ಮಲ್ಯ, ರಾಫೇಲ್, ನ್ಯಾ.ಲೋಯಾ ಪ್ರಕರಣಗಳ ಬಗ್ಗೆ ಕೇಂದ್ರದ ಮೌನಕ್ಕೆ ಅರ್ಥವೇನು?

ವಿಜಯ್ ಮಲ್ಯ ಸಾಲದ ಮಾಹಿತಿ, ರಾಫೇಲ್ ಒಪ್ಪಂದ ಹಾಗೂ ಲೋಯಾ ಪ್ರಕರಣಗಳ ವಿವರಗಳನ್ನು ಕೊಡದೆ ಮೌನವಹಿಸಿರುವ ಕೇಂದ್ರ ಸರ್ಕಾರ ತನ್ನ ಕರ್ತವ್ಯದಿಂದ ನುಣುಚಿಕೊಳ್ಳುತ್ತಿರುವುದು ಕಂಡುಬಂದಿದೆ. ಇದು ಜನರ ಅಸಮಾಧಾನ ಹಾಗೂ ಸಂಶಯಗಳನ್ನು ಇಮ್ಮಡಿಗೊಳಿಸಿದೆ

ಉದ್ಯಮಿ ವಿಜಯ ಮಲ್ಯ ಅವರು ವಿವಿಧ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲದ ವಿವರಗಳು ತನ್ನ ಬಳಿ ಇಲ್ಲವೆಂದು ಹಣಕಾಸು ಸಚಿವಾಲಯವು ಕೆಂದ್ರ ಮಾಹಿತಿ ಇಲಾಖೆಗೆ ತಿಳಿಸಿದೆ. ಸಚಿವಾಲಯವು ಕೊಟ್ಟಿರುವ ಮಾಹಿತಿ ಅಸ್ಪಷ್ಟವಾಗಿವೆ ಎಂದು ಕೇಂದ್ರ ಮಾಹಿತಿ ಇಲಾಖೆ ತನ್ನ ಅಸಮಾಧಾನ ಹೊರಹಾಕಿದೆ.

ವಿಜಯ್ ಮಲ್ಯ ಅವರು ವಿವಿಧ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲದ ಬಗ್ಗೆ ವಿವರ ಕೇಳಿ ರಾಜೀವ್ ಕುಮಾರ್ ಎಂಬುವವರು ಮಾಹಿತಿ ಹಕ್ಕು ಖಾಯ್ದೆಯಡಿ ಹಣಕಾಸು ಸಚಿವಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ, ಹಣಕಾಸು ಸಚಿವಾಲಯವು ಸೂಕ್ತ ಮಾಹಿತಿ ನೀಡಿಲ್ಲವೆಂದು ತಿಳಿದುಬಂದಿದೆ. ಹಣಕಾಸು ಸಚಿವಾಲಯದ ಇಂತಹ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಆರ್ ಕೆ ಮಾಥೂರ್ ಅವರು, ಮಾಹಿತಿ ಹಕ್ಕು ಅರ್ಜಿಯನ್ನು ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

“ಹಣಕಾಸು ಸಚಿವಾಲಯವು ಮಲ್ಯ ಅವರಿಗೆ ವಿವಿಧ ಬ್ಯಾಂಕುಗಳಿಂದ ದೊರತ ಸಾಲದ ಮಾಹಿತಿ ತನ್ನ ಬಳಿ ಇಲ್ಲವೆಂದು ಈಗ ಹೇಳುತ್ತಿದೆ. ಆದರೆ, ಕಳೆದ ವರ್ಷ ಮಲ್ಯ ಅವರು ವಿವಿಧ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲದ ಬಗ್ಗೆ, ಅವರು ಬ್ಯಾಂಕುಗಳಿಗೆ ಒದಗಿಸಿದ ಭದ್ರತೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಹಣಕಾಸು ಸಚಿವಾಲಯವು ಮಾಹಿತಿ ನೀಡಿತ್ತು. ಆದರೆ, ಈಗ ಸರ್ಕಾರವು ನುಣಿಚಿಕೊಳ್ಳುವ ಕಾರ್ಯ ಮಾಡುತ್ತಿದೆ,” ಎಂದು ಮಾಥೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“2016ರ ಮಾ.17ರಂದು ವಿಜಯ್ ಮಲ್ಯ ಅವರಿಗೆ ನೀಡಲಾಗಿದ್ದ ಸಾಲದ ಬಗ್ಗೆ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ಅವರು, 2004ರಲ್ಲಿ ಮಲ್ಯ ಅವರಿಗೆ ಸಾಲ ನೀಡಲಾಗಿದ್ದು, ಇದನ್ನು 2008ರಲ್ಲಿ ಪರಿಶೀಲನೆಗೆ ಒಳಪಡಿಸಲಾಗಿತ್ತು. 2009ರಲ್ಲಿ ಮಲ್ಯ ಅವರಿಗೆ ನೀಡಲಾಗಿದ್ದ ₹8,040 ಕೋಟಿ ಸಾಲವನ್ನು ನಿಷ್ಕ್ರಿಯ ಸಾಲವೆಂದು (Non Performing Asset) ಘೋಷಿಸಲಾಗಿತ್ತು. ಆದರೆ, ನಿಷ್ಕ್ರಿಯವೆಂದು ಘೋಷಿಸಿದ್ದ ಸಾಲವನ್ನು 2010ರಲ್ಲಿ ಪುನರ್ ನವೀಕರಿಸಲಾಗಿದೆ ಎಂದು ಮಾಹಿತಿ ಕೊಟ್ಟಿದ್ದರು,” ಎಂದು ಮಾಥೂರ್ ಹೇಳಿದ್ದಾರೆ. 2017ರ ನ.17ರಲ್ಲಿ ನೋಟು ಅಪನಗದೀಕರಣದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ವಿಜಯ್ ಮಲ್ಯ ಸಾಲದ ಬಗ್ಗೆ ಅರುಣ್ ಜೇಟ್ಲಿ ಅವರು ಉಲ್ಲೇಖಿಸಿದ್ದನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು.

ರಾಫೇಲ್ ಒಪ್ಪಂದದ ಗುಟ್ಟನ್ನೂ ಬಿಟ್ಟುಕೊಡದ ಕೇಂದ್ರ ಸರ್ಕಾರ

60 ಸಾವಿರ ಕೋಟಿ ರುಪಾಯಿ ಮೊತ್ತದ ರಾಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಒಪ್ಪಂದದ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದವು. ಆದರೆ, ಇದಕ್ಕೆ ಸೊಪ್ಪು ಹಾಕದ ಕೇಂದ್ರ ಸರ್ಕಾರ, ರಾಫೇಲ್ ಒಪ್ಪಂದದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಲಿಲ್ಲ. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, “ರಾಫೇಲ್ ಒಪ್ಪಂದದ ಪ್ರಕಾರ ಯಾವುದೇ ಮಾಹಿತಿಯನ್ನು ಹೊರಹಾಕುವಂತಿಲ್ಲ,” ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕರು, “ಯುಪಿಎ ಅಧಿಕಾರದಲ್ಲಿದ್ದಾಗ ರಾಫೇಲ್ ಒಪ್ಪಂದದ ಬಗ್ಗೆ ಆದ ಪ್ರಸ್ತಾಪದಲ್ಲಿ ಇಂತಹ ಯಾವುದೇ ನಿರ್ಬಂಧನೆಗಳು ಇರಲಿಲ್ಲ,” ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರಕ್ಷಣಾ ಸಚಿವಾಲಯ, “ವಿರೋಧ ಪಕ್ಷಗಳ ನಾಯಕರ ಬೇಡಿಕೆಗಳು ಅವಾಸ್ತವಿಕತೆಯಿಂದ ಕೂಡಿವೆ. ರಾಷ್ಟ್ರೀಯ ಭದ್ರತೆಯಂಥ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ,” ಎನ್ನುವ ಮೂಲಕ ಕೇಂದ್ರ ಸರ್ಕಾರವು ನುಣುಚಿಕೊಳ್ಳುವ ಕೆಲಸ ಮಾಡಿತು.

ಇದನ್ನೂ ಓದಿ : ಲೋಯಾ ಪ್ರಕರಣ | ತನಿಖೆಗೆ ಆಗ್ರಹಿಸಿರುವ ಸಂಸದರ ಮನವಿಯಲ್ಲೇನಿದೆ?

ನ್ಯಾ.ಲೋಯಾ ಪ್ರಕರಣದ ಬಗ್ಗೆಯೂ ಮೌನ

‘ಕಾರವಾನ್’ ಪತ್ರಕೆಯು ನ್ಯಾ.ಲೋಯಾ ಸಾವಿನ ಸುತ್ತ ತನಿಖಾ ವರದಿಯೊಂದನ್ನು ಪ್ರಕಟಿಸಿದ ನಂತರ ಈ ವಿಷಯ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ವಿಚಾರಣೆಯಲ್ಲಿ ಬಾಂಬೆ ಹೈಕೋರ್ಟ್‌ನ ಕಾರ್ಯವೈಖರಿಯ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿದ್ದವು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಮುಖ ಆರೋಪಿಯಾಗಿರುವ ಪ್ರಕರಣದ ವಿಷಯವಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಾಲ್ವರು ನ್ಯಾಯಮೂರ್ತಿಗಳು ಐತಿಹಾಸಿಕ ಪತ್ರಿಕಾಗೋಷ್ಠಿ ನಡೆಸಿದ್ದರು. ನ್ಯಾ.ಲೋಯಾ ಪ್ರಕರಣದ ತನಿಖೆಯನ್ನು ಸ್ವತಂತ್ರವಾಗಿ ನಡೆಸುವಂತೆ ವಿವಿಧ ಪಕ್ಷಗಳಿಗೆ ಸೇರಿದ 114 ಸಂಸದರು ರಾಷ್ಟ್ರಪತಿಗಳಿಗೆ ಮನವಿಯನ್ನೂ ಸಲ್ಲಿಸಿದ್ದರು.

ಇಷ್ಟೆಲ್ಲ ಬೆಳವಣಿಗಗಳ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡದ ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ಮೌನ ಈಗ ಪ್ರಶ್ನಾರ್ಹವಾಗಿದೆ. ದೇಶಾದ್ಯಂತ ಚರ್ಚೆಗೀಡಾಗಿರುವ ಈ ಎಲ್ಲ ಪ್ರಕರಣಗಳ ಬಗ್ಗೆ ಪ್ರಧಾನಿ ಮೋದಿಯವರಾಗಲೀ, ಸಂಬಂಧಪಟ್ಟವರಾಗಲೀ ಮಾತನಾಡದಿರುವುದು ಕೇಂದ್ರ ಸರ್ಕಾರದ ಯೋಜಿತ ನಡವಳಿಕೆಗಳ ಬಗೆಗಿರುವ ಸಂಶಯಗಳು ಇಮ್ಮಡಿಗೊಳ್ಳುವಂತಾಗಿದೆ. ಹಕ್ಕನ್ನು ರಕ್ಷಿಸಬೇಕಿದ್ದ ಸರ್ಕಾರ ಹೀಗೆ ನಡೆದುಕೊಳ್ಳುತ್ತಿರುವುದು ಸಾಮಾನ್ಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದೇ ಹೇಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More