ಗಾಂಧಿ ಹತ್ಯೆ ಸಂಚು | ಭಾಗ 3 | ಬಾಂಬ್ ಸ್ಫೋಟಿಸಿದಾತ ಶಾಂತಿಮಂತ್ರ ಇಷ್ಟವಿಲ್ಲ ಎಂದಿದ್ದ!

ಒಂದು ಕಡೆ ದೆಹಲಿಯಲ್ಲಿ ಗಾಂಧೀಜಿಯವರು ಶಾಂತಿ ಮತ್ತು ಸೌಹಾರ್ದಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸುವ ತಯಾರಿಯಲ್ಲಿದ್ದರು. ಅದೇ ವೇಳೆ, ಇತ್ತ ಬಾಂಬೆಯಲ್ಲಿ, ಮಹಾತ್ಮನ ಹತ್ಯೆಯ ಸಂಚು ಸದ್ದಿಲ್ಲದೆ ರೂಪು ತಳೆದು, ದೆಹಲಿಯ ಹಿಂದೂ ಮಹಾಸಭಾ ಭವನದವರೆಗೆ ತಲುಪಿತ್ತು!

ಪಾಕಿಸ್ತಾನಕ್ಕೆ ನೀಡಬೇಕಿರುವ 55 ಕೋಟಿ ರು. ಪಾವತಿ ಮುಂದೂಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಹಾಗೂ ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದದ ವಾತಾವರಣ ನಿರ್ಮಾಣವಾಗಬೇಕು ಎಂಬ ಬೇಡಿಕೆಯೊಂದಿಗೆ ಮಹಾತ್ಮ ಗಾಂಧಿಯವರು ೧೯೪೮ರ ಜ.೧೩ರಂದು ಆರಂಭಿಸಿದ ನಿರಶನ, ವಲಸಿಗ ಹಿಂದೂಗಳ ಅಸಮಾಧಾನಕ್ಕೆ ಕಾರಣವಾಯಿತು. ಆದರೂ, ಅವರ ಉಪವಾಸ ಸತ್ಯಾಗ್ರಹ ಬಹುತೇಕ ಹಿಂದೂಗಳ ಮನಸ್ಸು ಕರಗಿಸುವಲ್ಲಿ ಯಶಸ್ಸು ಕಂಡಿತು. ಪರಿಣಾಮವಾಗಿ, ಶಾಂತಿ ಮತ್ತು ಸೌಹಾರ್ದತೆ ಕಾಯುವ ನಿಟ್ಟಿನಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರು ನಾಲ್ಕು ಅಂಶಗಳ ಪ್ರತಿಜ್ಞೆಗೆ ಸಹಿ ಹಾಕಿದರು.

ಬಳಿಕ, ೧೯೪೮ರ ಜ.೧೮ರ ಬೆಳಗ್ಗೆ ಶಾಂತಿ ಸಮಿತಿ (ಗಾಂಧಿ ಉಪವಾಸದ ಹಿನ್ನೆಲೆಯಲ್ಲಿ ರಚನೆಯಾಗಿತ್ತು) ಗಾಂಧೀಜಿ ಅವರಿಗೆ ಈ ನಾಲ್ಕು ಅಂಶಗಳನ್ನು ಪಾಲಿಸುವುದಾಗಿ ಭರವಸೆ ನೀಡಿತು.

  • ಮೆಹರೌಲಿಯ ಖ್ವಾಜಾ ಕುತುಬುದ್ದೀನ್ ದರ್ಗಾದ ವಾರ್ಷಿಕ ಉರುಸ್ ಎಂದಿನಂತೆ ನಡೆಯಲಿದೆ
  • ಮುಸ್ಲಿಮರು ದೆಹಲಿಯಲ್ಲಿ ಮುಕ್ತವಾಗಿ ಓಡಾಡಬಹುದು
  • ಮುಸ್ಲಿಮರು ತೆರವು ಮಾಡಿರುವ ಮತ್ತು ಹಿಂದೂ-ಸಿಖ್ಖರು ವಶಕ್ಕೆ ಪಡೆದಿರುವ ಮಸೀದಿಗಳನ್ನು ವಾಪಸ್ ಬಿಟ್ಟುಕೊಡುವುದು ಮತ್ತು ಮುಂದೆಯೂ ಮುಸ್ಲಿಮ್ ಪ್ರದೇಶಗಳನ್ನು ಆಕ್ರಮಿಸುವುದಿಲ್ಲ
  • ವಲಸೆಹೋಗಿ, ಬಳಿಕ ವಾಪಸ್ಸಾಗುವ ಮುಸ್ಲಿಮರಿಗೆ ಹಿಂದೂಗಳು ವಿರೋಧಿಸುವುದಿಲ್ಲ

ಆ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ, ಮೌಲಾನಾ ಆಜಾದ್ ಅವರಿಂದ ಕಿತ್ತಳೆಯ ರಸ ಸೇವನೆಯೊಂದಿಗೆ ಮಧ್ಯಾಹ್ನ ೧೨.೪೫ಕ್ಕೆ ನಿರಶನ ಅಂತ್ಯಗೊಳಿಸಿದರು. ಆ ನಡುವೆ, ಹಿಂದೂ ಮಹಾಸಭಾದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನಕ್ಕೆ ೫೫ ಕೋಟಿ ರು. ನೀಡುವ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತದೆ ಮತ್ತು ಮಹಾತ್ಮಾರ ಉಪವಾಸ ಸತ್ಯಾಗ್ರಹ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂಬ ಮಾತು ಕೇಳಿಬರುತ್ತದೆ. ದೆಹಲಿಯಲ್ಲಿ ಮುಸ್ಲಿಮರ ಆಸ್ತಿಪಾಸ್ತಿಗೆ ಭಾರಿ ಬೆಲೆ ತಂದುಕೊಟ್ಟಿದೆ ಮತ್ತು ಜಗತ್ತಿನಾದ್ಯಂತ ಹಿಂದೂಗಳು ಮತ್ತು ಸಿಖ್ಖರನ್ನು ಅಪಹಾಸ್ಯಕ್ಕೆ ಗುರಿಮಾಡಿದೆ ಎಂಬ ಆಕ್ರೋಶವೂ ವ್ಯಕ್ತವಾಗುತ್ತದೆ. ಜೊತೆಗೆ, ಗಾಂಧಿ ವಿರುದ್ಧ ಕೆಲವು ಅಪಮಾನಕರ ಮಾತುಗಳನ್ನೂ ಆಡಲಾಗುತ್ತದೆ ಮತ್ತು ಅವರೊಬ್ಬ ಸರ್ವಾಧಿಕಾರಿ ಮನೋಧರ್ಮದ ವ್ಯಕ್ತಿಯಾಗಿದ್ದು, ಹಿಟ್ಲರನಿಗಾದ ಗತಿಯೇ ಅವರಿಗೂ ಕಾದಿದೆ ಎಂದು ಕಿಡಿಕಾರಲಾಗುತ್ತದೆ. ಅದಾದ ಬಳಿಕ, ೧೯೪೮ರ ಜ.೧೯ರಂದು ಹಿಂದೂ ಮಹಾಸಭಾದ ಕಾರ್ಯದರ್ಶಿ ಅಶುತೋಷ್ ಲಹಿರಿ ಎಂಬುವರು ಒಂದು ಕರಪತ್ರ ಹೊರಡಿಸಿ, ಗಾಂಧಿಯವರ ಮನವೊಲಿಕೆಗಾಗಿ ನಾಲ್ಕು ಅಂಶಗಳ ಷರತ್ತಿಗೆ ಹಿಂದೂ ಮುಖಂಡರು ಬದ್ಧರಾಗಿಲ್ಲ ಹಾಗೂ ಆ ಷರತ್ತಿಗೆ ಸಹಿ ಹಾಕಿದವರನ್ನು ಒಪ್ಪಲಾಗದು ಎಂದು ಪ್ರಚಾರ ಮಾಡಿದರು.

ಅಷ್ಟೇ ಅಲ್ಲ, ಗಾಂಧೀಜಿಯವರ ನಿರಶನ ಮುಸ್ಲಿಮರಿಗೆ ಸಂಪೂರ್ಣ ಅನುಕೂಲ ಮಾಡಿಕೊಟ್ಟಿತೇ ವಿನಾ ಹಿಂದೂಗಳು ಮತ್ತು ಸಿಖ್ಖರಿಗೆ ಏನನ್ನೂ ಮಾಡಲಿಲ್ಲ ಎಂಬ ಅಸಮಾಧಾನ ಸಿಖ್ಖ್ ಮುಖಂಡರಲ್ಲೂ ಇತ್ತೆಂಬುದು ಪೊಲೀಸ್ ವರದಿಗಳಲ್ಲಿ ಉಲ್ಲೇಖವಾಗಿದೆ. ಅದೇ ಹೊತ್ತಿಗೆ, ಮುಸ್ಲಿಮರು ಜ.೧೯ ಮತ್ತು ೨೩ರಂದು ಎರಡು ಸಭೆಗಳನ್ನು ನಡೆಸಿ, ಗಾಂಧಿಯವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ನಿರ್ಣಯ ಕೈಗೊಂಡ ಬಗ್ಗೆಯೂ ಪೊಲೀಸರು ಪ್ರಸ್ತಾಪಿಸಿದ್ದರು.

ಈ ನಡುವೆ, ಕೆಲವು ದಿನಗಳ ಹಿಂದೆ; ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಲು ಪೂನಾ, ಬಾಂಬೆ ಮತ್ತಿತರ ಕಡೆ, ಕೆಲವು ಮಹಾರಾಷ್ಟ್ರಿಗರು ಮತ್ತು ಮದನ್ ಲಾಲ್ ಎಂಬ ಒಬ್ಬ ಪಂಜಾಬಿ ಒಂದು ಸಂಚು ರೂಪಿಸಿದ್ದರು. ಗೋಪಾಲ ಗೋಡ್ಸೆಯ ಸಾಕ್ಷ್ಯದ ಪ್ರಕಾರ, ಅವರಷ್ಟೇ ಅಲ್ಲದೆ, ಸಂಚುಕೋರರು ಹಲವರಿದ್ದರು ಎಂಬುದು ಗೊತ್ತಾದರೂ, ಅವರು ಯಾರು ಎಂಬುದನ್ನು ಆತ ಬಾಯಿ ಬಿಡಲಿಲ್ಲ. ತಮ್ಮ ಸಂಚಿನ ಭಾಗವಾಗಿ ಆ ಸಂಚುಕೋರರು, ಜ.೧೭ ಮತ್ತು ೧೯ರಂದು ವಿಮಾನ ಮತ್ತು ರೈಲಿನ ಮೂಲಕ ದೆಹಲಿಗೆ ಬಂದಿದ್ದರು ಹಾಗೂ ಹಿಂದೂ ಮಹಾಸಭಾ ಭವನ, ಹೋಟೆಲಿನಲ್ಲಿ ತಂಗಿದ್ದರು. ಆ ಪೈಕಿ ಕೆಲವರು, ೧೯೪೮ರ ಜ.೧೮ರಂದು ಸಂಜೆ ೫ಕ್ಕೆ ಬಿರ್ಲಾ ಹೌಸಿನಲ್ಲಿ ನಡೆದ ಗಾಂಧೀಜಿಯವರ ಪ್ರಾರ್ಥನಾ ಸಭೆಗೂ ಹಾಜರಾಗಿದ್ದರು. ಗಾಂಧಿಯವರ ಸಭೆಯಲ್ಲಿನ ಜನ ಮತ್ತು ಅ ಜಾಗದ ಕುರಿತು ಮಾಹಿತಿ ಪಡೆಯುವುದು ಅವರ ಉದ್ದೇಶವಾಗಿತ್ತು.

ಮಾರನೇ ದಿನ, ಜ.೧೯ರಂದು ಅವರಲ್ಲಿ ಕೆಲವರು ಹಿಂದೂ ಮಹಾಸಭಾ ಭವನದಲ್ಲಿ ವಾಸ್ತವ್ಯ ಪಡೆದರು; ಪೊಲೀಸರ ಮಾಹಿತಿ ಪ್ರಕಾರ ಅವರು, ನಾಥೂರಾಮ್ ಗೋಡ್ಸೆ. ಹಿಂದೂ ಮಹಾಸಭಾ ಕಾರ್ಯದರ್ಶಿಯಾಗಿದ್ದ ತನ್ನ ಸ್ನೇಹಿತರೊಬ್ಬರ ಹೆಸರಲ್ಲಿ ನೀಡಿದ ಚೀಟಿಯ ಆಧಾರದ ಮೇಲೆ ಈ ವಾಸ್ತವ್ಯದ ಅವಕಾಶ ಪಡೆದಿದ್ದರು ಎಂದು ಪೊಲೀಸರು ಪ್ರಕರಣದಲ್ಲಿ ಹೇಳಿದ್ದರೂ, ಆ ಅಂಶವನ್ನು ಅವರು ಸಾಬೀತು ಮಾಡಲಿಲ್ಲ. ಆ ಸಂಚುಕೋರರು ಅಂದು (ಜ.೧೯) ಹಿಂದೂ ಮಹಾಸಭಾ ಭವನದಲ್ಲೇ ಪರಸ್ಪರ ಭೇಟಿಯಾದರು ಮತ್ತು ಅಂದು ಮಧ್ಯಾಹ್ನ ಗಾಂಧಿ ಹತ್ಯೆಯ ರೂಪುರೇಷೆ ಸಿದ್ಧಪಡಿಸಿದರು. ಅಂದೇ, ಸಂಚುಕೋರರಲ್ಲಿ ಮೂವರಾದ ಗೋಡ್ಸೆ, ಕರ್ಕರೆ ಮತ್ತು ಆಪ್ಟೆ ಬಿರ್ಲಾ ಹೌಸ್‌ಗೆ ಹೋದರು. ಅಲ್ಲಿನ ಪೊಲೀಸ್ ವ್ಯವಸ್ಥೆಯನ್ನು ಮತ್ತು ಪ್ರಾರ್ಥನಾ ಮೈದಾನವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಅಂದು ಸಂಜೆ ೪ರ ಹೊತ್ತಿಗೆ ಮತ್ತೆ ಪ್ರಾರ್ಥನಾ ಮೈದಾನಕ್ಕೆ ಭೇಟಿ ನೀಡಿದರು. ಬಳಿಕ ರಾತ್ರಿ ೧೦ರ ಸುಮಾರಿಗೆ ಸಂಚುಕೋರರ ಪೈಕಿ ಐವರು ಹಿಂದೂ ಮಹಾಸಭಾ ಭವನದಲ್ಲಿ ಸಭೆ ಸೇರಿ, ತಮ್ಮ ಯೋಜನೆಯ ಬಗ್ಗೆ ಚರ್ಚಿಸಿದರು.

ಜ.೨೦ರಂದು ನಾಥೂರಾಂ ಗೋಡ್ಸೆಗೆ ಅನಾರೋಗ್ಯವಾಯಿತು. ಹಾಗಾಗಿ ಉಳಿದ ನಾಲ್ವರು ಸಂಚುಕೋರರು ಜಾಗದ ಮಾಹಿತಿಗಾಗಿ ಮತ್ತೆ ಬಿರ್ಲಾ ಹೌಸ್‌ಗೆ ಹೋದರು. ಅಲ್ಲಿಂದ ಬೆಳಗ್ಗೆ ೧೦.೩೦ರ ಹೊತ್ತಿಗೆ ಅವರು ಹಿಂದೂ ಮಹಾಸಭಾ ಭವನಕ್ಕೆ ವಾಪಸಾದರು. ಆ ದಿನ ಮಧ್ಯಾಹ್ನದ ಹೊತ್ತಿಗೆ, ಹಿಂದೂ ಮಹಾಸಭಾ ಭವನದ ಹಿಂಭಾಗದ ಕಾಡಿನಲ್ಲಿ ಅವರು ತಮ್ಮ ರಿವಾಲ್ವರ್‌ಗಳನ್ನು ಪರೀಕ್ಷಿಸಿದರು. ಮಧ್ಯಾಹ್ನ ಮರೀನಾ ಹೋಟೆಲಿನಲ್ಲಿ ಭೇಟಿಯಾಗಿ, ತಮ್ಮ ಯೋಜನೆಯ ಅಂತಿಮ ರೂಪುರೇಷೆ ಸಿದ್ಧಪಡಿಸಿದರು.

ಬಳಿಕ ಮಧ್ಯಾಹ್ನ ೪.೪೫ರ ಸುಮಾರಿಗೆ ಅವರು ಬಿರ್ಲಾ ಹೌಸ್‌ಗೆ ಹೋದರು. ಐವರು ಸಂಚುಕೋರರ ಪೈಕಿ ಒಬ್ಬನಾದ ಮದನ್‌ ಲಾಲ್‌, ಅಲ್ಲಿನ ಹಿಂಭಾಗದ ಗೋಡೆಯ ಬಳಿ ಬಾಂಬ್ (ಗನ್ ಕಾಟನ್ ಸ್ಲಾಬ್) ಸ್ಫೋಟಿಸಿದ. ಆತನನ್ನು ಸ್ಥಳದಲ್ಲೇ ಬಂಧಿಸಲಾಯಿತು ಮತ್ತು ಆತನನ್ನು ತಪಾಸಣೆ ನಡೆಸಿದಾಗ ಒಂದು ಹ್ಯಾಂಡ್ ಗ್ರೆನೇಡ್ (ಕೈಬಾಂಬ್) ಮತ್ತಿತರ ವಸ್ತುಗಳು ಸಿಕ್ಕವು. ಮದನ್‌ ಲಾಲ್ ಜೊತೆಗಿದ್ದ ಮೂವರು, ತಾವು ಬಂದಿದ್ದ ಟ್ಯಾಕ್ಸಿಯಲ್ಲಿ ಪರಾರಿಯಾಗಿ ಕನ್ನಾಟ್ ಪ್ಲೇಸ್‌ ತಲುಪಿದರು. ಪ್ರಾರ್ಥನಾ ಸಭೆಯಲ್ಲಿ ಇದ್ದ ಇತರ ಮೂವರು ಸಂಚುಕೋರರು ಕೂಡ ಜನಜಂಗುಳಿಯ ನಡುವೆ ಯಶಸ್ವಿಯಾಗಿ ಪರಾರಿಯಾದರು. ಈ ಹಂತದಲ್ಲಿ ಅವರು ಯಾರು, ಅವರ ಹೆಸರುಗಳೇನು ಎಂಬುದು ಮುಖ್ಯವಲ್ಲ. ಆ ಬಗ್ಗೆ ಮುಂದೆ ವಿವರಿಸಲಾಗುವುದು.

ಸಂಚುಕೋರರಲ್ಲಿ ಪ್ರಮುಖ ಇಬ್ಬರಾದ ಎನ್‌ ವಿ ಗೋಡ್ಸೆ ಮತ್ತು ಆಪ್ಟೆ ಅಂದು ಸಂಜೆಯೇ ರೈಲಿನ ಮೂಲಕ ದೆಹಲಿ ತೊರೆದರು. ದೆಹಲಿ ಮುಖ್ಯ ರೈಲು ನಿಲ್ದಾಣದಲ್ಲಿ ರೈಲು ಏರಿ, ಕಾನ್ಪುರ, ಅಲಹಾಬಾದ್ ಮೂಲಕ ಜ.೨೩ರ ಸಂಜೆ ಹೊತ್ತಿಗೆ ಮುಂಬೈ ತಲುಪಿದರು. ಮೂರನೇ ಸಂಚುಕೋರ ಗೋಪಾಲ ಗೋಡ್ಸೆ ಅಂದು ರಾತ್ರಿ ಫ್ರಾಂಟಿಯರ್ ಹಿಂದೂ ಹೋಟೆಲಿನಲ್ಲಿ ತಂಗಿ, ಮಾರನೇ ದಿನ (ಜ.೨೧) ಫ್ರಾಂಟಿಯರ್ ಮೇಲ್ ಗಾಡಿಯ ಮೂಲಕ ಬಾಂಬೆಗೆ ಪ್ರಯಾಣ ಬೆಳೆಸಿದ. ನಾಲ್ಕನೆಯವನಾದ ಕರ್ಕರೆ, ಜ.೨೩ರ ಮಧ್ಯಾಹ್ನದವರೆಗೂ ದೆಹಲಿಯಲ್ಲೇ ಇದ್ದ. ೨೩ರಂದು ಸ್ವಲ್ಪ ದೂರ ರೈಲು, ಸ್ವಲ್ಪ ದೂರ ಬಸ್ ಬಳಸಿ, ಮಧ್ಯೆ-ಮಧ್ಯೆ ಪ್ರಯಾಣ ನಿಲ್ಲಿಸುತ್ತ, ಜ.೨೬ರ ಬೆಳಗ್ಗೆ ಕಲ್ಯಾಣ್ ತಲುಪಿದ. ಇನ್ನುಳಿದ ಭಾಡ್ಗೆ ಮತ್ತು ಶಂಕರ್, ಜ.೨೦ರಂದು ದೆಹಲಿಯ ಮುಖ್ಯ ರೈಲು ನಿಲ್ದಾಣದಿಂದ ಬಾಂಬೆ ಎಕ್ಸ್‌ಪ್ರೆಸ್ ರೈಲು ಮೂಲಕ ಪ್ರಯಾಣ ಬೆಳೆಸಿ, ಜ.೨೨ರ ಬೆಳಗ್ಗೆ ಕಲ್ಯಾಣ್ ತಲುಪಿದರು. ಬಳಿಕ ಅಲ್ಲಿಂದ ಪೂನಾ ತಲುಪಿದರು. ಈ ರೀತಿಯಾಗಿ, ಇಡೀ ಸಂಚಿನ ಎಲ್ಲ ಪಾಲುದಾರರು ಯಾರ ಕಣ್ಣಿಗೂ ಬೀಳದೆ ದೆಹಲಿಯಿಂದ ಪಾರಾಗಿ ಬಾಂಬೆ ತಲುಪಿದರು.

ಜ.೨೦ರಂದು ಬಾಂಬ್ ಸ್ಫೋಟಗೊಂಡಿತು. ೨೧ರ ಬೆಳಗ್ಗೆ ದಿನಪತ್ರಿಕೆಗಳು ಬಾಂಬ್ ಘಟನೆಯ ಕುರಿತ ವರದಿಗಳನ್ನು ಹೊತ್ತುತಂದವು. ಅದರಲ್ಲೂ ಮುಖ್ಯವಾಗಿ, ದೆಹಲಿಯ ‘ದಿ ಟೈಮ್ಸ್ ಆಫ್‌ ಇಂಡಿಯಾ’, ‘ದಿ ಸ್ಟೇಟ್ಸ್‌ಮನ್’, ಬಾಂಬೆಯ ‘ದಿ ಬಾಂಬೆ ಕ್ರಾನಿಕಲ್‌’ ಪತ್ರಿಕೆಗಳು ಈ ವಿಷಯವನ್ನು ಪ್ರಮುಖವಾಗಿ ಪ್ರಕಟಿಸಿದ್ದವು. ಆದರೆ, ‘ದಿ ಹಿಂದೂಸ್ಥಾನ್ ಟೈಮ್ಸ್‌’ ಪತ್ರಿಕೆ ಬಾಂಬ್‌ ಘಟನೆಯ ಬದಲಿಗೆ ಕಾಶ್ಮೀರ ವಿಷಯವನ್ನು ಪ್ರಮುಖ ಸುದ್ದಿಯಾಗಿ ತೆಗೆದುಕೊಂಡಿತ್ತು. ‘ಅಗ್ರೀಡ್ ಫಾರ್ಮುಲಾ ಆನ್ ಕಾಶ್ಮೀರ್’ ಎಂಬ ಶೀರ್ಷಿಕೆಯೊಂದಿಗೆ ಆ ಸುದ್ದಿ ಬ್ಯಾನರ್ ಸುದ್ದಿಯಾಗಿತ್ತು. ನಂತರ ಕಾಲಂ ೪ ಮತ್ತು ೫ರಲ್ಲಿ ಮತ್ತೊಂದು ಸುದ್ದಿ, 'ಗಾಂಧಿ ಈಗರ್ ಟು ಗೋ ಟು ಪಾಕಿಸ್ತಾನ್' ಎಂಬ ಶೀರ್ಷಿಕೆಯಡಿ ಪ್ರಮುಖವಾಗಿ ಕಾಣಿಸಿಕೊಂಡಿತ್ತು. ಐದನೇ ಕಾಲಂನಲ್ಲಿ 'ಬಾಂಬ್ ಗೋಸ್ ಅಪ್ ನಿಯರ್ ಪ್ರೇಯರ್ ಗ್ರೌಂಡ್ಸ್‌’ ಎಂಬ ಕ್ಯಾಪ್ಷನ್ ಪ್ರಕಟವಾಗಿತ್ತು. ಅಲ್ಲದೆ, ಅದಕ್ಕೂ ಚಿಕ್ಕ ಅಕ್ಷರಗಳಲ್ಲಿ ‘ಗಾಂಧೀಜಿ ಡಿಡ್ ನಾಟ್ ಈವನ್ ಟರ್ನ್ ಹಿಸ್ ಹೆಡ್’ ಎಂಬ ಅಡಿಶೀರ್ಷಿಕೆಯೂ ಇತ್ತು!

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು| ಭಾಗ-೨ | ಮಹಾತ್ಮನ ನಿರಶನಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ

ಘಟನೆಗೆ ಸಂಬಂಧಿಸಿದಂತೆ ತನ್ನ ವಿಶೇಷ ಪ್ರತಿನಿಧಿ ಪಡೆದುಕೊಂಡ ಮಾಹಿತಿಯನ್ನಾಧರಿಸಿ ‘ದಿ ಟೈಮ್ಸ್ ಆಫ್‌ ಇಂಡಿಯಾ’ ವರದಿ ಪ್ರಕಟಿಸಿತ್ತು. ದೆಹಲಿಯ ‘ದಿ ಸ್ಟೇಟ್ಸ್‌ಮನ್’ ಕೂಡ, ‘ಮಹಾತ್ಮನ ಜೀವಕ್ಕೆ ಕುತ್ತು ತರುವ ಪ್ರಬಲ ಸಂಚು ನಡೆದಿತ್ತು’ ಎಂಬ ಕುರಿತ ವಿಶೇಷ ವರದಿ ಪ್ರಕಟಿಸಿತ್ತು. ಪೊಲೀಸ್ ಇನ್ಸ್‌ಪೆಕ್ಟರ್, “ಹಲವರನ್ನು ಕೊಲ್ಲುವಷ್ಟು ಶಕ್ತಿಶಾಲಿ ಬಾಂಬ್ ಅದಾಗಿದ್ದರೂ, ಅದನ್ನು ಸ್ಫೋಟಿಸಿದ ಉದ್ದೇಶ ಗೊಂದಲ ಹುಟ್ಟಿಸುವುದಾಗಿತ್ತು. ಕೈಬಾಂಬನ್ನು ಮಾತ್ರ ಮಹಾತ್ಮರ ಮೇಲೆಯೇ ಪ್ರಯೋಗಿಸಲು ಉದ್ದೇಶಿಸಲಾಗಿತ್ತು,” ಎಂದು ಹೇಳಿದ್ದರು. ಬಾಂಬ್ ಸ್ಫೋಟಿಸಿದ ವ್ಯಕ್ತಿ ಪೊಲೀಸರಿಗೆ ನೀಡಿರುವ ತನ್ನ ಹೇಳಿಕೆಯಲ್ಲಿ, “ಗಾಂಧಿಯವರ ಶಾಂತಿ- ಸೌಹಾರ್ದದ ಆಂದೋಲನ ತನಗೆ ಇಷ್ಟವಿರಲಿಲ್ಲ. ಹಾಗಾಗಿ ತಾನು ಆ ಕೃತ್ಯ ಎಸಗಿದೆ,” ಎಂದಿರುವುದಾಗಿ ಬಾಂಬೆಯ ‘ದಿ ಬಾಂಬೆ ಕ್ರಾನಿಕಲ್‌’ ವರದಿ ಹೇಳಿತ್ತು.

ಘಟನೆಯ ಕುರಿತು ಎರಡು ಪ್ರತ್ಯೇಕ ತನಿಖೆಗಳು ಆರಂಭವಾದವು. ಒಂದು; ಸಿಆರ್‌ಪಿಸಿ ಅಧ್ಯಾಯ ೧೪ರ ಪ್ರಕಾರ, ದೆಹಲಿಯಲ್ಲಿ. ಮತ್ತೊಂದು ಬಾಂಬೆಯಲ್ಲಿ. ಬಾಂಬೆಯ ತನಿಖೆ ಯಾವ ಕಾನೂನಿನಡಿ ನಡೆಯಿತು ಮತ್ತು ಅದು ನಿಜಕ್ಕೂ ಒಂದು ತನಿಖೆಯಾಗಿತ್ತೇ ಎಂಬುದೇ ಒಂದು ವಿವಾದಾತ್ಮಕ ಸಂಗತಿ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More