ಕಾಶ್ಮೀರ ಕುರಿತ ಪಟೇಲರ ನಿಲುವು ಮತ್ತು ಪ್ರಧಾನಿ ಮೋದಿ ಹೇಳಿದ ಹಸಿ ಸುಳ್ಳು

ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರು ನೀಡಿದ ಹೇಳಿಕೆ ದೇಶಾದ್ಯಂತ, ಕಾಶ್ಮೀರ ವಿಭಜನೆಯ ವಿಷಯದಲ್ಲಿ ನೆಹರೂ ಮತ್ತು ಪಟೇಲರ ನಿಲುವುಗಳ ಕುರಿತ ಚರ್ಚೆಗೆ ಚಾಲನೆ ನೀಡಿದೆ. ಹಾಗಾದರೆ, ನಿಜಕ್ಕೂ ಮೋದಿಯವರು ಗ್ರಹಿಸಿದಂತೆ ಪಟೇಲರು ಕಾಶ್ಮೀರದ ವಿಭಜನೆಯ ವಿರುದ್ಧವಿದ್ದರೇ?

ಸಂಸತ್ತಿನಲ್ಲಿ ಬುಧವಾರ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಇತಿಹಾಸದ ಕುರಿತೂ ಪ್ರಸ್ತಾಪಿಸಿದ್ದಾರೆ. “ಒಂದು ವೇಳೆ, ಜವಾಹರ ಲಾಲ್‌ ನೆಹರೂ ಅವರ ಬದಲಾಗಿ, ಸರ್ದಾರ್ ವಲ್ಲಭಾಬಾಯಿ ಪಟೇಲ್ ಅವರೇ ದೇಶದ ಮೊದಲ ಪ್ರಧಾನಿಯಾಗಿದ್ದರೆ, ಕಾಶ್ಮೀರ ಇಡಿಯಾಗಿ ಭಾರತದಲ್ಲೇ ಉಳಿಯುತ್ತಿತ್ತು,” ಎಂದೂ ಅವರು ಹೇಳಿದ್ದಾರೆ. ಅವರ ಈ ಮಾತನ್ನು ಕಲಾಪದಲ್ಲಿ ಹಾಜರಿದ್ದ ಅವರ ಸಂಪುಟ ಸಹೋದ್ಯೋಗಿಗಳು, ಸಂಸದರು ಭಾರಿ ಹರ್ಷೋದ್ಗಾರದೊಂದಿಗೆ ಮೇಜು ಕುಟ್ಟಿ ಸ್ವಾಗತಿಸಿದರು. ಆದರೆ, ಇತಿಹಾಸ ಕೇಸರಿಪಡೆಯ ಕಟ್ಟಾಳುವಲ್ಲ!

ಹಾಗಾಗಿ, ಮೋದಿಯವರ ಆ ಮಾತಿಗೆ ವಿರುದ್ಧವಾದ ವಾಸ್ತವ ಇದೀಗ ಇತಿಹಾಸದ ಪುಟಗಳಿಂದ ಎದ್ದುಬಂದು ರಾಚತೊಡಗಿದೆ. ಹುದುಗಲಾರದ ಸತ್ಯಗಳು ಮೋದಿಯವರ ಮಾತನ್ನು ಅಣಕಿಸತೊಡಗಿವೆ. ದೇಶದ ಇತಿಹಾಸಕಾರರು, ರಾಜಕೀಯ ಚಿಂತಕರು, ಮಾನವಶಾಸ್ತ್ರಜ್ಞರು, ಪತ್ರಕರ್ತರು ಸೇರಿದಂತೆ ಬದುಕಿನ ಬೇರೆ-ಬೇರೆ ವಲಯಗಳ ಹಿರಿಯ ತಲೆಗಳು ಕಾಶ್ಮೀರದ ವಿಷಯದಲ್ಲಿ ತಾವು ಕಂಡ ಮತ್ತು ಕೇಳಿದ ಸಂಗತಿಗಳನ್ನು ದೇಶದ ಮುಂದಿಡತೊಡಗಿವೆ. ಹಸಿ ಸುಳ್ಳುಗಳಿಂದ ಅಥವಾ ಅವಜ್ಞೆಯಿಂದ ಇತಿಹಾಸವನ್ನು, ಇತಿಹಾಸದ ವಾಸ್ತವಿಕತೆಯನ್ನು ಮುಚ್ಚಿಹಾಕಲಾಗದು ಎಂಬುದನ್ನು ಮತ್ತೆ-ಮತ್ತೆ ಸಾಬೀತುಮಾಡತೊಡಗಿವೆ.

ಕಾಂಗ್ರೆಸ್ ಪಕ್ಷದ ವಿರುದ್ಧದ ಇಂತಹ ಟೀಕೆಗಳಿಂದ ಸಿಗಬಹುದಾದ ತಕ್ಷಣದ ರಾಜಕೀಯ ಲಾಭ ಮತ್ತು ನೆಹರೂ ವಿರುದ್ಧದ ದೀರ್ಘಾವಧಿಯ ರಾಜಕೀಯ ಕಾಯತಂತ್ರದ ಮುಂದುವರಿಕೆಯ ಉದ್ದೇಶದ ಇಂತಹ ಮಾತುಗಳು ಕೇವಲ ಒಬ್ಬ ವ್ಯಕ್ತಿ, ಒಂದು ಪಕ್ಷಕ್ಕೆ ಮಸಿ ಬಳಿಯುವ ಪ್ರಯತ್ನ ಮಾತ್ರವಲ್ಲ; ದೇಶದ ಇತಿಹಾಸಕ್ಕೆ ಎಸಗುವ ಅಪಚಾರ ಎಂಬುದು ಮೋದಿಯವರ ಮಾತು ಅವಾಸ್ತವಿಕ ಎನ್ನುತ್ತಿರುವ ಎಲ್ಲ ತಜ್ಞರ ಅಭಿಪ್ರಾಯ. ದೇಶದ ಮೊದಲ ಉಪಪ್ರಧಾನಿ ವಲ್ಲಭಾಬಾಯಿ ಪಟೇಲರ ವ್ಯಕ್ತಿತ್ವವನ್ನು ಹೊಗಳುವುದಕ್ಕಿಂತ, ಮೊದಲ ಪ್ರಧಾನಿ ನೆಹರೂ ಅವರನ್ನು ತೆಗಳುವ, ಹೀಗಳೆಯುವುದೇ ಪ್ರಧಾನಿಯವರ ಈ ಹೇಳಿಕೆಯ ಉದ್ದೇಶವಾದಂತಿದೆ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ.

ಮೋದಿಯವರು ಇಂದು ಸಂಸತ್ತಿನಲ್ಲಿ ನಿಂತುಕೊಂಡು, ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ನೋಡುತ್ತಿದ್ದರೂ, ವಾಸ್ತವವಾಗಿ ಚರಿತ್ರೆ ಅದಕ್ಕೆ ವಿರುದ್ಧವಾದ ಸತ್ಯವನ್ನು ಮುಂದಿಡುತ್ತಿದೆ.

ಆ ಪೈಕಿ, ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು, “ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳುವ ವಿಷಯದಲ್ಲಿ ನೆಹರೂ ಅವರಿಗೆ ಬಹಳ ಆಸಕ್ತಿ ಇದ್ದರೂ, ಪಟೇಲ್ ಅವರು ಅದಕ್ಕೆ ವಿರುದ್ಧ ನಿಲುವು ಹೊಂದಿದ್ದರು. ಮುಸ್ಲಿಂ ಬಾಹುಳ್ಯದ ಕಾಶ್ಮೀರ ಇಡಿಯಾಗಿ ಪಾಕಿಸ್ತಾನಕ್ಕೆ ಸೇರಲಿ ಎಂದು ಪಟೇಲ್ ವಾದಿಸಿದ್ದರು. ಕಾಶ್ಮೀರದ ಮಹಾರಾಜ, ತನ್ನ ರಾಜ್ಯವನ್ನು ಭಾರತಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದಾಗಲೂ ಪಟೇಲ್ ಅವರು “ನಾವು ಕಾಶ್ಮೀರದ ವಿಷಯದಲ್ಲಿ ತಲೆಹಾಕಬಾರದು. ನಮಗೆ ಈಗಾಗಲೇ ಸಾಕಷ್ಟು ಸಂಕಷ್ಟಗಳಿವೆ…” ಎಂದು ಸ್ಪಷ್ಟವಾಗಿ ಹೇಳಿದ್ದರು ಎಂಬ ವಿಷಯವನ್ನು ೧೯೭೧ರ ಫೆ.೨೧ರಂದು ನಡೆದ ಸಂದರ್ಶನದಲ್ಲಿ ಕಾಶ್ಮೀರದ ಅಂದಿನ ನಾಯಕ ಶೇಕ್‌ ಅಬ್ದುಲ್ಲಾ ತಿಳಿಸಿದ್ದರು ಎಂದು ನಯ್ಯರ್ ಹೇಳಿದ್ದಾರೆ. ಕುಲದೀಪ್ ನಯ್ಯರ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಲ್ಲದೆ, ಹಿರಿಯ ರಾಜಕೀಯ ವಿಶ್ಲೇಷಕ ಎ ಜಿ ನೂರಾನಿಯವರ ೨೦೦೦ದ ಜೂನ್‌ನಲ್ಲಿ ‘ಫ್ರಂಟ್‌ಲೈನ್‌’ ನಿಯತಕಾಲಿಕಕ್ಕೆ ಬರೆದಿದ್ದ ಲೇಖನವೊಂದರಲ್ಲಿ, ೧೯೭೨ರ ನ.೨೭ರಂದು ಅಂದಿನ ಪಾಕಿಸ್ತಾನದ ಅಧ್ಯಕ್ಷ ಜುಲ್ಫೀಕರ್ ಅಲಿ ಬುಟ್ಟೋ ಅವರು ಲಂಡಿಕೊಟಾಲ್‌ನಲ್ಲಿನ ಸಮಾವೇಶವೊಂದರಲ್ಲಿ ಮಾತನಾಡುತ್ತ, “ಕಾಶ್ಮೀರದ ಬದಲಿಗೆ ತಮಗೆ ಜುನಾಗಢ್ ಮತ್ತು ಹೈದರಾಬಾದ್ ನೀಡುವಂತೆ ಸರ್ದಾರ್ ಪಟೇಲರು ಪ್ರಸ್ತಾಪವಿಟ್ಟಿದ್ದರು,” ಎಂದಿದ್ದರು. ಅಲ್ಲದೆ, ಪಾಕಿಸ್ತಾನದ ಮಾಜಿ ಪ್ರಧಾನಿ ಚೌಧುರಿ ಮುಹಮ್ಮದ್ ಅಲಿ ಅವರ ‘ದ ಎಮರ್ಜೆನ್ಸ್ ಆಫ್ ಪಾಕಿಸ್ತಾನ್’ ಎಂಬ ಕೃತಿಯಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಪಾಕಿಸ್ತಾನದ ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್ ಅವರೊಂದಿಗೆ ಪಟೇಲರು, “ಜುನಾಗಢವನ್ನು ನೀವು ಕಾಶ್ಮೀರದೊಂದಿಗೆ ಏಕೆ ಹೋಲಿಕೆ ಮಾಡುತ್ತಿದ್ದೀರಿ? ಅದರ ಬದಲಿಗೆ, ಹೈದರಾಬಾದ್ ಮತ್ತು ಕಾಶ್ಮೀರದ ವಿಷಯದಲ್ಲಿ ಚರ್ಚಿಸೋಣ. ಆಗ ನಾವು ಒಂದು ತೀರ್ಮಾನಕ್ಕೆ ಬರಬಹುದು,” ಎಂದಿದ್ದರು ಎಂದು ಚೌಧುರಿ ಪ್ರಸ್ತಾಪಿಸಿದ್ದಾರೆ. ಜೊತೆಗೆ, ಜುನಾಗಢದಲ್ಲಿ ಅದೇ ವರ್ಷದ ನ.೧೧ರಂದು ನಡೆದ ಸಭೆಯೊಂದರಲ್ಲೂ ಪಟೇಲರು ಅದೇ ಅಭಿಪ್ರಾಯವನ್ನು ಪುನರುಚ್ಛರಿಸಿದ್ದರು ಎಂಬುದನ್ನು ಚೌಧುರಿ ಉಲ್ಲೇಖಿಸಿರುವುದಾಗಿ ನೂರಾನಿಯವರು ಹೇಳಿದ್ದರು. ನೂರಾನಿಯವರ ಅಭಿಪ್ರಾಯ ಕೂಡ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಜ್ಯಶಾಸ್ತ್ರ ತಜ್ಞ ನವನೀತ ಚಂದ್ರ ಬೆಹರಾ ಅವರ ‘ಡಿಮಿಸ್ಟಿಫೈಯಿಂಗ್ ಕಾಶ್ಮೀರ್’ ಎಂಬ ಕೃತಿಯಲ್ಲಿಯೂ ಪಟೇಲ್ ಮತ್ತು ಲಿಯಾಖತ್ ಅಲಿಖಾನ್ ನಡುವಿನ ಆ ಮಾತುಕತೆಯನ್ನು ಉಲ್ಲೇಖಿಸಲಾಗಿದೆ.

ಪಟೇಲರ ಜೀವನಚರಿತ್ರೆಕಾರರಲ್ಲಿ ಪ್ರಮುಖರಾದ ರಾಜ್‌ಮೋಹನ್ ಗಾಂಧಿ ಕೂಡ ಮೋದಿಯವರ ಗ್ರಹಿಕೆಗೆ ವಿರುದ್ಧವಾದ ಧೋರಣೆಯನ್ನು ಸರ್ದಾರ್ ಪಟೇಲ್ ಅವರು ಹೊಂದಿದ್ದರು ಎಂಬುದನ್ನು ೨೦೧೩ರಲ್ಲೇ ಹೇಳಿದ್ದರು. ಆಗ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಯ ಹೊಸ್ತಿಲಲ್ಲಿ ನಿಂತಿದ್ದ ಮೋದಿಯವರು, “ಒಂದು ವೇಳೆ, ನೆಹರು ಬದಲಾಗಿ ಪಟೇಲರೇ ದೇಶದ ಮೊದಲ ಪ್ರಧಾನಿಯಾಗಿದ್ದರೆ ದೇಶದ ಭವಿಷ್ಯ ಬೇರೆಯದೇ ಆಗಿರುತ್ತಿತ್ತು,” ಎಂದಿದ್ದರು. ಆ ಹೇಳಿಕೆಯ ಹಿನ್ನೆಲೆಯಲ್ಲಿ ಕರಣ್ ಥಾಪರ್ ಅವರ ‘ಡೆವಿಲ್ಸ್‌ ಅಟ್ವೋಕೇಟ್’ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಾಂಧಿಯವರ ಮೊಮ್ಮಗ ರಾಜ್‌ಮೋಹನ್ ಗಾಂಧಿಯವರು, “ದೇಶದ ‘ಉಕ್ಕಿನ ಮನುಷ್ಯ’ ಪಟೇಲರು ಸ್ವತಃ ನೆಹರೂ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ ಗಾಂಧಿಯವರ ನಿರ್ಧಾರವನ್ನು ಒಪ್ಪಿದ್ದರು ಮತ್ತು ತಾವೊಬ್ಬ ಕಾಂಗ್ರೆಸ್ಸಿಗ ಎಂಬ ಬಗ್ಗೆ ಅವರಿಗೆ ಹೆಮ್ಮೆ ಇತ್ತು,” ಎಂದಿದ್ದರು.

ಇದನ್ನೂ ಓದಿ : ಹಿಂದಣವನ್ನು ಕೆದಕಿದ ಪ್ರಧಾನಿ ಮೋದಿ ಮುನ್ನೋಟ ಕಟ್ಟಿಕೊಡುವಲ್ಲಿ ಸೋತರು

ಮೋದಿಯವರು ೨೦೧೩ರಲ್ಲಿ ಹೇಳಿದ್ದನ್ನೇ ಇದೀಗ ಪುನರುಚ್ಛರಿಸಿದ್ದಾರೆ. ಒಂದೇ ವ್ಯತ್ಯಾಸವೆಂದರೆ, ಆಗ ಇಡೀ ಭಾರತದ ಭವಿಷ್ಯವೇ ಬದಲಾಗುತ್ತಿತ್ತು ಎಂದಿದ್ದರು. ಈಗ, ಕಾಶ್ಮೀರದ ಭವಿಷ್ಯವನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ಸಿದ್ಧಪಡಿಸುತ್ತಿದ್ದ ಸುಧೀಂದ್ರ ಕುಲಕರ್ಣಿಯವರು ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಕಾಶ್ಮೀರದ ವಿಭಜನೆಯ ವಿಷಯದಲ್ಲಿ ನೆಹರೂ ಮತ್ತು ಪಟೇಲರು ಒಂದೇ ಅಭಿಪ್ರಾಯಕ್ಕೆ ಬಂದಿದ್ದರು. ಶಾಂತಿ ಸ್ಥಾಪನೆಯ ಉಪಾಯವಾಗಿ ಅವರಿಬ್ಬರೂ ಒಮ್ಮತದಿಂದಲೇ ಭಾರತ ವಿಭಜನೆಗೆ ಒಪ್ಪಿದ್ದರು ಎಂಬ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಭಾರತೀಯ ಮಾಜಿ ರಾಜತಾಂತ್ರಕ ಟಿ ಸಿ ಎ ರಾಘವನ್ ಅವರ ‘ದ ಪೀಪಲ್ ನೆಕ್ಸ್ಟ್ ಡೋರ್’ ಕೃತಿಯ ಸಾಲುಗಳನ್ನು ಉಲ್ಲೇಖಿಸಿ ಸುಧೀಂದ್ರ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೆಲ್ಲಕ್ಕಿಂತ ಮತ್ತೊಂದು ಪ್ರಮುಖ ಅಂಶವೆಂದರೆ, “ಮೋದಿಯವರು ದೇಶದ ವಿಭಜನೆಗೆ ಕಾಂಗ್ರೆಸ್‌ ಕಾರಣ, ನೆಹರೂ ಕಾರಣ,” ಎಂಬ ವಾದವನ್ನು ಮುಂದಿಟ್ಟಿದ್ದರೆ, ಇತಿಹಾಸಕಾರರು ಅದಕ್ಕೆ ತದ್ವಿರುದ್ಧ ಸಂಗತಿಗಳನ್ನು ಜನತೆಯ ಮುಂದಿಟ್ಟಿದ್ದಾರೆ. ೧೯೪೭ರಲ್ಲಿ ದೇಶ ಹೋಳಾಗಲು ಕಾಂಗ್ರೆಸ್ಸೇ ಕಾರಣ ಎಂಬುದು ಮೋದಿಯವರ ವಾದ. ಆದರೆ, ಅದು ನಿಜವಲ್ಲ. “ವಾಸ್ತವವಾಗಿ ಮಹಮ್ಮದ್ ಅಲಿ ಜಿನ್ನಾ ಅವರು ಪ್ರತ್ಯೇಕ ದೇಶದ ಬೇಡಿಕೆಯನ್ನು ಮುಂದಿಡುವ ೧೬ ವರ್ಷಗಳ ಹಿಂದೆಯೇ ಹಿಂದುತ್ವವಾದಿ ನಾಯಕ ವಿ ಡಿ ಸಾವರ್ಕರ್ ಅವರು ದ್ವಿರಾಷ್ಟ್ರ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಮೋದಿಯವರು ತಮ್ಮ ಸೈದ್ಧಾಂತಿಕ ಗುರು ಮತ್ತು ಹಿಂದುತ್ವದ ಪ್ರವರ್ತಕರಿಗೆ ಆ ಶ್ರೇಯಸ್ಸನ್ನು ನೀಡದಿರುವುದು ದುರಂತ,” ಎಂದು ಇತಿಹಾಸಕಾರ ಶ್ರೀನಾಥ್ ರಾಘವನ್ ಟ್ವೀಟ್ ಮಾಡಿದ್ದಾರೆ.

ಜೊತೆಗೆ, ಬಿಜೆಪಿಯ ಮೂಲ ಸಂಘಟನೆ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರು ಸ್ವತಃ ೧೯೪೭ರ ಬಂಗಾಳ ವಿಭಜನಾ ಹೋರಾಟದ ನೇತೃತ್ವ ವಹಿಸಿದ್ದರು ಎಂಬುದನ್ನೂ ಮೋದಿ ಮರೆತಿದ್ದಾರೆ ಎಂದೂ ರಾಘವನ್ ಪ್ರತಿಕ್ರಿಯಿಸಿದ್ದಾರೆ.

ಇತಿಹಾಸವನ್ನು ನೆಹರೂ ಮತ್ತು ಕಾಂಗ್ರೆಸ್‌ ವಿರುದ್ಧದ ತಮ್ಮ ಪೂರ್ವಾಗ್ರಹಗಳಿಗೆ, ಅಸಹನೆಗೆ ಬಗ್ಗಿಸುವ ಯತ್ನ, ದೇಶದ ಪ್ರಧಾನಿಗೆ ಭಾರೀ ಮುಖಭಂಗವನ್ನೇ ತಂದೊಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More