ಮಠದಲ್ಲೇ ಅಭ್ಯರ್ಥಿಗಳನ್ನು ಇರಿಸುವ ಶಿವಾಚಾರ್ಯ ಶ್ರೀಗಳ ಹೇಳಿಕೆ ಸಮಂಜಸವೇ?

ಮಠದಲ್ಲೇ ಅಭ್ಯರ್ಥಿಗಳನ್ನು ಇರಿಸಿ ಚುನಾವಣೆ ನಡೆಸುವ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಯೋಗ ಯಶಸ್ವಿಯಾಗಿಬಿಟ್ಟರೆ, ಮುಂದೆ ಎಲ್ಲ ಕ್ಷೇತ್ರಗಳಲ್ಲೂ ಇದೇ ಪ್ರಯೋಗ ಜಾರಿಗೆ ಬರುತ್ತದೆ. ಆಮೇಲೆ ಮಠಗಳು ಆಧ್ಯಾತ್ಮ, ಶಿಕ್ಷಣ ದಾಸೋಹ ಕೇಂದ್ರಗಳ ಬದಲಿಗೆ ರಾಜಕೀಯ ಶಕ್ತಿ ಕೇಂದ್ರಗಳಾಗಬಹುದು

ಭಾರತದ ಚುನಾವಣೆ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖ ಎಂಬ ಭಾವನೆ ದಶಕಗಳಿಂದೆಯೇ ಬೇರೂರಿ, ಇಂದು ಹೆಮ್ಮರವಾಗಿದೆ. ಕೋಟಿ, ಕೋಟಿ ಹಣ ಖರ್ಚು ಮಾಡಿದರಷ್ಟೇ ಚುನಾವಣೆಯಲ್ಲಿ ಗೆಲುವು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಪ್ರಸ್ತುತ ಸಂದರ್ಭದಲ್ಲಿ, ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಚುನಾವಣೆ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಡೆಯಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕನ್ನು ತಮ್ಮ ಪ್ರಯೋಗದ ಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಶಿವಾಚಾರ್ಯ ಸ್ವಾಮೀಜಿ, "ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಕ್ಷೇತ್ರದ ಮತದಾರರನ್ನು ಮಠಕ್ಕೆ ಕರೆಸಿ, ಕ್ಷೇತ್ರಕ್ಕೆ ಅಭ್ಯರ್ಥಿಗಳು ಮಾಡಲಿರುವ ಕೆಲಸವನ್ನು ಅವರಿಂದಲೇ ಹೇಳಿಸುವುದು ಮತ್ತು ಮತದಾನ ಮುಗಿಯುವವರೆಗೂ ಅಭ್ಯರ್ಥಿಗಳನ್ನು ಮಠದಲ್ಲೇ ಇರಿಸಿಕೊಳ್ಳುವುದು. ಮತದಾರರಿಗೆ ಯಾವ ಅಭ್ಯರ್ಥಿಯ ಕೆಲಸದ ಮೇಲೆ ಒಲವು ಮೂಡುತ್ತದೆಯೋ ಅವರಿಗೆ ತಮ್ಮ ಮತ ನೀಡಲಿ. ಇದರಿಂದ ನಯಾಪೈಸೆ ಖರ್ಚಿಲ್ಲದೆ ಚುನಾವಣೆ ನಡೆಯುತ್ತದೆ. ಹಣ, ಹೆಂಡ ಹಂಚುವುದು ತಪ್ಪುತ್ತದೆ. ಭ್ರಷ್ಟಾಚಾರ ಕಡಿಮೆಯಾಗುತ್ತದೆ,” ಎಂದು ಹೇಳಿದ್ದಾರೆ.

ಶಿವಾಚಾರ್ಯ ಸ್ವಾಮೀಜಿ ಅವರ ಚಿಂತನೆ ಮತ್ತು ಪ್ರಯೋಗ ಅಭಿನಂದನಾರ್ಹ. ಚುನಾವಣೆಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕು, ಹಣ, ಹೆಂಡ ಹಂಚುವುದು ತಪ್ಪಬೇಕು, ಚುನಾವಣೆಗೆಂದೇ ರಾಜಕಾರಣಿಗಳು ಹಣ ಸಂಪಾದನೆ ಮಾಡುವುದು ನಿಲ್ಲಬೇಕು ಮತ್ತು ಜನಪ್ರತಿನಿಧಿಗಳಿಂದ ನಿಸ್ವಾರ್ಥ ಜನಸೇವೆ ಆಗಬೇಕು ಎಂಬ ಕಳಕಳಿ, ಕಾಳಜಿ ಸ್ವಾಮೀಜಿ ಅವರ ಹೇಳಿಕೆಯ ಹಿಂದಿನ ಆಶಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣ ಯಾರ ಜವಾಬ್ದಾರಿ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಪ್ರಧಾನ ಆದ್ಯತೆ ನೀಡಲಾಗಿದೆ. ಅಂದರೆ, ಇಲ್ಲಿ ಪ್ರಜೆಗಳೇ ಪ್ರಭುಗಳು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಕಾರ್ಯನಿರ್ವಹಿಸುವುದೇ ಜನರ ಹಿತಕ್ಕಾಗಿ. ಜನರೇ ಪ್ರಜಾಪ್ರಭುತ್ವದ ನೇರ ಪಾಲುದಾರರು. ಹೀಗಾಗಿ, ಅದರ ಸಾಧಕ-ಬಾಧಕದ ಬಗ್ಗೆ ಜನರೇ ಕಾವಲುಗಾರರಾಗಬೇಕು. ಆದರೆ, ಮಠಾಧೀಶರು ಅದರ ಒಂದು ಭಾಗವಾಗಬೇಕೇ ಹೊರತು, ನೇರ ಜವಾಬ್ದಾರರಾಗಬಾರದು. ಹಾಗೆಂದು ಮಠಾಧೀಶರು ರಾಜಕೀಯದ ಬಗ್ಗೆ ಮಾತನಾಡಲೇಬಾರದು ಎಂದಲ್ಲ. ಒಂದು ವ್ಯವಸ್ಥೆಯ ಅಂಕು-ಡೊಂಕು ತಿದ್ದುವ ಅಧಿಕಾರ ಅವರಿಗೆ ಇದ್ದೇ ಇದೆ. ಆ ಬಗ್ಗೆ ಅನುಮಾನ ಬೇಡ. ರಾಜಕಾರಣಿಗಳಿಗೆ ಹೀಗೆ ಕೆಲಸ ಮಾಡಿ, ಇದು ಸರಿ, ಇದು ತಪ್ಪು ಎಂದು ಸಲಹೆ, ಸೂಚನೆಯನ್ನು ಮಠಾಧೀಶರು ಕೊಡಲಿ. ಆದರೆ, ತಮ್ಮ ನೇತೃತ್ವದಲ್ಲಿ ಅಥವಾ ತಮ್ಮ ಹಿಡಿತದಲ್ಲಿಯೇ ಚುನಾವಣೆ ನಡೆಯಲಿ ಎಂಬ ಹೇಳಿಕೆ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಡ್ಡು ಹೊಡೆದಂತಾಗುತ್ತದೆ. ಪ್ರಜಾಪ್ರಭುತ್ವದ ಬಂಡಿ ಆರೋಗ್ಯಕರ ಸ್ಥಿತಿಯಲ್ಲಿ ಮುನ್ನಡೆಯಬೇಕಾದರೆ, ಮಠಾಧೀಶರು ರಾಜಕಾರಣದಿಂದ ಹೊರಗೆ ನಿಂತು ಕೆಲಸ ಮಾಡಬೇಕಾಗುತ್ತದೆ. ಇದನ್ನು ಬಿಟ್ಟು, ತಮ್ಮ ಮಠವನ್ನು ರಾಜಕೀಯ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿಕೊಳ್ಳಲು ಮುಂದಾದರೆ ಅದು ಮತ್ತೊಂದು ಬಾನಗಡಿಗೆ ಕಾರಣವಾಗುವ ಸಂಭವವನ್ನು ನಿರ್ಲಕ್ಷಿಸಲಾಗದು.

ಇದನ್ನೂ ಓದಿ : ಸುಗತ ಸಂಪಾದಕೀಯ | ಚುನಾವಣಾ ರಾಜಕಾರಣಕ್ಕೆ ಧರ್ಮ ಗುರುಗಳು ಬರಬೇಕೆ?

ಇಲ್ಲಿ ಬಹಳ ಸರಳವಾಗಿ ಹೇಳಬೇಕೆಂದರೆ, ಪ್ರಜಾಪ್ರಭುತ್ವವು ಸಂವಿಧಾನದ ಆಶಯದಂತೆ ಮುಂದುವರಿಯಬೇಕು. ಮಠಗಳು ತಮ್ಮ ತತ್ವ, ಪರಂಪರೆಯಂತೆ ಮುಂದುವರಿಯಬೇಕು. ಹಾಗೆ ನೋಡಿದರೆ, ಪ್ರಜಾಪ್ರಭುತ್ವದ ಆಶಯವನ್ನು ಜಗತ್ತಿಗೆ ಮೊದಲು ಪರಿಚಯಿಸಿದ್ದೇ ಶರಣ ಪರಂಪರೆ. ಸಾಮಾಜಿಕ ವ್ಯವಸ್ಥೆಯ ಒಳಗೊಳ್ಳುವಿಕೆಯ ಶರಣರ ಆಶಯಗಳೇ ಸಂವಿಧಾನದಲ್ಲೂ ಪ್ರತಿಫಲನಗೊಂಡಿವೆ. ಈಗಲೂ ಅದೇ ಆಶಯ ಮಠಗಳಿಂದಲೂ ಮುಂದುವರಿಯಬೇಕು. ಶಿವಾಚಾರ್ಯ ಸ್ವಾಮೀಜಿ ಅವರ ಹೇಳಿಕೆಯಲ್ಲಿ ಚುನಾವಣೆಗಳು ಪ್ರಾಮಾಣಿಕವಾಗಿ ನಡೆಯಬೇಕು, ಭ್ರಷ್ಟಾಚಾರ ನಿಲ್ಲಬೇಕು ಎಂಬ ನೈಜ ಕಳಕಳಿಯಂತೂ ಇದೆ. ಆದರೆ, ಅದಕ್ಕಾಗಿ ಅವರು ಮಾಡಲು ಹೊರಟಿರುವ ಪ್ರಯೋಗ ಪ್ರಜಾಪ್ರಭುತ್ವ ಆಶಯಕ್ಕೆ ತದ್ವಿರುದ್ಧವಾಗಿದೆ ಎಂಬುದನ್ನು ಗಮನಿಸಬೇಕಿದೆ.

ಒಂದು ವೇಳೆ, ಶಿವಾಚಾರ್ಯ ಸ್ವಾಮೀಜಿ ಅವರ ಈ ಪ್ರಯೋಗ ಯಶಸ್ವಿಯಾಯಿತು ಎಂದುಕೊಳ್ಳೋಣ. ಮುಂದೆ ಎಲ್ಲ ಕ್ಷೇತ್ರಗಳು ಇದೇ ಪ್ರಯೋಗ ಜಾರಿಗೆ ಬರುತ್ತದೆ. ಚುನಾವಣೆಯಲ್ಲಿ ಭ್ರಷ್ಟಾಚಾರ ಏನೋ ಕಡಿಮೆಯಾಗುತ್ತದೆ. ಆದರೆ, ಮಠಗಳು ಆಧ್ಯಾತ್ಮ, ಶಿಕ್ಷಣ ದಾಸೋಹ ಕೇಂದ್ರಗಳ ಬದಲಿಗೆ ರಾಜಕೀಯ ಶಕ್ತಿ ಕೇಂದ್ರಗಳಾಗುತ್ತವೆ. ರಾಜಕಾರಣಿಗಳು ಮಠಾಧೀಶರ ಕೈಗೊಂಬೆಗಳಾಗುತ್ತಾರೆ. ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ನಡುವಿನ ಸಂಪರ್ಕವೇ ಕಡಿದುಹೋಗುತ್ತದೆ. ಇಂದು ಎಷ್ಟು ಮಠಗಳು ಸಮಾಜದಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿವೆ ಎಂಬ ವಾಸ್ತವ ಎಲ್ಲರಿಗೂ ಚನ್ನಾಗಿ ತಿಳಿದಿದೆ. ಬಹಳಷ್ಟು ಮಠಗಳು ಒಂದೊಂದು ರಾಜಕೀಯ ಪಕ್ಷ, ರಾಜಕಾರಣಿಗಳೊಂದಿಗೆ ಗುರುತಿಸಿಕೊಂಡಿರುವಾಗ ಮಠಗಳ ಹಿಡಿತದಲ್ಲಿ ಚುನಾವಣೆ ನಡೆಯಲಿದೆ ಎಂದಾದಾಗ ಅದು ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಹಾಡಿದಂತೆ ಆಗುವುದಿಲ್ಲವೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More