ಎಡಗೈ- ೩೩.೪೭%, ಬಲಗೈ - ೩೨.೦೧%. ಬಯಲಾಯಿತೇ ಸದಾಶಿವ ಆಯೋಗದ ವರದಿ?!

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಕುರಿತು ನ್ಯಾ. ಸದಾಶಿವ ಆಯೋಗ ಸಿದ್ಧಪಡಿಸಿರುವ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಅಧಿಕೃತವೇ, ಅನಧಿಕೃತವೇ ಎಂದು ತಿಳಿದು ಬಂದಿಲ್ಲ. ವರದಿಯಲ್ಲಿನ ಮುಖ್ಯ ಅಂಶಗಳು ಇಲ್ಲಿವೆ

ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿ ವಿಚಾರವಾಗಿ ರಚಿಸಲಾಗಿದ್ದ ನ್ಯಾ.ಎ ಜೆ ಸದಾಶಿವ ಆಯೋಗ ಸಿದ್ಧಪಡಿಸಿದೆ ಎನ್ನಲಾದ ವರದಿಯು ಬಹಿರಂಗೊಂಡಿದ್ದು ಎಡಗೈ ಹಾಗೂ ಬಲಗೈ ಸಮುದಾಯಗಳ ನಡುವೆ ಜನಸಂಖ್ಯೆಯ ವಿಚಾರದಲ್ಲಿನ ಗೊಂದಲಕ್ಕೆ ತೆರೆ ಬೀಳಬಹುದೇ ಎನ್ನುವ ಜಿಜ್ಞಾಸೆಗೆ ಕಾರಣವಾಗಿದೆ. ಆಯೋಗದ ವರದಿ ಎನ್ನಲಾಗಿರುವ ದಾಖಲೆಯಲ್ಲಿ ರಾಜ್ಯದ ಪರಿಶಿಷ್ಟ ಜಾತಿಯ (ಎಸ್‌ಸಿ) ಒಟ್ಟು ಜನಸಂಖ್ಯೆ ೯೬,೬೬,೧೦೪ ಎನ್ನಲಾಗಿದ್ದು ಇದರಲ್ಲಿ ಎಡಗೈ (ಮಾದಿಗ) ಸಮುದಾಯವು ೩೨,೩೫,೫೭೦ ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಬಾಹುಳ್ಯ ಹೊಂದಿದ್ದು, ಶೇ.೩೩.47% ನೊಂದಿಗೆ ಮೊದಲ ಸ್ಥಾನದಲ್ಲಿದೆ. ಬಲಗೈ (ಹೊಲೆಯ) ಸಮುದಾಯವು ೩೦,೯೩,೬೯೩ ಜನಸಂಖ್ಯೆಯೊಂದಿಗೆ ಶೇ.೩೨.0೧ ಎರಡನೆಯ ಸ್ಥಾನದಲ್ಲಿದೆ ಎನ್ನಲಾಗಿದೆ.

ಅದೇ ರೀತಿ, ಸ್ಪೃಶ್ಯ ಸಮುದಾಯಗಳಾದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳು ೨೨,೮೪,೬೪೨ ಜನಸಂಖ್ಯೆಯೊಂದಿಗೆ ಎಸ್‌ಸಿ ಸಮುದಾಯದಲ್ಲಿ ಶೇ.೨೪ರಷ್ಟಿವೆ ಎಂದು ಮೇಲಿನ ವರದಿಯಲ್ಲಿ ಹೇಳಲಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸ್ಥಿತಿಗತಿಗಳನ್ನು ಪರಿಶೀಲಿಸಿರುವ ಆಯೋಗವು ಒಳಮೀಸಲಾತಿಯ ಅಗತ್ಯತೆಯನ್ನು ಎತ್ತಿ ಹಿಡಿದಿದೆ. ಅದೇವೇಳೆ, ಭಾರತೀಯ ಸಂವಿಧಾನದ ೩೪೧(೨) ಪರಿಚ್ಛೇದಕ್ಕೆ ಒಳಪಟ್ಟಂತೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಸೂಚಿಸಿದೆ.

ಪರಿಶಿಷ್ಟ ಜಾತಿಯೊಳಗಿನ ಸಮುದಾಯಗಳನ್ನು ೪ ಭಾಗಗಳಾಗಿ ವಿಭಾಗೀಕರಣ ಮಾಡಲಾಗಿದೆ. ಇದಕ್ಕಾಗಿ ಪರಿಶಿಷ್ಟ ಜಾತಿಯೊಳಗಿನ ಸಮುದಾಯಗಳು ಸಾಮಾಜಿಕವಾಗಿ ಹಾಗೂ ತಮ್ಮೊಳಗೆಯೇ ಎದುರಿಸುವ ಅಸ್ಪೃಶ್ಯತೆ, ಧಾರ್ಮಿಕ ಆಚಾರ - ವಿಚಾರಗಳಲ್ಲಿ ಎದುರಿಸುವ ತಾರತಮ್ಯ, ಇತರೆ ಸಮುದಾಯಗಳೊಂದಿಗೆ ವ್ಯವಹರಿಸುವಾಗ ಆಹಾರ, ವಸತಿ, ಪೂಜೆ-ಪುನಸ್ಕಾರದಂತಹ ವಿಷಯಗಳಲ್ಲಿ ಇರುವ ಒಳಗೊಳ್ಳುವಿಕೆ ಮುಂತಾದ ಸಂಗತಿಗಳನ್ನು ಪರಿಗಣಿಸಿ ಈ ವಿಭಾಗೀಕರಣ ಮಾಡಲಾಗಿದೆ.

ಇದರ ಅನುಸಾರ ಜಾತಿ ವ್ಯವಸ್ಥೆಯಲ್ಲಿ ಕಟ್ಟಕಡೆಯಲ್ಲಿರುವ ಸಮುದಾಯವಾದ ‘ಎಡಗೈ’ ಸಮುದಾಯವನ್ನು ಸಮೂಹ ೧ (ಗ್ರೂಪ್‌ ೧) ಎಂದು ಗುರುತಿಸಲಾಗಿದ್ದು, ಇದರಡಿ ದಕ್ಕಲಿಗರು, ಮಾದಿಗರು, ಭಂಬಿಗಳು, ಸಮಗಾರರು, ಮಾದಾರರು, ಆದಿ ಜಾಂಭವ ಸಮೂಹಗಳಿವೆ. ಸಮೂಹ ೨ (ಗ್ರೂಪ್ ೨) ಎನ್ನುವ ವರ್ಗೀಕರಣದಡಿ ಛಲವಾದಿ, ಹೊಲೆಯ, ಆದಿ ಕರ್ನಾಟಕ ಸಮುದಾಯಗಳನ್ನು ಗುರುತಿಸಲಾಗಿದೆ. ಸಮೂಹ ೩ರಲ್ಲಿ (ಗ್ರೂಪ್ ೩) ಇತರೆ ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸಲಾಗಿದ್ದು, ಸಮೂಹ ೪ (ಗ್ರೂಪ್ ೪)ರಲ್ಲಿ ಸ್ಪೃರ್ಶ್ಯ ಜಾತಿಗಳಾದ ಲಂಬಾಣಿ, ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳಿವೆ.

ಇದನ್ನೂ ಓದಿ : ನ್ಯಾ. ಸದಾಶಿವ ಆಯೋಗದ ವರದಿಯಲ್ಲಿ ಯಾವ ಯಾವ ಮಾಹಿತಿ ಇದೆ?

ಪರಿಶಿಷ್ಟ ಜಾತಿಯಡಿ ಬರುವ ೧೦೧ ಜಾತಿಗಳಲ್ಲಿ ೭ ಜಾತಿಗಳು ೫ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಅವುಗಳೆಂದರೆ, ಮಾದಿಗ - ೧೭,೭೭,೫೦೪; ಹೊಲೆಯ - ೧೩,೬೨,೬೩೦; ಬಂಜಾರ - ೧೧,೦೨,೭೫೧; ಆದಿ ಕರ್ನಾಟಕ - ೧೦,೭೮,೯೯೪; ಭೋವಿ - ೯,೪೮,೭೬೦; ಭಾಂಬಿ - ೭,೧೨,೭೦೯; ಆದಿ ದ್ರಾವಿಡ - ೫,೭೩,೨೪೬. ಈ ಏಳು ಜಾತಿಗಳಡಿ ಗುರುತಿಸಲಾಗಿರುವ ಸಮುದಾಯಗಳ ಒಟ್ಟು ಜನಸಂಖ್ಯೆ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ೭೮%.

ಒಳಮೀಸಲಾತಿ ವಿಚಾರವಾಗಿ ಚರ್ಚೆ ನಡೆಯುವಾಗ ಸಾಮಾನ್ಯವಾಗಿ ಮತ್ತೆ ಮತ್ತೆ ಕೇಳಿಬರುತ್ತಿದ್ದ ಅಂಶವೆಂದರೆ. ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಎಂದು ಹೆಸರಿಸಿಕೊಳ್ಳುವಲ್ಲಿ ಇರುವ ಗೊಂದಲ. ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಆದಿ ಕರ್ನಾಟಕ ಎಂದು ಗುರುತಿಸಿಕೊಳ್ಳುವ ಜಾತಿಯೇ ಮತ್ತೆ ಕೆಲವು ಭಾಗಗಳಲ್ಲಿ ಆದಿ ದ್ರಾವಿಡ ಎಂದು ಗುರುತಿಸಿಕೊಳ್ಳುತ್ತದೆ. ಈ ವಿಚಾರದಲ್ಲಿನ ಗೊಂದಲವು ಆಯೋಗದ ವರದಿಯಲ್ಲಿ ಜಾತಿವಾರು ಅಂಕಿಸಂಖ್ಯೆಯಲ್ಲಿ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎನ್ನುವ ಅನುಮಾನವನ್ನು ದೊಡ್ಡದನಿಯಲ್ಲಿ ವ್ಯಕ್ತಪಡಿಸಲಾಗಿತ್ತು. ಆದರೆ, ಈ ಬಗ್ಗೆಯೂ ಬಹಿರಂಗಗೊಂಡಿದೆ ಎನ್ನುವ ವರದಿಯಲ್ಲಿ ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ವರದಿಯಲ್ಲಿ ತಿಳಿಸಿರುವಂತೆ, ‘ಕರ್ನಾಟಕದಲ್ಲಿ ಎರಡು ಜಾತಿಗಳನ್ನು ಗುರುತಿಸುವಲ್ಲಿ ವಿಶೇಷ ಎನ್ನಬಹುದಾದ ಸನ್ನಿವೇಶವಿದೆ. ಹೊಲೆಯ ಸಮುದಾಯದವರನ್ನು ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮತ್ತು ರಾಮನಗರಗಳಲ್ಲಿ ಆದಿ ಕರ್ನಾಟಕ ಎಂದು ಗುರುತಿಸಲಾಗುತ್ತದೆ. ಆದರೆ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬಳ್ಳಾರಿಯ ಕೆಲವು ಬಾಗಗಳಲ್ಲಿ ಆದಿ ದ್ರಾವಿಡ ಎಂದು ಗುರುತಿಸಲ್ಪಡುತ್ತದೆ. ಅದೇ ರೀತಿ, ಮಾದಿಗ ಸಮುದಾಯವು ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಆದಿ ಕರ್ನಾಟಕ ಎಂದು ಗುರುತಿಸಲ್ಪಟ್ಟರೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬಳ್ಳಾರಿಯ ಕೆಲ ಭಾಗಗಳಲ್ಲಿ ಆದಿ ಕರ್ನಾಟಕ ಎಂದು ಗುರುತಿಸಲ್ಪಡುತ್ತದೆ. ಕೋಲಾರದ ಐದು ತಾಲ್ಲೂಕುಗಳಲ್ಲಿ ಮಾದಿಗ ಸಮುದಾಯವರು ತಮ್ಮನ್ನು ಆದಿ ದ್ರಾವಿಡ ಎಂದು ಕರೆದುಕೊಂಡರೆ ಹೊಲೆಯ ಸಮುದಾಯವರು ಈ ತಾಲ್ಲೂಕುಗಳಲ್ಲಿ ತಮ್ಮನ್ನು ಆದಿ ಕರ್ನಾಟಕ ಎಂದು ಕರೆದುಕೊಳ್ಳುತ್ತಾರೆ. ಇದೇ ಸಮುದಾಯಗಳು ಕೋಲಾರದ ಇತರೆ ತಾಲ್ಲೂಕುಗಳಲ್ಲಿ ವ್ಯತಿರಿಕ್ತವಾಗಿ ಗುರುತಿಸಿಕೊಳ್ಳುತ್ತಾರೆ. ಈ ಸೂಕ್ಷ್ಮ ವ್ಯತ್ಯಾಸವನ್ನು ಜಾತಿಗಳ ಬಾಹುಳ್ಯವನ್ನು ಗುರುತಿಸುವಾಗ ಪರಿಗಣಿಸಲಾಗಿದೆ’ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಒಳಮೀಸಲಾತಿಗೆ ಆಗ್ರಹಿಸುತ್ತಿರುವ ಎಡಗೈ ಸಮುದಾಯವು ತಾವು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದಿರುವ ಬಗ್ಗೆ ಹಾಗೂ ತಾವು ಪರಿಶಿಷ್ಟ ಜಾತಿಯಲ್ಲಿನ ದೊಡ್ಡ ಸಮುದಾಯವಾಗಿದ್ದರೂ ತಮಗೆ ಶಿಕ್ಷಣ, ಉದ್ಯೋಗಗಳ ಮೀಸಲಾತಿಯಲ್ಲಿ ಕಡಿಮೆ ಅವಕಾಶಗಳು ದೊರೆತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಈ ಸಮುದಾಯ ಪಡೆದಿರುವ ಅವಕಾಶವನ್ನು ಗುರುತಿಸಿದ್ದು ಅದು ಸಮುದಾಯದ ಅಸಮಾಧಾನವನ್ನು ಪುಷ್ಟೀಕರಿಸುವಂತಿದೆ.

ಶಿಕ್ಷಣದ ವಿಚಾರವನ್ನು ಗಮನಿಸುವುದಾದರೆ ಸ್ನಾತಕೋತ್ತರ ಶಿಕ್ಷಣದಲ್ಲಿನ ಒಟ್ಟು ಎಸ್‌ಸಿ ಮೀಸಲಾತಿ ಪ್ರಮಾಣದಲ್ಲಿ ಎಡಗೈ ಸಮುದಾಯದ ಶೇ.೨೬.೨೫ ಮಂದಿ ಇದ್ದರೆ, ಬಲಗೈ ಸಮುದಾಯದ ೪೭.೧೮% ಇದ್ದಾರೆ. ರಾಜ್ಯದ ಒಟ್ಟು ಎಸ್‌ಸಿ ಜನಸಂಖ್ಯೆಯಲ್ಲಿ ಶೇ.೪.೫೧ ಮಾತ್ರ ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗಗಳು ಹಾಗೂ ಬ್ಯಾಂಕಿಂಗ್ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಇದರಲ್ಲಿ ಎಡಗೈ ಸಮುದಾಯದ ಪಾಲು ಶೇ.೩೧.೭೫ ಇದ್ದರೆ, ಬಲಗೈ ಸಮುದಾಯದ ಪಾಲು ಶೇ.೩೮.೧೭. ಇದಕ್ಕೆ ವ್ಯತಿರಿಕ್ತವಾಗಿ ವಿವಿಧ ಪಟ್ಟಣ, ನಗರಗಳ ಸ್ಥಳೀಯ ಸಂಸ್ಥೆಗಳಲ್ಲಿನ ಕೆಳಹಂತದ ಕೆಲಸಗಳೆಂದು ಪರಿಗಣಿಸಲಾಗುವ ಸಫಾಯಿ ಕರ್ಮಚಾರಿ ಉದ್ಯೋಗದಲ್ಲಿ ಎಡಗೈ ಸಮುದಾಯದವರ ಪ್ರಮಾಣ ಶೇ.೪೮.೮೦ ಇದ್ದರೆ, ಬಲಗೈ ಸಮುದಾಯದ ಪ್ರಮಾಣ ಶೇ.೧೭.೭೯ ಇದೆ ಎನ್ನಲಾಗಿದೆ.

ಇಂತಹ ಹಲವಾರು ಅಂಶಗಳನ್ನು ವರದಿಯಲ್ಲಿ ವಿಷದವಾಗಿ ಚರ್ಚಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More