ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ| ಸುಪ್ರೀಂ ಕೋರ್ಟ್‌ನ ತೀರ್ಪುಇಂದು

ದೀರ್ಘ ಇತಿಹಾಸವನ್ನೇ ಹೊಂದಿರುವ ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದದ ಕುರಿತು ಸುಪ್ರೀಂ ಕೋರ್ಟ್‌ ಇಂದು ನೀಡಲಿರುವ ತೀರ್ಪು ಸಮಸ್ಯೆಗೆ ಪರಿಹಾರವನ್ನು ಒದಗಿಸುವುದೇ? ೨೦೧೯ರ ಚುನಾವಣೆಯ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವ ಪಡೆದುಕೊಂಡಿದೆ

ಬೆತ್ಲೆಹ್ಯಾಮ್‌ನ ಜೀಸಸ್ ಕ್ರಿಸ್ತನ ಜನ್ಮಸ್ಥಳದಲ್ಲಿ ಚರ್ಚ್ ಆಫ್ ನೇಟಿವಿಟಿ ಇದೆ. ಒಂದು ವೇಳೆ, ಆ ಸ್ಥಳದಲ್ಲಿ ಮಧ್ಯಯುಗದ ಹೊತ್ತಲ್ಲಿ ಒಂದು ಮಸೀದಿ ನಿರ್ಮಾಣವಾಗಿತ್ತು ಎಂದು ಊಹಿಸಿಕೊಳ್ಳಿ. ಆ ಮಸೀದಿ ನಿರ್ಮಾಣವಾಗಿ ಶತಮಾನಗಳ ಬಳಿಕ ಕ್ರೈಸ್ತರು ಆ ಜಾಗ ತಮ್ಮ ಚರ್ಚಿಗೆ ಸೇರಿದ್ದು ಎಂದು ಕ್ರೈಸ್ತ ಬಾಹುಳ್ಯದ ರಾಷ್ಟ್ರದ ಜಾತ್ಯತೀತ ನ್ಯಾಯಾಲಯವೊಂದರ ಮೊರೆಹೋದರು ಎಂದೂ ಊಹಿಸಿಕೊಳ್ಳಿ. ಹಾಗೇ, ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ, ಕ್ರೈಸ್ತರ ಒಂದು ಉದ್ರಿಕ್ತ ಗುಂಪು ಮಸೀದಿಯನ್ನು ನೆಲಸಮಗೊಳಿಸಿತು ಮತ್ತು ಮಸೀದಿಯ ಪುನರ್ ನಿರ್ಮಾಣಕ್ಕೆ ಅವಕಾಶ ನೀಡಲೇ ಇಲ್ಲ ಎಂಬುದನ್ನು ಊಹಿಸಿಕೊಳ್ಳಿ. ಜೊತೆಗೆ, ಬಾಲ ಏಸುವಿನ ಮೂರ್ತಿಯನ್ನೊಳಗೊಂಡ ತೊಟ್ಟಿಲೊಂದು ತಾತ್ಕಾಲಿಕ ಟೆಂಟಿನಡಿ ಆ ಜಾಗದಲ್ಲಿ ಭಾರಿ ಭದ್ರತೆಯಲ್ಲಿ ಸ್ಥಾಪಿತವಾಗಿದೆ ಎಂಬುದನ್ನೂ ಕಲ್ಪಿಸಿಕೊಳ್ಳಿ. ಕೊನೆಯದಾಗಿ, ನಿರಂತರವಾಗಿ ಸರ್ಕಾರಗಳು ಹಾಗೂ ತಲೆಮಾರುಗಳು ನ್ಯಾಯಾಧೀಶರು ಶಾಂತಿ ಕಾಪಾಡುವ ಉದ್ದೇಶದಿಂದ ನಿರ್ದಿಷ್ಟ ತೀರ್ಮಾನಕ್ಕೆ ಬರುವುದನ್ನು ಮುಂದೂಡುತ್ತಲೇ ಬಂದ ಪರಿಣಾಮ, ಮಸೀದಿ ಧ್ವಂಸದ ಕುರಿತ ನ್ಯಾಯಾಲಯದ ಪ್ರಕರಣ, ಕಾಲು ಶತಮಾನದ ಬಳಿಕವೂ ಮುಂದುವರಿಯುವುದನ್ನೂ ಊಹಿಸಿಕೊಳ್ಳಿ.

ನೀವು ಇವೆಲ್ಲವನ್ನೂ ಸರಿಯಾಗಿ ಊಹಿಸಿದ್ದೇ ಆದರೆ, ಖಂಡಿತವಾಗಿಯೂ ಭಾರತದ ಸುಪ್ರೀಂ ಕೋರ್ಟಿನ ಎದುರು ಮೊನ್ನೆಯಿಂದ ವಿಚಾರಣೆ ಆರಂಭವಾಗಿರುವ ಅಯೋಧ್ಯಾ ರಾಮಮಂದಿರ ಮತ್ತು ಮಸೀದಿ ಕುರಿತ ಪ್ರಕರಣದ ಸವಾಲನ್ನು ಅರ್ಥ ಮಾಡಿಕೊಳ್ಳಬಲ್ಲಿರಿ. ನ್ಯಾಯಾಲಯದ ಈ ಹಿಂದಿನ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಮುಸ್ಲಿಂ ಪರ ವಕೀಲರ ಅಹವಾಲು ಪ್ರಸ್ತಾಪಿಸುತ್ತ, “೨೦೧೯ರ ಬಳಿಕ ಈ ಕುರಿತ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಈಗಾಗಲೇ ವಿನೂತನ ಅಹವಾಲು ಮಂಡನೆಯಾಗಿದೆ. ಹಿರಿಯ ವಕೀಲ ರಾಜೀವ್ ಧವನ್ ಅವರು ಈ ಬಗ್ಗೆ ಅಧ್ಯಯನ ನಡೆಸಿ, ತಯಾರಿ ಮಾಡಿಕೊಂಡು, ವಾದ ಮಂಡಿಸಲು ನಾಲ್ಕು ತಿಂಗಳ ಕಾಲಾವಕಾಶ ಕೋರಿದ್ದಾರೆ,” ಎಂದಿದ್ದರು. ಆ ಮೂಲಕ, ೨೦೧೯ರ ಚುನಾವಣೆಯ ನಂತರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿರುವುದಾಗಿಯೂ ಹೇಳಿದ್ದರು.

ಭಾರತೀಯ ಮುಸ್ಲಿಂ ಸಮುದಾಯ ಕೂಡ ಅದನ್ನೇ ಬಯಸಿತ್ತು. ಏಕೆಂದರೆ, ಧಾರ್ಮಿಕ ಹಿನ್ನೆಲೆಯ ಈ ಕಾನೂನು ವ್ಯಾಜ್ಯ ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಅವರಿಗೂ ಬೇಕಿರಲಿಲ್ಲ. ಆದರೆ, ಹಿಂದೂ ಮೂಲಭೂತವಾದಿಗಳ ಲೆಕ್ಕಾಚಾರ ಬೇರೆಯೇ ಆಗಿದೆ. ಅದು ತಮ್ಮ ಪರವಾಗಿರಲಿ ಅಥವಾ ವ್ಯತಿರಿಕ್ತವಾಗಿರಲಿ, ಈ ವ್ಯಾಜ್ಯದ ತೀರ್ಪು ಆದಷ್ಟು ಬೇಗ ಹೊರಬಿದ್ದಷ್ಟು ತಮಗೆ ಚುನಾವಣೆಯಲ್ಲಿ ಭಾರಿ ಲಾಭ ತಂದುಕೊಡಲಿದೆ ಎಂಬುದು ಅವರ ನಿರೀಕ್ಷೆ. ಈ ನಡುವೆ, ಮುಸ್ಲಿಮರ ಪರ ವಾದ ಮಂಡಿಸುತ್ತಿರುವ ಮೂವರೂ ವಕೀಲರು (ಧವನ್, ಕಪಿಲ್ ಸಿಬಲ್ ಮತ್ತು ದುಶ್ಯಂತ ಧವೆ- ಮೂವರೂ ಹಿಂದೂಗಳು) ವಿಚಾರಣೆಯಿಂದ ಹಿಂದೆ ಸರಿಯಲು ಕೂಡ ಯೋಚಿಸಿದ್ದರು ಎಂಬುದು ಕೂಡ ಪ್ರಕರಣದ ಗಂಭೀರತೆಗೆ ಒಂದು ನಿದರ್ಶನ.

ಚುನಾವಣೆಯ ಮೇಲೆ ಪ್ರಕರಣದ ತೀರ್ಪು ಬೀರಬಹುದಾದ ಅಗಾಧ ಪರಿಣಾಮದ ಹಿನ್ನೆಲೆಯಲ್ಲಿ, ದೇಶದ ಭವಿಷ್ಯದ ಮೇಲೆ ಉಂಟುಮಾಡಬಹುದಾದ ರಾಜಕೀಯ ಮತ್ತು ಸಾಮಾಜಿಕ ಪರಿಣಾಮದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವಸರದಲ್ಲಿ ತೀರ್ಪು ಪ್ರಕಟಿಸಬಾರದು ಎಂಬ ಹಿರಿಯ ವಕೀಲರ ಮನವಿಗೆ ಮುಖ್ಯ ನ್ಯಾಯಮೂರ್ತಿಗಳು ಒಂದು ರೀತಿಯ ಅಸಹನೆಯ, ಅಸಮಾಧಾನದ ಪ್ರತಿಕ್ರಿಯೆ ನೀಡಿದ್ದಾರೆ. ಅದು ಚುನಾವಣಾ ರಾಜಕಾರಣದ ಮೇಲೆ ತೀರ್ಪು ಬೀರಬಹುದಾದ ಪರಿಣಾಮದ ಹಿನ್ನೆಲೆಯಲ್ಲಿ ಗಮನಾರ್ಹ.

ಬಳಿಕ ನ್ಯಾಯಾಲಯ ಕಳೆದ ಡಿಸೆಂಬರಿನ ತನ್ನ ಆದೇಶದಲ್ಲಿ, ವಿಚಾರಣೆಯನ್ನು ೨೦೧೮ರ ಫೆಬ್ರವರಿಗೆ ಮುಂದೂಡಿತ್ತು. ಆದರೆ, ಪ್ರಕರಣದ ಇತಿಹಾಸವನ್ನು ಗಮನಿಸಿದರೆ, ವಿಚಾರಣೆಯನ್ನು ಮತ್ತೆ ಮುಂದೂಡುವಂತೆ ಕೇಳಿದರೂ ಅಚ್ಚರಿ ಇಲ್ಲ ಮತ್ತು ಅದು ಅನಿರೀಕ್ಷಿತವೂ ಅಲ್ಲ.

ಪುರಾಣದಿಂದ ರಾಜಕೀಯದವರೆಗೆ

1992ರ ಡಿ.೬ಕ್ಕೆ ಮುನ್ನ ಸುಮಾರು ೪೦೦ ವರ್ಷಗಳ ಕಾಲ ಮಸೀದಿಯೊಂದು ಇದ್ದ ಜಾಗವನ್ನು ದೇಶದ ಬಹುಸಂಖ್ಯಾತ ಹಿಂದೂಗಳಿಗೆ ಮರಳಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮೊರೆಹೋಗಲಾಗಿತ್ತು. ಒಂದು ವೇಳೆ, ನ್ಯಾಯಾಲಯ ಆ ಬೇಡಿಕೆಗೆ ಅಸ್ತು ಎಂದರೆ, ದೇಶದ ಹಿತ ಬಲಿಕೊಟ್ಟು, ಬಹುಸಂಖ್ಯಾತರ ಆಕಾಂಕ್ಷೆಗೆ ನ್ಯಾಯ ತಲೆಬಾಗಿದೆ ಎಂದೇ ಭಾವಿಸಬಹುದು.

ಮತ್ತೊಂದು ಕಡೆ, ಶ್ರೀರಾಮನ ಜನ್ಮಭೂಮಿಯಲ್ಲಿ ಇದ್ದ ದೇವಾಲಯವನ್ನು ಉರುಳಿಸಿ, ಆ ಜಾಗದಲ್ಲಿ ಮೊಘಲ್ ಸ್ರಾಮ್ರಾಟನ ಮಂತ್ರಿ ಮಿರ್ ಬಖಿ ಎಂಬಾತ ಮಸೀದಿ ಕಟ್ಟಿದ್ದ ಎಂಬ ವಾದದ ಹಿನ್ನೆಲೆಯಲ್ಲಿ; ನ್ಯಾಯಾಲಯ ಹಿಂದೂಗಳ ಹಕ್ಕುದಾರಿಕೆಯನ್ನು ತಿರಸ್ಕರಿಸಿದರೆ, ಮಧ್ಯಯುಗೀನ ಮುಸ್ಲಿಂ ಆಡಳಿತ ಅವರಿಗೆ ಎಸಗಿದ ಅನ್ಯಾಯಕ್ಕೆ ನ್ಯಾಯ ಸಿಗಲಿಲ್ಲ ಎಂಬ ಭಾವನೆ ಮತ್ತಷ್ಟು ಬಲಗೊಳ್ಳಬಹುದು.

ಈಗಾಗಲೇ ಸಾಕಷ್ಟು ಕೋಮುವಾರು ಕಂದಕ ಸೃಷ್ಟಿಯಾಗಿರುವ ಸಮಾಜದಲ್ಲಿ; ನ್ಯಾಯಾಲಯದ ತೀರ್ಪು ಯಾರ ಪರವಿದ್ದರೂ ಸಾಕಷ್ಟು ಕೋಮು ಸಂಘರ್ಷಕ್ಕೆ ಕಾರಣವಾಗಬಹುದು. ಮಸೀದಿ ನಿರ್ಮಾಣಕ್ಕೂ ಮುಂಚೆ ಅಲ್ಲಿ ದೇವಾಲಯ ಇತ್ತೇ ಎಂಬುದೇ ಇಡೀ ವಿವಾದದ ಕೇಂದ್ರಬಿಂದು. ಆದರೆ, ಪ್ರಶ್ನೆ ಎಂದರೆ, ೪೦೦ ವರ್ಷಗಳ ಹಿಂದಿನ ಹೀನಾಯ ಮತ್ತು ದುರುದ್ದೇಶದ ಆ ಕೃತ್ಯವನ್ನು ರಾಜಕೀಯ ಸೇಡಿನ ಮೂಲಕ ಸರಿಪಡಿಸಬಹುದೇ? ಅಥವಾ ಸಂವಿಧಾನಿಕ ಕಾನೂನು ಕಟ್ಟಳೆಗಳ ಮೇಲೆ ನಡೆಯುತ್ತಿರುವ ಒಂದು ದೇಶದಲ್ಲಿ, ಕಾನೂನು ವ್ಯಾಪ್ತಿಯಲ್ಲೇ ಹಿಂದೆ ಆಗಿಹೋದ ಅಂತಹ ತಪ್ಪನ್ನು ಈಗ ಸರಿಪಡಿಸಲು ಸಾಧ್ಯವಿದೆಯೇ? ಎಂಬುದು.

ಇದೆಲ್ಲಕ್ಕಿಂತ ಪ್ರಮುಖ ರಾಜಕೀಯ ಪ್ರಶ್ನೆಗಳೆಂದರೆ; ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಎಂತಹದ್ದು? ಅದು ಎಲ್ಲ ಧರ್ಮ-ನಂಬಿಕೆಗಳನ್ನೂ ಸಮಾನವಾಗಿ ಕಾಣುವ ವ್ಯವಸ್ಥೆಯೇ? ಅಥವಾ ಅದರ ಬಹುಸಂಖ್ಯಾತ ಹಿಂದೂ ನಂಬಿಕೆಯೇ ಎಲ್ಲ ಬಗೆಯ ಸಾರ್ವಜನಿಕ ಕ್ರಿಯೆಗಳಲ್ಲಿ ನಿರ್ಣಾಯಕ ಎಂಬ ವರಸೆಯದ್ದೇ?

ಪ್ರಕರಣದ ಇತಿಹಾಸ

೧೮೫೭ರಲ್ಲಿ ಹನುಮಾನ್ ದೇವಾಲಯದ ಮುಖ್ಯ ಅರ್ಚಕರು ಮಸೀದಿಯ ಪೂರ್ವ ಹಜಾರದ ಜಾಗವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ಶ್ರೀರಾಮನ ಜನ್ಮಸ್ಥಳ ಎನ್ನಲಾಗುತ್ತಿರುವ ಅದೇ ಜಾಗದಲ್ಲಿ ‘ರಾಮ ಚೌಕಿ’ ನಿರ್ಮಾಣ ಮಾಡಲಾಯಿತು. ನಂತರ ಅದೇ ವರ್ಷ, ಬಾಬರಿ ಮಸೀದಿಯ ಮುಖ್ಯಸ್ಥ ಮೌಲ್ವಿ ಮುಹಮ್ಮದ್ ಅಸ್ಗರ್, “ಆ ಜಾಗವನ್ನು ಬಲವಂತದಿಂದ ಕಿತ್ತುಕೊಳ್ಳಲಾಗಿದೆ,” ಎಂದು ಸ್ಥಳೀಯ ನ್ಯಾಯಾಲಯದ ಮೊರೆಹೋದರು.

೧೮೮೫ರಲ್ಲಿ ರಾಮಜನ್ಮಭೂಮಿಯ ಅರ್ಚಕ ಎಂದು ಹೇಳಿಕೊಂಡ ಮಹಾಂತ ರಘುಬರ್ ದಾಸ್ ಎಂಬುವವರು ಆ ಜಾಗದ ಹಕ್ಕುದಾರಿಕೆ ನೀಡುವಂತೆಯೂ ಮತ್ತು ಅಲ್ಲಿನ ಚೌಕಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವಂತೆಯೂ ಕೋರಿ ಒಂದು ದೂರು ದಾಖಲಿಸಿದರು. ಗಮನಿಸಬೇಕಾದ ಸಂಗತಿ ಎಂದರೆ, ಆ ಸಂದರ್ಭದಲ್ಲಿ ನಿರ್ದಿಷ್ಟ ಜಾಗದಲ್ಲಿ ದೇವಾಲಯ ಇತ್ತು ಎಂಬ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡಿರಲಿಲ್ಲ. ಆದರೆ, ಅ ಅರ್ಜಿಯನ್ನು ನ್ಯಾಯಾಲಯ ೧೮೮೬ರಲ್ಲಿ ತಿರಸ್ಕರಿಸಿತು.

ಬಳಿಕ, ಸ್ವಾತಂತ್ರ್ಯಾ ನಂತರ ೧೯೪೯ರಲ್ಲಿ ಮಸೀದಿಯ ಒಳಗೆ ರಾಮನ ವಿಗ್ರಹ ಕಾಣಿಸಿಕೊಂಡಿತು. ಬಳಿಕ, ೧೯೫೦ರ ಜ.೧೬ರಂದು ಹಿಂದೂ ಮಹಾಸಭಾ ಸದಸ್ಯ ಗೋಪಾಲ್ ಸಿಂಗ್ ವಿಶಾರದ ಎಂಬುವವರು ಆ ವಿಗ್ರಹದ ಆರಾಧನೆಗೆ ಮತ್ತು ಅದನ್ನು ಅಲ್ಲಿಂದ ತೆರವುಗೊಳಿಸದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ಹೊರಡಿಸುವಂತೆ ಸಿವಿಲ್ ದಾವೆ ಹೂಡಿದರು. ನ್ಯಾಯಾಲಯ ಆ ವಿಗ್ರಹವನ್ನು ತೆರವು ಮಾಡದಂತೆ ಆದೇಶಿಸಿತು. ಹಾಗೇ, ಪೂಜೆಗೆ ಅಡ್ಡಿಪಡಿಸದಂತೆಯೂ ಹೇಳಿತು. ೧೯೫೦ರ ಏ.೨೪ರಂದು ಉತ್ತರ ಪ್ರದೇಶ ಸರ್ಕಾರ, ಈ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತು. ೧೯೫೯ರಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ನಿರ್ಮೋಹಿ ಅಖಾಡ, ಇಡೀ ಮಸೀದಿಯನ್ನು ತಮಗೆ ಬಿಟ್ಟುಕೊಡಲು ಕೋರಿ ಮತ್ತೊಂದು ದಾವೆ ಹೂಡಿತು. ಆಗ, ಮಸೀದಿಯ ಹಕ್ಕುದಾರಿಕೆ ಕೋರಿ, ೧೯೬೧ರಲ್ಲಿ ಸುನ್ನಿ ಸೆಂಟ್ರಲ್ ವಕ್ಫ್‌ ಬೋರ್ಡಿನಿಂದ ಮತ್ತೊಂದು ದಾವೆ ದಾಖಲಾಯಿತು. ಈ ಕಾನೂನು ಹೋರಾಟದ ಹೊರತಾಗಿ ೧೯೫೧ರಿಂದ ೧೯೮೬ರವರೆಗಿನ ಅವಧಿ ಯಾವುದೇ ಮಹತ್ವದ ಘಟನಾವಳಿಗಳಿಗೆ ಸಾಕ್ಷಿಯಾಗಲಿಲ್ಲ.

ಅಪಾಯಕಾರಿ ನಡೆ

ಪ್ರಧಾನಿ ರಾಜೀವ್ ಗಾಂಧಿಯವರು ೧೯೮೫ರ ಶಾ ಬಾನು ಪ್ರಕರಣದ ವಿಷಯದಲ್ಲಿ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರು. ವಿಚ್ಛೇದಿತ ಮುಸ್ಲಿಂ ಮಹಿಳೆಯೊಬ್ಬರ ಪರ ನ್ಯಾಯಾಲಯದ ತೀರ್ಪನ್ನು ಸರ್ಕಾರ, ಹೊಸ ಕಾಯ್ದೆಯೊಂದರ ಮೂಲಕ ತಿರುವುಮುರುವು ಮಾಡಿತು. ಮುಸ್ಲಿಂ ಸಂಪ್ರದಾಯವಾದಿಗಳನ್ನು ಮೆಚ್ಚಿಸುವ ರಾಜೀವ್ ಗಾಂಧಿಯವರ ಈ ಯತ್ನ, ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸಿತು. ಸಂಘಪರಿವಾರ ಹಿಂದೂಗಳ ಬಲ ಕ್ರೋಡೀಕರಿಸಲು ಈ ಪ್ರಕರಣವನ್ನು ಬಳಸಿಕೊಂಡಿತು. ಇದಾದ ಕೆಲವು ತಿಂಗಳ ಬಳಿಕ ಪ್ರಧಾನಮಂತ್ರಿಗಳು ಹಿಂದೂಗಳನ್ನು ಸಮಾಧಾನಪಡಿಸಲು ಏನಾದರೂ ಮಾಡಲೇಬೇಕಾದ ಇಕ್ಕಟ್ಟಿಗೆ ಸಿಲುಕಿದರು.

ಅದೇ ವರ್ಷ, ೧೯೮೫ರಲ್ಲೇ ಫೈಜಾಬಾದ್ ಸ್ಥಳೀಯ ನ್ಯಾಯಾಲಯದಲ್ಲಿ ಉಮೇಶ್ ಚಂದ್ರ ಪಾಂಡೆ ಎಂಬುವವರು ಒಂದು ಅರ್ಜಿ ಸಲ್ಲಿಸಿ, ಮಸೀದಿಯ ಗೇಟು ತೆರೆಯಲು ಆದೇಶಿಸುವಂತೆ ಕೋರಿದರು. ಸಂಘಪರಿವಾರದ ರಾಜಕೀಯ ಅಂಗ, ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದು ಆಗ ಕೇವಲ ಐದು ವರ್ಷವಷ್ಟೇ ಆಗಿತ್ತು. ವಿಚಿತ್ರವೆಂದರೆ, ಈ ವಿವಾದದಲ್ಲಿ ಪಾಂಡೆ ಯಾವುದೇ ರೀತಿಯಲ್ಲೂ ಪಾಲುದಾರನಾಗಿರಲೇ ಇಲ್ಲ! ಆ ಬಳಿಕ, ಪಾಂಡೆ ಅರ್ಜಿಯ ವಿಚಾರಣೆ ತ್ವರಿತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ನ್ಯಾಯಾಲಯ ತಳ್ಳಿಹಾಕಿತು. ಬಳಿಕ, ಜಿಲ್ಲಾ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು. ಆ ಕುರಿತ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರು, ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿಗೆ ಹಾಕಿರುವ ಬೀಗ ತೆರವು ಮಾಡುವಂತೆಯೂ, ಆ ಬಳಿಕ ಉದ್ಭವಿಸಬಹುದಾದ ಕಾನೂನು-ಸುವ್ಯವಸ್ಥೆಯ ಸಮಸ್ಯೆಯನ್ನು ನಿಭಾಯಿಸುವ ಹೊಣೆ ಜಿಲ್ಲಾಡಳಿತ ಹಾಗೂ ಅಂದಿನ ಸರ್ಕಾರದ್ದು ಎಂದೂ ಆದೇಶಿಸಿದರು. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ ಕೆಲವು ನಿರ್ದೇಶನಗಳನ್ನು ಪಡೆಯಿತು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಫೈಜಾಬಾದ್ ನ್ಯಾಯಾಧೀಶರ ಮುಂದೆ ಖುದ್ದು ಹಾಜರಾಗಿ, ಮುಖ್ಯ ಗೇಟಿನ ಬೀಗ ತೆರವಿನಿಂದ ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆ ತಲೆದೋರದು ಎಂದು ಹೇಳಿಕೆ ನೀಡಿದರು.

ಅಲ್ಲಿ ೧೯೪೯ರಲ್ಲಿ ಇಡಲಾಗಿದ್ದ ವಿಗ್ರಹಕ್ಕೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಲು ೧೯೮೫ರವರೆಗೆ ಅರ್ಚಕರಿಗೆ ಅವಕಾಶ ನೀಡಲಾಗಿತ್ತು. ಇದೀಗ, ನ್ಯಾಯಾಲಯದ ಆದೇಶದ ಬಳಿಕ, ಶ್ರೀರಾಮನ ಜನ್ಮಭೂಮಿಗೆ ಎಲ್ಲ ಹಿಂದೂಗಳಿಗೆ ಬಹುತೇಕ ಮುಕ್ತ ಅವಕಾಶ ದೊರೆಯಿತು. ಆದರೆ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರು ತಮ್ಮ ಕೃತಿಯಲ್ಲಿ, “ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯದ ಬೀಗ ತೆರವು ಮಾಡಿದ್ದು ತಪ್ಪು ತೀರ್ಮಾನ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾರಕಕ್ಕೇರಿದ ವಿವಾದ

೧೯೯೦ರ ಸೆ.೧೨ರಂದು ಅಂದಿನ ಬಿಜೆಪಿ ಅಧ್ಯಕ್ಷ ಲಾಲ್ ಕೃಷ್ಣ ಆಡ್ವಾಣಿ ಅವರು ಗುಜರಾತಿನ ಪುರಾತನ ಸೋಮನಾಥ ದೇವಾಲಯದಿಂದ ಅಯೋಧ್ಯೆಯವರೆಗೆ ರಥಯಾತ್ರೆ ನಡೆಸುವುದಾಗಿ ಘೋಷಿಸಿದರು. ಅಯೋಧ್ಯೆಯ ಮಸೀದಿಯ ಜಾಗದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ ಮಾಡುವ ಶಪಥ ಮಾಡಿದರು. ಆಡ್ವಾಣಿಯವರ ಅಂದಿನ ರಥಯಾತ್ರೆಯಲ್ಲಿ ಬಿಜೆಪಿಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಮತ್ತು ಇಂದು ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಉತ್ಸಾಹದಿಂದ ಮುಂದಾಳತ್ವ ವಹಿಸಿದ್ದರು.

‘ಹಿಂದೂಗಳ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ’, ‘ಮುಸ್ಲಿಮರ ತುಷ್ಟೀಕರಣ ಮಾಡಲಾಗುತ್ತಿದೆ’ ಎಂದು ಅಂದಿನ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಘೋಷ‍ಣೆಗಳು ಮೊಳಗಿದವು. ಸಾವಿರಾರು ಕರಸೇವಕರು ಅಯೋಧ್ಯೆಯಲ್ಲಿ ಸಮಾವೇಶಗೊಂಡರು. ಪೊಲೀಸರು ಮತ್ತು ಅರೆಸೇನಾ ಪಡೆಗಳೊಂದಿಗೆ ಸಂಘರ್ಷವೇ ನಡೆಯಿತು. ಆ ಸಂಘರ್ಷದಲ್ಲಿ ಕನಿಷ್ಠ ೨೦ ಮಂದಿ ಕರಸೇವಕರು ಸಾವುಂಡರು. ಆ ಸಾವುಗಳು ಉತ್ತರ ಪ್ರದೇಶದಲ್ಲಿ ಕೋಮು ದಳ್ಳುರಿ ಸೃಷ್ಟಿಸಿದವು. ಲೆಕ್ಕವಿಲ್ಲದಷ್ಟು ಕೋಮು ಗಲಭೆಗಳು ನಡೆದವು.

ಆ ಬಳಿಕ ೧೯೯೧ರಲ್ಲಿ ನಡೆದ ಚುಣಾವಣೆಯಲ್ಲಿ ಬಿಜೆಪಿ ಮತ ಗಳಿಕೆ ಶೇಕಡವಾರು ಪ್ರಮಾಣ ದುಪ್ಪಟ್ಟಾಯಿತು. ದ.ಭಾರತದಲ್ಲಿ ಸಾಕಷ್ಟು ಸ್ಥಾನಗಳನ್ನು ಗಳಿಸಿತು ಮತ್ತು ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿಯಿತು. ಈ ನಡುವೆ, ಅದರ ಅಂಗಸಂಸ್ಥೆಗಳು ಬಾಬರಿ ಮಸೀದಿ ಮೇಲೆ ದಾಳಿ ನಡೆಸಲು ಅಗತ್ಯ ತಯಾರಿಗಳನ್ನು ಮಾಡಿಕೊಂಡವು. ೧೯೯೨ರಲ್ಲಿ ವಿಶ್ವ ಹಿಂದೂ ಪರಿಷತ್, ಡಿ.೬ರಂದು ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಘೋಷಿಸಿತು ಮತ್ತು ಆ ಕಾರ್ಯಕ್ಕಾಗಿ ದೇಶದ ಮೂಲೆಮೂಲೆಯಿಂದ ಕರಸೇವಕರು ಬಂದು ಕೈಜೋಡಿಸಬೇಕು ಎಂದು ಕರೆ ನೀಡಿತು.

ಅಂದು ಸಾವಿರಾರು ಮಂದಿ ಕರಸೇವಕರು ಅಯೋಧ್ಯೆಯಲ್ಲಿ ನೆರೆದರು. ಬೆಳಗ್ಗೆ ಬಿಜೆಪಿ ನಾಯಕರಾದ ಆಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾಭಾರತಿಯವರ ಬೆಂಕಿಯುಗುಳುವ ಮಾತುಗಳನ್ನು ಕೇಳಿದರು. ಮಧ್ಯಾಹ್ನದ ಹೊತ್ತಿಗೆ ಕರಸೇವಕರು ಮಸೀದಿಯ ಗೋಪುರಗಳನ್ನು ಏರುವ ಮೂಲಕ ಮೊದಲ ದಾಳಿ ನಡೆಯಿತು. ಅಲ್ಲಿ ಸೇರಿದ್ದ ಭಾರಿ ಕರಸೇವಕರ ಪಡೆಯ ಎದುರು ನಿಲ್ಲಲಾಗದೆ ಸ್ಥಳೀಯ ಪೊಲೀಸರು ಸ್ಥಳದಿಂದ ಕಾಲ್ಕಿತ್ತರು. ಸಂಜೆ ೫ರ ಹೊತ್ತಿಗೆ ಸಂಪೂರ್ಣ ಮಸೀದಿ ನೆಲಸಮವಾಗಿತ್ತು. ಅದೇ ಜಾಗದಲ್ಲಿ ರಾಮನ ವಿಗ್ರಹದೊಂದಿಗೆ ತಾತ್ಕಾಲಿಕ ಗೋಪುರವನ್ನೂ ನಿರ್ಮಿಸಲಾಯಿತು. ಇವತ್ತಿಗೂ ಅರೆಬರೆ ದೇವಾಲಯದ ತಾತ್ಕಾಲಿಕ ಛಾವಣಿಯ ಅಡಿಯಲ್ಲಿಯೇ ರಾಮ ವಿಗ್ರಹವಿದೆ.

ಪ್ರಸ್ತುತ ದೇಶದ ಅಟಾರ್ನಿ ಜನರಲ್ ಆಗಿರುವ ಕೆ ಕೆ ವೇಣುಗೋಪಾಲ್ ಅವರು ಅಂದು ಉತ್ತರ ಪ್ರದೇಶ ಸರ್ಕಾರದ ಪರ ಹಿರಿಯ ವಕೀಲರಾಗಿ ಸುಪ್ರೀಂ ಕೋರ್ಟಿನ ತುರ್ತು ಸಭೆಯಲ್ಲಿ ಹಾಜರಾಗಿ, “ಅವಮಾನದಿಂದ ತಲೆತಗ್ಗಿಸುವಂತಾಗಿದೆ,” ಎಂದಿದ್ದರು. ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಅವರ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಆ ನಂತರದ ಈ ಬೆಳವಣಿಗೆಗಳು ಏನೇ ಇರಲಿ, ಕರಸೇವಕರು ಏನು ಅಂದುಕೊಂಡಿದ್ದರೋ ಅದನ್ನು ಮಾಡಿ ಮುಗಿಸಿದ್ದರು. ಮಸೀದಿ ಧ್ವಂಸದ ಬಳಿಕ ಕೇಂದ್ರ ಸರ್ಕಾರ ಕಾನೂನು ಮೂಲಕ ವಿವಾದಿತ ಜಾಗವನ್ನು ವಶಕ್ಕೆ ಪಡೆಯಲು ಮುಂದಾಯಿತು. ಆದರೆ, ಆ ನಡೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು.

೧೯೯೪ರಲ್ಲಿ ಸುಪ್ರೀಂ ಕೋರ್ಟ್, ೧೯೯೩ರ ಜ.೭ಕ್ಕೆ ಮುನ್ನದ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಆದೇಶಿಸಿ, ಭೂಮಿಯ ಹಕ್ಕುದಾರಿಕೆ ಕುರಿತ ಸಿವಿಲ್ ವ್ಯಾಜ್ಯಗಳನ್ನು ಅಲಹಾಬಾದ್ ಹೈಕೋರ್ಟಿಗೆ ವರ್ಗಾವಣೆ ಮಾಡಿತು. ಅದರರ್ಥ, ೧೯೯೨ರ ಡಿ.೬ರ ಬಳಿಕ ನಿರ್ಮಾಣವಾದ ತಾತ್ಕಾಲಿಕ ಮಂದಿರ ಹಾಗೇ ಉಳಿಯಿತು. ನಂತರ, ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್‌ ಭೂಮಿಯ ಹಕ್ಕುದಾರಿಕೆ ಪ್ರಕರಣದ ತೀರ್ಪು ನೀಡಿ, ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ದೇವರ ವಾರಸುದಾರರ ನಡುವೆ ಭೂಮಿ ಪಾಲು ಮಾಡಿಕೊಳ್ಳಬೇಕು ಎಂದು ಆದೇಶಿಸಿತು. ಆದರೆ, ಅದು ಮೂರೂ ಕಡೆಯವರಿಗೆ ಸಮಾಧಾನ ತರಲಿಲ್ಲ. ಪರಿಣಾಮ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಕೆಯಾದವು. ೨೦೧೧ರಲ್ಲಿ ಸುಪ್ರೀಂ ಕೋರ್ಟ್, ವಿವಾದಿತ ಜಾಗದಲ್ಲಿ ಪೂಜೆ ಸೇರಿದಂತೆ ಯಾವುದೇ ಬಗೆಯ ಧಾರ್ಮಿಕ ಚಟುವಟಿಕೆ ನಡೆಸಬಾರದು ಎಂದು ಸ್ಪಷ್ಟಪಡಿಸಿತು.

೨೦೧೪ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅವರ ಆಡಳಿತದಲ್ಲಿರುವ ಬಹುತೇಕರ ಪಾಲಿಗೆ, ಬಾಬರಿ ಮಸೀದಿ ಧ್ವಂಸ ಹಿಂದೂಗಳ ಹಕ್ಕನ್ನು ಸಾಧಿಸಿದ ಕ್ರಿಯೆಯಾಗಿ ಕಾಣುತ್ತಿದೆಯೇ ಹೊರತು, ದೇಶದ ಕಾನೂನನ್ನು ಗಾಳಿಗೆ ತೂರಿದ ಘಟನೆಯಾಗಿ ಅಲ್ಲ. ಹಾಗಾಗಿ, ಮಸೀದಿಯ ಜಾಗದಲ್ಲಿ ರಾಮಮಂದಿರ ತಲೆ ಎತ್ತುವುದು ಅವರ ಪಾಲಿಗೆ ಈಗ ಅಸಾಧ್ಯದ ಮಾತಲ್ಲ. ಆದರೆ, ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವ ಪ್ರಕರಣ, ಶಾಸನದ ಮೂಲಕವಾಗಲೀ, ಕಾನೂನಿನ ಮೂಲಕವಾಗಲೀ, ಒಟ್ಟಾರೆ ನೀಗಲೇಬೇಕಾದ ಅಡ್ಡಿಯಾಗಿ ಪರಿಣಮಿಸಿದೆ. ಒಂದು ವೇಳೆ, ಸ್ಪಷ್ಟವಾದ ಪ್ರಯತ್ನ ಕಾಣದೆಹೋದರೆ, ಅದು ಹಿಂದೂ ರಾಷ್ಟ್ರೀಯತೆಯ ಬಿಜೆಪಿ ತನ್ನ ರಾಜಕೀಯ ವಿಶ್ವಾಸವನ್ನೇ ಕಳೆದುಕೊಂಡಂತೆ ಎಂಬ ವಾತಾವರಣ ಇದೆ. ಹಾಗಾಗಿ, ೨೦೧೭ರ ಮಾರ್ಚ್‌ನಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ, ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸುವಂತೆ ಕೋರಿದ್ದಾರೆ. ಸ್ವಾಮಿಯವರ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದರೂ, ಜುಲೈ ೨೦೧೭ರಲ್ಲಿ ಪ್ರಕರಣದ ವಿಚಾರಣೆ ಆರಂಭಿಸಲು ಸೂಚಿಸಿತು. ಬಳಿಕ, ೨೦೧೭ರ ಡಿ.೫ರಂದು, ಬಾಬರಿ ಮಸೀದಿ ಧ್ವಂಸ ಘಟನೆಯ ೨೫ನೇ ವರ್ಷಾಚರಣೆಗೆ ಮುನ್ನಾದಿನ ವಿಚಾರಣೆಯ ದಿನ ನಿಗದಿ ಮಾಡಲಾಯಿತು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠ ವಿಚಾರಣೆ ಕೈಗೆತ್ತಿಕೊಂಡಿದ್ದು, ಅವರು ೨೦೧೮ರ ಅಕ್ಟೋಬರ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಅದಕ್ಕೂ ಮುನ್ನ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ನೀಡುವರೇ? ೨೦೧೯ರ ಚುನಾವಣೆಗೆ ಕೆಲವು ತಿಂಗಳ ಮುನ್ನವೇ ತೀರ್ಪು ಹೊರಬೀಳುವುದೇ? ತೀರ್ಪು ಯಾರ ಪರ ಇದ್ದರೂ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ದೇಶವನ್ನು ಕಾಡುತ್ತಿರುವ ಆರ್ಥಿಕ ಮತ್ತು ಆಡಳಿತಾತ್ಮಕ ವಿಷಯಗಳನ್ನು ಬದಿಗೊತ್ತಿ, ಈ ಭಾವನಾತ್ಮಕ ವಿಷಯವನ್ನೇ ಚುನಾವಣಾ ಲಾಭದ ವಸ್ತುವಾಗಿಸಿಕೊಳ್ಳಲಿವೆ.

ಅದಕ್ಕಿಂತ ವಿಪರ್ಯಾಸದ ಸಂಗತಿಯೆಂದರೆ, ತೀರ್ಪು ಯಾವ ಕಡೆಯೇ ಬರಲಿ, ಅದು ಶತಮಾನಗಳ ಬಿಕ್ಕಟ್ಟನ್ನು ಇತ್ಯರ್ಥಪಡಿಸುವ ಬದಲು, ಬಹುಸಂಸ್ಕೃತಿಯ ಈ ನೆಲದಲ್ಲಿ ಬಿಕ್ಕಟ್ಟನ್ನು ಇನ್ನಷ್ಟು ಉದ್ವಿಗ್ನಗೊಳಿಸಲಿದೆ ಎಂಬುದಂತೂ ದಿಟ. ಅಂತಿಮವಾಗಿ ಸೋಲುವುದು ಕಾನೂನಿನ ಆದೇಶವೇ ಹೊರತು, ವಿವಾದವಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More