ದಕ್ಷಿಣದ ಹೆಣ್ಣಿನ ನಗುವನ್ನು ಅಪಹಾಸ್ಯ ಮಾಡಿದ ಪ್ರಧಾನಿಗೆ ಒಂದಷ್ಟು ಪ್ರಶ್ನೆ

ಉತ್ತರದ ಗಂಗೆ ಪವಿತ್ರ; ನಮ್ಮ ಕೃಷ್ಣ, ಕಾವೇರಿಯರು ನಂತರ! ಉತ್ತರದ ಕಾಶಿ-ಕೇದಾರನಾಥ ಪವಿತ್ರ; ನಮ್ಮ ಕಪ್ಪಡಿ, ಕೂಡಲಸಂಗಮ ಅನಂತರದವು! ಅಧುನಿಕ ರಾಜಕಾರಣಕ್ಕೆ ಬಂದರೆ ಉತ್ತರದ ದೆಹಲಿ, ಡೆಹರಾಡೂನ್ ಮುಖ್ಯ; ಬೆಂಗಳೂರು, ಚೆನ್ನೈ ನಂತರದವು! ಏನಿದೆಲ್ಲ? ನಮಗೂ ನಗು ಬರುತ್ತದಲ್ಲವೇ?

'ನಕ್ಕ ಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ...’

ನರಸಿಂಹ ಸ್ವಾಮಿಯವರ ಪದ್ಯದ ಸಾಲು ನಿನ್ನೆಯಿಂದಲೂ ಕಿವಿಯಲ್ಲಿ ಗುನುಗುಟ್ಟುತ್ತಿದೆ. ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪುಂಖಾನುಪುಂಖವಾಗಿ ಸುಳ್ಳಿನ ಸರಮಾಲೆಗಳ ಉತ್ತರಗಳನ್ನು ನೀಡುತ್ತ ಸಿನಿಕ ಭಾಷಣ ಮಾಡುವ ನಡುವೆ, ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿಯವರು ಜೋರಾಗಿ ನಕ್ಕಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ.

ಆದರೆ, ರೇಣುಕಾ ಚೌಧರಿಯವರೊಬ್ಬರೇ ನಕ್ಕರೇ? ರಾಜ್ಯಸಭೆಯ ಕಲಾಪದ ವಿಡಿಯೋ ನೋಡಿದವರಿಗೆ ಸ್ಪಷ್ಟವಾಗಿ ಗೊತ್ತಿದೆ. ಅಲ್ಲಿ ಮೊದಲು ಬಿದ್ದುಬಿದ್ದು ನಕ್ಕವರು ಆಡಳಿತಾರೂಢ ಪಕ್ಷದ ಸದಸ್ಯರು. ಕಾಂಗ್ರೆಸ್ ಮುಕ್ತ ಭಾರತದ ಹೇಳಿಕೆಗೆ ಮೇಜು ಕುಟ್ಟಿಕೊಂಡು ನಕ್ಕುತ್ತಿರುವಾಗಲೇ ಆಧಾರ್ ವಿಷಯ ಪ್ರಸ್ತಾಪ ಬಂದಾಗ ರೇಣುಕ ಚೌಧರಿಯವರು ಜೋರಾಗಿ ನಗುತ್ತಾರೆ. ಇದಕ್ಕೆ ಉಪರಾಷ್ಟ್ರಪತಿ ಮತ್ತು ಸದನದ ಅಧ್ಯಕ್ಷರೂ ಆದ ವೆಂಕಯ್ಯ ನಾಯ್ಡು ಅವರು ಆಕ್ಷೇಪಿಸಿ, "ಈ ನಡವಳಿಕೆ ನಿಯಮಬಾಹಿರ,” ಎನ್ನುತ್ತಾರೆ. ತಕ್ಷಣ ಮೋದಿಯವರು, "ಅವರು ನಗಲಿ ಬಿಡಿ ಅಧ್ಯಕ್ಷರೇ... ರಾಮಾಯಣ ಧಾರಾವಾಹಿ ನಂತರ ಇದೇ ಮೊದಲು ಅಂತಹ ನಗು ಕೇಳುತ್ತಿದ್ದೇವೆ,” ಎಂದು ಅಪಹಾಸ್ಯ ಮಾಡುತ್ತಾರೆ. ಇದಕ್ಕೆ ಬಿಜೆಪಿ ಸದಸ್ಯರು, ಅದರಲ್ಲೂ ಮುಂದಿನ ಸಾಲಿನಲ್ಲಿದ್ದ ಅಮಿತ್ ಶಾ, ನಕ್ವಿ ಮುಂತಾದವರೆಲ್ಲ ರೇಣುಕಾ ಚೌಧರಿ ಅವರಿಗಿಂತಲೂ ಜೋರಾಗಿ ಮೇಜು ಕುಟ್ಟಿ ನಗುತ್ತಾರೆ. ಹಾಗಾದರೆ, ಇಲ್ಲಿ ಎಲ್ಲಿದೆ ನಿಯಮ? ಇಲ್ಲಿ ಎಲ್ಲಿದೆ ನೈತಿಕತೆ? ಇದು ಬಿಜೆಪಿ ಸದಸ್ಯರಿಗೆ ಅನ್ವಯವಾಗುವುದಿಲ್ಲವೇ? ಎಂಬ ಪ್ರಶ್ನೆಗಳು ಸದ್ಯದ ಚರ್ಚೆಗಳಲ್ಲಿ ಚಾಲ್ತಿಯಲ್ಲಿವೆ.

ಮೋದಿ ಸರಕಾರದ ನಡೆಗಳನ್ನು ಮಾಧ್ಯಮಗಳು ಕೂಡ ಟೀಕಿಸಲು ಪೂರ್ಣ ವಿಫಲಗೊಂಡು ಕುಳಿತಿರುವ ಈ ಹೊತ್ತಿನಲ್ಲಿ ಮತ್ತಷ್ಟು ಪ್ರಶ್ನೆಗಳು ನಮ್ಮ ಮುಂದೆ ಎದ್ದು ನಿಲ್ಲುತ್ತಿವೆ. ಅದು ಒಕ್ಕೂಟ ವ್ಯವಸ್ತೆಯೊಳಗೆ ದಕ್ಷಿಣ ಭಾರತೀಯರು, ಅವರ ಇತಿಹಾಸ, ಭಾಷೆಗಳು, ಸಂಸ್ಕೃತಿ, ಆಹಾರ, ವಿಚಾರ ಎಲ್ಲವೂ ಎರಡನೆಯ ದರ್ಜೆಯಾಗಿ ಪರಿಗಣಿಸಲ್ಪಡುತ್ತಿರುವುದು. ಪ್ರಪಂಚದ ಏಳನೆಯ ದೊಡ್ಡ ದೇಶವಾದ ಭಾರತದಲ್ಲಿ, ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ಐದು ದ್ರಾವಿಡ ರಾಜ್ಯಗಳು ಹೆಚ್ಚು ಸುಭಿಕ್ಷವೂ, ಸಮೃದ್ಧವೂ, ಸುರಕ್ಷಿತವೂ ಆಗಿವೆ.

ಮತ್ತೆಲ್ಲಿ ನಾವು ಎರಡನೆಯ ದರ್ಜೆಯ ಪ್ರಜೆಗಳಾಗಲು ಕಾರಣರಾಗಿದ್ದು ಎಂದು ಹುಡುಕುತ್ತ ಹೊರಟರೆ ಸುಮಾರು ಪುರಾವೆಗಳು ನಮಗೆ ಸಿಗುತ್ತವೆ. ಅವುಗಳಲ್ಲಿ ರಾಮಾಯಣ-ಮಹಾಭಾರತ ಮಹಾಕಾವ್ಯಗಳೂ ಸೇರುತ್ತವೆ. ಅಯೋಧ್ಯೆಯ ರಾಮ ಮತ್ತು ಹಸ್ತಿನಾಪುರ ಧರ್ಮರಾಯ ನಮ್ಮ ಧಾರ್ಮಿಕ ಕಾವ್ಯಗಳ ನಾಯಕರೆಂದು ಒಪ್ಪಿಕೊಂಡಷ್ಟು ಸ್ವಾಭಿಮಾನದಿಂದ ನಮ್ಮ ಬಸವಣ್ಣ, ಮಾದೇಶ್ವರ, ಮಂಟೇಸ್ವಾಮಿ, ತಿಪ್ಪೇರುದ್ರಸ್ವಾಮಿ, ಮೈಲಾರಲಿಂಗ, ಪಂಜುರ್ಲಿಯರನ್ನು ಒಪ್ಪಿಕೊಳ್ಳಲಿಲ್ಲ, ಬೆಳಸಲಿಲ್ಲ. ಈ ದ್ರಾವಿಡ ಸಾಂಸ್ಕೃತಿಕ ನಾಯಕರು ಕೇವಲ ಸಮಾಜ ಸುಧಾರಣೆಯಲ್ಲಿ ಮಾತ್ರವಲ್ಲ, ಹಲವು ಮಹಾಕಾವ್ಯಗಳಲ್ಲಿ ಕೂಡ ನಾಯಕರಾಗಿ ಮಿಂಚಿದ್ದರು. ಆದರೆ, ಇವರ್ಯಾರೂ ಉತ್ತರ ರಾಜ್ಯಗಳನ್ನು ತಲುಪಲಿಲ್ಲ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಉತ್ತರದ ಗಂಗೆ ಪವಿತ್ರ; ನಮ್ಮ ಕೃಷ್ಣ-ಕಾವೇರಿಯರು ನಂತರದವು, ಉತ್ತರದ ಕಾಶಿ-ಕೇದಾರನಾಥಗಳು ಪವಿತ್ರ; ನಮ್ಮ ಕಪ್ಪಡಿ-ಕೂಡಲಸಂಗಮಗಳು ಅನಂತರದವು, ಅಧುನಿಕ ರಾಜಕಾರಣಕ್ಕೆ ಬಂದರೆ, ಉತ್ತರದ ದೆಹಲಿ–ಡೆಹರಾಡೂನ್ ಮುಖ್ಯ; ಬೆಂಗಳೂರು- ಚೆನ್ನೈ ನಂತರದವು!

ಬಹಳ ಮುಖ್ಯವಾದ ಉತ್ತರದ ಭಾರತೀಯ ನಾಯಕರು ದಕ್ಷಿಣದ ದ್ರಾವಿಡ ನಾಯಕರನ್ನು 'ಹನುಮಂತ' ನ ಹಾಗೆ ನಡೆಸಿಕೊಳ್ಳುತ್ತಲೇ ಬಂದಿದ್ದು, ಅವರಿಗೆ ದಕ್ಷಿಣದಿಂದ ಬೇಕಿರುವುದು ‘ಸೇವೆ ಮತ್ತು ಭಕ್ತಿ’ ಮಾತ್ರ, ಅವರಿಂದ ನಮಗೆ ರಾಜ್ಯ-ಕೋಶ-ಅಧಿಕಾರ ಸಿಗುವುದಿಲ್ಲ. ಎದುರು ನಿಂತದ್ದೇ ಆದರೆ ವಾಲಿ-ಸುಗ್ರೀವರ ನಡುವೆ ಬಂದು, ಅವರಲ್ಲಿಯೇ ಜಗಳ ತಂದು, ಮತ್ತೊಬ್ಬನ ಸೋಲಿಸಿ ಕೊಲ್ಲಿಸಿ ತಮ್ಮ ಹೆಸರಿನಲ್ಲಿ ರಾಜ್ಯ ಸ್ಥಾಪಿಸಿ ಅದಕ್ಕೆ ಸುಗ್ರೀವನ ಕೂರಿಸಿ ತಮ್ಮ ದಿಗ್ವಿಜಯ ಬರೆದುಕೊಳ್ಳುವುದು ಪುರಾಣಗಳ ಉದ್ದಕ್ಕೂ ಸಿಗುತ್ತ ಹೋಗುತ್ತದಲ್ಲ, ಹಾಗೆಯೇ ರಾಜಕೀಯ ತಂತ್ರ! ಉತ್ತರದ ವೈದಿಕ ಕಾವ್ಯಗಳ ನಾಯಕರು ದಕ್ಷಿಣಕ್ಕೆ ವಿಹಾರ, ವನವಾಸ, ಅಜ್ಞಾತವಾಸ, ಯುದ್ದ, ಅವರ ಮತ್ತಾವುದೋ ತುರ್ತಿಗೆ ಬಂದಾಗ ಅವರಿಗೆ ಸೇವೆ ಮಾಡುವ, ಭಕ್ತಿಯಿಂದ ನಡೆದುಕೊಳ್ಳುವ ‘ಹನುಮಂತ’ರಾಗಿದ್ದೇವೆ ನಾವೆಲ್ಲ. ಆದರೆ, ರಾಮಾಂಜನೇಯರಲ್ಲಿ ಆಂಜನೇಯನೇ ಬಲಾಢ್ಯ, ಅವನ ಭಕ್ತಿಗಿರುವ ಶಕ್ತಿ ರಾಮನ ಬತ್ತಳಿಕೆಯಲ್ಲಿರುವ ಅಸ್ತ್ರಗಳಿಗಿರಲಿಲ್ಲ ಎಂಬುದು ನಮಗರಿವಾಗಲಿಲ್ಲ. ಅದೇ ಇವತ್ತಿನ ಅಧುನಿಕ ಭಾರತದಲ್ಲೂ ಮುಂದುವರಿದಿದೆ.

ದಕ್ಷಿಣದ ಹೆಣ್ಣುಮಗಳೊಬ್ಬಳು ಸಂಸತ್ತಿನಲ್ಲಿ ನಕ್ಕರೆ ದೊಡ್ಡ ಸುದ್ದಿಯಾಗುತ್ತದೆ, ಅದನ್ನು ಪರೋಕ್ಷವಾಗಿ ‘ಶೂರ್ಪನಖಿಯ ನಗು’ ಎಂದು ಘನತೆವೆತ್ತ ಪ್ರಧಾನಿಗಳು ತುಂಬಿದ ಸಂಸತ್ತಿನಲ್ಲಿ ಅಪಹಾಸ್ಯ ಮಾಡುತ್ತಾರೆ. ಆಡಳಿತಾರೂಢ ಪಕ್ಷದ ಸದಸ್ಯರು ಲಿಂಗಬೇಧ ಮರೆತು ಬಿದ್ದುಬಿದ್ದು ನಗುತ್ತಾರೆ. ಈಗಾಗಲೇ ಬಿಜೆಪಿ ನಾಯಕರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ‘ರಾವಣ’ ಎಂದು ಪದೇಪದೇ ಟೀಕಿಸಿದ್ದೂ ಆಗಿದೆ. ಒಟ್ಟೂ ಇವತ್ತಿನ ಸಂಸ್ಕೃತಿ ಎನ್ನುವುದು ಉತ್ತರ ರಾಜ್ಯಗಳು, ನದಿಗಳು, ವ್ಯಕ್ತಿಗಳು, ಕಾವ್ಯಗಳು ಅಣುರೇಣು ತೃಣಕಾಷ್ಠಗಳೆಲ್ಲವೂ ಪವಿತ್ರ; ದಕ್ಷಿಣ ಅನ್ನುವುದು ಮಾತ್ರ ದಸ್ಯುಗಳ ರೂಪಕವಾಗಿ ಕಟ್ಟಲ್ಪಡುತ್ತಿದೆ. ದಕ್ಷಿಣದ ಅದೆಷ್ಟು ಒಕ್ಕಲಿನ ಜನಕ್ಕೆ ರಾವಣ ದೇವರಾಗಿಲ್ಲ? ಹಾಗಿದ್ದರೆ ಶೂರ್ಪನಖಿ ಏನಾಗಬೇಕು? ಆಕೆಯ ನಗು ಏನಾಗಬೇಕು? ಇದೇ ಸಮಯದಲ್ಲಿ ಬಿಜೆಪಿ ಮುಖಂಡರಾದ ತರುಣ್ ವಿಜಯ್ ಕೆಲ ತಿಂಗಳ ಹಿಂದೆ ದಕ್ಷಿಣ ಭಾರತೀಯರ ಕುರಿತು ನೀಡಿದ್ದ ಹೇಳಿಕೆ ನೆನೆಪು ಮಾಡಿಕೊಳ್ಳಬಹುದು.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಇಬ್ಬಗೆ ನೀತಿಗೆ ಕೊನೆಮೊದಲೆಲ್ಲಿ?

ದಕ್ಷಿಣದ ಕಪ್ಪು ಜನರೊಂದಿಗೇ ನಾವಿದ್ದೇವೆ. ಹಾಗಿದ್ದಾಗ ಆಫ್ರಿಕಾ ಜನರನ್ನು ‘ಜನಾಂಗಿಯ ದೌರ್ಜನ್ಯ’ ಮಾಡುವುದೆಲ್ಲಿ ಸಾಧ್ಯ ಅಂತ? ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರು ಮಾಡಿದ್ದು ಅದೇ ‘ಜನಾಂಗೀಯ ನಿಂದನೆ’ ತಾನೇ! ಇಷ್ಟು ವರುಷವೂ ಪ್ರಜಾಪ್ರಭುತ್ವದ ಹೆಸರಿನಲ್ಲಿ, ಒಕ್ಕೂಟದ ಹೆಸರಿನಲ್ಲಿ ದೆಹಲಿಯ ಸರಕಾರಗಳು ದಕ್ಷಿಣದ ಜನರಿಂದ ತೆರಿಗೆ, ಭೂಮಿ ಎಲ್ಲವನ್ನೂ ಪಡೆದು, ನಮಗೆ ಹಿಡಿಯಷ್ಟು ಕೊಟ್ಟು ಉತ್ತರದ ರಾಜ್ಯಗಳಿಗೆ ಬೊಕ್ಕಸವನ್ನೇ ಒಡೆದು ಹಂಚಿದ್ದು ‘ಜನಾಂಗಿಯ ದೌರ್ಜನ್ಯ’ವಲ್ಲವೇ?

ದಕ್ಷಿಣದ ದ್ರಾವಿಡ ಜನ ಮತ್ತು ಜನನಾಯಕರು ಈಗಲಾದರೂ ಎಚ್ಚೆತ್ತುಕೊಳ್ಳಲು ಶುರುವಾಗಬೇಕು. ಉತ್ತರದ ನಾಯಕರ ತಟವಟಗಳಿಗೆ ನಗದೆ ಮತ್ತೇನು ಮಾಡಲು ಸಾಧ್ಯ! ದುಷ್ಟ ಅಹಂ ತುಂಬಿಕೊಂಡು ಕೊಳೆಯುತ್ತಿರುವ ಉತ್ತರದ ಅಧಿಪತ್ಯವನ್ನು ಸೋಲಿಸುವರೆಗೂ, ಸಮಪಾಲು ಸಿಗುವರೆಗೂ ನಿಲ್ಲದಂತೆ ದೆಹಲಿಯ ನೋಡಿ ನಗಬೇಕಿದೆ.

ಅಯೋಧ್ಯೆಯ ರಾಮನೊಳಗೂ ಕಿಷ್ಕಿಂಧೆಯ ‘ಹನುಮ ಭಕ್ತಿ’ ಮೂಡಬೇಕೆಂಬುದರಲ್ಲಿ ಯಾವ ತಪ್ಪೂ ಇಲ್ಲ. ಮಿಥಿಲೆಯ ಸೀತೆಯಂತೆಯೇ ಲಂಕೆಯ ಶೂರ್ಪನಖಿಯೂ ‘ಹೆಣ್ಣು’ ಎಂಬುದನ್ನು ಉಪಖಂಡ ಮರೆಯಬಾರದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More