ಚುನಾವಣೆಗೆ ಹಣ ಹೂಡಲು ವಿದೇಶಿ ಕಂಪನಿಗಳಿಗೆ ಅನುವು; ರಾಜಕೀಯ ಪಕ್ಷಗಳ ಜಾಣನಡೆ!

ಇತ್ತೀಚೆಗೆ 2018ರ ಹಣಕಾಸು ಮಸೂದೆ ಮಂಡಿಸಲಾಯಿತು. ಅದರಲ್ಲಿ, ನೇರ ತೆರಿಗೆ, ಆದಾಯ ತೆರಿಗೆ ದರ, ಪರೋಕ್ಷ ತೆರಿಗೆ, ಬದಲಾದ ನಿಯಮಗಳು, ಅನೇಕ ತಿದ್ದುಪಡಿಗಳು, ಹೀಗೆ ವಿವಿಧ ಅಂಶಗಳನ್ನು ಒಳಗೊಂಡ 2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ಬದಲಾವಣೆ ತರಲು ಯತ್ನಿಸಲಾಗಿದೆ

ನೇರ ತೆರಿಗೆ, ಆದಾಯ ತೆರಿಗೆ ದರಗಳು, ಪರೋಕ್ಷ ತೆರಿಗೆ, ಬದಲಾದ ನಿಯಮಗಳು, ಅನೇಕ ತಿದ್ದುಪಡಿಗಳು, ಹೀಗೆ ವಿವಿಧ ಅಂಶಗಳನ್ನು ಒಳಗೊಂಡ 2018ರ ಹಣಕಾಸು ಮಸೂದೆಯನ್ನು ಸಚಿವ ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಿದರು. 102 ಪುಟಗಳಲ್ಲಿ ವಿವಿಧ ವಿಧಿಗಳು, ನಿಯಮಗಳನ್ನು ಪೋಣಿಸಿಟ್ಟ ವರದಿ ಅದು. ಆದರೆ, ಅದರಲ್ಲಿ ಹುದುಗಿದ್ದ ಒಂದು ವಾಕ್ಯ ಇಡೀ ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುವಂತಿದೆ. ಅದರ ಒಟ್ಟು ಸಾರ; ಚುನಾವಣೆಯಲ್ಲಿ ಆರ್ಥಿಕ ಸಹಾಯ ನೀಡಲು ವಿದೇಶಿ ಕಾರ್ಪೊರೆಟ್ ಕಂಪನಿಗಳಿಗೆ ಅನುವು ಮಾಡಿಕೊಡುವುದು.

2016ರ ಹಣಕಾಸು ಕಾಯ್ದೆಯ 236ನೇ ವಿಧಿಗೆ ತಿದ್ದುಪಡಿ ತರುವ ಉದ್ದೇಶವನ್ನು ಆ ವಾಕ್ಯ ಹೇಳುತ್ತದೆ. ಆ ಮೂಲಕ, 2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ಬದಲಾವಣೆ ತರಲು ಯತ್ನಿಸಲಾಗಿದೆ. ಜನಸಾಮಾನ್ಯರು ಕಷ್ಟಪಟ್ಟು ಅರ್ಥ ಮಾಡಿಕೊಳ್ಳಬೇಕಾದ ಆ ವಾಕ್ಯ ಹೀಗಿದೆ: “In the Finance Act, 2016, in section 236, in the opening paragraph, for the words, figures and letters ‘the 26th September, 2010’, the words, figures and letters ‘the 5th August, 1976’ shall be substituted."

ಈ ಸಣ್ಣ ವಾಕ್ಯ ಕೇವಲ ರಾಜಕೀಯ ದೇಣಿಗೆಗೆ ಸಂಬಂಧಿಸಿದುದಾಗಿಲ್ಲ. ಬದಲಿಗೆ, 1976ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಆಶಯಗಳನ್ನು ಅನಾಮತ್ತಾಗಿ ಗಾಳಿಗೆ ತೂರಿದೆ. 1976ರಷ್ಟು ಹಿಂದಿನ ಕಾಯ್ದೆಯನ್ನು ಈಗ ಬದಲಾಯಿಸುತ್ತಿರುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿಕೊಂಡರೆ ಹೊಸ ವಿಚಾರವೊಂದು ಬೆಳಕಿಗೆ ಬರುತ್ತದೆ. ‘ದಿ ಸ್ಕ್ರಾಲ್’ ಜಾಲತಾಣದ ವರದಿಯ ಪ್ರಕಾರ, 2010ಕ್ಕೂ ಮೊದಲಿನಿಂದಲೂ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ವಿದೇಶಿ ಕಂಪನಿಗಳಿಂದ ದೇಣಿಗೆ ಪಡೆಯುತ್ತಿದ್ದವು. ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 1976ರಷ್ಟು ಹಿಂದಿನ ಕಾಯ್ದೆಯನ್ನೇ ಬದಲಿಸಲು ನಿರ್ಧರಿಸಲಾಗಿದೆ.

ಸರ್ಕಾರದ ಈ ನಡೆಯನ್ನು ಅದನ್ನು ಪ್ರಶ್ನಿಸದ ವಿರೋಧ ಪಕ್ಷಗಳ ಜಾಣಮೌನವನ್ನು ‘ದಿ ಪ್ರಿಂಟ್’ ಜಾಲತಾಣ ಕಟುಶಬ್ದಗಳಿಂದ ಟೀಕಿಸಿದೆ. “ಈ ನಾಟಕ 2014ರಲ್ಲಿ ಆರಂಭವಾಯಿತು. ಬಿಜೆಪಿ ಮತ್ತು ಅದರ ಪ್ರಧಾನ ಎದುರಾಳಿ ಕಾಂಗ್ರೆಸ್ ವಿದೇಶಿ ದೇಣಿಗೆ ಪಡೆಯುವಲ್ಲಿ ಅಕ್ರಮ ಎಸಗಿವೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. 2010ರ ಕಾಯ್ದೆಯನ್ನು ಆಧರಿಸಿ ಲಂಡನ್ ಮೂಲದ ವೇದಾಂತ ಗಣಿ ಕಂಪನಿ ಮತ್ತಿತರರು ವಿವಿಧ ದೇಣಿಗೆಗಳನ್ನು ನೀಡುವುದು ನಿಯಮಬಾಹಿರ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು,” ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

ರೆಡ್‌ಹ್ಯಾಂಡ್ ಆಗಿ ಸಿಕ್ಕ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ದಂಡಿಸಬೇಕು ಎಂದು ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತೊಂದು ತಂತ್ರ ಹೂಡಿತು. 2016ರ ಮಸೂದೆಯಲ್ಲಿ ಒಂದು ವಾಕ್ಯವನ್ನು ಸೇರಿಸಿ, ವಿದೇಶಿ ದೇಣಿಗೆಯನ್ನು ಮರುವ್ಯಾಖ್ಯಾನ ಮಾಡಲು ಜೇಟ್ಲಿ ಅವಕಾಶ ಕಲ್ಪಿಸಿದರು. ಈ ನಿರ್ಧಾರ ಕೋರ್ಟ್ ಆದೇಶವನ್ನೇ ಮೂಲೆಗುಂಪು ಮಾಡಿತು.

2017ರ ಬಜೆಟ್ ಮಂಡನೆ ವೇಳೆಗೆ ಮತ್ತೊಂದಷ್ಟು ‘ಸುಧಾರಣೆ’ಗಳಾದವು. “ರಾಜಕೀಯ ಪಕ್ಷಗಳ ಹಣಕಾಸು ನಿರ್ವಹಣೆಯನ್ನು ಪಾರದರ್ಶಕಗೊಳಿಸಲಾಗುವುದು,” ಎಂದು ಹೇಳಿದ ವಿತ್ತ ಸಚಿವರು, ದಾನಿಗಳನ್ನು ಅನಾಮಧೇಯರನ್ನಾಗಿಡುವ ನಿರ್ಧಾರಕ್ಕೆ ಬಂದರು. ದಾನಿಗಳ ಹೆಸರು ನಮೂದಿಸದೆ ಹೋದರೆ ರಾಜಕೀಯ ಪಕ್ಷಗಳ ಹಣಕಾಸು ನಿರ್ವಹಣೆ ಪಾರದರ್ಶಕವಾಗಿ ಇರುವುದಾದರೂ ಹೇಗೆ ಎಂದು ‘ದಿ ವೈರ್’ ವ್ಯಂಗ್ಯವಾಡಿದೆ.

ವಿದೇಶಿ ದೇಣಿಗೆ ಪಡೆಯಲು ಪಕ್ಷಭೇದ ಮರೆತು ಬಿಜೆಪಿ ಮತ್ತು ಕಾಂಗ್ರೆಸ್ ಶ್ರಮಿಸುತ್ತಿರುವುದು ಈ ಮೂಲಕ ಸಾಬೀತಾಗಿದೆ. 2014ರಲ್ಲಿ ಹೈಕೋರ್ಟ್ ಆದೇಶವನ್ನು ಎರಡೂ ಪಕ್ಷಗಳು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದು, ವಿಚಾರಣೆ ಬಾಕಿ ಇದೆ. ರಾಜಕೀಯ ದೇಣಿಗೆಯ ಸ್ವರೂಪವನ್ನೇ ಬದಲಿಸಲು ಈ ಪಕ್ಷಗಳ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದು ದೇಶದ ಅಭಿವೃದ್ಧಿಗೆ ಧಕ್ಕೆ ತರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದ್ದು, 2017ರಲ್ಲಿ ಸಂಸತ್ತು ಕೈಗೊಂಡ ನಿರ್ಧಾರದಿಂದಾಗಿ ಕಾರ್ಪೊರೆಟ್ ಕಂಪನಿಗಳು ನೀಡುವ ದೇಣಿಗೆಗೆ ಇದ್ದ ಅಡೆತಡೆಗಳನ್ನೆಲ್ಲ ನಿವಾರಿಸಿರುವುದು ಕಂಡುಬಂದಿದೆ. ಇದು ಕಾಣದ ಕೈಗಳು ದೇಶದ ರಾಜಕೀಯದ ಮೇಲೆ ಹಿಡಿತ ಸಾಧಿಸುವ ಹುನ್ನಾರವಾಗಿ ತೋರುತ್ತಿದೆ.

ಇದನ್ನೂ ಓದಿ : ಆರ್ಥಿಕ ಆತಂಕಗಳ ನಡುವೆಯೂ ದಾವೋಸ್‌ನಲ್ಲಿ ಹರಿಯಲಿದೆ ಮತ್ತಷ್ಟು ಶಾಂಪೇನ್!

2018ರ ಮಸೂದೆ ಪ್ರಕಾರ, ಇನ್ನು ವಿದೇಶಿ ಮತ್ತು ದೇಶಿ ಕಂಪನಿಗಳು ಮುಕ್ತವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಹೀಗಾದಾಗ, ಮತದಾರರ ಒಲವು, ನಿಲುವುಗಳಿಗೆ ಬೆಲೆ ಇಲ್ಲದಂತಾಗಿ, ಅಕ್ರಮವಾಗಿ ಸಂಗ್ರಹಿಸಿದ ಹಣವೇ ದೇಶವನ್ನು ಆಳುವ ಪರಿಸ್ಥಿತಿ ಬರಬಹುದು.

2010ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ಕಾರ್ಪೊರೆಟ್ ದೇಣಿಗೆಗೆ ಅನುವು ಮಾಡಿಕೊಟ್ಟ ನಂತರ ಅಲ್ಲಿ ತಲೆದೋರಿದ ಆತಂಕಗಳು ಸಾಮಾನ್ಯವಾಗಿರಲಿಲ್ಲ. ಅಮೆರಿಕದ ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುವ ಮೂಲಕ ಕೆಲವೇ ಕೆಲವು ಶ್ರೀಮಂತರು ಆ ದೇಶದ ಮತದಾರರನ್ನು ಮೂಲೆಗುಂಪು ಮಾಡಬಹುದು ಎಂಬ ಚರ್ಚೆ ನಡೆದಿತ್ತು. ಈಗ ಭಾರತದ ಸರದಿ. ಅಲ್ಲಿನ ಆತಂಕ ಈಗ ಇಲ್ಲಿಯೂ ಮೂಡಿದೆ. ದೇಶದ ಎರಡು ಪ್ರಮುಖ ಪಕ್ಷಗಳ ಜಾಣನಡೆಯನ್ನು ಇತರ ಪಕ್ಷಗಳೂ ಪ್ರಶ್ನಿಸುತ್ತಿಲ್ಲ. ಇದನ್ನು ಅವುಗಳ ಜಾಣಮೌನ ಎನ್ನಬಹುದೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More