೂನಾ, ಬರೋಡಾ ಮತ್ತು ಚಂಡೀಗಢದಲ್ಲಿ ವಿಚಾರಣೆಗಳನ್ನು ನಡೆಸಲಾಯಿತು.

ಸಾಕ್ಷ್ಯ ಸಂಗ್ರಹ, ಸಾಕ್ಷಿದಾರರ ವಿಚಾರಣೆ ಮುಂತಾದ ತನಿಖಾ ಪ್ರಕ್ರಿಯೆಗಳ ಬಳಿಕ ಆಯೋಗ, ಆರು ಸಂಪುಟಗಳಲ್ಲಿ ತನ್ನ ವರದಿಯನ್ನು ಸಿದ್ಧಪಡಿಸಿತು. ಆ ಪೈಕಿ ಐದು ಸಂಪುಟಗಳಲ್ಲಿ ಆಯೋಗ ದಾಖಲಿಸಿಕೊಂಡಿರುವ ಸಾಕ್ಷ್ಯಗಳು ಮತ್ತು ಸಾಕ್ಷಿದಾರರ ಹೇಳಿಕೆಗಳನ್ನು ಒಳಗೊಂಡಿವೆ. ಜೊತೆಗೆ, ಗಾಂಧಿ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಆತ್ಮ ಚರಣ್ ಅವರ ಕಲಾಪಗಳ ದಾಖಲೆಗಳನ್ನು ಕೂಡ ಆಯೋಗ ತನ್ನ ಸಾಕ್ಷ್ಯಗಳನ್ನಾಗಿ ಪರಿಗಣಿಸಿ, ವರದಿಯಲ್ಲಿ ಅಳವಡಿಸಿದೆ. ಅಲ್ಲದೆ, ಗಾಂಧೀ ಹತ್ಯೆಯ ಪೂರ್ವಭಾವಿ ಬಾಂಬ್ ಸ್ಫೋಟ ಪ್ರಕರಣ ಮತ್ತು ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ದೆಹಲಿ ಪೊಲೀಸರ ಕೇಸ್ ಡೈರಿ ಹಾಗೂ ಬಾಂಬೆ ಪೊಲೀಸರ ಕ್ರೈಮ್ ರಿಪೋರ್ಟುಗಳನ್ನೂ ಆಯೋಗ ತನ್ನ ತನಿಖೆಯ ವ್ಯಾಪ್ತಿಗೆ ಪರಿಗಣಿಸಿತ್ತು. ಜೊತೆಗೆ, ಭಾರತ ಸರ್ಕಾರ, ಗುಪ್ತಚರ ಇಲಾಖೆಯ ನಿರ್ದೇಶಕರು ಸಲ್ಲಿಸಿದ ಕೆಲವು ಕಡತಗಳನ್ನೂ ವಿಚಾರಣೆಗೆ ಒಳಪಡಿಸಿತ್ತು.

ಆದರೆ, ವಿಚಾರಣೆಯ ಸಂದರ್ಭದಲ್ಲಿ ಕೆಲವು ಸಾಕ್ಷಿಗಳು ಅಂದಿನ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರ ಬಗ್ಗೆ ಪ್ರಸ್ತಾಪಿಸಿದ್ದರೂ, ಅವರು ವಿಚಾರಣೆಯ ಸಂದರ್ಭದಲ್ಲಿ ಭಾರತದಲ್ಲಿ ಲಭ್ಯವಿರದ ಹಿನ್ನೆಲೆಯಲ್ಲಿ ಅವರ ವಿಚಾರಣೆಯನ್ನು ನಡೆಸಲಾಗಿಲ್ಲ ಎಂದಿರುವ ಆಯೋಗ, ಅವರ ಕುರಿತ ಸಾಕ್ಷಿಗಳ ಹೇಳಿಕೆಗಳ ಬಗ್ಗೆ ತಾನು ಯಾವುದೇ ತೀರ್ಮಾನವನ್ನಾಗಲೀ, ಅಭಿಪ್ರಾಯವನ್ನಾಗಲೀ ವ್ಯಕ್ತಪಡಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಆಯೋಗದ ರಚನೆಯ ಹಿನ್ನೆಲೆ, ಆಯೋಗದ ವಿಚಾರಣೆಯ ವ್ಯಾಪ್ತಿ ಮತ್ತು ಷರತ್ತುಗಳು ಹಾಗೂ ವಿಚಾರಣೆಗೆ ಅನುಸರಿಸಿದ ವಿಧಾನ ಮತ್ತು ಹರವು, ವರದಿಯ ಸ್ವರೂಪ ಮತ್ತು ವಿಭಾಗೀಕರಣ ಸೇರಿದಂತೆ ಪ್ರಾಥಮಿಕ ವಿವರಗಳನ್ನು ಮೊದಲ ಅಧ್ಯಾಯ ಒಳಗೊಂಡಿದೆ.

ಎರಡನೇ ಅಧ್ಯಾಯದಲ್ಲಿ; ಗಾಂಧೀ ಹತ್ಯೆಗೆ ಹಿನ್ನೆಲೆಯಾಗಿ ದೇಶದಲ್ಲಿ ಇದ್ದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ. ಆ ಪರಿಸ್ಥಿತಿಗಳಿಗೆ ಗಾಂಧಿಯ ಪ್ರತಿಕ್ರಿಯೆ, ದೇಶ ವಿಭಜನೆ ಮತ್ತು ಆ ಬಳಿಕದ ಅದರ ಪರಿಣಾಮಗಳನ್ನು ವಿವರಿಸಲಾಗಿದೆ. ಜೊತೆಗೆ, ಗಾಂಧಿ ಹತ್ಯೆಗೆ ಮುಂಚಿನ ವಿಫಲ ಯತ್ನಗಳು, ಸಂಚುಗಾರರ ಚಲನವಲನ, ವಿಫಲ ಸಂಚಿನ ಕುರಿತ ತನಿಖೆ ಮುಂತಾದ ವಿವರಗಳನ್ನೂ, ಆಯೋಗ ತನಗೆ ಲಭ್ಯ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿರೂಪಿಸಿದೆ.

ಅವುಗಳಲ್ಲಿ, ಕ್ರಮವಾಗಿ, ಭಾರತ- ಪಾಕಿಸ್ತಾನ ನಡುವೆ ಹಿಂದೂ ಮತ್ತು ಮುಸ್ಲಿಮರ ಪರಸ್ಪರ ವಿನಿಮಯದ ಕುರಿತ ಜಿನ್ನಾ ಸಲಹೆ, ಆ ಕುರಿತ ಮೌಂಟ್ ಬ್ಯಾಟನ್ ಯೋಜನೆ, ನೇರ ಹೋರಾಟದ ದಿನ(ಡೈರೆಕ್ಟ್ ಆಕ್ಷನ್ ಡೇ) ಮತ್ತು ಅದರ ಪರಿಣಾಮಗಳು, ಪಾಕಿಸ್ತಾನಕ್ಕೆ ನೀಡಬೇಕಿದ್ದ ಬಾಕಿ ಹಣ ಕೊಡಲು ಭಾರತದ ನಿರಾಕರಣೆ, ಮೌಲಾನಾ ಅವರ ದೂರು, ಬಾಕಿ ಹಣ ಕೊಡಿಸಲು ಮಹಾತ್ಮ ಗಾಂಧಿ ಮೇಲೆ ಹೆಚ್ಚಿದ ಒತ್ತಡ, ಗಾಂಧಿ ಉಪವಾಸ ಸತ್ಯಾಗ್ರಹ, ಮಹಾತ್ಮನ ಹತ್ಯೆಗೆ ಪೂನಾದಲ್ಲಿ ಸಂಚು, ದೆಹಲಿಯ ಬಾಂಬ್ ಸ್ಫೋಟ, ಸ್ಫೋಟ ಪ್ರಕರಣದ ಆರೋಪಿಗಳ ಪರಾರಿ, ಆ ಘಟನೆ ಕುರಿತು ಬಾಂಬೆ ಮತ್ತು ದೆಹಲಿಯಲ್ಲಿ ಪ್ರತ್ಯೇಕ ತನಿಖೆ, ಗಾಂಧಿಯ ಹತ್ಯೆ ಹಾಗೂ ಹತ್ಯೆ ಘಟನೆಯ ಕುರಿತ ಬಾಂಬೆ ಪೊಲೀಸರ ತನಿಖೆ ವಿವರಗಳನ್ನು ಕಾಲಾನುಕ್ರಮವಾಗಿ ನೀಡಲಾಗಿದೆ.

ಮೊದಲ ಬಾರಿಗೆ, ೧೯೪೫ರ ಡಿಸೆಂಬರ್ ೧೦ರಂದು ಜಿನ್ನಾ ಅವರು ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಮತ್ತು ಭಾರತದ ನಡುವೆ ಪರಸ್ಪರ ಜನರ ವಿನಿಮಯದ ಸಾಧ್ಯತೆ ಬಗ್ಗೆ ಪ್ರಸ್ತಾಪಿಸಿದರು. ಅದು ಸಂಪೂರ್ಣವಾಗಿ ಆಯಾ ಜನರ ನಿರ್ಧಾರದ ಮೇಲೆಯೇ ನಡೆಯಬೇಕು ಎಂಬ ಅವರ ಪ್ರಸ್ತಾಪವನ್ನು ಪಂಜಾಬ್, ವಾಯುವ್ಯ ಗಡಿ ಪ್ರಾಂತ್ಯ(ಎನ್ ಡಬ್ಲ್ಯೂಎಫ್ಪಿ), ಸಿಂಧ್ ಮತ್ತು ಬಂಗಾಳದ ಹಿಂದೂ, ಸಿಖ್ ಮತ್ತು ಮುಸ್ಲಿಮೇತರ ಇತರ ಸಮುದಾಯಗಳು ತಳ್ಳಿಹಾಕಿದವು. ಅದಾದ ಬಳಿಕ ೧೯೪೬ರ ನವೆಂಬರ್ ೨೪ರಂದು ಕರಾಚಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿನ್ನಾ ಅವರು, “ಜನರ ಪರಸ್ಪರ ವಿನಿಮಯದ ವಿಷಯವನ್ನು ಕೂಡಲೇ ಇತ್ಯರ್ಥಪಡಿಸಬೇಕು,” ಎಂದು ಆಗ್ರಹಿಸಿದರು. ಆದರೆ, ಭಾರತದಾದ್ಯಂತ ಮುಸ್ಲಿಮೇತರರು ಜನ ವಿನಿಮಯಕ್ಕೆ ವಿರುದ್ಧವಿದ್ದರು. ಮುಸ್ಲಿಂ ಲೀಗ್ ಮಾತ್ರ ಆ ಪ್ರಸ್ತಾಪದ ಬೆಂಬಲಕ್ಕಿದ್ದರೂ, ಪಂಜಾಬಿನಲ್ಲಿ ಮಮ್ದೋತ್ ನವಾಬನನ್ನು ಹೊರತುಪಡಿಸಿ ಉಳಿದ ಯಾವುದೇ ಮುಸ್ಲಿಂ ಲೀಗ್ ನಾಯಕರೂ ಅದನ್ನು ಬೆಂಬಲಿಸಲಿಲ್ಲ.

ಈ ನಡುವೆ, ಹಿಂದೂ- ಮುಸ್ಲಿಮರ ನಡುವಿನ ಈ ಭಾರತೀಯ ಬಿಕ್ಕಟ್ಟಿಗೆ ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ತಮ್ಮದೇ ಆದ ಪರಿಹಾರ ಸೂತ್ರ ಮಂಡಿಸಿದರು. ೧೯೪೫ರ ಡಿಸೆಂಬರ್ ೧೦ರಂದು ಅವರು, ಮೂರು ಅಂಶಗಳ ಒಂದು ಪರಿಹಾರ ಸೂತ್ರ ಮಂಡಿಸಿದರು. ಅದು ಭಾರತದ ವಿಭಜನೆ. ಪಂಜಾಬ್, ಸಿಂಧ್, ಬಲೂಚಿಸ್ತಾನ್ ಮತ್ತು ಬಂಗಾಳದ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಪಾಕಿಸ್ತಾನದ ಭಾಗ. ಎನ್ ಡಬ್ಲ್ಯೂಎಫ್ ಪಿ ಪ್ರಾಂತ್ಯದಲ್ಲಿ ಜನಮತಗಣನೆಯ ಮೂಲಕ ಜನರೇ ತಾವು ಯಾವ ಕಡೆ ಸೇರುತ್ತೇವೆ ಎಂಬುದನ್ನು ನಿರ್ಧರಿಸುವುದು ಹಾಗೂ ದೇಶದ ಉಳಿದ ಭಾಗ ಭಾರತದಲ್ಲಿ ಉಳಿಯುವುದು ಎಂಬುದು ಬ್ಯಾಟನ್ ಸೂತ್ರ. ಆ ಪೈಕಿ, ಎನ್ ಡಬ್ಲ್ಯೂಎಫ್ ಪಿ ಕೂಡ ಅಂತಿಮವಾಗಿ ಪಾಕಿಸ್ತಾನದತ್ತಲೇ ವಾಲಿತು.

ಪಾಕಿಸ್ತಾನಕ್ಕಾಗಿನ ತಮ್ಮ ಹೋರಾಟದ ಭಾಗವಾಗಿ ಮುಸ್ಲಿಂ ಲೀಗ್‌ ೧೯೪೭ರ ಮಾರ್ಚ್‌ನಲ್ಲಿ ನೇರ ಸಂಘರ್ಷದ ದಿನಕ್ಕೆ ಕರೆ ನೀಡಿತು. ಆ ಮೂಲಕ ದೇಶ ವಿಭಜನೆಯ ನೇರ ಹೋರಾಟಕ್ಕೆ ಇಳಿಯಿತು. ಪರಿಣಾಮವಾಗಿ, ಪಂಜಾಬಿನ ಪಶ್ಚಿಮ ಜಿಲ್ಲೆಗಳಲ್ಲಿ ಹಿಂದೂ ಮತ್ತು ಸಿಖ್ಖರು ವಿವರಿಸಲಾಗದ ಪ್ರಮಾಣದ ಅಟ್ಟಹಾಸಕ್ಕೆ ಗುರಿಯಾದರು. ಆ ಭೀಕರ ದೌರ್ಜನ್ಯಗಳು ಎಷ್ಟರಮಟ್ಟಿಗೆ ಇದ್ದುವೆಂದರೆ; ಪಂಜಾಬಿನ ಉತ್ತರ ಜಿಲ್ಲೆಗಳಲ್ಲಿ ಅದನ್ನು ‘ರೇಪ್ ಆಫ್ ರಾವಲ್ಪಿಂಡಿ’ ಎಂದೇ ಕರೆಯಲಾಯಿತು. ಈ ಅಟ್ಟಹಾಸಗಳು ಮತ್ತು ಮುಖ್ಯವಾಗಿ ದೇಶ ವಿಭಜನೆಯ ಯೋಜನೆ ಘೋಷಣೆಯ ಪರಿಣಾಮವಾಗಿ ಪಶ್ಚಿಮ ಪಂಜಾಬ್ ಭಾಗದ ಹಿಂದೂ ಮತ್ತು ಸಿಖ್ಖರು ತಮ್ಮ ಮನೆಮಾರು ತೊರೆದು ಪೂರ್ವ ಪಂಜಾಬ್, ದೆಹಲಿ, ಉತ್ತರಪ್ರದೇಶದ ಕಡೆ ವಲಸೆ ಹೊರಟರು. ಪರಿಣಾಮವಾಗಿ ಆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ತೀವ್ರ ಬಿಕ್ಕಟ್ಟು ತಲೆದೋರಿತು. ಅದಕ್ಕೂ ಮುನ್ನ, ೧೯೪೬ರಲ್ಲಿ ಪಶ್ಚಿಮಬಂಗಾಳದ ನವಾಖಲಿ ಮತ್ತು ಟಿಪ್ಪೆಹಾರ್‌ ಜಿಲ್ಲೆಗಳಲ್ಲೂ ಇದೇ ಮಾದರಿಯ ಹಿಂಸಾಚಾರ, ಅಟ್ಟಹಾಸಗಳು ನಡೆದಿದ್ದವು. ಬಹಳ ಸಭ್ಯವಾಗಿ ಹಿಂದೂ- ಮುಸ್ಲಿಂ ಗಲಭೆ ಎಂದು ಹೇಳಲಾದ ಆ ಅಟ್ಟಹಾಸದ ಭಾಗವಾಗಿ ಬಲವಂತದ ಮತಾಂತರ, ಕೊಲೆ, ಸುಲಿಗೆ, ಅತ್ಯಾಚಾರ, ಅಪಹರಣಗಳು ಅವ್ಯಾಹತವಾಗಿ ನಡೆದವು. ಆ ಎಲ್ಲದಕ್ಕೆ ಈಡಾದ ಬಲಿಪಶುಗಳು ಸಂಪೂರ್ಣ ಹಿಂದೂಗಳೇ ಆಗಿದ್ದರು.

ಆ ವಿಷಯ ತಿಳಿಯುತ್ತಲೇ ಮಹಾತ್ಮ ಗಾಂಧಿ ತಮ್ಮ ಆಶ್ರಮವಾಸಿಗಳೊಂದಿಗೆ ನವಾಖಲಿಗೆ ತೆರಳಿ, ೧೯೪೬ರ ನವೆಂಬರ್ ೭ರಂದು ಅಲ್ಲಿನ ಚೌಮುಹನಿಯಲ್ಲಿ ಶಾಂತಿ ಯಾತ್ರೆ ಕೈಗೊಂಡರು. ಅಂದಿನಿಂದ ೧೯೪೭ರ ಮಾರ್ಚ್ ೩ರವರೆಗೆ ಗಾಂಧಿ ಅಲ್ಲಿಯೇ ಇದ್ದು, ಹಿಂದೂ- ಮುಸ್ಲಿಮರ ನಡುವೆ ಭಾವೈಕ್ಯತೆಗೆ ಶ್ರಮಿಸಿದರು. ಆ ಬಳಿಕ ಅವರು ಬಿಹಾರ, ನಂತರ ಕಲ್ಕತ್ತಾ, ಕಾಶ್ಮೀರ, ಮತ್ತೆ ಪಾಟ್ನಾ, ಕಲ್ಕತ್ತಾ ಪ್ರವಾಸದ ಬಳಿಕ ೧೯೪೭ರ ಸೆಪ್ಟೆಂಬರ್ ೯ರಂದು ದೆಹಲಿಗೆ ವಾಪಸ್ಸಾದರು. ಅಲ್ಲಿ, ಭಂಗಿ ಕಾಲೊನಿಯ ಬದಲಾಗಿ ಈ ಬಾರಿ ಬಿರ್ಲಾ ಹೌಸ್ ನಲ್ಲಿ ತಂಗಿದ್ದರು. ಆದರೆ, ದೆಹಲಿಗೆ ಮರಳುವ ಹೊತ್ತಿಗೆ ಅವರಿಗೆ ಮತ್ತೊಂದು ಆಘಾತ ಕಾದಿತ್ತು. ದೆಹಲಿಯಲ್ಲೂ ಹಿಂದೂ-ಮುಸ್ಲಿಂ ಗಲಭೆಗಳು ತೀವ್ರವಾಗಿದ್ದವು (ತೆಂಡುಲ್ಕರ್ ಅವರ ‘ಮಹಾತ್ಮಾ ಗಾಂಧಿ’ ಕೃತಿಯ ಸಂಪುಟ ೮ರ ಪುಟ ೧೩೪).

ವಿಭಜನೆಯ ದುರಂತಗಾಥೆ ಮತ್ತು ಅದು ಸೃಷ್ಟಿಸಿದ ಸಾವು-ನೋವುಗಳ ಬಳಿಕ; ಭಾರತ, ಪಾಕಿಸ್ತಾನಕ್ಕೆ ಕೊಡಬೇಕಾಗಿದ್ದ ೫೫ ಕೋಟಿ ರೂ. ನಗದಿನ ವಿಷಯ ಮುನ್ನೆಲೆಗೆ ಬಂದಿತು. ೧೯೪೭ರ ಡಿಸೆಂಬರಿನ ಹೊತ್ತಿಗೆ ಭಾರತ, ಆ ಮೊತ್ತವನ್ನು ನೀಡುವುದನ್ನು ಮುಂದೂಡಲು ನಿರ್ಧರಿಸಿತು. ಉಳಿದೆಲ್ಲಾ ವಿಷಯಗಳು ಇತ್ಯರ್ಥವಾಗುವವರೆಗೆ ಈ ಹಣ ನೀಡುವುದು ಬೇಡ ಎಂಬುದು ಭಾರತದ ನಿಲುವಾಗಿತ್ತು.

ಈ ನಡುವೆ, ೧೯೪೮ರ ಜನವರಿ ೪ರಂದು ಮಹಾತ್ಮ ಗಾಂಧಿಯನ್ನು ಭೇಟಿ ಮಾಡಿದ ದೆಹಲಿಯ ಮೌಲಾನರು ತಮ್ಮ ಸುರಕ್ಷತೆ ಅಪಾಯದಲ್ಲಿದೆ ಎಂದು ದೂರಿದರು. ಆ ಮೂಲಕ ಮಹಾತ್ಮರ ಮೇಲೆ ನೈತಿಕ ಒತ್ತಡ ಹೇರಿದರು. ಮೌಲಾನರ ದೂರು ಕೇಳಿ ಗಾಂಧಿ ಬಹಳಷ್ಟು ನೊಂದುಕೊಂಡರು.

ಜೊತೆಗೆ, ಕೆಲವು ಸಾಕ್ಷ್ಯಗಳ ಪ್ರಕಾರ, ಲಾರ್ಡ್ ಮೌಂಟ್ ಬ್ಯಾಟನ್ ಕೂಡ, ಪಾಕಿಸ್ತಾನಕ್ಕೆ ಕೊಡಬೇಕಿದ್ದ ೫೫ ಕೋಟಿ ರೂ. ವಿಷಯದಲ್ಲಿ ಗಾಂಧಿಯವರ ಮೇಲೆ ನೈತಿಕ ಒತ್ತಡ ಹೇರಿದ್ದರು. ಒಂದು ವೇಳೆ ಆ ಹಣವನ್ನು ನೀಡದೇ ಇದ್ದರೆ, ಭಾರತ ಹೊಂದಿರುವ ಗೌರವಕ್ಕೆ ಚ್ಯುತಿ ಬರಲಿದೆ ಎಂಬುದು ಅವರ ವಾದವಾಗಿತ್ತು. ಪ್ಯಾರೆಲಾಲ್ ಅವರು ತಮ್ಮ ಕೃತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ದೆಹಲಿಯಿಂದ ಮುಸ್ಲಿಮರು ಪಾಕಿಸ್ತಾನದತ್ತ ಗುಳೇ ಹೊರಡುವುದನ್ನು ತಡೆಯುವಂತೆಯೂ ಬ್ಯಾಟನ್ ಗಾಂಧಿಯವರ ಮೇಲೆ ಒತ್ತಡ ಹೇರಿದ್ದರು ಎಂದು ವಿಷಯದ ಮತ್ತೊಂದು ಆಯಾಮದ ಮೇಲೂ ಬೆಳಕು ಚೆಲ್ಲಿದ್ದಾರೆ. ಆದರೆ, ಈ ಕುರಿತು ಆಯೋಗ ಬ್ಯಾಟನ್ ಅವರ ವಿಚಾರಣೆ ನಡೆಸಿಲ್ಲವಾದ್ದರಿಂದ, ನಿರ್ದಿಷ್ಟವಾಗಿ ಆ ಬಗ್ಗೆ ಯಾವುದೇ ಅಭಿಪ್ರಾಯ ಮಂಡಿಸಿಲ್ಲ.

ಅಂತಿಮವಾಗಿ ೧೯೪೮ರ ಜನವರಿ ೧೩ರಂದು ಬೆಳಗ್ಗೆ ೧೧.೫೫ಕ್ಕೆ ಮಹಾತ್ಮ ಗಾಂಧಿಯವರು ನಿರಶನ ಆರಂಭಿಸಿದರು. ತಮ್ಮ ಸತ್ಯಾಗ್ರಹಕ್ಕೆ ಅವರು, ಎರಡು ಉದ್ದೇಶಗಳನ್ನು ಇಟ್ಟುಕೊಂಡಿದ್ದು, ಆ ಪೈಕಿ, ಪಾಕಿಸ್ತಾನಕ್ಕೆ ನೀಡಬೇಕಿರುವ ಹಣ ಪಾವತಿ ಮುಂದೂಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂಬುದು ಮೊದಲನೆಯದಾದರೆ, ಎರಡನೆಯದು, ದೆಹಲಿಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದದ ವಾತಾವರಣ ಮರುಸ್ಥಾಪನೆಯಾಗಬೇಕು ಎಂಬುದಾಗಿತ್ತು. ಉಪವಾಸ ಸತ್ಯಾಗ್ರಹದ ಮೂರನೇ ದಿನ; ಅಂದರೆ, ಜನವರಿ ೧೫ರಂದು, ಭಾರತ ಸರ್ಕಾರ, ಪಾಕಿಸ್ತಾನಕ್ಕೆ ನೀಡಬೇಕಿರುವ ೫೫ ಕೋಟಿ ರೂ.ಗಳನ್ನು ಕೂಡಲೇ ನೀಡಲು ತೀರ್ಮಾನಿಸಿರುವುದಾಗಿ ಘೋಷಿಸಿತು. ಆದರೆ, ಸರ್ಕಾರದ ಈ ನಿರ್ಧಾರ ಹಿಂದೂ ಮಹಾಸಭಾ ಸೇರಿದಂತೆ ಉಗ್ರ ಹಿಂದೂ ಸಂಘಟನೆಗಳನ್ನು ರೊಚ್ಚಿಗೇಳಿಸಿತು. ಪ್ರತಿ ದಿನದ ತಮ್ಮ ಪ್ರಾರ್ಥನೆಯ ಬಳಿಕದ ಸಾರ್ವಜನಿಕ ಸಭೆಯಲ್ಲಿ ಮಹಾತ್ಮ, ಮುಸ್ಲಿಮರನ್ನು ಅವರ ನೆಲೆಗಳಿಂದ ಕದಲಿಸಬಾರದು. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪಾಕಿಸ್ತಾನದ ಭಾಗದಿಂದ ಗುಳೇ ಬಂದಿರುವ ಹಿಂದೂಗಳು ಸೇಡಿಗಾಗಿ ಹಿಂಸೆಯಲ್ಲಿ ತೊಡಗಬಾರದು, ಆ ಮೂಲಕ ಮುಸ್ಲಿಮರು ಮನೆಗಳನ್ನು ತೊರೆದು ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಬಾರದು ಎಂದು ಹೇಳುತ್ತಿದ್ದರು.

ಒಂದೆಡೆ ಮಹಾತ್ಮ ನಿರಶನ ಕೈಗೊಂಡಿದ್ದರೆ, ಮತ್ತೊಂದೆಡೆ ಅವರ ನಿರಶನದ ವಿರುದ್ಧ ಬಿರ್ಲಾ ಹೌಸ್ ಎದುರು ಪ್ರತಿಭಟನೆಗಳು ನಡೆಯುತ್ತಿದ್ದವು. ಪಾಕಿಸ್ತಾನಕ್ಕೆ ಕೂಡಲೇ ಬಾಕಿ ಹಣ ನೀಡಬೇಕು ಮತ್ತು ಮುಸ್ಲಿಮರು ತೊರೆದುಹೋದ (ಪುರಾನಾ ಖಿಲ್ಲಾ, ಹನುಮಾನ್ ಸಮಾಧಿ ಪ್ರದೇಶದಲ್ಲಿ ಆಶ್ರಯಪಡೆದಿದ್ದರು) ದೆಹಲಿಯ ಮನೆಗಳಲ್ಲಿ ಪಾಕಿಸ್ತಾನದ ಕಡೆಯಿಂದ ವಲಸೆಬಂದ ಹಿಂದೂಗಳು ತಂಗಬಾರದು ಎಂಬ ಗಾಂಧಿ ನಿಲುವಿನ ವಿರುದ್ಧ ಆ ಪ್ರತಿಭಟನೆಗಳು ನಡೆಯುತ್ತಿದ್ದವು. ಇಂತಹ ಪ್ರತಿಭಟನೆಗಳಲ್ಲಿ ಕೆಲವು ವಲಸಿಗರ ಆಕ್ರೋಶವಂತೂ ಎಷ್ಟು ತೀವ್ರವಾಗಿತ್ತು ಎಂದರೆ; “ಆತ ಸಾಯ್ತಾನಂತ? ಸಾಯೋದಿದ್ರೆ ಸಾಯಲಿ ಬಿಡಿ…” (ಮರ್ತಾ ಹೈ ತೊ, ಮರ್ನೆ ದೋ) ಎಂಬಂತಹ ಘೋಷಣೆಗಳು ಕೂಡ ಗಾಂಧಿಯ ವಿರುದ್ಧ ಮೊಳಗುತ್ತಿದ್ದವು!

ಇದನ್ನೂ ಓದಿ : ಗಾಂಧಿ ಹತ್ಯೆಯ ಸಂಚು | ನ್ಯಾ.ಕಪೂರ್ ತನಿಖಾ ಆಯೋಗದ ಸತ್ಯಗಳ ಅನಾವರಣ

ಆದಾಗ್ಯೂ, ಗಾಂಧೀಜಿಯ ನಿರಶನ, ಬಹುತೇಕ ಹಿಂದೂಗಳ ಮನಸ್ಸುಗಳನ್ನು ಮೃದುಗೊಳಿಸಿತು. ಶಾಂತಿ ಮತ್ತು ಸೌಹಾರ್ದ ಕಾಪಾಡಲು ನಾಲ್ಕು ಅಂಶಗಳ ಪ್ರತಿಜ್ಞೆ ಕೈಗೊಳ್ಳಲು ಹಿಂದೂ, ಮುಸ್ಲಿಂ ಸಮುದಾಯದ ನಾಯಕರು ಪರಸ್ಪರ ಒಪ್ಪಿ ಒಪ್ಪಂದವೊಂದಕ್ಕೆ ಸಹಿಮಾಡಿದರು. ಆದರೆ,…

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More