ಮಾಂಸಾಹಾರ ನಿಷೇಧದ ಹಿಂದಿದೆಯೇ ಶ್ರೇಷ್ಠ-ಕನಿಷ್ಠ ತಾರತಮ್ಯ ಮನಸ್ಥಿತಿ?

ಶಿವರಾತ್ರಿ ಶ್ರೇಷ್ಠ ಹಬ್ಬ, ಮಡಿಯಿಂದ ಉಪವಾಸ ಇರಬೇಕು, ಮಾಂಸಾಹಾರ ಸೇವನೆ ನಿಷಿದ್ಧ ಎಂದಾದರೆ; ಮಾಂಸಾಹಾರ ಕನಿಷ್ಠ, ಮಾಂಸವನ್ನು ನೈವೇದ್ಯ ಇಟ್ಟು, ಅದನ್ನೇ ಪ್ರಸಾದವೆಂದು ಸೇವಿಸುವ ಶಿವನ ಆರಾಧಕರು ಕನಿಷ್ಠರು ಮತ್ತು ಮೈಲಿಗೆಯವರು ಎಂದು ಅರ್ಥವೇ?

ಸರ್ಕಾರ ಯಾವುದೇ ಕಾನೂನು- ನಿಯಮಗಳನ್ನು ರೂಪಿಸಿದರೆ ಅವು ಜನ ಪಾಲನೆಗೆ ಅರ್ಹವಾಗಿರಬೇಕು, ಕಾರ್ಯಕಾರಣ ಸಂಬಂಧ ಅರ್ಥಪೂರ್ಣವಾಗಿರಬೇಕು. ಯಾರದೋ ಒತ್ತಾಯಕ್ಕೆ,ಇನ್ಯಾರದೋ ಮರ್ಜಿಗೆ, ಸಮುದಾಯವೊಂದರ ಸಮಾಧಾನಕ್ಕೆ ಕಾನೂನು ರೂಪಿತಗೊಂಡರೆ, ಉಳಿದವರ ಪಾಲಿಗದು ಹೇರಿಕೆ ಎನ್ನಿಸದಿರದು. ಹೀಗೆ ರೂಪಿತವಾದ ಕಾನೂನನ್ನು ಯಾರು, ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎನ್ನುವುದಕ್ಕಿಂತ ವಿಪರ್ಯಾಸಗಳೇ ಅದರಲ್ಲಿ ಎದ್ದುಕಾಣುತ್ತವೆ.

ಮಹಾಪುರುಷರ ಜಯಂತಿ, ವಿಶೇಷ ಹಬ್ಬದ ದಿನಗಳಲ್ಲಿ ರಾಜ್ಯದ ಎಲ್ಲಾ ನಗರ, ಪಟ್ಟಣಗಳಲ್ಲಿ ಮಾಂಸ ಮಾರಾಟ ನಿಷೇಧಗೊಳಿಸಿ ಆಯಾ ಸ್ಥಳೀಯ ಸಂಸ್ಥೆಗಳು ಹೊರಡಿಸುವ ಆದೇಶ ಕೂಡ ಇದೇ ಬಾಬ್ತಿಗೆ ಸೇರುವಂತದ್ದು. ಈಗ, ಮಹಾಶಿವರಾತ್ರಿಯ (ಫೆ.೧೩) ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆಯ ಆಯಾ ಸ್ಥಳೀಯ ಸಂಸ್ಥೆಗಳು, “ನಗರ-ಪಟ್ಟಣ ವ್ಯಾಪ್ತಿಯ ಕುರಿ, ಮೇಕೆ ಕಸಾಯಿಖಾನೆ, ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಮುಚ್ಚಲಾಗುತ್ತದೆ. ಅಂದು ಎಲ್ಲ ರೀತಿ ಮಾಂಸದ ವ್ಯಾಪಾರವನ್ನು ಕಡ್ಡಾಯ ನಿಷೇಧಿಸಲಾಗಿದೆ,’’ ಎಂದು ಆದೇಶ ಹೊರಡಿಸಿವೆ.

ಇದೇನೂ ಇದೇ ಮೊದಲ ಬಾರಿ ಹೊರಡಿಸುತ್ತಿರುವ ಆದೇಶವಲ್ಲ. ಅಧಿಕಾರಿಗಳ ಪ್ರಕಾರ ೧೩ ವರ್ಷದಿಂದ ಶಿವರಾತ್ರಿ ದಿನ ಮಾಂಸ ಮಾರಾಟ ನಿಷೇಧವಿದೆ. ಗಾಂಧಿ ಜಯಂತಿ, ಸರ್ವೋದಯ ದಿನ ಸಹಿತ ಕೆಲವು ದಿನಕ್ಕೆ ಸೀಮಿತ ನಿಷೇಧ ಆದೇಶವು ಕ್ರಮೇಣ ಹೆಚ್ಚಿ, ಮಹಾಶಿವರಾತ್ರಿ, ಶ್ರೀರಾಮನವಮಿ, ಮಹಾವೀರ ಜಯಂತಿ, ಬುದ್ಧ ಪೂರ್ಣಿಮೆ, ಕೃಷ್ಣ ಜನ್ಮಾಷ್ಠಮಿ, ಗಣೇಶ ಚತುರ್ಥಿ ಮತ್ತು ಸೇಂಟ್ ವಾಸವಾನಿ ಜಯಂತಿ ಸಹಿತ ೯ ದಿನಕ್ಕೆ ವಿಸ್ತರಿಸಿದೆ. ಸ್ಥಳೀಯ ಸಂಸ್ಥೆಗಳು ಅಲ್ಲಲ್ಲಿನ ಆಚರಣೆಗಳನ್ನು ಆಧರಿಸಿ ನಿಷೇಧ ಆದೇಶ ಹೊರಡಿಸುವುದರಿಂದ ಈ ಪಟ್ಟಿಗೆ ಇನ್ನಷ್ಟು ಸೇರ್ಪಡೆ ಆಗುತ್ತಲೇ ಇರುತ್ತದೆ. ಈ ಸಂಪ್ರದಾಯ ಬಿಜೆಪಿ ಕಾಲದಲ್ಲಿ ಹೆಚ್ಚಿದ್ದು ಹೌದಾದರೂ, ಉಳಿದ ಪಕ್ಷಗಳ ನೇರ-ಪರೋಕ್ಷ ಕೊಡುಗೆ ಕಡಿಮೆಯೇನಲ್ಲ. ಅಂಬೇಡ್ಕರ್ ಮತ್ತು ಬಸವ ಜಯಂತಿ ದಿನದಂದೂ ನಿಷೇಧ ಮಾಡುವ ಪ್ರಯತ್ನ ನಡೆದು, ವಿರೋಧದ ನಂತರ ಕೈ ಬಿಡಲಾಯಿತು.

ಗಾಂಧಿ, ಮಹಾವೀರ ಅಹಿಂಸೆಯ ಪ್ರಬಲ ಪ್ರತಿಪಾದಕರು. ಅವರ ಜನ್ಮದಿನದಂದು ಮಾಂಸ ಮಾರಾಟ ನಿಷೇಧ ಮಾಡಿದರೆ ಅದಕ್ಕೊಂದು ಅರ್ಥ. ಆದರೆ, ಮಹಾಶಿವರಾತ್ರಿಯಂದು ನಿಷೇಧ ಎಷ್ಟು ಸರಿ; ಔಚಿತ್ಯವೇನು ಎನ್ನುವುದು ಕೆಲವರ ಪ್ರಶ್ನೆ. ಶಿವರಾತ್ರಿ ಹಿನ್ನೆಲೆಯಲ್ಲಿ ಔಚಿತ್ಯ-ಪ್ರಶ್ನೆ ಕುರಿತ ಚರ್ಚೆ ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಶಿವ ಅವೈದಿಕ ಪರಂಪರೆಯ ದೇವರು. ಭಕ್ತನಾದ ಬೇಡರ ಕಣ್ಣಪ್ಪನು ತಾನು ಭೇಟೆಯಾಡಿ ತಂದ ಮೊಲವನ್ನೇ ನೈವೇದ್ಯ ನೀಡಿದ; ಅದನ್ನು ಶಿವ ಸ್ವೀಕರಿಸಿದ ಎನ್ನುವ ಪುರಾಣವನ್ನು ಶ್ರದ್ಧೆ, ಭಕ್ತಿಯಿಂದ ಕೇಳುತ್ತೇವೆ. ಅಂಥ ಶಿವನ ಹಬ್ಬದಂದು ಮಾಂಸಾಹಾರ ನಿಷೇಧ ಎಷ್ಟರ ಮಟ್ಟಿಗೆ ಸರಿ ಎನ್ನುವುದು ಅನೇಕರ ಪ್ರಶ್ನೆ.“ ಭಕ್ತಿ,ನಂಬಿಕೆ ವಿಷಯಗಳನ್ನು ಹೀಗೆ ಕಾನೂನು ಅಂಕುಶಕ್ಕೆ ಸಿಲುಕಿಸುವುದು ಅಪಾಯಕಾರಿ,’’ಎಂದೂ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ,ಅಂಬೇಡ್ಕರ್‌ ಜಯಂತಿ ದಿನದಂದು ಮಾಂಸ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. “ಅಂಬೇಡ್ಕರ್‌ ಮಾಂಸಾಹಾರ ಸೇವನೆಯನ್ನು ಯಾವತ್ತೂ ವಿರೋಧಿಸಿದವರಲ್ಲ. ಮಾಂಸದ ಮೂಲಕ ಕಡಿಮೆ ಖರ್ಚಿನಲ್ಲಿ ಬಡವರಿಗೆ ಪೌಂಷ್ಟಿಕಾಂಶಭರಿತ ಆಹಾರ ದೊರೆಯುತ್ತದೆಂದೂ ಪ್ರತಿಪಾದಿಸಿದ್ದರು. ಅವರ ನೇತೃತ್ವದಲ್ಲಿ ರೂಪಿತ ಸಂವಿಧಾನವು ಪ್ರತಿ ವ್ಯಕ್ತಿಗೆ ಆಹಾರದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದೆ. ಅವರ‌ ಜನ್ಮ ದಿನದಂದು ಮಾಂಸ ಮಾರಾಟ ನಿಷೇಧಿಸುವುದರ ಹಿಂದೆ, ಅವರು ಮಾಂಸಾಹಾರಕ್ಕೆ ವಿರುದ್ಧವಾಗಿದ್ದರೆನ್ನುವ ಹುಸಿಯನ್ನು ಸ್ಥಾಪಿತಗೊಳಿಸುವ ಷಡ್ಯಂತ್ರವಿದೆ,’’ ಎಂದು ಹಲವರು ಆಕ್ಷೇಪಿಸಿದ್ದರು. “ಸಂವಿಧಾನ ಬಾಹಿರ ಆದೇಶವನ್ನು ಹಿಂಪಡೆಯಬೇಕು,” ಎಂದು ಆಗ್ರಹಿಸಿ ದಲಿತ, ಪ್ರಗತಿಪರ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಸರ್ಕಾರ ಮಣಿದಿದ್ದರಿಂದ ನಿಷೇಧ ಒಂದು ವರ್ಷಕ್ಕೆ ಸೀಮಿತವಾಯಿತು.

ಈ ಮಧ್ಯೆ, ಒಂದೆಡೆ ಆಹಾರವನ್ನು ‘ಸಂಸ್ಕೃತಿ’ ಎನ್ನುವುದು, ಇನ್ನೊಂದೆಡೆ ನಿರ್ದಿಷ್ಟ ಸಮುದಾಯಗಳು ಸೇವಿಸುವ ಆಹಾರವನ್ನು ‘ಮೈಲಿಗೆ’ಯಂತೆ, ನಿಕೃಷ್ಟ ಎನ್ನುವಂತೆ ನೋಡುವುದು ಹೊಸ ಹೊಸ ಅವತಾರದಲ್ಲಿ ವ್ಯಾಪಿಸುತ್ತಿದೆ. ಕೆಲವು ದಿನ, ವಾರ ಮತ್ತು ಮಾಸಗಳಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಮಾಂಸ ತಿನ್ನುವವರೇ ಅದನ್ನು, ಮೈಲಿಗೆ ಪದಾರ್ಥದಂತೆ ನೋಡುತ್ತಾರೆ ಅಥವಾ ಹಾಗೆಂದು ಅವರನ್ನು ನಂಬಿಸಲಾಗಿದೆ. ನಂಬಿಕೆಯೋ, ಸೃಷ್ಟಿತ ಭಯ ಕಾರಣವೋ ಮಾಂಸದ ಅಡುಗೆಗೆ ಹೊರ-ಒಲೆ ಹೂಡುವುದು, ಮಾಂಸ ಸೇವನೆ ನಂತರ ಸ್ನಾನ ಮಾಡಿ ಮಡಿಯಾಗುವುದು, ಕೆಲವು ವಾರದಂದು ಸ್ವಯಂ ನಿಷೇಧ ಹೇರಿಕೊಳ್ಳುವುದು ನಡೆದೇ ಇದೆ. ಅದೇನಿದ್ದರೂ, ಮಾಂಸಾಹಾರದ ನಿರಂತರ ಸೇವನೆ ಆರೋಗ್ಯಕ್ಕೆ ಒಳಿತಲ್ಲ ಎನ್ನುವ ಕಾರಣಕ್ಕಾಗಿ ಸ್ವಯಂ ಬಿಡುವು ಒಪ್ಪಿತ ಕೂಡ.

ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಸ್ಪಂದಿಸಿದ ಗೆಳೆಯರೊಬ್ಬರು, “ಯುಗಾದಿ, ಶಿವರಾತ್ರಿ ಸಹಿತ ಎಲ್ಲ ಹಬ್ಬಗಳಂದು ಮತ್ತು ಸೋಮವಾರ, ಗುರುವಾರ, ಶನಿವಾರ ಯಾವ ಕಾರಣಕ್ಕೂ ನಮ್ಮ ಮನೆಯಲ್ಲಿ ಮಾಂಸ ಮಾಡಲ್ಲ. ಗಾಂಧಿ ಜಯಂತಿ ಸಹಿತ ಉಳಿದ ಯಾವುದೇ ದಿನ ಸರ್ಕಾರ ಏನೇ ಆದೇಶ ಹೊರಡಿಸಿದರೂ,ತಿನ್ನದೆ ಇರುವುದಿಲ್ಲ,’’ ಎಂದು ಹೇಳಿದರು. ಆಹಾರ ತಮ್ಮ ಮನೆಯ ವೈಯಕ್ತಿಕ ವಿಷಯ, ಸರ್ಕಾರದ ಕಟ್ಟಪ್ಪಣೆಗಳಿಗಿಲ್ಲಿ ಜಾಗವಿಲ್ಲ ಎನ್ನುವುದು ಅವರ ಮಾತಿನ ಸಾರ. ಹಬ್ಬಗಳಲ್ಲಿ ಕಡ್ಡಾಯ ಸಸ್ಯಾಹಾರ ಬಳಸುವ ಜನ, ನಂತರದ ಒಂದೆರಡು ದಿನಕ್ಕೆ, ಸಿಹಿ ಸಂಭ್ರಮ ನಾಚುವಂತೆ ‘ಖಾರ’ದ ಊಟ ಸವಿಯುತ್ತಾರೆ. ಆದರೆ, ಕೆಲವು ಧರ್ಮಿಯರಿಗೆ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಿಗೆ ಮಾಂಸಾಹಾರವೇ ದೈನಂದಿನ ಆಹಾರ ಕ್ರಮ. ಅವರು ಆರಾಧಿಸುವ ದೈವಿಕ ಆಚರಣೆಗಳಲ್ಲಿ ಅದೇ ನೈವೇದ್ಯವೂ ಹೌದು.

ಹಳೇ ಮೈಸೂರು ಪ್ರದೇಶ ಸಹಿತ ಅನೇಕ ಕಡೆಗಳಲ್ಲೀಗ ಶಕ್ತಿ ದೇವತೆ ಮಾರಿಯ ಹಬ್ಬ ಶುರುವಾಗಿದೆ. ಸೋಮವಾರ ಸಿಹಿ ಮಾಡಿರುವ ಜನರು, ಮಂಗಳವಾರ ಮಾಂಸದೂಟ ಮಾಡುವುದು ವಾಡಿಕೆ. ಆದರೆ,ಸ್ಥಳೀಯ ಸಂಸ್ಥೆಗಳ ನಿಷೇಧ ಆದೇಶ ಬಾಡೂಟಕ್ಕೆ ಹೊಡೆತ ಕೊಟ್ಟಂತಿದೆ. ೧೩ ವರ್ಷದಿಂದ ನಿಷೇಧ ಆದೇಶ ಜಾರಿಯಲ್ಲಿದ್ದರೂ,ಈ ಬಾರಿ ವಿಶೇಷವಾಗಿ ಚರ್ಚೆಗೆ ಬರಲು ಇದೂ ಒಂದು ಕಾರಣ. “ಆದೇಶ ಏನೇ ಇರಲಿ. ನಾವು ಎಂದಿನಂತೆ ನಮ್ಮ ಹಬ್ಬವನ್ನು ಮಾಡುವವರೇ,’’ ಎಂದು ಕೊಪ್ಪಲು ನಿವಾಸಿಯೊಬ್ಬರು ಹೇಳಿದರೆ, “ಶಿವರಾತ್ರಿ ದಿನ ಮಾಂಸ ತಿನ್ನೋದುಂಟ. ಅದೆಲ್ಲ ಮರುದಿನಕ್ಕೆ,’’ ಎಂದರು ಇನ್ನೊಬ್ಬರು.

ಇದನ್ನೂ ಓದಿ : ಸಿರಿಧಾನ್ಯ ಮೇಳದಲ್ಲಿ ಸಿಕ್ಕ ಆಹಾರ ತಜ್ಞ ಕೆ ಸಿ ರಘು ಹೇಳಿದ್ದೇನು?

ಯಾವ ಆಹಾರ ತಿನ್ನಬೇಕು, ಯಾವುದು ಬೇಡ, ಯಾವುದನ್ನು ಯಾವಾಗ ತಿನ್ನಬೇಕು ಎನ್ನುವುದು ಅವರವರ ಭಾವಕ್ಕೆ-ಬಕುತಿಗೆ ಬಿಟ್ಟ ವಿಷಯ. ಆಹಾರ ಸ್ವಾತಂತ್ರ್ಯವನ್ನು ಹಂಗಿಸುವ, ಹತ್ತಿಕ್ಕುವ, ನಿರ್ಬಂಧಿಸುವ ಅಧಿಕಾರ ಯಾರಿಗೂ ಇಲ್ಲ ಎನ್ನುವುದನ್ನು ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳೇ ಮತ್ತೆ ಮತ್ತೆ ಹೇಳಿವೆ. ಆದಾಗ್ಯೂ ಬಹುಸಂಸ್ಕೃತಿ, ಆಚರಣೆ,ನಂಬಿಕೆ,ಆಹಾರ ಸಂಸ್ಕೃತಿ ಇರುವ ಈ ನೆಲದಲ್ಲಿ ಏಕ ಸಂಸ್ಕೃತಿ-ಏಕ ಆಹಾರ ಕ್ರಮವೇ ಶ್ರೇಷ್ಠ ಎಂದು ಸಾರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಮಾಂಸಾಹಾರ ಮೈಲಿಗೆ, ಹೊಲಸು ಎಂದು ಬಿಂಬಿಸಿದ ಮತ್ತು ತಿನ್ನುವ ಜನರನ್ನು ಹಾಗೆ ನಂಬಿಸಿದ್ದ ಹಿತಾಸಕ್ತಿಗಳೇ ಕಾನೂನು ರೂಪದಲ್ಲಿ ಅದನ್ನೇ ಹೇಳುತ್ತಿವೆ ಮತ್ತು ಹೇರುತ್ತಿವೆ. ಅಲ್ಲದೆ, ಕೇಡನ್ನೇ ಉಸಿರಾಡುತ್ತಿರುವ ವರ್ತಮಾನದಲ್ಲಿ ಹಿಂಸೆಯ ಅರ್ಥವ್ಯಾಪ್ತಿ ಬಹುವಿಸ್ತಾರವಾಗಿದೆ. ಮಾಂಸ ಮಾರಾಟ,ಮಾಂಸಾಹಾರ ಸೇವನೆಗಷ್ಟೆ ಅದನ್ನು ಸೀಮಿತಗೊಳಿಸುವುದರಲ್ಲಿಯೂ ಷಡ್ಯಂತ್ರ ಇದ್ದಂತಿದೆ.

ಮತ್ತೊಂದು ಶಿವರಾತ್ರಿ ಎದುರಿರುವ ಈ ಸಂದರ್ಭದಲ್ಲಿ ಹಿತಾಸಕ್ತರೆಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆ: ಶಿವರಾತ್ರಿ ಶ್ರೇಷ್ಠ ಹಬ್ಬ, ಮಡಿಯಿಂದ ಉಪವಾಸ ಇರಬೇಕು. ಮಾಂಸಾಹಾರ ಸೇವನೆ ನಿಷಿದ್ಧ ಎಂದಾದರೆ; ಮಾಂಸಾಹಾರ ಕನಿಷ್ಠ. ಮಾಂಸವನ್ನು ನೈವೇದ್ಯ ಇಟ್ಟು, ಅದನ್ನೇ ಪ್ರಸಾದವೆಂದು ಸೇವಿಸುವ ಶಿವನ ಆರಾಧಕರು ಕನಿಷ್ಠರು, ಮೈಲಿಗೆಯವರು ಎಂದು ಅರ್ಥವೇ? ಉತ್ತರವನ್ನು ಅವರವರ ವಿವೇಚನೆಗೆ ಬಿಟ್ಟುಬಿಡೋಣ. ಆದರೆ, ಸರ್ವಜನರನ್ನೂ ಒಳಗೊಳ್ಳಬೇಕಾದ, ಸರ್ವರ ಭಾವನೆಗಳನ್ನು ಆಧರಿಸಬೇಕಾದ, ಎಲ್ಲ ಜನಸಮುದಾಯಗಳ ಆಚರಣೆ, ನಂಬಿಕೆ, ಆಹಾರ ಕ್ರಮವನ್ನು ಸಮಾನವಾಗಿ ಗೌರವಿಸಬೇಕಾದ ಸರ್ಕಾರವು ಕೆಲವು ಜಾತಿ, ಧರ್ಮಗಳ ನಂಬಿಕೆ, ಶ್ರದ್ಧೆಯನ್ನಷ್ಟೆ ಮುಖ್ಯವೆಂದು ಪರಿಗಣಿಸಿ ಸಾರ್ವತ್ರಿಕ ಆದೇಶ ಹೊರಡಿಸುವ ಮೂಲಕ, ತಿನ್ನುವ ಆಹಾರದಲ್ಲಿ ಶ್ರೇಷ್ಠ-ಕನಿಷ್ಠಗಳ ತರತಮವನ್ನು ಅಧಿಕೃತಗೊಳಿಸುವುದು ಅಕ್ಷಮ್ಯ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More